Tag: National Education Policy

  • ರಾಜ್ಯಕ್ಕೆ ನೂತನ ಶಿಕ್ಷಣ ನೀತಿ ಅವಶ್ಯಕತೆ ಇಲ್ಲ, ಇದರ ಜಾರಿಗೆ ಬಿಡಲ್ಲ: ಡಿಕೆಶಿ ಎಚ್ಚರಿಕೆ

    ರಾಜ್ಯಕ್ಕೆ ನೂತನ ಶಿಕ್ಷಣ ನೀತಿ ಅವಶ್ಯಕತೆ ಇಲ್ಲ, ಇದರ ಜಾರಿಗೆ ಬಿಡಲ್ಲ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಶಿಕ್ಷಣ ನೀತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸಿದ್ದೇ ಆದರೆ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವಿದನ್ನು ಹಿಂಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

    ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಇದು ಅನುಷ್ಠಾನಗೊಳ್ಳುತ್ತಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರು ಈ ನೀತಿಯ ಅನುಷ್ಠಾನ ಕ್ಲಿಷ್ಟವಾಗಿದ್ದು, ಅದರ ಅಧ್ಯಯನ ನಡೆಯಬೇಕು ಎಂದು ಹೇಳಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ, ಇದರಲ್ಲಿ ಏನೆಲ್ಲಾ ಪ್ರಯೋಜನವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದೆವು. ಅದನ್ನು ಬಿಟ್ಟು ಜಾರಿಗೆ ಮುಂದಾಗಿದ್ದಾರೆ. ಇವರು ಆರ್‌ಎಸ್ಎಸ್ ಅಜೆಂಡಾ, ನಾಗ್ಪುರ ಅಜೆಂಡಾಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲಿ. ಬೇಕಾದರೆ ತಮ್ಮದೇ ಸ್ವಂತ ಸಂಸ್ಥೆಗಳನ್ನು ಮಾಡಿಕೊಂಡು ಬೋಧನೆ ಮಾಡಿಕೊಳ್ಳಲಿ. ಇದು ನಮ್ಮ ಮಕ್ಕಳ ಶಿಕ್ಷಣದ ಪ್ರಶ್ನೆ ಎಂದರು.

    ವಾಜಪೇಯಿ ಯಾಕೆ ವಿರೋಧಿಸಲಿಲ್ಲ?: ಈಗ ಇರುವ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ವಾಜಪೇಯಿ ಅವರು ಯಾಕೆ ವಿರೋಧ ಮಾಡಲಿಲ್ಲ? ಬೇರೆ ಮಾಜಿ ಪ್ರಧಾನಿಗಳು ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ. ಇಷ್ಟು ದಿನ ನೀವು, ನಿಮ್ಮ ಮಕ್ಕಳು ಇದೇ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇದನ್ನು ಬದಲಾವಣೆ ಮಾಡುವುದು ಸರಿಯಲ್ಲ. ಇದು ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಕೇಂದ್ರ ಸರ್ಕಾರ ಮಕ್ಕಳು ಸಂಸ್ಕೃತ ಓದಬೇಕು. ಹಿಂದಿ ಕಲಿಯಬೇಕು ಎಂದು ಹೇಳುವುದು ಸರಿಯಿಲ್ಲ. ಇವರು ಈ ಶಿಕ್ಷಣ ನೀತಿ ಜಾರಿಗೆ ತಂದರೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾವು ಇವುಗಳನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ ಎಂದರು.

    ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಕೇಳಿದೆವು, ಆದರೆ ಇದಕ್ಕೆ ಅವಕಾಶ ಕೊಟ್ಟಿಲ್ಲ. ಈ ನೀತಿ ಜಾರಿಗೆ ತರಲು ಆ ಮಂತ್ರಿ ಡೋಂಗಿ ಕೆಲಸ ಮಾಡುತ್ತಿದ್ದಾನೆ. ಈ ಶಿಕ್ಷಣ ನೀತಿ ಜಾರಿಗೆ ತರಲು ಅವರದೇ ಸಂಪುಟದ ಸಚಿವರಿಗೆ, ಸರ್ಕಾರಕ್ಕೆ ಇಷ್ಟವಿಲ್ಲ. ಕೇವಲ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಹೊರಟಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಈ ಶಿಕ್ಷಣ ನೀತಿ ಜಾರಿಗೊಳಿಸಲಿ. ನಮ್ಮ ರಾಜ್ಯದಲ್ಲಿ ಈ ನೀತಿ ಜಾರಿಗೆ ಅವಕಾಶ ನೀಡುವುದಿಲ್ಲ. ಇದು ನಮ್ಮ ಮಕ್ಕಳ ಭವಿಷ್ಯದ ವಿಚಾರ, ನಾವಿದನ್ನು ವಿರೋಧಿಸುತ್ತೇವೆ. ಈ ಶಿಕ್ಷಣ ನೀತಿ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ 30 ರಾಸುಗಳ ವಿಚಿತ್ರ ಸಾವು: ಬೆಚ್ಚಿಬಿದ್ದ ಕುಟುಂಬ

    ಈಗ ಇರುವುದು ಇಟಲಿ ಶಿಕ್ಷಣ ನೀತಿಯಾಗಿದ್ದರೆ, ವಾಜಪೇಯಿ ಅವರು ಬದಲಾವಣೆ ಮಾಡಬಹುದಿತ್ತಲ್ಲ. ಯಾಕೆ ಮಾಡಲಿಲ್ಲ? ಈಗ ಇರುವ ಶಿಕ್ಷಣ ನೀತಿ ಸರಿ ಇಲ್ಲವೇ? ಇಲ್ಲಿ ಶಿಕ್ಷಣ ಪಡೆದ ಇಂಜಿನಿಯರ್, ಡಾಕ್ಟರ್‌ಗಳು ವಿಶ್ವವಿಖ್ಯಾತಿ ಪಡೆದಿಲ್ಲವೇ? ಈ ರೀತಿ ಶಕ್ತಿ ತುಂಬಿರುವ ಶಿಕ್ಷಣ ನೀತಿ ನಮ್ಮ ಬಳಿ ಇದೆ. ಹೀಗಾಗಿ ನೂತನ ಶಿಕ್ಷಣ ನೀತಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

  • ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ

    ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ 4ನೇ ಆವೃತ್ತಿಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಚಾಲನೆ ನೀಡಿದರು.

    ಪ್ಯಾಲೇಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ವಿದ್ಯಾಪೀಠ ಮೇಳಕ್ಕೆ ಇಂದು ಚಾಲನೆ ದೊರೆತಿದೆ. ಕಾರ್ಯಕ್ರಮದ ಉದ್ಘಾಟನೆಯಲ್ಲಿ ರೇವಾ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ರಾಮಯ್ಯ ವಿಶ್ವವಿದ್ಯಾಲಯ, ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಖ್ಯಸ್ಥರು ಭಾಗಿಯಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?

    ವಿದ್ಯಾಪೀಠ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆಯಬಹುದು. ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯಮಿಕ ಕೋರ್ಸ್ ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಸಿಇಟಿ, ನೀಟ್ ಮತ್ತು ಕಾಮೆಡ್ ಕೆ ಪರೀಕ್ಷೆಗಳಿಗಾಗಿ ಕೆಇಎ ಅಧಿಕಾರಿಗಳಿಂದ ಆಪ್ತ ಸಮಾಲೋಚನೆ ಕೂಡ ನಡೆಸಬಹುದು. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ.

    ಎರಡೂ ದಿನ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಇರಲಿದ್ದು, ಅರ್ಧಗಂಟೆ ಉಪನ್ಯಾಸ ನಡೆದ ಬಳಿಕ 15 ನಿಮಿಷ ಪ್ರಶ್ನೋತ್ತರಕ್ಕೂ ಅವಕಾಶ ಇದೆ. ಪಿಯುಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.

    ಕೌನ್ಸಿಲರ್ ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಭಾಗವಹಿಸುತ್ತಿದ್ದು, ಶಿಕ್ಷಣ, ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸ್ಕಾಲರ್ಶಿಪ್ ಬಗ್ಗೆ ಕೆನರಾ ಬ್ಯಾಂಕ್ ಮೂಲಕ ಮಾಹಿತಿ ನೀಡಲಾಗುತ್ತದೆ.

    ಯಾರೆಲ್ಲ ಭಾಗವಹಿಸುತ್ತಾರೆ?
    ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಸಮೂಹ ಸಂವಹನ, ಎಂಬಿಎ ಇನ್‍ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು.

    ಯಾರೆಲ್ಲ ಆಗಮಿಸಬಹುದು?
    ಕೌನ್ಸೆಲರ್‍ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.

    ದಿನಾಂಕ : ಸೆಪ್ಟೆಂಬರ್ 18, 19
    ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
    ಸಮಯ : ಬೆಳಗ್ಗೆ 9:30 ರಿಂದ ಸಂಜೆ 6.00 ಗಂಟೆಯವರೆಗೆ

    ಶನಿವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಜೊತೆ ಮುಖ್ಯ ಅತಿಥಿಗಳಾಗಿ ರೇವಾ ವಿಶ್ವವಿದ್ಯಾಲಯದ ಕುಲಪತಿ ಶ್ಯಾಮರಾಜು, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಡಾ.ವಿ.ಜಿ.ಜೋಸೆಫ್, ಕೇಂಬ್ರಿಡ್ಜ್ ಸಮೂಹ ಸಂಸ್ಥೆಯ ಮುಖ್ಯಸ್ಥ ಡಿ.ಕೆ.ಮೋಹನ್, ಆಚಾರ್ಯ ಸಂಸ್ಥೆಗಳ ಕಾರ್ಪೊರೇಟ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ವಿಶೇಷ ಚಂದ್ರಶೇಖರ್ ಭಾಗವಹಿಸಲಿದ್ದಾರೆ.

    ಶನಿವಾರದ ಕಾರ್ಯಕ್ರಮಗಳು ಏನು?
    ಬೆಳಗ್ಗೆ 11:30 ರಿಂದ 12 ಗಂಟೆಯವರೆಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ‘ರಾಷ್ಟ್ರೀಯ ಶಿಕ್ಷಣ ನೀತಿ ? 2020: ಸಮಗ್ರ ವಿಧಾನ ಮತ್ತು ಅನುಷ್ಠಾನ’ ದ ಬಗ್ಗೆ ಮಾತನಾಡಲಿದ್ದಾರೆ.

    ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಸಿಇಟಿ ಮತ್ತು ಕಾಮೆಡ್‍ಕೆ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಕಾಮೆಡ್ ಕೆ ಕಾರ್ಯದರ್ಶಿ ಕುಮಾರ್ ಮತ್ತು ಸಿಇಟಿ ವಿಭಾಗದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳ್ತೀವಿ, ಲಸಿಕೆಗೆ ಗ್ಯಾರಂಟಿ ಬೇಡ್ವಾ: ಅಧಿಕಾರಿಗಳಿಗೆ ಯುವಕನ ಪ್ರಶ್ನೆ

    ಮಧ್ಯಾಹ್ನ ಭೋಜನದ ಬಳಿಕ 2 ರಿಂದ 2:45ರವರೆಗೆ ನಟ, ಯೂಥ್ ಐಕಾನ್ ರಮೇಶ್ ಅರವಿಂದ್ ‘ಯಶಸ್ಸಿನ ರಹಸ್ಯ’ದ ಬಗ್ಗೆ ಮಾತನಾಡಲಿದ್ದಾರೆ.

    ಮಧ್ಯಾಹ್ನ 3 ರಿಂದ 3:45ರವರೆಗೆ ‘ನ್ಯೂ ಏಜ್ ಪ್ರೋಗ್ರಾಮ್ಸ್’ ಬಗ್ಗೆ ಸಂವಾದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಟಿಯು ಕಾರ್ಯಕಾರಿ ಸಮಿತಿ ಸದಸ್ಯ ಡಾ.ರವಿಶಂಕರ್, ಬೆಂಗಳೂರು ವಿಶ್ವವಿದ್ಯಾಲಯದ ವೇಣು ಗೋಪಾಲ್ ಕೆ.ಆರ್, ಕೇಂಬ್ರಿಡ್ಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ.ಕೆ. ಮೋಹನ್ ಭಾಗವಹಿಸಲಿದ್ದಾರೆ. ಡಾ.ಕಿರಣ್ ಮಾಗಾವಿ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ.

  • ಮಕ್ಕಳ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು?: ಸಿದ್ದರಾಮಯ್ಯ ಕಿಡಿ

    ಮಕ್ಕಳ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು?: ಸಿದ್ದರಾಮಯ್ಯ ಕಿಡಿ

    ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮಕ್ಕಳ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು ಎಂದು ಪ್ರಶ್ನಿಸಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರಿಗೆ ಪತ್ರ ಬರೆದಿರುವ ಅವರು, ಹೊಸ ಶಿಕ್ಷಣ ನೀತಿ ಕುರಿತಾದ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

    ಪತ್ರದಲ್ಲಿ ಏನಿದೆ?
    ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗಿದೆಯೆಂದು ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಛೇರಿಯಿಂದ ಪತ್ರ ಬರೆದು ಕೋರಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆಯನ್ನೂ ಮಾಡಲಾಗಿದೆ. ಉದ್ಘಾಟನೆಯನ್ನೂ ಮುಗಿಸಿ ಚರ್ಚೆ ಮಾಡಬೇಕು ಎಂದು ಕರೆಯುವುದು ಸಂಸದೀಯವಾಗಿ ಸರಿಯಲ್ಲ.

    ಒಂದು ಶಿಕ್ಷಣ ನೀತಿಯ ಅನುಷ್ಠಾನವೆಂದರೆ ಸಣ್ಣ ಸಂಗತಿಯೆ? ತಾವೂ ಕೂಡ ಬೆವರಿನ ಸಂಸ್ಕೃತಿಯ ಹಿನ್ನೆಲೆಯ ಸಮುದಾಯದಿಂದ ಬಂದಿದ್ದೀರಿ. ರಾಷ್ಟ್ರಕವಿ ಕುವೆಂಪು ಅವರು ಶಿಕ್ಷಣ, ಅದರ ಗುಣಮಟ್ಟವನ್ನು ಸುಧಾರಣೆ, ಕಲಿಕೆಯ ಮಾಧ್ಯಮ ಹಾಗೂ ಸರ್ಕಾರದ ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಕುರಿತಂತೆ ಕೆಲಸ ಮಾಡುತ್ತಿರುವವರೆಲ್ಲರೂ ಕುವೆಂಪು ಅವರ ವಿಚಾರಗಳನ್ನು ಓದಿ, ಅದರಂತೆ ನಡೆದುಕೊಳ್ಳಬೇಕಾಗಿದೆ. ಇದನ್ನೂ ಓದಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕನ್ನಡಕ್ಕೆ ಧಕ್ಕೆ ಇಲ್ಲ- ಅಶ್ವಥ್ ನಾರಾಯಣ

    ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸರ್ಕಾರಗಳೆ ನಿರ್ವಹಿಸುತ್ತವೆ. ಯಾವುದೇ ನಾಡಿನಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಆ ನಾಡಿನ ಸಮಸ್ತ ಆರೋಗ್ಯವೂ ಸರಿಯಾಗಿರುತ್ತದೆ. ಇಂದು ಭಾರತದ ಸಮಾಜಗಳು ತೀವ್ರ ರೂಪದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಅದಕ್ಕೆ ಕಾರಣಗಳು ಹಲವಿವೆ. ಮೊದಲನೇಯದಾಗಿ ವಿದ್ಯಾರ್ಥಿ ಶಿಕ್ಷಕ ಪ್ರಮಾಣ ವಿಪರೀತ ಹೆಚ್ಚಾಗಿದೆ, ಅದು ಕಡಿಮೆಯಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ನೀತಿಯ ಶಿಫಾರಸ್ಸುಗಳ ಪ್ರಕಾರ ಜಿಡಿಪಿಯಲ್ಲಿ ಕನಿಷ್ಠ ಶೇ.6 ರಷ್ಟು ಮೀಸಲಿರಿಸಬೇಕು. ಇದಾಗಬೇಕೆಂದರೆ ಕರ್ನಾಟಕದಲ್ಲಿ ಕನಿಷ್ಠ 1.08 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗುತ್ತದೆ.

    ಹೊಸ ಶಿಕ್ಷಣ ನೀತಿಯ ಹೇರಿಕೆಯು ಹಲವು ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಯ ನಿರಾಕರಣೆ, ಖಾಸಗೀಕರಣ, ತರಗತಿಗಳನ್ನು ನಿರಾಕರಿಸಿ ಕಾಲೇಜು, ವಿಶ್ವ ವಿದ್ಯಾಲಯಗಳ ಪಾವಿತ್ರ್ಯದ ನಿರಾಕರಣೆ, ಬಡವರು, ಹಿಂದುಳಿದವರು, ದಮನಿತರ ಸಿಗಬಹುದಾದ ಸುಲಭ ಶಿಕ್ಷಣದ ನಿರಾಕರಣೆ, ಕೋಮು ಅಜೆಂಡಾಗಳನ್ನು ತಂದು ಅವೈಜ್ಞಾನಿಕತೆಯನ್ನು, ದ್ವೇಷವನ್ನು ತುಂಬಿ ಭಾರತವನ್ನು ಶಾಶ್ವತ ಅಂಧಕಾರಕ್ಕೆ ತಳ್ಳಲಾಗುತ್ತಿದೆ ಮುಂತಾದ ಗಂಭೀರ ಆರೋಪಗಳಿವೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿಯಲ್ಲಿ ಸಂಶಯಗಳಿಗೆ ಎಡೆಯಿಲ್ಲ: ಅಶ್ವಥ್ ನಾರಾಯಣ್

    ಸರ್ಕಾರ ಈ ಎಲ್ಲದರ ಕುರಿತು ಚರ್ಚೆ ನಡೆಸಬೇಕಾಗಿತ್ತು. ಇದೇನನ್ನೂ ನೀವು ಮಾಡಿಲ್ಲ. ನನ್ನ, ನಿಮ್ಮ ಆಯಸ್ಸು, ರಾಜಕೀಯ ವೃತ್ತಿ ಎಲ್ಲವೂ ಮುಂದೆಂದೊ ಒಂದು ದಿನ ಮುಗಿಯುತ್ತದೆ. ಆದರೆ ಶಿಕ್ಷಣ ನೀತಿಯ ಹೆಸರಲ್ಲಿ ಬಲಿಪಶುಗಳಾಗುವ ಮಕ್ಕಳ ಮುಂದೆ 70-80 ವರ್ಷಗಳ ಭವಿಷ್ಯವಿದೆ. ಶಿಕ್ಷಣದ ಹಂತದಲ್ಲಿ ಅವರ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು? ಈ ನಾಡಿನ, ರೈತರ, ಪಶುಪಾಲಕರ, ಕುಶಲಕರ್ಮಿಗಳ, ಸಣ್ಣ ಪುಟ್ಟ ವ್ಯಾಪಾರಿಗಳ, ಕಾರ್ಮಿಕರ ಮನೆಗಳಿಂದ ಬಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದ ಉದಾರ ಮಾನವತಾವಾದಿ, ವೈಜ್ಞಾನಿಕ ಶಿಕ್ಷಣ ಪಡೆಯಬಾರದೆ? ತಾವು ನಿಜವಾಗಿಯೂ ನೈಜ ಸ್ಫೂರ್ತಿಯಲ್ಲಿ ಚರ್ಚೆಮಾಡಬಯಸಿದರೆ, ಕೂಡಲೇ ಈ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ. ಚರ್ಚೆ ನಡೆಸಿದ ಮೇಲೆ ನಿಜವಾಗಿಯೂ ಈ ನೀತಿ ಆರೋಗ್ಯಕರವೆನ್ನಿಸಿ ಅನುಷ್ಠಾನ ಸೂಕ್ತವೆನ್ನಿಸಿದರೆ, ಈ ಶತಮಾನಕ್ಕೆ ಅತ್ಯಗತ್ಯ ಎನ್ನಿಸಿದರೆ ನಾವೆ ನಿಂತು ಅನುಷ್ಠಾನ ಮಾಡಲು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಪಾಪದ ಕೆಲಸದಲ್ಲಿ ಭಾಗಿಯಾದೆವು ಎಂಬ ಪಶ್ಚಾತ್ತಾಪವನ್ನು ಹೊರಬೇಕಾಗುತ್ತದೆ ಎಂಬುದನ್ನು ತಮಗೆ ತಿಳಿಸಬಯಸುತ್ತೇನೆ.

  • ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

    ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

    ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್.ಇ.ಪಿ ಸಹಾಯವಾಣಿ, ಉನ್ನತ ಶಿಕ್ಷಣ ಅಂತರಾಷ್ಟೀಕರಣ , 2021- 22 ನೇ ಸಾಲಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ ಡಾ: ಕೆ.ಕಸ್ತೂರಿರಂಗನ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

    ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಪಿ.ಸಿ.ಮೋಹನ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರು

  • ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯಿಂದ ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ

    ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯಿಂದ ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ

    – ರಾಜ್ಯಾಧ್ಯಕ್ಷರೂ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ

    ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸದಿರಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರ ಕಚೇರಿ ಮತ್ತು ಮನೆಗೆ ಮುತ್ತಿಗೆ ಹಾಕಿದೆ.

    ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಒಲವು ತೋರುತ್ತಿರುವುದು ಕಾಣುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಳವಾಗಿ ಅಧ್ಯಯನ ನಡೆಸಿದರೆ ಅದರಲ್ಲಿ ಆಕರ್ಷಕ ಪದಗಳನ್ನು ಬಿಟ್ಟು ಪ್ರಾಯೋಗಿಕವಾಗಿ ಜಾರಿಗೊಳಿಸುವ ಪೂರಕವಾದ ಅಂಶಗಳಿಲ್ಲ. ಈ ನೀತಿಯು ಏಕ ಸಂಸ್ಕೃತಿ , ಸಿದ್ಧಾಂತವನ್ನು ಹೇರಿಕೆ ಮಾಡುವ ದೂರದೃಷ್ಟಿಯನ್ನು ಹೊಂದಿದೆ ಎಂಬುದು ಬಹಿರಂಗವಾಗಿದೆ. ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜೀವನಶೈಲಿಗಳಲ್ಲಿ ಬದುಕುವ “ವಿವಿಧತೆಯಲ್ಲಿ ಏಕತೆ” ಸಾರುವ ಜಾತ್ಯತೀತ ಭಾರತದಲ್ಲಿ ಏಕ ನೀತಿ ಹೇರಿಕೆ ಅಸಾಧ್ಯ ಮತ್ತು ಅಸಂವಿಧಾನಿಕವಾಗಿದೆ.

    ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಆಲೋಚನೆಯು ಶಿಕ್ಷಣದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವು ಆಗಿದೆ. ಶಿಕ್ಷಣವೆಂಬುದು ದೇಶದ ಸಮವರ್ತಿ ವ್ಯಾಪ್ತಿಗೆ ಬರುವಂತಹದ್ದು, ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಡುವ ಬಗ್ಗೆ ಸಂವಿಧಾನವೇ ಪ್ರತಿಪಾದಿಸುತ್ತದೆ. ಆದರೆ ಹೊಸದಾಗಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಉದ್ದೇಶಪೂರ್ವಕವಾಗಿಯೇ ಪ್ರಾದೇಶಿಕತೆಗೆ ಧಕ್ಕೆ ತರಲಿದೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಹಿಂದಿಯನ್ನು ಹಿಂಬದಿಯಿಂದ ಹೇರಿಸಿ ಹಿಂದುತ್ವ ಫ್ಯಾಶಿಸಂ ಮಾರಕ ಸಿದ್ಧಾಂತದ ಭಾಗವಾಗಿ ಈ ಎಲ್ಲಾ ಪ್ರಯತ್ನಗಳು ಸರ್ಕಾರವು ಮಾಡುತ್ತಿದೆ. ವೈಜ್ಞಾನಿಕ ದೂರದೃಷ್ಟಿ ಇಲ್ಲದೆ ಘೋಷಣೆಗಳಿಗೆ ಮಾತ್ರ ಸೀಮಿತವಾಗಿರುವ ಮತ್ತು ದೇಶದ ವೈವಿಧ್ಯತೆಗೆ ಬೆದರಿಕೆಯಾಗಿರುವ ಈ ಶಿಕ್ಷಣ ನೀತಿಯನ್ನು ಸೌಹಾರ್ದತೆಯ ಕರ್ನಾಟಕದ ಮಣ್ಣಿನಲ್ಲಿ ಕಾರ್ಯರೂಪಕ್ಕೆ ತರಲು ಕ್ಯಾಂಪಸ್ ಫ್ರಂಟ್ ಒಪ್ಪಲ್ಲ. ಇದು ಕೇವಲ ಬಂಡವಾಳಶಾಹಿ ಕಾರ್ಪೊರೇಟ್ ಕುಳಗಳ ಹಿತ ಕಾಪಾಡಲು ತಂದಿರುವ ನೀತಿಯಾಗಿದ್ದು ಇದನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಲಿದ್ದೇವೆ.

    ಒಂದು ವೇಳೆ ನಮ್ಮ ಬೇಡಿಕೆಯನ್ನು ಪರಿಗಣಿಸದೇ ಈ ಪೊಳ್ಳು ಭರವಸೆಗಳ ಕರಡನ್ನು ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾದರೆ ಕ್ಯಾಂಪಸ್ ಫ್ರಂಟ್ ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಕಾಪಾಡಲಿಕ್ಕೆ ಬೇಕಾಗಿ ಇಂದು ಉನ್ನತ ಶಿಕ್ಷಣ ಸಚಿವರ ಕಛೇರಿಗೆ ಮಾರ್ಚ್ ಮಾಡುವ ಮೂಲಕ ಎಚ್ಚರಿಸಿದ್ದೇವೆ, ಸರ್ಕಾರ ತನ್ನ ನಿಲುವು ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಕ್ಯಾಂಪಸ್ ಫ್ರಂಟ್ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ರಾಜ್ಯಾಧ್ಯಕ್ಷ, ಕಾರ್ಯದರ್ಶಿ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ ಈ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮಾತಿಗೆ ಯಾವುದೇ ರೀತಿ ಸ್ಪಂದನೆ ಮಾಡದೆ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಆಥಾವುಲ್ಲ ಪುಂಜಾಲಕಟ್ಟೆ, ಕಾರ್ಯದರ್ಶಿ ಸರ್ಪರಾಝ್ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವರಿಗೆ ABVP ಮನವಿ

    ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವರಿಗೆ ABVP ಮನವಿ

    ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಬದಲಾವಣೆಯನ್ನೂ ಮಾಡದೇ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

    ಈ ಬಗ್ಗೆ ಸಂಘಟನೆಯ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರಲ್ಲದೆ, ಶಿಕ್ಷಣ ನೀತಿಯ ಬಗ್ಗೆ ಕೆಲವರು ಹಬ್ಬಿಸುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೂಡಲೇ ಇಡೀ ನೀತಿಯ ವಿವರಗಳನ್ನು ರಾಜ್ಯದ ಜನತೆಯ ಮುಂದಿಡಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಸಮ್ಮತಿಸಿದರು.

    ಎಬಿವಿಪಿ ಮಾಡಿರುವ ಎಲ್ಲ ಮನವಿಗಳನ್ನು ಪರಿಶೀಲಿಸಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದ ಡಾ.ಅಶ್ವತ್ಥನಾರಾಯಣ ಅವರು ತಮ್ಮನ್ನು ಭೇಟಿ ಮಾಡಿದ ಎಬಿವಿಪಿ ವಲಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ರಾಷ್ಟ್ರೀಯ ಕಾರ್ಯದರ್ಶಿ ಹರ್ಷ, ರಾಜ್ಯ ಘಟಕದ ಅಧ್ಯಕ್ಷ ಡಾ.ಸತೀಶ, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ ಅವರಿಗೆ ಭರವಸೆ ನೀಡಿದರು. ಇದನ್ನೂ ಓದಿ: ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    ಇದಲ್ಲದೆ ಕೋವಿಡ್‍ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡಬೇಕು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿರುವ ಖಾಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಕಾಲೇಜುಗಳಲ್ಲಿಯೂ ಪದವಿ ಪ್ರವೇಶ ಪ್ರಕ್ರಿಯೆ ಆರಂಭ ಮಾಡಬೇಕು. ಕಾಲೇಜು ಗ್ರಂಥಾಲಯಗಳಿಗೆ ನೀಡುತ್ತಿರುವ ಅನುದಾನವನ್ನು ಬಿಡುಗಡೆ ಮಾಡಬೇಕು. ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರೀಡಾ ಮತ್ತು ಶಾರೀರಕ ತರಬೇತಿಗಾಗಿ ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬರಂತೆ ತರಬೇತಿದಾರರನ್ನು ನೇಮಕ ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.  ಇದನ್ನೂ ಓದಿ: ಜಮೀರ್ ಮನೆ ಬಗ್ಗೆ ನಾನಂತೂ ದೂರು ಕೊಟ್ಟಿಲ್ಲ: ಹೆಚ್‍ಡಿಕೆ

    ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಡಾ.ಅಶ್ವತ್ಥನಾರಾಯಣ ಅವರು, ಈಗಾಗಲೇ ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಆಸ್ತಿಯೆಲ್ಲ ಬಡವರ ಬಳಿಯೇ ಇದೆ: ಜಮೀರ್

  • ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಬೆಂಗಳೂರು: ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ನಾಲ್ಕು ಸೆಮಿಸ್ಟರ್‍ ಗಳ ಅವಧಿಗಳಲ್ಲಿ ಕಲಿಸುತ್ತಿದ್ದು, ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್‍ ಗಳಿಗೆ ಮಿತಿಗೊಳಿಸಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಿದ್ದರಾಮಯ್ಯ ಅವರು, ಹೊಸ ಶಿಕ್ಷಣ ನೀತಿಯ ಭಾಗವಾಗಿ ಈಗ ಇರುವ ಮೂರು ವರ್ಷದ ಬದಲಾಗಿ ನಾಲ್ಕು ವರ್ಷದ ಪದವಿ ಕೋರ್ಸನ್ನು ಅಳವಡಿಸಲು ಉದ್ದೇಶಿಸಲಾಗಿದೆ.ಅದಕ್ಕೋಸ್ಕರ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ನೇಮಿಸಲಾಗಿದ್ದ ಕಾರ್ಯಪಡೆಯ ಪಠ್ಯಪುಸ್ತಕ ರಚನೆಯ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‍ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಮಿತಿಗೊಳಿಸಿ ಶಿಫಾರಸ್ಸುಗಳನ್ನು ಮಾಡಿದೆ. ಈ ಶಿಫಾರಸ್ಸುಗಳು `ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿವೆ’ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶಗಳಲ್ಲಿ ದೇಶ ಭಾಷೆಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ಅಂಶವೂ ಇದೆ. ಆದರೆ ರಾಜ್ಯದ ಈ ಸಮಿತಿಯು ಕನ್ನಡದ ಪಾಲಿಗೆ ಮಹಾ ದ್ರೋಹವೆಸಗುವಂತಹ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಆರೋಪಗಳನ್ನು ನಾಡಿನ ಹಿರಿಯರು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಸೆಮಿಸ್ಟರ್‍ನಲ್ಲಿ ಗರಿಷ್ಠವೆಂದರೆ 90 ದಿನಗಳ ಅವಧಿಯ ಬೋಧನೆ ಇರುತ್ತದೆ. ಪ್ರತಿ ವಿಷಯಕ್ಕೆ ಸಾಮಾನ್ಯವಾಗಿ ವಾರಕ್ಕೆ 4 ಗಂಟೆಯ ಅವಧಿಯಿರುತ್ತದೆ. ಒಂದು ಸೆಮಿಸ್ಟರ್‍ನಲ್ಲಿ ಒಂದು ವಿಷಯಕ್ಕೆ 48 ಗಂಟೆ ಬೋಧನಾ ಅವಧಿ ಇರುತ್ತದೆ. ಎರಡು ಸೆಮಿಸ್ಟರುಗಳಿಂದ ಗರಿಷ್ಠ 96 ಗಂಟೆಗಳು ಇರುತ್ತವೆ. ಕೇವಲ 96 ಗಂಟೆಗಳ ಅವಧಿಯಲ್ಲಿ ಯಾವ ವಿಷಯವನ್ನು ಕಲಿಸಲು ಸಾಧ್ಯ? ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿ ತನ್ನ ಕಲಿಕೆಯುದ್ದಕ್ಕೂ ಬೌದ್ಧಿಕತೆಯನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರವಾದ ಮನಸ್ಸನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ. ಹೀಗಿರುವಾಗ ಸರ್ಕಾರವು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿದರೆ ಅವರು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಕನ್ನಡದ ಶ್ರೇಷ್ಠ ಅಭಿವ್ಯಕ್ತಿಗಳಾದ ವಚನಗಳನ್ನು, ಪಂಪ, ರನ್ನ, ಕುಮಾರವ್ಯಾಸ ಮತ್ತು ಹರಿದಾಸರ ಕಾವ್ಯಗಳನ್ನು ವಿದ್ಯಾರ್ಥಿಗಳು ಕಲಿಯುವುದು ಹೇಗೆ? ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮೇರು ಸಾಹಿತಿಗಳಾದ ಕುವೆಂಪು, ಕಾರಂತ ಬೇಂದ್ರೆ, ಮಾಸ್ತಿ, ಮುಂತಾದವರು ರೂಪಿಸಿದ ಜೀವನೋತ್ಸಾಹದ ಬದುಕಿನ ದರ್ಶನಗಳನ್ನು ಮಕ್ಕಳು ಕಲಿಯುವುದು ಹೇಗೆ? ದೇಶದ ಸಂಸ್ಕೃತಿ, ಭಾಷೆ, ಮಹಾಕಾವ್ಯಗಳು, ಪುರಾಣಗಳು, ಕಲೆ, ಜನಪದ ಮುಂತಾದ ಪರಂಪರೆಗಳ ಬಗ್ಗೆ ಮಾತನಾಡುವ ಬಿಜೆಪಿಯು ಪದವಿ ಕಲಿಯುವ ನಮ್ಮ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿ ಕೇವಲ ಅದಾನಿ, ಅಂಬಾನಿಗಳಂಥ ಲೂಟಿಕೋರರ ಮಾದರಿಗಳನ್ನು ಕಲಿಸಲು ಹೊರಟಿದೆಯೆ ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್

    ನಮ್ಮ ದೇಶಕ್ಕೆ ಜ್ಞಾನ ಇರುವ, ದುಡ್ಡು ಇರುವ ಜನರ ಅಗತ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಮಾನವೀಯ ಹೃದಯ ಇರುವ ಮನುಷ್ಯರ ಅಗತ್ಯವಿದೆ. ಅಂಥದ್ದಕ್ಕೆ ವಿರುದ್ಧವಾದ ನಿಲುವುಗಳನ್ನು ರೂಪಿಸುವುದಕ್ಕಾಗಿ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಉಪಸಮಿತಿಯವರು ಭಾಷೆಗಳ ಕಲಿಕೆಯನ್ನು ಎರಡು ಸೆಮಿಸ್ಟರುಗಳಿಗೆ ಇಳಿಸಿದ್ದಾರೆ. ಸರ್ಕಾರ ಈ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದೆ ಆದರೆ ಅದು ಬಹಳ ದೊಡ್ಡ ಮಟ್ಟದ ಕನ್ನಡ ದ್ರೋಹವಾಗುತ್ತದೆ, ಸರಿಪಡಿಸಲಾಗದ ಜನದ್ರೋಹವಾಗುತ್ತದೆ. ಪದವಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ವ್ಯಾಕರಣ, ಛಂದಸ್ಸುಗಳನ್ನು ಕಲಿಸುವುದಿಲ್ಲ. ಬದಲಾಗಿ ವಿದ್ಯಾರ್ಥಿಯ ಕೋರ್ಸಿಗೆ ಪೂರಕವಾದ ಪಠ್ಯವನ್ನೂ ಕಲಿಸಲಾಗುತ್ತದೆ. ಉದಾಹರಣೆಗೆ ವಿಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳು ಶಿವರಾಮ ಕಾರಂತರ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಕಲಿಯುತ್ತಾರೆ. ಅದೇ ರೀತಿ ಗೆಲಿಲಿಯೋ, ಸ್ಟೀಫನ್ ಹಾಕಿಂಗ್, ಐನ್‍ಸ್ಟೆನ್, ಜಗದೀಶ್ ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದವರ ಜೀವನದ ಸಾಧನೆಗಳನ್ನು, ಮಾದರಿಗಳನ್ನು ಮಾತೃಭಾಷೆಯಲ್ಲಿ ಕಲಿಯುತ್ತಾರೆ. ಹಾಗೆಯೇ ವಾಣಿಜ್ಯದ ವಿದ್ಯಾರ್ಥಿಗಳೂ ಸಹ ಯಶಸ್ವಿ ಸಂವಹನವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಹಾಗೂ ಉತ್ತಮ ಉದ್ಯಮಿ ಆಗುವುದರ ಜೊತೆಯಲ್ಲಿ ಉತ್ತಮ ಮನುಷ್ಯನಾಗುವುದು ಹೇಗೆ ಎಂಬುದನ್ನೂ ಕಲಿಯುತ್ತಾರೆ.

    ಆದ್ದರಿಂದ 4 ವರ್ಷದ ಕೋರ್ಸಿಗೆ ಅನುಗುಣವಾಗಿ ಈಗ 3 ವರ್ಷಕ್ಕೆ ಅಥವಾ ಆರು ಸೆಮಿಸ್ಟರ್‍ಗಳಿಗೆ ಭಾಷಾ ವಿಷಯವನ್ನು ಬೋಧಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಮ್ಮ ಮಕ್ಕಳು ಉತ್ತಮ ಪರಂಪರೆಗಳಿಗೆ ವಾರಸುದಾರರಾಗಲು ಸಾಧ್ಯವಾಗುತ್ತದೆ. ಹಾಗೂ ರಾಷ್ಟ್ರಕ್ಕೆ ಬೇಕಾದ ಉತ್ತಮ ಮನುಷ್ಯರು ರೂಪುಗೊಳ್ಳಲು ಸಹಾಯವಾಗುತ್ತದೆ. ಅದರ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ. ಈ ನಾಡು ಎಂದಿಗೂ ನಾಡು, ನುಡಿಗೆ ದ್ರೋಹ ಎಸಗಿದವರನ್ನು ಕ್ಷಮಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ರೂಪಿಸಬೇಕಾಗಿದೆ. ಹಾಗಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವಾಗ ಸಂಬಂಧಿಸಿದ ತಜ್ಞರುಗಳ ಕುಳಿತು ಚರ್ಚಿಸಿ ಆರೋಗ್ಯಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ನಾಡು-ನುಡಿಗಳನ್ನು ಕಟ್ಟಲು ಪೂರಕವಾಗುವ ಪಠ್ಯಗಳನ್ನು ರೂಪಿಸಬೇಕು. ಆರು ಸೆಮಿಸ್ಟರ್‍ ಗಳಲ್ಲೂ ಕನ್ನಡ ಭಾಷಾ ವಿಷಯವನ್ನು ಎಲ್ಲಾ ಪದವಿ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

  • ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ

    ಬೆಂಗಳೂರು: ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದಿದ್ದಾರೆ.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಪದವಿ ಶಿಕ್ಷಣ ಸಂರಚನೆ ಹೀಗಿರುತ್ತದೆ. ಮೂರು ವರ್ಷ ವ್ಯಾಸಂಗ ಮಾಡಿದರೆ ಪದವಿ ಮುಗಿಯುತ್ತದೆ. ನಾಲ್ಕು ವರ್ಷ ಓದಿದರೆ ಅದನ್ನು ‘ಡಿಗ್ರಿ ಆನರ್ಸ್’ ಎಂದು ಪರಿಗಣಿಸಲಾಗುತ್ತದೆ, ಮತ್ತೂ ಐದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿಯೇ ಪೂರ್ಣಗೊಳಿಸಿದಂತೆ ಆಗುತ್ತದೆ. ಇದು ಪೂರ್ವ ವ್ಯವಸ್ಥೆಯ ಸುಧಾರಣಾ ಕ್ರಮವಷ್ಟೇ ಎಂದು ಡಿಸಿಎಂ ವಿವರಿಸಿದ್ದಾರೆ.

    ಈ ವಿಷಯ ಇನ್ನು ಕರಡು ತಯಾರಿಕೆ ಹಂತದಲ್ಲಿದೆ. ಈಗಲೇ ಅದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಮುಖ್ಯವಾಗಿ ಪದವಿ ಶಿಕ್ಷಣದಲ್ಲಿ ಎರಡು ವರ್ಷ ಕನ್ನಡ ಬೋಧನೆ ಆಗುತ್ತಿರುವ ಹಾಲಿ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಮಾತೃಭಾಷೆ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಪುನುರುಚ್ಛರಿಸಿದ್ದಾರೆ. ಇದನ್ನೂ ಓದಿ: ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಐಟಿಸಿಎ ಫೆಲೋಶಿಪ್

    ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ದೃಷ್ಟಿ ಇಟ್ಟುಕೊಂಡು ಅತ್ಯಂತ ಪುರಾತನ ಭಾಷೆಯಾದ ಕನ್ನಡದ ಭೋಧನೆ ಮತ್ತು ಕಲಿಕೆಯನ್ನು ಮತ್ತಷ್ಟು ವಿಸ್ತೃತಗೊಳಿಸುವ ಉದ್ದೇಶ ಸರಕಾರಕ್ಕೆ ಇದೆಯೇ ವಿನಾ, ಅದಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಚಿಂತನೆ ಹೊಂದಿಲ್ಲ. ಈ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಉಂಟಾಗುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

    ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ ಆಗುತ್ತದೆ. ಅಂದರೆ, ಮೊದಲ ವರ್ಷವನ್ನು ಶೂನ್ಯವರ್ಷ ಎಂದು ಪರಿಗಣಿಸಲಾಗಿದೆ. ಆಡಳಿತಾತ್ಮಕ-ಕಾನೂನಾತ್ಮಕ ಸಿದ್ಧತೆಗಳನ್ನು ಪ್ರಸಕ್ತ ವರ್ಷದಲ್ಲಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅದರ ರೂಪುರೇಶೆಯಷ್ಟೇ ಸದ್ಯಕ್ಕೆ ಸಿದ್ಧವಾಗುತ್ತಿದೆ. ಕನ್ನಡ ಕಲಿಕೆಯನ್ನು ಮೊಟಕುಗೊಳಿಸಲಾಗುತ್ತದೆ ಎಂದು ಈಗಲೇ ಆತಂಕಪಡುವುದು ಬೇಡ. ಸೂಕ್ತ ಮಾಹಿತಿ ಪಡೆದುಕೊಂಡು ಗೊಂದಲ ಬಗೆಹರಿಸಿಕೊಳ್ಳಬಹುದು ಎಂದು ಡಿಸಿಎಂ ಮನವಿ ಮಾಡಿದರು. ಇದನ್ನೂ ಓದಿ: ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

  • ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    – ಟೊಯೋಟಾ ಕಿರ್ಲೋಸ್ಕರ್ ನೆರವಿನಿಂದ ಹೈಟೆಕ್ ಆದ ಸರ್ಕಾರಿ ಶಾಲೆ
    – 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

    ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಮರು ನಿರ್ಮಾಣ ಮಾಡಿರುವ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು.

    ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ:
    ಸುಮಾರು 4.28 ಕೋಟಿ ರೂ. ವೆಚ್ಚದಲ್ಲಿ 22 ಕೊಠಡಿಗಳನ್ನು ನಿರ್ಮಾಣ ಮಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಇಡೀ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಜಾಗತಿಕ ಗುಣಮಟ್ಟದ ಸ್ಪರ್ಶ ನೀಡಿದೆ. ಖಾಸಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಯಾವ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ. ಸುಸಜ್ಜಿತ ಲ್ಯಾಬ್, ಅಡುಗೆ ಮನೆ, ಹೈಟೆಕ್ ಗ್ರಂಥಾಲಯ, ಅಂಗನವಾಡಿ ಮಕ್ಕಳಿಗೂ ಒಂದು ಕೊಠಡಿ, ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಡೀ ಜಿಲ್ಲೆಯಲ್ಲಿ ಅತ್ಯುತ್ತಮ ಸೌಲಭ್ಯಗಳುಳ್ಳ ಸರಕಾರಿ ಶಾಲೆ ಇದಾಗಿದೆ. ಕಂಪನಿಯ ಆಡಳಿತ ಮಂಡಳಿ ತನ್ನ ಸಿಎಸ್‍ಆರ್ ನಿಧಿಯಿಂದ ಈ ಶಾಲೆ ಆಧುನೀಕರಣಗೊಳಿಸಿದೆ.

    ಶಾಲೆಯ ಕಟ್ಟಡ ಲೋಕಾರ್ಪಣೆ ಬಳಿಕ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವು ನೀಡಿರುವುದು ಸಂತಸ ಉಂಟು ಮಾಡಿದೆ. ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಶಾಲೆ- ಕಾಲೇಜುಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನು ಸರ್ಕಾರ ಮಾಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡುತ್ತಿದ್ದೇವೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದರು.

    ನೂತನ ಕಟ್ಟಡ ಲೋಕಾರ್ಪಣೆ:
    ಇದೇ ವೇಳೆ ಡಿಸಿಎಂ ಅವರು ಪ್ರಥಮ ದರ್ಜೆ ಕಾಲೇಜನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. 1982-83ರಲ್ಲಿ ಆರಂಭವಾದ ಈ ಕಾಲೇಜು ರಾಮನಗರದ ಮಟ್ಟಿಗೆ ಒಂದು ಪ್ರಮುಖ ಲ್ಯಾಂಡ್‍ಮಾರ್ಕ್ ಆಗಿದ್ದು, ಇದೀಗ ಡಿಸಿಎಂ ಒತ್ತಾಸೆಯಿಂದ ಅತ್ಯಾಧುನಿಕ ಕಟ್ಟಡವೊಂದು ತಲೆಎತ್ತಿದೆ. ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, 648 ಚ.ಮೀ ವಿಸ್ತೀರ್ಣವುಳ್ಳ ಕಟ್ಟಡದಲ್ಲಿ ಎನ್‍ಎಸ್‍ಎಸ್, ಎನ್‍ಸಿಸಿ, ಪ್ರಯೋಗಾಲಯ ಹಾಗೂ ಕ್ಲಾಸ್ ರೂಮ್‍ಗಳಿವೆ.

    ಈ ಕಾಲೇಜಿನಲ್ಲಿರುವ ಒಟ್ಟು 29 ತರಗತಿ ಕೊಠಡಿಗಳ ಪೈಕಿ, 8 ತರಗತಿ ಕೊಠಡಿಗಳನ್ನು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಗಳಲ್ಲಿ ಪ್ರೊಜೆಕ್ಟರ್, ಯುಪಿಎಸ್, ಆಕ್ಸೆಸ್ ಪಾಯಿಂಟುಗಳು, ಆಂಡ್ರಾಯ್ಡ್ ಬಾಕ್ಸ್‍ಗಳು, ವೈಟ್ ಬೋರ್ಡುಗಳಿವೆ. ಆಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಡಿಜಿಟಲ್ ಕಲಿಕೆಯ ಸೌಕರ್ಯ ದೊರೆಯಬೇಕು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿದೆ ಎಂದು ಡಿಸಿಎಂ ಹೇಳಿದರು.

    ಖಾಸಗಿ ಸಹಭಾಗಿತ್ವ ಬೇಕು
    ಕಾಲೇಜು ಕಟ್ಟಡ ಉದ್ಘಾಟನೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ರಾಜ್ಯವು ಶೈಕ್ಷಣಿಕವಾಗಿ ಉತ್ತಮ ವಾತಾವರಣ ಹೊಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಆಧುನೀಕರಣಗೊಳಿಸಲು ಖಾಸಗಿಯರ ನೆರವು ಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ರಾಜ್ಯ ಸರ್ಕಾರ ಶಿಕ್ಷಣದ ಬೆಳವಣಿಗೆಗಾಗಿ ಉಪಕ್ರಮವನ್ನು ಶುರು ಮಾಡಿದ್ದು, ಇದರ ಅಡಿಯಲ್ಲಿ ಖಾಸಗಿ ವಲಯದ ಅನೇಕ ಧಾನಿಗಳು ನೆರವಿಗೆ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಸರ್ಕಾರದ ಉದ್ದೇಶಕ್ಕೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಉಪಕ್ರಮದಡಿ ಕಾಗ್ನಿಸೆಂಟ್ ಸಂಸ್ಥೆ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 12,000 ಡೀಬಾಂಡೆಡ್ ಕಂಪ್ಯೂಟರ್ ಗಳನ್ನು ನೀಡಿದ್ದು, ಅವುಗಳಲ್ಲಿ 40 ಕಂಪ್ಯೂಟರ್‍ಗಳನ್ನು ಈ ಕಾಲೇಜಿಗೆ ಒದಗಿಸಿ ಒಂದು ಕಂಪ್ಯೂಟರ್ ಪ್ರಯೋಗಾಲಯವನ್ನೂ ರೂಪಿಸಲಾಗಿದೆ. ಈಗ ಈ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ ಮುಂತಾದವರು ಭಾಗವಹಿಸಿದ್ದರು.

  • ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಬಜೆಟ್ ಹೈಲೈಟ್ಸ್ ಏನು?
    * ಸಂಶೋಧನೆ ಮತ್ತ ಅವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ.
    * ದೇಶದಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ನಿಧಿ ಬಿಡುಗಡೆ.
    * ಪ್ರತ್ಯೇಕ ಸಂಶೋಧನೆಗೆ ಸಂಬಂಧಪಟ್ಟ ಸಚಿವಾಲಯದಿಂದ ಪ್ರೋತ್ಸಾಹ ಧನ.

    * 2019-20 ಆರ್ಥಿಕ ವರ್ಷದಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿಗಾಗಿ 400 ಕೋಟಿ ರೂ. ಅನುದಾನ.
    * ಭಾರತದಲ್ಲಿ ಶಿಕ್ಷಣ (Study in India) ಎನ್ನುವಂತೆ ವಿದೇಶಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ದೇಶಕ್ಕೆ ಕರೆತರುವುದು, ಕಾನೂನುಗಳ ಸರಳೀಕರಣ

    * ಖೇಲೋ ಇಂಡಿಯಾ ಸ್ಕೀಮ್ ಗೆ ಆರ್ಥಿಕ ನೆರವು ನೀಡುವುದು.
    * ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ, ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಯುವ ಆಟಗಾರರನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು.
    * ಯುವಕರ ವಿದ್ಯಾರ್ಹತೆ, ಕೌಶಲ್ಯ, ಸಾಮಥ್ರ್ಯಕ್ಕನುಗುಣವಾಗಿ ಸಂಬಂಧಿಸಿದ ವಲಯಗಳಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಉದ್ಯೋಗಿಗಳನ್ನಾಗಿ ಬದಲಿಸುವುದು. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಸೌಲಭ್ಯ ಕಲ್ಪಿಸುವುದು. AI, IoT, Big Data, 3D Printing, Virtual Reality and Robotics ಸಂಬಂಧಿಸಿದ ವಿಷಯಗಳಲ್ಲಿ ತರಬೇತಿ ಸಿಗಲಿದೆ.

    * ಕೆಳಮಟ್ಟದಲ್ಲಿರುವ ಕಾರ್ಮಿಕ ವಲಯವನ್ನು ಮೇಲ್ದರ್ಜೆಗೆ ತರುವುದು.
    * ಸ್ಟಾರ್ಟ್‍ಅಪ್ ಯೋಜನೆಗಳ ಮಾಹಿತಿಗಾಗಿ ಡಿಡಿ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳ ಪ್ರಸಾರ.
    *2020-25ರರೆಗೆ ಸ್ಟ್ಯಾಂಡ್-ಅಪ್ ಇಂಡಿಯಾ ಸ್ಕೀಮ್ ಇರಲಿದೆ. ಈ ಯೋಜನೆಯ ಫಲಾನುಭವಿಗಳಿಗೆ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ.