Tag: National Emergency

  • ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಒಟ್ಟಾವಾ: ಲಸಿಕೆ ಆದೇಶಗಳು ಸೇರಿದಂತೆ ಕೋವಿಡ್‌ ಸಂಬಂಧಿತ ಕ್ರಮಗಳ ವಿರುದ್ಧ ನಡೆಯುತ್ತಿರುವ ಟ್ರಕ್‌ ಚಾಲಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಡೊ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ನಾವು ಕಾನೂನು ಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ. ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ರಾಜಧಾನಿಯಲ್ಲಿ ತಿಳಿಸಿದ್ದಾರೆ. ತಕ್ಷಣದಿಂದಲೇ ತುರ್ತು ಪರಿಸ್ಥಿತಿ ಆದೇಶ ಜಾರಿಗೆ ಬಂದಿದ್ದು, 30 ದಿನಗಳವರೆಗೆ ಇರಲಿದೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    ಪ್ರತಿಭಟನಾಕಾರರ ಕೂಟಗಳನ್ನು ಚದುರಿಸಲು ಕಾನೂನು ಜಾರಿಗಾಗಿ ಕ್ರಮ ವಹಿಸಲಾಗುವುದು. ಪ್ರತಿಭಟನಾನಿರತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾತೆಗಳನ್ನು ಬಂದ್‌ ಮಾಡಲು ಹಣಕಾಸು ಸಂಸ್ಥೆಗಳಿಗೆ ತಿಳಿಸಲಾಗಿದೆ. ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಪ್ರಧಾಣಿ ನಿರಾಕರಿಸಿದ್ದಾರೆ.

    ಕೆನಡಾ ಮತ್ತು ಯುಎಸ್‌ ಅನ್ನು ಸಂಪರ್ಕಿಸುವ ಒಂಟಾರಿಯೊದ ವಿಂಡ್ಸರ್‌ ಮತ್ತು ಮಿಚಿಗನ್‌ನ ಡೆಟ್ರಾಯಿಟ್‌ ನಡುವಿನ ರಾಯಭಾರಿ ಸೇತುವೆಯನ್ನು ಪ್ರತಿಭಟನಾಕಾರರಿಂದ ಪೊಲೀಸರು ತೆರವುಗೊಳಿಸಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಜನವರಿ ಮಧ್ಯ ಭಾಗದಲ್ಲಿ ಗಡಿಯಾಚೆಗಿನ ಟ್ರಕ್‌ ಚಾಲಕರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆನಡಾ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಆದೇಶವನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮಕೈಗೊಂಡಿಲ್ಲ.

  • ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    – ಅಮೆರಿಕದಲ್ಲಿ 48 ಸಾವು, 2 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆ

    ವಾಷಿಂಗ್ಟನ್: ಮಹಾಮಾರಿ ಕೊರೊನಾ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ್ದು, ಅಭಿವೃದ್ಧಿ ಹೊಂದಿದ ದೇಶಗಳು ಸಹ ಇದಕ್ಕೆ ನಲುಗಿ ಹೋಗುತ್ತಿವೆ. ಈ ವೈರಸ್‍ನಿಂದಾಗಿ ಅಮೆರಿಕಾ ತಲ್ಲಣಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ಈ ಕುರಿತು ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿಯವರು ಸಹ ಈ ಕುರಿತು ಸಹಕರಿಸಬೇಕು. ಶಂಕಿತರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬೇಕು ಎಂದು ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಲು ಫೆಡರಲ್ ಸರ್ಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನಿಡಲಾಗಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು 3.69 ಲಕ್ಷ ಕೋಟಿ ರೂ.(50 ಬಿಲಿಯನ್ ಡಾಲರ್) ಘೋಷಿಸಿರುವುದಾಗಿ ಎಂದು ಸ್ಪಷ್ಟಪಡಿಸಿದ್ದಾರೆ.

    ಮುಂದಿನ ಎಂಟು ವಾರಗಳ ಕಾಲ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಈ ವೈರಸ್‍ನ್ನು ನಾವು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿದ್ದೇವೆ. ಎಲ್ಲ ರಾಜ್ಯಗಳು ತುರ್ತು ಆಪರೇಷನ್ ಕೇಂದ್ರಗಳನ್ನು ತೆರೆಯಬೇಕು. ಖಾಸಗಿಯವರ ಜೊತೆಗೂ ಸರ್ಕಾರ ಸಹಭಾಗಿಯಾಗಲಿದೆ. ಪರೀಕ್ಷಾ ಕೇಂದ್ರಗಳ ಕೊರತೆಯಿದೆ ಎಂಬ ಟೀಕೆ ಕೇಳಿಬರುತ್ತಿದ್ದು, ವೈರಸ್ ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸಿ ಎಂದು ಕರೆ ನೀಡಿದ್ದಾರೆ.

    ಅಮೆರಿಕನ್ನರ ಅಗತ್ಯತೆಗಳನ್ನು ಪೂರೈಸಲು ದೇಶದ ಪ್ರತಿ ಆಸ್ಪತ್ರೆಯಲ್ಲಿ ತುರ್ತು ಸಿದ್ಧತೆ ಕೈಗೊಳ್ಳಬೇಕು. ಜನತೆಗೆ ಅಗತ್ಯವಿರುವ ಎಲ್ಲ ಬಗೆಯ ಕ್ರಮಗಳನ್ನು, ಅಗತ್ಯ ಕಾಳಜಿ, ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಇದಕ್ಕೆ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಾವು ನಿವಾರಿಸುತ್ತೇವೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವುದರಿಂದ ಎಲ್ಲ ರೀತಿಯ ಹಕ್ಕುಗಳನ್ನು ಹಾಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಆರೋಗ್ಯ ಕಾರ್ಯದರ್ಶಿಗೆ ನೀಡಲಾಗಿದೆ. ಅಲ್ಲದೆ ಎಲ್ಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಟೆಲಿ ಮೆಡಿಸಿನ್ ಹಾಗೂ ಆಸ್ಪತ್ರೆಗಳಿಗೆ ಹೆಚ್ಚುವರಿ ವೈದ್ಯರನ್ನು ಒದಗಿಸುವ ಸ್ವಾತಂತ್ರ್ಯವನ್ನು ಸಹ ಕಾರ್ಯದರ್ಶಿಗೆ ನೀಡಲಾಗಿದೆ.

    ಅಮೆರಿಕದಲ್ಲಿ ಒಟ್ಟು 2,100 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 48 ಜನ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.