Tag: naxals

  • ಮೂವರು ಮಹಿಳೆಯರು ಸೇರಿ 7 ಮಂದಿ ನಕ್ಸಲರ ಹತ್ಯೆ

    ಮೂವರು ಮಹಿಳೆಯರು ಸೇರಿ 7 ಮಂದಿ ನಕ್ಸಲರ ಹತ್ಯೆ

    ರಾಯ್ಪುರ: ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚುತ್ತಿದ್ದು, ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ  ನಡೆಸಿ ಎನ್‍ಕೌಂಟರ್ ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ಹತ್ಯೆಗೈದಿದ್ದಾರೆ.

    ಜುಲೈ 26ರಂದು 40-50 ಮಂದಿ ಮಾವೋವಾದಿಗಳು ತಿರಿಯಾ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು, ಜಿಲ್ಲಾ ಭದ್ರತಾ ಸಿಬ್ಬಂದಿ, ವಿಶೇಷ ಮೀಸಲು ಪಡೆ ಜೊತೆ ಸೇರಿ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಒಡಿಶಾ ಗಡಿಯಲ್ಲಿನ ತಿರಿಯಾ ಗ್ರಾಮದ ಅರಣ್ಯದ ಬಳಿ ಗುಂಡಿನ ಘರ್ಷಣೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಮೇಲೆ ಮೂವರು ಮಹಿಳಾ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು.

    ಈ ವೇಳೆ ಪ್ರತಿದಾಳಿ ನಡೆಸಿ ಒಟ್ಟು ಏಳು ಮಂದಿ ನಕ್ಸಲರನ್ನು ಹತ್ಯೆಗೈಯಲಾಯಿತು. ಕೆಲವು ನಕ್ಸಲರು ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ವಿಭಾಗದ ಡಿಎಸ್‍ಪಿ ಸುಂದರ್ ರಾಜ್ ಹೇಳಿದ್ದಾರೆ.

    ಈ ವೇಳೆ ಯಾವ ಸಿಬ್ಬಂದಿಯು ಕೂಡ ಗಾಯಗೊಂಡಿಲ್ಲ ಎನ್ನಲಾಗಿದೆ. ಅಲ್ಲದೆ ನಕ್ಸಲರ ಮೃತದೇಹಗಳನ್ನು ಗುರುತಿಸಲು ಜಗ್ದಲ್‍ಪುರಕ್ಕೆ ರವಾನಿಸಲಾಗಿದೆ. ಹಾಗೆಯೇ ಘಟನಾ ಸ್ಥಳದಲ್ಲಿ ಐಎನ್‍ಎಸ್‍ಎಎಸ್ ರೈಫಲ್, 4 303 ರೈಫಲ್‍ಗಳು, ಇತರೇ ಮಾರಾಕಾಸ್ತ್ರಗಳನ್ನು ಸಿಬ್ಬಂದಿ ವಶಪಡಿಕೊಂಡಿದ್ದಾರೆ.

    ತಿರಿಯಾ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲ ಗ್ರಾಮವನ್ನು ತಮ್ಮ ವಶಕ್ಕೆ ಪಡೆಯಲು ಕೆಲವು ದಿನಗಳ ಹಿಂದೆಯಷ್ಟೇ ನಕ್ಸಲರ ತಂಡ ಈ ಅರಣ್ಯಕ್ಕೆ ಬಂದು ನೆಲೆಸಿತ್ತು. ಅಲ್ಲದೆ ಅವರ ಕಾವಲಿಗಾಗಿ ಜನರನ್ನು ಕೂಡ ಅವರು ಹೊಂದಿದ್ದರು. ಕಾವಲಿಗಿದ್ದ ವ್ಯಕ್ತಿಗಳು ಗ್ರಾಮಗಳಲ್ಲಿ ನಕ್ಸಲರ ಬಗ್ಗೆ ಜನರಲ್ಲಿ ಭಯಹುಟ್ಟಿಸುತ್ತಿದ್ದರು. ಅಲ್ಲದೆ ವಾರದ ಸಂಸ್ಥೆಗಳಿಗೂ ಕೂಡ ತೆರೆಳುತ್ತಿದ್ದರು. ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಕಾವಲುಗಾರರು ನಕ್ಸಲರಿಗೆ ತಿಳಿಸಿದ್ದು, ಅವರು ಅರಣ್ಯದಿಂದ ಪರಾರಿಯಾಗಲೂ ಹೊರಟಿದ್ದರು. ಆದರೆ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜಾಗೃತರಾಗಿದ್ದರಿಂದ ನಕ್ಸಲರನ್ನು ಸದೆಬಡಿಯಲು ಸಹಕಾರಿಯಾಯ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಗಳ ಸೀಮಂತಕ್ಕೆ ಸಂಜೆ ಹೊರಡಬೇಕಿದ್ದ ಯೋಧ ಬೆಳಗ್ಗೆ ಹುತಾತ್ಮ

    ಮಗಳ ಸೀಮಂತಕ್ಕೆ ಸಂಜೆ ಹೊರಡಬೇಕಿದ್ದ ಯೋಧ ಬೆಳಗ್ಗೆ ಹುತಾತ್ಮ

    ಕಲಬುರಗಿ: ಮಗಳ ಸೀಮಂತಕ್ಕೆ ಬರುವುದಕ್ಕಾಗಿ ರಜೆ ಪಡೆದು, ಇಂದು ಸಂಜೆ ಪ್ರಯಾಣ ಬೆಳೆಸಬೇಕಿದ್ದ ಜಿಲ್ಲೆಯ ಯೋಧರೊಬ್ಬರು ನಕ್ಸಲರು ಅಟ್ಟಹಾಸಕ್ಕೆ ಹುತಾತ್ಮರಾಗಿದ್ದಾರೆ.

    ಸಿಆರ್‌ಪಿಎಫ್‌ನ ಮಹಾದೇವ ಪೊಲೀಸ್ ಪಾಟೀಲ್ (50) ಹುತಾತ್ಮ ಯೋಧ. ಮಹದೇವ ಅವರು ಕಲಬುರಗಿ ತಾಲೂಕಿನ ಮರಗುತ್ತಿ ಗ್ರಾಮದ ನಿವಾಸಿ. ಶುಕ್ರವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ಮಹಾದೇವ ಸೇರಿದಂತೆ, ಮೂರು ಯೋಧರು ಬೈಕ್‍ನಲ್ಲಿ ಹೊರಟಿದ್ದರು. ಈ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಮಹಾದೇವ ಅವರು ಕಳೆದ 29 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೈದ್ರಾಬಾದ್ ಸಿಆರ್‌ಪಿಎಫ್‌ ಕೇಂದ್ರದಲ್ಲಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಮೂರು ತಿಂಗಳ ಹಿಂದೆಯಷ್ಟೇ ಛತ್ತೀಸ್‍ಗಢಕ್ಕೆ ವರ್ಗಾವಣೆ ಮಾಡಲಾಗಿತ್ತು.

    ಮಹಾದೇವ ಅವರಿಗೆ ಒಟ್ಟು ಮೂರು ಜನ ಮಕ್ಕಳಿದ್ದು, ಓರ್ವ ಪುತ್ರಿಯ ವಿವಾಹವಾಗಿದೆ. ಉಳಿದ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದುರಂತವೆಂದರೆ ಜುಲೈ 1 ರಂದು ಮಗಳಿಗೆ ಸೀಮಂತ ಕಾರ್ಯ ಮಾಡಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾದೇವ ಅವರು ಇಂದು ಸಂಜೆ ಛತ್ತೀಸ್‍ಗಢದಿಂದ ಕಲಬುರಗಿಗೆ ಬರುವುದಕ್ಕೆ ರಜೆ ಸಹ ಪಡೆದಿದ್ದರು. ಆದರೆ ವಿಧಿಯಾಟವೇ ಬೇರೆಯಾದ ಹಿನ್ನಲೆ ಮಗಳ ಸೀಮಂತ ಕಾರ್ಯಕ್ಕೆ ಬರಬೇಕಾದ ಅವರು ಹುತಾತ್ಮರಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

    ಯೋಧ ಮಹಾದೇವ ಅವರ ಪತ್ನಿ ಮಲ್ಲಮ್ಮ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ರಾತ್ರಿಯವರೆಗೆ, ಪತಿಯ ಸಾವಿನ ಸುದ್ದಿಯನ್ನು ತಿಳಿಸದೇ ಗೌಪ್ಯವಾಗಿ ಇಡಲಾಗಿತ್ತು. ಮಹಾದೇವ ಅವರು ಹುತಾತ್ಮರಾದ ಸುದ್ದಿ ತಿಳಿಯುತ್ತಿದ್ದಂತೆ ಮರಗುತ್ತಿ ಗ್ರಾಮದಲ್ಲಿ ಸಂಪೂರ್ಣ ಶೋಕದ ವಾತಾವರಣ ನಿರ್ಮಾಣವಾಗಿದೆ.

  • ಎಸ್‍ಪಿ ನಾಯಕನನ್ನು ಹತ್ಯೆಗೈದು ನಕ್ಸಲರ ಅಟ್ಟಹಾಸ

    ಎಸ್‍ಪಿ ನಾಯಕನನ್ನು ಹತ್ಯೆಗೈದು ನಕ್ಸಲರ ಅಟ್ಟಹಾಸ

    ಬಿಜಾಪುರ್: ಛತ್ತೀಸ್‍ಗಢದಲ್ಲಿ ದಿನೇ ದಿನೇ ಮಾವೋವಾದಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬಿಜಾಪುರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕರೊಬ್ಬರನ್ನು ಅಪಹರಿಸಿ ಹತ್ಯೆಗೈದು ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.

    ಎಸ್‍ಪಿ ನಾಯಕ ಸಂತೋಷ್ ಪೂನಂ ಅವರನ್ನು ನಕ್ಸಲರು ಮಂಗಳವಾರದಂದು ಅಪಹರಿಸಿ ಹತ್ಯೆಗೈದಿದ್ದು, ಇಂದು ಸಂತೋಷ್ ಅವರ ಮೃತದೇಹ ಪತ್ತೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಪೂನಂ ಸ್ಪರ್ಧಿಸಿ ಸೋಲು ಕಂಡಿದ್ದರು. ಸಂತೋಷ್ ಅವರು ರಾಜಕಾರಣಿ ಮಾತ್ರವಲ್ಲದೆ ಗುತ್ತಿಗೆದಾರರಾಗಿ ಕೂಡ ಆಗಿದ್ದರು. ಹೀಗಾಗಿ ಮಂಗಳವಾರ ಮಾರಿಮಲ್ಲ ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಕೆಲಸ ನೋಡಲು ಸಂತೋಷ್ ಅವರು ತೆರೆಳಿದ್ದರು. ಈ ವೇಳೆ ನಕ್ಸಲರು ಅವರನ್ನು ಟಾರ್ಗೆಟ್ ಮಾಡಿ ಅಪಹರಿಸಿದ್ದರು.

    ಮರುದಿನ ಬೆಳಗ್ಗೆ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸಂತೋಷ್ ಅವರ ಮೃತದೇಹ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಹಿಂದೆ ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಐವರು ಪೊಲೀಸರು ಸಾವನ್ನಪ್ಪಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಭುವನೇಶ್ವರ: ಜೂನ್ 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಭದ್ರತಾ ಪಡೆಯ ಯೋಧರು ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಯು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ಯೋಧರು ಯೋಗಾಭ್ಯಾಸ ಮಾಡಿದರೆ ಅಷ್ಟೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ನಮ್ಮ ಕೆಚ್ಚೆದೆಯ ಯೋಧರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಯೋಗಾಭ್ಯಾಸ ಮಾಡಿ ತಯಾರಿ ನಡೆಸುತ್ತಿರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    5 ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಜೂನ್ 21ರಂದು ಆಚರಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯಂತೆ ಜೂನ್ 21 2014ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಯಶಸ್ವಿಯಾಗಿ ಎಲ್ಲಡೆ ಆಚರಿಸಲಾಗಿದೆ.

    ಕಳೆದ ಬಾರಿ 4ನೇ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಡೆಹ್ರಾಡೂನ್‍ನಲ್ಲಿ ಆಚರಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಕೂಡ ಪಾಲ್ಗೊಂಡಿದ್ದರು. ಹಾಗೆಯೇ ಈ ಬಾರಿ ಜಾರ್ಖಂಡ್‍ನ ರಾಂಚಿಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಇಟ್ಟ ನಕ್ಸಲರು

    ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಇಟ್ಟ ನಕ್ಸಲರು

    ರಾಯ್ಪುರ: ಚಲಿಸುತ್ತಿದ್ದ ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿ ನಕ್ಸಲರು ಅಟ್ಟಹಾಸ ಮೆರೆದ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ.

    ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರದಂದು ನಕ್ಸಲರ ಗುಂಪೊಂದು ಸಾರ್ವಜನಿಕರ ಮೇಲೆ ಅಟ್ಟಹಾಸ ಮೆರೆದಿದೆ. ಸಂಜೆ ಬಿಜಾಪುರದಿಂದ ಬೆದ್ರೆ ಪ್ರದೇಶಕ್ಕೆ ಖಾಸಗಿ ಬಸ್ ತೆರಳುತಿತ್ತು. ಈ ವೇಳೆ ಕುತ್ರಿ ಹಾಗೂ ಫರ್ಸೆಗಢ ಗ್ರಾಮದ ನಡುವೆ ಬಸ್ಸಿಗೆ ನಕ್ಸಲರು ಬೆಂಕಿ ಹಚ್ಚಿ ಕ್ರೌರ್ಯ ಮೆರೆದು ಪ್ರಯಾಣಿಕರನ್ನು ಹೆದರಿಸಿದ್ದಾರೆ.

    ಬಸ್ಸಿಗೆ 10ರಿಂದ 12 ಮಂದಿ ನಕ್ಸಲರು ಮೊದಲು ಅಡ್ಡಕಟ್ಟಿ, ಪ್ರಯಾಣಿಕರನ್ನು ಹೆದರಿಸಿ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಬಳಿಕ ಬಸ್ಸಿಗೆ ಬೆಂಕಿ ಹಾಕಿದ್ದು, ವಾಹನ ಸಂಪೂರ್ಣ ಸುಟ್ಟುಹೋಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಬಸ್ತರ್ ಪ್ರದೇಶದಲ್ಲಿ ನಕ್ಸಲರು `ಜನ್ ಪಿತೂರಿ’ಯನ್ನು ಜೂನ್ 5ರಿಂದ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ಈ ರೀತಿ ಕೃತ್ಯವೆಸೆಗಿರಬಹುದು ಎಂದು ಭದ್ರತಾ ಸಿಬ್ಬಂದಿ ಶಂಕಿಸಿದ್ದಾರೆ.

    ಪ್ರತಿ ವರ್ಷನಕ್ಸಲ್ ಪಡೆಯಲ್ಲಿ ಹತರಾದ ನಾಯಕರಿಗೆ ನಮನ ಸಲ್ಲಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ತಮ್ಮ ತಂಡಕ್ಕೆ ಹೊಸ ಅಭ್ಯರ್ಥಿಗಳನ್ನು ಸೇರಿಸಿಕೊಂಡು ತಮ್ಮ ನಾಯಕರನ್ನು ನಕ್ಸಲರು ನೆನೆಯುತ್ತಾರೆ ಇದನ್ನ `ಜನ್ ಪಿತೂರಿ’ ಎಂದು ಕರೆಯಲಾಗುತ್ತದೆ. ಹೀಗಾಗಿ ತಮ್ಮ ಗುರಿ, ವಿಚಾರಗಳ ಬಗ್ಗೆ ಪ್ರಚಾರ ಮಾಡಲು ಹಾಗೂ ತಮ್ಮ ಬಗ್ಗೆ ಜನರಲ್ಲಿ ಭಯ ಹುಟ್ಟಿಸಲು ಈ ರೀತಿ ನಕ್ಸಲರು ಕೃತ್ಯ ಎಸಗುತ್ತಾರೆ.

  • ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮಡಿಕೇರಿ: ಮಧ್ಯ ಭಾರತದಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ಹೆದರಿ ನಕ್ಸಲರು ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕಡೆ ವಲಸೆ ಹೋಗುತ್ತಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಕೊಡಗಿಗೆ ಮತ್ತೆ ಕೆಂಪು ಉಗ್ರರು ಪ್ರವೇಶಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಜಿಲ್ಲೆಯ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ನಕ್ಸಲರು ಅಕ್ಕಿ ಹಾಗೂ ಮೊಬೈಲ್‍ನೊಂದಿಗೆ ಕಾಡಿನೊಳಗೆ ಪರಾರಿಯಾಗಿದ್ದಾರೆ. ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಇಂದು ಇಬ್ಬರು ಕೆಂಪು ಉಗ್ರರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದರು. ನಕ್ಸಲರು ಸುಮಾರು 30 ವರ್ಷ ಪ್ರಾಯದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಎಂದು ಶಂಕಿಸಲಾಗಿದೆ. ನಕ್ಸಲರ ತಂಡ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಕುಟ್ಟಪ್ಪ ಅವರ ಮನೆಗೆ ನುಗ್ಗಿ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಗ್ರಾಮದ ಅರುಣ ಎಂಬವರ ಮನೆಗೂ ನಕ್ಸಲರು ನುಗ್ಗಿದ್ದಾರೆ. ಮನೆಗೆ ನುಗ್ಗಿದ ನಕ್ಸಲರು ಅರುಣ ಅವರ ಪತ್ನಿಯ ಮೊಬೈಲ್ ಕಸಿದು, ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದಾರೆ. ಸದ್ಯ ನಕ್ಸಲರಿಂದ ಬೆಟ್ಟ ತಪ್ಪಲಿನ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಡಗು ಪೊಲೀಸ್ ಹಾಗೂ ಎಎನ್‍ಎಫ್ ಪಡೆ ಗ್ರಾಮಕ್ಕೆ ದೌಡಾಯಿಸಿದೆ.

  • ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ರಾಯ್ಪುರ: ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದು, ಘಟನೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಐವರು ಪೊಲೀಸರು ಸಾವನ್ನಪ್ಪಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಭೀಮಾ ಅವರು ಪ್ರಚಾರ ಕಾರ್ಯವನ್ನು ನಡೆಸಲು ತೆರಳುತ್ತಿದ್ದ ವೇಳೆ ನಕ್ಸಲರ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಪೊಲೀಸರು ಮೃತಪಟ್ಟಿದ್ದಾರೆ.

    ಬೆಂಗಾವಲು ವಾಹನದ ಜೊತೆ ತೆರಳುತ್ತಿದ್ದ ಕಾರುಗಳ ಕೊನೆ ವಾಹನದಲ್ಲಿ ಶಾಸಕರು ಕುಳಿತ್ತಿದ್ದರು ಎನ್ನಲಾಗಿದ್ದು, ಈ ವಾಹನವನ್ನೇ ನಕ್ಸಲರು ಸ್ಫೋಟಿಸಿದ್ದಾರೆ. ಪರಿಣಾಮ ವಾಹನದಲ್ಲಿದ್ದವರ ದೇಹಗಳು ಛಿದ್ರಗಳು ಸುಮಾರು ದೂರ ಹಾರಿ ಬಿದ್ದಿವೆ. ಸ್ಫೋಟದ ಬಳಿಕ ನಕ್ಸಲರು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಘಟನೆಯಲ್ಲಿ ಶಾಸಕರು ಸಾವನ್ನಪ್ಪಿದ ಬಗ್ಗೆ ನಕ್ಸಲ್ ನಿಗ್ರಹ ದಳದ ಡಿಐಜಿ ಪಿ ಸುಂದರ್ ರಾಜ್ ಖಚಿತ ಪಡಿಸಿ ಮಾಹಿತಿ ನೀಡಿದ್ದಾರೆ.

    ನಕ್ಸಲರ ದಾಳಿಯ ಕುರಿತು ಮಾಹಿತಿ ಲಭಿಸುತ್ತಿದಂತೆ ಸಿಆರ್‍ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಛತ್ತೀಸ್‍ಗಢ ಸಿಎಂ ಭೂಪೇಶ್ ಬಾಗೇಲ್ ಕಠಿಣ ಕ್ರಮಕೈಗೊಳ್ಳುವಂತೆ ಡಿಐಜಿಗೆ ಸೂಚನೆ ನೀಡಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಗುರುವಾರ ಚುನಾವಣೆಯ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 80 ಸಾವಿರ ರಕ್ಷಣಾ ಸಿಬ್ಬಂದಿ, ಡ್ರೋಣ್ ಕ್ಯಾಮೆರಾಗಳನ್ನು ಸರ್ಕಾರ ನಿಯೋಜನೆ ಮಾಡಿದೆ.

  • ಬಿಜೆಪಿ ನಾಯಕನ ಮನೆ ಧ್ವಂಸಗೊಳಿಸಿದ ನಕ್ಸಲರು

    ಬಿಜೆಪಿ ನಾಯಕನ ಮನೆ ಧ್ವಂಸಗೊಳಿಸಿದ ನಕ್ಸಲರು

    ಪಾಟ್ನಾ: ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮಾರಿಯಾ ಇಲಾಖೆ ವ್ಯಾಪ್ತಿಯಲ್ಲಿ ನಕ್ಸಲರು ಬಿಜೆಪಿ ನಾಯಕರೊಬ್ಬರ ಮನೆಯನ್ನು ಡೈನಾಮೈಟ್ ನಿಂದ ಧ್ವಂಸಗೊಳಿಸಿದ್ದಾರೆ.

    ಮಾಜಿ ಎಂಎಲ್‍ಸಿ ಅನುಜ್ ಕುಮಾರ್ ಸಿಂಗ್ ಎಂಬವರ ಮನೆ ಸಂಪೂರ್ಣವಾಗಿ ನಕ್ಸಲರ ದಾಳಿಗೆ ತುತ್ತಾಗಿದೆ. ಮನೆಯನ್ನ ಧ್ವಂಸಗೊಳಿಸಿದ ಬಳಿಕ ನಕ್ಸಲರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಪತ್ರವೊಂದನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಗಯಾ ಜಿಲ್ಲೆಯ ಪೊಲೀಸರು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

    ರಾತ್ರಿ ಸುಮಾರು 1 ಗಂಟೆಗೆ ನಕ್ಸಲರು ಬಿಜೆಪಿ ನಾಯಕನ ಮೇಲೆ ದಾಳಿ ನಡೆಸಿದ್ದಾರೆ. ಡೈನಾಮೈಟ್ ದಾಳಿಯಿಂದಾಗಿ ಅನುಜ್ ಕುಮಾರ್ ಮನೆ ಸಂಪೂರ್ಣ ಧ್ವಂಸವಾಗಿದ್ದು, ಸ್ಥಳೀಯ ನಾಯಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಡುಮಾರಿಯಾ ಇಲಾಖೆಯ ಗ್ರಾಮಗಳಲ್ಲಿ ಜನರು ಎಲ್ಲಿ, ಯಾವಾಗ ದಾಳಿ ನಡೆಯುತ್ತೆ ಎಂಬ ಭಯದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ.

    ಅನುಜ್ ಕುಮಾರ್ ಈ ಮೊದಲೇ ನಕ್ಸಲರ ಟಾರ್ಗೆಟ್ ಆಗಿದ್ದರು. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ಬಗ್ಗೆ ವರದಿಯಾಗಿಲ್ಲ. ಪೊಲೀಸರು ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಶಿವಮೊಗ್ಗ ಅರಣ್ಯ ಪ್ರದೇಶದಲ್ಲಿ ನಾಲ್ವರ ಶಂಕಿತ ನಕ್ಸಲರು ಪತ್ತೆ!

    ಶಿವಮೊಗ್ಗ ಅರಣ್ಯ ಪ್ರದೇಶದಲ್ಲಿ ನಾಲ್ವರ ಶಂಕಿತ ನಕ್ಸಲರು ಪತ್ತೆ!

    ಶಿವಮೊಗ್ಗ: ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪ ಬಳಿ ಕಾಡಿನ ಅಂಚಿನಲ್ಲಿ ಇಂದು ಮಧ್ಯಾಹ್ನ ನಾಲ್ವರು ಅಪರಿಚಿತರು ಕಂಡು ಬಂದಿದ್ದು, ಅವರು ನಕ್ಸಲರು ಎನ್ನವ ಶಂಕೆ ವ್ಯಕ್ತವಾಗಿದೆ. ಅವರ ಕೈಯಲ್ಲಿ ಬಂದೂಕು, ಹ್ಯಾಂಡಿಕ್ಯಾಮ್ ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಲಕ್ಕಿನಕೊಪ್ಪದ ಹಳೇ ಚರ್ಚ್ ಸಮೀಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರಿಗೆ ಈ ಗುಂಪು ಕಾಣಿಸಿದೆ. ತಕ್ಷಣವೇ ಅವರು ನೀವು ಯಾರು ಎಂದು ಪ್ರಶ್ನಿಸುತ್ತಿದ್ದಂತೆ ಅಪರಿಚಿತ ನಾಲ್ವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಹೊಲದಿಂದ ಗ್ರಾಮಕ್ಕೆ ಮರಳಿದ ಅವರು ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇಲೆ ಅರಣ್ಯ ಪ್ರದೇಶಕ್ಕೆ ಆಗಮಿಸಿದ ತುಂಗಾ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ. ಸೋಮವಾರ ಕೂಡ ಆಗುಂಬೆಯಿಂದ ಎಎನ್‍ಎಫ್ ತಂಡ ಬರಲಿದ್ದು, ಕೂಂಬಿಂಗ್ ಮುಂದುವರೆಯಲಿದೆ.

    ಮಲೆನಾಡಿಂದ ನಕ್ಸಲರು ಮರೆಯಾಗಿದ್ದಾರೆ ಎಂದೇ ಭಾವಿಸಲಾಗಿದೆ. ಆದರೆ ಇಂದು ಕಾಣಿಸಿಕೊಂಡ ಅಪರಿಚಿತರು ನಕ್ಸಲರೇ ಎಂದು ಶಂಕಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಭುವನೇಶ್ವರ: ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿರುವ 100 ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿ ತಮ್ಮ ಶಿಕ್ಷಣ ಮುಂದುವರಿಸಲು ಇಂದಿರಾ ಗಾಂಧಿ ಮುಕ್ತ ವಿವಿ (ಇಗ್ನೋ) ನಡೆಸುವ ಪರೀಕ್ಷೆಯನ್ನು ಬರೆದಿದ್ದಾರೆ.

    ಇವರೆಗೂ ಒಡಿಸ್ಸಾದಲ್ಲಿ 120ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಅದರಲ್ಲಿ 107 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಜೂನ್ 21 ರಂದು ನಡೆದಿದ್ದು, ಬ್ಯಾಚುಲರ್ ಪ್ರಿಪರೇಟರಿ ಯೋಜನೆ (ಬಿಬಿಪಿ) ಅಡಿಯಲ್ಲಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರೆ ಪದವಿಗೆ ಸೇರಲು ಅರ್ಹತೆ ಪಡೆಯುತ್ತಾರೆ ಎಂದು ಪರೀಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.

    ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತವೇ ಅಭ್ಯರ್ಥಿಗಳ ಪರೀಕ್ಷಾ ವೆಚ್ಚವನ್ನು ಪಾವತಿಸಿತ್ತು. ಪರೀಕ್ಷೆ ಎದುರಿಸಿದ ಯುವಕ ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ತಾವು ಸಮಾಜದ ಒಂದು ಭಾಗವಾಗಿರಲು ಇಚ್ಛಿಸುತ್ತೇವೆ. ಅದ್ದರಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

    ಛತ್ತೀಸ್‍ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಇತ್ತೀಚಿಗೆ ಹಲವರು ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು. ಸದ್ಯ ಇವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪೂರಕ ಯೋಜನೆಗಳನ್ನು ರೂಪಿಸಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನ ನಕ್ಸಲರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ವೇಳೆ 9 ಯೋಧರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.