Tag: Negative

  • ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಕೊರೊನಾ ನೆಗೆಟಿವ್

    ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಕೊರೊನಾ ನೆಗೆಟಿವ್

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಭಾಸ್ಕರ್ ರಾವ್ ಕಳೆದ 5 ದಿನದಿಂದ ಹೋಂ ಕ್ವಾರಂಟೈನ್‍ನಲ್ಲಿದ್ದರು. ಇಂದು ಬೆಳಗ್ಗೆ ಕೊರೊನಾ ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    “ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದಿನಿಂದ ಕೆಲಸಕ್ಕೆ ಹಾಜರಾಗುತ್ತೀನಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿದ್ದರು.

    ಭಾಸ್ಕರ್ ರಾವ್ ಕಾರು ಚಾಲಕ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಪಾಸಿಟಿವ್ ಎಂದು ಗೊತ್ತಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಭಾಸ್ಕರ್ ರಾವ್, “ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಲಿದ್ದೇನೆ. 3 ತಿಂಗಳ ನಂತರ ಐದನೇ ಬಾರಿಗೆ ಸೋಮವಾರ ಮತ್ತೆ ಪರೀಕ್ಷೆಗೆ ಒಳಗಗಾಗಲಿದ್ದೇನೆ. ಹಲವಾರು ಪಾಸಿಟಿವ್ ಪ್ರಕರಣ ಹೊಂದಿದವರ ಜೊತೆ ಸಂವಹನ ಮಾಡಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಂದ ಪಾಸಿಟಿವ್ ಆಗಿಲ್ಲ ಎಂದು ಬರೆದುಕೊಂಡಿದ್ದರು.

  • ಇದುವರೆಗೂ ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್

    ಇದುವರೆಗೂ ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಈ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಸಿಎಂ ನಿವಾಸ ಮತ್ತು ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಿಎಂ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ಎಲ್ಲಾ ಟೆಸ್ಟ್‌ಗಳಲ್ಲಿ ಸಿಎಂಗೆ ಕೊರೊನಾ ನೆಗೆಟಿವ್ ಬಂದಿದೆ. ಇದರಿಂದ ಸಿಎಂ ಮತ್ತು ಅಧಿಕಾರಿಗಳು ಪೂರ್ತಿ ನಿರಾಳರಾಗಿದ್ದಾರೆ.

    ಕೃಷ್ಣಾ, ಕಾವೇರಿ ನಿವಾಸಗಳಲ್ಲಿ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಬಳಿ ಖಾಸಗಿ ಏಜೆನ್ಸಿಯ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

    ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರು.

     

  • ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ: ಹೆಚ್‍ಡಿ.ರೇವಣ್ಣ

    ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ: ಹೆಚ್‍ಡಿ.ರೇವಣ್ಣ

    – ನಮ್ಮ ಮನೆಯವರು ಯಾರೂ ಕ್ವಾರಂಟೈನ್ ಅಗಿಲ್ಲ

    ಹಾಸನ: ನನ್ನ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, ನಾನು ಕೊರೊನಾ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗಟಿವ್ ಬಂದಿದೆ. ನಾನು ಕೊರೊನಾ ಟೆಸ್ಟ್ ಮಾಡಿಸಿ ರಿಸಲ್ಟ್ ಬರುವವರೆಗೂ ಯಾರನ್ನು ಭೇಟಿ ಮಾಡಬಾರದು ಎಂದು ಸುಮ್ಮನಿದ್ದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

    ನನ್ನ ಬೆಂಗಾವಲು ಪಡೆಯ ಸಿಬ್ಬಂದಿ ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಯಲ್ಲಿ ಯಾರೂ ಹೋಂ ಕ್ವಾರಂಟೈನ್ ಆಗಿಲ್ಲ. ನನ್ನ ಪಿಎಗಳಿಗೂ ರಜೆ ನೀಡಿ ಕಳುಹಿಸಿದ್ದೇನೆ. ಬೆಂಗಾವಲು ಪಡೆಯ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದ ತಕ್ಷಣ ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದೇನೆ. ಇದಕ್ಕಾಗಿಯೇ ನಿನ್ನೆ ಮಾಡಬೇಕಿದ್ದ ತಾಲೂಕು ಪಂಚಾಯ್ತಿ ಸಭೆಯನ್ನು ಕೂಡ ಕ್ಯಾನ್ಸಲ್ ಮಾಡಿಸಿದ್ದೆ ಎಂದು ಹೇಳಿದ್ದಾರೆ.

    ಕಳೆದ ಸೋಮವಾರ ರೇವಣ್ಣ ಅವರು ಗನ್‍ಮ್ಯಾನ್‍ಗಳು ಸೇರಿದಂತೆ ಅವರ 9 ಜನ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ರೇವಣ್ಣ ಅವರ ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ರೇವಣ್ಣ ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅವರ ವರದಿ ನೆಗೆಟಿವ್ ಬಂದಿದೆ.

  • ಚಿರು ಕೊರೊನಾ ಟೆಸ್ಟ್ ನೆಗೆಟಿವ್ – ಅಪೋಲೋ ವೈದ್ಯರಿಂದ ಮಾಹಿತಿ

    ಚಿರು ಕೊರೊನಾ ಟೆಸ್ಟ್ ನೆಗೆಟಿವ್ – ಅಪೋಲೋ ವೈದ್ಯರಿಂದ ಮಾಹಿತಿ

    ಬೆಂಗಳೂರು: ಇಂದು ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರಿಗೆ ಕೊರೊನಾ ಸೋಂಕು ನೆಗಟಿವ್ ಬಂದಿದೆ ಎಂದು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಇಂದು ಮಧ್ಯಾಹ್ನ 3.48ರ ಸುಮಾರಿಗೆ ಚಿರಂಜೀವಿ ಸರ್ಜಾ ಅವರು ಬೆಂಗಳುರಿನ ಅಪೊಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈಗ ಈ ವಿಚಾರವಾಗಿ ಅಪೊಲೋ ಆಸ್ಪತ್ರೆ ವೈದ್ಯರು ಮೆಡಿಕಲ್ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಚಿರು ಅವರಿಂದ ಸ್ಪಂದನೆ ಸಿಗಲಿಲ್ಲ ಎಂದಿದ್ದಾರೆ.

    ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ದಿನವೇ ರೋಗಿ ಮೃತಪಟ್ಟರೆ ಕೋವಿಡ್ 19 ಪರೀಕ್ಷೆ ಮಾಡಲಾಗುತ್ತದೆ. ಹೀಗಾಗಿ ಚಿರಂಜೀವಿ ಅವರ ಗಂಟಲು ದ್ರವವನ್ನು ಕೊರೊನಾ ಟೆಸ್ಟ್ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಚಿರು ಅವರಿಗೆ ಕೊರೊನಾ ಟೆಸ್ಟ್ ನೆಗಟಿವ್ ಬಂದಿದೆ ಎಂದು ಅಪೊಲೊ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಗೆ ಕರೆಯಲಾಯಿತು. ತಕ್ಷಣವೇ ಎಮರ್ಜೆನ್ಸಿ ವಾರ್ಡ್‍ಗೆ ಶಿಫ್ಟ್ ಮಾಡಿ, ದೇಹದ ಉಷ್ಣಾಂಶ, ನಾಡಿಮಿಡಿತ, ಕಣ್ಣಿನ ತಪಾಸಣೆ ಮಾಡಿದಾಗ ಸ್ಪಂದನೆ ಇರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಉಪಕರಣ ಬಳಸಿ ಎದೆಯೊತ್ತಿ ಉಸಿರು ನೀಡುವ ಸಿಪಿಆರ್ ಚಿಕಿತ್ಸೆ ಆರಂಭಿಸಲಾಯಿತು. 3.48ರವರೆಗೆ ಈ ಪ್ರಕ್ರಿಯೆ ನಡೆಯಿತು. ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಬಳಿಕ ಸ್ಪಂದನೆ ಸಿಗಲಿಲ್ಲ. ಹಾಗಾಗಿ, 3.48ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂಬುದಾಗಿ ಪ್ರಕಟಿಸಲಾಯಿತು ಅಂತ ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    sಶನಿವಾರ ರಾತ್ರಿಯೇ ಚಿರುಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ ಕೂಡ ಮತ್ತೆ ಎದೆನೋವು ಕಾಣಿಸಿಕೊಂಡ ಬಳಿಕ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ಆರೋಗ್ಯ ಇಲಾಖೆಯಿಂದ ಎಡವಟ್ಟು – ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು

    ಆರೋಗ್ಯ ಇಲಾಖೆಯಿಂದ ಎಡವಟ್ಟು – ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು

    ಚಿಕ್ಕಮಗಳೂರು/ ಮಂಡ್ಯ: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗಿ ಜನರ ಜೀವ ಹಿಂಡುತ್ತಿರುವ ಹೊತ್ತಲ್ಲೇ ಆರೋಗ್ಯ ಇಲಾಖೆಯ ಕೆಲವು ಎಡವಟ್ಟುಗಳಿಂದ ಜನ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಿದ್ದಾರೆ.

    ಮೊದಲು ಬೆಂಗಳೂರಿನ ಗರ್ಭಿಣಿ ಮತ್ತು ಪೇದೆ ವಿಚಾರದಲ್ಲಿ ತಪ್ಪು ರಿಪೋರ್ಟ್ ಕೊಟ್ಟು ಎಡವಟ್ಟು ಮಾಡಿತ್ತು. ಇದೀಗ ಅಂಥದ್ದೇ ಎಡವಟ್ಟುಗಳು ಮತ್ತೆ ರಿಪೀಟ್ ಆಗಿವೆ. ಮೂಡಿಗೆರೆ ಮತ್ತು ಮಂಡ್ಯದ ಬಾಲಕಿಯೊಬ್ಬಳ ರಿಪೋರ್ಟ್ ವಿಚಾರದಲ್ಲಿ ತಪ್ಪುಗಳು ಸಂಭವಿಸಿವೆ. ಇದರಿಂದಾಗಿ ನೂರಾರು ಮಂದಿ ತಮ್ಮದಲ್ಲದ ತಪ್ಪಿಗೆ ಸಂಕಷ್ಟ ಅನುಭವಿಸಿದ್ದಾರೆ.

    ಎಡವಟ್ – 1
    ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯ 45 ವರ್ಷದ ವೈದ್ಯರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿತ್ತು. ಈ ಪ್ರಕರಣ ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. 1,295ನೇ ರೋಗಿಯಾಗಿದ್ದ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ 850 ಮಂದಿಯನ್ನು ಕ್ವಾರಟೈನ್ ಮಾಡಲಾಗಿತ್ತು. ಮತ್ತೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ. ಒಟ್ಟು 6 ಬಾರಿ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ.

    ಎಡವಟ್ – 2
    ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‍ನಲ್ಲಿ 7ವರ್ಷದ ಮಂಡ್ಯದ ಬಾಲಕಿಗೆ ಕೊರೋನಾ ಬಂದಿದೆ. ಈಕೆಗೆ ಮುಂಬೈ ಪ್ರಯಾಣ ಹೊಂದಿದ್ದಳು ಎಂದು ಉಲ್ಲೇಖಿಸಲಾಗಿತ್ತು. ಆದರೆ ರೋಗಿ ಸಂಖ್ಯೆ 1,475 ಬಾಲಕಿ ಮುಂಬೈ ಹೋಗಿರಲಿಲ್ಲ. ಚಿನಕುರುಳಿ ಗ್ರಾಮದ ಈ 11 ವರ್ಷದ ಬಾಲಕಿ ಹೋಗಿದ್ದು ರಾಣೆಬೆನ್ನೂರಿಗೆ. ಯುಗಾದಿಗೂ ಮುನ್ನ ರಾಣೆಬೆನ್ನೂರಿಗೆ ತೆರಳಿದ್ದ ಬಾಲಕಿಯ ಕುಟುಂಬ ಕಳೆದ ವಾರ ಮಂಡ್ಯಕ್ಕೆ ಮರಳಿತ್ತು.

    ಹೊರ ಜಿಲ್ಲೆಯಿಂದ ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಎಲ್ಲ ಮಾಹಿತಿಗಳನ್ನು ತುಂಬಿ ಕಳುಹಿಸಲಾಗಿತ್ತು. ಆದರೆ ಹೆಲ್ತ್ ಬುಲೆಟಿನ್ ನಲ್ಲಿ ಟ್ರಾವೆಲ್ ಹಿಸ್ಟರಿ ಮತ್ತು ವಯಸ್ಸು ತಪ್ಪಾಗಿದೆ. ಅಷ್ಟೇ ಅಲ್ಲದೇ ಆಕೆಯ ಜೊತೆ ಸಂಪರ್ಕದಲ್ಲಿದ್ದ ಪೋಷಕರಿಗೆ ಯಾರಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ. ಈಕೆಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಚಿನಕುರುಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

    ರಾಣೆಬೆನ್ನೂರು ಹಸಿರು ವಲಯದಲ್ಲಿದೆ. ಸೋಂಕು ಹೇಗೆ ಬಂದಿರಲು ಸಾಧ್ಯ? ಮತ್ತೊಮ್ಮೆ ಪರೀಕ್ಷೆ ನಡೆಸುವ ಮೂಲಕ ಸತ್ಯಾಸತ್ಯತೆ ಬಹಿರಂಗ ಪಡಿಸಿ ಎಂದು ಜಿಲ್ಲಾಡಳಿತಕ್ಕೆ ಶಾಸಕ ಪುಟ್ಟರಾಜು ಈಗ ಮನವಿ ಮಾಡಿದ್ದಾರೆ.

  • ಬೆಂಗ್ಳೂರಿನ ಗರ್ಭಿಣಿಗೆ ಕೊರೊನಾ ಇಲ್ಲ, ಫಲಿತಾಂಶ ನೆಗೆಟಿವ್ – ಎಡವಟ್ ಆಗಿದ್ದು ಎಲ್ಲಿ?

    ಬೆಂಗ್ಳೂರಿನ ಗರ್ಭಿಣಿಗೆ ಕೊರೊನಾ ಇಲ್ಲ, ಫಲಿತಾಂಶ ನೆಗೆಟಿವ್ – ಎಡವಟ್ ಆಗಿದ್ದು ಎಲ್ಲಿ?

    ಬೆಂಗಳೂರು: ಬಿಟಿಎಂ ಲೇಔಟ್ ನ ಕೊರೊನಾ ಪಾಸಿಟಿವ್ ಸೋಂಕಿತೆ ಎಂದು ಬಿಂಬಿಸಲಾಗಿದ್ದ ಗರ್ಭಿಣಿ ಶೀಘ್ರವೇ ಡಿಸ್ಚಾರ್ಜ್ ಆಗಲಿದ್ದಾರೆ.

    ಖಾಸಗಿ ಲ್ಯಾಬ್ ನಲ್ಲಿ ಗರ್ಭಿಣಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅಲ್ಲಿ ಸ್ಯಾಂಪಲ್ ಪರೀಕ್ಷೆಯ ವೇಳೆ ತಪ್ಪಾಗಿದೆ  ಎಂಬ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಎರಡನೇ ಪರೀಕ್ಷೆಯ ಮಾದರಿಯನ್ನು ಕಾಯದೇ ಏಕಾಏಕಿ ಆಡ್ಮಿಟ್ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ವೈದ್ಯರು ಈ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ ಪರಿಣಾಮ ಸರ್ಕಾರ ಅಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಗರ್ಭಿಣಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿತ್ತು.

    ಇಂದು ಗರ್ಭಿಣಿಯ ಪರೀಕ್ಷಾ ವರದಿ ಬಂದಿದ್ದು ಫಲಿತಾಂಶ ನೆಗೆಟಿವ್ ಬಂದಿದೆ. ನಂತರ ಪಾಸಿಟಿವ್ ಎಂದು ಘೋಷಣೆ ಮಾಡಲು ಯಾವೆಲ್ಲ ಮಾನದಂಡಗಳನ್ನು ಪರಿಗಣಿಸಲಾಗಿದೆ ಎಂದು ಅವಲೋಕನ ಮಾಡಿದಾಗ ಖಾಸಗಿ ಲ್ಯಾಬ್ ಮಾದರಿಯನ್ನು ಪರಿಗಣಿಸಿಯೇ ಅಂತಿಮ ತೀರ್ಮಾನಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ.

    ಈಗ ಗರ್ಭಿಣಿಯನ್ನು ಡಿಸ್ಚಾರ್ಜ್ ಮಾಡಲು ರೆಡಿ ಮಾಡುತ್ತಿದ್ದೇವೆ. ಆಕೆ ಮುಂದೆ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅಲ್ಲೇ ಡೆಲಿವರಿ ಮಾಡಿಸಿಕೊಳ್ಳಬಹುದು ಎಂದು ಆರೋಗ್ಯ ಅಧಿಕಾರಿ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಸೋಂಕು ಇಲ್ಲದ ವ್ಯಕ್ತಿಗೆ ಸೋಂಕು ಇದೆ ಎಂದು ಹೇಳಿದ ಈ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಹಿನ್ನೆಡೆಯಾಗಿದೆ

    ಬಿಟಿಎಂ ಲೇಔಟ್‍ನ ಗರ್ಭಿಣಿ ಜಯನಗರದ ಪ್ರಸಿದ್ಧ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ವೈದ್ಯರು ಮೇ 9ರಂದು ಹೆರಿಗೆ ಆಗಬಹುದು ಎಂದು ತಿಳಿಸಿದ್ದರು. ಗರ್ಭಿಣಿ ತಪಾಸಣೆ ವೇಳೆ ವೈದ್ಯರು ವೈಯಕ್ತಿಕ ಸುರಕ್ಷಿತ ಸಾಧನವನ್ನು ಬಳಸಿದ್ದರು. ಈ ಗರ್ಭಿಣಿಗೆ ವಿದೇಶ ಸಂಪರ್ಕ ಅಥವಾ ಸೋಂಕಿತರ ಜೊತೆಗೆ ಯಾವುದೇ ಸಂರ್ಪಕ ಇರಲಿಲ್ಲ. ಆದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಗರ್ಭಿಣಿ ಜೊತೆ ನೇರ ಸಂಪರ್ಕ ಹೊಂದಿದ್ದ 6 ಮಂದಿ ಮತ್ತು ಪರೋಕ್ಷ ಸಂಪರ್ಕ ಹೊಂದಿದ್ದ 12 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿತ್ತು.

  • ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್, ಸಹಾಯ ಮಾಡಲು ಬಲ ಬಂದಿದೆ – ಜಮೀರ್

    ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್, ಸಹಾಯ ಮಾಡಲು ಬಲ ಬಂದಿದೆ – ಜಮೀರ್

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅವರು ಕೊರೊನಾ ಪರೀಕ್ಷೆ ಮಾಡಿದ್ದು ಫಲಿತಾಂಶ ನೆಗೆಟಿವ್ ಬಂದಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಸಂಚಾರ ಮಾಡಿದ್ದೇನೆ, ಜನರ ಒಡನಾಟದಲ್ಲಿದ್ದೇನೆ, ಮೊನ್ನೆ ಅಗತ್ಯ ಮುಂಜಾಗ್ರತೆಯೊಂದಿಗೆ ಕೊರೊನಾ ಇಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಿದ್ದೆ. ಕೊರೊನಾವೆಂಬ ಮಾರಕ ಕಾಯಿಲೆ ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.

    ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ಅಲ್ಲ ನನ್ನಿಂದ ಇತರರಿಗೆ ಬೇರೆ ಯಾವ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಸಹಾಯ ಮಾಡಲು ನನಗೆ ಬಲ ಬಂದಿದೆ ಎಂದು ಹೇಳಿದ್ದಾರೆ.

    ಜಮೀರ್ ಅಹಮದ್ ಅವರ ವಿಧಾನಸಭಾ ವ್ಯಾಪ್ತಿಯ ಪಾದರಾಯನಪುರದಲ್ಲಿ ಹೆಚ್ಚಿನ ಪ್ರಮಾಣ ಸೋಂಕಿತರ ಪತ್ತೆಯಾದ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಅವರನ್ನು ಪರೀಕ್ಷೆ ನಡೆಸಬೇಕೆಂಬ ಮಾತು ಕೇಳಿ ಬಂದಿತ್ತು.

    ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಪರೀಕ್ಷೆಗೆ ಒಳಪಟ್ಟಿದ್ದರು. ಇವರ ಫಲಿತಾಂಶವೂ ನೆಗೆಟಿವ್ ಬಂದಿತ್ತು.

  • ಯಾದಗಿರಿ ಸೇಫ್- ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ನೆಗೆಟಿವ್

    ಯಾದಗಿರಿ ಸೇಫ್- ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ನೆಗೆಟಿವ್

    ಯಾದಗಿರಿ: ಸದ್ಯ ಗ್ರೀನ್ ಝೋನ್ ನಲ್ಲಿರುವ ಯಾದಗಿರಿ ಸೇಫ್ ಆಗಿದೆ. ರೋಗಿ ನಂ.413 ಜೊತೆ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ಕೊರೊನಾ ನೆಗೆಟಿವ್ ಬಂದಿದ್ದು, ಇದರಿಂದ ಯಾದಗಿರಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

    ರೋಗಿ ನಂ.413 ಕನ್ನಡಕದ ಅಂಗಡಿ ಹೊಂದಿದ್ದು, ಯಾದಗಿರಿಯೊಂದಿಗೆ ನಿಕಟ ವ್ಯವಹಾರ ಸಂಪರ್ಕ ಹೊಂದಿದ್ದ. ವ್ಯಾಪಾರಕ್ಕಾಗಿ ಕಲಬುರಗಿಯಿಂದ ಯಾದಗಿರಿಗೆ ಸಂಚಾರ ಮಾಡಿದ್ದ. ಈ ವೇಳೆ ಕೊರೊನಾ ಸೋಂಕು ತಗುಲಿದ್ದ ರೋಗಿ ನಂ.413 ಜೊತೆ ಯಾದಗಿರಿ ವ್ಯಕ್ತಿ ಹತ್ತಿರದ ಒಡನಾಟ ಹೊಂದಿದ್ದ. ಇದು ಯಾದಗಿರಿ ಜನರ ಮತ್ತು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ವ್ಯಕ್ತಿಯ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ. ಹೀಗಾಗಿ ಜನರ ಆತಂಕ ತಗ್ಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಮಾಡಿದೆ.

    ಏಪ್ರಿಲ್ 21 ರಂದು ಕಲಬುರಗಿ ರೋಗಿ ನಂ.413 ಗೆ ಕೊರಾನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿ ನೋಡಿದಾಗ ಯಾದಗಿರಿ ಜೊತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ರೋಗಿ ನಂ.413 ಏಪ್ರಿಲ್ 15 ರಿಂದ 22ವರೆಗೆ ಅಂಗಡಿ ತೆರೆದಿದ್ದ. ಕೊರೊನಾ ಸೋಂಕಿರುವುದು ಗೊತ್ತಾಗಿದ್ದರೂ ಕಲಬುರಗಿಯಿಂದ ಯಾದಗಿರಿಗೆ ಪ್ರತಿ ದಿನ ಸಂಚಾರ ಮಾಡಿದ್ದ.

    ಈತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿತ್ತು. ನಂತರ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ.

  • ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ದೆಹಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ. ನಾಗನಾಥ್ ಹುಲಸೂರೆ ಮಾತನಾಡಿ, ಈ ಮೂರು ಮಂದಿಗೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು. 14 ದಿನಗಳ ಕಾಲ ಯಾವುದೇ ಕಡೆ ಸಂಚಾರ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ, ಪಿ.ಎಸ್.ಐ ರವಿಕುಮಾರ್, ಡಾ. ಬಸವಂತ ಗುಮ್ಮೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ. ಚೈತ್ರೇಶ್, ಡಾ. ರೋಹಿತ್ ರಗೋಜಿ, ಡಾ. ಇಂದ್ರಜೀತ್ ಚಂದಾ, ಡಾ. ದಿಲೀಪ್ ಡೊಂಗರೆ, ಡಾ. ನುಫೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ನಿಜಾಮುದ್ದೀನ್ ಮಸೀದಿ ಮತ್ತು ಈ ಪ್ರದೇಶದಲ್ಲಿ ಓಡಾಡಿದ್ದ 37 ಮಂದಿಯನ್ನ ಜಿಲ್ಲಾಡಳಿತ ಪತ್ತೆ ಮಾಡಿದೆ.

    ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಮಧ್ಯೆ ಒಂದು ತಿಂಗಳ ನಡುವೆ 31 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್‍ಗೆ ಭೇಟಿ ನೀಡಿದ್ದು, ಅವರನ್ನು ಪತ್ತೆ ಮಾಡಿರುವ ಜಿಲ್ಲಾಡಳಿತ ಮೊದಲ ಹಂತದಲ್ಲಿ 07 ಮಂದಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಿತ್ತು. ಸದ್ಯ ಈ 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಂದಿಲ್ಲ. ವರದಿ ನೆಗೆಟಿವ್ ಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ ಲತಾ, ಈ 31 ಮಂದಿ ಜಮಾತ್‍ನಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ ಇದಕ್ಕೂ ಮುನ್ನವೇ ಅವರ ಜಮಾತ್‍ಗೆ ಹೋಗಿ ಬಂದಿದ್ದರು. ಈ 31 ಮಂದಿಯೂ ಜಮಾತ್‍ಗೆ ಭೇಟಿ ನೀಡಿ ಈಗಾಗಲೇ 50 ದಿನಗಳು ಕಳೆದು ಹೋಗಿವೆ. ಆದರೂ ಕೂಡ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದಲ್ಲಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಆದರೆ ಅವರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಿಲ್ಲ ಎಂದು ತಿಳಿಸಿದರು.

    ಮತ್ತೊಂದೆಡೆ ಮಾರ್ಚ್ ತಿಂಗಳಲ್ಲಿ 6 ಮಂದಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಮ್ಮ ಜಿಲ್ಲೆಯವರು ಓಡಾಡಿರುವ ಮಾಹಿತಿ ಸಿಕ್ಕಿದೆ. ಆರು ಮಂದಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿಡ್ಲಘಟ್ಟ ಮೂಲದ ದಂಪತಿ, ಹಾಗೂ ಇದೇ ನಿಜಾಮುದ್ದೀನ್ ಪ್ರದೇಶದಲ್ಲಿನ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು, ಹಾಗೂ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಹಾದು ಹೋಗುವ ರೈಲಿನ ಟಿಟಿಯೊಬ್ಬರು ನಮ್ಮದೇ ಜಿಲ್ಲೆಯವರು. ಇವರು ಯಾರೂ ಸಹ ಜಮಾತ್‍ಗೆ ಹೋಗಿಲ್ಲ. ಆದರೂ ಆ ಜಾಗದಲ್ಲಿ ಓಡಾಡಿರುವ ಕಾರಣ ಆರು ಮಂದಿಯನ್ನು ಕ್ವಾರಂಟೈನ್ ಗೆ ಸೂಚಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.

    ಹೀಗಾಗಿ ನಿಜಾಮುದ್ದೀನ್ ಜಮಾತ್‍ನ ಮರ್ಕಜ್‍ನಿಂದ ನಮ್ಮ ಜಿಲ್ಲೆಯ ಯಾರಿಗೂ ಕೂಡ ಸೋಂಕು ತಗಲಿರುವ ಸಾಧ್ಯತೆ ತೀರಾ ಕಡಿಮೆ ಇದೆ. ಇದರಿಂದ ಜನ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಡಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.