Tag: New Purchase

  • ಹಳೆಯ ಕಾರು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಶೇ.5 ರಿಯಾಯಿತಿ

    ಹಳೆಯ ಕಾರು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಶೇ.5 ರಿಯಾಯಿತಿ

    ನವದೆಹಲಿ: ಹಳೆಯ ಕಾರನ್ನು ಗುಜು​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕ​ರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಗುಡ್‌ನ್ಯೂಸ್‌ ನೀಡಿದ್ದಾರೆ.

    ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, 2021-22ನೇ ಬಜೆ​ಟ್‌​ನಲ್ಲಿ ಪ್ರಕಟಿಸಿದಂತೆ ನೂತನ ವಾಹನ ಖರೀದಿ ನೀತಿಯಡಿ ಹಳೇ ವಾಹ​ನ​ಗ​ಳನ್ನು ಗುಜು​ರಿಗೆ ಹಾಕಿ ಹೊಸ ವಾಹನ ಖರೀದಿಸಿದರೆ ಶೇ.5ರಷ್ಟು ರಿಯಾ​ಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

    ನೀತಿಯ ನಾಲ್ಕು ಪ್ರಮುಖ ಅಂಶಗಳಿವೆ. ರಿಯಾಯಿತಿಯ ಹೊರತಾಗಿ, ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಹಸಿರು ತೆರಿಗೆ ಮತ್ತು ಇತರ ಸುಂಕಗಳನ್ನು ವಿಧಿಸಲಾಗುತ್ತದೆ. ಈ ವಾಹನಗಳು ಸ್ವಯಂಚಾಲಿತ ಸೌಲಭ್ಯಗಳಲ್ಲಿ ಕಡ್ಡಾಯವಾಗಿ ಫಿಟ್‌ನೆಸ್ ಮತ್ತು ಮಾಲಿನ್ಯ ಪರೀಕ್ಷೆಗಳಿಗೆ ಒಳಗಾಬೇಕಾಗುತ್ತದೆ. ಇದಕ್ಕಾಗಿ ದೇಶಾದ್ಯಂತ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳು ತೆರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಈಗ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಗಡ್ಕರಿ ವಿವರಿಸಿದರು.

    ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆಗಳನ್ನು ಸ್ಥಾಪಿಸಲಾಗುವುದು ಮತ್ತು ಗುಜುರಿ ಕೇಂದ್ರಗಳನ್ನು ಸ್ಥಾಪಿಸಲು ಖಾಸಗಿ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.

    ಸ್ವಯಂಚಾಲಿತ ಪರೀಕ್ಷೆಗಳಲ್ಲಿ ಫೇಲ್‌ ಆದ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲಾಗುವುದರ ಜೊತೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಈ ನೀತಿಯು ವಾಹನ ವಲಯಕ್ಕೆ ವರದಾನವಾಗಲಿದ್ದು, ಇದರಿಂದಾಗಿ ಭಾರೀ ಉದ್ಯೋಗ ದೊರೆಯುತ್ತದೆ. ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಕಾರಣ ಆದಾಯ ಏರಿಕೆ ಆಗಲಿದೆ. ಪ್ರಸ್ತುತ ಆಟೋಮೊಬೈಲ್‌ ಕ್ಷೇತ್ರ 4.5 ಲಕ್ಷ ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸುತ್ತಿದೆ. ನೀತಿ ಜಾರಿಗೆ ಬಂದರೆ ವರ್ಷದಲ್ಲೇ 10 ಲಕ್ಷ ಕೋಟಿ ರೂ.ವ್ಯವಹಾರ ನಡೆಸುವ ಮೂಲಕ ಭಾರತ ಅಟೋಮೊಬೈಲ್‌ ಹಬ್‌ ಆಗಿ ಪರಿವರ್ತನೆಯಾಗಲಿದೆ ಎಂದು ಅವರು ವಿವರಿಸಿದರು.

    ಗುಜುರಿಗೆ ಹಾಕಿದ ಸ್ಟೀಲ್‌, ಪ್ಲಾಸ್ಟಿಕ್‌, ರಬ್ಬರ್‌, ಅಲ್ಯೂಮಿನಿಯಂ ಇತ್ಯಾದಿ ವಸ್ತುಗಳನ್ನು ಮರು ಬಳಕೆ ಮಾಡುವ ಕಾರಣ ಅಟೋಮೊಬೈಲ್‌ ಬಿಡಿ ಭಾಗಗಳ ಬೆಲೆ ಶೇ.30 ರಿಂದ 40 ರಷ್ಟು ಕಡಿಮೆಯಾಗಲಿದೆ. ಹೊಸ ನೀತಿಯಿಂದ ಉತ್ತಮ ಮೈಲೇಜ್‌ ಮತ್ತು ಹೊಸ ತಂತ್ರಜ್ಞಾನ ಹೊಂದಿರುವ ವಾಹನಗಳಿಗೆ ಉತ್ತೇಜನ ಸಿಗಲಿದೆ. ಇದರಿಂದಾಗಿ 18 ಲಕ್ಷ ಕೋಟಿ ಕಚ್ಚಾ ತೈಲ ಆಮದು ಶುಲ್ಕದಲ್ಲಿ 8 ಲಕ್ಷ ಕೋಟಿ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    ಪ್ರಸ್ತುತ ಭಾರತದಲ್ಲಿ 20 ವರ್ಷ ಮೇಲ್ಪಟ್ಟ 51 ಲಕ್ಷ, 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ಮೋಟಾರು ವಾಹನಗಳಿವೆ. 15 ವರ್ಷ ಮೇಲ್ಪಟ್ಟ 17 ಲಕ್ಷ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳಿವೆ. ಈ ವಾಹನಗಳು ಯಾವುದೇ ಫಿಟ್‌ನೆಸ್‌ ಪ್ರಮಾಣಪತ್ರವನ್ನು ಹೊಂದಿಲ್ಲ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು 10-12 ಪಟ್ಟು ಮಾಲಿನ್ಯವನ್ನು ಹೊರ ಹಾಕುತ್ತಿವೆ.

    ಮೆಟಲ್‌(ಲೋಹ) ತ್ಯಾಜ್ಯ ಮರುಬಳಕೆ, ಸುಧಾರಿತ ಸುರಕ್ಷತೆ, ವಾಯುಮಾಲಿನ್ಯ ಮತ್ತು ಇಂಧನ ಆಮದು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಉತ್ತೇಜಿಸಲು ಹೊಸ ನೀತಿ ಸಹಾಯವಾಗಲಿದೆ.

    ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದರು.