Tag: New MLAs

  • ‘ಮಿತ್ರ’ರ ಹೊಸ ಆಟ, ಬಿಎಸ್‍ವೈಗೆ ಸಂಕಟ!

    ‘ಮಿತ್ರ’ರ ಹೊಸ ಆಟ, ಬಿಎಸ್‍ವೈಗೆ ಸಂಕಟ!

    ಬೆಂಗಳೂರು: ಉಪ ಚುನಾವಾಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಮಿತ್ರಮಂಡಳಿ ಹೊಸ ಪ್ಲಾನ್ ರಚಿಸಿಕೊಂಡಿದೆ. ಮಿತ್ರರ ಹೊಸ ಆಟ ಬಿ.ಎಸ್.ಯಡಿಯೂರಪ್ಪರನ್ನ ಸಂಕಟಕ್ಕೆ ತಂದೊಡ್ಡಿದೆ ಎಂದು ತಿಳಿದು ಬಂದಿದೆ.

    ಹೊಸ ದಾಳ ಉರುಳಿಸಿರುವ ಮಿತ್ರಮಂಡಳಿ, ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಚುನಾವಣೆಯಲ್ಲಿ ಸೋತ ಮಿತ್ರರಾದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಸ್ಪರ್ಧೆಯಿಂದ ಹಿಂದೆ ಸರಿದ ಆರ್.ಶಂಕರ್ ಗೂ ಸಚಿವ ಸ್ಥಾನ ಕೊಡಲೇಬೇಕು. ಮಿತ್ರಮಂಡಳಿಯ ಹೊಸ ದಾಳ ಉರುಳಿಸಿದ ಆಟದ ವೈಖರಿ ಕಂಡು ಸಿಎಂ ಸಹ ಒಂದು ಕ್ಷಣ ತಬ್ಬಿಬ್ಬು ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಏನದು ಹೊಸ ದಾಳ?
    ಸೋತವರಿಗೆ ಸಚಿವ ಸ್ಥಾನ ಕೊಡಲ್ಲ ಅಂತಿದೀರಲ್ಲ, ಹಾಗಾದ್ರೆ ಲಕ್ಷ್ಮಣ ಸವದಿಗೆ ಯಾವ ಆಧಾರದಲ್ಲಿ ಸಚಿವ ಸ್ಥಾನ ಕೊಟ್ಟು ಡಿಸಿಎಂ ಮಾಡಿದಿರಿ? ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ ಮೇಲೆ ನಮ್ಮಲ್ಲೂ ಸೋತವರಿಗೆ ಮಂತ್ರಿಗಿರಿ ಕೊಡಬೇಕು. ನಮ್ಮ ತಂಡದ ಸೋತವರಿಗೆ ಯಾಕೆ ಸಚಿವ ಸ್ಥಾನ ಕೊಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಕೊಡದಿದ್ರೆ ಇಬ್ಬರು ಡಿಸಿಎಂಗಳನ್ನು, ನಾಲ್ವರು ಸಚಿವರನ್ನು ಸಂಪುಟದಿಂದ ಕೈ ಬಿಡಿ ಎಂದು ಮಿತ್ರಮಂಡಳಿಯ ಶಾಸಕರು ಸಿಎಂ ಮುಂದೆ ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

  • ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ – ವಿಸ್ತರಣೆಗೆ ಗಡುವು ಕೊಟ್ಟ ಅರ್ಹರು

    ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ – ವಿಸ್ತರಣೆಗೆ ಗಡುವು ಕೊಟ್ಟ ಅರ್ಹರು

    ಬೆಂಗಳೂರು: ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಅಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಶಾಸಕರ ಟೀಂ ಅಸಮಾಧಾನಗೊಂಡಿದೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಬಂದರೆ,  ಇಲ್ಲೂ ತಾವು ಅತಂತ್ರರಾಗಿ ಬಿಟ್ಟೆವಾ ಅನ್ನೋ ಆತಂಕದಲ್ಲಿ ಅರ್ಹರು ಇದ್ದಾರೆ. ಗೆದ್ದ ಕೂಡಲೇ ಮಂತ್ರಿ ಮಾಡ್ತೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳ ಮೇಲಾದರೂ ತಾವು ಶಾಸಕರಾಗಿಯೇ ಇದ್ದೇವೆ. ನಮ್ಮೆಲ್ಲರ ತ್ಯಾಗ, ಸ್ವಾಭಿಮಾನಗಳನ್ನೇ ಕೆಣಕುವಂಥ, ಅಣಕಿಸುವಂಥ ಧೋರಣೆಯನ್ನು ಬಿಜೆಪಿ ಹೈಕಮಾಂಡ್ ತೋರಿದೆ ಎಂಬ ಭಾವನೆ ಅರ್ಹರಲ್ಲಿ ಬಲವಾಗುತ್ತಿದೆ. ಸಂಪುಟ ವಿಸ್ತರಣೆಗೆ ಅಲಕ್ಷ್ಯ ತೋರುತ್ತಿರುವುದಕ್ಕೆ ಅರ್ಹ ಶಾಸಕರಲ್ಲಿ ಸಾಕಷ್ಟು ಸಿಟ್ಟು, ಬೇಸರ ಮಡುಗಟ್ಟಿದ್ದು, ಹೈಕಮಾಂಡ್ ವಿರುದ್ಧವೇ ದೊಡ್ಡ ಮಟ್ಟದಲ್ಲಿ ಅಸಮಾಧಾನಗೊಂಡಿದ್ದಾರೆ. ಯಡಿಯೂರಪ್ಪ ಅವರೂ ತಮ್ಮ ಕೈ ಬಿಟ್ಟರಾ ಅನ್ನೋ ತಳಮಳದಲ್ಲಿ ಅರ್ಹರು ಇದ್ದಾರೆ ಎನ್ನಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಅರ್ಹ ಶಾಸಕರೆಲ್ಲ ಒಟ್ಟು ಸೇರಿ ಈಗಾಗಲೇ ಎರಡು ಸಲ ರಹಸ್ಯ ಸಭೆ ನಡೆಸಿದ್ದಾರೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಸಭೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಅರ್ಹರು ಸಚಿವರಾಗಲು ಅಂತಿಮ ಕಸರತ್ತು ನಡೆಸಲು ಮುಂದಾಗಿದ್ದಾರೆ. ಬೆಳಗಾವಿ ಸಾಹುಕಾರ್ ಸೂಚನೆಯಂತೆ ಸಭೆಯಲ್ಲಿ ಮೇಜರ್ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಅದು ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪರಿಗೆ ಗಡುವು ಕೊಡುವಂಥ ನಿರ್ಧಾರ ಎಂದು ತಿಳಿದು ಬಂದಿದೆ.

    ಹೌದು, ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಮಾಡಲು ಜನವರಿ 18ರ ಗಡುವನ್ನು ಬಿಜೆಪಿ ಹೈಕಮಾಂಡ್ ಮತ್ತು ಬಿಎಸ್‍ವೈಗೆ ಅರ್ಹರು ಕೊಟ್ಟಿದ್ದಾರೆ ಎನ್ನಲಾಗಿದೆ. ಇದೇ ಜನವರಿ 18 ರಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿದ್ದಾರೆ. ಆವತ್ತೇ ಅಮಿತ್ ಶಾ ಅವರ ಜೊತೆ ಸಂಪುಟ ಮಾತುಕತೆ ಫೈನಲ್ ಮಾಡಿ ಡೇಟ್ ಫಿಕ್ಸ್ ಮಾಡುವಂತೆ ಯಡಿಯೂರಪ್ಪರಿಗೆ ಅರ್ಹರು ಗಡುವು ಕೊಟ್ಟಿದ್ದಾರೆ. ಆ ಮೂಲಕ ಶತಾಯಗತಾಯ ಮತ್ತೊಮ್ಮೆ ಸಂಪುಟ ವಿಸ್ತರಣೆ ಮುಂದೂಡಬಾರದು. ಜನವರಿಯೊಳಗೇ ಸಂಪುಟ ವಿಸ್ತರಣೆ ಮಾಡಿ ಮುಗಿಸಬೇಕು. ಸಂಪುಟ ವಿಸ್ತರಣೆಗೆ ಮತ್ಯಾವುದೇ ನೆಪಗಳನ್ನು ಮುಂದಿಡಬಾರದು ಎಂಬ ನಿಲುವಿಗೆ ಅರ್ಹರು ಬಂದಿದ್ದಾರೆ.

    ಒಂದೊಮ್ಮೆ ಮುಂದಿನ ತಿಂಗಳಿಗೆ ಸಂಪುಟ ವಿಸ್ತರಣೆ ಹೋದರೆ ಮುಂದಿನ ನಡೆ ಕುರಿತು ಮತ್ತೊಂದು ಸಭೆ ನಡೆಸಲೂ ನೂತನ ಶಾಸಕರು ನಿರ್ಧರಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಈಗ ಕೊಟ್ಟಿರುವ ಗಡುವು ಎಷ್ಟರ ಮಟ್ಟಿಗೆ ಈಡೇರಲಿದೆ ನೋಡೋಣ ಎಂದು 18 ರವರೆಗೂ ಕಾದು ನೋಡಲು ಅರ್ಹರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಂಪುಟ ಕಸರತ್ತು ನಡೆಯದ ಹಿನ್ನೆಲೆಯಲ್ಲಿ ಮತ್ತೆ ಅರ್ಹರು, ಸೋತವರೆಲ್ಲ ಒಟ್ಟಾಗಿದ್ದಾರೆ. ಅರ್ಹರು ಕೊಟ್ಟ ಗಡುವಿಗೆ ಬಗ್ಗುತ್ತಾ ಬಿಜೆಪಿ? ಜನವರಿ 18 ರಂದು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡ್ತಾರಾ ಅಮಿತ್ ಶಾ? ಈ ತಿಂಗಳೂ ಸಂಪುಟ ವಿಸ್ತರಣೆ ಆಗದಿದ್ದಲ್ಲಿ ಅರ್ಹರ ನಡೆ ಏನಿರಬಹುದು? ಸಂಪುಟ ವಿಸ್ತರಣೆ ಸದ್ಯಕ್ಕೆ ನಡೆಯದಿದ್ದಲ್ಲಿ ಬಿಜೆಪಿ ಹೈಕಮಾಂಡ್ ಜತೆಗೇ ವಿರಸ ಕಟ್ಕೊಳ್ತಾರಾ ಅರ್ಹರು? ಈ ಪ್ರಶ್ನೆಗಳಿಗೆ ಜನವರಿ 18 ರಂದು ಉತ್ತರ ಸಿಗಬಹುದು.