Tag: National Education Policy 2020

  • ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ.ನಾಗೇಶ್

    ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ.ನಾಗೇಶ್

    ಬೆಂಗಳೂರು: ಜ್ಞಾನ, ವಿಜ್ಞಾನ, ಕೌಶಲದ ಜೊತೆಗೆ ಮಾನವೀಯ ಮೌಲ್ಯಗಳು, ಸಂಸ್ಕೃತಿ, ಮತ್ತು ಸಂಸ್ಕಾರವನ್ನು ನೀಡುವ ಸಮಗ್ರ ಶಿಕ್ಷಣದ ಅಗತ್ಯವಿದೆ. ಅದನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020 ಪೂರೈಸುತ್ತದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ.ನಾಗೇಶ್ ತಿಳಿಸಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಬೆಂಗಳೂರಿನ ಜಯನಗರದಲ್ಲಿ ಆರ್.ವಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಎಲ್ಲರಿಗೂ ಶಿಕ್ಷಣ ನೀಡುವುದರಿಂದ ದೇಶದಲ್ಲಿ ಜಾತಿ ವ್ಯವಸ್ಥೆ, ತಾರತಮ್ಯ ಹೋಗಲಾಡಿಸಬಹುದು ಎಂದು ದಶಕಗಳಿಂದ ಹೇಳಿಕೊಂಡು ಬಂದಿದ್ದೇವೆ. ಅದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಗೆ ಅಕ್ಷರ ಜ್ಞಾನ, ಶಿಕ್ಷಣ ನೀಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಸರ್ಕಾರಗಳ ಪ್ರಯತ್ನದ ಫಲವಾಗಿ ದೇಶದಲ್ಲಿ ಸಾಕ್ಷರರ ಪ್ರಮಾಣ ಏರಿಕೆಯಾಯಿತು. ಸಮ ಸಮಾಜ ನಿರ್ಮಾಣದ ಕನಸುಗಳು, ಉದ್ದೇಶಗಳು ಸಾಕಷ್ಟು ವರ್ಷಗಳ ಕಾಲ ಈಡೇರಿದವು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ವೇಗದ ಬೆಳವಣಿಗೆ, ಯಂತ್ರೋಪಕರಣಗಳ ಬಳಕೆಯಿಂದ ಜನರಿಗೆ ಐಷಾರಾಮಿ ಜೀವನ ಸಿಗುತ್ತಿದೆ. ಜನರ ಶ್ರಮ ಕಡಿಮೆಯಾಗುತ್ತಿದೆ. ದುರಾದೃಷ್ಟವಷಾತ್ ಈ ಐಷಾರಾಮಿ ವ್ಯವಸ್ಥೆಯು ವ್ಯಕ್ತಿಗಳನ್ನು ಪರಸ್ಪರರಿಂದ ದೂರ ಮಾಡುತ್ತಿದೆ. ಸಮಾಜದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಮರೆತಿರುವ ಕಾರಣ ನಮ್ಮ ಸಮಾಜದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದರಿಂದ ಹೊರ ಬರಬೇಕಾದರೆ ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳು, ಪರಸ್ಪರರ ನಡುವೆ ಗೌರವ ಭಾವನೆಯ ಅಗತ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್‍ಕುಮಾರ್ ಹೆಸರಿಡಲು ಚಿಂತನೆ: ಎಸ್‍ಟಿಎಸ್

    ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಎಲ್ಲರಿಗೂ ಶಿಕ್ಷಣ ನೀಡಬೇಕು. ಜನರ ಅಗತ್ಯತೆಗಳಿಗೆ ತಕ್ಕಂತೆ ಶಿಕ್ಷಣ ನೀಡಬೇಕು. ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕು. ಶಿಕ್ಷಣದಿಂದ ಸಾಮಾಜಿಕ ಕಳಕಳಿ ಬರಬೇಕು. ಆರೋಗ್ಯಕರ ಸಮಾಜದ ಮೂಲಕ ಸ್ವಾಭಿಮಾನಿಗಳನ್ನು ಸೃಷ್ಟಿಸುವ ಶಿಕ್ಷಣ ನೀತಿ ಭಾರತಕ್ಕೆ ಅಗತ್ಯವಿದೆ ಎಂದು ಜನಸಂಘದ ನೇತಾರ, ಶಿಕ್ಷಣ ತಜ್ಞ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ದಶಕಗಳ ಹಿಂದೆಯೇ ಹೇಳಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.

    ರಾಷ್ಟ್ರೀಯ ಭಾವನೆ, ಭಾರತದ ಬಗ್ಗೆ ಗೌರವ, ದೇಶವನ್ನು ವಿಶ್ವಗುರು ಮಾಡುವ ಶಿಕ್ಷಣವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿರಬೇಕು ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಹೇಳಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಅದನ್ನೇ ಪ್ರತಿಪಾದಿಸಿದ್ದರು. ಸಂಸ್ಕೃತಿ ಮತ್ತು ವಿಜ್ಞಾನದ ಸಮನ್ವಯತೆಯ ಶಿಕ್ಷಣ ನೀಡುವುದು ಅತ್ಯಂತ ಜರೂರಿದೆ. ಎನ್ಇಪಿ-2020 ಈ ಎಲ್ಲ ಗುರಿ, ಉದ್ದೇಶಗಳನ್ನು ಒಳಗೊಂಡಿದೆ ಎಂದರು. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಹೆಚ್‌ಡಿಕೆ

    ರಾಜ್ಯದಲ್ಲಿ ಮುಂದಿನ ವರ್ಷದಿಂದ ಎನ್ಇಪಿ ಅನುಷ್ಠಾನಗೊಳಿಸಲು ಯೋಚಿಸಿ ಶಿಕ್ಷಣ ತಜ್ಞರ ಕಾರ್ಯಪಡೆ ರಚಿಸಲಾಗಿದೆ. ಈ ಕುರಿತು ಇಲಾಖೆಯಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಸಮಗ್ರ ಶಿಕ್ಷಣದ ದೂರದೃಷ್ಟಿಯೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

  • ಹೊಸ ಶಿಕ್ಷಣ ನೀತಿ- ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರವನ್ನೂ ನೀಡಿ

    ಹೊಸ ಶಿಕ್ಷಣ ನೀತಿ- ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರವನ್ನೂ ನೀಡಿ

    ನವದೆಹಲಿ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನು ನೀಡಬೇಕೆಂಬ ಮಹತ್ವದ ಅಂಶ ಎಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯಲ್ಲಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ಎಲಿಮೆಂಟರಿ ತರಗತಿವರೆಗೆ ಓದುತ್ತಿರುವ ಮಕ್ಕಳಿಗೆ ಬೆಳಗ್ಗಿನ ಉಪಹಾರದ ಕುರಿತು ಪ್ರಸ್ತಾಪಿಸಲಾಗಿದೆ. ಉಪಹಾರ, ಊಟದ ಜೊತೆಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಅವರ ಮಾನಸಿಕ ಆರೋಗ್ಯ ಕಾಪಾಡಲು ಶಾಲೆಯಲ್ಲಿ ನುರಿತ ಸಾಮಾಜಿಕ ಕಾರ್ಯಕರ್ತರು ಹಾಗೂ ಕೌನ್ಸಿಲರ್‍ಗಳನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.

    ಉಪಹಾರ ಸೇವಿಸಿದ ಬಳಿಕ ಬೆಳಗಿನ ಅವಧಿಯಲ್ಲಿ ಮಕ್ಕಳ ಅಧ್ಯಯನ ಬಹಳ ಚೆನ್ನಾಗಿ ನಡೆಯುತ್ತದೆ ಎಂದು ಸಂಶೋಧನಾ ವರದಿಗಳು ತಿಳಿಸಿದ ಹಿನ್ನೆಲೆಯಲ್ಲಿ ಈ ಅಂಶವನ್ನು ಎನ್‍ಇಪಿಯಲ್ಲಿ ಸೇರಿಸಲಾಗಿದೆ.

    ವಿದ್ಯಾರ್ಥಿಗಳ ಪೋಷಣೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಮುದಾಯವನ್ನು ಶಾಲಾ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನೂ ನೀಡಬೇಕು ಎಂದು ಶಿಫಾರಸು ಮಾಡಿದೆ.

    ಬೆಳಗ್ಗೆ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಉಪಹಾರ ನೀಡುವುದರಿಂದ ಅಧ್ಯಯನಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನೂ ನೀಡಬೇಕು ಎಂದು ಹೇಳಿದೆ. ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಸರ್ಕಾರ ಬಿಡುಗಡೆ ಮಾಡಿದ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಹಾಗೂ ಅನಾರೋಗ್ಯದಿಂದ ಬಳಲುವುದರಿಂದ ಉತ್ತಮ ಕಲಿಕೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಣೆ ಮತ್ತು ಮಾನಸಿಕ ಆರೋಗ್ಯವೂ ಅಗತ್ಯ. ಶಿಕ್ಷಿತ ಸಾಮಾಜಿಕ ಕಾರ್ಯಕರ್ತರು, ಸಲಹೆಗಾರರು ಹಾಗೂ ಶಾಲಾ ವ್ಯವಸ್ಥೆಯಲ್ಲಿ ಸಮುದಾಯದ ಒಳಗೊಳ್ಳುವಿಕೆ ಅಗತ್ಯ ಎಂದು ಪ್ರಸ್ತಾಪಿಸಲಾಗಿದೆ.

    ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕನಿಷ್ಠ 11.59 ಕೋಟಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಊಟ ನೀಡಲಾಗುತ್ತಿದೆ. ಇದಕ್ಕಾಗಿ ಅಡುಗೆ ತಯಾರಕರು ಹಾಗೂ ಸಹಾಯಕರು ಸೇರಿ 26 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ.

  • ಹೊಸ ಶಿಕ್ಷಣ ನೀತಿಯಲ್ಲಿ ಚೀನಿ ಭಾಷೆಗೆ ಕೊಕ್

    ಹೊಸ ಶಿಕ್ಷಣ ನೀತಿಯಲ್ಲಿ ಚೀನಿ ಭಾಷೆಗೆ ಕೊಕ್

    – ಕಳೆದ ವರ್ಷದ ಕರಡಿನಲ್ಲಿ ಚೀನಿ ಭಾಷೆ ಇತ್ತು
    – ಹೊಸ ಶಿಕ್ಷಣ ನೀತಿಯ ಕರಡಿನಲ್ಲಿ ಉಲ್ಲೇಖಿಸದ ಕೇಂದ್ರ

    ನವದೆಹಲಿ: ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‍ಇಪಿ)ನ್ನು ಜಾರಿಗೆ ತಂದಿದ್ದು, ಇದರಲ್ಲಿ ಚೀನಿ ಭಾಷೆಯ ಕುರಿತು ಯಾವುದೇ ರೀತಿಯ ಉಲ್ಲೇಖವಿಲ್ಲ.

    ಹೊಸ ಶಿಕ್ಷಣ ನೀತಿಯ ಕರಡು ಪ್ರತಿಯ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಚೀನಿ ಭಾಷೆಯ ಕುರಿತು ಯಾವುದೇ ಉಲ್ಲೇಖವಿಲ್ಲ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಶ್ವದ ಜ್ಞಾನ ತಿಳಿಯಲು, ಆಯ್ದ ದೇಶಗಳ ಭಾಷೆಗಳನ್ನು ಕಲಿಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಅವರ ಆಸಕ್ತಿಗೆ ತಕ್ಕಂತೆ ತಮಗೆ ಬೇಕಾದ ದೇಶದ ಭಾಷೆಯನ್ನು ಕಲಿಯಬಹುದಾಗಿದೆ.

    ಕಳೆದ ವರ್ಷದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್ ಜೊತೆ ಚೀನಿ ಭಾಷೆಯನ್ನೂ ಸೇರಿಸಲಾಗಿತ್ತು. ವಿದ್ಯಾರ್ಥಿಗಳು ತಮಗಿಷ್ಟದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ರಮೇಶ್ ಪೊಖ್ರಿಯಾಲ್ ಬಿಡುಗಡೆ ಮಾಡಿರುವ ಎನ್‍ಇಪಿಯ ಅಂತಿಮ ಕರಡಿನಲ್ಲಿ ಕೊರಿಯನ್‌, ರಷ್ಯನ್, ಪೊರ್ಚುಗೀಸ್ ಹಾಗೂ ಥಾಯ್ ಭಾಷೆಗಳನ್ನು ಆಯ್ಕೆಗೆ ನೀಡಲಾಗಿದೆ. ಈ ಪಟ್ಟಿಯಿಂದ ಚೀನಿ ಭಾಷೆಯನ್ನು ತೆಗೆಯಲಾಗಿದೆ.

    ಶಾಲೆಗಳು ಕಲಿಸಬಹುದಾದ ವಿದೇಶಿ ಭಾಷೆಗಳ ಉದಾಹರಣೆಗಳ ಪಟ್ಟಿಯಿಂದ ಚೀನಿ ಭಾಷೆಯನ್ನು ತೆಗೆಯಲಾಗಿದೆ. ಈ ಭಾಷೆಯನ್ನು ಶಾಲಾ ಮಟ್ಟದಲ್ಲಿ ಕಲಿಸಬಾರದೆ ಎಂಬುದರ ಕುರಿತು ಸ್ಪಷ್ಟವಾಗಿ ಹೇಳಲಾಗಿಲ್ಲ. ಚೀನಾದೊಂದಿಗಿನ ಗಡಿ ವಿವಾದ ಹಾಗೂ ಆ್ಯಪ್‍ಗಳ ನಿಷೇಧದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಗಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆ ವೇಳೆ ಚೀನಾ ಸೈನಿಕರು ನಡೆಸಿದ ಗುಂಡಿನ ದಾಳಿಗೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಇದಾದ ಬೆನ್ನಲ್ಲೇ ಸರ್ಕಾರ ಚೀನಾ ಜೊತೆ ಮಾತುಕತೆ ನಡೆಸಿದ್ದು, ಇದರ ನಡುವೆಯೇ ಚೀನಾ ಆ್ಯಪ್‍ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಸಾರ್ವಭೌತ್ವ ಹಾಗೂ ಭದ್ರತೆಯ ದೃಷ್ಟಿಯಿಂದ ಆ್ಯಪ್‍ಗಳನ್ನು ನಿಷೇಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮೊದಲು ಟಿಕ್ ಟಾಕ್ ಸೇರಿ 59 ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿತ್ತು. ನಂತರ ಮತ್ತೆ ಈ ವಾರ 47 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿದೆ.