Tag: National

  • ತೀರ್ಥಹಳ್ಳಿಯ ನ್ಯಾಷನಲ್‌ ಸಂಸ್ಥೆಯ ಮೇಲೆ ಇಡಿ ದಾಳಿ

    ತೀರ್ಥಹಳ್ಳಿಯ ನ್ಯಾಷನಲ್‌ ಸಂಸ್ಥೆಯ ಮೇಲೆ ಇಡಿ ದಾಳಿ

    ಶಿವಮೊಗ್ಗ: ತೀರ್ಥಹಳ್ಳಿಯ ನ್ಯಾಷನಲ್ (National) ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಸುಲೈಮಾನ್ ಎಂಬುವರಿಗೆ ಸೇರಿದ ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ನಿವಾಸದ ಮನೆ ಮೇಲೆ ದಾಳಿಯಾಗಿದೆ. ಇದನ್ನೂ ಓದಿ: ವರ್ಷದ ಮೊದಲ ದಿನವೇ ಬಿಎಂಟಿಸಿಗೆ 4.37 ಕೋಟಿ ಆದಾಯ

     

    ಬೆಳ್ಳಂಬೆಳಗ್ಗೆ 10 ವಾಹನಗಳಲ್ಲಿ ಇಡಿ ಅಧಿಕಾರಿಗಳು ಆಗಮಿಸಿದ್ದಾರೆ. ಇನ್ನೂ ಅಂಗಡಿ ಹಾಗೂ ಕಚೇರಿಯ ಬಾಗಿಲು ತೆರೆಯದ ಕಾರಣ ಇಡಿ ಅಧಿಕಾರಿಗಳು ಹೊರಗಡೆ ಕಾಯುತ್ತಿದ್ದಾರೆ.

    ಸುಲೈಮಾನ್‌ ಪುತ್ರ ಷರೀಫ್‌ ಅವರು ಕನ್‌ಸ್ಟ್ರಕ್ಷನ್‌ ವ್ಯವಹಾರ ಮಾಡುತ್ತಿದ್ದು, ಶಿವಮೊಗ್ಗದ ವಿಮಾನ ನಿಲ್ದಾಣ (Shivamogga Airport) ಕಾಮಗಾರಿ ಮಾಡಿದ್ದರು.

     

  • ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಬೆಂಗಳೂರು: ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ನಾಲ್ಕು ಸೆಮಿಸ್ಟರ್‍ ಗಳ ಅವಧಿಗಳಲ್ಲಿ ಕಲಿಸುತ್ತಿದ್ದು, ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್‍ ಗಳಿಗೆ ಮಿತಿಗೊಳಿಸಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಿದ್ದರಾಮಯ್ಯ ಅವರು, ಹೊಸ ಶಿಕ್ಷಣ ನೀತಿಯ ಭಾಗವಾಗಿ ಈಗ ಇರುವ ಮೂರು ವರ್ಷದ ಬದಲಾಗಿ ನಾಲ್ಕು ವರ್ಷದ ಪದವಿ ಕೋರ್ಸನ್ನು ಅಳವಡಿಸಲು ಉದ್ದೇಶಿಸಲಾಗಿದೆ.ಅದಕ್ಕೋಸ್ಕರ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ನೇಮಿಸಲಾಗಿದ್ದ ಕಾರ್ಯಪಡೆಯ ಪಠ್ಯಪುಸ್ತಕ ರಚನೆಯ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‍ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಮಿತಿಗೊಳಿಸಿ ಶಿಫಾರಸ್ಸುಗಳನ್ನು ಮಾಡಿದೆ. ಈ ಶಿಫಾರಸ್ಸುಗಳು `ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿವೆ’ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶಗಳಲ್ಲಿ ದೇಶ ಭಾಷೆಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ಅಂಶವೂ ಇದೆ. ಆದರೆ ರಾಜ್ಯದ ಈ ಸಮಿತಿಯು ಕನ್ನಡದ ಪಾಲಿಗೆ ಮಹಾ ದ್ರೋಹವೆಸಗುವಂತಹ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಆರೋಪಗಳನ್ನು ನಾಡಿನ ಹಿರಿಯರು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಸೆಮಿಸ್ಟರ್‍ನಲ್ಲಿ ಗರಿಷ್ಠವೆಂದರೆ 90 ದಿನಗಳ ಅವಧಿಯ ಬೋಧನೆ ಇರುತ್ತದೆ. ಪ್ರತಿ ವಿಷಯಕ್ಕೆ ಸಾಮಾನ್ಯವಾಗಿ ವಾರಕ್ಕೆ 4 ಗಂಟೆಯ ಅವಧಿಯಿರುತ್ತದೆ. ಒಂದು ಸೆಮಿಸ್ಟರ್‍ನಲ್ಲಿ ಒಂದು ವಿಷಯಕ್ಕೆ 48 ಗಂಟೆ ಬೋಧನಾ ಅವಧಿ ಇರುತ್ತದೆ. ಎರಡು ಸೆಮಿಸ್ಟರುಗಳಿಂದ ಗರಿಷ್ಠ 96 ಗಂಟೆಗಳು ಇರುತ್ತವೆ. ಕೇವಲ 96 ಗಂಟೆಗಳ ಅವಧಿಯಲ್ಲಿ ಯಾವ ವಿಷಯವನ್ನು ಕಲಿಸಲು ಸಾಧ್ಯ? ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿ ತನ್ನ ಕಲಿಕೆಯುದ್ದಕ್ಕೂ ಬೌದ್ಧಿಕತೆಯನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರವಾದ ಮನಸ್ಸನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ. ಹೀಗಿರುವಾಗ ಸರ್ಕಾರವು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿದರೆ ಅವರು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಕನ್ನಡದ ಶ್ರೇಷ್ಠ ಅಭಿವ್ಯಕ್ತಿಗಳಾದ ವಚನಗಳನ್ನು, ಪಂಪ, ರನ್ನ, ಕುಮಾರವ್ಯಾಸ ಮತ್ತು ಹರಿದಾಸರ ಕಾವ್ಯಗಳನ್ನು ವಿದ್ಯಾರ್ಥಿಗಳು ಕಲಿಯುವುದು ಹೇಗೆ? ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮೇರು ಸಾಹಿತಿಗಳಾದ ಕುವೆಂಪು, ಕಾರಂತ ಬೇಂದ್ರೆ, ಮಾಸ್ತಿ, ಮುಂತಾದವರು ರೂಪಿಸಿದ ಜೀವನೋತ್ಸಾಹದ ಬದುಕಿನ ದರ್ಶನಗಳನ್ನು ಮಕ್ಕಳು ಕಲಿಯುವುದು ಹೇಗೆ? ದೇಶದ ಸಂಸ್ಕೃತಿ, ಭಾಷೆ, ಮಹಾಕಾವ್ಯಗಳು, ಪುರಾಣಗಳು, ಕಲೆ, ಜನಪದ ಮುಂತಾದ ಪರಂಪರೆಗಳ ಬಗ್ಗೆ ಮಾತನಾಡುವ ಬಿಜೆಪಿಯು ಪದವಿ ಕಲಿಯುವ ನಮ್ಮ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿ ಕೇವಲ ಅದಾನಿ, ಅಂಬಾನಿಗಳಂಥ ಲೂಟಿಕೋರರ ಮಾದರಿಗಳನ್ನು ಕಲಿಸಲು ಹೊರಟಿದೆಯೆ ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್

    ನಮ್ಮ ದೇಶಕ್ಕೆ ಜ್ಞಾನ ಇರುವ, ದುಡ್ಡು ಇರುವ ಜನರ ಅಗತ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಮಾನವೀಯ ಹೃದಯ ಇರುವ ಮನುಷ್ಯರ ಅಗತ್ಯವಿದೆ. ಅಂಥದ್ದಕ್ಕೆ ವಿರುದ್ಧವಾದ ನಿಲುವುಗಳನ್ನು ರೂಪಿಸುವುದಕ್ಕಾಗಿ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಉಪಸಮಿತಿಯವರು ಭಾಷೆಗಳ ಕಲಿಕೆಯನ್ನು ಎರಡು ಸೆಮಿಸ್ಟರುಗಳಿಗೆ ಇಳಿಸಿದ್ದಾರೆ. ಸರ್ಕಾರ ಈ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದೆ ಆದರೆ ಅದು ಬಹಳ ದೊಡ್ಡ ಮಟ್ಟದ ಕನ್ನಡ ದ್ರೋಹವಾಗುತ್ತದೆ, ಸರಿಪಡಿಸಲಾಗದ ಜನದ್ರೋಹವಾಗುತ್ತದೆ. ಪದವಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ವ್ಯಾಕರಣ, ಛಂದಸ್ಸುಗಳನ್ನು ಕಲಿಸುವುದಿಲ್ಲ. ಬದಲಾಗಿ ವಿದ್ಯಾರ್ಥಿಯ ಕೋರ್ಸಿಗೆ ಪೂರಕವಾದ ಪಠ್ಯವನ್ನೂ ಕಲಿಸಲಾಗುತ್ತದೆ. ಉದಾಹರಣೆಗೆ ವಿಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳು ಶಿವರಾಮ ಕಾರಂತರ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಕಲಿಯುತ್ತಾರೆ. ಅದೇ ರೀತಿ ಗೆಲಿಲಿಯೋ, ಸ್ಟೀಫನ್ ಹಾಕಿಂಗ್, ಐನ್‍ಸ್ಟೆನ್, ಜಗದೀಶ್ ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದವರ ಜೀವನದ ಸಾಧನೆಗಳನ್ನು, ಮಾದರಿಗಳನ್ನು ಮಾತೃಭಾಷೆಯಲ್ಲಿ ಕಲಿಯುತ್ತಾರೆ. ಹಾಗೆಯೇ ವಾಣಿಜ್ಯದ ವಿದ್ಯಾರ್ಥಿಗಳೂ ಸಹ ಯಶಸ್ವಿ ಸಂವಹನವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಹಾಗೂ ಉತ್ತಮ ಉದ್ಯಮಿ ಆಗುವುದರ ಜೊತೆಯಲ್ಲಿ ಉತ್ತಮ ಮನುಷ್ಯನಾಗುವುದು ಹೇಗೆ ಎಂಬುದನ್ನೂ ಕಲಿಯುತ್ತಾರೆ.

    ಆದ್ದರಿಂದ 4 ವರ್ಷದ ಕೋರ್ಸಿಗೆ ಅನುಗುಣವಾಗಿ ಈಗ 3 ವರ್ಷಕ್ಕೆ ಅಥವಾ ಆರು ಸೆಮಿಸ್ಟರ್‍ಗಳಿಗೆ ಭಾಷಾ ವಿಷಯವನ್ನು ಬೋಧಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಮ್ಮ ಮಕ್ಕಳು ಉತ್ತಮ ಪರಂಪರೆಗಳಿಗೆ ವಾರಸುದಾರರಾಗಲು ಸಾಧ್ಯವಾಗುತ್ತದೆ. ಹಾಗೂ ರಾಷ್ಟ್ರಕ್ಕೆ ಬೇಕಾದ ಉತ್ತಮ ಮನುಷ್ಯರು ರೂಪುಗೊಳ್ಳಲು ಸಹಾಯವಾಗುತ್ತದೆ. ಅದರ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ. ಈ ನಾಡು ಎಂದಿಗೂ ನಾಡು, ನುಡಿಗೆ ದ್ರೋಹ ಎಸಗಿದವರನ್ನು ಕ್ಷಮಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ರೂಪಿಸಬೇಕಾಗಿದೆ. ಹಾಗಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವಾಗ ಸಂಬಂಧಿಸಿದ ತಜ್ಞರುಗಳ ಕುಳಿತು ಚರ್ಚಿಸಿ ಆರೋಗ್ಯಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ನಾಡು-ನುಡಿಗಳನ್ನು ಕಟ್ಟಲು ಪೂರಕವಾಗುವ ಪಠ್ಯಗಳನ್ನು ರೂಪಿಸಬೇಕು. ಆರು ಸೆಮಿಸ್ಟರ್‍ ಗಳಲ್ಲೂ ಕನ್ನಡ ಭಾಷಾ ವಿಷಯವನ್ನು ಎಲ್ಲಾ ಪದವಿ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

  • ರಾಜ್ಯ, ದೇಶದಲ್ಲಿ ಮುಂದುವರೆದ ವರುಣನ ಆರ್ಭಟ- ಮಳೆಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಆಚರಣೆ

    ರಾಜ್ಯ, ದೇಶದಲ್ಲಿ ಮುಂದುವರೆದ ವರುಣನ ಆರ್ಭಟ- ಮಳೆಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಆಚರಣೆ

    ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಈ ಮಹಾಮಳೆಯಲ್ಲೂ ಕರಾವಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ.

    ಕರಾವಳಿಯಲ್ಲಿ ಮಹಾಮಳೆ ಹಿನ್ನೆಲೆ ಜಿಲ್ಲಾಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಾಂಕೇತಿವಾಗಿ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂಥಿಲ್ ಸೂಚಿಸಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಸ್ವಾತಂತ್ರ ದಿನಾಚರಣೆ ನಡೆಯಲಿದ್ದು, ಭಾರೀ ಮಳೆ ಹಿನ್ನೆಲೆ ಕಾರ್ಯಕ್ರಮಕ್ಕೆ ಮಕ್ಕಳ ಹಾಜರಾತಿ ಬೇಡ, ಎನ್‍ಸಿಸಿ, ಪೊಲೀಸ್ ಪಥಸಂಚಲನ ಮಾತ್ರ ನಡೆಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

    ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಭದ್ರಾನದಿ ಉಕ್ಕಿ ಹರಿಯುತಿದೆ, ಭದ್ರಾ ಬ್ರಿಡ್ಜ್‍ವರೆಗೂ ನೀರು ನುಗ್ಗಿದೆ. ಬ್ರಿಡ್ಜ್ ಕೆಳಗಿರುವ ಪೆಟ್ರೋಲ್ ಬಂಕ್‍ಗೂ ನೀರು ನುಗ್ಗಿ 5 ಸಾವಿರ ಲೀಟರ್ ಪೆಟ್ರೋಲ್ ನೀರುಪಾಲಾಗಿದ್ದು, ನೀರಿನೊಂದಿಗೆ ಪೆಟ್ರೋಲ್ ಹರೀತಿದೆ. ಕವಲಗುಂದಿ, ಕೋಟೆ, ಅಂಬೇಡ್ಕರ್ ನಗರ, ಗುಂಡೂರಾವ್, ಎಕಿನ್ ಷಾ ಕಾಲೋನಿ, ಸುಣ್ಣದಹಳ್ಳಿ ಬಡಾವಣೆ ಸೇರಿ ಒಟ್ಟು 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು ಆರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳದಲ್ಲಿರಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಮಳೆಯ ತೀವ್ರತೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ವಿರಾಜಪೇಟೆ-ಮಡಿಕೇರಿ ನಡುವಿನ ಸಂಪರ್ಕಿಸಲು ಸೇತುವೆ ಮುಳುಗಡೆ ಹಂತದಲ್ಲಿದೆ. ನದಿ ದಡದ 50ಕ್ಕೂ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕರಡಿಗೋಡು ಸೇರಿದಂತೆ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇರೋದ್ರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.

    ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ ನದಿಗೆ 45 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಮತ್ತು ಸಮಸ್ಯೆ ಎದುರಾಗುವ ಸನ್ನಿವೇಶ ಬಂದಲ್ಲಿ ಗಂಜಿಗಳ ಕೇಂದ್ರ ಕಡೆಗೆ ತ್ವರಿತವಾಗಿ ತೆರಳಲು ಸೂಚನೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಎಡೆಬಿಡೆದೆ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಹೀಗಾಗಿ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಸಮೀಪದ ಇರ್ಪು ಜಲಪಾತಕ್ಕೆ ತೆರಳದಂತೆ ಶ್ರೀಮಂಗಲ ವನ್ಯಜೀವಿ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಇತ್ತೀಚೆಗೆ ಭಾರೀ ಮಳೆಯಾಗ್ತಿರೋದ್ರಿಂದ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಮತ್ತು ಬಳ್ಳಾರಿ ಜಿಲ್ಲೆ ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ನೀರು ಹರಿದು ಬರುತ್ತಿದೆ. ಸೇತುವೆ ಮುಳುಗಡೆ ಆಗಲು ಇನ್ನೂ ಕೇವಲ ಅರ್ಧ ಅಡಿ ಅಷ್ಟೇ ಬಾಕಿ ಇದೆ. ಆದರೂ ಸಹ ಇಲ್ಲಿ ಯಾವುದೇ ಮುಂಜಾಗೃತೆ ಇಲ್ಲದೆ ಸೇತುವೆ ಮೇಲೆ ಬಾರಿ ವಾಹನಗಳ ಸಂಚಾರ ಇದೆ.

    ವರುಣನ ಆರ್ಭಟಕ್ಕೆ ನೀರಿನಲ್ಲಿ ವ್ಯಕ್ತಿ ಕೊಚ್ಚಿಹೋದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಐರಬೈಲು ಗ್ರಾಮದಲ್ಲಿ ನಡೆದಿದೆ. ಶಂಕರ ಪೂಜಾರಿ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ, ಕೃಷಿ ಚಟುವಟಿಕೆಗೆ ತೆರಳಿದ್ದಾಗ, ಕಿರಿದಾದ ಕಾಲುವೆಯಲ್ಲಿ ಶಂಕರ್ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಂದ ಶಂಕರನಾರಾಯಣ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಶಂಕರ್‍ಗಾಗಿ ಶೋಧಕಾರ್ಯ ನಡೆಸಿದ್ದಾರೆ.

    ಇತ್ತ ಧಾರಾಕಾರ ಮಳೆಯಿಂದಾಗಿ ಶಿರಾಡಿಘಾಟ್‍ನಲ್ಲಿ ಸಂಚಾರ ದಟ್ಟಣೆ ಮುಂದುವರಿದಿತ್ತು. ಅಲ್ಲಲ್ಲಿ ಗುಡ್ಡ ಕುಸಿತಗೊಂಡಿದ್ದು, ವಾಹನ ಸವಾರರು ಪರದಾಡಿದರು. ಸತತ ಮೂರು ಗಂಟೆಗಳ ಕಾಲ ಟ್ರಾಫಿಕ್‍ಜಾಮ್‍ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಬೇಕಾಯಿತು. ಅಲ್ಲದೇ ವಾಹನ ಸಂಚಾರ ಸುಗಮಗೊಳಿಸಲು ಸ್ಥಳೀಯರು ಹಾಗೂ ಪ್ರಯಾಣಿಕರು ಹರಸಾಹಸಪಟ್ಟರು.

    ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ. ಇನ್ನು ಮುಂದಿನ 24 ಗಂಟೆಯೊಳಗೆ ಕೆಆರ್‍ಎಸ್ ಜಲಾಶಯದಿಂದ 1,20,000 ರಿಂದ 1,50,000 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ ನೀಡಿದ್ದಾರೆ.

    ಮಲೆನಾಡಿನ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ, ಭದ್ರಾ ಡ್ಯಾಂನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಭದ್ರಾ ಡ್ಯಾಂ ನಿಂದ 90 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಡ್ಯಾಂನ ವ್ಯಾಪ್ತಿಯ, ಸೋಂಪಾಪುರ, ಕರಕುಚಗಿ, ಕೆಸರುಕೊಪ್ಪ ಗ್ರಾಮದ ಅಡಿಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ಇನ್ನು ಸ್ಥಳಕ್ಕೆ ಬಂದ ತರೀಕೆರೆ ಉಪವಿಭಾಗಾಧಿಕಾರಿ ರೂಪಾ, ತಹಶೀಲ್ದಾರ್ ಧಮೋಜಿರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಕೇರಳದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ಅಪಾಯದ ಮಟ್ಟ ಮೀರಿ ನದಿಗಳು ಹರಿಯುತ್ತಿದೆ. ಸರಣಿ ಭೂ ಕುಸಿತಗಳು ಕೇರಳಿಗರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ನಿನ್ನೆ ವಯನಾಡು, ಕಲ್ಲಿಕೋಟೆ, ಮಳಪ್ಪುರಂ, ಕಣ್ಣೂರು, ಕಾಸರಗೋಡಿನಲ್ಲಿ ಭೂಕುಸಿತ ಸಂಭವಿಸಿದ್ದು 144 ಗ್ರಾಮಗಳನ್ನು ಪ್ರವಾಹಪೀಡಿತ ಅಂತ ಘೋಷಿಸಲಾಗಿದೆ. ಧಾರಾಕಾರ ಮಳೆಯ ಹಿನ್ನೆಲೆ ಈ ಬಾರಿ ಓಣಂ ಆಚರಣೆಯನ್ನು ಸರ್ಕಾರ ರದ್ದುಗೊಳಿಸಿದ್ದು, ಓಣಂಗಾಗಿ ಮೀಸಲಿಟಿದ್ದ ಹಣವನ್ನು ಪರಿಹಾರ ಕಾರ್ಯಾಚರಣೆಗೆ ಬಳಸುವುದಾಗಿ ಸಿಎಂ ಪಿಣರಾಯ್ ವಿಜಯನ್ ಘೋಷಿಸಿದ್ದಾರೆ.

    ಇಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಜ್ಯಪಾಲ ಸದಾಶಿವಂ ಏರ್ಪಡಿಸಿದ್ದ ಔತಣಕೂಟವನ್ನೂ ರದ್ದುಗೊಳಿಸಿದ್ದಾರೆ. ಮುಲ್ಲಪೆರಿಯಾರ್ ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾಗಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಗರಿಷ್ಠ ನೀರಿನ ಮಟ್ಟ 142 ಅಡಿ ಇದ್ದು ಈಗಾಗಲೇ 136.10 ಅಡಿ ತಲುಪಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.

    ಉತ್ತರ ಭಾರತದಲ್ಲೂ ಭಾರೀ ಮಳೆಯಾಗುತ್ತಿದ್ದು ಜಮ್ಮುವಿನಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದಾರೆ. 24ಕ್ಕೂ ಹೆಚ್ಚು ಮನೆಗಳು, ವಾಹನಗಳು ಹಾನಿಯಾಗಿವೆ. ಹಿಮಾಚಲ ಪ್ರದೇಶದಲ್ಲಿ 5 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ್ದು ಮೃತರ ಸಂಖ್ಯೆ 2 ದಿನಗಳಲ್ಲಿ 19ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv