Tag: Navalagunda

  • ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಂದ ಮಗ ಜೈಲುಪಾಲು

    ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಂದ ಮಗ ಜೈಲುಪಾಲು

    ಧಾರವಾಡ: ಮಗನ ದುರಾಸೆಗೆ ತಂದೆಯೋರ್ವ ತನ್ನ ಮಗನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಘಟನೆ ಧಾರವಾಡ (Dharawada) ಜಿಲ್ಲೆಯಲ್ಲಿ ನಡೆದಿದೆ.

    ಅಡಿವೆಪ್ಪ ತಡಕೋಡ (57) ಎಂಬ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ನಿವಾಸಿ ನ.13 ರಂದು ತನ್ನ ಮನೆಯ ಪಕ್ಕದ ಶೆಡ್‌ನಲ್ಲಿ ಮಲಗಿದ ಜಾಗದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ. ಅಡಿವೆಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳಗಾಗುವಷ್ಟರಲ್ಲಿ ಅಡಿವೆಪ್ಪ ಹೆಣವಾಗಿದ್ದನ್ನು ಕಂಡು ಆತನ ಮನೆಯವರು ಕಕ್ಕಾಬಿಕ್ಕಿಯಾಗಿದ್ದರು. ಆದರೆ, ಅಡಿವೆಪ್ಪನ ಮಗ ಶಿವಯೋಗಿ ತನಗೇನೂ ಸಂಬಂಧವಿಲ್ಲ, ಅಮಾಯಕ ಎನ್ನುವ ರೀತಿಯಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ. ಇದನ್ನೂ ಓದಿ: ಗುಜರಾತ್‌ | ನಕಲಿ ವೈದ್ಯರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ – ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್‌ ಹೆಸರು!

    ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದ. ಇದಕ್ಕೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿ ತನ್ನ ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡುವ ಶಾಸ್ತ್ರ ಕೂಡ ಇಟ್ಟುಕೊಂಡಿದ್ದ. ಅಡಿವೆಪ್ಪನ ಹತ್ಯೆಯಾಗುವ ಹಿಂದಿನ ರಾತ್ರಿ ಇದೇ ವಿಷಯಕ್ಕೆ ಮನೆಯಲ್ಲಿ ಮಗನೊಂದಿಗೆ ಜಗಳ ಕೂಡ ನಡೆದಿತ್ತಂತೆ. ಅದಾದ ಬಳಿಕ ಅಡಿವೆಪ್ಪ ತನ್ನ ಮನೆಯ ಪಕ್ಕವೇ ಇದ್ದ ಶೆಡ್‌ನಲ್ಲಿ ಮಲಗಿಕೊಂಡಿದ್ದ. ಎಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ತಂದೆ ಮುಳುವಾಗುತ್ತಾನೋ ಎಂದು ಮಗನೇ ತನ್ನ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ವಕ್ಫ್ ವಿರುದ್ಧ ಬಿಜೆಪಿ ಹೋರಾಟಕ್ಕೆ ಮುಹೂರ್ತ; ನ.21, 22ರಂದು ರಾಜ್ಯಾದ್ಯಂತ ಪ್ರತಿಭಟನೆ: ಅಶ್ವಥ್‌ ನಾರಾಯಣ್

    ಅಡಿವೆಪ್ಪನ ಹತ್ಯೆಯಾದ ನಂತರ ಇಡೀ ತಲೆಮೊರಬ ಗ್ರಾಮದ ತುಂಬೆಲ್ಲ ಸ್ಮಶಾನ ಮೌನ ಆವರಿಸಿತ್ತು. ಆದರೆ, ಅಡಿವೆಪ್ಪನನ್ನು ಹತ್ಯೆ ಮಾಡಿದ ಶಿವಯೋಗಿ ಮಾತ್ರ ತನಗೇನೂ ಸಂಬಂಧ ಇಲ್ಲ ಎನ್ನುವ ರೀತಿ ಇದ್ದ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಖಾಕಿ ಪಡೆ ಎಲ್ಲ ಕೆಲಸ ಮುಗಿಸಿದ ನಂತರ ಶಿವಯೋಗಿಯನ್ನು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದು ಎಂಬ ಸತ್ಯಾಂಶವನ್ನು ಹೊರ ಹಾಕಿದ್ದಾನೆ. ಸದ್ಯ ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆಗಳನ್ನ ಪರಿಹರಿಸೋವರೆಗೂ ನಾನು ವಿರಮಿಸೋದಿಲ್ಲ: ಡಿಕೆಶಿ

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ಧಾರವಾಡ: ಜಿಲ್ಲೆಯ ನವಲಗುಂದ (Navalagunda) ತಾಲೂಕಿನ ತಲೆಮೊರಬ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಅಡಿವೆಪ್ಪ ತಡಕೋಡ (57) ಮೃತ ದುರ್ದೈವಿ. ಕಾಳು ಶೇಖರಿಸಿಟ್ಟಿದ್ದ ಮನೆಯಲ್ಲಿ ಅಡಿವೆಪ್ಪ ಮಲಗಿಕೊಂಡಿದ್ದ ಈ ವೇಳೆ ದುಷ್ಕರ್ಮಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳು ಯಾರು ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಇದನ್ನೂ ಓದಿ: ಬೀದರ್‌ನಲ್ಲಿ ಚಿತ್ರಾನ್ನ ತಿಂದು ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ

    ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ನವಲಗುಂದ ಠಾಣೆ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ – ಇಬ್ಬರು ಮಕ್ಕಳು, ಚಾಲಕನಿಗೆ ಗಂಭೀರ ಗಾಯ

  • ಧಾರವಾಡದ ನವಲಗುಂದದಲ್ಲಿ ಗುಂಡಿನ ಸದ್ದು

    ಧಾರವಾಡದ ನವಲಗುಂದದಲ್ಲಿ ಗುಂಡಿನ ಸದ್ದು

    ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗುಂಡಿನ ಸದ್ದು ಮೊಳಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಮಲ್ಲಪ್ಪ ಕರಿ ಎಂಬಾತ ಅದೇ ಗ್ರಾಮದ ಶರಣಪ್ಪ ಕಾಳೆ ಎಂಬಾತನ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರ ಮಧ್ಯೆ ಹಣದ ವಿಚಾರವಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಮಲ್ಲಪ್ಪ ಗುಂಡು ಹಾರಿಸಿದ್ದಾನೆ. ಶರಣಪ್ಪನ ಹೊಟ್ಟೆ ಮತ್ತು ಕೈಗೆ ಗುಂಡು ತಗುಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನವಲಗುಂದ ಠಾಣೆಯ ಪಿಎಸ್‍ಐ ಜಯಪಾಲ್ ಪಾಟೀಲ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಲಿದೆ.

  • ಎಣ್ಣೆ ಏಟಲ್ಲಿ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ

    ಎಣ್ಣೆ ಏಟಲ್ಲಿ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ

    ಧಾರವಾಡ: ಮದ್ಯದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಬೆಂಕಿಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ.

    ಗುಡಿಸಾಗರ ಗ್ರಾಮದ ಭೀರಪ್ಪ ಕಟಿಗಾರ (40) ಕೃತ್ಯ ಎಸೆಗಿದ ಪಾಪಿ. ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಭೀರಪ್ಪ ಹಾಗೂ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

    ಭೀರಪ್ಪ ಮದ್ಯ ಕುಡಿದು ಮನೆಗೆ ಬಂದಿದ್ದ. ಈ ವೇಳೆ ದಂಪತಿಯ ಮಧ್ಯೆ ಜಗಳವಾಗಿದ್ದು, ಕೋಪಗೊಂಡ ಆರೋಪಿ ಪೆಟ್ರೋಲ್ ಸುರಿದು ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅಲ್ಲದೆ ತಾನೂ ಬೆಂಕಿ ಹಚ್ಚಿಕೊಂಡಿದ್ದ. ಇದನ್ನು ನೋಡಿದ ನೆರೆಹೊರೆಯವರು ಬೆಂಕಿ ನಂದಿಸಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಭೀರಪ್ಪ ಮೊದಲು ಸಾವನ್ನಪ್ಪಿದ್ದಾನೆ. ಬಳಿಕ ಪತ್ನಿ ಫಕೀರವ್ವ ಕೂಡ ಮೃತಪಟ್ಟಿದ್ದು, ಮಗಳು ತಂದೆಯ ಕೃತ್ಯದಿಂದಾಗಿಯೇ ಅನಾಥವಾಗುವ ಸ್ಥಿತಿ ಬಂದಿದೆ. ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಾರವಾಡದಲ್ಲಿ ಗರಿ ಗರಿ ರಾಜಕೀಯ ಗಿರಮಿಟ್ಟು – ಅಖಾಡ ಹೇಗಿದೆ?

    ಧಾರವಾಡದಲ್ಲಿ ಗರಿ ಗರಿ ರಾಜಕೀಯ ಗಿರಮಿಟ್ಟು – ಅಖಾಡ ಹೇಗಿದೆ?

    ಧಾರವಾಡ ಒಂದು ರೀತಿಯಲ್ಲಿ ಹೈ ವೋಲ್ಟೇಜ್ ಮ್ಯಾಚ್ ನಡೆಯೋ ಕ್ಷೇತ್ರ. ಈ ಬಾರಿ ಧಾರವಾಡದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ, ಮಹದಾಯಿ, ಕಳಸಾ-ಬಂಡೂರಿ ಹೋರಾಟಗಳೇ ಹೈಲೈಟ್. ಧರ್ಮಯುದ್ಧದ ಜೊತೆಗೆ ಸೇರಿರೋ ಜಲಯುದ್ಧದ ನಡುವೆ ಗೆಲುವಿನ ಝಂಡಾ ಹಾರಿಸೋರು ಯಾರು ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಅಂದ ಹಾಗೆ, ಧಾರವಾಡದ ಮತಬ್ಯಾಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಹಾಗೂ ವೀರಶೈವ ಮತದಾರರೇ ನಿರ್ಣಾಯಕರು. 8 ವಿಧಾನಸಭಾ ಕ್ಷೇತ್ರಗಳಿರೋ ಧಾರವಾಡದಲ್ಲಿ 4ರಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿಷ್ಟೇ ಜೆಡಿಎಸ್ ತಮ್ಮ ತಮ್ಮ ಅಸ್ತಿತ್ವ ಕಂಡುಕೊಂಡಿವೆ.

    ಧಾರವಾಡ…ಅಲ್ಲಲ್ಲ..ದಾರವಾಡ..!
    ಅವಳಿ ನಗರದಲ್ಲಿ ಒಂದಾದ ಧಾರವಾಡ ಜಿಲ್ಲೆಗೆ ಈ ಹೆಸರು ಬರೋದ್ರ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ವಿಜಯನಗರ ಕಾಲದಲ್ಲಿ ಧಾರರಾವ್ ಅನ್ನೋನು 1403ರಲ್ಲಿ ಇಲ್ಲಿ ಕೋಟೆ ಕಟ್ಟಿದನಂತೆ. ಹೀಗಾಗಿ ದಾರವಾಡ ಅಂತಾ ಕರೆಯಲಾಯ್ತು. ಕಾಲ ಸರಿದಂತೆ ಇದು ಧಾರವಾಡವಾಗಿ ಜನರ ಬಾಯಲ್ಲಿ ರೂಪಾಂತರವಾಗ್ತಾ ಹೋಯ್ತು. ಶಾಸನಗಳಲ್ಲಿ ದಾರವಾಡ ಅನ್ನೋ ಹೆಸ್ರೇ ಉಲ್ಲೇಖವಾಗಿದೆ.

    ಕೇಳಿಸದೆ ಧಾರವಾಡದ ಕಲ್ಲು ಕಲ್ಲಿನಲೂ ಸಂಗೀತ ಸುಧೆ..!
    ಧಾರವಾಡ ಕರ್ನಾಟಕದ ಸಾಂಸ್ಕೃತಿಕ ಸ್ವರ ಸಾಮ್ರಾಟ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರೂರು. ದೇಶ ವಿದೇಶಗಳಲ್ಲಿ ಪ್ರಖ್ಯಾತಿಗಳಿಸಿದ ಪಂಡಿತ ಮಲ್ಲಿಕಾರ್ಜುನ ಮನಸೂರರು, ಡಾ. ಗಂಗೂಬಾಯಿ ಹಾನಗಲ್, ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಭೀಮಸೇನ ಜೋಷಿ, ಮಾಧವಗುಡಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಸಂಗೀತಾ ಕಟ್ಟಿ, ಕೈವಲ್ಯ ಗುರವ, ಕೊಳಲು ವಾದಕ ಪ್ರವೀಣ್ ಗೊಡ್ಕಿಂಡಿ, ಗೀತಾ ಜಾವಡೇಕರ್, ಹೀಗೆ ಸಂಗೀತ ಕ್ಷೇತ್ರಕ್ಕೆ ಅಗಣಿತ ಕೊಡುಗೆ ಕೊಟ್ಟ ದಿಗ್ಗಜರ ಊರು ಧಾರವಾಡ.

    ಇಲ್ಲರಳುವ ಹೂವೂ ಸೂಸುತ್ತೆ ಅಕ್ಷರಗಳ ಕಂಪು..!
    ಧಾರವಾಡದ ಜನರಿಗೆ ಸಾಹಿತ್ಯ ಪ್ರೇಮ, ಭಾಷಾ ಪ್ರೀತಿ ತುಸು ಜಾಸ್ತಿ ಅಂತಾನೇ ಅನ್ಸುತ್ತೆ. ಯಾಕಂದ್ರೆ, ಊರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನ ಯಾರೂ ಮರೆಯೋ ಹಾಗೇ ಇಲ್ಲ. ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ದ.ರಾ.ಬೇಂದ್ರೆ ,ಆನಂದಕಂದ (ಬೆಟಗೇರಿ ಕೃಷ್ಣಶರ್ಮ), ಆಲೂರು ವೆಂಕಟರಾಯರು, ಎಂ.ಎಂ.ಕಲಬುರ್ಗಿ, ಕೀರ್ತಿನಾಥ ಕುರ್ತಕೋಟಿ, ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಸಾಗುತ್ತೆ.

    ಧಾರವಾಡ ಹೆಸರಿನ ಜೊತೆ ಬೆಸೆದುಕೊಂಡ ಸಿಹಿಯ ನಂಟು..
    ಧಾರವಾಡ ಹೆಸರು ಕೇಳಿದ ತಕ್ಷಣ ನೆನಪಾಗೋದು ಧಾರವಾಡ ಪೇಡ. ಈ ಸ್ವಾದ ಧಾರವಾಡಕ್ಕೆ ಬೆಸೆದುಕೊಂಡು 175 ವರ್ಷಗಳೇ ಕಳೆದವು ಅಂದ್ರೆ ನೀವು ನಂಬಲೇಬೇಕು. ಆಂಗ್ಲ ಪದದಿಂದ ಈ ಸಿಹಿಗೆ ಪೇಡಾ ಅನ್ನೋ ಪದ ಬಂತು ಅನ್ನೋ ಉಲ್ಲೇಖಗಳೂ ಸಿಗುತ್ವೆ. ಅಂದ ಹಾಗೆ, ಮೊದಲಿಗೆ ಉತ್ತರ ಭಾರತದಿಂದ ಧಾರವಾಡಕ್ಕೆ ವಲಸೆ ಬಂದ ಠಾಕೂರರು ಈ ಸಿಹಿ ತಿಂಡಿಯನ್ನ ತಮ್ಮ ಹೊಟ್ಟೆ ಪಾಡಿಗಾಗಿ ಮಾಡೋದಕ್ಕೆ ಶುರು ಮಾಡಿದ್ರು. ಮೊದಲಿಗೆ ಠಾಕೂರ ಪೇಡಾ ಅಂತಿದ್ದಿದ್ದು ಕಾಲ ಕ್ರಮೇಣವಾಗಿ ಧಾರವಾಡ ಪೇಡಾ ಆಯ್ತು.

    ಕುಂದಗೋಳದಲ್ಲಿ ವಿಜಯದ ಗೋಲ್ ಹೊಡೆಯೋರು ಯಾರು..?
    ಕುಂದಗೋಳ ಅಂದ್ರೆ ಒಂದರ್ಥದಲ್ಲಿ ಬರಡು ನೆಲ. ಲಿಂಗಾಯತ ವೀರಶೈವರು, ಕುರುಬರ ಮತಗಳೇ ಇಲ್ಲಿ ನಿರ್ಣಾಯಕ. ಕಳೆದ ಬಾರಿ ಸಿ ಎಸ್ ಶಿವಳ್ಳಿ ಕಾಂಗ್ರೆಸ್ ನಿಂದ ಗೆದ್ದಿದ್ರು. ಈ ಬಾರಿ ಕೂಡಾ ಸಿಎಸ್ ಶಿವಳ್ಳಿಯವ್ರೇ ಕಾಂಗ್ರೆಸ್ ಕ್ಯಾಂಡಿಡೇಟ್. ಕಳೆದ ಬಾರಿ ಬಿಜೆಪಿ ಹಾಗೂ ಕೆಜೆಪಿ ಒಡೆದ ಲಾಭ ಪಡೆದಿದ್ದ ಶಿವಳ್ಳಿ ಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡೋದ್ರಲ್ಲಿ ಸಂಶಯವೇ ಇಲ್ಲ. ಚಿಕ್ಕನಗೌಡ ಈಶ್ವರಗೌಡ ಬಿಜೆಪಿಯ ಹುರಿಯಾಳು. ಜೆಡಿಎಸ್ ನಿಂದ ಮಲ್ಲಿಕಾರ್ಜುನ ಅಕ್ಕಿ ಕಣದಲ್ಲಿದ್ದಾರೆ. ಕುಂದರಗೋಳದ ಮತದಾರ ಯಾರನ್ನ ಗೆಲುವಿನ ಗಾದಿಯಲ್ಲಿ ಕೂರಿಸ್ತಾನೆ ಅನ್ನೋದೇ ನಿಗೂಢ.

    ಗ್ರಾಮೀಣ ಕ್ಷೇತ್ರದಲ್ಲಿ ಮಿಣ ಮಿಣ ಮಿನುಗೋರ್ಯಾರು..?
    ಧಾರವಾಡ ಗ್ರಾಮೀಣ ಸಚಿವ ವಿನಯ್ ಕುಲಕರ್ಣಿಯವ್ರ ಕ್ಷೇತ್ರ. ಇಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಕೊಟ್ಟಿದ್ದಾರೆ ಅನ್ನೋದಕ್ಕಿಂತ ಇತ್ತೀಚಿಗಿನ ಕೆಲವೊಂದಷ್ಟು ಬೆಳವಣಿಗೆಗಳಿಗೇ ಈ ಕ್ಷೇತ್ರ ಸುದ್ದಿ ಮಾಡಿತ್ತು. ಯೋಗೇಶ್ ಗೌಡ ಕೊಲೆ ಪ್ರಕರಣ, ಲಿಂಗಾಯತ ಪ್ರತ್ಯೇಕ ಧರ್ಮದ ಗೊಂದಲಗಳು ವಿನಯ್ ಕುಲಕರ್ಣಿಯವ್ರಿಗೆ ಹಿನ್ನಡೆ ತಂದ್ರೆ ಅಚ್ಚರಿ ಏನಿಲ್ಲ. ಇವರಿಗೆ ಪ್ರಬಲ ಪೈಪೋಟಿ ಕೊಡೋದಕ್ಕೆ ಬಿಜೆಪಿಯಿಂದ ಅಮೃತ ದೇಸಾಯಿ ಶಕ್ತಿ ಮೀರಿ ಕ್ಯಾಂಪೇನ್ ನಲ್ಲಿ ತೊಡಗಿದ್ದಾರೆ. ಇಲ್ಲಿ ಇವರಿಬ್ಬರ ನಡುವೆಯೇ ನೇರ ಹಣಾಹಣಿ.

    ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ ಯಾರು ಉತ್ತಮ..?
    ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ 2013ರಲ್ಲಿ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ರಾಜಕೀಯದಿಂದ ದೂರ ಸರಿದ ಬಳಿಕ ಅವ್ರ ಪುತ್ರ ಅಖಾಡಕ್ಕೆ ಧುಮುಕಿದ್ರು. ದೂರದೃಷ್ಟಿ ಉಳ್ಳ ಹಾಗೆಯೇ ಕೈ ಮತ್ತು ಬಾಯಿ ಶುದ್ಧವಿರೋ ರಾಜಕಾರಣಿ ಅನ್ನೋ ಹೆಗ್ಗಳಿಕೆಯನ್ನೂ ಗಳಿಸಿದ ಅರವಿಂದ ಬೆಲ್ಲದ 2013ರಲ್ಲಿ ಗೆದ್ದಿದ್ರು. ಕಾಂಗ್ರೆಸ್ ನಿಂದ ಮಾಜಿ ಸಚಿವ ಎಸ್.ಆರ್. ಮೋರೆ ಆಕಾಂಕ್ಷಿಯಾಗಿದ್ರೂ ಈ ಬಾರಿ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ್ ಗೆ ಕಾಂಗ್ರೆಸ್ ಮಣೆ ಹಾಕ್ತು. ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ತೀವ್ರ ಹಣಾಹಣಿ ಇರೋದು.

    ಕಲಘಟಗಿಯ ರಣಭೂಮಿಯಲ್ಲಿ ಗೆಲ್ಲೋನೇ ಗಟ್ಟಿಗ..!
    ಬಹುಶಃ ಧಾರವಾಡದ ಜನ ಅದ್ರಲ್ಲೂ ರೈತರು ಹಾಲಿ ಶಾಸಕ ಸಂತೋಷ್ ಲಾಡ್ ರ ಕೆಲಸವನ್ನು ಎಂದಿಗೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿ ರಾಜಕಾರಣವನ್ನು ಪರಿಚಯಿಸಿ ಬೆಳೆಸಿದವ್ರು. ಕೊಳವೆ ಬಾವಿ ಕೊರೆಯೋ ಯಂತ್ರ ತರಿಸಿ ರೈತರಿಗೆ ಅನುಕೂಲ ಮಾಡಿಕೊಟ್ರು. ಒಂದು ರೀತಿಯಲ್ಲಿ ಕಲಘಟಗಿ ಕ್ಷೇತ್ರದ ಜನ್ರಿಗೆ ಲಾಡ್ ಲಾರ್ಡ್ ಥರಾ ಭಾಸವಾದ್ರು. ಆದ್ರೆ ಈ ಬಾರಿ ಬಿಜೆಪಿಯಿಂದ ನಿಂತಿರೋ ಸಿಎಂ ನಿಂಬಣ್ಣವರ್ ಹಾಗೂ ಜೆಡಿಎಸ್ ನಿಂದ ಕಂಟೆಸ್ಟ್ ಮಾಡ್ತಿರೋ ಎ.ಎಸ್ ರುದ್ರಪ್ಪ ಯಾವ ರೀತಿಯ ಪೈಪೋಟಿ ಕೊಡ್ತಾರೆ ಅನ್ನೋದಷ್ಟೇ ಸದ್ಯಕ್ಕಿರೋ ಕೌತುಕ.

    ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ಗೆಲುವಿನ ಟ್ರಿಣ್ ಟ್ರಿಣ್ ಬಾರಿಸೋರು ಯಾರು..?
    ಇಲ್ಲಿ 1994ರಿಂದಲೂ ಜನ ಕಮಲವನ್ನ ಮುದುಡೋಕೆ ಬಿಟ್ಟೇ ಇಲ್ಲ. ಜನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಿಗೇ ಜೈ ಅನ್ತಾ ಬಂದಿದ್ದಾರೆ. ಅಭಿವೃದ್ಧಿಯ ಮಂತ್ರವನ್ನು ಜಪಿಸ್ತಾನೇ ತಮ್ಮ ಕ್ಷೇತ್ರವನ್ನ ಮತ್ತಷ್ಟು ಬಲಪಡಿಸ್ತಾನೇ ಬಂದಿದ್ದಾರೆ. ಇನ್ನು, ತಾವು ಮುಖ್ಯಮಂತ್ರಿ ಗಾದಿಯಲ್ಲಿ ಕೂತಾಗ್ಲೂ ಒಂದಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಇಂಪ್ಲಿಮೇಟ್ ಮಾಡಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಜನ್ರೊಂದಿಗೆ ವನ್ ಟು ವನ್ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಕಾರ್ಯಕರ್ತರೂ ತಮ್ಮ ನಾಯಕನನ್ನ ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲಿ ಉದ್ಭವವಾಗಿಲ್ಲ. ಕಾಂಗ್ರೆಸ್ ಈ ಬಾರಿ ಮಹೇಶ್ ಸಿ ನಲ್ವಾಡ್ ರನ್ನ ತನ್ನ ಹುರಿಯಾಳಾಗಿ ಕಣಕ್ಕಿಳಿಸಿದ್ದು ಪ್ರಬಲ ಪೈಪೋಟಿ ಕೊಡೋದಕ್ಕೆ ರೆಡಿಯಾಗಿದೆ. ಇನ್ನುಳಿದಂತೆ ಜೆಡಿಎಸ್ ನಿಂದ ರಾಜಣ್ಣ ಕೊರವಿ, ಆಮ್ ಆದ್ಮಿ ಪಕ್ಷದಿಂದ ಸಂತೋಷ್ ನರಗುಂದ್ ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ.

    ಶಿಗ್ಗಾಂವಿಯಲ್ಲಿ ಓಡೋ ಕುದುರೆಗೆ ಲಗಾಮುಹಾಕೋರು ಯಾರು..?
    2008ರಿಂದಲೂ ಶಾಸಕ ಸ್ಥಾನದಲ್ಲಿ ಗಟ್ಟಿಯಾಗಿ ಕೂತಿರೋ ಹಾಲಿ ಶಾಸಕ ಬಿಜೆಪಿಯ ಬಸವರಾಜ ಬೊಮ್ಮಾಯಿ ಕೆಲಸಗಳನ್ನೂ ಮಾಡಿದ್ದಾರೆ. ಇವ್ರ ಕೆಲಸಗಳೇ ಈ ಬಾರಿಯೂ ಶ್ರೀರಕ್ಷೆಯಾಗುತ್ತಾ ಅನ್ನೋದೇ ಪ್ರಶ್ನೆ. ಕ್ಷೇತ್ರದಲ್ಲಿ ಮುಸಲ್ಮಾನ ಮತದಾರರ ಸಂಖ್ಯೆ ಜಾಸ್ತಿ ಇರೋದು ಕೂಡಾ ನಿರ್ಣಾಯಕವಾಗುವ ಸಾಧ್ಯತೆಗಳಿವೆ. ಸಯ್ಯೇದ ಅಜಿಂಪಿರ್ ಎಸ್ ಖಾದ್ರಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿರೋದ್ರಿಂದ ಮುಸಲ್ಮಾನ ಮತಗಳನ್ನು ಸೆಳೆಯೋ ಸಾಧ್ಯತೆಗಳಿವೆ. ಜೆಡಿಎಸ್ ನ ಅಶೋಕ್ ಬೇವಿನಮರದ ಈ ಬಾರಿ ಬಿಜೆಪಿಗೆ ಟಫ್ ಕಾಂಪಿಟೀಶನ್ ಕೊಡೋದ್ರಲ್ಲಿ ಡೌಟೇ ಇಲ್ಲ ಅನ್ನೋ ವಾತಾವರಣ ಸೃಷ್ಟಿಯಾಗಿದೆ.

    ಹೋರಾಟದ ನಾಡಲ್ಲಿ ಕದನ ಕಲಿಗಳ ಹೋರಾಟ!
    ನವಲಗುಂದ ಅಪ್ಪಟ ಹೋರಾಟದ ಕಿಚ್ಚು ಹತ್ತಿಸಿದ ನೆಲ. ಇಲ್ಲಿನ ಜನ ಹೋರಾಟಗಳನ್ನು ನೋಡಿಕೊಂಡೇ, ಅದ್ರ ನಡುವೆಯೇ ಬೆಳೆದವರು ಅಂದ್ರೂ ತಪ್ಪಾಗೋದಿಲ್ಲ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಹೋರಾಟ, ಪೊಲೀಸ್ ದೌರ್ಜನ್ಯ ಇತ್ಯಾದಿಯಿಂದ ಸುದ್ದಿಯಾಗುತ್ತಲೇ ಇರುವ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಲಿಂಗಾಯತ-ವೀರಶೈವ, ಕುರುಬ ಸಮಾಜದವರ ಮತಗಳೇ ನಿರ್ಣಾಯಕ. ಬಿಜೆಪಿ ಸೋಲಿಸಿದ ಜೆಡಿಎಸ್ ನ ಎನ್.ಎಚ್. ಕೋನರೆಡ್ಡಿ ಹಾಲಿ ಶಾಸಕ. ಕಾಂಗ್ರೆಸ್ ನಿಂದ ವಿನೋದ್ ಎಸ್ ಸೂತಿ ಇಳಿದಿದ್ರೆ, ಬಿಜೆಪಿಯಿಂದ ಶಂಕರಪ್ಪ ಗೌಡ ಪಾಟೀಲ್ ಮುನೇನ್ ಕೊಪ್ಪ ಗಾದಿ ಏರೋ ಪೈಪೋಟಿಯಲ್ಲಿದ್ದಾರೆ.

  • 5 ಏಟು ತಿಂದಿದ್ರೆ 500, 14 ಏಟು ತಿಂದವನಿಗೆ 1400 ರೂ: ಲಾಠಿ ಏಟು ತಿಂದಿದ್ದ ಯಮನೂರ ಗ್ರಾಮಸ್ಥರಿಗೆ ಸರ್ಕಾರದ ಪರಿಹಾರ

    5 ಏಟು ತಿಂದಿದ್ರೆ 500, 14 ಏಟು ತಿಂದವನಿಗೆ 1400 ರೂ: ಲಾಠಿ ಏಟು ತಿಂದಿದ್ದ ಯಮನೂರ ಗ್ರಾಮಸ್ಥರಿಗೆ ಸರ್ಕಾರದ ಪರಿಹಾರ

    ಧಾರವಾಡ: ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಬೀದಿಗಿಳಿದಿದ್ದ ರೈತರ ಮೇಲೆ ಪೊಲೀಸರು ಅಮಾನವೀಯವಾಗಿ ಲಾಠಿ ಬೀಸಿದ್ರು. ಧಾರವಾಡದ ನವಲಗುಂದದ ಯಮನೂರ ಗ್ರಾಮಸ್ಥರ ಮೇಲೆ ಯಮನಂತೆ ಎರಗಿದ್ದ ಪೊಲೀಸರು ಮಹಿಳೆಯರು, ಮಕ್ಕಳು ಎನ್ನದೇ ಲಾಠಿ ಬೀಸಿದ್ರು. ಈಗ ಲಾಠಿ ಏಟು ತಿಂದ ರೈತರಿಗೆ ಸರ್ಕಾರ ಪರಿಹಾರವೇನೋ ಕೊಟ್ಟಿದೆ. ಆದರೆ ಇಲ್ಲಿಯ ಜನರು ತಿಂದ ಲಾಠಿ ಏಟಿಗೆ ಸರ್ಕಾರ 100 ರೂಪಾಯಿ ಬೆಲೆ ಕಟ್ಟಿದೆಯೇ ಎಂಬ ಅನುಮಾನ ಮೂಡಿದೆ

    ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯಲ್ಲಿ ನಡೆದ ಹೋರಾಟದ ವೇಳೆ, ಪೊಲೀಸರು ನವಲಗುಂದ ತಾಲೂಕಿನ ಯಮನೂರ ಗ್ರಾಮಸ್ಥರ ಮೇಲೆ ನಡೆಸಿದ ದೌರ್ಜನ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಘಟನೆಯಲ್ಲಿ ಗ್ರಾಮದ ಎಷ್ಟೋ ಜನರು ಲಾಠಿ ಏಟಿನಿಂದ ಬಳಲಿ ಹೋಗಿದ್ದರು. ಮಹದಾಯಿ ನೀರಿಗಾಗಿ ನಡೆದಿದ್ದ ಈ ಹೋರಾಟದ ವೇಳೆ ಮಹಿಳೆಯರು, ವೃದ್ಧರು ಎನ್ನದೇ ಪೊಲೀಸರು ಲಾಠಿಯಿಂದ ಬಡಿದಿದ್ದರು. ಘಟನೆ ನಂತರ ಎಷ್ಟೋ ಜನಾ ಏಳೊಕೂ ಆಗದೇ ಮನೆಯಲ್ಲೇ ಚಿಕಿತ್ಸೆ ಮಾಡಿಸಿದ್ದರು. ಅದಕ್ಕೆ ಸರ್ಕಾರ ಈಗ ಬೆಲೆ ಕಟ್ಟಿದೆ. ಗ್ರಾಮದಲ್ಲಿ 165 ಜನರಿಗೆ ಲಾಠಿ ಏಟು ಬಿದ್ದಿತ್ತು. ಅವರಿಗೆ ಸರ್ಕಾರ 500, 1 ಸಾವಿರ, 2 ಸಾವಿರ ಹಾಗೂ 3 ಸಾವಿರ ರೂ. ಪರಿಹಾರ ನೀಡಿದೆ. ಇನ್ನು ಪ್ರತಿ ಏಟಿಗೆ ನೂರು ರೂಪಾಯಿಯಂತೆ ಬೆಲೆ ಕಟ್ಟಿರುವ ಸರ್ಕಾರ, 5 ಏಟು ತಿಂದವನಿಗೆ 500 ರೂಪಾಯಿ ಹಾಗೂ 14 ಏಟು ತಿಂದವನಿಗೆ 1400 ರೂಪಾಯಿ ಚೆಕ್ ನೀಡಿದೆ.

    ಗ್ರಾಮದ ಇಬ್ಬರಿಗೆ ಮಾತ್ರ 10 ಸಾವಿರ ರೂ. ಹಾಗೂ ಓರ್ವ ವೃದ್ಧರಿಗೆ 25 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ ಉಳಿದವರಿಗೆಲ್ಲಾ ಬಿಡಿಗಾಸಿನ ಚೆಕ್ ನೀಡಿದೆ. ಶಿವಾನಂದ ಎಂಬವರ ಮನೆಯೊಂದರಲ್ಲೇ 3 ಜನರಿಗೆ ಲಾಠಿ ಏಟು ಕೊಟ್ಟಿದ್ದರು. ಅದರಲ್ಲಿ ಶಿವಪ್ಪ ಚುಳುಕಿ ಹಾಗೂ ಅವರ ತಂದೆ ಜೈಲು ಸೇರಿದ್ದರು. ಆದರೆ ಜೈಲಿನಿಂದ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ್ದೇ 30 ರಿಂದ 40 ಸಾವಿರ ರೂ. ಬಿಲ್ ಆಗಿದೆ. ಆದರೆ ಅವರ ಮನೆಗೆ 2700 ರೂ. ಚೆಕ್ ಮಾತ್ರ ಬಂದಿದೆ. ಹೀಗಾಗಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುವ ಗ್ರಾಮಸ್ಥರು, ಪೊಲೀಸರ ಲಾಠಿ ಏಟು ಇನ್ನೂ ಮಾಸಿಲ್ಲ ಅಂತಾರೆ.

    ಸರ್ಕಾರ ನ್ಯಾಯಯುತವಾಗಿ ಪರಿಹಾರ ನೀಡಬೇಕಿತ್ತು. ಅದನ್ನ ಬಿಟ್ಟು ಲಾಠಿ ಏಟಿಗೆ ಬೆಲೆ ಕಟ್ಟಿದೆ ಎಂಬುದು ಇಲ್ಲಿನ ಜನರ ಆಕ್ರೋಶವಾಗಿದೆ. ಇನ್ನು ಕೆಲವರು ಜೈಲಿಗೆ ಹೋದ ಕಾರಣ ಅವರ ಹೊಲದಲ್ಲಿದ್ದ ಬೆಳೆ ಕೂಡ ನಾಶವಾಗಿತ್ತು. ಅದು ಕೂಡ ರೈತರಿಗೆ ನಷ್ಟ ಉಂಟು ಮಾಡಿತ್ತು.