Tag: Negligence

  • ಗೋದಾಮಿನಲ್ಲಿ ಕೊಳೆಯುತ್ತಿವೆ ಕೊಡಗು, ಕೇರಳ ಸಂತ್ರಸ್ತರಿಗೆ ನೀಡಿದ ದವಸ ಧಾನ್ಯಗಳು

    ಗೋದಾಮಿನಲ್ಲಿ ಕೊಳೆಯುತ್ತಿವೆ ಕೊಡಗು, ಕೇರಳ ಸಂತ್ರಸ್ತರಿಗೆ ನೀಡಿದ ದವಸ ಧಾನ್ಯಗಳು

    ಬಳ್ಳಾರಿ: ಕೊಡಗು, ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ನಾಡಿನ ಜನರು ಸಾಕಷ್ಟು ನೆರವು ನೀಡಿದ್ದಾರೆ. ಸಂತ್ರಸ್ತರಿಗಾಗಿ ಸಾವಿರಾರು ಜನರು ಆಹಾರ ಧಾನ್ಯ, ದವಸ, ಬಟ್ಟೆ ಬರೆ, ಔಷಧಿಗಳನ್ನು ಸಂತ್ರಸ್ತರಿಗಾಗಿ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ತಲುಪಬೇಕಾಗಿದ್ದ ರಾಶಿ ರಾಶಿ ವಸ್ತುಗಳು ಇದೀಗ ಬಳ್ಳಾರಿಯ ಗೋದಾಮವೊಂದರಲ್ಲಿ ಕೊಳೆಯುತ್ತಿವೆ.

    ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲು ಲಾರಿ ಸಿಗಲಿಲ್ಲ ಅಂತಾ ಬಳ್ಳಾರಿ ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿದೆ. ಬಳ್ಳಾರಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇದೀಗ ರಾಜ್ಯದ ಜನರು ಹಿಡಿಶಾಪ ಹಾಕುವಂತಾಗಿದೆ. ಏಕೆಂದರೆ ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ನಲುಗಿದ ಸಂತ್ರಸ್ತರಿಗಾಗಿ ಬಳ್ಳಾರಿಯ ಸಾವಿರಾರು ಜನರು ಸಾಕಷ್ಟು ದವಸ, ಧಾನ್ಯ, ಬಟ್ಟೆ, ಬರೆ, ಔಷಧಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳನ್ನು ನೀಡಿದ್ದರು. ಆದರೆ ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ತಲುಪಿಸಬೇಕಾದ ಸಾಮಾಗ್ರಿಗಳನ್ನು ಗೊದಾಮಿನಲ್ಲಿಟ್ಟು ನಿರ್ಲಕ್ಷ್ಯ ವಹಿಸಿದ ಪರಿಣಾಮ ಸಂತ್ರಸ್ತರಿಗೆ ತಲುಪಬೇಕಿದ್ದ ಸಾಮಾಗ್ರಿಗಳು ಗೋದಾಮಿನಲ್ಲೆ ಕೊಳೆಯುವಂತಾಗಿದೆ.

    ಸಂತ್ರಸ್ತರಿಗಾಗಿ ಸಾವಿರಾರು ಜನರು ತಮ್ಮ ದುಡಿದ ದುಡಿಮೆಯಲ್ಲೇ ಸಾಕಷ್ಟು ಸಾಮಾಗ್ರಿಗಳನ್ನು ನೀಡಿದ್ದರು. ಇನ್ನೂ ಕೆಲವರು ಅಲ್ಪ ಸ್ವಲ್ಪ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದರು. ಅಲ್ಲದೇ ಸಿಎಂ ಪರಿಹಾರ ನಿಧಿಗೆ ನೀಡಿದ ಸುಮಾರು 7 ಲಕ್ಷ ರೂ. ಗೂ ಅಧಿಕ ಮೊತ್ತದ ಚೆಕ್‍ಗಳನ್ನು ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಕೌಂಟ್‍ಗೆ ತಲುಪಿಸದೇ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ದುರಂತಮಯವಾಗಿದೆ. ಈ ಕುರಿತು ಗೃಹರಕ್ಷಕ ದಳದ ಅಧಿಕಾರಿಯನ್ನು ಪ್ರಶ್ನೆ ಮಾಡಿದರೆ ಸಾಮಾಗ್ರಿಗಳನ್ನು ಸಾಗಿಸಲು ಲಾರಿ ಸಿಗಲಿಲ್ಲ. ನಾಳೆ ನಾಡಿದು ಕಳುಹಿಸುತ್ತೇವೆ ಅಂತಾ ನಿರ್ಲಕ್ಷ್ಯತನದ ಉತ್ತರ ನೀಡುತ್ತಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಸಾವಿರಾರು ಲಾರಿಗಳಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಂತ್ರಸ್ತರ ಸಾಮಾಗ್ರಿಗಳನ್ನು ಸಾಗಿಸಲು ಒಂದು ಲಾರಿಯೂ ಸಹ ಸಿಗಲಿಲ್ಲ ಅನ್ನೋದು ನಿಜಕ್ಕೂ ದುರಂತಮಯವಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನರು ಇದೆಂಥ ಜಿಲ್ಲಾಡಳಿತ. ಇವರೆಂಥಾ ಜಿಲ್ಲಾಧಿಕಾರಿ ಅಂತಾ ಹಿಡಿಶಾಪ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ ಅಧಿಕಾರಿಯ ಬೇಜವಾಬ್ದಾರಿತನದಿಂದ ಬದುಕಿರುವಾಗಲೇ ರೈತನಿಗೆ ಮರಣ ಪತ್ರ ನೀಡಿ, ರೈತನ ಬದುಕಿಗೆ  ಕೊಳ್ಳಿ ಇಟ್ಟಿದ್ದಾರೆ. ಹೀಗಾಗಿ ರಾಮೇಗೌಡರವರು ನಿಜವಾಗಿಯೂ ಸತ್ತೇ ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ, ಮತದಾರರ ಪಟ್ಟಿಯಿಂದಲೂ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಅಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೇ ರೈತ ಕಂಗಾಲಾಗಿ ಹೋಗಿದ್ದಾರೆ.

    ತನಗಾಗುತ್ತಿರುವ ಕಷ್ಟವನ್ನು ಪರಿಹರಿಸಿಕೊಡಿ ಎಂದು ಸತತ ಮೂರು ವರ್ಷಗಳಿಂದಲೂ ರಾಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನೀನು ಈಗಾಗಲೇ ಸತ್ತು ಹೋಗಿದ್ದೀಯ, ಇನ್ನೇನು ಸರಿಪಡಿಸೋದು ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ತೀವ್ರವಾಗಿ ಮನನೊಂದ ಅವರು ದಾಖಲೆಗಳಲ್ಲಿ ಮಾತ್ರ ಸತ್ತಿರುವ ನಾನು ನಿಜವಾಗಿಯೂ ಸತ್ತೇ ಹೋಗುತ್ತೇನೆ ಎಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

    ಆತ್ಮಹತ್ಯೆಗೆ ಯತ್ನಸಿದ ರಾಮೇಗೌಡರವರನ್ನು ಕುಟುಂಬಸ್ಥರು ಕಾಪಾಡಿಕೊಳ್ಳುವಲ್ಲಿ ಸಫಲರಾಗಿದರು. ಆದರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಾತನಾಡದೇ, ಆಗಿರುವ ತಪ್ಪನ್ನು ಸರಿಪಡಿಸಕೊಡಬೇಕೆಂದು ಕುಟುಂಬಸ್ಥರು ಮನವಿಮಾಡಿಕೊಂಡಿದ್ದಾರೆ.

    ಏನದು ಘಟನೆ?
    2015ರಲ್ಲಿ ರಾಮೇಗೌಡರ ತಂದೆ ತಿಮ್ಮೇಗೌಡರು ಮೃತಪಟ್ಟ ಹಿನ್ನೆಲೆಯಲ್ಲಿ ಅರಕೆರೆ ಗ್ರಾಮದ ನಾಡಕಚೇರಿಯಲ್ಲಿ ಅವರು ಮರಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಲಿಂಗಪ್ಪಾಜಿ ಎಂಬವರ ಬೇಜವಾಬ್ದಾರಿತನದಿಂದಾಗಿ ಇಬ್ಬರ ಹೆಸರಲ್ಲೂ ಮರಣಪತ್ರ ನೋಂದಣಿಯಾಗಿದೆ. ಖುದ್ದು ತಲಶೀಲ್ದಾರರೇ ಸಹಿ ಹಾಕಿದ ಮರಣಪತ್ರಗಳನ್ನು ನಾಡಕಚೇರಿಯಿಂದ ರೈತ ಪಡೆದುಕೊಂಡು, ಆಘಾತಕ್ಕೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅನ್ನದಾತನನ್ನು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪಶುವಿನಂತೆ ನೋಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಎಂ.ಸಿ.ರಾಜು ಆಸ್ಪತ್ರೆ ಸಿಬ್ಬಂದಿಯಿಂದ ಅವಮಾನಕ್ಕೊಳದ ರೈತ. ಇವರು ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ಮಾರಹಳ್ಳಿ ನಿವಾಸಿಯಾಗಿದ್ದಾರೆ. ಇವರು ಮಾಜಿ ಸಿಎಂ ಸಿದ್ದರಾಮಯ್ಯನ ಕನಸಿನ ಯೋಜನೆಯಾಗಿದ್ದ ಅನ್ನಭಾಗ್ಯ ಜಾಹೀರಾತಿನಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು.

    ರೈತ ರಾಜು ತನ್ನ ಮಗನನ್ನು ಕಿಡ್ನಿ ತೊಂದರೆಯ ಕಾರಣದಿಂದ ನಗರದ ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗ ನಂದರಾಜು ಕಿಡ್ನಿ ತೊಂದರೆಯಿಂದಾಗಿ ಅವನ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಜೂನ್ 11ಕ್ಕೆ ಮಗನನ್ನು ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗನ ಅವಸ್ಥೆ ಕಂಡರೂ ಆಸ್ಪತ್ರೆಯ ಸಿಬ್ಬಂದಿಗಳು ಕ್ಯಾರೇ ಎನ್ನದೇ ಅಲ್ಲಿಂದ ಇಲ್ಲಿಗೆ ಓಡಾಡಿಸಿ ಕೊನೆಗೆ ದಾಖಲು ಮಾಡಿಕೊಂಡಿದ್ದಾರೆ.

    ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿಸಿದ್ದರೂ ಸಹ ಮಗ ನಂದರಾಜುವಿನ ತೊಂದರೆ ಕಡಿಮೆಯಾಗಿಲ್ಲ. ಹೀಗಾಗಿ ರೈತ ರಾಜಪ್ಪ ವಾಣಿವಿಲಾಸ ಆಸ್ಪತ್ರೆಯ ವೈದ್ಯರಾದ ಮೂರ್ತಿ ಹಾಗೂ ರಘುರವರನ್ನು ವಿಚಾರಿಸಿದಾಗ, ಬೇಜವಾಬ್ದಾರಿತನದಿಂದ ನಿಮಗೇನು ಹೊಟ್ಟೆ ಕೊಯ್ಯಬೇಕಾ, ಇಲ್ಲಿಂದ ಹೊರಡಿ ಎಂದು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದಿಂದ ಬೇಸತ್ತ ರೈತ ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ವೈದ್ಯೆಯ ಎಡವಟ್ಟಿಗೆ ಬಲಗೈ ಕಳೆದುಕೊಂಡ ಗರ್ಭಿಣಿ!

    ವೈದ್ಯೆಯ ಎಡವಟ್ಟಿಗೆ ಬಲಗೈ ಕಳೆದುಕೊಂಡ ಗರ್ಭಿಣಿ!

    ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟಿನಿಂದಾಗಿ 5 ತಿಂಗಳ ಗರ್ಭಿಣಿ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.

    ಶಿಲ್ಪಾ ಭಂಜತ್ರಿ (26) ಬಲಗೈ ಕಳೆದುಕೊಂಡ ಗರ್ಭಿಣಿ. ಶಿಲ್ಪಾವರು ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮ ನಿವಾಸಿಯಾಗಿದ್ದು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ತಮ್ಮ ಬಲಗೈಯನ್ನೇ ಕಳೆದುಕೊಂಡಿದ್ದಾರೆ.

    ಸಂಜೀವಿನಿ ಶಾವಿ ಆಸ್ಪತ್ರೆಯ ವಿರುದ್ಧ ಗರ್ಭಿಣಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯೆ ಶೋಭಾ ಶಾವಿಯವರ ನಿರ್ಲಕ್ಷ್ಯದಿಂದ ಗರ್ಭಿಣಿಯ ಕೈ ಕಟ್ ಆಗಿದೆ ಎಂದು ಆರೋಪಿಸಿ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

    ಏನಿದು ಘಟನೆ?
    ಜೂನ್ 4ರಂದು ಶಿಲ್ಪಾರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ನೀಡಿದ ಡಾಕ್ಟರ್. ಶೋಭಾ ಶಾವಿಯವರು ಬಲಗೈಲಿರುವ ಗುಳ್ಳೆಯಿಂದ ಜ್ವರ ಕಾಣಿಸಿಕೊಂಡಿದೆ ಎಂದು ಒಳರೋಗಿಯ ವಿಭಾಗಕ್ಕೆ (ಐಪಿಡಿ) ದಾಖಲಿಸಿಕೊಂಡಿದ್ದಾರೆ.

    ವೈದ್ಯೆಯು ಆಪರೇಶನ್ ಮೂಲಕ ಗುಳ್ಳೆಯನ್ನು ತೆಗೆದಿದ್ದು, ಜೂನ್ 6ರಂದು ರಕ್ತ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಮಹಿಳೆಗೆ ರಕ್ತ ಹಾಕಿ ಜೂನ್ 8ರಂದು ಡಿಸ್ಟಾರ್ಜ್ ಮಾಡಿದ್ದಾರೆ. ಗ್ರಾಮಕ್ಕೆ ತೆರಳಿದ ಸ್ವಲ್ಪ ಸಮಯದಲ್ಲೇ ಆಪರೇಶನ್ ಆದ ಕೈಯಲ್ಲಿ ತೀವ್ರ ನೋವು ಹಾಗೂ ಬಾವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಹೋದಾಗ ವೈದ್ಯೆಯು ಸರಿಯಾದ ಚಿಕಿತ್ಸೆ ನೀಡದೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

    ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಾಗಲಕೋಟೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗರ್ಭಿಣಿಯನ್ನು ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಲಗೈಯಲ್ಲಿ ಆಪರೇಶನ್ ಮಾಡಿದ ಸ್ಥಳದಲ್ಲಿ ಸೋಂಕು ತಗುಲಿ ಗ್ಯಾಂಗ್ರೀನ್ ಆಗಿದ್ದು, ಕೂಡಲೇ ಮೊಣಕೈವರೆಗೆ ಕೈ ಕತ್ತರಿಸಬೇಕು, ಇಲ್ಲವೇ ಮಹಿಳೆಯ ಜೀವಕ್ಕೆ ಆಪತ್ತು ಎಂದಾಗ ಅನಿವಾರ್ಯವಾಗಿ ಮಹಿಳೆಯ ಬಲಗೈಯನ್ನು ಮೊಣಕೈವರೆಗೆ ಕತ್ತರಿಸಿದ್ದಾರೆ.

    ವೈದ್ಯೆಯು ಆಪರೇಶನ್ ಮಾಡಿ ಸರಿಯಾದ ಚಿಕಿತ್ಸೆ ಮಾಡದೇ ಇದ್ದರಿಂದ ಸೋಂಕು ತಗುಲಿದೆ. ಅಲ್ಲದೆ ರಕ್ತ ಹಾಕುವಾಗಲೂ ಗಮನಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಸೋಂಕು ಗ್ಯಾಂಗ್ರಿನ್ ಆಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಗರ್ಭಿಣಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ, ಮೂವರಿಗೆ ಗಾಯ

    ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ, ಮೂವರಿಗೆ ಗಾಯ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 6ರ ಬಳಿ ಮೇಲುಸೇತುವೆಗಾಗಿ ತೋಡಿದ್ದ ಗುಂಡಿಗೆ ವಾಹನವೊಂದು ಬಿದ್ದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.

    ಪರಮಶಿವಂ(57) ಮೃತ ದುರ್ದೈವಿಯಾಗಿದ್ದು, ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ನಡೆದಿದೆ. ಪರಮಶಿವಂ ಅವರು ತಿರುಮಗೊಂಡನಹಳ್ಳಿ ಬಳಿ ತನ್ನ ಓಮ್ನಿ ಕಾರಿನಲ್ಲಿ ಚಲಿಸುತ್ತಿದ್ದಾಗ ಮೇಲುಸೇತುವೆಗಾಗಿ ತೋಡಿದ್ದ ಬೃಹತ್ ಗುಂಡಿಗೆ ಓಮ್ನಿ ಸಮೇತ ಬಿದ್ದಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಘಟನೆಯಲ್ಲಿ ಭಾಸ್ಕರನ್, ಸತೀಶ್ ಹಾಗೂ ಸತ್ಯರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಸತ್ಯರಾಜು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಘಟನೆಗೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಸರಿಯಾದ ಸೂಚನಾ ಫಲಕ, ಬ್ಯಾರಿಕೇಡ್ ಗಳನ್ನು ಆಳವಡಿಸಿಲ್ಲ. ಇದನ್ನು ಗಮನಿಸದ ಓಮಿನಿ ಚಾಲಕ ನೇರವಾಗಿ ಗುಂಡಿಗೆ ಕಾರನ್ನು ನುಗ್ಗಿಸಿದ್ದಾನೆ. ಬಿದ್ದ ರಭಸಕ್ಕೆ ವಾಹನ ಸಂಸಪೂರ್ಣ ನಜ್ಜುಗುಜ್ಜಾಗಿದೆ.

    ಘಟನೆ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವು!

    ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವು!

    ಬಾಗಲಕೋಟೆ: ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

    ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ಶೃತಿ ಹರಿಜನಳ (25) ಗರ್ಭದಲ್ಲೇ ಅವಳಿ ಶಿಶುಗಳು ಸಾವನ್ನಪ್ಪಿವೆ. ಹೆರಿಗೆ ನೋವು ಬಂದ ಹಿನ್ನೆಲೆಯಲ್ಲಿ ಶೃತಿ ಅವರನ್ನು ಸಂಬಂಧಿಕರು ಬೀಳಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಎರಡು ಗಂಟೆ ನಂತರ ಸರಳ ಹೆರಿಗೆಯಾಗುತ್ತೆ ಎಂದು ಭರವಸೆ ನೀಡಿದ್ದರು. ಆದರೆ ಎಂಟು ತಾಸುಗಳ ನಂತರ ಹೆರಿಗೆಯಾಗಿದೆ.

    ಹೆರಿಗೆ ವೇಳೆ ಒಂದು ಗಂಡು ಒಂದು ಹೆಣ್ಣು ಅವಳಿ ಶಿಶುಗಳು ಜನಿಸಿದ್ದು, ಗರ್ಭದಲ್ಲೇ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಬಾಣಂತಿ ಶೃತಿ ಸಂಬಂಧಿಕರು ವೈದ್ಯರ ಭರವಸೆ ಮೇಲೆ ನಾವು ಬೇರೆ ಕಡೆ ಕರೆದೊಯ್ಯಲಿಲ್ಲ. ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.

    ಈ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಬಾಣಂತಿ ಶೃತಿಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಣಂತಿ ಸಂಬಂಧಿಕರು ಆಗ್ರಹಿಸಿದ್ದಾರೆ.