Tag: Nayana Sai

  • `ಒಂಬತ್ತನೇ ಅದ್ಭುತ’ ಹಾಡುಗಳ ಅನಾವರಣ

    `ಒಂಬತ್ತನೇ ಅದ್ಭುತ’ ಹಾಡುಗಳ ಅನಾವರಣ

    ಬೆಂಗಳೂರು: ಕಳೆದ 13 ವರ್ಷಗಳಿಂದ ದೇವರಾಣೆ, 90, ಹುಡುಗಾಟ, ಕಂದ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂತೋಷ್ ಕುಮಾರ್ ಬೆಟಗೇರಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಒಂಬತ್ತನೇ ಅದ್ಭುತ’. ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಸಂತೋಷ್ ಕುಮಾರ್ ಅವರೇ ಈ ಚಿತ್ರದ ನಿರ್ಮಾಪಕರಾಗಿದ್ದು, ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಂತೋಷ್ ಕುಮಾರ್ ಒಂದು ಶವವನ್ನಿಟ್ಟುಕೊಂಡು ಅದರ ಸುತ್ತ ನಡೆಯುವ ಘಟನೆಗಳನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಬೇರೆಯದೇ ಸ್ಟೈಲ್‍ನಲ್ಲಿ ನರೇಷನ್ ಮಾಡಿದ್ದೇವೆ. ನಿರ್ಮಾಣ ಕಾರ್ಯದಲ್ಲಿ ನಮ್ಮ ಸಹೋದರರ ಸಹಕಾರ ಕೂಡ ಇದೆ. ಮಂಡ್ಯದಲ್ಲಿ ನಡೆಯುವ ಕಥೆ ಇದಾಗಿದ್ದು, ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯ ಸೇರಿ 3 ಥರದ ಭಾಷೆ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ಈ ಚಿತ್ರದ ನಾಯಕಿಯಾಗಿ ನಯನ ಸಾಯಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಿಥಿ ಖ್ಯಾತಿಯ ಸೆಂಚುರಿಗೌಡ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ತನ್ನ ಪಾತ್ರದ ಕುರಿತಂತೆ ಮಾತನಾಡಿದ ನಯನ ಸಾಯಿ ನಾನು ಮೂಲತಃ ಮಾಡೆಲ್ ಮಿಸ್ ಇಂಡಿಯಾ ಸೌತ್‍ನಲ್ಲಿ ಭಾಗವಹಿಸಿದ್ದೆ. ನನ್ನ ಪ್ರೊಫೈಲ್ ನೋಡಿ ನಿರ್ದೇಶಕರು ನನಗೆ ಚಾನ್ಸ್ ಕೊಟ್ಟಿದ್ದಾರೆ. ಒಬ್ಬ ಕಾಲೇಜು ಹುಡುಗಿಯ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಕಾಮಿಡಿ, ಸಸ್ಪೆನ್ಸ್ ಕಥೆಯಿದೆ. ಟೀಮ್ ಸಪೋರ್ಟ್‌ ತುಂಬಾ ಚೆನ್ನಾಗಿತ್ತು ಎಂದು ಹೇಳಿಕೊಂಡರು. ಚಿತ್ರಕ್ಕೆ ಸುನಿಲ್ ಕೋಶಿ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಘವೇಂದ್ರ ಬಿ.ಕೋಲಾರ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ನಾಗರಾಜ್ ಆರ್ ಕುಂತೂರ್, ಗೋಪಾಲಕೃಷ್ಣ ಗೌಡ ಹಾಗೂ ಮಂಜಣ್ಣ ಬೆಟ್ಟಹಳ್ಳಿ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ.