Tag: National Magic Day

  • ಫೆ.23ಕ್ಕೆ ಮಂಗಳೂರಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆ

    ಫೆ.23ಕ್ಕೆ ಮಂಗಳೂರಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆ

    ಮಂಗಳೂರು: ವಿಸ್ಮಯ ಜಾದೂ ಪ್ರತಿಷ್ಠಾನ ಮಂಗಳೂರು ಹಾಗೂ ರಾಮಕೃಷ್ಣ ಮಠ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 23 ರಂದು ರಾಷ್ಟ್ರೀಯ ಜಾದೂ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

    ಭಾರತೀಯ ಜಾದೂ ರಂಗದ ಪಿತಾಮಹರೆಂದು ಪರಿಗಣಿಸಲಾಗುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶ್ವ ಪ್ರಸಿದ್ದ ಜಾದೂಗಾರ ಪಿ.ಸಿ.ಸರ್ಕಾರ್ ಇವರ 109 ನೇ ಜನ್ಮ ದಿನದ ನೆನಪಿಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಸಮಾರಂಭ ನಡೆಯಲಿದೆ.

    ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಇವರ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ಅವರು ರಾಷ್ಟ್ರಿಯ ಜಾದೂ ದಿನಾಚರಣೆಯನ್ನು ಉದ್ಘಾಟಿಸಲಿದ್ದಾರೆ.

    ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಕ್ಷಿಣ ಕನ್ನಡ ವಿಭಾಗದ ಸಹಾಯಕ ನಿರ್ದೇಶಕರಾದ ರಾಜೇಶ್ ಬಿ, ಮಾಜಿ ಮೇಯರ್ ದಿವಾಕರ್ ಕದ್ರಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಇದೇ ಸಂದರ್ಭದಲ್ಲಿ ವಿಸ್ಮಯ ಜಾದೂ ಪ್ರತಿಷ್ಠಾನದ ವತಿಯಿಂದ ಜಾದೂ ರಂಗದ ಸಾಧಕರಿಗೆ ನೀಡುವ 2021 ನೇ ಸಾಲಿನ ‘ಐಂದ್ರಜಾಲಿಕ ಪ್ರಶಸ್ತಿ’ಯನ್ನು ಹಿರಿಯ ಜಾದೂಗಾರರಾದ ಕಾಸರಗೋಡಿನ ಪ್ರೊಫೆಸರ್ ಮಾಧವ ಇವರಿಗೆ ನೀಡಿ ಗೌರವಿಸಲಾಗುವುದು.

    ಪ್ರಸಿದ್ಧ ಜಾದೂಗಾರರಾದ ಕುದ್ರೋಳಿ ಗಣೇಶ್, ಸತೀಶ್ ಹೆಮ್ಮಾಡಿ, ರಾಜೇಶ್ ಮಳಿ, ಯುವ ಜಾದೂಗಾರ ಸೂರಜ್ ಚೌಟ, ಕಿರಿಯ ವಯಸ್ಸಿನಲ್ಲಿ ದಾಖಲೆ ನಿರ್ಮಿಸಿದ ಅಂಜನಾ ಮತ್ತು ಅಪೂರ್ವ ಮಳಿ ಇವರಿಂದ ಜಾದೂ ಪ್ರದರ್ಶನ ನಡೆಯಲಿದೆ ಎಂದು ವಿಸ್ಮಯ ಜಾದೂ ಪ್ರತಿಷ್ಠಾನದ ಸಂಚಾಲಕ ಕುದ್ರೋಳಿ ಗಣೇಶ್ ತಿಳಿಸಿದ್ದಾರೆ.