Tag: NEET exam

  • ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ಕಲಬುರಗಿ: ನೀಟ್ ಪರೀಕ್ಷೆಯಲ್ಲಿ(NEET Exam) ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ ಪ್ರಕರಣದಲ್ಲಿ ಕಲಬುರಗಿಯ (Kalabuagi) ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಭಾನುವಾರ ನಡೆದ ನೀಟ್ ಪರೀಕ್ಷೆಯಲ್ಲಿ ಪರೀಕ್ಷಾ ಸಿಬ್ಬಂದಿ ಶರಣಗೌಡ ಹಾಗೂ ಗಣೇಶ್, ಪರೀಕ್ಷಾರ್ಥಿ ಶ್ರೀಪಾದ್ ಪಾಟೀಲ್ (Shripad Patil) ಧರಿಸಿದ್ದ ಜನಿವಾರ ತೆಗೆಸಿದ್ದರು. ಪರೀಕ್ಷಾ ಸಿಬ್ಬಂದಿ ಈ ನಡೆಗೆ ಆಕ್ರೋಶಗೊಂಡ ಬ್ರಾಹ್ಮಣ ಸಮಾಜ(Brahmin Community) ಬೃಹತ್ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು – ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

    ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀಪಾದ್ ಪಾಟೀಲ್ ಸ್ಟೇಷನ್ ಬಜಾರ್ ಠಾಣೆಗೆ(Station Bazar Police Station) ದೂರು ನೀಡಿದ್ದಾರೆ. ವಿದ್ಯಾರ್ಥಿ ದೂರಿನ ಆಧಾರದಲ್ಲಿ ಪೊಲೀಸರು ಬಿಎನ್‌ಎಸ್ ಕಾಯ್ದೆ 298ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಲಬುರಗಿ | ನೀಟ್‌ ಪರೀಕ್ಷೆಯಲ್ಲೂ ಜನಿʻವಾರ್‌ʼ – ಜನಿವಾರ ತೆಗೆಸಿದ ಸಿಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

    ಕಲಬುರಗಿ | ನೀಟ್‌ ಪರೀಕ್ಷೆಯಲ್ಲೂ ಜನಿʻವಾರ್‌ʼ – ಜನಿವಾರ ತೆಗೆಸಿದ ಸಿಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

    ಕಲಬುರಗಿ: ಬೀದರ್-ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ (CET Exam) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು. ಇದೀಗ ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆದ ಪರಿಣಾಮ ಬ್ರಾಹ್ಮಣರ (Brahmin Community) ತಾಳ್ಮೆ ಕಟ್ಟೆ ಒಡೆದಿದೆ.

    ಕಲಬುರಗಿಯಲ್ಲಿ ನಡೆದ ಕೆಇಎ ಪರೀಕ್ಷೆ (KEA Exam) ವೇಳೆ ಮಂಗಳಸೂತ್ರ ತೆಗೆಸಿದ ಪ್ರಕರಣ ವಿವಾದಕ್ಕೀಡಾಗಿತ್ತು. ಅದಾದ ಬಳಿಕ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪರಿಣಾಮ ರಾಜ್ಯದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಪ್ರಕರಣಗಳು ಮಾಸುವ ಮುನ್ನ ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ಕಲಬುರಗಿಯ ಸಂತ ಮೇರಿ ಪರೀಕ್ಷಾ ಕೇಂದ್ರಕ್ಕೆ ಬಂದ ಶ್ರೀಪಾದ ಎಂಬ ವಿದ್ಯಾರ್ಥಿಯ ಜನಿವಾರ ತೆಗೆದ್ರೆ ಮಾತ್ರ ಪರೀಕ್ಷೆಗೆ ಅವಕಾಶ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರಂತೆ, ಹೀಗಾಗಿ ಒಲದ ಮನಸ್ಸಿನಿಂದ ಶ್ರೀಪಾದ ತನ್ನ ಜನಿವಾರ ತೆಗೆದು ತಂದೆ ಸುಧೀರ ಅವರ ಕೈಗೆ ಕೊಟ್ಟು ನೀಟ್ ಪರೀಕ್ಷೆ ಬರೆದಿದ್ದಾನೆ.

    ಇನ್ನೂ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಷಯಕ್ಕೆ ತಿಳಿಯುತ್ತಿದ್ದಂತೆ ಸಂತ ಮೇರಿ ಪರೀಕ್ಷಾ ಮುಂಭಾಗದಲ್ಲಿ ಬ್ರಾಹ್ಮಣ ಸಭಾ ಹಾಗೂ ಎಬಿವಿಪಿ ಕಾರ್ಯಕರ್ತರು ಜಮಾವಣೆಗೊಂಡು, ಪ್ರತಿ ಬಾರಿ ಪರೀಕ್ಷೆಗಳು ಬಂದ್ರೆ ಸಾಕು ಸರ್ಕಾರ ಜನಿವಾರಕ್ಕೆ ಕೈ ಹಾಕುತ್ತಿದೆ. ಈ ಮೂಲಕ ಸನಾತನ ಧರ್ಮದ ನಂಬಿಕೆ ಮೇಲೆ ಕೈ ಹಾಕುತ್ತಿದೆ. ಅಂತಾ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಜನಿವಾರ ತೆಗೆದ ಪರೀಕ್ಷಾ ಕೇಂದ್ರದ ಮುಂದೆ ಅರ್ಚಕರ ಸಮ್ಮುಖದಲ್ಲಿ ಶ್ರೀಪಾದಗೆ ಜನಿವಾರ ಹಾಕಿಸಿದ್ದರು.

    ಈ ವೇಳೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಶ್ರೀಪಾದ ಒಲ್ಲದ ಮನಸ್ಸಿನಿಂದ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದೇನೆ. ಇನ್ನೂ ಪರೀಕ್ಷೆ ವೇಳೆ ಮನಸ್ಸಿಗೆ ಅಘಾತವಾದ ಹಿನ್ನಲೆ ಕ್ರಮ ಸಂಖ್ಯೆ ಸಹ ತಪ್ಪು ನಮೂದಿಸಿದ್ದೇನೆ. ಹೀಗಾಗಿ ಮತ್ತೆ ಪರೀಕ್ಷೆಗೆ ಅವಕಾಶ ಕೊಡಬೇಕು ಅಂತಾ ಆಗ್ರಹಿಸಿದ್ದಾನೆ.

    ಪರೀಕ್ಷೆಯ ಬಳಿಕ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿ ಶ್ರೀಪಾದ ಜನಿವಾರ ತೆಗೆಸಿದ ನೀಟ್‌ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾನೆ.

  • ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು – ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

    ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು – ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

    ಕಲಬುರಗಿ: ರಾಜ್ಯದಲ್ಲೀಗ ಮತ್ತೆ ನೀಟ್ ಪರೀಕ್ಷೆಯಲ್ಲಿ ಅಧಿಕಾರಿಗಳು ವಿದ್ಯಾರ್ಥಿ ಧರಿಸಿದ್ದ ಜನಿವಾರ ತೆಗೆಸಿರುವ ಘಟನೆ ಕಲಬುರಗಿಯ (Kalaburagi) ಖಾಸಗಿ ಶಾಲೆಯಲ್ಲಿ ನಡೆದಿದೆ.

    ಇಂದು ರಾಜ್ಯದಾದ್ಯಂತ ನೀಟ್ ಪರೀಕ್ಷೆ (NEET Exam) ನಡೆದಿದ್ದು, ಶ್ರೀಪಾದ್ ಪಾಟೀಲ್ ನೀಟ್ ಪರೀಕ್ಷೆಗೆ ಹಾಜರಾಗಿದ್ದ. ಶ್ರೀಪಾದ್ ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಅಧಿಕಾರಿಗಳು ಜನಿವಾರ ತೆಗೆದು ಬರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

    ಈ ವೇಳೆ ಶ್ರೀಪಾದ್ ಅಧಿಕಾರಿಗಳ ಸೂಚನೆಯಂತೆ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾನೆ. ಈ ಘಟನೆಯನ್ನು ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಬ್ರಾಹ್ಮಣ ಸಮಾಜದವರು (Brahmin Community) ಪ್ರತಿಭಟನೆ ನಡೆಸಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ನೀಟ್ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಜನಿವಾರ ತೆಗೆಸಿದ ಅಧಿಕಾರಿಯನ್ನ ನಮ್ಮ ವಶಕ್ಕೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

    ಪರೀಕ್ಷಾ ಕೇಂದ್ರದ ಎದುರು ಟೈರ್ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹಾಕಿದ್ದು, ಪ್ರತಿಭಟನೆ ಎಬಿವಿಪಿ ಕಾರ್ಯಕರ್ತರು ಸಾಥ್ ನೀಡಿದರು. ಇದನ್ನೂ ಓದಿ: ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಒಂದು ವಿಶೇಷಪಡೆ ಅಗತ್ಯ: ಸಿಎಂ

    ಕಳೆದ ಏಪ್ರಿಲ್ ಸಿಇಟಿ ಪರೀಕ್ಷೆಯಲ್ಲೂ ಇಂತಹದೊಂದು ಪ್ರಕರಣ ನಡೆದಿದ್ದು, ಇದು ರಾಜ್ಯದಾದ್ಯಂತ ಬ್ರಾಹ್ಮಣ ಸಮಾಜದ ಆಕ್ರೋಶಕ್ಕೆ ಕಾರಣವಾಗಿತ್ತು.

  • ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

    ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

    ಲಕ್ನೋ (ಕಾನ್ಪುರ): ನೀಟ್‌ ವೈದ್ಯಕೀಯ ಪ್ರವೇಶ ಪರೀಕ್ಷೆಗೆ (NEET Exam) ತಯಾರಿ ನಡೆಸಲು ಕಾನ್ಪುಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ಥಳೀಯ ಕೋಚಿಂಗ್‌ ಸೆಂಟರ್‌ನ ಇಬ್ಬರು ಖ್ಯಾತ ಶಿಕ್ಷಕರು (Coaching Teachers) ತಿಂಗಳಾನುಗಟ್ಟಲೇ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿನಿಗೆ (Girl Student) ಲೈಂಗಿಕ ಕಿರುಕುಳ ನೀಡಿದ ಸಿಸಿಟಿವಿ (CCTV) ದೃಶ್ಯಾವಳಿ ಆಧರಿಸಿ ಪೊಲೀಸರು ಒಬ್ಬನನ್ನು ಬಂಧಿಸಿದ್ದರು. ಬಳಿಕ ವಿದ್ಯಾರ್ಥಿನಿಯರಿಂದ ದೂರು ಪಡೆದು ಮತ್ತೊಬ್ಬ ಶಿಕ್ಷಕನನ್ನೂ ಬಂಧಿಸಲಾಯಿತು. ಇದನ್ನೂ ಓದಿ: ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಏನಿದು ಕೇಸ್‌ – ವಿದ್ಯಾರ್ಥಿನಿ ದೂರಿನಲ್ಲಿ ಏನಿದೆ?
    2022 ರಲ್ಲಿ ನೀಟ್‌ ಪರೀಕ್ಷೆಗೆ ತಯಾರಿಗಾಗಿ ವಿದ್ಯಾರ್ಥಿನಿಯರು ಕಾನ್ಪುರಕ್ಕೆ (Kanpur) ಹೋಗಿ, ಕೋಚಿಂಗ್‌ ಸೆಂಟರ್‌ಗೆ ಸೇರಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ, ಆಕೆಯ ಜೀವಶಾಸ್ತ್ರದ ಶಿಕ್ಷಕ ಸಾಹಿಲ್ ಸಿದ್ದಿಕಿ (32) ತನ್ನ ಮನೆಯಲ್ಲಿ ಪಾರ್ಟಿಗೆ ವಿದ್ಯಾರ್ಥಿನಿಯನ್ನು ಆಹ್ವಾನಿಸಿದ್ದ. ಎಲ್ಲಾ ವಿದ್ಯಾರ್ಥಿನಿಯರು ಬರುತ್ತಿದ್ದಾರೆ, ನೀನು ಬಾ ಎಂದು ಹೇಳಿದ್ದ. ಆದ್ರೆ ಪಾರ್ಟಿಗೆ ತೆರಳಿದಾಗ ಆಕೆ ಒಬ್ಬಳಿಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ಇದೇ ವೇಳೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ.

    ಅಷ್ಟಕ್ಕೆ ಸುಮ್ಮನಾಗದೇ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಹೊರಗೆ ಹೇಳಿದರೆ, ವೀಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡುವುದಾಗಿ, ತನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆಯೂ ಹಾಕಿದ್ದಾನೆ. ಇದೇ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮಾಡೋಕೆ ಶುರು ಮಾಡಿದ್ದಾನೆ. ಅನೇಕ ಸಂದರ್ಭಗಳಲ್ಲಿ ತಿಂಗಳಾನುಗಟ್ಟಲೇ ಅತ್ಯಾಚಾರ ಎಸಗಿದ್ದಾನೆ. ಇದಾದ ಕೆಲವು ದಿನಗಳ ವರೆಗೆ ತನ್ನ ಫ್ಲಾಟ್‌ನಲ್ಲೇ ಇರಿಸಿಕೊಂಡಿದ್ದ. ಮತ್ತೊಮ್ಮೆ ಪಾರ್ಟಿ ಮಾಡಿದಾಗ ರಸಾಯನಶಾಸ್ತ್ರ ಶಿಕ್ಷಕ ವಿಕಾಸ್ ಪೋರ್ವಾಲ್ (39) ಸಹ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಹೋಳಿ ಹಬ್ಬದ ವೇಳೆ ತನ್ನ ಪೋಷಕರನ್ನು ಭೇಟಿಯಾಗಲು ಮನೆಗೆ ಹೋದಾಗ ವಿದ್ಯಾರ್ಥಿನಿಯರು ಈ ವಿಷಯವನ್ಜು ಹೇಳಿಕೊಂಡಿದ್ದಾರೆ. ಬಳಿಕ ಪೋಷಕರು ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು

  • ವಿಧಾನ ಪರಿಷತ್ ‌ನಲ್ಲಿ ಮುಡಾ ಗಲಾಟೆ: 6 ವಿಧೇಯಕ, 4 ನಿರ್ಣಯಗಳು ಚರ್ಚೆ ಇಲ್ಲದೆ ಅಂಗೀಕಾರ

    ವಿಧಾನ ಪರಿಷತ್ ‌ನಲ್ಲಿ ಮುಡಾ ಗಲಾಟೆ: 6 ವಿಧೇಯಕ, 4 ನಿರ್ಣಯಗಳು ಚರ್ಚೆ ಇಲ್ಲದೆ ಅಂಗೀಕಾರ

    ಬೆಂಗಳೂರು: ಮುಡಾ ಹಗರಣದ (MUDA Scam) ತನಿಖೆಗೆ ಅವಕಾಶ ಕೊಡುವಂತೆ ಇಂದೂ ಕೂಡಾ ವಿಧಾನ ಪರಿಷತ್‌ನಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮಧ್ಯೆ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ 6 ವಿಧೇಯಕಗಳು ಯಾವುದೇ ಚರ್ಚೆ ಆಗದೇ ಅಂಗೀಕಾರವಾದವು. ಇದರ ಜೊತೆಗೆ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸುವ 4 ನಿರ್ಣಯಗಳನ್ನ ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡಿ ಅಂಗೀಕಾರ ‌ಪಡೆಯಲಾಯ್ತು.
    ಬೆಳಗ್ಗೆ ಸದನ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಮೂಡಾ ಹಗರಣ ವಿಷಯ ಚರ್ಚೆಗೆ ವಿಪಕ್ಷಗಳು ನಿನ್ನೆ ನೀಡಿದ್ದ ಮರು ಪರಿಶೀಲನೆ ಅರ್ಜಿಗೆ ರೂಲಿಂಗ್ ಕೊಡುವಂತೆ ವಿಪಕ್ಷಗಳು ಒತ್ತಾಯ ಮಾಡಿದವು. ಸಭಾಪತಿ ಹೊರಟ್ಟಿ ಅವರು ವಿಪಕ್ಷಗಳ ಮರು ಪರಿಶೀಲನೆಯನ್ನು ತಿರಸ್ಕಾರ ಮಾಡಿ, ಮುಡಾ ಹಗರಣದ ಚರ್ಚೆಗೆ ಅವಕಾಶ ನಿರಾಕರಿಸಿದರು. ಸಭಾಪತಿಗಳ ರೂಲಿಂಗ್‌ಗೆ ವಿಪಕ್ಷಗಳು ವಿರೋಧಿಸಿ ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ರು. ಸರ್ಕಾರ, ಸಿಎಂ ವಿರುದ್ದ ಘೋಷಣೆ ‌ಕೂಗಿದ್ರು. ಗೋವಿಂದಾ ಗೋವಿಂದಾ ಅಂತ ಘೋಷಣೆ ಕೂಗಿ ಸರ್ಕಾರದ ವಿರುದ್ದ ಕಿಡಿಕಾರಿದರು.

    ವಿಪಕ್ಷಗಳ ಪ್ರತಿಭಟನೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2024, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ 2024,  ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2024, ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ 2024,ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ಎರಡನೇ ತಿದ್ದುಪಡಿ) ವಿಧೇಯಕ 2024, ಕರ್ನಾಟಕ ಮುನಿಸಿಪಾಲಿಟಿಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ 2024ಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾದವು. ಇದನ್ನೂ ಓದಿ: ಎಂಪಿಯಾಗಿ ಕಂಗನಾ ರಣಾವತ್‌ ಆಯ್ಕೆ ಪ್ರಶ್ನಿಸಿ ಅರ್ಜಿ – ಹಿಮಾಚಲ ಪ್ರದೇಶ ಹೈಕೋರ್ಟ್‌ನಿಂದ ನೋಟಿಸ್‌
    ಇದಲ್ಲದೆ 4 ನಿರ್ಣಯಗಳನ್ನು ಸರ್ಕಾರ ಮಂಡನೆ ಮಾಡಿ ಸದನದಲ್ಲಿ ಅಂಗೀಕಾರ ಪಡೆಯಿತು. 1971ರ ಜನಗಣತಿ ಅನ್ವಯ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಗಂಡಣೆ ಮಾಡಬೇಕು ಅನ್ನೋ ನಿರ್ಣಯ, ಒಂದು ದೇಶ ಒಂದು ಚುನಾವಣೆಗೆ ವಿರೋಧಿಸಿ ನಿರ್ಣಯ,‌ ನೀಟ್ ಪರೀಕ್ಷೆ ವ್ಯವಸ್ಥೆ ಖಂಡಿಸಿ ನೀಟ್ ರದ್ದು ಮಾಡುವ ನಿರ್ಣಯ, ಹಾಗೂ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.

  • ಜುಲೈ 20ರಂದು NEET-UG ಫಲಿತಾಂಶ ಪ್ರಕಟಿಸಿ – ಎನ್‌ಟಿಎಗೆ ಸುಪ್ರೀಂ ಆದೇಶ

    ಜುಲೈ 20ರಂದು NEET-UG ಫಲಿತಾಂಶ ಪ್ರಕಟಿಸಿ – ಎನ್‌ಟಿಎಗೆ ಸುಪ್ರೀಂ ಆದೇಶ

    ನವದೆಹಲಿ: 2024ನೇ ಸಾಲಿನ ನೀಟ್‌-ಯುಜಿ (NEET-UG) ಪರೀಕ್ಷಾ ಫಲಿತಾಂಶವನ್ನು ಜುಲೈ 20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಸುಪ್ರೀಂ ಕೋರ್ಟ್‌ ಆದೇಶಿಸಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೇ ನಗರವಾರು ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ಎನ್‌ಟಿಎಗೆ ಆದೇಶಿಸಿದೆ. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    ನೀಟ್-ಯುಜಿ (NEET-UG) ಮರುಪರೀಕ್ಷೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ ನಡೆಸಿತು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೇ ಮಾತ್ರ ಮರುಪರೀಕ್ಷೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ:  NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    ವಿಚಾರಣೆ ವೇಳೆ ಕೋರ್ಟ್‌ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಬಿಹಾರ ಪೊಲೀಸರಿಂದ ವರದಿ ಕೇಳಿತ್ತು. ಬಿಹಾರ ಪೊಲೀಸರು ಈ ಕೇಸ್‌ನಲ್ಲಿ ಮೊದಲ ಪ್ರಕರಣ ದಾಖಲಿಸಿದ್ದರು. ನಂತರ ಇದು ಜಾರ್ಖಂಡ್, ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ರಾಷ್ಟ್ರೀಯ ʻಸಾಲ್ವರ್ ಗ್ಯಾಂಗ್ʼ ನೊಂದಿಗೆ ಸಂಪರ್ಕ ಹೊಂದಿದೆ ಎಂಬುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ:

    ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಬೇಕೆಂಬ ಆದೇಶವನ್ನು ಎನ್‌ಟಿಎ ವಿರೋಧಿಸಿತ್ತು. ಪರೀಕ್ಷಾ ಏಜೆನ್ಸಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪರೀಕ್ಷಾ ಫಲಿತಾಂಶಗಳು ವಿದ್ಯಾರ್ಥಿಗಳ ಖಾಸಗಿ ಆಸ್ತಿ ಎಂಬ ಕಾರಣಕ್ಕಾಗಿ ವಿನಂತಿ ವಿರೋಧಿಸಿದರು. ಇಡೀ ಫಲಿತಾಂಶ ಎಂದಿಗೂ ಪ್ರಕಟಿಸಲಾಗದು, ಅವು ವಿದ್ಯಾರ್ಥಿಗಳ ಆಸ್ತಿ ಎಂದು ವಾದಿಸಿದ್ದರು. ಇದನ್ನೂ ಓದಿ: ತಿರುಪತಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಭೇಟಿ – ವೆಂಕಟರಮಣನಿಗೆ ವಿಶೇಷ ಪೂಜೆ

    ಏಜೆನ್ಸಿಯ ಪರ ವಾದವನ್ನು ಕೋರ್ಟ್‌ ತಳ್ಳಿಹಾಕಿತ್ತು. ವಾಸ್ತವವೆಂದರೆ ಬಿಹಾರದ ಪಾಟ್ನಾದಲ್ಲಿ, ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದು ಆ ಕೇಂದ್ರಗಳಿಗೆ ಮಾತ್ರವೇ ಸೀಮಿತವಾಗಿಯೇ ಎಂಬುದನ್ನು ಪತ್ತೆಹಚ್ಚಲು ನಾವು ಬಯಸುತ್ತೇವೆ. ಆದ್ರೆ, ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶ ತಿಳಿಯದೇ ಕಂಗಾಲಾಗಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ನಗರವಾರು ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳ ಗುರುತನ್ನು ಮರೆಮಾಚಲು ನಾವು ಬಯಸುತ್ತೇವೆ. ಇದರಿಂದ ಕೇಂದ್ರವಾರು ಮಾರ್ಕ್‌ ಪ್ಯಾಟರ್ನ್‌ ಏನೆಂಬುದೂ ತಿಳಿಯುತ್ತದೆ ಎಂದು ಕೋರ್ಟ್‌ ವಿವರಿಸಿತು.

  • Godhra NEET Case | ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ – ಸಿಬಿಐ ಮಹತ್ವದ ಮಾಹಿತಿ

    Godhra NEET Case | ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ – ಸಿಬಿಐ ಮಹತ್ವದ ಮಾಹಿತಿ

    ನವದೆಹಲಿ: ಒಡಿಶಾ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಹಲವಾರು NEET-UG ಅಭ್ಯರ್ಥಿಗಳು ಗುಜರಾತ್‌ನ ಗೋಧ್ರಾದಲ್ಲಿರುವ (Godhra NEET Case) ಕೇಂದ್ರದಲ್ಲಿ ತಮ್ಮ ಪರೀಕ್ಷೆ ಬರೆದಿದ್ದು, ಗುಜುರಾತಿಯನ್ನು (Gujarati) ಪರೀಕ್ಷಾ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.

    ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದ ಇಬ್ಬರು ಗುಜರಾತಿ ವ್ಯಕ್ತಿಗಳನ್ನು ಕಸ್ಟಡಿಗೆ ಕೋರುವಾಗ ಗುಜರಾತ್ ನ್ಯಾಯಾಲಯದಲ್ಲಿ (Gujarat Court) ಸಿಬಿಐ ಈ ಅಂಶವನ್ನು ಬಹಿರಂಗಪಡಿಸಿದೆ. ಈ ಇಬ್ಬರು ಆರೋಪಿಗಳು ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಶಾಶ್ವತ ವಿಳಾಸವನ್ನು ಪಂಚಮಹಲ್ ಅಥವಾ ವಡೋದರಾ ಎಂದು ತೋರಿಸಲು ಸೂಚಿದ್ದರು. ಈ ಎರಡು ಕೇಂದ್ರಗಳಲ್ಲಿ ಅಕ್ರಮ ನಡೆಸಲಾಗಿದೆ ಎಂದು ಸಿಬಿಐ (CBI) ಹೇಳಿದೆ.

    ಎರಡೂ ಪರೀಕ್ಷಾ ಕೇಂದ್ರಗಳ ನಿಯಂತ್ರಣ ಒಬ್ಬರೇ ನಿರ್ವಾಹಕರದ್ದಾಗಿದ್ದು, ವಿವಿಧ ರಾಜ್ಯಗಳ ಎಲ್ಲ ಅಭ್ಯರ್ಥಿಗಳನ್ನು ಆರೋಪಿಗಳು ವಿವಿಧ ಲಿಂಕ್‌ಗಳ ಮೂಲಕ ಸಂಪರ್ಕಿಸಿದ್ದಾರೆ. ಮೇ 5 ರಂದು ನಡೆದ NEET-UG ಪರೀಕ್ಷೆಗೆ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಒಂದಾದ ಗೋದ್ರಾದ ಜೈ ಜಲರಾಮ್ ಶಾಲೆಯಲ್ಲಿ ಅಕ್ರಮ ನಡೆಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಸೇರಿದಂತೆ ಆರು ಆರೋಪಿಗಳ ಪೈಕಿ ಐವರನ್ನು ಈಗಾಗಲೇ ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ದೀಕ್ಷಿತ್ ಪಟೇಲ್ ನೀಟ್-ಯುಜಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರತಿ ವಿದ್ಯಾರ್ಥಿಯಿಂದ 10 ಲಕ್ಷ ರೂ. ಪಡೆದಿದ್ದಾರೆ ಎಂದು ಸಿಬಿಐ ಹೇಳಿದ್ದು, ಕಳೆದ ತಿಂಗಳು ಗುಜರಾತ್ ಪೊಲೀಸರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಬಳಿಕ ಈಗ ದೊಡ್ಡ ಪಿತೂರಿಯ ಭಾಗವಾಗಿ ಅಂತರರಾಜ್ಯ ಸಂಪರ್ಕಗಳನ್ನು ಬಯಲಿಗೆಳೆಯುವತ್ತ ಗಮನ ಹರಿಸಿದೆ. ಇದನ್ನೂ ಓದಿ: ಆರ್ಕಿಟೆಕ್ಚರ್ ಕೋರ್ಸ್ ಅರ್ಹತಾ ಅಂಕ ಶೇ.45ಕ್ಕೆ ಇಳಿಕೆ – ಅರ್ಜಿ ಸಲ್ಲಿಸಲು ಜು.13 ರವರೆಗೆ ಅವಕಾಶ: ಕೆಇಎ

    ವೈದ್ಯಕೀಯ ಕೋರ್ಸ್‌ಗಳಿಗೆ ನಡೆಯುವ ಪ್ರವೇಶ ಕೋರ್ಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಇದುವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿ 11 ಜನರನ್ನು ಬಂಧಿಸಿದೆ. ಬಿಹಾರದಲ್ಲಿ ದಾಖಲಾದ ಎಫ್‌ಐಆರ್ ಪೇಪರ್ ಸೋರಿಕೆಗೆ ಸಂಬಂಧಿಸಿದ್ದು, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾದ ಎಫ್‌ಐಆರ್ ಅಭ್ಯರ್ಥಿಗಳ ವಂಚನೆಗೆ ಸಂಬಂಧಿಸಿವೆ. ಇದನ್ನೂ ಓದಿ: ನಟ ದರ್ಶನ್‌ ಬಂಧನವಾಗಿ ಒಂದು ತಿಂಗಳು ಪೂರ್ಣ – ಅರೆಸ್ಟ್‌ ದಿನದಿಂದ ಇಲ್ಲಿವರೆಗೆ ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್‌!

  • NEET ಪರೀಕ್ಷೆ ಅಕ್ರಮ ಕೇಸ್‌: ಇದು ಮೋದಿ ಸರ್ಕಾರದ ದೊಡ್ಡ ಹಗರಣ: ಶರಣಪ್ರಕಾಶ ಪಾಟೀಲ್

    NEET ಪರೀಕ್ಷೆ ಅಕ್ರಮ ಕೇಸ್‌: ಇದು ಮೋದಿ ಸರ್ಕಾರದ ದೊಡ್ಡ ಹಗರಣ: ಶರಣಪ್ರಕಾಶ ಪಾಟೀಲ್

    ರಾಯಚೂರು: ನೀಟ್ ಪರೀಕ್ಷಾ ಅಕ್ರಮ ಪ್ರಕರಣ (NEET UG 2024 Row) ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಇದರಲ್ಲಿ ಬಹಳ ದೊಡ್ಡ ದೊಡ್ಡ ಜನ ಶಾಮೀಲಾಗಿದ್ದಾರೆ ಅನ್ನೋ ಶಂಕೆ ದೇಶದ ಜನರಿಗೆ ಬರುತ್ತಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanprakash Patil) ಕಿಡಿಕಾರಿದ್ದಾರೆ.

    ರಾಯಚೂರಿನಲ್ಲಿ (Raichur) ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ (Central Government) ನಿಲುವು ಬಹಳ ಅನುಮಾನಾಸ್ಪದವಾಗಿದೆ. ಬಹಳ ದೊಡ್ಡ ಮಟ್ಟದ ಹಗರಣ ಆದ್ರೂ ಕೇಂದ್ರ ತನಿಖೆ ಮಾಡಿಲ್ಲ. ನೆಟ್ ಪರೀಕ್ಷೆ ಸಹ ರದ್ದಾಗಿದೆ. ಇದನ್ನ ಸಿಬಿಐಗೆ ನೀಡಬೇಕು ಎಂಬ ಆಗ್ರಹ ಎಲ್ಲಾ ರಾಜ್ಯಗಳಲ್ಲಿ ಕೇಳಿಬರುತ್ತಿದೆ. ಆದರೂ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರ ಯಾರನ್ನು ರಕ್ಷಣೆ ಮಾಡುತ್ತಿದೆ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪೊಲೀಸರು ಹೋಗಿ ಉತ್ತರ ಪ್ರದೇಶದಲ್ಲಿ ತಪ್ಪೇನೂ ಮಾಡಿಲ್ಲ: ಗೃಹ ಸಚಿವ ಪರಮೇಶ್ವರ್

    ದೇಶದ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ನೀಟ್ ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ನೀಟ್ ನಡೆಸೋದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀರ್ಪು ಇದೆ. ಕೇಂದ್ರ ಸರ್ಕಾರದ ಆ್ಯಕ್ಟ್ ನಿಂದ ನೀಟ್ ಬಂದಿದೆ ಹಾಗಾಗಿ ನೀಟ್ ರದ್ದು ಮಾಡೋಕೆ ಸುಪ್ರೀಂ ಕೋರ್ಟ್ ತೀರ್ಪು ಆಗಬೇಕು. ಬೇರೆ ರಾಜ್ಯಗಳಂತೆ ಬೇಜವಾಬ್ದಾರಿಯಿಂದ ಹೇಳುವುದಕ್ಕೆ ಆಗೋದಿಲ್ಲ. ತಮಿಳುನಾಡು ಸರ್ಕಾರ ಅದರ ಅಭಿಪ್ರಾಯ ಹೇಳಿದೆ. ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಪಾರದರ್ಶಕವಾಗಿ ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಪೇಪರ್ ಲೀಕ್ ಆಗಿದೆ ಎಂಬುದು ಎಲ್ಲಾ ಮಕ್ಕಳ ಅನುಮಾನ ಇದೆ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ. ಯಾರನ್ನೂ ರಕ್ಷಣೆ ಮಾಡುವಂತಿಲ್ಲ, ನಿಮ್ಮ ತಪ್ಪು ಇದ್ದರೆ ಒಪ್ಪಿಕೊಳ್ಳಿ ಎಂದು ಸುಪ್ರೀಂ ಹೇಳಿದೆ ಅಂತ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿ, ನಾನು ರಾಜ್ಯಾಧ್ಯಕ್ಷ ಆಗ್ತೀನಿ: ಯತ್ನಾಳ್

  • ನೀಟ್ ಪರೀಕ್ಷೆಯಲ್ಲಿ ಅಕ್ರಮ- 0.001 %ರಷ್ಟು ನಿರ್ಲಕ್ಷ್ಯ ಕಂಡುಬಂದ್ರೂ ಕೂಲಂಕುಷವಾಗಿ ನಿಭಾಯಿಸಬೇಕು: ಸುಪ್ರೀಂ

    ನೀಟ್ ಪರೀಕ್ಷೆಯಲ್ಲಿ ಅಕ್ರಮ- 0.001 %ರಷ್ಟು ನಿರ್ಲಕ್ಷ್ಯ ಕಂಡುಬಂದ್ರೂ ಕೂಲಂಕುಷವಾಗಿ ನಿಭಾಯಿಸಬೇಕು: ಸುಪ್ರೀಂ

    ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗೆ ನೋಟಿಸ್ ನೀಡಿದ್ದು ಎರಡು ವಾರಗಳಲ್ಲಿ ಉತ್ತರಿಸಲು ಸೂಚನೆ ನೀಡಿದೆ. ವಿಚಾರಣೆ ವೇಳೆ ಪೀಠ ಯಾರದೇ ಕಡೆಯಿಂದ 0.001%ರಷ್ಟು ನಿರ್ಲಕ್ಷ್ಯ ಕಂಡುಬಂದರೂ ಅದನ್ನು ಕೂಲಂಕುಷವಾಗಿ ನಿಭಾಯಿಸಬೇಕು ಎಂದು ಸೂಚಿಸಿದೆ.

    ನೀಟ್ ಫಲಿತಾಂಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಆಕಾಂಕ್ಷಿಗಳು ಪ್ರವೇಶ ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿರುತ್ತಾರೆ. ನಾವು ಅವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ವಂಚನೆ ಮಾಡಿದವರು ವೈದ್ಯರಾಗುತ್ತಾರೆ ಅಂತವರಿಂದ ಸಮಾಜಕ್ಕೆ ಹೆಚ್ಚು ಹಾನಿಕಾರಕ ಎಂದು ಕಳವಳ ವ್ಯಕ್ತಪಡಿಸಿತು.

    NEET-UG ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ವಿರೋಧಿ ವ್ಯಾಜ್ಯ ಎಂದು ಪರಿಗಣಿಸಬೇಡಿ. ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಸರಿಪಡಿಸಿ. ಪರೀಕ್ಷೆಯನ್ನು ನಡೆಸುತ್ತಿರುವ ಏಜೆನ್ಸಿಯಾಗಿ ನೀವು ನ್ಯಾಯಯುತವಾಗಿ ವರ್ತಿಸಬೇಕು. ತಪ್ಪಿದ್ದರೆ, ಹೌದು ಇದು ತಪ್ಪು ಎಂದು ಹೇಳಿ. ಇದು ನಿಮ್ಮ ಕಾರ್ಯಕ್ಷಮತೆಯಲ್ಲಿ ವಿಶ್ವಾಸವನ್ನು ಉಂಟುಮಾಡುತ್ತದೆ ಎಂದು ಪೀಠವು ಎನ್‌ಟಿಎಗೆ ಸಲಹೆ ನೀಡಿತು. ಇದನ್ನೂ ಓದಿ: ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ

    ಕೋರ್ಟ್ ಪರೀಕ್ಷಾ ಸಂಸ್ಥೆಯಿಂದ ಸಕಾಲಿಕ ಕ್ರಮ ನಿರೀಕ್ಷಿಸುತ್ತದೆ. ಅರ್ಜಿದಾರರು ತಮ್ಮ ವಾದವನ್ನು ಕಾಯ್ದಿರಿಸಿಕೊಳ್ಳಿ ನೋಟಿಸ್ ಗೆ ಎನ್‌ಟಿಎ ಮೊದಲು ಉತ್ತರ ನೀಡಲಿ. ಆಮೇಲೆ ನೀವು ವಾದಿಸಿ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 8 ರಂದು ಪಟ್ಟಿ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು‌.

  • ನೀಟ್‌ ಯುಜಿ ವಿವಾದ – 1563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ರದ್ದು

    ನೀಟ್‌ ಯುಜಿ ವಿವಾದ – 1563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ರದ್ದು

    – ಸುಪ್ರೀಂಗೆ ಕೇಂದ್ರ ಸರ್ಕಾರದಿಂದ ಮಾಹಿತಿ
    – ಜುಲೈ 8 ರಂದು ಎಲ್ಲಾ ಅರ್ಜಿಗಳ ವಿಚಾರಣೆ

    ನವದೆಹಲಿ: ನೀಟ್‌ ಯಜಿ ಪರೀಕ್ಷೆಯಲ್ಲಿ (NEET-UG Exam) ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕಗಳನ್ನು (Grace Marks) ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.

    1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ಆಯ್ಕೆಯನ್ನು ನೀಡಲಾಗುತ್ತದೆ ಅಥವಾ ಗ್ರೇಸ್ ಅಂಕಗಳಿಲ್ಲದೆ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.

    ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೀಟ್‌ ಅನ್ಯಾಯ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಜುಲೈ 8 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ಜೂನ್ 23 ರಂದು ಮರುಪರೀಕ್ಷೆ ನಡೆಯುವ ಸಾಧ್ಯತೆಯಿದ್ದು, ಜುಲೈ 1 ರ ಮೊದಲು ಫಲಿತಾಂಶ ಹೊರಬೀಳಲಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

     

    ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ವಿಳಂಬಗೊಂಡು ಗ್ರೇಸ್‌ ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಮರು ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

    ಗ್ರೇಸ್ ಮಾರ್ಕ್ ನೀಡಿರುವುದನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎನ್‌ಟಿಎ (NTA) ಮರುಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿತ್ತು. 6 ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವಾಗ ವಿಳಂಬವಾಗಿದೆ. ಹೀಗಾಗಿ ಈ ಅಭ್ಯರ್ಥಿಗಳಿಗೆ ಒಂದು ಆಯ್ಕೆಯನ್ನು ನೀಡಬೇಕೆಂದು ಕೋರ್ಟ್‌ ಮುಂದೆ ವಕೀಲ ಸಾಯ್‌ ದೀಪಕ್‌ ಮನವಿ ಮಾಡಿದರು.

     

    ಏನಿದು ವಿವಾದ?
    ಈ ಬಾರಿ ನೀಟ್‌ ಪರೀಕ್ಷೆ ನಡೆದ 6 ಕೇಂದ್ರದಲ್ಲಿ ತಪ್ಪು ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಳ್ಳವಂತಾಗಿತ್ತು.  ಪರೀಕ್ಷೆ ಬರೆಯಲು ಕಡಿಮೆ ಸಮಯ ಸಿಕ್ಕಿದ್ದಕ್ಕೆ  ಈ ಕೇಂದ್ರದ ವಿದ್ಯಾರ್ಥಿಗಳಿಗೆ ಎನ್‌ಟಿಎ ಗ್ರೇಸ್‌ಮಾರ್ಕ್‌ ನೀಡಿತ್ತು.

    ಈ ಗ್ರೇಸ್‌ ಮಾರ್ಕ್‌ ಪರಿಣಾಮ ದಾಖಲೆಯ 67 ವಿದ್ಯಾರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದರು. ಈ ಪೈಕಿ ಬಹುತೇಕರು, ಮೇಘಾಲಯ, ಹರ್ಯಾಣದ ಬಹದುರ್ಗಾ, ಛತ್ತೀಸ್‌ಗಢ ದಂತೇವಾಡಾ, ಬಲ್ಡೋಹ್‌, ಗುಜರಾತ್‌ನ ಸೂರತ್‌ ಮತ್ತು ಚಂಡೀಗಢದ ಪರೀಕ್ಷಾ ಕೇಂದ್ರಗಳಿಗೆ ಸೇರಿದವರಾಗಿದ್ದಾರೆ. ಜೊತೆಗೆ ಅನುಕ್ರಮ ಸಂಖ್ಯೆಯಲ್ಲಿ 7 ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದಾರೆ.

    6 ಪರೀಕ್ಷಾ ಕೇಂದ್ರಗಳ 1563 ನೀಟ್‌ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡಿ ಹೆಚ್ಚಿನ ಅಂಕ ಪಡೆದಿದ್ದೇ ವಿವಾದಕ್ಕೆ ಮುಖ್ಯ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಜೂ.4ರಂದು ಯಾವುದೇ ಮುನ್ಸೂಚನೆ ನೀಡದೇ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಸಂಜೆ ಏಕಾಏಕಿ ನೀಟ್‌ ಫಲಿತಾಂಶ ಪ್ರಕಟಿಸಲಾಗಿತ್ತು. ಇವೆಲ್ಲವೂ ಸಾಕಷ್ಟು ಅನುಮಾನ ಮೂಡಿತ್ತು. ದೇಶಾದ್ಯಂತ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.