Tag: Neenasam Manju

  • ರಾಯಬಾಗದಲ್ಲಿ ಆರನೇ ವಾರಕ್ಕೆ ಕಾಲಿಟ್ಟ ‘ಕನ್ನೇರಿ’ ಚಿತ್ರ – ಪ್ರೇಕ್ಷಕರಿಂದ ಸಂಭ್ರಮಾಚರಣೆ

    ರಾಯಬಾಗದಲ್ಲಿ ಆರನೇ ವಾರಕ್ಕೆ ಕಾಲಿಟ್ಟ ‘ಕನ್ನೇರಿ’ ಚಿತ್ರ – ಪ್ರೇಕ್ಷಕರಿಂದ ಸಂಭ್ರಮಾಚರಣೆ

    ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದದ್ದು ಗೊತ್ತೇ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಚಿತ್ರ ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರ ಬಿಡುಗಡೆಯಾಗಿ ಆರನೇ ವಾರಕ್ಕೆ ಕಾಲಿಟ್ಟಿದ್ದು, ಉತ್ತರಕರ್ನಾಟಕ ಭಾಗದಲ್ಲಿ ಯಶಸ್ವಿ ಆರನೇ ವಾರ ಪ್ರದರ್ಶನ ಕಾಣುತ್ತಿದೆ.

    ಉತ್ತರ ಕರ್ನಾಟಕದ ಜನರ ಪ್ರೀತಿಗೆ ಪಾತ್ರವಾದ ಈ ಚಿತ್ರ ಆ ಭಾಗದ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ನೆಲದ ಸೊಗಡು, ಪ್ರಸ್ತುತ ಎನಿಸುವ ಕಥೆ, ಪಾತ್ರವರ್ಗದ ಅಭಿನಯ, ನೀನಾಸಂ ಮಂಜು ಕಥೆ ಕಟ್ಟಿಕೊಟ್ಟ ಪರಿಯನ್ನು ಮೆಚ್ಚಿಕೊಂಡಿದ್ದಾರೆ. ರಾಯಬಾ ಗದತ್ತ ಚಿತ್ರಮಂದಿರದಲ್ಲಿ ಆರನೇ ವಾರ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದರಿಂದ ಚಿತ್ರದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಚಿತ್ರದ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಂಡು ‘ಕನ್ನೇರಿ’ ಚಿತ್ರತಂಡ ಕೂಡ ಸಂತಸ ವ್ಯಕ್ತಪಡಿಸಿದೆ.ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ‘ಕನ್ನೇರಿ’ ನೀನಾಸಂ ಮಂಜು ನಿರ್ದೇಶನದ ಎರಡನೇ ಸಿನಿಮಾ. ಕಾಡು ಜನರನ್ನು ಒಕ್ಕಲೆಬ್ಬಿಸಿದ ನಂತರ ಅವರ ಬದುಕು ಹೇಗೆಲ್ಲ ಶೋಷಣೆಗೆ ಒಳಪಡುತ್ತೆ. ಪ್ರಮುಖವಾಗಿ ಅಲ್ಲಿನ ಹೆಣ್ಣು ಮಕ್ಕಳು ಯಾವೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈಗಲೂ ಹೇಗೆ ಎದುರಿಸುತ್ತಿದ್ದಾರೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುವ ಕಥೆ ಚಿತ್ರದಲ್ಲಿದೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರ್ಚನಾ ಮಧುಸೂದನ್ ನಟಿಸಿದ್ದಾರೆ.

    ಕರಿಸುಬ್ಬು, ಎಂ.ಕೆ.ಮಠ, ಅರುಣ್ ಸಾಗರ್, ಅನಿತಾ ಭಟ್ ಚಿತ್ರದ ತಾರಾಬಳಗದಲ್ಲಿ ಅಭಿನಯಿಸಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಪಿ.ಪಿ.ಹೆಬ್ಬಾರ್ ಸಿನಿಮಾ ನಿರ್ಮಾಣ ಮಾಡಿದ್ದು, ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಗಣೇಶ್ ಹೆಗ್ಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

  • ಕಾಡಿನ ಮಕ್ಕಳಿಗೆ ಕಾಡು-ನಾಡು ಎರಡೂ ಕಡೆ ಇಲ್ಲ ಅಸ್ತಿತ್ವ – ಆದಿವಾಸಿ ಹೆಣ್ಣು ಮಕ್ಕಳ ಕರುಣಾಜನಕ ಕಥೆ ಹೇಳುವ ಕನ್ನೇರಿ

    ಕಾಡಿನ ಮಕ್ಕಳಿಗೆ ಕಾಡು-ನಾಡು ಎರಡೂ ಕಡೆ ಇಲ್ಲ ಅಸ್ತಿತ್ವ – ಆದಿವಾಸಿ ಹೆಣ್ಣು ಮಕ್ಕಳ ಕರುಣಾಜನಕ ಕಥೆ ಹೇಳುವ ಕನ್ನೇರಿ

    ಚಿತ್ರ: ಕನ್ನೇರಿ
    ನಿರ್ದೇಶನ: ನೀನಾಸಂ ಮಂಜು
    ನಿರ್ಮಾಪಕರು: ಪಿ.ಪಿ ಹೆಬ್ಬಾರ್
    ಸಂಗೀತ: ಕದ್ರಿ ಮಣಿಕಾಂತ್
    ಛಾಯಾಗ್ರಾಹಣ: ಗಣೇಶ್ ಹೆಗ್ಡೆ
    ತಾರಾಬಳಗ: ಅರ್ಚನಾ ಮಧುಸೂದನ್, ಎಂ ಕೆ ಮಠ, ಅರುಣ್ ಸಾಗರ್, ಅನಿತ ಭಟ್, ಸರ್ದಾರ್ ಸತ್ಯ, ಇತರರು

    ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನೇರಿ ಸಿನಿಮಾ ಬಿಡುಗಡೆಯಾಗಿದೆ. ಹಾಡು, ಟ್ರೇಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಚಿತ್ರ ಪ್ರೇಕ್ಷಕರೆದುರು ಇಂದು ತೆರೆಕಂಡಿದೆ.

    ಆದಿವಾಸಿ ಜನರನ್ನು ಒಕ್ಕಲೆಬ್ಬಿಸಿದ ನಂತರ ಅವರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ವಿಶೇಷವಾಗಿ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಕೆಲಸಕ್ಕೆಂದು ನಗರದತ್ತ ಮುಖ ಮಾಡಿದ ಹೆಣ್ಣು ಮಕ್ಕಳು ಹೇಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ? ಅವರ ಮುಗ್ಧತೆಯನ್ನು ಜನ ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನ ಇಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಿ, ಪೋಷಕರಿಂದಲೂ ದೂರವಾಗಿ ನಗರದಲ್ಲೂ ನೆಲೆ ಇಲ್ಲದೆ ತಮ್ಮ ಮುಗ್ಧತೆಯಿಂದಲೇ ಆರೋಪಗಳನ್ನೆದುರಿಸುತ್ತ ಬದುಕುತ್ತಿರುವ ಎಷ್ಟೋ ಹೆಣ್ಣು ಮಕ್ಕಳ ಕಣ್ಣೀರ ಕಥೆಯನ್ನು ಕನ್ನೇರಿ ಹೇಳುತ್ತದೆ.

    ಡಾಕ್ಯುಮೆಂಟರಿ ಫಿಲ್ಮಂ ಮೇಕರ್ ಅರವಿಂದ್ ಆದಿವಾಸಿ ಜನರಿಗಾಗಿ ಸರ್ಕಾರ ಮೀಸಲಿಟ್ಟ ಜಾಗಕ್ಕೆ ಬಂದು ಅಲ್ಲಿನ ಜನರ ಪರಿಸ್ಥಿತಿ, ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಸಿದಾಗ ಆತನಿಗೆ ಮುತ್ತಮ್ಮ ಎಂಬುವ ಪ್ರತಿಭಾನ್ವಿತ ಹುಡುಗಿ ಬಗ್ಗೆ ತಿಳಿಯುತ್ತದೆ. ತನ್ನ ತಾತನ ಆರೋಗ್ಯ ಕಾಪಾಡಲು ಕಾಸಿಲ್ಲದಿದ್ದಾಗ ನಗರವೊಂದರಲ್ಲಿ ಶ್ರೀಮಂತರೊಬ್ಬರ ಮನೆಗೆಲಸಕ್ಕೆ ಸೇರುವ ಮುತ್ತಮ್ಮ ಮತ್ತೆ ಊರಿಗೆ ವಾಪಸ್ಸು ಮರಳುವುದಿಲ್ಲ. ಎರಡು ವರ್ಷವಾದರೂ ಆಕೆಯ ಸುಳಿವೂ ಇರುವುದಿಲ್ಲ. ಮುತ್ತಮ್ಮನ ಕಥೆ ಕೇಳಿ ಆಕೆಯನ್ನು ಹುಡುಕಲು ಅರವಿಂದ್ ಹೊರಡುತ್ತಾನೆ. ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗುತ್ತಾನೆ. ಜೈಲಿನಲ್ಲಿರುವ ಮುತ್ತಮ್ಮನನ್ನು ಕಂಡು ಮರುಗುತ್ತಾನೆ. ಆಕೆಯನ್ನು ಆರೋಪದಿಂದ ಮುಕ್ತಗೊಳಿಸಲು ಪಣತೊಡುತ್ತಾನೆ. ಅರವಿಂದ್ ಪ್ರಯತ್ನ ಯಶಸ್ವಿಯಾಗುತ್ತಾ? ಮುತ್ತಮ್ಮ ಮತ್ತೆ ತನ್ನ ತಾತನ ಬಳಿ ಸೇರುತ್ತಾಳಾ? ಅಷ್ಟಕ್ಕೂ ಆಕೆ ಜೈಲು ಸೇರಲು ಮಾಡಿದ ಪ್ರಮಾದವಾದರೂ ಏನು? ಇದೇ ಚಿತ್ರದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ನಟಿ ಸಂಜನಾಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ- ಯುವಕ ಪೊಲೀಸ್ ವಶಕ್ಕೆ

    ಮುತ್ತಮ್ಮ ಎಂಬ ಹೆಣ್ಣುಮಗಳೊಬ್ಬಳ ಕಥೆಯ ಮೂಲಕ ಇಡೀ ಆದಿವಾಸಿ ಹೆಣ್ಣುಮಕ್ಕಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ನೀನಾಸಂ ಮಂಜು. ನಗರದತ್ತ ಕೆಲಸ ಅರಸಿ ಬರುವ ಅಮಾಯಕ ಹೆಣ್ಣು ಮಕ್ಕಳನ್ನು ಹೇಗೆ ಬಲೆ ಬೀಸಿ ಚಕ್ರವ್ಯೂಹದಲ್ಲಿ ಸಿಕ್ಕಿಸುತ್ತಾರೆ. ಅವರ ಬದುಕು ಎಷ್ಟು ಶೋಚನೀಯವಾಗಿದೆ ಎನ್ನುವುದನ್ನು ಮುತ್ತಮ್ಮ ಪಾತ್ರದ ಮೂಲಕ ಹೇಳುವ ಪ್ರಯತ್ನ ನಿರ್ದೇಶಕರದ್ದು, ಈ ಪ್ರಯತ್ನ ಮನಸ್ಸಿಗೆ ನಾಟುತ್ತದೆ. ಕಾಡಿನಲ್ಲಿ ಸುಂದರ ಬದುಕು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದವರನ್ನು ನಿರ್ದಾಕ್ಷೀಣ್ಯವಾಗಿ ಹೊರಗಟ್ಟಿ ನಾಡಿನಲ್ಲೂ ಒಂದೊಳ್ಳೆ ಜೀವನ ಕಟ್ಟಿಕೊಡದೇ ಅವರನ್ನು ಅರೆ ಜೀವವಾಗಿ ಮಾಡುವ ವ್ಯವಸ್ಥೆ, ಈಗಲೂ ಸೌಲಭ್ಯವಿಲ್ಲದೇ ಒಪ್ಪತ್ತು ಊಟಕ್ಕೂ ಪರದಾಡುವ ಅವರ ನೋವಿನ ಕಥೆಯನ್ನು ತೆರೆದಿಡುತ್ತದೆ ಚಿತ್ರ. ನೆಲದ ಮಕ್ಕಳಿಗೆ ನೆಲೆ ಇಲ್ಲವಲ್ಲ ಎಂದು ಕಾಡುತ್ತದೆ.

    ನಿರ್ದೇಶಕರ ಭಾವನೆಗಳನ್ನು ಛಾಯಾಗ್ರಾಹಕ ಗಣೇಶ್ ಹೆಗ್ಡೆ ಅಚ್ಚುಕಟ್ಟಾಗಿ ಕಣ್ಮನ ಸೆಳೆಯುವಂತೆ ಸೆರೆ ಹಿಡಿದಿದ್ದಾರೆ. ಹಾಡಿಯ ನಾಯಕನ ಪಾತ್ರದಲ್ಲಿ ನಟಿಸಿರುವ ಎಂ.ಕೆ. ಮಠ ಅವರ ಅಭಿನಯ ಮನಮುಟ್ಟುತ್ತದೆ. ಮುತ್ತಮ್ಮನ ಪಾತ್ರದಲ್ಲಿ ಅರ್ಚನಾ ಮಧುಸೂದನ್ ಇಷ್ಟವಾಗುತ್ತಾರೆ, ಲಾಯರ್ ಪಾತ್ರದಲ್ಲಿ ಅರುಣ್ ಸಾಗರ್, ಪೊಲೀಸ್ ಆಗಿ ಸರ್ದಾರ್ ಸತ್ಯ, ನೆಗೆಟಿವ್ ರೋಲ್‍ನಲ್ಲಿ ಅನಿತಾ ಭಟ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ಕೂಡ ಚಿತ್ರದ ಪ್ಲಸ್ ಪಾಯಿಂಟ್. ನೀನಾಸಂ ಮಂಜು ಆಯ್ಕೆ ಮಾಡಿಕೊಂಡ ಕಟೆಂಟ್ ಹಾಗೂ ಅದನ್ನು ತೆರೆ ಕಟ್ಟಿಕೊಡುವಲ್ಲಿನ ಪರಿಶ್ರಮ ಖಂಡಿತ ಮೆಚ್ಚುವಂತದ್ದು. ಮನಸ್ಸಿಗೆ ನಾಟುವ ಕತೆ, ತೆರೆ ಮೇಲೆ ತಂದ ರೀತಿ ಎಲ್ಲವೂ ಓಕೆ ಎನಿಸಿದರು ಕೆಲವು ಸನ್ನಿವೇಶಗಳಲ್ಲಿ ಇನ್ನೂ ಏನು ಬೇಕಿತ್ತು ಎನ್ನುವ ಭಾವ ಮೂಡುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದರೆ ಖಂಡಿತ ಕನ್ನೇರಿ ಮತ್ತಷ್ಟು ಮನಸ್ಸಿನಾಳಕ್ಕೆ ನಾಟುವುದರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ:  ಹೆಣ್ಣು ಮಗುವಿನ ತಂದೆಯಾದ ರಿಶಬ್ ಶೆಟ್ಟಿ

    ರೇಟಿಂಗ್ : 3.5/5

  • ನೀನಾಸಂ ಮಂಜು ‘ಕನ್ನೇರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್

    ನೀನಾಸಂ ಮಂಜು ‘ಕನ್ನೇರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್

    ‘ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಮತ್ತೊಂದು ಚಿತ್ರ ಕೈಗೆತ್ತಿಕೊಂಡು ಚಿತ್ರೀಕರಣವನ್ನೂ ಕಂಪ್ಲೀಟ್ ಮಾಡಿದ್ದಾರೆ. ಆ ಚಿತ್ರದ ಹೆಸರೇ ‘ಕನ್ನೇರಿ’. ನೈಜ ಘಟನೆ ಆಧಾರಿತ ಈ ಚಿತ್ರ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರೆದುರು ಬಂದಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ಕನ್ನೇರಿ’ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ‘ಕನ್ನೇರಿ’ ಮಹಿಳಾ ಪ್ರಧಾನ ಚಿತ್ರ. ಚಿತ್ರಕ್ಕೆ ನೈಜ ಘಟನೆಯೇ ಪ್ರೇರಣೆ ಎನ್ನುತ್ತಾರೆ ನಿರ್ದೇಶಕ ನೀಸಾಸಂ ಮಂಜು. ಅದು ಬೇರಾವ ಘಟನೆ ಅಲ್ಲ ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ. ಈ ಹೋರಾಟದ ಜೊತೆ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೊತೆಯಾಗಿದ್ದಾರೆ.

    ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ‘ಕನ್ನೇರಿ’ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್