Tag: Navigation

  • ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    – ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ
    – ರೆಡ್‍ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್‍ಡ್ರಾಗನ್ ಚಿಪ್

    ಬೆಂಗಳೂರು: ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್(ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಗಳು ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸಲಿವೆ.

    ಫೋನಿನಲ್ಲಿ ‘ನಾವಿಕ್’ ನೀಡಲಿರುವ ಮೊದಲ ಕಂಪನಿ ಕ್ಸಿಯೋಮಿ ಆಗಿದ್ದು, ಈ ಸಂಬಂಧ ಕ್ಸಿಯೋಮಿ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಮನುಕುಮಾರ್ ಜೈನ್ ಬೆಂಗಳೂರಿನ ಇಸ್ರೋ ಕಂಪನಿಗೆ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    “ಭಾರತದ ಟೆಕ್ ಲೋಕದಲ್ಲಿ ಹೊಸ ಅಧ್ಯಾಯ. ಇಸ್ರೋ ನಾವಿಕ್ ವಿಶೇಷತೆಯನ್ನು ನೀಡುವ ವಿಶ್ವದ ಮೊದಲ ಫೋನ್ ರೆಡ್ ಮಿ ಆಗಲಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ” ಎಂದು ಮನುಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.

    ‘ನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿ ಈ ವರ್ಷದ ಜನವರಿಯಲ್ಲಿ ಸ್ನಾಪ್‍ಡ್ರಾಗನ್ ಚಿಪ್ ಬಿಡುಗಡೆ ಮಾಡಿತ್ತು. ಈ ಚಿಪ್ ಬಳಸಿಕೊಂಡು ಕ್ಸಿಯೋಮಿ ಕಂಪನಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಿ ಫೋನ್ ಬಿಡುಗಡೆ ಮಾಡಲಿದೆ.

    2020ರಲ್ಲಿ ಬಿಡುಗಡೆಯಾಗಲಿರುವ ವಿವಿಧ ಬೆಲೆಯ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ ಚಿಪ್ ಬಳಸಿ ನಾವಿಕ್ ಬೆಂಬಲಿಸುವ ಫೋನ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ಸಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್ ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಚಿಪ್ ಗಳು ವೈಫೈ 6, ಬ್ಲೂಟೂತ್ 5.1 ಜೊತೆಗೆ 4ಜಿ ನೆಟ್‍ವರ್ಕಿಗೆ ಬೆಂಬಲ ನೀಡುತ್ತದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು.

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿದೆ. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿತ್ತು.