Tag: Neighborhood Relief Report

  • ರಾಜ್ಯ ಸರ್ಕಾರದ ನೆರೆ ವರದಿ ತಿರಸ್ಕರಿಸಿದ ಕೇಂದ್ರ ಸರ್ಕಾರ?

    ರಾಜ್ಯ ಸರ್ಕಾರದ ನೆರೆ ವರದಿ ತಿರಸ್ಕರಿಸಿದ ಕೇಂದ್ರ ಸರ್ಕಾರ?

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದರು ಇನ್ನೆರೆಡು ದಿನಗಳಲ್ಲಿ ಪರಿಹಾರ ಬರುತ್ತಾ ಎಂದು ಹೇಳುತ್ತಾ ಎರಡು ತಿಂಗಳು ಕಳೆದಿದ್ದಾರೆ. ಪ್ರವಾಹ ಪರಿಹಾರದ ದಾರಿ ನೋಡುತ್ತಿರುವ ಸಂತ್ರಸ್ತರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ.

    ಇಷ್ಟು ದಿನ ಸಮಯ ತೆಗೆದುಕೊಂಡ ರಾಜ್ಯ ಸರ್ಕಾರ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.

    ಈಗ ಮತ್ತೊಮ್ಮೆ ವರದಿ ನೀಡಲು ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬ ಪ್ರಶ್ನೆಯೊಂದು ಪ್ರವಾಹ ಸಂತ್ರಸ್ತರಲ್ಲಿ ಮೂಡಿದೆ. ತಮ್ಮದೇ ಬಿಜೆಪಿ ಸರ್ಕಾರ ನೀಡಿದ ವರದಿಯನ್ನು ಕೇಂದ್ರ ತಿರಸ್ಕರಿಸಿದ್ದು ಯಾಕೆ? ರಾಜ್ಯ ಸರ್ಕಾರದ ನೀಡಿದ ವರದಿಯ ಮೇಲೆ ಕೇಂದ್ರಕ್ಕೆ ನಂಬಿಕೆ ಇಲ್ವಾ? ರಾಜ್ಯ ಸರ್ಕಾರ ಪರಿಹಾರದ ವರದಿಯನ್ನು ಸಿದ್ಧಪಡಿಸಲು ವಿಫಲವಾಯ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

    ಕಾಂಗ್ರೆಸ್ ಆಕ್ರೋಶ: ರಾಜ್ಯ ನೀಡಿದ ನೆರೆ ವರದಿ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ. ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ. ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ. ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು? ಸಿಎಂ ಯಡಿಯೂರಪ್ಪನವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ ಎಂದು ಟ್ವೀಟ್ ಮಾಡಿದೆ.

    ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.