Tag: Nepal Government Collapses

  • ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

    ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

    ಕಠ್ಮಂಡು/ಬೆಂಗಳೂರು: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸರ್ಕಾದ ಮುಖ್ಯಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

    ಭಾರತದ ನೆರೆಯ ರಾಷ್ಟ್ರ ನೇಪಾಳ ಯುವ ದಂಗೆಗೆ ಹೊತ್ತಿ ಉರಿಯುತ್ತಿದೆ. ಸತತ 2ನೇ ದಿನವೂ ನೇಪಾಳ ಕುದಿಯುತ್ತಿದೆ. ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದೆ. ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ, ಯುವಕರ ಕೋಪತಾಪಕ್ಕೆ ನೇಪಾಳದ ಓಲಿ ಸರ್ಕಾರ ಮಂಡಿಯೂರಿದೆ.

    ಭುಗಿಲೆದ್ದ “ಜೆನ್ ಝಿ” ರಣಕೋಪಕ್ಕೆ ಕೆಪಿ ಶರ್ಮಾ ಓಲಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ನೇಪಾಳದಲ್ಲಿ ದೇಶವ್ಯಾಪಿ ದಂಗೆಯಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪರಿಣಾಮವಾಗಿ 39 ಮಂದಿ ಕನ್ನಡಿಗರು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಕನ್ನಡಿಗರನ್ನ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

  • ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ಕಠ್ಮಂಡು: ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಜಲನಾಥ್‌ ಖನಾಲ್‌ (Jhalanath Khanal) ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ (Rajyalaxmi Chitrakar) ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

    ಜನರಲ್‌-ಝಡ್‌ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರು (Gen Z protestors) ರಾಜಕೀಯ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. 2ನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಸಂಸತ್‌ ಭವನ, ಸುಪ್ರೀಂ ಕೋರ್ಟ್‌, ಅಧಿಕೃತ ಸರ್ಕಾರಿ ಕಟ್ಟಡಗಳು ಮಾತ್ರವಲ್ಲದೇ ಪ್ರಮುಖ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿ, ವಿಧ್ವಂಸಕ ಕೃತ್ಯಗಳನ್ನ ಎಸಗಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

    ಇದರಿಂದಾಗಿ ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಅಲಿಯಾಸ್ ಪ್ರಚಂಡ, ಶೇರ್ ಬಹದ್ದೂರ್ ದೇವುಬಾ ಮತ್ತು ಜಲನಾಥ್ ಖಾನಲ್ ಅವರ ನಿವಾಸಗಳನ್ನು ಹಾನಿಗೊಳಿಸಿದ್ದಾರೆ. ಜಲನಾಥ್‌ ಮನೆಗೆ ಬೆಂಕಿ ಹಚ್ಚಿದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನೇಪಾಳದ ಮಾಜಿ ಪ್ರಥಮ ಮಹಿಳೆ ರಾಜ್ಯಲಕ್ಷ್ಮಿ ಚಿತ್ರಾಕರ್‌ ಸಾವನ್ನಪ್ಪಿದ್ದಾರೆ.

    ಬೆಂಕಿ ಹಚ್ಚಿದಾಗ ರಾಜ್ಯಲಕ್ಷ್ಮಿ ಮನೆಯ ಒಳಗೆಯೇ ಇದ್ದರು. ಗಾಯಗೊಂಡಿದ್ದ ಅವರನ್ನ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸುಟ್ಟ ಗಾಯಗಳಿಂದ ತೀವ್ರವಾಗಿ ಬಳಲುತ್ತಿದ್ದ ಚಿತ್ರಾಕರ್‌ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ ವಿಮಾನ – ಏರ್‌ ಇಂಡಿಯಾ, ಇಂಡಿಗೋ ಹಾರಾಟ ರದ್ದು

    ಪ್ರಧಾನಿ ಜೊತೆಗೆ ನಾಲ್ವರು ಸಚಿವರ ರಾಜೀನಾಮೆ
    ಇಂದು ಮುಂಜಾನೆ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಪ್ರಧಾನಿ ಕೆಪಿ ಶರ್ಮಾ ಓಲಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಗಳೊಂದಿಗೆ ನಾಲ್ವರು ಸಚಿವರೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇನ್ನೂ ಅತಿಯಾದ ಭ್ರಷ್ಟಾಚಾರ, ಸೋಷಿಯಲ್‌ ಮೀಡಿಯಾ ಮೇಲಿನ ನಿಷೇಧ ವಿರೋಧಿಸಿ ನೇಪಾಳದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

  • ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

    ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

    – ಮಾಜಿ ಪ್ರಧಾನಿ ಮೇಲೂ ಹಲ್ಲೆ, ಹಾಲಿ ಪ್ರಧಾನಿ ಜೊತೆ 4 ಮಂತ್ರಿಗಳೂ ರಾಜೀನಾಮೆ

    ಕಠ್ಮಂಡು: ಭ್ರಷ್ಟಚಾರ, ಸೋಷಿಯಲ್‌ ಮೀಡಿಯಾ ನಿಷೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಉದ್ರಿಕ್ತರು ನೇಪಾಳದ ಹಣಕಾಸು ಸಚಿವನಿಗೆ (Finance Minister) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೊದಲು ಮನೆ ಮೇಲೆ ಹಲ್ಲೆ ನಡೆಸಿದ ಪ್ರತಿಭಟನಾಕಾರು ಬಳಿಕ ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ.

    ಮಂಗಳವಾರ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್‌ರನ್ನ (Bishnu Prasad Paudel) ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಪ್ರತಿಭಟನಾಕಾರರು ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

    29 ಸೆಕೆಂಡುಗಳ ವಿಡಿಯೋನಲ್ಲಿ ಬಿಷ್ಣು ಪ್ರಸಾದ್‌ ಜೀವ ಉಳಿಸಿಕೊಳ್ಳಲು ಓಡೋಡಿ ಹೋಗ್ತಿದ್ದ ದೃಶ್ಯ ಕಂಡುಬಂದಿದೆ. ಉದ್ರಿಕ್ತರು ಮನೆಗೆ ಮುತ್ತಿಗೆ ಹಾಕ್ತಿದ್ದಂತೆ ಸಚಿವರು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾರೆ. ಕಾಂಪೌಂಡ್‌ನಿಂದ ಆಚೆ ಬರ್ತಿದ್ದಂತೆ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಓಡ್ತಿದ್ದಂತೆ ಮತ್ತೊಬ್ಬ ಫಿಲ್ಮಿ ಸ್ಟೈಲ್‌ನಲ್ಲಿ ಜಂಪ್‌ ಮಾಡಿ ಜಾಡಿಸಿ ಒದ್ದಿದ್ದಾನೆ. ಬಳಿಕ ಅಲ್ಲೇ ಇದ್ದ ಮತ್ತೊಂದು ಗುಂಪು ಅವರನ್ನು ರಕ್ಷಣೆ ಮಾಡಿ ಕರೆದೊಯ್ದಿದೆ. ಈ ದೃಶ್ಯಗಳು 29 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ.

    ಮಾಜಿ ಪ್ರಧಾನಿಗೂ ಗೂಸಾ
    ನೇಪಾಳ ಹಿಂಸಾತ್ಮಕ ಪ್ರತಿಭಟನೆ ವೇಳೆ ಹಣಕಾಸು ಸಚಿವೆ ಅರ್ಜು ರಾಣಾ ದೇವುಬಾ ಅವರ ಪತಿ ಶೇರ್ ಬಹದ್ದೂರ್ ದೇವುಬಾ ಮೇಲೂ ಹಲ್ಲೆ ನಡೆದಿದೆ. ಸರ್ಕಾರಿ ಸಂಕೀರ್ಣಗಳು, ಸಂಸತ್ತು ಮತ್ತು ಹಿರಿಯ ರಾಜಕೀಯ ನಾಯಕರ ಮನೆಗಳ ಮೇಲೂ ಉದ್ರಿಕ್ತರ ಗುಂಪು ದಾಳಿ ನಡೆಸಿವೆ. ಈ ಬೆನ್ನಲ್ಲೇ ನೇಪಾಳ ಸಚಿವರ ರಕ್ಷಣೆಗೆ ಮೂರು ಹೆಲಿಕಾಪ್ಟರ್‌ಗಳನ್ನ ನಿಯೋಜನೆ ಮಾಡಲಾಗಿದೆ.

    ಪ್ರಧಾನಿ ಜೊತೆಗೆ ನಾಲ್ವರು ಸಚಿವರ ರಾಜೀನಾಮೆ
    ಇಂದು ಮುಂಜಾನೆ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಪ್ರಧಾನಿ ಕೆಪಿ ಶರ್ಮಾ ಓಲಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಗಳೊಂದಿಗೆ ನಾಲ್ವರು ಸಚಿವರೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

    ಇನ್ನೂ ಅತಿಯಾದ ಭ್ರಷ್ಟಾಚಾರ, ಸೋಷಿಯಲ್‌ ಮೀಡಿಯಾ ಮೇಲಿನ ನಿಷೇಧ ವಿರೋಧಿಸಿ ನೇಪಾಳದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19 ಮಂದಿ ಸಾವು – ನೇಪಾಳ ಗೃಹ ಸಚಿವ ರಾಜೀನಾಮೆ