Tag: nelmangala

  • ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಪೊಲೀಸರು

    ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಪೊಲೀಸರು

    ಬೆಂಗಳೂರು: ಉತ್ತರ ಕರ್ನಾಟಕದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಶಾಂತಿ ಕಾಪಾಡುವ ಪೊಲೀಸರು ಸಹ ಸಾರ್ವಜನಿಕರೊಂದಿಗೆ ತಮ್ಮ ಕೈಲಾದಷ್ಟು ಸಹಾಯಕ್ಕೆ ಸ್ಪಂದಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಠಾಣೆ ಪೊಲೀಸರು ಅಗತ್ಯ ವಸ್ತುಗಳ ಸಹಾಯಕ್ಕೆ ಮುಂದಾಗಿದ್ದಾರೆ. ಇನ್ನೂ ನೆಲಮಂಗಲ ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

    ಜೊತೆಗೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿ, ಒಂದು ಕ್ಯಾಂಟರ್ ಲಾರಿ ಲೋಡ್ ವಸ್ತುಗಳ ರವಾನೆ ಮಾಡುತ್ತಿದ್ದಾರೆ. ನೆಲಮಂಗಲ ಟೌನ್ ಎಸ್‍ಐ ಡಿ.ಆರ್. ಮಂಜುನಾಥ್ ನೇತೃತ್ವದಲ್ಲಿ ವಸ್ತುಗಳನ್ನು ಸಂಗ್ರಹಿಸಿ, ಸಾರ್ವಜನಿಕ ವಲಯದಲ್ಲಿ ಪೊಲೀಸರು ಮಾನವೀಯತೆ ಮೆರೆದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ತಲೆಯಲ್ಲಿ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧನನ್ನು ರಕ್ಷಿಸಿದ ಸಾರ್ವಜನಿಕರು

    ತಲೆಯಲ್ಲಿ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧನನ್ನು ರಕ್ಷಿಸಿದ ಸಾರ್ವಜನಿಕರು

    ಬೆಂಗಳೂರು: ತಲೆಗೆ ಆಗಿದ್ದ ಗಾಯಕ್ಕೆ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧರೊಬ್ಬರನ್ನು ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ನಿವಾಸಿಗಳು ಹಾಗೂ ಸರ್ಕಾರೇತರ ಸಂಸ್ಥೆಯೊಂದು ರಕ್ಷಣೆ ಮಾಡಿ ಮಾನವಿಯತೆ ಮೆರೆದಿದ್ದಾರೆ.

    ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮದ ನಿವಾಸಿ ಸಿದ್ದಲಿಂಗಪ್ಪರನ್ನು ರಕ್ಷಿಸಲಾಗಿದೆ. ಅಪಘಾತವಾಗಿ ಮನೆ ತೊರೆದಿದ್ದ ಸಿದ್ದಲಿಂಗಪ್ಪ ತಲೆಗೆ ಗಾಯಮಾಡಿಕೊಂಡು ಅದರಲ್ಲಿ ಹುಳವಾಗಿ ನರಳಾಡುತ್ತಿದ್ದರು. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಬಳಿ ಸಿದ್ದಲಿಂಗಪ್ಪ ಸ್ಥಿತಿ ಕಂಡ ಸ್ಥಳೀಯರು ಕಳೆದ ಒಂದು ವಾರದ ಹಿಂದೆ ರಕ್ಷಣೆ ಮಾಡಿ, ತಲೆಗೆ ಔಷಧಿ ಹಚ್ಚಿ, ಊಟವನ್ನು ನೀಡಿ ನೋಡಿಕೊಳ್ಳುತ್ತಿದ್ದರು.

    ಸಾಮಾಜಿಕ ಜಾಲತಾಣಗಳ ಮೂಲಕ ಡಾಬಸ್ ಪೇಟೆ ನಿವಾಸಿಗಳು ಎನ್‍ಜಿಓಗಳನ್ನು ಸಂಪರ್ಕಿಸಿ, ವಯೋವೃದ್ಧನ ಬಗ್ಗೆ ತಿಳಿಸಿದ್ದರು. ಆಗ ಎಐಆರ್ ಚಾರಿಟಬಲ್ ಹೋಂ ಹಾಗೂ ಇನ್ನೀತರ ಎನ್‍ಜಿಓಗಳು ಈ ಬಗ್ಗೆ ತಿಳಿದು ಸಹಕಾರ ನೀಡಲು ಮುಂದಾದವು. ಸದ್ಯ ಸಿದ್ದಲಿಂಗಪ್ಪರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಬನ್ನೇರಘಟ್ಟದ ಎಐಆರ್ ಚಾರಿಟಬಲ್ ಹೋಂಗೆ ಸ್ಥಳೀಯರು ಸೇರಿಸಿದ್ದಾರೆ.

  • ಡಿವೈಡರ್‌ನಿಂದ ಹಾರಿ ವಿಭಜಕಕ್ಕೆ ಗುದ್ದಿ ಪಕ್ಕದ ರಸ್ತೆಗೆ ಹಾರಿದ ಕಾರ್

    ಡಿವೈಡರ್‌ನಿಂದ ಹಾರಿ ವಿಭಜಕಕ್ಕೆ ಗುದ್ದಿ ಪಕ್ಕದ ರಸ್ತೆಗೆ ಹಾರಿದ ಕಾರ್

    ಬೆಂಗಳೂರು: ಕಾರೊಂದು ಡಿವೈಡರ್‌ನಿಂದ ಹಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಗೆ ಹಾರಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗೇಟ್ ಬಳಿ ನಡೆದಿದೆ.

    ಕೆರೆಕತ್ತಿಗನೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣ ಮಾಡುತ್ತಿದ್ದರು. ಕೆರೆಕತ್ತಿಗನೂರು ಗೇಟ್ ಬಳಿ ಬರುತ್ತಿದ್ದಂತೆ ಚಾಲಕನ ಅತಿವೇಗದಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ನಿಂದ ಹಾರಿದೆ. ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹೋಗಿ ಬಿದ್ದಿದೆ.

    ಅಪಘಾತದ ರಭಸಕ್ಕೆ ರಸ್ತೆ ವಿಭಜಕದ ಸಿಗ್ನಲ್ ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಸದ್ಯಕ್ಕೆ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತಿಯಾದ ವೇಗ ಮತ್ತು ಇಳಿಜಾರಿನಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ವಿಡಿಯೋ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಬೈಕ್, ಕಾರುಗಳಿಗೆ ಡಿಕ್ಕಿ – ಆಕ್ರೋಶಗೊಂಡ ಸ್ಥಳೀಯರಿಂದ ಗೂಸಾ

    ವಿಡಿಯೋ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಬೈಕ್, ಕಾರುಗಳಿಗೆ ಡಿಕ್ಕಿ – ಆಕ್ರೋಶಗೊಂಡ ಸ್ಥಳೀಯರಿಂದ ಗೂಸಾ

    ಬೆಂಗಳೂರು: ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುವಾಗ ಬೈಕ್ ಹಾಗೂ ಕಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬೈಕ್ ಸವಾರರನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನೆಲಮಂಗಲ ಸಮೀಪದ ದೇವಣ್ಣನಪಾಳ್ಯ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಯುವಕರು ವಿಲಿಂಗ್ ಮಾಡುತ್ತಿದ್ದ ವೇಳೆ ಒಂದು ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಇತರೆ ವಾಹನ ಸವಾರರು ಬೈಕ್ ಸವಾರರನ್ನು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸಾವಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸುಮಾರು ಒಂದು ಕಿಲೋಮೀಟರ್ ನಿಂದ ಈ ಯುವಕರು ವೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

    https://www.youtube.com/watch?v=6sQ74zRnkeY

  • ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣು!

    ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣು!

    ಬೆಂಗಳೂರು: ಅನುಮಾನಸ್ಪದ ರೀತಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ.

    ಅರುಣ್ ಕುಮಾರ್(21) ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಯುವಕ. ಅರುಣ್ ಕುಮಾರ್ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತಿದ್ದರು. ಆದರೆ ಭಾನುವಾರ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರುಣ್ ಕುಮಾರ್ ಪ್ರೀತಿ ನಿರಾಕರಣೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗುತ್ತಿದೆ.

    ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐ ಮಿಸ್ ಯು ಪಪ್ಪ, ಮಮ್ಮಿ ಎಂದು ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಐ ಮಿಸ್ ಯು ಪಪ್ಪ, ಮಮ್ಮಿ ಎಂದು ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಬೆಂಗಳೂರು: ಡೆತ್‍ನೋಟ್ ಬರೆದಿಟ್ಟು ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

    ಮೌನಿಷಿ ರಾಂ (20) ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ. ಪಶ್ಚಿಮ ಬಂಗಾಳ ಮೂಲದ ಮೌನಿಷಿ, ಅಂಬಿಕಾ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು.

    ಮೌನಿಷಿ ಪಶ್ಚಿಮ ಬಂಗಾಳ ಮೂಲದ ಹುಡುಗನನ್ನೇ ಪ್ರೀತಿಸುತ್ತಿದ್ದಳು. ಈ ವಿಚಾರ ಅವರ ಪೋಷಕರಿಗೂ ತಿಳಿದಿತ್ತು. ಆದರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳಿಂದ ಈ ವಿಚಾರದ ಬಗ್ಗೆ ಮನೆಯರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾಳೆ. ಆದ್ರೆ ಶನಿವಾರ ರಾತ್ರಿ ಮನನೊಂದ ಮೌನಿಷಿ ಮನನೊಂದು ಡೆತ್‍ನೋಟ್ ಬರೆದಿಟ್ಟು ಸೀಲಿಂಗ್ ಫ್ಯಾನ್ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಐ ಮಿಸ್ ಯು ಪಪ್ಪ, ಐ ಮಿಸ್ ಯು ಮಮ್ಮಿ ಎಂದು ಡೆತ್‍ನೋಟಿನಲ್ಲಿ ಬರೆದಿದ್ದಾಳೆ.

    ಈ ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.