Tag: nda

  • ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

    ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

    ನವದೆಹಲಿ: ರಾಮನಾಥ್ ಕೋವಿಂದ್ ಅವರನ್ನು ದೇಶದ ಪ್ರಥಮ ಪ್ರಜೆಯನ್ನಾಗಿ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.

    ಹೌದು. 2007ರಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮಾಡಿ ಸೋನಿಯಾ ಗಾಂಧಿ ವಿಪಕ್ಷಗಳಿಗೆ ಶಾಕ್ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಎನ್‍ಡಿಎ ಮಿತ್ರಪಕ್ಷ ಶಿವಸೇನೆ ಪ್ರತಿಭಾ ಪಾಟೀಲ್ ಮರಾಠಿ ಸಮುದಾಯದವರು ಎಂದು ಹೇಳಿ ಬೆಂಬಲ ನೀಡಿತ್ತು. ಮೊದಲ ಮಹಿಳಾ ರಾಷ್ಟ್ರಪತಿ ಎನ್ನುವ ಕಾರಣಕ್ಕಾಗಿ ಹಲವು ಪಕ್ಷಗಳು ಯುಪಿಎಯನ್ನು ಬೆಂಬಲಿಸಿತ್ತು.

    ಈಗ ಮೋದಿ ಕೂಡ ಸೋನಿಯಾ ಅವರ ತಂತ್ರವನ್ನೇ ಅವರ ಮೇಲೆ ಪ್ರಯೋಗಿಸಿ ಯುಪಿಎ ಮೈತ್ರಿಕೂಟದ ಮತವನ್ನು ಪಡೆಯಲು ಮುಂದಾಗಿದ್ದು, ದಲಿತ ಅಭ್ಯರ್ಥಿಯನ್ನು ಇಳಿಸುವ ಮೂಲಕ ವಿಪಕ್ಷಗಳಿಗೆ ಭರ್ಜರಿ ಹೊಡೆತ ಕೊಟ್ಟಿದ್ದಾರೆ.

    ಮೋದಿ ಮಾಸ್ಟರ್ ಸ್ಟ್ರೋಕ್ ಹೇಗೆ?
    ರಾಮನಾಥ್ ಅವರು ಕ್ಲೀನ್ ಇಮೇಜ್ ಹೊಂದಿರುವುದು ಬಿಜೆಪಿಗೆ ವರದಾನವಾಗಿದ್ದು, ದಲಿತ ಅಭ್ಯರ್ಥಿಯನ್ನ ವಿರೋಧಿಸಿದರೆ ಕಾಂಗ್ರೆಸ್ ಗೆ ಮತ್ತಷ್ಟು ನಷ್ಟ ಗ್ಯಾರಂಟಿ ಎಂದೇ ವಿಶ್ಲೇಷಿಸಲಾಗುತ್ತದೆ. ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ದಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಂದಾಗಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಹರಿದಾಡುತಿತ್ತು. ಈಗ ದಲಿತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದ ಕಾರಣ ಕಾಂಗ್ರೆಸ್ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಎದ್ದಿದೆ.

    ಕೋವಿಂದ್ ಪಕ್ಕಾ ಆರೆಸ್ಸಿಸಿಗ ಆಗಿರುವ ಕಾರಣ ಸಂಘ ಪರಿವಾರವೂ ಈ ಆಯ್ಕೆಯನ್ನು ವಿರೋಧಿಸುವುದಿಲ್ಲ. ಹೀಗಾಗಿ ಮೋದಿಯ ಈ ಆಯ್ಕೆಗೆ ಆರ್‍ಎಸ್‍ಎಸ್ ವಲಯದಲ್ಲೂ ಒಪ್ಪಿಗೆಯ ಮುದ್ರೆ ಸಿಕ್ಕಿದೆ.

    ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳು ದೇಶದಲ್ಲೇ ಹೆಚ್ಚು ಇರುವುದು ಉತ್ತರಪ್ರದೇಶದಲ್ಲಿ. ರಾಮನಾಥ್ ಅವರು ಉತ್ತರ ಪ್ರದೇಶ ಮೂಲದವರಾಗಿರುವ ಕಾರಣ ಈ ರಾಜ್ಯದ ಪ್ರಬಲ ಪಕ್ಷಗಳಾದ ಬಿಎಸ್‍ಪಿ ಮತ್ತು ಎಸ್‍ಪಿಗೆ ಧರ್ಮ ಸಂಕಟ ಎದುರಾಗಿದೆ. ಅಷ್ಟೇ ಅಲ್ಲದೇ ಉತ್ತರಪ್ರದೇಶದಲ್ಲಿ ದಲಿತರ ಸಂಖ್ಯೆಯೇ ಹೆಚ್ಚು. ಒಂದು ವೇಳೆ ವಿರೋಧಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಪಕ್ಷಗಳ ವಿರುದ್ಧವೇ ಇದೇ ವಿಚಾರವನ್ನು ಹಿಡಿದುಕೊಂಡು ರಾಜ್ಯದ ದಲಿತ ಅಭ್ಯರ್ಥಿಯನ್ನು ನೇಮಿಸಲು ವಿರೋಧಿಸಿತ್ತು ಎಂದು ಪ್ರಚಾರ ನಡೆಸಲೂಬಹುದು. ಹೀಗಾಗಿ ಈ ಎರಡು ಪಕ್ಷಗಳು ಕೋವಿಂದ್ ಅವರನ್ನು ವಿರೋಧಿಸುವ ಸಾಧ್ಯತೆ ಕಡಿಮೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಕೋವಿಂದ್ ಅವರ ಹೆಸರು ಪ್ರಕಟವಾದ ಬಳಿಕ ಮಾಯಾವತಿ ಮಾತನಾಡಿದ್ದು, ರಾಷ್ಟ್ರಪತಿ ಅಭ್ಯರ್ಥಿ ದಲಿತರಾಗಿದ್ದರೆ ಅವರನ್ನು ನಾವು ವಿರೋಧಿಸುವುದಿಲ್ಲ, ರಾಮನಾಥ್ ಅವರು ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದು ಎನ್‍ಡಿಎಗೆ ಪ್ಲಸ್ ಪಾಯಿಂಟ್ ಆಗಿದೆ.

    ಬಿಹಾರದಲ್ಲೂ ದಲಿತರೇ ಹೆಚ್ಚು ಇರುವ ಕಾರಣ ಆರ್‍ಜೆಡಿ ವಿರೋಧಿಸುತ್ತಾ ಅಥವಾ ಬೆಂಬಲಿಸುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಮನಾಥ್ ಕೋವಿಂದ್ ಆಯ್ಕೆಯನ್ನು ಸ್ವಾಗತಿಸಿ, ರಾಜ್ಯಪಾಲರಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ. ಆದರೆ ಎನ್‍ಡಿಎ ಈ ನಿರ್ಧಾರವನ್ನು ಬೆಂಬಲಿಸಬೇಕೇ ಎನ್ನುವುದನ್ನು ಈಗಲೇ ಹೇಳಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲ ತಿಂಗಳಿನಿಂದ ನಿತೀಶ್ ಮತ್ತು ಮೋದಿ ಸಂಬಂಧ ಉತ್ತಮವಾಗಿ ಇರುವ ಕಾರಣ ಜೆಡಿಯು ಎನ್‍ಡಿಎ ನಿರ್ಧಾರವನ್ನು ವಿರೋಧಿಸಲಾರದು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

     

    ಒಂದು ವೇಳೆ ಮಿತ್ರಪಕ್ಷಗಳ ಸಹಕಾರವನ್ನು ಪಡೆದು ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ರಾಷ್ಟ್ರಪತಿಯನ್ನಾಗಿ ನೇಮಿಸಿದರೆ ಕೆ.ಆರ್.ನಾರಾಯಣ್ ಬಳಿಕ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ವ್ಯಕ್ತಿ ಇವರಾಗಲಿದ್ದಾರೆ. ಈ ಮೂಲಕ ದೇಶದ ದಲಿತ ಸಮುದಾಯದ ಮತ ಬ್ಯಾಂಕ್‍ಗೆ ಮೋದಿ ಗಾಳ ಹಾಕಿದ್ದು, ಇದು 2019ರ ಲೋಕಸಭಾ ಚುನಾವಣೆ ವೇಳೆ ಎನ್‍ಡಿಎಯತ್ತ ದಲಿತರನ್ನು ಸೆಳೆಯಲು ಭಾರೀ ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತದೆ.

    ಕಲಬುರಗಿಗೆ ಇದೆ ಸಂಬಂಧ: ರಾಮನಾಥ ಕೋವಿಂದ್ ಅವರಿಗೂ ಕಲಬುರಗಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ರಾಮನಾಥ ಅವರು ಕಲಬುರಗಿಗೆ ದಶಕಗಳಿಂದ ಹಲವು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ಪಕ್ಷ ಸಂಘಟನೆ ಜೊತೆಗೆ ಕೋಳಿ ಸಮಾಜದ ಸಂಘಟನೆಗೂ ಸಹ ರಾಮನಾಥ ಒತ್ತು ನೀಡಿದ್ದರು. ಇದೀಗ ಅವರೇ ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದು   ಸಮುದಾಯದ ಜನರಲ್ಲಿ ಸಂತಸ ತಂದಿದೆ.

    ರಾಮನಾಥ್ ಕೋವಿಂದ್ ಯಾರು?
    ಬಿಹಾರದ ಹಾಲಿ ರಾಜ್ಯಪಾಲರಾಗಿರುವ ರಾಮನಾಥ್ ಕೋವಿಂದ್, ಉತ್ತರಪ್ರದೇಶದ ಕಾನ್ಪುರದ ದೆರಾಪುರ್‍ನಲ್ಲಿ ಅಕೋಬರ್ 1, 1945ರಲ್ಲಿ ಜನಿಸಿದರು. ಕಾನ್ಪುರ ವಿವಿಯಿಂದ ವಾಣಿಜ್ಯ ಮತ್ತು ಕಾನೂನು ಪದವಿ ಪಡೆದ ಇವರು 1971ರಿಂದ ದೆಹಲಿಯಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.

    1977-79ರಲ್ಲಿ ದೆಹಲಿ ಹೈಕೋರ್ಟ್‍ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದ ಇವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 1978ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು. 1980-93ರವರೆಗೆ ಸುಪ್ರೀಂಕೋರ್ಟ್‍ನಲ್ಲಿ ಕೇಂದ್ರ ಸರ್ಕಾರದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದರು.

    ಕರ್ನಾಟಕದ ಕಲಬುರಗಿ ಜಿಲ್ಲೆಯ ದಲಿತ ಪ್ರಕರಣದಲ್ಲೂ ವಾದ ಮಂಡಿಸಿದ್ದ ಕೋವಿಂದ್ ಹಲವು ಸಂಸದೀಯ ಸಮಿತಿಗಳಲ್ಲಿ ಸೇವೆ, ಬಿಜೆಪಿ ವಕ್ತಾರ ಹುದ್ದೆಯನ್ನು ನಿಭಾಯಿಸಿದ್ದರು. ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಇವರು 1990ರಲ್ಲಿ ಘಾಟಂಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 1994ರಿಂದ 2006ರವರೆಗೆ ಎರಡು ಬಾರಿ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2015ರ ಆಗಸ್ಟ್ 8 ರಂದು ಬಿಹಾರ ರಾಜ್ಯಪಾಲರಾಗಿ ಮೋದಿ ಸರ್ಕಾರ ರಾಮನಾಥ್ ಕೋವಿಂದ್ ಅವರನ್ನು ನೇಮಿಸಿತು.

  • ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ

    ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ

    ನವದೆಹಲಿ: ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧಾರ ಕೈಗೊಂಡಿದೆ.

    ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆ ಸಂಬಂಧ ಬಿಜೆಪಿ ಸಂಸದೀಯ ಸಮಿತಿಯ ಸಭೆ ಸೋಮವಾರ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಮಿತ್ ಷಾ, ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ನಿರ್ಧಾರವನ್ನು ಮಿತ್ರ ಪಕ್ಷಗಳು ಬೆಂಬಲಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

    ಯಾರು ರಾಮನಾಥ್ ಕೋವಿಂದ್?
    ಉತ್ತರಪ್ರದೇಶದ ಕಾನ್ಪುರದ ದಿಹಾಟ್ ಎಂಬಲ್ಲಿ 1945 ಅಕ್ಟೋಬರ್ 1ರಂದು ರಾಮನಾಥ್ ಕೋವಿಂದ್ ಜನಿಸಿದ್ದು, ಕಾನ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಕಾಂ, ಎಲ್ಎಲ್ ಬಿ ಪದವಿ ಪಡೆದಿದ್ದಾರೆ. 1977 ರಿಂದ 1979ರವರೆಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. 1980ರಿಂದ 1993ರವರೆಗೆ ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 1994ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಇವರು 12 ವರ್ಷಗಳ ಕಾಲ ಸಂಸದರಾಗಿದ್ದರು.

    ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

  • ರಾಷ್ಟ್ರಪತಿ ಹುದ್ದೆಗೆ ಡಾ. ವೀರೇಂದ್ರ ಹೆಗ್ಗಡೆ ಹೆಸರು – ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ

    ರಾಷ್ಟ್ರಪತಿ ಹುದ್ದೆಗೆ ಡಾ. ವೀರೇಂದ್ರ ಹೆಗ್ಗಡೆ ಹೆಸರು – ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ

    ನವದೆಹಲಿ: ಮುಂದಿನ ತಿಂಗಳು ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿರುವ ಬೆನ್ನಲ್ಲೇ ಕರ್ನಾಟಕದವರಿಗೆ ಈ ಪಟ್ಟ ಒಲಿಯಬಹುದು ಅನ್ನೋ ಸುದ್ದಿ ಹಬ್ಬಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರನ್ನು ಎನ್‍ಡಿಎ ತನ್ನ ಅಭ್ಯರ್ಥಿಯಾಗಿ ಪರಿಗಣಿಸಬಹುದು ಅನ್ನೋ ಮಾತು ಕೇಳಿಬಂದಿದೆ.

    ಭಾನುವಾರವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನೊಳಗೊಂಡ ಮೂವರ ಸಮಿತಿಯನ್ನು ರಚಿಸಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಂಬಂಧ ವಿಪಕ್ಷಗಳು ಸೇರಿದಂತೆ ಸರ್ವಪಕ್ಷಗಳ ಜೊತೆಗೆ ಚರ್ಚಿಸಿ ಒಮ್ಮತ ಮೂಡಿಸುವ ಜವಾಬ್ದಾರಿ ನೀಡಲಾಗಿದೆ.

    ಇತ್ತ ಬುಧವಾರದಂದು ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸಭೆ ನಡೆಸಲಿವೆ. ಅಲ್ಲೂ ಅಭ್ಯರ್ಥಿ ಆಯ್ಕೆಗಾಗಿ 10 ಮಂದಿ ಸದಸ್ಯರ ಉಪ ಸಮಿತಿಯನ್ನು ರಚಿಸಲಾಗಿದೆ. ಜುಲೈ 17ರಂದು ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಜೂನ್ 28ರೊಳಗೆ ನಾಮಪತ್ರ ಸಲ್ಲಿಸಬೇಕು. ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 25ರಂದು ಹೊಸ ರಾಷ್ಟ್ರಪತಿಯ ಯುಗಾರಂಭವಾಗಲಿದೆ.

  • ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ನವದೆಹಲಿ: ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ 15ನೇ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದರು.

    ಯಾವ ದಿನ ಏನು?
    ಜೂನ್ 14: ರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆ
    ಜೂನ್ 28: ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ
    ಜೂನ್ 29: ನಾಮಪತ್ರಗಳ ಪರಿಶೀಲನೆ
    ಜುಲೈ 1: ನಾಮಪತ್ರ ವಾಪಸ್ ಪಡೆಯಲು ಅವಕಾಶ
    ಜುಲೈ 17: ರಾಷ್ಟ್ರಪತಿ ಹುದ್ದೆಗೆ ಮತದಾನ
    ಜುಲೈ 20: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ
    ಜುಲೈ 24: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಅಂತ್ಯ
    ಜುಲೈ 25: 15ನೇ ರಾಷ್ಟ್ರಪತಿಯ ಅಧಿಕಾರಾವಧಿ ಆರಂಭ

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ..?
    ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.

    ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.

    ಮತ ಲೆಕ್ಕಾಚಾರ ಹೇಗೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

    ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
    1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
    ಕರ್ನಾಟಕದ ಶಾಸಕರ ಮತಮೌಲ್ಯ = 131
    ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

    ಬೇರೆ ರಾಜ್ಯದಲ್ಲಿ ಎಷ್ಟು?
    ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

    ಸಂಸದರ ಮತ ಮೌಲ್ಯ ಎಷ್ಟು?
    ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
    ಸಂಸದರ ಮತ ಮೌಲ್ಯ : 5,49,474/776 = 708

    ಅಭ್ಯರ್ಥಿ ಅಧಿಕೃತವಾಗಿಲ್ಲ:
    ಅತೀ ದೊಡ್ಡ ಕೂಟವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇನ್ನೂ ಕೂಡಾ ತನ್ನ ಅಭ್ಯರ್ಥಿಯನ್ನು ಅಧಿಕೃತಗೊಳಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಎನ್‍ಡಿಎಯೇತರ ಪಕ್ಷಗಳ ಸಭೆ ನಡೆದಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ. ಒಂದು ವೇಳೆ ಸಹಮತದ ಅಭ್ಯರ್ಥಿಯನ್ನು ಘೋಷಿಸಿದರೆ ಎನ್‍ಡಿಎ ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿವೆಯಾದರೂ ಇದುವರೆಗೆ ಅದರ ಸೂಚನೆ ಕಂಡುಬಂದಿಲ್ಲ. ಆದರೆ ಎನ್‍ಡಿಎ ಅಭ್ಯರ್ಥಿಗೆ ಕೇವಲ 20 ಸಾವಿರ ಮತಗಳ ಕೊರತೆಯಷ್ಟೇ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳಿಗೆ ವಿಪ್ ನೀಡುವಂತಿಲ್ಲ.

    ಬಲಾಬಲ ಹೇಗಿದೆ?
    ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882
    ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442

    ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10
    2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ)

    ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
    34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ)

    ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80
    60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ)

    ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
    50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)

  • ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಿಸಿರುವುದಕ್ಕೆ ಸಂತಸ, ರೈತರಿಗೆ ಹೊರೆ: ಹೆಚ್‍ಡಿಕೆ

    ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಿಸಿರುವುದಕ್ಕೆ ಸಂತಸ, ರೈತರಿಗೆ ಹೊರೆ: ಹೆಚ್‍ಡಿಕೆ

    ವಿಜಯಪುರ: ಕಸಾಯಿಖಾನೆಗಳಿಗೆ ಗೋವುಗಳ ಮಾರಾಟವನ್ನು ಕೆಂದ್ರ ಸರ್ಕಾರ ನಿಷೇಧ ಮಾಡಿದ್ದು, ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಜಯಪುರದಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರಿಂದ ರೈತರಿಗೆ ಹೊರೆಯಾಗಲಿದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ನಿಜವಾಗ್ಲೂ ಗೋ ರಕ್ಷಣೆ ಮಾಡುವ ಉದ್ದೇಶ ಇದ್ದಿದ್ದೇ ಆದರೆ, ಗೋ ಕೇಂದ್ರಗಳನ್ನು ತಗೆದು ರೈತರಿಗೆ ಸಲಹಲು ಆಗದ ಗೋವುಳನ್ನು ಸರ್ಕಾರ ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮ ತಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕರ್ನಾಟಕದ ಬಸ್ ಗಳ ಮೇಲೆ ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆಸುತ್ತಿರುವ ಪುಂಡಾಟಿಕೆ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೆ ಇದರಿಂದ ದಿನನಿತ್ಯ ಬಸ್ ನಲ್ಲಿ ಪ್ರಯಾಣಿಸುವವರು ಆತಂಕ ಪಡುವಂತಾಗಿದೆ. ಈ ಸಮಸ್ಯೆಯನ್ನು ಗನ್ ಹಿಡಿದು ಬಗೆಹರಿಸಲು ಸಾಧ್ಯವಿಲ್ಲ. ಸೌಹಾರ್ದಯುತವಾದ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆಯಿತ್ತರು.

    ಯಡ್ಡಿಯೂರಪ್ಪ ಪಕ್ಷದಲ್ಲಿ ಬರ ಬಂದಿದ್ದಕ್ಕೆ ಬರ ಪ್ರವಾಸ ಮಾಡುತ್ತಿದ್ದಾರೋ ಅಥವಾ ನಿಜವಾಗಲೂ ರೈತರಿಗಾಗಿ ಬರ ಪ್ರವಾಸ ಮಾಡುತ್ತಿದ್ದಾರೋ ಎಂದು ಜನರಿಗೆ ಸ್ಪಷ್ಟಪಡಿಸಬೇಕೆಂದು ಎಚ್‍ಡಿಕೆ ಅಗ್ರಹಿಸಿದರು.

  • ಮೊದಲು ಕಾಳ್ ಧನ್, ಕಾಳ್ ಧನ್ ಅಂತಿದ್ರು, ಈಗ ಜನ್ ಧನ್, ಡಿಜಿ ಜನ್ ಅಂತಿದ್ದಾರೆ: ಮೋದಿ

    ಮೊದಲು ಕಾಳ್ ಧನ್, ಕಾಳ್ ಧನ್ ಅಂತಿದ್ರು, ಈಗ ಜನ್ ಧನ್, ಡಿಜಿ ಜನ್ ಅಂತಿದ್ದಾರೆ: ಮೋದಿ

    ಗುವಾಹಟಿ:“ಸರ್ಕಾರ ಇದೆಯೋ ಇಲ್ವೋ ಎನ್ನುವ ಕಾಲವೊಂದಿತ್ತು. ಆ ವೇಳೆ ಜನರು ಕಾಳ್ ಧನ್, ಕಾಳ್ ಧನ್ ಅನ್ನುತಿದ್ದರು. ಆದರೆ ಈಗ ಜನ ಜನ್ ಧನ್, ಡಿಜಿ ಧನ್ ಅನ್ನುತ್ತಿದ್ದಾರೆ”

    – ಪ್ರಧಾನಿ ಮೋದಿ ಅವರು ತಮ್ಮ ಮೂರು ವರ್ಷದ ಅವಧಿಯಲ್ಲಿ ಕಪ್ಪು ಹಣವನ್ನು ಮಟ್ಟ ಹಾಕಿ ಹೊಸ ಯೋಜನೆಗಳನ್ನು ಜನರು ಹೇಗೆ ಹೇಳುತ್ತಿದ್ದಾರೆ ಎನ್ನುವುದನ್ನು ವಿವರಿಸಲು ಹೇಳಿದ್ದು ಹೀಗೆ.

    ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

    ನಾವು ಬಹಳಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡೆವು. ಈ ಕಠಿಣ ನಿರ್ಧಾರವನ್ನು ವಿರೋಧಿಸದೇ ನೀವು ನಮ್ಮನ್ನು ಬೆಂಬಲಿಸಿದ್ದೀರಿ. ನಿಮ್ಮ ಈ ಬೆಂಬಲದಿಂದಾಗಿ ನಮಗೆ ಕೆಲಸ ಮಾಡಲು ಶಕ್ತಿ ಬಂದಿದೆ. ನನ್ನ ವಿಶ್ವಾಸಕ್ಕೆ ಹೊಸ ಬಲ ಕೊಟ್ಟಿದೆ ಎಂದರು.

    ದೇಶದ ಎಲ್ಲ ಭಾಗಗಳನ್ನು ನಾವು ಗಮನಿಸುತ್ತೇವೆ ಎನ್ನುವುದನ್ನು ತಿಳಿಸಲು, ದೇಶದ ಮೂಲೆ ಮೂಲೆಯೂ ನಮಗೆ ದೆಹಲಿ ಎಂದ ಪ್ರಧಾನಿ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ಸ್ವತಃ ಮಳೆರಾಯನೂ ನಮಗೆ ಆಶೀರ್ವದಿಸಿದ್ದಾನೆ ಎಂದರು.

    2022ರ ವೇಳೆಗೆ ಸಂಪದ ಯೋಜನೆಯ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ಹಿಂದುಳಿದ ವರ್ಗಗಳ ಕೆನೆಪದರ ಮಿತಿ 8 ಲಕ್ಷಕ್ಕೆ ಹೆಚ್ಚಿಸುತ್ತೇನೆ. ನಾನು ಸಣ್ಣ ವ್ಯಕ್ತಿ. 1 ಕೋಟಿಗೂ ಅಧಿಕ ಕುಟುಂಬಗಳು ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಿದವು. ಸಂಕಷ್ಟಗಳ ನಡುವೆಯೇ ಹೆಗಲು ಕೊಟ್ಟಿದ್ದೀರಿ. ಪ್ರಾಮಾಣಿಕರಿಗೆ, ಬಡವರಿಗೆ ಬದುಕುವ ಸಮಯ ಬಂದಿದೆ ಎಂದು ಹೇಳಿದರು.

    3 ವರ್ಷದಲ್ಲಿ ಒಂದು ದಿನವೂ ಸುಮ್ಮನಿರಲಿಲ್ಲ ನಾನು ತಿಂಗಳುಗಟ್ಟಲೆ ಹೊಸ ಹೊಸ ಕೆಲಸಗಳ ಬಗ್ಗೆ ಮಾತನಾಡಬಲ್ಲೆ. ನಮಗೆ ಕೆಲಸ ಮಾಡುವ ವಿಶ್ವಾಸ ಹೆಚ್ಚುತ್ತಿದೆ. 2022ರಲ್ಲಿ ಭಾರತ 75ನೇ ವರ್ಷ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಲಿದೆ. ಈ ವೇಳೆ ಭಾರತ ಬದಲಾಗಬೇಕು. ನವ ಭಾರತಕ್ಕಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದು ಜನರಲ್ಲಿ ಮೋದಿ ಮನವಿ ಮಾಡಿದರು.

    ಇದನ್ನೂ ಓದಿ: ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

  • ಎಷ್ಟು ಮಂದಿಗೆ ಉದ್ಯೋಗ ನೀಡಿದ್ದೀರಿ? ವಿವರ ಕೊಡಿ: ಸಚಿವರಿಗೆ ಮೋದಿ ಸೂಚನೆ

    ಎಷ್ಟು ಮಂದಿಗೆ ಉದ್ಯೋಗ ನೀಡಿದ್ದೀರಿ? ವಿವರ ಕೊಡಿ: ಸಚಿವರಿಗೆ ಮೋದಿ ಸೂಚನೆ

    ನವದೆಹಲಿ: ಎನ್‍ಡಿಎ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಅನುಭವಿಸಿದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿಗಳಿಗೆ, ನಿಮ್ಮ ಸಚಿವಾಲಯದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನುವುದರ ವಿವರ ನೀಡುವಂತೆ ಸೂಚಿಸಿದ್ದಾರೆ.

    ಅಧಿಕಾರಕ್ಕೆ ಏರಿದ ಮೂರು ವರ್ಷದಲ್ಲಿ ಕೇಂದ್ರದ ಯೋಜನೆಗಳಿಂದಾಗಿ ನೇರ ಮತ್ತು ಪರೋಕ್ಷವಾಗಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನುವ ಸಂಪೂರ್ಣ ಡೇಟಾ ಮಾಹಿತಿಯನ್ನು ಸೋಮವಾರ ನೀಡುವಂತೆ ಸೂಚಿಸಿದ್ದಾರೆ.

    ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಎಲ್ಲ ಸಚಿವಾಲಯಗಳಿಗೆ ತಿಳಿಸಲಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಾರ್ಷಿಕವಾಗಿ 2 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು.

    ಕಾಂಗ್ರೆಸ್ ಟೀಕೆ: ಮಾಜಿ ಕೇಂದ್ರ ಪರಿಸರ ಸಚಿವ ಜೈರಾಂ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ, ಕೃಷಿ ಮತ್ತು ಹೂಡಿಕೆ ಕ್ಷೇತ್ರದಲ್ಲಿ ವೈಫಲ್ಯ ಅನುಭವಿಸಿದೆ ಎಂದು ಟೀಕಿಸಿದ್ದಾರೆ.

    ಗರಿಷ್ಟ ಪ್ರಚಾರ, ಕನಿಷ್ಟ ಚಿಂತನೆ ಕಾರ್ಯತಂತ್ರವನ್ನು ಎನ್‍ಡಿಎ ಸರ್ಕಾರ ಹಾಕಿಕೊಂಡಿದೆ. ಫಸಲ್ ಭೀಮಾ ಯೋಜನೆಯಲ್ಲಿ ವಿಮಾ ಕಂಪೆನಿಗಳು 16 ಸಾವಿರ ಕೋಟಿ ರೂ. ಸಂಗ್ರಹಿಸಿದೆ. ಆದರೆ ರೈತರಿಗೆ ಕೇವಲ 7 ಸಾವಿರ ಕೋಟಿ ರೂ ಮಾತ್ರ ಸಿಕ್ಕಿದೆ ಎಂದು ಆರೋಪಿಸಿದರು.

  • ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ನವದೆಹಲಿ: ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿರುವ ಬಿಜೆಪಿ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳನ್ನಷ್ಟೇ ಹೆಚ್ಚಿಕೊಂಡಿಲ್ಲ. ಬದಲಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೂ ಬಿಜೆಪಿಯ ಈ ಗೆಲುವು ಭಾರೀ ಪ್ರಭಾವ ಬೀರಲಿದೆ.

    ಉತ್ತರಪ್ರದೇಶದಲ್ಲಿ 325 ಸ್ಥಾನ, ಉತ್ತರಾಖಂಡ್‍ನಲ್ಲಿ 56 ಸ್ಥಾನ, ಮಣಿಪುರದಲ್ಲಿ 21, ಪಂಜಾಬ್‍ನಲ್ಲಿ 18 ಹಾಗೂ ಗೋವಾದಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‍ಡಿಎ ರಾಷ್ಟಪತಿ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಂಡಿದೆ. ರಾಷ್ಟ್ರಪತಿ ಆಯ್ಕೆಗೆ ಮೋದಿ ಪಡೆ ಬಹುಮತದ ಸನಿಹದಲ್ಲಿ ಬಂದು ನಿಂತಿದೆ. ಜುಲೈಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗುತ್ತಿರುವ ಹನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಗರಿಗೆದರಿದೆ.

    ಎಷ್ಟು ಮತ ಬೇಕು?
    ದೇಶದ ರಾಷ್ಟ್ರಪತಿಯನ್ನು 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಹಾಗೂ ರಾಜಧಾನಿ ದೆಹಲಿಯ ಎಲ್ಲಾ ಸಂಸದರು ಹಾಗೂ ಶಾಸಕರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜ್ ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್‍ನ ಒಟ್ಟು ಮತಗಳ ಸಂಖ್ಯೆ 10,98,882. ಇದರಲ್ಲಿ ರಾಷ್ಟಪತಿ ಆಯ್ಕೆಗೆ ಬೇಕಿರುವುದು 5,49,442 ಮತಗಳು.

    ಎನ್‍ಡಿಎ ಬಳಿ ಎಷ್ಟಿದೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. ಇವರ ಎಲ್ಲ ಮತಗಳು ಸೇರಿದರೆ 10,98,882 ಮತಗಳು ಆಗುತ್ತದೆ. ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ವಿಜಯಿ ಆಗಲು ಒಟ್ಟು ಮತದ ಅರ್ಧಭಾಗಕ್ಕಿಂತ ಹೆಚ್ಚು ಅಂದರೆ 5,49,442 ಮತಗಳ ಅವಶ್ಯಕತೆಯಿದೆ.

    ಉತ್ತರಪ್ರದೇಶದ ಗೆಲುವಿನಿಂದ ಎಲೆಕ್ಟೋರಲ್ ಕಾಲೇಜ್‍ನಲ್ಲಿ ರಾಜ್ಯದ ಬಿಜೆಪಿ ಮತಗಳ ಸಂಖ್ಯೆ 67,600ಕ್ಕೆ ಏರಿದೆ. ಹೀಗಾಗಿ ಸದ್ಯ ಎನ್‍ಡಿಎ ಬಳಿ ಒಟ್ಟು 5,24,920 ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಎನ್‍ಡಿಎಗೆ ಕೇವಲ 24,522 ಮತಗಳು ಕಡಿಮೆ ಬೀಳಲಿದೆ.

    ಒಂದು ವೇಳೆ ಬಿಜು ಜನತಾ ದಳ ಹಾಗೂ ಎಐಎಡಿಎಂಕೆ ಪಕ್ಷಗಳು ಬೆಂಬಲ ನೀಡಿದರೆ ಎನ್‍ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಲಿದೆ.

    ಇದನ್ನೂ ಓದಿ:ರಾಷ್ಟ್ರಪತಿ ರೇಸ್‍ನಲ್ಲಿ ಇನ್ಫಿ ನಾರಾಯಣಮೂರ್ತಿ!