Tag: National Award

  • ದೇಶಕ್ಕೆ ಕನಕಪುರ ನಂಬರ್ ಒನ್ – ನರೇಗಾದಲ್ಲಿ ಅತೀ ಹೆಚ್ಚು ಕಾಮಗಾರಿ ಪೂರ್ಣಗೊಳಿಸಿದ ಕೀರ್ತಿಗೆ ರಾಷ್ಟ್ರಪ್ರಶಸ್ತಿ

    ದೇಶಕ್ಕೆ ಕನಕಪುರ ನಂಬರ್ ಒನ್ – ನರೇಗಾದಲ್ಲಿ ಅತೀ ಹೆಚ್ಚು ಕಾಮಗಾರಿ ಪೂರ್ಣಗೊಳಿಸಿದ ಕೀರ್ತಿಗೆ ರಾಷ್ಟ್ರಪ್ರಶಸ್ತಿ

    ರಾಮನಗರ: ನರೇಗಾದಲ್ಲಿ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಅತಿ ಹೆಚ್ಚು ಕಾಮಗಾರಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕನಕಪುರ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.

    ನರೇಗಾದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ನಡೆಸಿದ ಕನಕಪುರ ಮೊದಲ ಸ್ಥಾನದಲ್ಲಿದ್ದರೆ, ನರೇಗಾದಲ್ಲಿ ಉತ್ತಮ ಸಾಧನೆ ಮಾಡಿರುವ ಬಳ್ಳಾರಿ ಜಿ.ಪಂ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

    ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ವಿಭಾಗದಲ್ಲಿ ಇಡೀ ದೇಶದಲ್ಲಿ ಕನಕಪುರ ಮೊದಲ ಸ್ಥಾನ ಪಡೆದಿದೆ ಎಂಬುದು ವಿಶೇಷ. ನರೇಗಾದಡಿಯಲ್ಲಿ ವಿವಿಧ ಹಂತಗಳಲ್ಲಿ ಪ್ರತಿ ವರ್ಷವು ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ 2018-19ನೇ ಸಾಲಿನಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಕನಕಪುರ ತಾಲೂಕು ಇಡೀ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದಿದೆ.

    ಜಿ.ಪಂನ ನರೇಗಾ ಕಾಮಗಾರಿಗಳ ಅನ್ವಯ ಆನ್‍ಲೈನ್ ಮೂಲಕ ದೇಶದ ಎಲ್ಲ ಜಿ.ಪಂಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ವರದಿ ಆಧರಿಸಿ, ಕೇಂದ್ರ ಸರ್ಕಾರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ, ಕನಕಪುರ ತಾಲೂಕು ಇಡೀ ರಾಷ್ಟ್ರದಲ್ಲಿ ಅತಿ ಹೆಚ್ಚು ನರೇಗಾ ಕಾಮಗಾರಿ ಪ್ರಾರಂಭಿಸಿ, ಅಷ್ಟೇ ಶೀಘ್ರದಲ್ಲಿ ಪೂರ್ಣಗೊಳಿಸಿದೆ.

    2008ರಿಂದ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಅದರಲ್ಲಿ ಕನಕಪುರದಲ್ಲಿನ ನರೇಗಾ ಕಾಮಗಾರಿಗಳ ವಿವರ ಇಂತಿವೆ;

    ಒಟ್ಟು ಕಾಮಗಾರಿ -97,363
    ಮುಕ್ತಾಯಗೊಂಡ ಕಾಮಗಾರಿ -85,675
    ವೈಯಕ್ತಿಕ ಕಾಮಗಾರಿ(ಮುಕ್ತಾಯ) -79,558
    ಸಮುದಾಯ ಕಾಮಗಾರಿ(ಮುಕ್ತಾಯ) -6,087
    ಚೆಕ್ ಡ್ಯಾಂ ನಿರ್ಮಾಣ -1,965
    ಕೆರೆ -227
    ಕೃಷಿ ಹೊಂಡ -18,858
    ದನದ ಕೊಟ್ಟಿಗೆ -28,342

    2015-16ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದ ಎಲ್ಲ ಕಾಮಗಾರಿಗಳನ್ನು ಕನಕಪುರ ಪೂರ್ಣಗೊಳಿಸಿದೆ. 2016-17ನೇ ಸಾಲಿನಲ್ಲಿ ಕೇವಲ 5 ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡಿದ್ದರೆ, 2017-18ನೇ ಸಾಲಿನಲ್ಲಿ ಕೇವಲ 15 ಕಾಮಗಾರಿಗಳು ಮಾತ್ರವೇ ಉಳಿಕೆಯಲ್ಲಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕನಕಪುರ ನರೇಗಾದಲ್ಲಿ ಗರಿಷ್ಠ ಸಾಧನೆ ಮಾಡಿರುವುದೇ ಇಂದಿನ ಪ್ರಶಸ್ತಿಗೆ ಕಾರಣವಾಗಿದೆ.

  • ಭಾರತೀಯ ಸೇನೆಗೆ ನನ್ನ ‘ಉರಿ’ ರಾಷ್ಟ್ರಪ್ರಶಸ್ತಿ: ವಿಕ್ಕಿ ಕೌಶಾಲ್

    ಭಾರತೀಯ ಸೇನೆಗೆ ನನ್ನ ‘ಉರಿ’ ರಾಷ್ಟ್ರಪ್ರಶಸ್ತಿ: ವಿಕ್ಕಿ ಕೌಶಾಲ್

    ನವದೆಹಲಿ: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ‘ಉರಿ-ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕಾಗಿ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

    ವಿಕ್ಕಿ ಕೌಶಾಲ್ ಅವರಿಗೆ ಸಾಕಷ್ಟು ಮಂದಿ ಟ್ವಿಟ್ಟರಿನಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಹೀಗಿರುವಾಗ ನಟ ವಿಕ್ಕಿ ಕೌಶಾಲ್ ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ, ನನ್ನ ಪೋಷಕರಿಗೆ ಹಾಗೂ ಉರಿ ಚಿತ್ರತಂಡಕ್ಕೆ ಈ ರಾಷ್ಟ್ರಪ್ರಶಸ್ತಿಯನ್ನು ಡೆಡಿಕೇಟ್ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಟ್ವಿಟ್ಟರಿನಲ್ಲಿ ವಿಕ್ಕಿ ಕೌಶಾಲ್, “ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ವಿವರಿಸಲು ಪದಗಳು ಕಡಿಮೆ ಆಗಬಹುದು. ನನ್ನ ಕೆಲಸವನ್ನು ಗುರುತಿಸಿ ಗೌರವಾನ್ವಿತ ರಾಷ್ಟ್ರ ಪ್ರಶಸ್ತಿ ನೀಡಿದ ಈ ಕ್ಷಣವನ್ನು ನಾನು ಹಾಗೂ ನನ್ನ ಪೋಷಕರು ಮರೆಯುವುದಿಲ್ಲ. ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕೆ ನನಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ ಎಲ್ಲ ತೀರ್ಪುಗಾರರಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಈ ಪ್ರಶಸ್ತಿಯನ್ನು ನಟ ಆಯುಷ್ಮಾನ್ ಅವರ ಜೊತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ “ನಾನು ಈ ಪ್ರಶಸ್ತಿಯನ್ನು ನನ್ನ ಪೋಷಕರಿಗೆ, ಉರಿ ಚಿತ್ರತಂಡಕ್ಕೆ ಹಾಗೂ ಮಳೆ ಇರಲಿ, ಬಿರುಗಾಳಿ ಇರಲಿ ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇಶ ಕಾಯುವ ಯೋಧರಿಗೆ ಅರ್ಪಿಸುತ್ತೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

    ಉರಿ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಅಲ್ಲದೆ, ಅತ್ಯುತ್ತಮ ಬ್ಯಾಕ್‍ಗ್ರೌಂಡ್ ಪ್ರಶಸ್ತಿ, ಅತ್ಯುತ್ತಮ ಸೌಂಡ್ ಡಿಸೈನ್ ಪ್ರಶಸ್ತಿ ಹಾಗೂ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ದೊರೆತಿದೆ.

  • ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್

    ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್

    ಬೆಂಗಳೂರು: ಶ್ರುತಿ ಹರಿಹರನ್ ಅವರಿಗೆ ಇಂದು ಡಬಲ್ ಸಂಭ್ರಮ. ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪಡೆದ ಸಂಭ್ರಮದಲ್ಲೇ ಇಂದು ಅವರು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

    ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶ್ರುತಿ ಹರಿಹರನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ಶ್ರುತಿ ಹರಿಹರನ್ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    https://www.instagram.com/p/Bz-rVWjJHRH/

    ಇನ್ನೊಂದೆಡೆ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ನಟಿ ಶ್ರುತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    ಶ್ರುತಿ ದೂರಿನಲ್ಲಿ ಮದುವೆಯಾಗಿದೆ ಎಂದು ನಮೂದಿಸುವ ಮೊದಲು ರಾಮ್ ಕುಮಾರ್ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಹೇಳಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ `ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿದ್ದರು.

  • ಸಕ್ಕರೆ ನಾಡಿನ ಯುವ ವಿಜ್ಞಾನಿಗೆ ರಾಷ್ಟ್ರೀಯ ಪ್ರಶಸ್ತಿ

    ಸಕ್ಕರೆ ನಾಡಿನ ಯುವ ವಿಜ್ಞಾನಿಗೆ ರಾಷ್ಟ್ರೀಯ ಪ್ರಶಸ್ತಿ

    ಮಂಡ್ಯ: 2019 ನೇ ಸಾಲಿನ ಅನ್ವೇಷಣಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ಜಿಲ್ಲೆಯ ಶ್ರೀರಂಗಪಟ್ಟಣದ ಯುವ ವಿಜ್ಞಾನಿಗೆ ಲಭಿಸಿದೆ.

    ಸಾಹಿತ್ಯ ದಂಪತಿಯಾದ ಆರೋಗ್ಯ ಇಲಾಖೆಯ ಅನಾರ್ಕಲಿ ಸಲೀಂ ಚಿಣ್ಯ ಮತ್ತು ಶಿಕ್ಷಣ ಇಲಾಖೆಯ ಡಾ. ಪರ್ವೀನ್ ಸಲೀಂ ಅವರ ಪುತ್ರ ಸಿ.ಎಸ್. ಮೊಹಮ್ಮದ್ ಸುಹೇಲ್ ಅವರಿಗೆ 2019 ನೇ ಸಾಲಿನ ಅನ್ವೇಷಣಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ ಅಮೆರಿಕದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಎರಡನೇ ಬಾರಿಗೆ ಭಾರತ ಪ್ರತಿನಿಧಿಸುತ್ತಿರುವ ಯುವ ವಿಜ್ಞಾನಿ ಕೂಡ ಆಗಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇದೇ ಜನವರಿ 22 ರಂದು ಮಾನ್ಯ ರಾಷ್ಟ್ರಪತಿಗಳು ಮೊಹಮ್ಮದ್ ಸುಹೇಲ್ ಗೆ ಪ್ರಶಸ್ತಿ ಪ್ರಧಾನ ಮಾಡಿದರು. ಮೊದಲಿಗನಾಗಿ ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿಗಳ ಪ್ರಶಂಸೆಗೆ ಪಾತ್ರವಾದ ಸುಹೇಲ್‍ಗೆ ಒಂದು ಲಕ್ಷ ನಗದು, ಹತ್ತು ಸಾವಿರ ರೂ.ನ ಪುಸ್ತಕಗಳು, ಚಿನ್ನದ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

    ಎರಡು ಬಾರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಸುಹೇಲ್, ಕ.ರಾ.ವಿ.ಪ ಮೂಲಕ ಎರಡು ಬಾರಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ವಿಜ್ಞಾನ ಸಮಾವೇಶದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಬಳಿಕ 25ಕ್ಕೂ ಹೆಚ್ಚು ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

    2018ರ ಮೇ ಮಾಹೆಯಲ್ಲಿ ಅಮೆರಿಕಾದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿ “ಅಪೌಷ್ಟಿಕತೆ”ಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಿ ಎರಡನೇ ಗ್ರಾಂಡ್ ವಾರ್ಡ್ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಸುಹೇಲ್ ಅವರ ಸಾಧನೆಗೆ ಅಮೆರಿಕದ ಪ್ರತಿಷ್ಠಿತ ಸಾಮ್ ವಿದ್ ಶಿಕ್ಷಣ ಸಂಸ್ಥೆಯು ಜಗದ್ವಿಖ್ಯಾತ ವಿಜ್ಞಾನಿ ದಿ. ಎ.ಪಿ.ಜೆ ಅಬ್ದುಲ್ ಕಲಾಂ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದೆ

    ಸಿ.ಎಸ್ ಸುಹೇಲ್ ಹೆಸರನ್ನು ಮೈನರ್ ಪ್ಲಾನೆಟ್ ಗೆ ಇಡುವುದರ ಮೂಲಕ ದೇಶದ ಕೀರ್ತಿಯನ್ನು ಮುಗಿಲೆತ್ತರ ಏರಿಸಿರುವುದನ್ನು ಸ್ಮರಿಸಬಹುದಾಗಿದೆ. ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ, ರಾಜ್ಯ ಬಾಲ ವಿಕಾಸ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು 18 ವರ್ಷ ತುಂಬುವ ಮೊದಲೇ ಮೊಹಮ್ನದ್ ಸುಹೇಲ್ ಪಡೆದಿದ್ದಾರೆ. ಈಗ 2019 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸಕ್ಕರೆ ನಾಡು ಮಂಡ್ಯದ ಕೀರ್ತಿಯನ್ನು ಮತ್ತಷ್ಟು ಏರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ

    ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ

    ಮುಂಬೈ: 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾದ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರಕಿದೆ. ಆದ್ರೆ ಈ ಪ್ರಶಸ್ತಿಯನ್ನು ಶ್ರೀದೇವಿ ಅವರಿಗೆ ನೀಡಬಾರದಿತ್ತು ಅಂತಾ ನಿರ್ದೇಶಕ ಮತ್ತು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವೆಲ್ಲರೂ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಮರಣ ಹೊಂದಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವ ತೀರ್ಮಾನ ಸೂಕ್ತವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸುತ್ತಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ ಎಂದು ಶೇಖರ್ ಕಪೂರ್ ಅವರ ವಾದವಾಗಿದೆ.

    ಅತ್ಯತ್ತಮ ಸಿನಿಮಾ ‘ಮಾಮ್’ ಗಾಗಿ ನಟಿ ಶ್ರೀದೇವಿ ಮತ್ತು ನಾನು ಅವರೊಂದಿಗೆ ನನ್ನ ಸಂಬಂಧವಿಲ್ಲ ಎಂದು ನಾನು ಭರವಸೆ ಮಾಡುತ್ತೇನೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು ಎಂದರು

    ಮತ್ತೊಂದೆಡೆ ಕಪೂರ್ ಕುಟುಂಬ, ಶ್ರೀದೇವಿ ಕೇವಲ ಸೂಪರ್ ಆಕ್ಟರ್ ಮಾತ್ರವಲ್ಲ, ಸೂಪರ್ ವೈಫ್ ಮತ್ತು ಸೂಪರ್ ಮಾಮ್. ಆಕೆಯ ಜೀವನ ಮತ್ತು ಸಾಧನೆಗಳನ್ನು ಆಚರಿಸಲು ಸಮಯ ಬಂದಿದೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವಳ ಪರಂಪರೆಯೂ ಯಾವಾಗಲೂ ಬದುಕಲಿದೆ ಎಂಬ ಹೇಳಿಕೆಯನ್ನು ನೀಡಿತ್ತು.

  • ಬರಗಾಲದಲ್ಲೂ 200 ಹಸು ಸಾಕಿ, ದಿನಕ್ಕೆ 500 ಲೀ. ಹಾಲು ಉತ್ಪಾದಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದುರ್ಗದ ಮಹಿಳೆ

    ಬರಗಾಲದಲ್ಲೂ 200 ಹಸು ಸಾಕಿ, ದಿನಕ್ಕೆ 500 ಲೀ. ಹಾಲು ಉತ್ಪಾದಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದುರ್ಗದ ಮಹಿಳೆ

    ಚಿತ್ರದುರ್ಗ: ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ.

    ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ ಹೈನುಗಾರಿಕೆ ಮೊರೆಹೋದ ರೋಜಾ, ಹಸು ಸಾಕಾಣಿಕೆ ಮೂಲಕ ತಮ್ಮ ತೋಟದ ಮನೆಯ ಪಕ್ಕದ ಶೆಡ್ ಒಂದರಲ್ಲಿ ಸುಮಾರು 200 ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ. ಹಸುಗಳಿಗೆ ಸಮಯಕ್ಕೆ ಸರಿಯಾಗಿ ಒಣ ಹಾಗೂ ಹಸಿರು ಮೇವು, ಬೂಸಾ ಸೇರಿದಂತೆ ಪೌಷ್ಠಿಕ ಆಹಾರವನ್ನ ಕೊಟ್ಟು ತಮ್ಮ ಮಕ್ಕಳಂತೆ ಹಸುಗಳನ್ನ ಆರೋಗ್ಯವಾಗಿ ನೋಡಿಕೊಳ್ಳುತ್ತಿದ್ದಾರೆ.

    ರೋಜಾ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ 500 ಲೀಟರ್ ಹಾಲು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ ಲಾಭ ಗಳಿಸುತ್ತಿದ್ದಾರೆ.

    ರೋಜಾ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸುವಿನ ಸಗಣಿಯನ್ನ ಗೊಬ್ಬರವನ್ನಾಗಿ ಬಳಸಿಕೊಂಡು ಹಸಿ ಮೇವನ್ನ ಬೆಳೆದು ಹಸುಗಳಿಗೆ ಬೇಕಾದ ಪೌಷ್ಟಿಕಾಂಶವುಳ್ಳ ಆಹಾರ ನೀಡುತ್ತಿದ್ದಾರೆ. ಹಸುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಅವುಗಳ ಆರೋಗ್ಯದ ದೃಷ್ಟಿಯಿಂದ ವಾರಕ್ಕೊಮ್ಮೆ ಪಶು ವೈದ್ಯರನ್ನ ಕರೆಸಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೋಡಿಸುತ್ತಿದ್ದಾರೆ. ಗೋವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

    ಹೀಗಾಗಿ ಇವರ ಸಾಧನೆಯನ್ನು ಗಮನಿಸಿದ ಭಾರತೀಯ ಹೈನುಗಾರಿಕೆ ಇಲಾಖೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಭೀಕರ ಬರದಿಂದ ತತ್ತರಿಸಿ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ನಡುವೆ ನೂತನ ತಂತ್ರಜ್ಞಾನದ ಜೊತೆಗೆ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹೈನುಗಾರಿಕೆ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿರುವ ಈ ಮಹಿಳೆ ದೇಶಕ್ಕೆ ಮಾದರಿಯಾಗಿದ್ದಾರೆ.