Tag: Navaratri

  • ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಭಗವಾನ್ ಸ್ಕಂದನು ‘ಕುಮಾರ ಕಾರ್ತಿಕೇಯ’ ಎಂಬ ಹೆಸರಿನಿಂದಲೂ ತಿಳಿಯಲ್ಪಡುತ್ತಾನೆ. ಇವನು ಪ್ರಸಿದ್ಧ ತಾರಕನ ಜೊತೆಗಿನ ಸಂಗ್ರಾಮದಲ್ಲಿ ದೇವತೆಗಳ ಸೇನಾಪತಿಯಾಗಿದ್ದನು. ಪುರಾಣಗಳಲ್ಲಿ ಇವನನ್ನು ಕುಮಾರ ಹಾಗೂ ಶಕ್ತಿಧರ ಎಂದು ಹೇಳಿ ಇವನ ಮಹಿಮೆಯನ್ನು ವರ್ಣಿಸಲಾಗಿದೆ. ನವಿಲನ್ನು ವಾಹನವಾಗಿ ಬಳಸುವ ಕಾರಣ ಈತನನ್ನು ‘ಮಯೂರವಾಹನ’ ಎಂದೂ ಕರೆಯುತ್ತಾರೆ.

    ಸ್ಕಂದನ ತಾಯಿಯಾದ್ದರಿಂದ ದುರ್ಗೆಯ ಈ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಐದನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ವಿಶದ್ಧ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಇವಳ ವಿಗ್ರಹದಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಇವಳ ತೊಡೆಯಲ್ಲಿ ಕುಳಿತ್ತಿದ್ದಾನೆ. ಇದನ್ನೂ ಓದಿ: ನವರಾತ್ರಿ ವಿಶೇಷ- ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡೋದು ಯಾಕೆ ಗೊತ್ತಾ?

    ಸ್ಕಂದಮಾತೆಯಾದ ಇವಳಿಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನ್ನು ತೊಡೆಯಲ್ಲಿ ಹಿಡಿದುಕೊಂಡಿದ್ದಾಳೆ. ಮೇಲಕ್ಕಿತ್ತಿರುವ ಕೆಳಗಿನ ಬಲ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಮತ್ತು ಮೇಲಕ್ಕೆತ್ತಿರುವ ಎಡಗೈಯಲ್ಲಿಯೂ ಕಮಲವಿದೆ. ಇವಳ ಶರೀರದ ಬಣ್ಣವೂ ಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಇದೇ ಕಾರಣದಿಂದ ಇವಳನ್ನು ಪದ್ಮಸನಾದೇವೀ ಎಂದೂ ಹೇಳುತ್ತಾರೆ. ಸಿಂಹವೂ ಇವಳ ವಾಹನವಾಗಿದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿಯ ಪೂಜೆಯಲ್ಲಿ ಐದನೇ ದಿನದ ಮಹತ್ವ ಶಾಸ್ತ್ರಗಳಲ್ಲಿ ತುಂಬಾ ಹೇಳಲಾಗಿದೆ. ವಿಶುದ್ಧ ಚಕ್ರದಲ್ಲಿ ನೆಲೆಸಿದ ಮನಸ್ಸುಳ್ಳ ಸಾಧಕನ ಸಮಸ್ತ ಬಾಹ್ಯ ಕ್ರಿಯೆಗಳು ಹಾಗೂ ಚಿತ್ತವೃತ್ತಿಗಳು ಲೋಪವಾಗುತ್ತವೆ. ಅವನು ವಿಶುದ್ಧ ಚೈತನ್ಯ ಸ್ವರೂಪದತ್ತು ಮುಂದುವರಿಯುತ್ತವೆ. ಅವನ ಮನಸ್ಸು ಎಲ್ಲ ಲೌಕಿಕ, ಸಾಂಸಾರಿಕ ಬಂಧನಗಳಿಂದ ಮುಕ್ತವಾಗಿ ಪದ್ಮಾಸನಾ ಸ್ಕಂದಮಾತೆಯ ಸ್ವರೂಪದಲ್ಲಿ ಪೂರ್ಣವಾಗಿ ತಲ್ಲೀನವಾಗುತ್ತದೆ. ಈ ಸಮಯದಲ್ಲಿ ಸಾಧಕನು ಹೆಚ್ಚಿನ ಎಚ್ಚರಿಕೆಯಿಂದ ಉಪಾಸನೆಯಲ್ಲಿ ಮುಂದರಿಯಬೇಕು. ಅವನು ತನ್ನ ಎಲ್ಲ ಧ್ಯಾನ- ವೃತ್ತಿಗಳನ್ನು ಏಕಾಗ್ರವಿರಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಹೋಗಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ಜಗಜ್ಜನನಿ ಸ್ಕಂದಮಾತೆಯ ಉಪಾಸನೆಯಿಂದ ಭಕ್ತನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ. ಈ ಮತ್ರ್ಯಲೋಕದಲ್ಲೇ ಅವನಿಗೆ ಪರಮ ಶಾಂತಿ ಮತ್ತು ಸುಖದ ಅನುಭವವಾಗ ತೊಡಗುತ್ತದೆ. ಅವನಿಗಾಗಿ ಮೋಕ್ಷದ ಬಾಗಿಲು ತಾನಾಗಿ ಸುಲಭವಾಗುತ್ತದೆ ಎನ್ನುವ ನಂಬಿಕೆಯಿದೆ. ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಭಗವಾನ್ ಸ್ಕಂದನ ಉಪಾಸನೆಯೂ ಕೂಡ ತಾನಾಗಿಯೇ ಆಗುತ್ತದೆ.

     

  • ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ 9 ದಿನಗಳಿಗೆ 9 ಬಣ್ಣದ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

    ಯಾವ ದಿನ, ಯಾವ ಬಣ್ಣದ ಉಡುಪು?
    1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ.

    2. ಬ್ರಹ್ಮಚಾರಿಣಿ: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ.

    3. ಚಂದ್ರಘಂಟಾ: ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಗ್ರೇ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    4. ಕೂಷ್ಮಾಂಡಾ ದೇವಿ: ನಾಲ್ಕನೇ ದಿನ ಕೂಷ್ಮಾಂಡಾದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕಿತ್ತಲೆ ಹಣ್ಣಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕಿತ್ತಲೆ ಹಣ್ಣಿನ ಬಣ್ಣ ಪ್ರಿಯೆ ಎನ್ನುವ ನಂಬಿಕೆಯಿದೆ.

    5. ಸ್ಕಂದ ಮಾತೆ: ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಇದನ್ನೂ ಓದಿ: ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    7. ಕಾಳರಾತ್ರಿ: ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    8. ಮಹಾಗೌರಿ: ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    9. ಸಿದ್ಧಿದಾತ್ರಿ: ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ಪರ್ಪಲ್ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ಕಪ್ಪು ಬಣ್ಣ:
    ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ.

     

     

  • ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆ ನಡೆಯುತ್ತದೆ. ಇವಳ ಈ ಸ್ವರೂಪವು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದಲೇ ಇವಳನ್ನ ಚಂದ್ರಘಂಟಾದೇವಿ ಎಂದು ಕರೆಯಲಾಗುತ್ತದೆ.

    ಇವಳ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ. ಇವಳಿಗೆ ಹತ್ತು ಕೈಗಳಿದ್ದು ಹತ್ತೂ ಕೈಗಳಲ್ಲಿ ಶಸ್ತ್ರಗಳನ್ನು ಹಿಡಿದಿರುವುದು ವಿಶೇಷತೆ. ಇವಳ ವಾಹನ ಸಿಂಹವಾಗಿದ್ದು, ಇವಳ ಮುದ್ರೆಯು ಯುದ್ಧಕ್ಕಾಗಿ ಹೊರಟದಂತಿದೆ. ಇದನ್ನೂ ಓದಿ: ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    ನವರಾತ್ರಿ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನದ ಪೂಜೆಯ ಮಹತ್ವ ಅತ್ಯಧಿಕವಾಗಿದೆ. ಈ ದಿನ ಸಾಧಕನ ಮನಸ್ಸು ‘ಮಣಿಪುರ’ ಚಕ್ರದಲ್ಲಿ ಪ್ರವೇಶಿಸುತ್ತದೆ. ತಾಯಿ ಚಂದ್ರಘಂಟೆಯ ಕೃಪೆಯಿಂದ ಅವನಿಗೆ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ದಿವ್ಯ ಸುಗಂಧಗಳ ಅನುಭವವಾಗುತ್ತದೆ ಹಾಗೂ ವಿವಿಧ ಪ್ರಕಾರದ ದಿವ್ಯ ಧ್ವನಿಗಳು ಕೇಳಿಸುತ್ತದೆ. ಈ ಕ್ಷಣಗಳು ಸಾಧಕನಿಗಾಗಿ ತುಂಬಾ ಎಚ್ಚರವಾಗಿರಬೇಕಾಗುತ್ತವೆ. ಇವಳ ವಾಹನ ಸಿಂಹವಾದ್ದರಿಂದ ಇವಳ ಉಪಾಸಕನು ಸಿಂಹದಂತೆ ಪರಾಕ್ರಮಿ ಮತ್ತು ನಿರ್ಭಯನಾಗುತ್ತಾನೆ. ಇವಳ ಗಂಟೆಯ ಧ್ವನಿಯು ಸದಾಕಾಲ ಭಕ್ತರನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ಮಾಡಿ ಸಿಹಿಯಾದ ಎರಿಯಪ್ಪ

    ಇವಳ ಆರಾಧನೆಯಿಂದ ಪ್ರಾಪ್ತವಾಗುವಂತಹ ಇನ್ನೊಂದು ಬಹುದೊಡ್ಡ ಸದ್ಗುಣವು ಸಾಧಕನಲ್ಲಿ ಪರಾಕ್ರಮ- ನಿರ್ಭಯದೊಂದಿಗೆ ಸೌಮ್ಯತೆ ಹಾಗೂ ವಿನಮ್ರತೆಯೂ ವಿಕಾಸವಾಗುತ್ತದೆ. ಅವನ ಮುಖದಲ್ಲಿ, ಕಣ್ಣುಗಳಲ್ಲಿ, ಇಡೀ ಶರೀರದಲ್ಲಿ ಕಾಂತಿ-ಗುಣದ ವೃದ್ಧಿಯಾಗುತ್ತದೆ. ಸ್ವರದಲ್ಲಿ ದಿವ್ಯ, ಅಲೌಕಿಕ ಮಾಧುರ್ಯ ತುಂಬಿ ಹೋಗುತ್ತದೆ.

     

  • ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    ವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಿದರೆ, ಎರಡನೇ ದಿನ ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ.

    ಪಾರ್ವತಿಯೂ ಉಮಾ ಹೆಸರಿನಲ್ಲಿ ಹಿಮಾಲಯನ ಪುತ್ರಿಯಾಗಿ ಜನಿಸುತ್ತಾಳೆ. ನಾರದರ ಉಪದೇಶದಿಂದ ಉಮೆ ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸನ್ನು ಆಚರಿಸಿದ ಕಾರಣ ಇವಳಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು.

    ಯಾವ ರೀತಿ ತಪಸ್ಸು ಮಾಡಿದ್ದಳು?
    ಹಲವು ವರ್ಷ ಈಕೆ ಕೇವಲ ಫಲ ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೆ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಸ್ಸಿನ ಬಳಿಕ ಮೂರು ಸಾವಿರ ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ಹೀಗಾಗಿ ಕೇವಲ ಎಲೆ(ಪರ್ಣ)ಗಳನ್ನು ತಿಂದು ಜೀವಿಸಿದ್ದರಿಂದ ಆಕೆಗೆ ಅಪರ್ಣ ಎನ್ನುವ ಹೆಸರು ಬಂತು.

    ಕಠಿಣ ತಪಸ್ಸು ಮಾಡಿದರೂ ಶಿವನ ಅನುಗ್ರಹ ಸಿಗದ್ದಕ್ಕೆ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೇ ಮತ್ತಷ್ಟು ಕಠಿಣ ತಪಸ್ಸು ಮುಂದುವರಿಸಿದ್ದಳು. ಅನೇಕ ಸಾವಿರ ವರ್ಷಗಳ ಈ ತಪಸ್ಸಿನಿಂದಾಗಿ ಉಮಾಳ ಶರೀರವು ತುಂಬಾ ಕ್ಷೀಣವಾಯಿತು. ಮಗಳ ದೇಹ ಕೃಶವಾಗುತ್ತಿರುವುದನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಇವಳ ಈ ತಪಸ್ಸಿನಿಂದ ಮೂರು ಲೋಕಗಳಲ್ಲಿ ಹಾಹಾಕಾರ ಎದ್ದಿತು.

    ಕೊನೆಗೆ ಈಕೆಯ ಕಠಿಣ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ,”ಹೇ ದೇವಿ, ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ತಪಸ್ಸಿನ ಬಗ್ಗೆ ಹೊಗಳಿಕೆ ಎಲ್ಲೆಡೆ ನಡೆಯುತ್ತಿದೆ. ನಿನ್ನ ಮನೋ ಕಾಮನೆಯು ಎಲ್ಲಾ ವಿಧದಿಂದ ಪೂರ್ಣವಾಗುತ್ತದೆ. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು” ಎಂದು ವರವನ್ನು ನೀಡುತ್ತಾನೆ. ನಂತರ ಶಿವನು ಬ್ರಹ್ಮಚಾರಿಣಿಯನ್ನು ಸತಿಯಾಗಿ ಸ್ವೀಕರಿಸುತ್ತಾನೆ. ಇದನ್ನೂ ಓದಿ: ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ಬ್ರಹ್ಮಚಾರಿಣಿ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ, ಇವುಗಳ ವೃದ್ಧಿ ಆಗುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆ ಇದ್ದರೆ ಆತನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆಯಿದೆ. ಈಕೆಯ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.

     

  • ದೇವಿ ವೇಷದಲ್ಲಿ ಕಾಣಿಸಿಕೊಂಡ ಸಂಜನಾ

    ದೇವಿ ವೇಷದಲ್ಲಿ ಕಾಣಿಸಿಕೊಂಡ ಸಂಜನಾ

    ಬೆಂಗಳೂರು: ಒಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಇದೀಗ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

    Sanjana Galrani

    ಇಂದಿನಿಂದ ದೇಶಾದ್ಯಂತ ನವರಾತ್ರಿ ಪ್ರಾರಂಭವಾಗಿದ್ದು, ಜನ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಸದಾ ಮಾಡ್ರೆನ್ ಡ್ರೆಸ್ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರು ಇದ್ದಕ್ಕಿದ್ದಂತೆ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾಬ್ ಕಿರಿಕ್‍ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ

    Sanjana Galrani

    ಈ ವೀಡಿಯೋ ಸಂಜನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಸಂಜನಾ ಕೆಂಪು ಬಣ್ಣದ ಸೀರೆ, ಆಭರಣಗಳನ್ನು ತೊಟ್ಟಿದ್ದು, ಕೈಯಲ್ಲಿ ಕಮಲ, ತ್ರಿಶೂಲ ಹಿಡಿದು, ಕಿರೀಟ ತೊಟ್ಟು, ದೇವಿಯಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಅತ್ಯಂತ ಪ್ರತಿಭಾವಂತ ತಂಡ ಇದನ್ನು ಶೂಟ್ ಮಾಡಿದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಸಂಜನಾ ಗಲ್ರಾನಿ ಓಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೋಪಾತಾಪ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ

    ಈ ಸಂಬಂಧ ಸಂಜನಾ, ಆತ ಎಸಿ ಹಾಕುವುದಿಲ್ಲ ಎಂದು ರೂಡ್ ಆಗಿ ಹೇಳಿದ. ಆದರೆ ಆತ ಕೋವಿಡ್ ರೂಲ್ಸ್ ಇದೆ ಹಾಕಲ್ಲ ಅಂತ ಹೇಳಿಲ್ಲ. ನಾನು ಎಸಿ ಕಾರನ್ನೇ ಬುಕ್ ಮಾಡಿದ್ದೆ. ಎಸಿ ಹಾಕಲು ಸರ್ವೀಸ್ ಕೊಡಬೇಕು. ಒಂದು ಹುಡುಗಿಯನ್ನ ರಸ್ತೆಯಲ್ಲಿ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದಾಗ ಭಯ ಆಯ್ತು. ನಾನು ಒಂದು ಸಿಂಗಲ್ ಪದದಲ್ಲೂ ಆತನನ್ನ ನಿಂದಿಸಿಲ್ಲ ಎಂದು ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ಟ್ವೀಟ್ ಮಾಡುವ ಮೂಲಕ ತಳ್ಳಿ ಹಾಕಿದ್ದರು.

    ಆದರೆ ಸಂಜನಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಮಣಿ ಆರೋಪಿಸಿದ್ದರು. ಅಲ್ಲದೆ ಸಂಜನಾ ನಡೆದುಕೊಂಡಿರುವ ಬಗ್ಗೆ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಹೇಳಿದ ಜಾಗಕ್ಕೆ ಹೋಗಿಲ್ಲ ಎಂದು ಸಂಜನಾ ಕೆಂಡಾಮಲರಾಗಿದ್ದರಂತೆ. ಅದೇ ರೀತಿ ಅವಾಚ್ಯ ಶಬ್ದದಿಂದ ಸಂಜನಾ ನಿಂದಿಸಿದರು ಎಂದು ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ಕ್ಯಾಬ್ ಚಾಲಕ ಮಣಿ ದೂರು ದಾಖಲಿಸಿದ್ದಾರೆ.

  • ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    – ಇವತ್ತಿನ ಬಣ್ಣ ಹಳದಿ

    ಇವತ್ತಿನಿಂದ ನವರಾತ್ರಿ ಪ್ರಾರಂಭವಾಗುತ್ತಿದೆ. ಈ 9 ದಿನಗಳಲ್ಲಿ ದುರ್ಗಾದೇವಿಯ ವಿವಿಧ ಅವತಾರಗಳನ್ನು ಆಚರಿಸಲಾಗುತ್ತದೆ. ಮೊದಲ ದಿನ ಅಕ್ಟೋಬರ್ 7, ಇಂದು ದುರ್ಗಿಯ ಶೈಲಪುತ್ರಿ ಅವತಾರದ ಪೂಜೆಯಿಂದ ಆರಂಭವಾಗುತ್ತೆ.

    ಶೈಲಪುತ್ರಿ ಅವತಾರ ಏಕೆ ಆಯಿತು?
    ಹಿಂದೂ ಪುರಾಣದ ಪ್ರಕಾರ, ಸತಿ ದೇವಿಯು ಸ್ವಯಂ-ಅಗ್ನಿಕುಂಡಕ್ಕೆ ಅಹುತಿಯಾದ ನಂತರ ಶೈಲಪುತ್ರಿಯಾಗಿ ಜನಿಸಿದಳು. ಶೈಲಪುತ್ರಿಯನ್ನು ಪಾರ್ವತಿ ಎಂದೂ ಕರೆಯುತ್ತಾರೆ. ಹಿಮಾಲಯದ ಮಗಳು. ಶೈಲಪುತ್ರಿ ಎಂದರೆ ಪರ್ವತನ ಮಗಳು. ಶೈಲ್ ಎಂದರೆ ಪರ್ವತ ಮತ್ತು ಪುತ್ರಿ ಎಂದರೆ ಮಗಳು. ಶೈಲಪುತ್ರಿ ದೇವಿಯನ್ನು ಮೊದಲ ದಿನ ಪೂಜಿಸಲಾಗುತ್ತದೆ. ಡ್ರಿಕ್ ಪಂಚಾಂಗದ ಪ್ರಕಾರ, ಶೈಲಪುತ್ರಿ ದೇವಿಯು ಚಂದ್ರನನ್ನು ನಿಯಂತ್ರಿಸುತ್ತಾಳೆ. ಅವಳು ಎಲ್ಲಾ ಅದೃಷ್ಟಗಳನ್ನು ಒದಗಿಸುತ್ತಾಳೆ ಎಂದು ಹೇಳಲಾಗುತ್ತೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

    ಶೈಲಪುತ್ರಿಯು ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ. ಅವಳನ್ನು ಹೇಮಾವತಿ ಎಂದೂ ಕರೆಯುತ್ತಾರೆ. ಶೈಲಪುತ್ರಿ ದುರ್ಗಾದೇವಿಯ ಪ್ರಮುಖ ಅವತಾರವಾದ್ದರಿಂದ ಮೊದಲ ದಿನದಂದು ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಯು ಸತಿ ದೇವಿಯಂತೆ ಶಿವನನ್ನು ಮದುವೆಯಾಗಿದ್ದಾಳೆ.

    ಇಂದು ಪೂಜೆ ಮಾಡಬೇಕಾದರೆ ಹಳದಿ ಬಣ್ಣವನ್ನು ತೊಟ್ಟರೆ ಶ್ರೇಷ್ಠ.

  • 10 ಸಾವಿರ ಬಣ್ಣ ಬಣ್ಣದ ಬಳೆಗಳಿಂದ ದುರ್ಗಾದೇವಿಗೆ ಅಲಂಕಾರ

    10 ಸಾವಿರ ಬಣ್ಣ ಬಣ್ಣದ ಬಳೆಗಳಿಂದ ದುರ್ಗಾದೇವಿಗೆ ಅಲಂಕಾರ

    ಧಾರವಾಡ: ಕೊರೊನಾ ಹಿನ್ನೆಲೆಯಲ್ಲಿ ನವರಾತ್ರಿ ಹಬ್ಬದ ಸಡಗರಕ್ಕೆ ಸ್ವಲ್ಪ ಹಿನ್ನೆಡೆಯಾಗಿದ್ದರೂ ಕೂಡ ದೇವತೆಗಳಿಗೆ ಅಲಂಕಾರ ಪೂಜೆಯ ಸಂಭ್ರಮದಲ್ಲಿ ಯಾವುದೇ ಕಡಿಮೆಯಾಗಿಲ್ಲ.

    ಧಾರವಾಡ ನಗರದ ಹಳೆ ಕೋಟೆಯಲ್ಲಿರುವ ಪುರಾಣ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ನಾಲ್ಕನೇ ದಿನದ ದಸರಾ ಪೂಜೆಯ ಪ್ರಯುಕ್ತ ಹತ್ತು ಸಾವಿರಕ್ಕೂ ಹೆಚ್ಚು ಬಣ್ಣ ಬಣ್ಣದ ಬಳೆಗಳಿಂದ ದೇವಿಗೆ ಅಲಂಕಾರ ಮಾಡಲಾಗಿದೆ. ಎಲ್ಲ ಬಣ್ಣದ ಗಾಜಿನ ಬಳೆಗಳನ್ನೇ ಬಳಸಿ ದೇವಿಯನ್ನು ಅಲಂಕರಿಸಲಾಗಿದೆ.

    ಮುಖ್ಯವಾಗಿ ಕೊರೊನಾ ಹಿನ್ನೆಲೆ ಯಾವುದೇ ಹಬ್ಬ, ಕಾರ್ಯಕ್ರಮಗಳು ನಡೆಯದ ಕಾರಣ ಬಳೆ ವ್ಯಾಪಾರಿಗಳು ಸಂಕಷ್ಟದಲ್ಲಿದ್ದರು. ಆದರೆ ದೇವಿಗೆ ಸಾವಿರಾರೂ ಬಳೆಗಳನ್ನು ಬಳಸಿ ಅಲಂಕಾರ ಮಾಡುವ ಮೂಲಕ ದೇವಸ್ಥಾನ ಮಂಡಳಿಯವರು ಸಂಕಷ್ಟದಲ್ಲಿರುವ ಬಳೆಗಾರರ ಕೈ ಹಿಡಿಯುವ ಕಾರ್ಯ ಮಾಡಿದ್ದಾರೆ.

  • 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    ವಿಶಾಖಪಟ್ಟಣಂ: ನವರಾತ್ರಿ ಸಂಭ್ರಮದಲ್ಲಿ ನವ ದುರ್ಗೆಯರ ಆರಾಧನೆ ದೇಶದೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತದೆ. ಆದ್ದರಿಂದ ಈ ಬಾರಿ ನವರಾತ್ರಿ ಆಚರಣೆ ವಿಶಾಖಪಟ್ಟಣದಲ್ಲಿ ಜೋರಾಗಿಯೇ ನಡೆಯುತ್ತಿದ್ದು, ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ ಬರೋಬ್ಬರಿ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟಿನಿಂದ ಸಿಂಗರಿಸಿ ಆರಾಧಿಸಲಾಯಿತು.

    ಭಾನುವಾರ ದುರ್ಗಾಷ್ಠಮಿ ದಿನದ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಜೊತೆಗೆ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ ಹಾಕಿ, ದೇವಿಯ ಸುತ್ತಲು ನೋಟುಗಳಿಂದ ಅಲಂಕರಿಸಲಾಗಿತ್ತು. ಈ ವಿಶೇಷ ಅಲಂಕಾರಕ್ಕೆ ಬರೋಬ್ಬರಿ ಎರಡು ಕೋಟಿ ರೂಪಾಯಿ ನೋಟುಗಳನ್ನು ಬಳಸಲಾಗಿತ್ತು. ಈ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.

    ಈ ವಿಶೇಷ ಅಲಂಕಾರಕ್ಕೆ ವಿದೇಶಿ ನೋಟುಗಳನ್ನು ಕೂಡ ಬಳಸಲಾಗಿತ್ತು. ಅಲ್ಲದೆ ದೇವಿಗೆ ಸುಮಾರು 200 ಭಕ್ತಾದಿಗಳು ಹಣ ಹಾಗೂ ಚಿನ್ನವನ್ನು ದೇಣಿಗೆ ಕೊಟ್ಟಿದ್ದರು. ಅದರಿಂದಲೇ ದುರ್ಗಾಷ್ಠಮಿಗೆ ದೇವಿಯ ಅಲಂಕಾರ ಮಾಡಿದ್ದೇವೆ. ಹಾಗೆಯೇ ಈ ಅಲಂಕಾರಕ್ಕೆ 1 ರೂ. ಮುಖಬೆಲೆಯ ನೋಟುಗಳಿಂದ ಹಿಡಿದು 2,000 ರೂ. ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ:ದೇಶದ ದುಬಾರಿ ಮೂರ್ತಿ – 50 ಕೆ.ಜಿ ಚಿನ್ನದಲ್ಲಿ ದುರ್ಗೆಗೆ ಅಲಂಕಾರ

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೆಂಡಾಲ್‍ನಲ್ಲಿ ದುರ್ಗೆಗೆ 50 ಕೆಜಿ ಚಿನ್ನದಿಂದ ಅಲಂಕರಿಸಿ, ಪೆಂಡಾಲ್ ನಿರ್ಮಿಸಲು 20 ಕೋಟಿ ರೂ. ಖರ್ಚು ಮಾಡಿದ್ದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದುರ್ಗಾ ಪೂಜೆಯನ್ನು ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಕೊಲ್ಕತ್ತಾದ ಸಂತೋಷ್ ಮಿತ್ರ ದುರ್ಗಾ ಉತ್ಸವ ಸಮಿತಿ ಸದಸ್ಯರು ಹಾಕಿರುವ ದುರ್ಗಾ ಪೆಂಡಲ್‍ನಲ್ಲಿ ಪ್ರತಿಷ್ಠಾಪಿರುವ ದುರ್ಗೆಗೆ ಬರೋಬ್ಬರಿ 50 ಕೆ.ಜಿ ಚಿನ್ನವನ್ನು ಹಾಕಿದ್ದಾರೆ. ದುರ್ಗಾ ದೇವಿಯ ಮೂರ್ತಿ ಹಾಗೂ ಪೆಂಡಾಲ್‍ಗೆ ಹಾಕಿರುವ ಬಂಗಾರವೆಲ್ಲಾ ಸೇರಿ ಒಟ್ಟು 20 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

    ಈ ಬಾರಿಯ ನವರಾತ್ರಿಯಲ್ಲಿ ಕೋಲ್ಕತ್ತಾದ ದುರ್ಗಾ ದೇವಿಯ ಪ್ರತಿಮೆ ದೇಶದ ಅತ್ಯಂತ ದುಬಾರಿ ಮೂರ್ತಿ ಎಂದು ಸಮಿತಿ ಹೇಳಿಕೊಂಡಿತ್ತು. ಸಂತೋಷ್ ಮಿತ್ರ ಚೌಕದಲ್ಲಿ ನಿರ್ಮಿಸಲಾದ ಪೆಂಡಾಲ್‍ನಲ್ಲಿರುವ ದುರ್ಗಾ ದೇವಿ ಪ್ರತಿಮೆ 13 ಅಡಿ ಎತ್ತರವಿದೆ. ದುರ್ಗಾ ಪ್ರತಿಮೆಗೆ ಚಿನ್ನವನ್ನು ಲೇಪಿಸಲಾಗಿದ್ದು, ದೇವಿಯ ಮೈಮೇಲೆ ಕೂಡ ಚಿನ್ನಾಭರಣವನ್ನು ಹಾಕಲಾಗಿದೆ. ಅಲ್ಲದೆ ದೇವಿಯ ವಾಹನವಾದ ಸಿಂಹದ ಪ್ರತಿಮೆಗೂ ಕೂಡ ಚಿನ್ನವನ್ನು ಲೇಪಿಸಲಾಗಿದೆ.

  • ದುರ್ಗಾ ಪೂಜೆ ಪೆಂಡಾಲ್‍ನಲ್ಲಿ ಅಜಾನ್ – ಆಕ್ರೋಶಕ್ಕೆ ಕಾರಣವಾದ ಪೂಜಾ ಸಮಿತಿ ನಡೆ

    ದುರ್ಗಾ ಪೂಜೆ ಪೆಂಡಾಲ್‍ನಲ್ಲಿ ಅಜಾನ್ – ಆಕ್ರೋಶಕ್ಕೆ ಕಾರಣವಾದ ಪೂಜಾ ಸಮಿತಿ ನಡೆ

    ಕೋಲ್ಕತ್ತಾ: ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ಅಜಾನ್ ನುಡಿಸಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ನವರಾತ್ರಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಜಾನ್(ಇಸ್ಲಾಮಿಕ್ ಕರೆ) ನುಡಿಸಿದ್ದಕ್ಕಾಗಿ ಕೋಲ್ಕತ್ತಾದ ಬೆಲಿಯಾಘಾಟಾ 33 ಪಲ್ಲಿ ದುರ್ಗಾ ಪೂಜಾ ಪೆಂಡಾಲ್ ಸಮಿತಿಯ ವಿರುದ್ಧ ದೂರು ದಾಖಲಿಸಲಾಗಿದೆ.

    ಸ್ಥಳೀಯ ವಕೀಲ ಸಾಂತನು ಸಿಂಘಾ ಅವರು ದೂರು ಸಲ್ಲಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಶಾಂತಿಗೆ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

    ಬೆಲಿಯಾಘಟ ದುರ್ಗಾ ಪೂಜಾ ಪೆಂಡಲ್‍ನಲ್ಲಿ ಅಜಾನ್ ನುಡಿಸುವ ವಿಡಿಯೋವನ್ನು ವಿಶ್ವ ಹಿಂದೂ ಪರಿಷತ್(ವಿಎಚ್‍ಪಿ) ಸದಸ್ಯರು ನನಗೆ ರವಾನಿಸಿದ್ದಾರೆ ಎಂದು ಸಿಂಘಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಪೂಜಾ ಸಮಿತಿಯು ಈ ಕುರಿತು ಸ್ಪಷ್ಟಪಡಿಸಿದ್ದು, ಜಾತ್ಯಾತೀತತೆಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದೆ.

    ಬೆಲಿಯಾಘಾಟಾ 33 ಪ್ಯಾಲಿ ಕ್ಲಬ್‍ನ ಕಾರ್ಯದರ್ಶಿ ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದು, ನಾವು ಒಟ್ಟಿಗೆ ಇದ್ದೇವೆ, ಒಬ್ಬಂಟಿಯಾಗಿಯಲ್ಲ ಹೀಗಾಗಿ ಆಚರಣೆಯ ಸಮಯದಲ್ಲಿ ಅಜಾನ್ ನುಡಿಸಿದ್ದೇವೆ. ಅಜಾನ್ ಮಾತ್ರವಲ್ಲ ನಾವು ಚರ್ಚ್, ದೇವಾಲಯ ಮತ್ತು ಮಸೀದಿಯ ಮಾದರಿಗಳನ್ನೂ ಬಳಸಿದ್ದೇವೆ ಹಾಗೂ ಅವುಗಳ ಚಿಹ್ನೆಯನ್ನೂ ಬಳಸಿದ್ದೇವೆ. ಮಾನವೀಯತೆಯು ಎಲ್ಲ ಧರ್ಮಗಳಿಗಿಂತ ಉನ್ನತವಾದದ್ದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪೂಜಾ ಸಮಿತಿಯ ಅಧ್ಯಕ್ಷರು ಈ ಕುರಿತು ವಿವರಿಸಿ, ನಾವೆಲ್ಲರೂ ಒಂದೇ ಎಂದು ನಾವು ನಂಬಿದ್ದೇವೆ. ಹುಟ್ಟಿದಾಗ ಯಾವುದೇ ಪ್ರತ್ಯೇಕತೆ ಇಲ್ಲ, ರಕ್ತದ ಬಣ್ಣದಲ್ಲಿ ವ್ಯತ್ಯಾಸವಿಲ್ಲ, ಹೀಗಿರುವಾಗ ಏಕೆ ಭೇದ ಭಾವ, ಎಲ್ಲ ಧರ್ಮಗಳು ನಮ್ಮ ಪ್ರಬಲ ದೇಶದ ಭಾಗವಾಗಿವೆ. ಇದು ಕೋಮು ಸೌಹಾರ್ದತೆಯ ಪ್ರತಿಬಿಂಬವಾಗಿದೆ, ನಾವು ಒಗ್ಗಟ್ಟಿನ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಲವರು ‘ಮಂದಿರ್ ಕಟ್ಟುತ್ತೇವೆ’ ಎಂದು ಕೂಗುತ್ತಿದ್ದಾರೆ. ಆದರೆ ಈ ಪೆಂಡಾಲ್‍ಗೆ ಭೇಟಿ ನೀಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ನಾಯಕ ಮುಕುಲ್ ರಾಯ್ ಈ ಕುರಿತು ಪ್ರತಿಕ್ರಿಯಿಸಿ, ಇದು ಒಂದು ಆಚರಣೆ, ನಾವು ನಮ್ಮ ಧರ್ಮವನ್ನು ನಂಬುತ್ತೇವೆ. ನಮ್ಮ ಧರ್ಮಕ್ಕೆ ಹಾನಿ ಮಾಡುವುದನ್ನು ನಾವು ಬಯಸುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಹಿಂದೂ ಜಾಗರಣ್ ಮಂಚ್ ದಕ್ಷಿಣ ಬಂಗಾಳದ ಪ್ರಚಾರಕ್ ಪ್ರಮುಖ್ ವಿವೇಕ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಮಸೀದಿಗಳಲ್ಲಿ ಅಥವಾ ಈದ್ ಸಮಯದಲ್ಲಿ ದುರ್ಗಾ ಸಪ್ತಸ್ತ್ರುತಿ ಪಾಥ್ ಅಥವಾ ಚಂಡಿ ಪಾಥ್ ಹಾಡುವುದನ್ನು ಕೇಳಿದ್ದೀರಾ, ಕ್ರಿಸ್‍ಮಸ್ ಸಮಯದಲ್ಲಿ ಚರ್ಚ್ ನಲ್ಲಿ ಹನುಮಾನ್ ಚಾಲೀಸಾ ಹಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ, ಜಾತ್ಯಾತೀತತೆಯ ಜವಾಬ್ದಾರಿ ಕೇವಲ ಹಿಂದೂಗಳ ಮೇಲೆ ಮಾತ್ರವಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಸಂಘಟನೆಯ ವಿರುದ್ಧ ಈಗಾಗಲೇ ಫುಲ್ಬಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಮುಸ್ಲಿಂ ಧರ್ಮ ಗುರು ಸಾಜಿದ್ ರಶೀದಿ ಈ ಕುರಿತು ಪ್ರತಿಕ್ರಿಯಿಸಿ, ಧಾರ್ಮಿಕ ಕಠಿಣವಾದಿಗಳು ಅಥವಾ ಪ್ರಚಾರ ಪಡೆಯಲು ಕೆಲವರು ಈ ರೀತಿ ಮಾಡುತ್ತಿದ್ದಾರೆ. ಇವರಿಗೆ ಭಾರತದ ಸಂಸ್ಕೃತಿ, ಮತ್ತು ಮೌಲ್ಯ ತಿಳಿದಿಲ್ಲ. ನಾವು ಬೆಳಗ್ಗೆ ಎದ್ದಾಗ ಅಜಾನ್ ಹೇಳುತ್ತೇವೆ. ಸಂಜೆ ಪ್ರಾರ್ಥನೆ ಕೇಳುತ್ತೇವೆ. ಧರ್ಮವು ಒಂದು ಕಡೆಯಾದರೆ ಸಂಸ್ಕೃತಿ ಇನ್ನೊಂದು ಕಡೆ ಇದೆ. ಈ ಸಂಸ್ಕೃತಿಯಿಂದಾಗಿ ಭಾರತ ಎಲ್ಲರಿಗೂ ತಿಳಿದಿದೆ. ಇವರು ದ್ವೇಷವನ್ನು ಹರಡಲು ಹಾಗೂ ದೇಶವನ್ನು ವಿಭಜಿಸಲು ಕೆಲವರು ಬಯಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  • ದಾಂಡಿಯಾ, ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ರು ಕಾರವಾರದ ಮಂದಿ: ವಿಡಿಯೋ ನೋಡಿ

    ದಾಂಡಿಯಾ, ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ರು ಕಾರವಾರದ ಮಂದಿ: ವಿಡಿಯೋ ನೋಡಿ

    ಕಾರವಾರ: ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವವನ್ನು ರಾಜ್ಯದ ಕರಾವಳಿ ತಾಲೂಕಾದ ಕಾರವಾರದಲ್ಲೂ ಸಹ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗುಜರಾತ್, ರಾಜಸ್ಥಾನ, ಪಂಜಾಬ್ ನಂತಹ ರಾಜ್ಯಗಳಲ್ಲಿ ನವರಾತ್ರಿ ಸಂಭ್ರಮದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವ ದಾಂಡಿಯಾ, ಗರ್ಬಾ ನೃತ್ಯವನ್ನು ಮಾಡಿ ಸಂಭ್ರಮಿಸಿದ್ದಾರೆ.

    ಒಂದೆಡೆ ದೀಪಾಲಂಕೃತಗೊಂಡಿರುವ ಆವರಣದಲ್ಲಿ ಬಣ್ಣ ಬಣ್ಣದ ಸೀರೆಯನ್ನುಟ್ಟು ಕೈಯಲ್ಲಿ ಕೋಲನ್ನ ಹಿಡಿದು ನೃತ್ಯದಲ್ಲಿ ಭಾಗಿಯಾದ ಮಹಿಳೆಯರು, ಇನ್ನೊಂದೆಡೆ ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಿರುವ ಪುರುಷರು, ಯುವಕ, ಯುವತಿಯರು ಗುಜರಾತಿ ಸ್ಪೆಷಲ್ ದಾಂಡಿಯಾ ಆಡಿ ಕುಣಿದು ಕುಪ್ಪಳಿಸಿದ್ದಾರೆ.

    ಕಾರವಾರದ ದೇವಳಿವಾಡ, ಸೋನಾರವಾಡಗಳದ್ದು ಕಳೆದ 13 ವರ್ಷಗಳಿಂದ ಹೊರ ರಾಜ್ಯಕ್ಕೆ ಸೀಮಿತವಾಗಿದ್ದ ದಾಂಡ್ಯವನ್ನು ಈ ಭಾಗದಲ್ಲಿಯೂ ಮಾಡುವ ಮೂಲಕ ಜನರು ನವರಾತ್ರಿಯನ್ನು ವಿಶೇಷವಾಗಿ ಆಚರಿಸಿ ಎಂಜಾಯ್ ಮಾಡಿದರು. ನವರಾತ್ರಿ ಉತ್ಸವದ ಒಂಬತ್ತೂ ದಿನಗಳಲ್ಲಿ ಕಾರವಾರ ತಾಲೂಕಿನಲ್ಲಿ ದಾಂಡಿಯಾ ನೃತ್ಯವನ್ನ ಆಯೋಜನೆ ಮಾಡಲಾಗಿರುತ್ತದೆ. ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿ ಮಾತಾ, ಕುಂಠಿ ಮಹಾಮಾಯಿ ಸೇರಿದಂತೆ ಅನೇಕ ದೇವಾಲಯದ ಆವರಣದಲ್ಲಿ ದಾಂಡಿಯಾವನ್ನ ಆಯೋಜನೆ ಮಾಡಲಾಗಿರುತ್ತದೆ. ಇದಕ್ಕಾಗಿ ದಸರಾ ದಿನದಿಂದ 15 ದಿನಗಳ ಕಾಲ ತರಬೇತಿ ಪಡೆದು ನಂತರ ಮಾಡುತ್ತಾರೆ. ಇದಲ್ಲದೇ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ತಂಡ ಕಟ್ಟಿಕೊಂಡು ದಾಂಡಿಯಾ ನೃತ್ಯದ ಮೂಲಕ ದೇವಿಗೆ ವಿಶೇಷ ಪೂಜೆ ನೆರವೇರಿಸಿ ನವರಾತ್ರಿ ಉತ್ಸವವನ್ನು ಆಚರಿಸಿದ್ದಾರೆ.

    ಒಟ್ಟಾರೆ ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿ ಪಡೆದಿರುವ ಕಾರವಾರದಲ್ಲಿನ ಜನರು ನವರಾತ್ರಿ ಉತ್ಸವವನ್ನ ದಾಂಡಿಯಾ ನೃತ್ಯದ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಕಾರವಾರದ ಬಹುತೇಕ ಎಲ್ಲಾ ಕಾಲೋನಿಗಳಲ್ಲಿ ದಾಂಡಿಯಾ ಆಯೋಜನೆ ಮಾಡುವುದರಿಂದ ಜಾತಿ-ಪಂಗಡಗಳಿಲ್ಲದೇ ಎಲ್ಲಾ ಭೇದವನ್ನು ಮರೆತು ಬೇರೆಯುವುದರಿಂದ ಜನರಲ್ಲಿ ಸೌಹಾರ್ದತೆ ಭಾವ ಬೆಳೆಯಲು ಸಹಾಯ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv