Tag: New coins

  • ದೃಷ್ಟಿಹೀನರಿಗೆ ಸುಲಭವಾಗಿ ಗುರುತಿಸಲು ಬರಲಿದೆ 1,2,5,10 ಮತ್ತು 20 ರೂ. ನಾಣ್ಯ

    ದೃಷ್ಟಿಹೀನರಿಗೆ ಸುಲಭವಾಗಿ ಗುರುತಿಸಲು ಬರಲಿದೆ 1,2,5,10 ಮತ್ತು 20 ರೂ. ನಾಣ್ಯ

    ನವದೆಹಲಿ: 1, 2, 5, 10 ಮತ್ತು 20 ರೂ. ಮುಖಬೆಲೆಯ ಹೊಸ ನಾಣ್ಯ ಶೀಘ್ರವೇ ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ವೇಳೆ ಮಾತನಾಡಿದ ಅವರು, ಈ ಹಿಂದೆ ದೃಷ್ಟಿಹೀನರಿಗೆ ಗುರುತಿಸಲು ಸಾಧ್ಯವಾಗುವ ಹೊಸ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 7, 2019ರಂದು ಬಿಡುಗಡೆ ಮಾಡಿದ್ದರು. ಬಿಡುಗಡೆಯಾಗಲಿರುವ ಹೊಸ ನಾಣ್ಯಗಳು ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

    20 ರೂಪಾಯಿಯ 12 ಭುಜಾಕೃತಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ 2019ರ ಮಾರ್ಚ್ ನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಘೋಷಣೆ ಮಾಡಿತ್ತು. 20 ರೂಪಾಯಿ ಹೊಸ ನಾಣ್ಯದ 27 ಮಿ.ಮೀ ಇರಲಿದೆ. 20ರೂ. ನಾಣ್ಯದ ಹೊರ ಉಂಗುರವನ್ನು ಶೇ.65 ತಾಮ್ರ, ಶೇ.15 ಸತು ಮತ್ತು ಶೇ.20 ನಿಕ್ಕಲ್ ಬಳಸಿ ತಯಾರಿಸಲಾಗುತ್ತದೆ. ಇನ್ನೂ ಒಳ ಉಂಗುರ ಅಥವಾ ನಾಣ್ಯದ ಕೇಂದ್ರಭಾಗದಲ್ಲಿ ತಾಮ್ರ ಶೇ.75, ಸತು ಶೇ.20 ಹಾಗೂ ನಿಕ್ಕಲ್ ಶೇ.5 ರಷ್ಟು ಬಳಕೆ ಮಾಡಲಾಗುತ್ತದೆ.

    20 ರೂಪಾಯಿಯ ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರುತ್ತದೆ. ಹೊಸ 20 ರೂ. ನಾಣ್ಯವು 10ರೂ. ನಾಣ್ಯಕ್ಕಿಂತ ವಿಭಿನ್ನವಾಗಿದ್ದು, ಈ ನಾಣ್ಯವೂ ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ.

    ನಾಣ್ಯದ ವಿಶೇಷತೆಗಳು?
    ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಮತ್ತು ಅಶೋಕನ “ಸತ್ಯಮೇವ ಜಯತೆ” ವಾಕ್ಯವನ್ನು ಇರಲಿದೆ. ಇನ್ನೂ ನಾಣ್ಯದ ಎಡಭಾಗದಲ್ಲಿ `ಭಾರತ್’ ಎಂದು ಹಿಂದಿ ಭಾಷೆಯಲ್ಲಿದ್ದು, `ಇಂಡಿಯಾ’ ಎಂದು ಇಂಗ್ಲೀಷ್ ನಲ್ಲಿ ಬಲಭಾಗದಲ್ಲಿ ಬರೆಯಲಾಗುತ್ತದೆ. ಇನ್ನೂ ನಾಣ್ಯದ ಹಿಂಭಾಗದಲ್ಲಿ ರೂಪಾಯ ಚಿಹ್ನೆಯ ಕೆಳಗೆ ನಾಣ್ಯದ ಮೌಲ್ಯವನ್ನು ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಕೃಷಿ ಪ್ರಾಮುಖ್ಯತೆಯನ್ನು ಸಾರಲು ನಾಣ್ಯದ ಎಡಭಾಗದಲ್ಲಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರ ಸಹ ಇರಲಿದೆ.

    ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿ ಎಂದು ಬರೆಯಲಾಗಿದ್ದು, ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಸಹ ಟಂಕಿಸಲಾಗುತ್ತದೆ. ಮೊದಲ ಬಾರಿಗೆ 2009 ರ ಮಾರ್ಚ್ ನಲ್ಲಿ 10ರೂ. ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ನಂತರ 10 ವರ್ಷಗಳ ಬಳಿಕ ನೂತನ 20ರೂ. ನಾಣ್ಯ ಬಿಡುಗಡೆಯಾಗುತ್ತಿದೆ.

    20 ರೂ. ನಾಣ್ಯ ಘೋಷಣೆಯಾದರೂ ಸದ್ಯ ಚಲಾವಣೆಯಲ್ಲಿರುವ ಎಲ್ಲ ನಾಣ್ಯಗಳು ಚಲಾವಣೆಯಲ್ಲಿರುತ್ತದೆ ಎಂದು ಆರ್‍ಬಿಐ ಈ ಹಿಂದೆ ತಿಳಿಸಿತ್ತು.