Tag: National Disaster Response Fund

  • ಕೇಂದ್ರದಿಂದ ಸಮಿತಿ ಬಂದ ಬಳಿಕ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ

    ಕೇಂದ್ರದಿಂದ ಸಮಿತಿ ಬಂದ ಬಳಿಕ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ

    ನವದೆಹಲಿ: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನೀರಿನ ಹರಿವು ಕಡಿಮೆಯಾದ ನಂತರ ಎಷ್ಟು ನಷ್ಟವಾಗಿದೆ ಅಂತ ಅಂದಾಜು ಮಾಡಲಾಗುತ್ತಿದೆ. ಹೀಗಾಗಿ ಮಳೆ ಪ್ರಮಾಣ ಹಾಗೂ ನದಿಗಳ ಪ್ರವಾಹ ತಗ್ಗಿದ ಮೇಲೆ ಗೃಹ ಇಲಾಖೆಯಿಂದ ರಾಜ್ಯಕ್ಕೆ ಸಮಿತಿ ಬರಲಿದೆ. ಸಮಿತಿ ಅಧ್ಯಯನ ನಡೆಸಿದ ಬಳಿಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ವೈಮಾನಿಕ ವಿಕ್ಷಣೆ ಮಾಡಿದರು. ಅವರ ಭೇಟಿಯು ಕರ್ನಾಟಕದ ಬಗ್ಗೆ ಅವರಿಗೆ ಇರುವ ವಿಶೇಷ ಕಾಳಜಿಯನ್ನು ತೋರುತ್ತದೆ. ಹೀಗಾಗಿ ಹೆಚ್ಚಿನ ಪರಿಹಾರ ಧನ ಸಿಗುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದರು.

    ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳನ್ನು ನೇರವಾಗಿ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಮುಖ್ಯ ಪ್ರಾಮುಖ್ಯತೆ ಜೀವ ರಕ್ಷಣೆ, ಆಸ್ತಿಪಾಸ್ತಿ ನಷ್ಟವನ್ನು ತಡೆಯುವುದಾಗಿದೆ. ಇದಾದ ಬಳಿಕ ಹಂತ ಹಂತವಾಗಿ ಎಲ್ಲವನ್ನೂ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.

    ಉತ್ತರ ಕರ್ನಾಟಕದಲ್ಲಿ 8 ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದಲ್ಲಿ 6 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ವಿವಿಧ ಜಲಾಶಯಗಳ ನೀರು ಬಿಡುಗಡೆಯಿಂದ ಎಷ್ಟು ಹಾನಿಯಾಗಿದೆ ಎಂಬ ಮಾಹಿತಿಯನ್ನು ಪ್ರಧಾನಿ ಮೋದಿ ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ನಾನು ಕರಾವಳಿ ಭಾಗದಲ್ಲಿ ಸಮೀಕ್ಷೆ ನಡೆಸಿದ್ದೇನೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಕೆಲಸದ ಬಗ್ಗೆ ಶ್ಲಾಘನೆಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಕೇಂದ್ರ ಸರ್ಕಾರದಿಂದ ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಬಗ್ಗೆ ವಿಶೇಷವಾಗಿ ನನ್ನಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.