Tag: New Dehali

  • ರಾಮ ಮಂದಿರ ನಿರ್ಮಾಣದ ದಾರಿ ಸುಗಮ -ಸುಬ್ರಮಣಿಯನ್ ಸ್ವಾಮಿ

    ರಾಮ ಮಂದಿರ ನಿರ್ಮಾಣದ ದಾರಿ ಸುಗಮ -ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ಆಯೋಧ್ಯೆ ರಾಮ ಮಂದಿರ ನಿರ್ಮಾಣದ ದಾರಿ ಸುಗಮವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ 1994ರ ಫಾರೂಖಿ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಆದೇಶವನ್ನು ಸ್ವಾಗತಿಸಿದರು.

    ಈ ತೀರ್ಪಿನಿಂದ ನಮಗೆ ಜಯ ಸಿಕ್ಕಿಲ್ಲ. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನನ್ನ ಹೋರಾಟಕ್ಕೆ ಶಕ್ತಿ ಬಂದಿದೆ. ಆಸ್ತಿಯ ಹಕ್ಕಿಗಿಂತಲೂ ಪ್ರಾರ್ಥನೆ ಮಾಡುವ ಹಕ್ಕು ದೊಡ್ಡದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎಂದರು.

    ಸುನ್ನಿ ವಕ್ಫ್ ಬೋರ್ಡ್ ನವರ ಆಸ್ತಿ ಹಕ್ಕಿನ ವಾದಕ್ಕಿಂತಲೂ ರಾಮ ಹುಟ್ಟಿದ್ದ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ವಾದವೇ ಮೇಲ್ಮಟ್ಟದ್ದು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಹೀಗಾಗಿ ಶುಕ್ರವಾರವೇ(ನಾಳೆ) ರಾಮ ಜನ್ಮಭೂಮಿಯಾದ ಆಯೋಧ್ಯೆಯಲ್ಲಿ ಪೂಜೆ ಮಾಡುವ ಹಕ್ಕಿನ ಸಂಬಂಧ ನಾನು ಸಲ್ಲಿಸಿದ್ದ ಅರ್ಜಿಯನ್ನು ಆರಂಭದಲ್ಲೇ ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಸುಬ್ರಮಣಿಯನ್ ಸ್ವಾಮಿ ಈ ಹಿಂದೆಯೇ ರಾಮಜನ್ಮಭೂಮಿಯಲ್ಲಿ ಪೂಜೆ ಹಕ್ಕಿನ ಸಂಬಂಧ ಅರ್ಜಿ ಸಲ್ಲಿಸಿದ್ದರು. ಆದರೆ 1994ರ ಫಾರೂಖಿ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡ ಬಳಿಕ ನಿಮ್ಮ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸುಬ್ರಮಣಿಯನ್ ಸ್ವಾಮಿಗೆ ತಿಳಿಸಿತ್ತು.

    ಮುಸ್ಲಿಂ ರಾಷ್ಟ್ರಗಳಲ್ಲಿ ಮಸೀದಿಯನ್ನು ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದು. ಉದಾಹರಣೆಗೆ ರಸ್ತೆ ನಿರ್ಮಾಣ ಸೇರಿದಂತೆ ಸಾರ್ಜಜನಿಕ ಅನೂಕೂಲಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಆದರೆ, ದೇವಸ್ಥಾನಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಆಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಬೇಕೆಂಬುದನ್ನು ಬಿಟ್ಟು, ಅಯೋಧ್ಯೆಯ ಸರಯೂ ನದಿ ದಡದಲ್ಲಿ ಮುಸ್ಲಿಮರು ಬಾಬ್ರಿ ಮಸೀದಿ ನಿರ್ಮಿಸಿಕೊಳ್ಳಬಹುದು. ಆದರೆ, ಪ್ರಸ್ತುತ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಯಾಕೆಂದರೆ ಅದು ರಾಮನ ಜನ್ಮ ಭೂಮಿ ಎಂದು ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಪ್ರತಿಕ್ರಿಯಿಸಿದ್ದರು.

    ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.

    ಸುಪ್ರೀಂ ಹೇಳಿದ್ದು ಏನು?
    ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.

    ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
    * ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
    * ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
    * ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
    * ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
    * ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
    * ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
    * 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ

    ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
    * ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
    * ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು

    ಏನಿದು ಪ್ರಕರಣ?
    ಇಸ್ಮಾಯಿಲ್ ಫಾರೂಖಿ ವರ್ಸಸ್ ಭಾರತ ಸರ್ಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಖಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ನವದೆಹಲಿ: ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದು 21ನೇ ಕೊಲೆಯಾಗಿದ್ದು ಇನ್ನು ಎಷ್ಟು ಕೊಲೆ ನಡೆಯಬೇಕು ಎಂದು ಸಿದ್ದರಾಮಯ್ಯ, ಕಾಂಗ್ರೆಸ್, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ.

    ಈ ಕುರಿತು ಕೊಲೆಯಾದ ಹಿಂದೂ ಕಾರ್ಯಕರ್ತ ದೀಪಕ್ ಅವರ ಕೊಲೆಯ ರಕ್ತಸಿಕ್ತ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸಂಸದರು, ಜಿಹಾದಿಗಳ ಕ್ರೂರ ಮುಖವನ್ನು ಅರ್ಥ ಮಾಡಿಕೊಳ್ಳಲು ಈ ಫೋಟೋಗಳನ್ನು ನೋಡಲೇ ಬೇಕು. ಈಗ ನೀವು ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ಭವಿಷ್ಯ ಯೋಚಿಸಿ ಎಂದು ಟ್ವೀಟ್ ನಲ್ಲಿ ಖಾರವಾಗಿ ಬರೆದುಕೊಂಡಿದ್ದಾರೆ.

    ಇಂದು ಬೆಳಗ್ಗೆಯಿಂದಲೂ ಸಂಸದರು ದೀಪಕ್ ಹತ್ಯೆ ಕುರಿತು ಹಲವು ಸರಣಿ ಟ್ವೀಟ್‍ಗಳನ್ನು ಮಾಡಿದ್ದು, ಪ್ರಕರಣವನ್ನು ಐಎನ್‍ಎ ತನಿಖೆಗೆ ವಹಿಸಬೇಕು ಎಂಬುದರ ಕುರಿತು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿರುವ ಕುರಿತು ತಮ್ಮ ಟ್ವೀಟ್‍ಗಳಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ದೆಹಲಿಯ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ್ದರು.

  • 225 ಮೊಬೈಲ್ ಬುಕ್ಕಿಂಗ್, 166 ಬಾರಿ ರಿಫಂಡ್: 52 ಲಕ್ಷ ವಂಚಿಸಿದ್ದ ಕಳ್ಳ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

    225 ಮೊಬೈಲ್ ಬುಕ್ಕಿಂಗ್, 166 ಬಾರಿ ರಿಫಂಡ್: 52 ಲಕ್ಷ ವಂಚಿಸಿದ್ದ ಕಳ್ಳ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

    ನವದೆಹಲಿ: ಆನ್‍ಲೈನ್ ನಲ್ಲಿ ಮೊಬೈಲ್ ಬುಕ್ ಮಾಡಿ, ಫೋನ್ ಬಂದಿಲ್ಲ ಎಂದು ಹೇಳಿ ಇ-ಕಾಮರ್ಸ್ ಕಂಪನಿಯೊಂದಕ್ಕೆ ಸುಮಾರು 52 ಲಕ್ಷ ರೂ. ವಂಚಿಸಿದ್ದ ಯುವಕನನ್ನು ಮಂಗಳವಾರ ದೆಹಲಿಯ ಪೊಲೀಸರು ಬಂಧಿಸಿದ್ದಾರೆ.

    21 ವರ್ಷದ ಶಿವಂ ಚೋಪ್ರಾ ಬಂಧಿತ ಆರೋಪಿ. ಹೋಟೆಲ್ ಮ್ಯಾನೇಜಮೆಂಟ್ ಪದವಿಧರನಾಗಿರುವ ಶಿವಂ ಇದೂವರೆಗೂ ದುಬಾರಿ ಬೆಲೆಯ 225 ಮೊಬೈಲ್ ಗಳನ್ನು ಬುಕ್ ಮಾಡಿ, 166 ಬಾರಿ ಕಂಪನಿಗಳಿಂದ ಮರಳಿ ಹಣ ಪಡೆದಿದ್ದಾನೆ. ಇನ್ನೂ ಆನ್‍ಲೈನ್ ನಲ್ಲಿ ಬುಕ್ ಮಾಡಿಕೊಂಡಿರುವ ಎಲ್ಲ ಮೊಬೈಲ್ ಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

    ಉತ್ತರ ದೆಹಲಿಯ ತ್ರಿ ನಗರದ ನಿವಾಸಿಯಾಗಿರುವ ಶಿವಂ ಸದ್ಯ ನಿರುದ್ಯೋಗಿಯಾಗಿದ್ದು, ಈ ಹಿಂದೆ ಹೋಟೆಲ್ ಗಳಲ್ಲಿ ಕೆಲವು ದಿನ ಕೆಲಸ ಮಾಡಿಕೊಂಡಿದ್ದ. ಕಳೆದ ವಾರ ಆನ್‍ಲೈನ್ ಚೀಟಿಂಗ್ ಸಂಬಂಧಿಸಿದಂತೆ ಶಿವಂ ಬಗ್ಗೆ ಇ-ಕಾಮರ್ಸ್ ಕಂಪನಿಯೊಂದು ತನ್ನ ಆಂತರಿಕ ತನಿಖೆಯ ಅನ್ವಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

    141 ಸಿಮ್ ಕಾರ್ಡ್ ಹೊಂದಿದ್ದ: ಶಿವಂ ತನಗೆ ಪರಿಚಯವಿರುವ ಮೊಬೈಲ್ ಅಂಗಡಿ ಮಾಲೀಕ ಸಚಿನ್ ಜೈನ್ ಎಂಬಾತನಿಂದ 141 ಸಿಮ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದ. ಈ ನಂಬರ್ ಗಳಿಂದ 50ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದನು. ಆದರೆ ಯಾವುದೇ ಸಿಮ್ ಗಳಿಗೆ ತನ್ನ ಅಧಿಕೃತ ದಾಖಲೆಗಳನ್ನು ನೀಡಿ, ಖರೀದಿಸಿಲ್ಲ. ಎಲ್ಲ ಸಿಮ್ ಗಳಿಗೂ ಸಚಿನ್ ನಕಲಿ ದಾಖಲೆಗಳನ್ನು ನೀಡಿದ್ದ. ನಕಲಿ ಸಿಮ್ ನಂಬರ್ ಮತ್ತು ಮೇಲ್ ಐಡಿಗಳಿಂದ ಆನ್‍ಲೈನ್ ಶಾಪಿಂಗ್ ಅಕೌಂಟ್ ಓಪನ್ ಮಾಡಿ, ಅವುಗಳ ಮೂಲಕವೇ ಶಿವಂ ವ್ಯವಹಾರ ಮಾಡುತ್ತಿದ್ದನು ಎಂದು ಡಿಸಿಪಿ ಮಿಲಿಂದ್ ದುಂಬೆರೆ ಹೇಳಿದ್ದಾರೆ.

    ಅಡ್ರೆಸ್ ಹೇಳುತ್ತಿರಲಿಲ್ಲ: ಆನ್‍ಲೈನ್ ನಲ್ಲಿ ಮೊಬೈಲ್ ಗಳನ್ನು ಬುಕ್ ಮಾಡಿದ ಶಿವಂ, ಡೆಲಿವರಿ ಅಡ್ರೆಸ್ ಸರಿಯಾಗಿ ಹೇಳುತ್ತಿರಲಿಲ್ಲ. ಡೆಲಿವರಿ ಬಾಯ್ ಗಳು ಕರೆ ಮಾಡಿದಾಗ ಪ್ರತಿಬಾರಿಯೂ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಗಳನ್ನು ಪಡೆದುಕೊಳ್ಳುತ್ತಿದ್ದನು.

    ಮೊಬೈಲ್ ಬಂದ ಕೂಡಲೇ ಕಂಪನಿಗೆ ಕರೆ ಮಾಡಿ ಖಾಲಿ ಡಬ್ಬ ಮಾತ್ರ ಬಂದಿದೆ ಎಂದು ಹೇಳುತ್ತಿದ್ದನು. ಗ್ರಾಹಕರ ಹಿತಾಸಕ್ತಿಗಾಗಿ ಕಂಪನಿ ಶಿವಂನಿಗೆ ಮೊಬೈಲ್ ಗೆ ನೀಡಿದ ಹಣದೊಂದಿಗೆ ಗಿಫ್ಟ್ ವೋಚರ್ ಸಹ ನೀಡುತ್ತಿದ್ದರು. ಶುಭಂ ಎಂಬ ಹೆಸರಿನ ಮೂಲಕ ಆನ್‍ಲೈನ್ ವ್ಯವಹಾರ ನಡೆಸುತ್ತಿದ್ದನು.

    ಕೆಲವು ತಪ್ಪು ಮಾಡಿದ್ದ: ಶಿವಂ ತನ್ನ ವ್ಯವಹಾರದಲ್ಲಿ ಕೆಲವು ತಪ್ಪಗಳನ್ನು ಮಾಡಿದ್ದ, ಪ್ರತಿಬಾರಿಯೂ ಶಾಪಿಂಗ್ ಮಾಡುವಾಗ ಶುಭಂ ಎಂಬ ಹೆಸರನ್ನು ಹೇಳುತ್ತಿದ್ದನು. ಮೊಬೈಲ್‍ಗಳು ಪ್ರತಿಬಾರಿಯೂ ದೆಹಲಿಯ ತ್ರಿನಗರದಿಂದಲೇ ಬುಕ್ ಮಾಡಲಾಗುತ್ತಿತ್ತು ಹಾಗೂ ಮೂವರು ಡೆಲಿವರಿ ಬಾಯ್ ಗಳು ಈತನನ್ನು ಗುರುತಿಸಿದ್ದರು. ಇದರಿಂದ ಅನುಮಾನಗೊಂಡ ಕಂಪನಿ ಈ ಸಂಬಂಧ ವಾಯುವ್ಯ ದೆಹಲಿಯ ಶಾಲಿಮಾರ್ ಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

    ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಶಿವಂ ಚೋಪ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಎನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.