ಲಕ್ನೋ: ಉತ್ತರಪ್ರದೇಶ ರಾಜ್ಯದ ಬರೇಲಿಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಚಿಕಿತ್ಸೆ ನೀಡದೇ ವಿನಾಕಾರಣ ಸುತ್ತಾಡಿಸಿದ ಪರಿಣಾಮ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಾಲ್ಕು ದಿನದ ಹಸುಗೂಸು ಸಾವನ್ನಪ್ಪಿದೆ.
ಜೂನ್ 15 ರಂದು ಜನಿಸಿದ್ದ ಊರ್ವಶಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಅಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ಮಗುವನ್ನು ಮಹಿಳಾ ವಿಭಾಗದಿಂದ ಪುರುಷರ ವಿಭಾಗಕ್ಕೆ, ಮತ್ತೆ ಪುರುಷರ ವಿಭಾಗದಿಂದ ಮಹಿಳಾ ವಿಭಾಗಕ್ಕೆ ಚಿಕಿತ್ಸೆ ನೀಡದೆ ಮೂರು ಗಂಟೆಗಳವರೆಗೆ ಅಲೆದಾಡಿಸಿದ್ದಾರೆ. ದುರಾದೃಷ್ಟವಶಾತ್ ಮಗು ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಪ್ರಾಣ ಬಿಟ್ಟಿದೆ.

ಮಹಾರಣ ಪ್ರತಾಪ್ ಜಂಟಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಗುವನ್ನು ಮೊದಲು ಪುರುಷರ ವಿಭಾಗದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ, ಮಹಿಳಾ ವಿಭಾಗಕ್ಕೆ ಕಳುಹಿಸಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಹಾಸಿಗೆ ಕೊರತೆಯ ಕಾರಣವೊಡ್ಡಿ ಮಗುವನ್ನು ಮತ್ತೆ ಪುರುಷರ ವಿಭಾಗಕ್ಕೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದಾರೆ. ಈ ರವಾನೆಯ ಮಾರ್ಗ ಮಧ್ಯೆಯಲ್ಲಿ ಮಗು ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಓರ್ವ ವೈದ್ಯನನ್ನು ಅಮಾನತು ಮಾಡಲಾಗಿದೆ. ಘಟನೆಗೆ ಕಾರಣಕರ್ತರಾದ ಉಳಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಗುವಿಗೆ ಚಿಕಿತ್ಸೆ ನೀಡದೆ ವಿನಾಕಾರಣ ಮೂರು ಗಂಟೆಗಳ ಕಾಲ ಸುತ್ತಾಡಿಸಿದರು. ಕೊನೆಗೆ ಮಗುವನ್ನು ಮನೆಗೆ ಕರೆದೊಯ್ಯಲು ತೀರ್ಮಾನಿಸಿದೆವು. ಆದರೆ ಮಗು ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಅಸುನೀಗಿತು ಎಂದು ಮಗುವಿನ ಅಜ್ಜಿ ಕುಸುಮಾದೇವಿ ಕಣ್ಣೀರು ಹಾಕಿದರು.

ಮಗುವಿನ ಸಾವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಎರಡು ವಿಭಾಗದ ವೈದ್ಯರ ನಡುವೆ ವಾಗ್ವಾದ ನಡೆಯಿತು. ಅಮಾನತುಗೊಂಡ ವೈದ್ಯ ಕಲ್ಮೆಂದ್ರ ಸ್ವರೂಪ್ ಗುಪ್ತ, ಮೊದಲು ಮಗುವನ್ನು ಹೊರರೋಗಿಗಳ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಮಗುವನ್ನು ಮಹಿಳಾ ವಿಭಾಗದ ಮಕ್ಕಳ ವಿಶೇಷ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಅಲ್ಲಿ ವೈದ್ಯರು ಏನು ಹೇಳಿದರೋ ಪೋಷಕರು ಸುತ್ತಾಡುತ್ತಲೇ ಇದ್ದರು. ಅವರು ತುರ್ತು ಪರಿಸ್ಥಿತಿಗೆ ತಲುಪಿದಾಗ ದಾಖಲಾತಿಗಾಗಿ ಕೆಳಗಡೆ ಕಳುಹಿಸಲಾಯಿತು ಎಂದಿದ್ದಾರೆ.
ಮಹಿಳಾ ವಿಭಾಗದಲ್ಲಿ ಮಗುವಿನ ಉಷ್ಣತೆ ಕಾಪಾಡುವ ನಾಲ್ಕು ಹಾಸಿಗೆಗಳು ಮಾತ್ರ ಇದ್ದು, ಈಗಾಗಲೇ ನಾಲ್ಕು ಹಾಸಿಗೆಗಳಲ್ಲಿ 8 ಮಕ್ಕಳಿದ್ದಾರೆ. ಅದಕ್ಕಾಗಿ ನಾವು ಈ ಮಗುವನ್ನು ಪುರುಷರ ವಿಭಾಗಕ್ಕೆ ಕಳುಹಿಸಿದೆವು. ಯಾವಾಗಲೂ ಪುರುಷರ ವಿಭಾಗದ ವೈದ್ಯರು ಕುರುಡರಂತೆ ಎಲ್ಲರನ್ನೂ ಇಲ್ಲಿಗೆ ಕಳುಹಿಸುತ್ತಾರೆ. ನಮ್ಮಲಿದ್ದ ವಾರ್ಮರ್(ಉಷ್ಣತೆ ಕಾಪಾಡುವ ಬೆಡ್)ಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಒಂದು ವೇಳೆ ಹೆಚ್ಚಿನ ವಾರ್ಮರ್ ಇದ್ದಿದ್ದರೆ ಮಗುವಿಗೆ ಚಿಕಿತ್ಸೆ ನೀಡಬಹುದಿತ್ತು ಎಂದು ಮಹಿಳಾ ವಿಭಾಗದ ವೈದ್ಯೆ ಅಲ್ಕಾ ಶರ್ಮ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕರ್ತವ್ಯ ನಿರ್ಲಕ್ಷ್ಯತನ ತೋರಿದ ಕಲ್ಮೇಂದ್ರ ಸ್ವರೂಪರನ್ನು ಅಮಾನತು ಮಾಡಲು ಆದೇಶಿಸಿದ್ದು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ನಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರಪ್ರದೇಶ ಸರ್ಕಾರಿ ವೈದ್ಯರು ಮತ್ತು ಆಸ್ಪತ್ರೆ ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರದ ಪ್ರಕಾರ ರಾಜ್ಯದಲ್ಲಿ ಪ್ರತಿ ವೈದ್ಯರಿಂಂದ ಸರಾಸರಿ 19,962 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದ್ದು ಅಲ್ಲಿ ಪ್ರತಿ ವೈದ್ಯರು 28,391 ಜನರಿಗೆ ಚಿಕಿತ್ಸೆ ನೀಡುತ್ತಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]