Tag: nda

  • ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಇಂಡಿಯಾ) ಮರಳಲು ಬಯಸಿದರೆ ಅವರಿಗೆ ಒಕ್ಕೂಟದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಹೇಳಿಕೆ ನೀಡಿದ್ದಾರೆ. ನಾಯಕತ್ವಕ್ಕಾಗಿ ಒಕ್ಕೂಟದಲ್ಲಿ ಒಳಜಗಳ ನಡೆಯುತ್ತಿರುವ ಹೊತ್ತಲ್ಲಿ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

    ಮಂಗಳವಾರ ಆರ್‌ಜೆಡಿ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಜನ್ಮದಿನವಾಗಿತ್ತು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಜನ್ಮದಿನದಂದು ಆಯೋಜಿಸಲಾದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪತ್ರಕರ್ತರು ಸಿಎಂ ನಿತೀಶ್ ಕುಮಾರ್ ಮರಳುವ ಬಗ್ಗೆ ಕೇಳಿದಾಗ ಬಾಗಿಲು ಸದಾ ತೆರೆದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್ ಕಾನೂನು ರದ್ದಾಗೋವರೆಗೂ ಹೋರಾಟ: ಯತ್ನಾಳ್

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರಿಗಾಗಿ ಒಕ್ಕೂಟದ ಬಾಗಿಲು ತೆರೆದಿದೆ. ಅವರು ಒಗ್ಗೂಡಿ ಕೆಲಸ ಮಾಡಲಿ, ಮಹಾಮೈತ್ರಿಯೊಂದಿಗೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಈ ಹೇಳಿಕೆ ರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಎನ್‌ಡಿಎ ಪಾಳಯದ ಚಡಪಡಿಕೆಯನ್ನೂ ಹೆಚ್ಚಿಸಿದೆ. ಇದನ್ನೂ ಓದಿ: ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಘೋಷಣೆ

    ಕೆಲ ದಿನಗಳ ಹಿಂದೆಯಷ್ಟೇ ಮಾತನಾಡಿದ್ದ ಲಾಲೂ ಪುತ್ರ ಮಾಜಿ ಡಿಸಿಎಂ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರು ಈಗ ಸುಸ್ತಾಗಿದ್ದಾರೆ. ಅವರಿಗೆ ಮಹಾಮೈತ್ರಿಕೂಟದ ಬಾಗಿಲು ಮುಚ್ಚಿದೆ. ಆದರೆ ಸಿಎಂ ನಿತೀಶ್ ಕುಮಾರ್ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೆ ಅದನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಇದಾದ ಬಳಿಕ ಲಾಲೂ ಪ್ರಸಾದ್ ಅವರ ಈ ಹೇಳಿಕೆ ಎಲ್ಲರನ್ನೂ ಅಚ್ಚರಿಪಡಿಸಿದೆ. ಇದನ್ನೂ ಓದಿ: ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟ – ಜೆಡಿಎಸ್‌ ಹಿರಿಯ ನಾಯಕರ ಅಸಮಾಧಾನ

  • ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್‌ ಗೇಮ್’‌ – ಬಿಲ್‌ ಪಾಸ್‌ ಆಗುತ್ತಾ?

    ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್‌ ಗೇಮ್’‌ – ಬಿಲ್‌ ಪಾಸ್‌ ಆಗುತ್ತಾ?

    ಪ್ರಸ್ತುತ ದೇಶದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಬಹು ಚರ್ಚೆಯಲ್ಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಇದಾಗಿದೆ. ಈ ಬಿಲ್ ಜಾರಿಗೆ ಪರ-ವಿರೋಧದ ಮಾತು ಜೋರಾಗಿದೆ. ಬಿಜೆಪಿಯ ಪ್ರಮುಖ ಕಾರ್ಯಸೂಚಿಯನ್ನು ಜಾರಿ ತರಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲೇ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಮಂಗಳವಾರ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಂಡಿಸಿತು. ಆದರೆ, ಅಂಗೀಕಾರಕ್ಕೆ ಬೇಕಾದ ಬಹುಮತ ಮಾತ್ರ ಸಿಗಲಿಲ್ಲ. ಇದರಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ವಿವಾದಿತ ಬಿಲ್ ಆಗಿ ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.

    ಮಸೂದೆ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ತನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಲೋಕಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಅಸಾದುದ್ದೀನ್ ಓವೈಸಿ ಎಐಎಂಐಎಂ ಸೇರಿದಂತೆ ಸಣ್ಣ ಪಕ್ಷಗಳು ಕೂಡ ಬಿಲ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿಯ ಇಬ್ಬರು ಮಿತ್ರಪಕ್ಷಗಳಾದ ಆಂಧ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷ ಹಾಗೂ ಮಹಾರಾಷ್ಟçದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಾತ್ರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ ‘ಒಂದು ದೇಶ, ಒಂದು ಚುನಾವಣೆ’ ಜಾರಿ ಹಿಂದೆ ನಂಬರ್ ಗೇಮ್ ಶುರುವಾಗಿದೆ.

    ‘ಒಎನ್‌ಒಪಿ’ ನಂಬರ್ ಗೇಮ್!
    ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಶಿಫಾರಸು ಮಾಡಿರುವ ಸಂವಿಧಾನ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಸಿಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಮಸೂದೆ ಮಂಡಿಸುವಾಗ ಮತ ಚಲಾಯಿಸಿದ ಸಂಸದರ ಸಂಖ್ಯೆಯನ್ನು ಆಧರಿಸಿ ನೋಡಿದರೆ, ಬಿಜೆಪಿಗೆ ಬಹುಮತವಿಲ್ಲ ಎಂದು ತೋರುತ್ತದೆ.

    ಮತ ವಿಭಜನೆಗೆ ಹಾಕಿದಾಗ ಏನಾಯ್ತು?
    ಡಿ.17 ರಂದು ಲೋಕಸಭೆಯಲ್ಲಿ ವಿಪಕ್ಷಗಳು ಮತ ವಿಭಜನೆಗೆ ಪಟ್ಟು ಹಿಡಿದವು. ಆಗ, ಮಸೂದೆಯನ್ನು ಸದನದಲ್ಲಿ ಮಂಡಿಸಬಹುದೇ ಎಂದು ಪ್ರಶ್ನಿಸಿ ಮತಕ್ಕೆ ಹಾಕಲಾಯಿತು. ಪರವಾಗಿ 269 ಮತಗಳು ಹಾಗೂ ವಿರುದ್ಧವಾಗಿ 198 ಮತಗಳು ಬಿದ್ದವು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024’ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು. ಆದರೆ, ಮಸೂದೆ ಮಂಡನೆ ಪರವಾಗಿ ಬಿದ್ದ ಮತಗಳ ಮತಗಳ ಪ್ರಮಾಣ ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆ ಇದೆ.

    ನಂಬರ್ ಲೆಕ್ಕಾಚಾರ ಹೇಗಿದೆ?
    ಎನ್‌ಡಿಎ ಮೈತ್ರಿಕೂಟ – 293, ಇಂಡಿಯಾ ಮೈತ್ರಿಕೂಟ – 236, ಅಕಾಲಿದಳ 1, ಎಎಸ್‌ಪಿ (ಕಾನ್ಶಿರಾಮ್) 1, ಎಐಎಂಐಎಂ 1, ವೈಎಸ್‌ಆರ್ ಕಾಂಗ್ರೆಸ್ 4, ವಿಒಟಿಟಿಪಿ 1, ಝಡ್‌ಪಿಎಂ 1, ಪಕ್ಷೇತರ 4 ಲೋಕಸಭಾ ಸದಸ್ಯರಿದ್ದಾರೆ.

    ಮೂರನೇ ಎರಡರಷ್ಟು ಬೆಂಬಲಕ್ಕ ಎಷ್ಟು ನಂಬರ್ ಬೇಕು?
    543 ಸದಸ್ಯ ಬಲದ ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ. ಸದನವು ಪೂರ್ಣ ಬಲದಲ್ಲಿದ್ದಾಗ ಮೂರನೇ ಎರಡರಷ್ಟು ಬಹುಮತಕ್ಕೆ 362 ಮತಗಳ ಅಗತ್ಯವಿದೆ. ಮತ ವಿಭಜನೆ ಆಧಾರದಲ್ಲಿ ಮಸೂದೆ ಮಂಡನೆಗೆ ಕೇಳಿದ ಸಂದರ್ಭದಲ್ಲಿ ಸಂಸತ್‌ನಲ್ಲಿ 461 ಸಂಸದರಿದ್ದರು. ಆ ಸಂದರ್ಭದಲ್ಲಿ ಮಸೂದೆ ಪರವಾಗಿ 307 ಮತಗಳ (ಮೂರನೇ ಎರಡರಷ್ಟು ಬಹುಮತಕ್ಕೆ) ಅಗತ್ಯವಿತ್ತು. ಆದರೆ, ಬಿಜೆಪಿಯ ಮಸೂದೆ ಪರವಾಗಿ ಬಿದ್ದಿದ್ದು 269 ಮತಗಳು. ಹೀಗಾಗಿ, ಮಸೂದೆ ಮಂಡನೆಗೂ ಬಿಜೆಪಿಗೆ ಬಹುಮತ ಸಿಗಲಿಲ್ಲ.

    9 ಸಂಸದರನ್ನು ಹೊಂದಿರುವ ಆರು ಪಕ್ಷಗಳು ಯಾವುದೇ ಮೈತ್ರಿಕೂಟಕ್ಕೆ ಬೆಂಬಲವನ್ನು ಸೂಚಿಸಿಲ್ಲ. ಇವುಗಳ ಪೈಕಿ ಅಕಾಲಿದಳ, ಎಐಎಂಐಎಂ ಮತ್ತು ಎಎಸ್‌ಪಿ (ಕಾನ್ಶಿರಾಮ್) ಪಕ್ಷಗಳ ಸಂಸದರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ಏಕಕಾಲದಲ್ಲಿ ನಡೆಸುವ ಚುನಾವಣೆಗೆ ಬೆಂಬಲ ಸೂಚಿಸಿತ್ತು. ಆ ಪಕ್ಷದಲ್ಲಿ ನಾಲ್ಕು ಮಂದಿ ಸಂಸದರಿದ್ದಾರೆ. ಇತ್ತ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಟಿಡಿಪಿಯು ಬಿಜೆಪಿ ಜೊತೆ ಅಂತರ ಕಾಯ್ದುಕೊಂಡಿದೆ. ಮಸೂದೆ ವಿಚಾರದಲ್ಲಿ ಈ ಪಕ್ಷ ತನ್ನ ನಿಲುವು ಬದಲಿಸುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ (292)ದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಂಸತ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಸದಸ್ಯರು ಹಾಜರಾದರೆ ಬಿಜೆಪಿಗೆ ಹೆಚ್ಚುವರಿಯಾಗಿ 64 ಸಂಸದರ ಬೆಂಬಲ ಬೇಕಾಗುತ್ತದೆ.

    ಜೆಪಿಸಿ ರಚನೆ
    ಒಂದು ದೇಶ, ಒಂದು ಚುನಾವಣೆ ಮಸೂದೆ ಪರಾಮರ್ಶೆಗೆ 39 ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದಾರೆ. ಸಮಿತಿಯಲ್ಲಿ ಲೋಕಸಭೆಯ 27 ಹಾಗೂ ರಾಜ್ಯ ಸಭೆಯ 12 ಸದಸ್ಯರಿದ್ದಾರೆ. ಪ್ರಿಯಾಂಕಾ ಗಾಂಧಿ ಜೊತೆಗೆ ಪ್ರಮುಖರಾದ ಮನೀಶ್ ತೆವಾರಿ, ಧರ್ಮೇಂದ್ರ ಯಾದವ್, ಕಲ್ಯಾಣ್ ಬ್ಯಾನರ್ಜಿ, ಸುಪ್ರಿಯಾ ಸುಳೆ, ಶ್ರೀಕಾಂತ್ ಏಕನಾಥ್ ಶಿಂಧೆ, ಸಂಬಿತ್ ಪತ್ರಾ, ಅನಿಲ್ ಬಲುನಿ, ಅನುರಾಗ್ ಸಿಂಗ್ ಠಾಕೂರ್ ಇದ್ದಾರೆ.

    ಏನಿದು ಒಎನ್‌ಒಪಿ ಮಸೂದೆ?
    ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ. 2024ರಲ್ಲಿ ಲೋಕಸಭೆಯೊಂದಿಗೆ ನಾಲ್ಕು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಿತು. ಏಪ್ರಿಲ್-ಜೂನ್ ವರೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಿಗೆ ಹಾಗೂ ಅಕ್ಟೋಬರ್-ನವೆಂಬರ್ ವರೆಗೆ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಚುನಾವಣೆ ನಡೆಯಿತು. ಕಳೆದ ವರ್ಷ ಬೇರೆ ಬೇರೆ ತಿಂಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. 2025 ಕ್ಕೆ ದೆಹಲಿ ಮತ್ತು ಬಿಹಾರ ರಾಜ್ಯಗಳು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿವೆ.

    ಮಸೂದೆ ಬಗ್ಗೆ ಬಿಜೆಪಿ ನಿಲುವೇನು?
    ಭಾರತ ಪ್ರತಿ ವರ್ಷ ಚುನಾವಣೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇದರಿಂದ ಭಾರೀ ಹಣ ಖರ್ಚಾಗುತ್ತಿದೆ. ಜೊತೆಗೆ ಪ್ರತಿ ವರ್ಷ ಚುನಾವಣೆಗೆ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಅಗತ್ಯ ಎಂಬುದನ್ನು ಬಿಜೆಪಿ ಒತ್ತಿ ಹೇಳಿದೆ.

    ವಿಪಕ್ಷಗಳ ವಿರೋಧ ಯಾಕೆ?
    ಈ ಮಸೂದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅಲ್ಲದೇ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ. ಪ್ರಸ್ತಾವಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಹೊಸ ಸರ್ಕಾರಗಳ ಅವಧಿ ಕೂಡ ಇದರಿಂದ ಮೊಟಾಗುತ್ತದೆ ಎಂಬುದು ವಿಪಕ್ಷಗಳ ನಿಲುವು.

    ಒಎನ್‌ಒಪಿ ಹೊಸ ಪದ್ಧತಿಯೇ?
    ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇನು ಹೊಸಪದ್ಧತಿಯಲ್ಲ. ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕಾರ ಆದ ಬಳಿಕ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆದಿದ್ದವು. 1951 ರಿಂದ 1967ರ ಅವಧಿ ವರೆಗೂ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಏಕಕಾಲದಲ್ಲೇ ನಡೆದಿವೆ. ಆ ಬಳಿಕ ರಾಜ್ಯ ವಿಧಾನಸಭೆಗಳ ವಿಸರ್ಜನೆ, ಲೋಕಸಭೆ ವಿಸರ್ಜನೆ, ತುರ್ತು ಪರಿಸ್ಥಿತಿ ಮೊದಲಾದ ಬೆಳವಣಿಗೆಗಳಿಂದಾಗಿ ಏಕಕಾಲದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಅದೇ ಪದ್ಧತಿಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ.

  • NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

    NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

    – ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಪ್ರಮಾಣದಲ್ಲಿ 239% ಏರಿಕೆ

    ನವದೆಹಲಿ: ಕಾಂಗ್ರೆಸ್‌ (Congress) ಹಾಗೂ ಅದರ ಮಿತ್ರಪಕ್ಷಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಅಂಕಿ ಅಂಶಗಳನ್ನು ನೋಡಿದರೆ ಎನ್‌ಡಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಅನುದಾನವನ್ನು ರಾಜ್ಯಗಳಿಗೆ ನೀಡಿದೆ ಎಂದು ಗೊತ್ತಾಗುತ್ತದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ (Dr K Sudhakar) ಪ್ರತಿಪಾದಿಸಿದ್ದಾರೆ.

    ಲೋಕಸಭೆಯಲ್ಲಿ (Lok Sabha) ಪೂರಕ ಅನುದಾನಗಳ ಬೇಡಿಕೆ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ದೇಶದಲ್ಲೀಗ ತೆರಿಗೆ ಹಂಚಿಕೆಯಲ್ಲಿ (Tax sharing) ಅನ್ಯಾಯ ಎಂಬ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿವೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಎಲ್ಲ ರಾಜ್ಯಗಳಿಗೆ ಉತ್ತಮ ಸಹಕಾರ ನೀಡಿದೆ. ಯುಪಿಎ ಸರ್ಕಾರ ಇದ್ದಾಗ, ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ 30.5% ನಿಂದ 32% ಗೆ ಏರಿಕೆಯಾಗಿತ್ತು. ಎನ್‌ಡಿಎ ಅವಧಿಯಲ್ಲಿ ಇದು 40% ಗೆ ಏರಿಕೆಯಾಗಿದೆ. 2004-2014 ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 81,795 ಕೋಟಿ ರೂ. ತೆರಿಗೆ ಹಂಚಿಕೆಯಾಗಿದೆ. 2014-2024 ರ ಎನ್‌ಡಿಎ ಅವಧಿಯಲ್ಲಿ, 2.77 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆಯಾಗಿದೆ. ಅಂದರೆ ತೆರಿಗೆ ಹಂಚಿಕೆ ಪ್ರಮಾಣದಲ್ಲಿ 239% ಏರಿಕೆಯಾಗಿದೆ ಎಂದು ತಿಳಿಸಿದರು.

    2004-2014 ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂ. ಅನುದಾನ (Grant in Aid) ದೊರೆತಿದೆ. 2014-2024 ರ ಎನ್‌ಡಿಎ ಅವಧಿಯಲ್ಲಿ, 2.08 ಲಕ್ಷ ಕೋಟಿ ರೂ. ಅನುದಾನ ಸಿಕ್ಕಿದೆ. ಅಂದರೆ ಅನುದಾನ 243% ರಷ್ಟು ಏರಿಕೆ ಕಂಡಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಲಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಈ ನೀತಿಯನ್ನು ರದ್ದುಪಡಿಸಿದೆ. ಸರ್ಕಾರ ಹೊಸ ರಾಜ್ಯ ಶಿಕ್ಷಣ ನೀತಿ ತರಲಿದೆ ಎಂದು ಸ್ಪಷ್ಟನೆ ನೀಡಿದ್ದರು, ಅಂತಹ ಯಾವುದೇ ನೀತಿ ಬಂದಿಲ್ಲ. ಇದು ಯುವಜನರಿಗೆ ಕಾಂಗ್ರೆಸ್‌ ನೀಡುವ ನ್ಯಾಯವೇ? ಎಂದು ಪ್ರಶ್ನೆ ಮಾಡಿದರು.

    ರೈತರಿಗೆ ನೆರವು:
    2013-2014ರ ಯುಪಿಎ ಅವಧಿಯಲ್ಲಿ ರೈತರಿಗೆ 7 ಲಕ್ಷ ಕೋಟಿ ರೂ.ವರೆಗೆ ಸಾಲ ನೀಡಲಾಗಿತ್ತು. 2023-24 ರ ಎನ್‌ಡಿಎ ಅವಧಿಯಲ್ಲಿ 19 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಕೋವಿಡ್‌ ಸಮಯದಲ್ಲಿ ರಸಗೊಬ್ಬರ ದರ ದಿಢೀರನೆ ಏರಿಕೆಯಾದರೂ ಪ್ರಧಾನಿ ನರೇಂದ್ರ ಮೋದಿ ಅದರ ಹೊರೆಯನ್ನು ರೈತರ ಮೇಲೆ ಹೇರಲಿಲ್ಲ. ಇಂದಿಗೂ ರಸಗೊಬ್ಬರ ದರ ಏರಿಕೆ ಕಂಡಿಲ್ಲ. ಕನಿಷ್ಠ ಬೆಂಬಲ ಬೆಲೆಯಡಿ ಯುಪಿಎ ಸರ್ಕಾರ ಕ್ವಿಂಟಾಲ್‌ ಭತ್ತಕ್ಕೆ 1,310 ರೂ. ನೀಡುತ್ತಿದ್ದು, ಈಗ 3,600 ರೂ. ನೀಡಲಾಗುತ್ತಿದೆ. ಇದೇ ರೀತಿ ಎಲ್ಲ ಧಾನ್ಯಗಳಿಗೆ ಹೆಚ್ಚು ದರ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

    ಯುಪಿಎ ಅವಧಿಯಲ್ಲಿ ರೈತರಿಗೆ ಬಜೆಟ್‌ನಲ್ಲಿ 22,000 ಕೋಟಿ ರೂ. ನೀಡುತ್ತಿದ್ದರೆ, ಮೋದಿ ಸರ್ಕಾರ ಆ ಮೊತ್ತವನ್ನು 2023-24 ರಲ್ಲಿ 1,22,000 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. 2013-2014 ರಲ್ಲಿ ರಸಗೊಬ್ಬರ ಸಹಾಯಧನ 73,000 ಕೋಟಿ ರೂ. ಆಗಿತ್ತು. ಅದನ್ನು 2023-24 ರಲ್ಲಿ ಮೋದಿ ಸರ್ಕಾರ 2.55 ಲಕ್ಷ ಕೋಟಿ ರೂ. ಗೆ ಏರಿಸಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಯೋಜನೆಗಳ ಜಾರಿ ಮೂಲಕ ಮಾತ್ರ ಸುಧಾರಣೆ ಸಾಧ್ಯವಾಗುತ್ತದೆ. ಎನ್‌ಡಿಎ ಅವಧಿಯಲ್ಲಿ ಕೃಷಿ ಬೆಳವಣಿಗೆ ದರ 3.4% ಗೆ ಏರಿದೆ. 9,000 ಕೃಷಿ ಸಂಘಗಳನ್ನು ಆರಂಭಿಸಲಾಗಿದೆ. ಈ ಕ್ರಮಗಳು ರೈತ ಸಮುದಾಯವನ್ನು ಸಬಲೀಕರಣಗೊಳಿಸಿದೆ ಎಂದು ಹೇಳಿದರು.

    ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಬಡವರಿಗೆ ಅನ್ಯಾಯ ಮಾಡಿ, ಶ್ರೀಮಂತರಿಗೆ ನೆರವಾಗಿದೆ. ಆದರೆ ಬಿಜೆಪಿ ಅವಧಿಯಲ್ಲಿ ಆಡಳಿತವನ್ನು ಬೃಹತ್‌ ಭ್ರಷ್ಟಾಚಾರದಿಂದ ಬೃಹತ್‌ ಯೋಜನೆಗಳ ಕಡೆಗೆ ತಿರುಗಿಸಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಭದ್ರ ಅಡಿಪಾಯ ಹಾಕಿದೆ ಎಂದರು.

    ಇದು ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಕುರಿತು ಹೊಂದಿರುವ ಬದ್ಧತೆ. ಬಜೆಟ್‌ ಅವಧಿಯನ್ನು 2017-18 ರಿಂದ ಫೆಬ್ರವರಿ ಮೊದಲ ದಿನಕ್ಕೆ ಬದಲಾಯಿಸಿರುವುದರಿಂದ ರಾಜ್ಯಗಳು ಇದಕ್ಕೆ ಪೂರಕವಾಗಿ ಬಜೆಟ್‌ ರೂಪಿಸಬಹುದು. ಈ ಸುಧಾರಣೆಯಿಂದಾಗಿ ಯೋಜನೆಗಳಿಗೆ ಅನುದಾನ ನಿಗದಿ, ಕೇಂದ್ರ ಸರ್ಕಾರಿ ಯೋಜನೆಗಳ ಜಾರಿ, ಅಗತ್ಯತೆಗಳ ಗುರುತಿಸುವಿಕೆ, ಮೊದಲಾದ ಸಂಗತಿಗಳಲ್ಲಿ ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದರು.

    ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ಜಾಗತಿಕ ಸವಾಲುಗಳಿದ್ದರೂ ಅವರು ಸಮರ್ಥ ಸಚಿವರು ಎಂದು ತೋರಿಸಿಕೊಟ್ಟಿದ್ದಾರೆ. ಉತ್ತಮ ಆರ್ಥಿಕ ಸಚಿವರಾಗಲು ಹೃದಯ ಮತ್ತು ಬುದ್ಧಿ ಬೇಕಿದ್ದು, ಅಂತಹ ಸಾಮರ್ಥ್ಯವನ್ನು ನಿರ್ಮಲಾ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

    ಸಮಾಧಾನ್‌ ಪೋರ್ಟಲ್‌ ಬಗ್ಗೆ ಪ್ರಶ್ನೆ :
    ಕೈಗಾರಿಕಾ ವಿವಾದ ಮತ್ತು ದೂರುಗಳ ವಿಲೇವಾರಿಗಾಗಿ ಸ್ಥಾಪಿಸಲಾಗಿರುವ ಸಮಾಧಾನ್ ಪೋರ್ಟಲ್ ಅನ್ನು ರಾಜ್ಯ/ಪ್ರಾದೇಶಿಕ ಮಟ್ಟದ ವ್ಯವಸ್ಥೆಗಳೊಂದಿಗೆ ಸಮನ್ವಯಗೊಳಿಸಿ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಾಧಾನ್ ಪೋರ್ಟಲ್‌ ಸೇವೆ ಸಿಗುವಂತೆ ಮಾಡುವ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯ ಅವರಿಗೆ ಸಂಸದ ಡಾ.ಕೆ.ಸುಧಾಕರ್‌ ಪ್ರಶ್ನೆ ಕೇಳಿದರು.

    ದೇಶದ ಒಟ್ಟು ಕಾರ್ಮಿಕರಲ್ಲಿ, ಅಸಂಘಟಿತ ವಲಯದ ಕಾರ್ಮಿಕರ ಪ್ರಮಾಣ 80% ರಷ್ಟಿದೆ. ಈ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಸಮಾಧಾನ್‌ ಪೋರ್ಟಲ್‌ ಬಳಸುವ ಹೊಸ ವ್ಯವಸ್ಥೆ ತರಬಹುದೇ? ಜೊತೆಗೆ ಇ-ಶ್ರಮ ಹಾಗೂ ಸಮಾಧಾನ್‌ ಪೋರ್ಟಲ್‌ ಒಂದಾಗಿ ಕೆಲಸ ಮಾಡುವಂತೆ ನವೀಕರಣ ಮಾಡಬಹುದೇ ಎಂದು ಅವರು ಪ್ರಶ್ನೆ ಮಾಡಿದರು.

    ಅಸಂಘಟಿತ ವಲಯದ 30 ಕೋಟಿಗೂ ಅಧಿಕ ಕಾರ್ಮಿಕರು ಇ-ಶ್ರಮ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಅವರು ಕೂಡ ಸಮಾಧಾನ್‌ ಪೋರ್ಟಲ್‌ನಲ್ಲಿ ಅಹವಾಲು ಸಲ್ಲಿಸಬಹುದು ಎಂದು ಸಚಿವರು ಉತ್ತರಿಸಿದರು.

  • ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ವಿಜಯ – ಎನ್‌ಡಿಎ ಮೈತ್ರಿಕೂಟ ಪ್ರಮಾಣ ವಚನ ನಾಳೆ?

    ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ವಿಜಯ – ಎನ್‌ಡಿಎ ಮೈತ್ರಿಕೂಟ ಪ್ರಮಾಣ ವಚನ ನಾಳೆ?

    ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಸಾಧಿಸಲು ಮುಂದಾಗಿದೆ. ಪ್ರಮಾಣ ವಚನ ಸಮಾರಂಭ ನಾಳೆ ನಡೆಯುವ ಸಾಧ್ಯತೆ ಇದೆ.

    ಶಿವಸೇನೆಯ ಏಕನಾಥ್ ಶಿಂಧೆ ಬಣದ ಹಿರಿಯ ಸಚಿವ ದೀಪಕ್ ಕೇಸರ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಮತ್ತು ಡಿಸಿಎಂ ಮಾತ್ರ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಯಾರ‍್ಯಾರು ಸಂಪುಟ ಸೇರುತ್ತಾರೆ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.

    ಶಿಂಧೆ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ಯಾರಿಗೆ ಈ ಬಾರಿ ಉನ್ನತ ಸ್ಥಾನ ಸಿಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.

    ಒಟ್ಟು 288 ಸ್ಥಾನಗಳಲ್ಲಿ ಮಹಾಯುತಿ 235 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

  • ಜಾರ್ಖಂಡ್‌ನಲ್ಲಿ ಮತ್ತೆ ಜೆಎಂಎಂಗೆ ಪಟ್ಟ – ಪಕ್ಷವಾರು ಫಲಿತಾಂಶ ಏನು?

    ಜಾರ್ಖಂಡ್‌ನಲ್ಲಿ ಮತ್ತೆ ಜೆಎಂಎಂಗೆ ಪಟ್ಟ – ಪಕ್ಷವಾರು ಫಲಿತಾಂಶ ಏನು?

    ರಾಂಚಿ: ಆದಿವಾಸಿಗಳ ನಾಡು ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಿದೆ. ಇ.ಡಿ ಕೇಸ್, ಬಂಧನ, ಬಂಡಾಯ, ಆಪರೇಷನ್ ಕಮಲ.. ಎದುರಾಳಿಗಳ ನಾನಾ ವ್ಯೂಹ.. ಹೀಗೆ ಹಲವು ಸವಾಲುಗಳನ್ನು ಎದುರಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ, ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ವಿಜಯವನ್ನು ಸಾಧಿಸಿದೆ.

    ಬಂಟಿ ಔರ್ ಬಬ್ಲಿ ಖ್ಯಾತಿಯ ಹೇಮಂತ್ ಸೊರೆನ್-ಕಲ್ಪನಾ ಜೋಡಿ ಸೂಪರ್ ಮ್ಯಾಜಿಕ್ ಮಾಡಿದೆ. ರಾಜಕೀಯ ಅಸ್ಥಿರತೆಗೆ ಕೇರಾಫ್ ಅಡ್ರೆಸ್ ಆಗಿರುವ ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜೆಎಂಎಂ ಸ್ಪಷ್ಟವಾದ ಬಹುಮತ ಗಳಿಸಿ ಮತ್ತೊಮ್ಮೆ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ.

    ಇಲ್ಲಿ ವಲಸೆವಾದ.. ಇತರೆ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚುನಾವಣೆ ಮಾಡಿದ್ದ ಬಿಜೆಪಿ ವಿರುದ್ಧ ಜನಾದೇಶ ಬಂದಿದೆ. ಮಾಜಿ ಸಿಎಂ ಚಂಪೈ ಸೊರೆನ್, ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಪಕ್ಷಾಂತರ ಬಿಜೆಪಿಗೆ ವರವಾಗಲಿಲ್ಲ. ಎಸ್‌ಟಿ-ಎಸ್‌ಸಿ ಮೀಸಲು ಕ್ಷೇತ್ರಗಳು ಜೆಎಂಎಂ ಮೈತ್ರಿಕೂಟದ ಕೈ ಹಿಡಿದಿವೆ.

    ಜಾರ್ಖಂಡ್ ಫಲಿತಾಂಶ (81)
    * ಐಎನ್‌ಡಿಐಎ- 56 (46)
    * ಎನ್‌ಡಿಎ – 24 (25)
    * ಇತರೆ – 01 (10)

    ಪಕ್ಷವಾರು ಫಲಿತಾಂಶ
    * ಜೆಎಂಎಂ – 34 (23.45%) (43 ರಲ್ಲಿ ಸ್ಪರ್ಧೆ)
    * ಕಾಂಗ್ರೆಸ್ – 16 (15.50%) (30 ರಲ್ಲಿ ಸ್ಪರ್ಧೆ)
    * ಬಿಜೆಪಿ – 21 (33.20%)
    * ಇತರೆ – 8 (28%)

  • ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ರಾಮನಗರ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

    ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ ಎಂದು ಹೇಳಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ


    ರಾಜ್ಯದಲ್ಲಿ 3 ಕ್ಷೇತ್ರದ ಉಪಚುನಾವಣೆಗಳಲ್ಲಿ (ByElection) ಚನ್ನಪಟ್ಟಣ (Channapatna) ಬಹುನಿರೀಕ್ಷೆಯ ಚುನಾವಣೆ ಆಗಿತ್ತು. ಉಪಚುನಾವಣೆಯಲ್ಲಿ ಕೊನೆಹಂತದ ತೀರ್ಮಾನಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ಎನ್‌ಡಿಎ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದೆ. ಚುನಾವಣೆಯ ಫಲಿತಾಂಶ ಎಲ್ಲರಿಗೂ ಆಘಾತ ತಂದುಕೊಟ್ಟಿದೆ. ಕೊನೆಯ ಹಂತದ ಬೆಳವಣಿಗೆಯಲ್ಲಿ ಕಳೆದ 18 ದಿನದಲ್ಲಿ ಪ್ರತಿ ಹಳ್ಳಿಯಲ್ಲೂ ಎಲ್ಲರೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಸುಮಾರು 87 ಸಾವಿರ ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ತೀರ್ಮಾನ, ತೀರ್ಪು ತೆಗೆದುಕೊಳ್ಳುವ ಹಕ್ಕು ಇರುವುದು ಜನರಿಗೆ, ಮತದಾರರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.

    ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.

    ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

  • ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.

    ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

    ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.

    ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ.

    ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್‌ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.

  • ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra Election) ಮತ ಎಣಿಕೆಯಲ್ಲಿ ಎನ್‌ಡಿಎಗೆ (NDA) ಆರಂಭಿಕ ಮುನ್ನಡೆ ಸಿಕ್ಕಿದೆ.

    ಅಂಚೆ ಮತಗಳಲ್ಲಿ ಎನ್‌ಡಿಎ 84  ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಮಹಾವಿಕಾಸ್‌ ಅಘಾಡಿ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

    ಒಟ್ಟು 288 ಕ್ಷೇತ್ರಗಳು ಮಹಾರಾಷ್ಟ್ರದಲ್ಲಿದ್ದು ಸರಳ ಬಹುಮತ 145 ಸ್ಥಾನಗಳ ಅಗತ್ಯವಿದೆ. ಈ ಬಾರಿ 62.05% ಮತದಾನ ನಡೆದಿದೆ.

    ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬುತ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ.

  • ಮಣಿಪುರದಲ್ಲಿ ಬಿರೇನ್‌ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು

    ಮಣಿಪುರದಲ್ಲಿ ಬಿರೇನ್‌ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು

    ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ (Manipura) ಬಿರೇನ್ ಸಿಂಗ್ ನೇತೃತ್ವದ ಎನ್‌ಡಿಎ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ (Biren Singh) ಅವರ ವಿರುದ್ಧವೇ ಪಕ್ಷದೊಳಗೆ ಅಸಮಾಧಾನ ಬಹಿರಂಗವಾಗಿಯೇ ಸ್ಫೋಟಗೊಂಡಿದೆ.

    ಎನ್‌ಡಿಎಗೆ ನೀಡಿದ್ದ ಬೆಂಬಲವನ್ನು ಎನ್‌ಪಿಪಿ (NPP) ಹಿಂಪಡೆದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಬಿರೇನ್‌ ಸಿಂಗ್‌ ಕರೆದಿದ್ದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ 27 ಮಂದಿ ಹಾಜರಾಗಿದ್ದರೆ 19 ಮಂದಿ ಗೈರಾಗಿದ್ದರು. ಈ ಪೈಕಿ ಬಿಜೆಪಿಯ 37 ಶಾಸಕರ ಪೈಕಿ 17 ಮಂದಿ ಗೈರಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    19ರಲ್ಲಿ 7 ಶಾಸಕರು ವೈದ್ಯಕೀಯ ಕಾರಣ ಹೇಳಿ ಗೈರು ಹಾಜರಾದರೆ ಉಳಿದ 12 ಜನ ಹೇಳದೇ ಕೇಳದೇ ಗೈರು ಹಾಜರಾಗಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ 7 ಮಂದಿ ಶಾಸಕರು ಮಣಿಪುರವನ್ನೇ ತೊರೆದಿದ್ದಾರೆ. ಸಭೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಣಿಪುರ | ಉದ್ರಿಕ್ತರಿಗೆ ಹೆದರಿ ಬಂಕರ್‌ ನಿರ್ಮಿಸಿಕೊಂಡ ಸಚಿವ!

    ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಸರ್ಕಾರ ಉಳಿಯುತ್ತಾ? ಅಥವಾ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಹೈಕಮಾಂಡ್‌ ನಾಯಕರು ಇಲ್ಲಿಯವರೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣೆಯಲ್ಲಿ ಬ್ಯುಸಿ ಇದ್ದ ಕಾರಣ ಮಣಿಪುರ ಸರ್ಕಾರದ ವಿಚಾರಕ್ಕೆ ತಲೆ ಹಾಕಿರಲಿಲ್ಲ. ಇಂದು ಚುನಾವಣೆ ಮುಗಿದ ಬಳಿಕ ಬಿಜೆಪಿ ಹೈಕಮಾಂಡ್‌ ಮಣಿಪುರ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

    ಸಿಎಂ ಬಿರೇನ್‌ ಸಿಂಗ್‌ ಕಾರ್ಯವೈಖರಿಗೆ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ 10 ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.

    ಒಟ್ಟು 60 ಮಂದಿ ಶಾಸಕರ ಬಲವನ್ನು ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಎನ್‌ಡಿಎ ಶಾಸಕರ ಸಂಖ್ಯೆ 46 ಇದೆ. ಈ ಪೈಕಿ ಬಿಜೆಪಿ 37, ನಾಗಾ ಪೀಪಲ್ಸ್‌ ಫ್ರಂಟ್‌ 5, ಮೂವರು ಪಕ್ಷೇತರರು, ಜೆಡಿಯು 1 ಸ್ಥಾನವನ್ನು ಹೊಂದಿದೆ.

    14 ಸ್ಥಾನಗಳನ್ನು ವಿಪಕ್ಷಗಳು ಹೊಂದಿವೆ. ಎನ್‌ಪಿಪಿ 7, ಕಾಂಗ್ರೆಸ್‌ 5. ಕೆಪಿಎ 2 ಸ್ಥಾನವನ್ನು ಗಳಿಸಿದೆ. ಬಹುಮತಕ್ಕೆ 31 ಶಾಸಕರ ಸಂಖ್ಯೆ ಬೇಕಾಗಿರುವ ಕಾರಣ ಸದ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ.

     

  • ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ರೂ ಗೆಲ್ಲೋದು ಎನ್‌ಡಿಎ: ಪ್ರಹ್ಲಾದ್ ಜೋಶಿ ಭವಿಷ್ಯ

    ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ರೂ ಗೆಲ್ಲೋದು ಎನ್‌ಡಿಎ: ಪ್ರಹ್ಲಾದ್ ಜೋಶಿ ಭವಿಷ್ಯ

    ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ (Karnataka Bypolls) ಕಾಂಗ್ರೆಸ್ (Congress) ʻಟೋಕನ್ʼ ಮೊರೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಶತಾಯ ಗತಾಯ ಉಪ ಚುನಾವಣೆ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ. ಟೋಕನ್ ಹಂಚಿದ ಕಾಂಗ್ರೆಸ್ ಅದನ್ನು ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾದ್ಯಮಗಳಲ್ಲಿ ವರದಿಯಾಗಿದೆ. ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದ್ದಾರೆ.

    ರಾಜ್ಯದಲ್ಲಿ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲೋದು ನಾವೇ ಎಂದು ಅವರು ಭವಿಷ್ಯ ನುಡಿದಿದ್ದಾರೆ.

    ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರದ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಎಂಎಲ್‌ಸಿ ರವಿಕುಮಾರ್, ಸೀಮಾ ಮಸೂತಿ ಉಪಸ್ಥಿತರಿದ್ದರು.