ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಮೀರತ್ ಗೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
ದೆಹಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಬಳಿಕ ಸುಮಾರು 6 ಕಿಮೀ ದೂರದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿ ಅವರನ್ನು ಕಂಡು ಸಂತಸ ಪಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು.

ಸದ್ಯ ನಿರ್ಮಾಣವಾಗಿರುವ 9 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು ದೇಶದ ಮೊದಲ 14 ಪಥಗಳ ರಸ್ತೆ ಎಂಬ ಹೆಗ್ಗಳಿಕೆ ಪಡೆದಿದ್ದು, ಸಿಗ್ನಲ್ ಫ್ರೀ ಮಾರ್ಗವನ್ನು ಹೊಂದಿದೆ. ಮೊದಲ ಹಂತದ ಮಾರ್ಗಕ್ಕೆ ಸುಮಾರು 842 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ ನಿರ್ಮಾಣವಾಗಿರುವ ಹೆದ್ದಾರಿ 6 ಹಾಗೂ 4 ಪಥವನ್ನು ಹೊಂದಿರಲಿದೆ.
ಯೋಜನೆಯ ಮೊತ್ತ: ಸದ್ಯ ಎಕ್ಸ್ ಪ್ರೆಸ್ ವೇ ನ ಮೊದಲ ಹಂತ ಮಾತ್ರ ಪೂರ್ಣಗೊಂಡಿದ್ದು, 84 ಕಿಮೀ. ದೂರದ ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಸುಮಾರು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.
ವಿಶೇಷತೆ ಏನು?
ದೆಹಲಿ ಹಾಗೂ ಮಿರತ್ ಎಕ್ಸ್ ಪ್ರೆಸ್ ಮಾರ್ಗ ಸ್ಮಾರ್ಟ್ ಅಂಡ್ ಗ್ರೀನ್ ರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿದ್ದು, ಈಗಾಗಲೇ ನಿರ್ಮಾಣ ಮಾಡಲಾಗಿರುವ ಯಮುನಾ ನದಿ ಸೇತುವೆಯ ಮಾರ್ಗದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ಗಾರ್ಡನ್ ಸಹ ನಿರ್ಮಾಣ ಮಾಡಲಾಗಿದೆ. ಈ ಗಾರ್ಡನ್‍ಗೆ ಸೋಲಾರ್ ನಿಂದ ಉತ್ಪಾದನೆಯಾದ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸಂಪೂರ್ಣ ಗಾರ್ಡನ್ ನಲ್ಲಿ ಹನಿ ನೀರಾವರಿ ಸೌಲಭ್ಯವಿದೆ. ಈ ಮೂಲಕ ಸೋಲಾರ್ ವ್ಯವಸ್ಥೆ ಪಡೆದ ಭಾರತದ ಮೊದಲ ಸೇತುವೆ ಎಂಬ ಹೆಗ್ಗಳಿಕೆಗೆ ಯಮುನಾ ನದಿ ಸೇತುವೆ ಪಾತ್ರವಾಗಿದೆ.

17 ತಿಂಗಳಿನಲ್ಲಿ ನಿರ್ಮಾಣ:
30 ತಿಂಗಳ ಅವಧಿಯಲ್ಲಿ ನಿರ್ಮಾಣವಾಗಬೇಕಿದ್ದ ಈ ಯೋಜನೆಯನ್ನು ಕೇವಲ 17 ತಿಂಗಳಿನಲ್ಲಿ ನಿರ್ಮಾಣ ಮಾಡಲಾಗಿದೆ. 2015ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.
ಈ ಯೋಜನೆಯ ನಿರ್ಮಾಣದಿಂದ ಪ್ರತಿ ದಿನ 2 ಲಕ್ಷ ವಾಹನಗಳು ರಾಜಧಾನಿ ದೆಹಲಿ ನಗರವನ್ನು ಪ್ರವೇಶ ಮಾಡದೇ ಸಾಗಬಹುದಾಗಿದ್ದು, ದೆಹಲಿಯ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಅಲ್ಲದೇ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಸುಮಾರು 50 ಸಾವಿರ ವಾಹನಗಳನ್ನು ದೆಹಲಿಯ ಪ್ರವೇಶವನ್ನು ತಪ್ಪಿಸಬಹುದಾಗಿದೆ.

ಎಲೆಕ್ಟ್ರಾನಿಕ್ ಟೋಲ್: ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಹಾಗೂ ಸುಗಮ ಪ್ರಯಾಣಕ್ಕೆ ವೇಗದ ಟೋಲ್ ಸಂಗ್ರಹಣೆ ಕೇಂದ್ರ ಆರಂಭಿಸಲಾಗಿದ್ದು, ಇಲ್ಲಿ ಟೋಲ್ ಸಂಗ್ರಹಿಸಲು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆ (ಇಟಿಸಿ) ಅಳವಡಿಸಲಾಗಿದೆ.
ಸ್ಮಾಟ್ ಟ್ರಾಫಿಕ್ ಕಂಟ್ರೋಲ್: ಹೆದ್ದಾರಿಗಳ ಇಕ್ಕೆಲಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ವಾಹನಗಳ ವೇಗ ಹಾಗೂ ಅವುಗಳ ಸ್ಥಳವನ್ನು ತಿಳಿಯಬಹುದಾಗಿದೆ. ಹೆದ್ದಾರಿಯಲ್ಲಿ ಸ್ಮಾರ್ಟ್ ವೇ ಟ್ರಾಫಿಕ್ ಮ್ಯಾನೇಜ್‍ಮೆಂಟ್ (ಎಚ್‍ಟಿಎಂಎಸ್) ಮತ್ತು ವಿಡಿಯೋ ಇನ್ಸಿಡೆಂಟ್ ಡಿಟೆಕ್ಷನ್ (ವಿಐಡಿಎಸ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ನೈಸರ್ಗಿಕ ರಕ್ಷಣೆಗೆ ಹೆಚ್ಚಿನ ಪ್ರಮುಖ್ಯತೆ ನೀಡಿರುವ ಹೆದ್ದಾರಿಯಲ್ಲಿ ಸುಮಾರು 2.5 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಹೆದ್ದಾರಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಹೊಂದಿದೆ. ಒಟ್ಟು 82 ಕಿಮೀ ಉದ್ದದ ದೆಹಲಿ ಎಕ್ಸ್ ಪ್ರೆಸ್‍ವೇ ಮೊದಲ 27.74 ಕಿಮೀ 14 ಪಥ ಹೊಂದಿದ್ದು, ಉಳಿದ ಮಾರ್ಗ 6 ಪಥವನ್ನು ಹೊಂದಿರಲಿದೆ.
ಅನುಕೂಲವೇನು?
ಹೆದ್ದಾರಿಯ ನಿರ್ಮಾಣದಿಂದ ದೆಹಲಿ ಹಾಗೂ ನೋಯ್ಡಾ ನಗರಗಳ ನಡುವಿನ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೇ ಇರುವರೆಗೂ ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿ 40 ನಿಮಿಷಕ್ಕೆ ಇಳಿಯಲಿದೆ.
ಸೈಕಲ್ ಟ್ರ್ಯಾಕ್:
ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಪಡೆದಿರುವ ಈ ಮಾರ್ಗ, ಸೈಕಲ್ ಪಥ ಮತ್ತು ಪದಚಾರಿ ಮಾರ್ಗವನ್ನು ಹೊಂದಿದೆ. ಸೈಕಲ್ ಟ್ರ್ಯಾಕ್ 2.5 ಮೀಟರ್ ಅಗಲ ಹೊಂದಿದ್ದರೆ, ಪಾದಚಾರಿ ಮಾರ್ಗ ಒಂದೂವರೆ ಮೀಟರ್ ಅಗಲ ನಿರ್ಮಾಣ ಮಾಡಲಾಗಿದೆ.
ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಉದ್ಘಾಟನೆ: ಈಗಾಗಲೇ ನಿರ್ಮಾಣ ಮಾಡಲಾಗಿರುವ ದೆಹಲಿ, ಎಕ್ಸ್ ಪ್ರೆಸ್ ವೇ ಮಾರ್ಗ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಕಾಮಗಾರಿಗೆ ಚಾಲನೆ ನೀಡಿದರು. ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗ 135 ಕಿಮೀ ದೂರವಿದ್ದು, ಘಜಿಯಾಬಾದ್, ಗ್ರೇಟರ್ ನೋಯ್ಡಾ, ಫರಿದಾಬಾದ್, ಮತ್ತು ಪಾಲ್ವಾಲ್ ನಗರಗಳಿಗೆ ಮುಕ್ತ ಸಂಚಾರವನ್ನು ನೀಡಲಿದೆ. ದೆಹಲಿಯ ಪೂರ್ವ ನಿಜಾಮುದ್ದೀನ್ ಸೇತುವೆಯಿಂದ ಆರಂಭವಾಗುವ ಈ ಎಕ್ಸ್ ಪ್ರೆಸ್ ವೇ 135 ಕಿಮೀ ಉದ್ದವಿದ್ದು, ಉತ್ತರ ಪ್ರದೇಶದ ಗಡಿಯವರೆಗೂ ಸಾಗುತ್ತದೆ.
ಒಟ್ಟಾರೆ ಹೆದ್ದಾರಿಯಲ್ಲಿ ಒಟ್ಟು 406 ರಸ್ತೆ ತಿರುವುಗಳು, 4 ದೊಡ್ಡ ಸೇತುವೆಗಳು, 46 ಸೇತುವೆಗಳು, 3 ತೂಗು ಸೇತುವೆಗಳು, 221 ಅಂಡರ್ ಪಾಸ್‍ಗಳು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹೆದ್ದಾರಿ ಪಕ್ಕದಲ್ಲಿ ಹಲವು ರಾಷ್ಟ್ರೀಯ ಸ್ಮಾರಕ ಮಾದರಿಗಳು, ಹೋಟೆಲ್, ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

