ಬೆಂಗಳೂರು: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಈ ಬಾರಿ ಕನ್ನಡಕ್ಕೆ ಬರೋಬ್ಬರಿ 10 ಪ್ರಶಸ್ತಿಗಳು ಲಭಿಸಿದೆ. ಆ ಮೂಲಕ ಭಾರತೀಯ ಭಾಷೆಗಳ ಪೈಕಿ ಅತೀ ಹೆಚ್ಚು ಪ್ರಶಸ್ತಿ ಕನ್ನಡಕ್ಕೆ ಒಲಿದಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅಲ್ಲದೇ ಒಂದು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆಯಾಗಿದೆ.
‘ರಾಮ ರಾಮ ರೇ’ ಸಿನಿಮಾ ನಿರ್ದೇಶನ ಮಾಡಿದ್ದ ಸತ್ಯ ಪ್ರಕಾಶ್ ಅವರ ಒಂದಲ್ಲ ಎರಡಲ್ಲ ಸಿನಿಮಾ ರಾಷ್ಟ್ರೀಯ ಏಕೀಕರಣ ಮತ್ತು ಅತ್ಯುತ್ತಮ ಬಾಲ ನಟ ಪ್ರಶಸ್ತಿ ವಿಭಾಗದಲ್ಲಿ ಆಯ್ಕೆ ಆಗಿದೆ. ಅಲ್ಲದೇ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದೆ.
ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನಾತಿಚರಾಮಿ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಇಡೀ ಭಾರತ ಚಿತ್ರರಂಗವನ್ನೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಸಿನಿಮಾಗೆ ಅತ್ಯುತ್ತಮ ವಿಎಫ್‍ಎಕ್ಸ್ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮುಕಜ್ಜಿಯ ಕನಸುಗಳು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆ ಆಗಿದೆ. ಈ ಬಾರಿಯ ಪ್ರಶಸ್ತಿಯ ರೇಸ್‍ನಲ್ಲಿ 40ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಆಯ್ಕೆಯಾಗಿದ್ದವು.
ಬೆಂಗಳೂರು: ಒಬ್ಬಳನ್ನು ಬಾಧಿಸುವ ಗಂಡನಿಲ್ಲದ ನೀರವ. ಅವನ ನೆನಪಲ್ಲಿಯೇ ಬದುಕಿ ಬಿಡುವ ಗಟ್ಟಿ ನಿರ್ಧಾರಕ್ಕೆ ನೇತುಬೀಳೋ ದೈಹಿಕ ವಾಂಛೆ. ಇನ್ನೊಬ್ಬಳಿಗೆ ಗಂಡ ಇದ್ದರೂ ಆತನ ಪಾಲಿಗವಳು ಸುಖದ ಸರಕು ಮಾತ್ರ. ಆಕೆಯ ಪಾಲಿಗೆ ದೈಹಿಕ ಬಯಕೆ ನೀಗಿಕೊಂಡೂ ಆತ್ಮಸಾಂಗತ್ಯವಿಲ್ಲದ ನಿತ್ಯ ಸೂತಕ. ಮತ್ತೊಬ್ಬಾಕೆ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಸ್ಥಿತಪ್ರಜ್ಞೆಯುಳ್ಳ ಗಟ್ಟಿಗಿತ್ತಿ. ಈ ಮೂರು ಪಾತ್ರಗಳ ಮೂಲಕವೇ ಕಟ್ಟುಪಾಡುಗಳೊಳಗೆ ಅದೆಷ್ಟೋ ಮಹಿಳೆಯರು ಕಟ್ಟಿಟ್ಟುಕೊಂಡ ಭಾವಗಳಿಗೆ ಬಿಂದಾಸ್ ಆಗಿಯೇ ಮಾತು ಕೊಟ್ಟಿರೋ ಚಿತ್ರ ನಾತಿಚರಾಮಿ. ಈ ಮೂಲಕ ನಿರ್ದೇಶಕ ಮಂಸೋರೆಯವರ ಎರಡನೇ ಮ್ಯಾಜಿಕ್ಕು ಮನಸೂರೆಗೊಂಡಿದೆ.
ಲೈಂಗಿಕ ತುಮುಲಗಳಿಗೂ ಮಡಿಬಟ್ಟೆ ಹೊದ್ದು ಬದುಕೋ ವಾತಾವರಣ ಈ ನೆಲದ್ದು. ಅದರಲ್ಲಿಯೂ ಹೆಣ್ಣಿನ ಪಾಲಿಗೆ ಇಂಥಾ ದೈಹಿಕ ವಾಂಛೆಗಳನ್ನು ಅಭಿವ್ಯಕ್ತಗೊಳಿಸೋದೇ ನಿಷಿದ್ಧ. ಆದರೆ ಮಂಸೋರೆ ನಾತಿಚರಾಮಿ ಮೂಲಕ ಮಡಿವಂತಿಕೆಯೊಳಗೇ ಅವಿತಿರೋ ಕುತೂಹಲ, ಹತ್ತಿಕ್ಕಲಾರದ ತಲ್ಲಣಗಳನ್ನು ಬಿಡುಬೀಸಾಗಿ ಹೇಳಿದ್ದಾರೆ. ಇದಕ್ಕೆ ಸಂಧ್ಯಾರಾಣಿಯವರ ಕಥೆ ಮತ್ತು ಸಂಭಾಷಣೆ ಸಖತ್ತಾಗಿಯೇ ಸಾಥ್ ನೀಡಿದೆ.
ಮಂಸೋರೆ ಮೂರು ಸ್ಥರಗಳ ಮೂರು ಮಹಿಳಾ ಪಾತ್ರಗಳ ಮೂಲಕ ಬೇರೆಯದ್ದೇ ಒಂದು ಮನೋಲೋಕವನ್ನು ಕಟ್ಟಿ ಕೊಟ್ಟಿದ್ದಾರೆ.
ಶ್ರುತಿ ಹರಿಹರನ್ ಗಂಡನನ್ನು ಕಳೆದುಕೊಂಡು ಆತನ ನೆನಪಲ್ಲಿಯೇ ಬೇಯುತ್ತಾ, ನೆನಪಿನಂತೆಯೇ ಕಾಡುವ ದೈಹಿಕ ತುಮುಲವನ್ನು ಹತ್ತಿಕ್ಕಲಾರದೆ ಒದ್ದಾಡೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಮೂಲಕವೇ ಅವರೊಳಗಿನ ಪರಿಪೂರ್ಣ ನಟಿಯ ದರ್ಶನವೂ ಆಗುತ್ತದೆ. ಇನ್ನು ಶರಣ್ಯ ಗಂಡ ಇದ್ದರೂ ಮಾನಸಿಕ ನೆಮ್ಮದಿಯಿಲ್ಲದ ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ವೇತಾ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಹೆಂಗಸಾಗಿ ನಟಿಸಿದ್ದಾರೆ. ಈ ಮೂರೂ ಪಾತ್ರಗಳು ಬೆಚ್ಚಿ ಬೀಳಿಸುತ್ತಾ ಬೆರಗಾಗಿಸುತ್ತಾ ಬದುಕಿನ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತವೆ.
ಇಂಥಾ ಸೂಕ್ಷ್ಮ ವಿಚಾರ ಹೇಳುವಾಗ ಕೊಂಚ ಸಿನಿಮಾ ಕುಸುರಿಯನ್ನು ಮರೆತರೂ ದೃಶ್ಯ ಪೇಲವವಾಗುತ್ತದೆ. ಆದರೆ ಮಂಸೋರೆ ಅಂಥಾ ಯಾವ ಅವಘಡವೂ ಆಗದಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಸ್ವತಃ ಕಲಾ ನಿರ್ದೇಶಕರೂ ಆಗಿರೋ ಮಂಸೋರೆ ಅದನ್ನೂ ಪಾತ್ರವಾಗಿಸಿದ್ದಾರೆ. ಬಟ್ಟೆಗಳೂ ಇಲ್ಲಿ ಏನನ್ನೋ ಧ್ವನಿಸುತ್ತವೆ. ಮೌನವೂ ಕೂಡಾ ಮಾತಿಗಿಂತ ತೀವ್ರವಾಗಿ ತಟ್ಟುತ್ತದೆ. ಇದಕ್ಕೆ ಬಿಂದುಮಾಲಿನಿಯವರ ಸಂಗೀತ ಸಾಥ್ ನೀಡುತ್ತದೆ.
ಒಟ್ಟಾರೆಯಾಗಿ ಹೊಸಾ ಬಗೆಯಲ್ಲಿ, ಎಲ್ಲ ಸಿದ್ಧ ಸೂತ್ರಗಳನ್ನು ಮೀರಿದ ಚಿತ್ರವೊಂದನ್ನು ಕಟ್ಟಿ ಕೊಡುವಲ್ಲಿ ಮಂಸೋರೆ ಯಶ ಕಂಡಿದ್ದಾರೆ. ಬಾಲಾಜಿ ಮನೋಹರ್, ಪೂರ್ಣಚಂದ್ರ ಮೈಸೂರು, ಗೋಪಾಲ ದೇಶಪಾಂಡೆ, ಕಲಾಗಂಗೋತ್ರಿ ಮಂಜು ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಮಾನಸಾ ಮುಸ್ತಫಾ ಕಾಸ್ಟ್ಯೂಮಿನಲ್ಲಿಯೂ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಸಿದ್ಧ ಸೂತ್ರಗಳಾಚೆಗಿನ ಈ ಚಿತ್ರ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುವಲ್ಲಿ ಶಕ್ತವಾಗಿದೆ.
ಪ್ರತಿಯೊಂದು ವಿಚಾರದಲ್ಲಿಯೂ ಹೊಸತನವೇ ಇರಬೇಕೆಂಬ ಶ್ರದ್ಧೆಯಿಂದಲೇ ರೂಪುಗೊಂಡಿರೋ ಚಿತ್ರ ನಾತಿಚರಾಮಿ. ಈ ವಾರ ಬಿಡುಗಡೆಗೊಳ್ಳಲಿರೋ ಈ ಚಿತ್ರದಲ್ಲಿ ನಾನಾ ವಿಶೇಷತೆಗಳಿವೆ, ಆಕರ್ಷಣೆಗಳಿವೆ. ಅದರಲ್ಲಿ ಖ್ಯಾತ ಸಂಗೀತಗಾರ್ತಿ ಬಿಂದುಮಾಲಿನಿಯವರ ಸಂಗೀತವೂ ಪ್ರಧಾನವಾಗಿದೆ.
ಹಿಂದೂಸ್ಥಾನಿ ಸಂಗೀತವನ್ನು ಪಾಶ್ಚಾತ್ಯ ಶೈಲಿಯೊಂದಿಗೆ ಸಮೀಕರಿಸೋ ಪ್ರಯತ್ನದ ಮೂಲಕವೇ ಸಂಗೀತಾಸಕ್ತರ ಮನಗೆದ್ದವರು ಬಿಂದು ಮಾಲಿನಿ. ನಿರ್ದೇಶಕ ಮಂಸೋರೆ ನಾತಿಚರಾಮಿಗೆ ಸಂಗೀತ ಸ್ಪರ್ಶ ನೀಡಲು ಸೂಕ್ತ ಪ್ರತಿಭೆಗಾಗಿ ಹುಡುಕುತ್ತಿರುವಾಗ ಸೂಕ್ತವಾಗಿ ಕಂಡವರು ಬಿಂದು ಮಾಲಿನಿ. ಕಥೆಯನ್ನು ಮೆಚ್ಚಿಕೊಂಡೇ ಅವರು ನಾತಿಚರಾಮಿಗೆ ಸಂಗೀತ ನೀಡಿದ್ದರು.
ಈಗಾಗಲೇ ಈ ಚಿತ್ರದ ಹಾಡೂ ಮನಸೂರೆಗೊಂಡಿದೆ. ವರಕವಿ ದರಾ ಬೇಂದ್ರೆಯವರ ರಚನೆಗಳೂ ಸೇರಿದಂತೆ ಬಿಂದು ಮಾಲಿನಿ ಹಾಡುಗಳು ಪ್ರಸಿದ್ಧವಾಗಿವೆ. ಆಧ್ಯಾತ್ಮದ ಅಂತಿಮ ಗುರಿ ತಲುಪಲು ಸಂಗೀತವೊಂದು ಪರಿಣಾಮಕಾರಿ ಸಾಧನ ಎಂಬುದು ಬಿಂದುಮಾಲಿನಿ ನಂಬಿಕೆ. ಅವರು ಆರಂಭದಲ್ಲಿ ನಾತಿಚರಾಮಿಯ ಕಥೆ ಕೇಳಿ ಮರು ಮಾತಿಲ್ಲದೇ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದರಂತೆ.
ಬೆಂಗಳೂರು: ಮೀಟೂ ಆರೋಪದ ಬಳಿಕ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿವೆ. ಹಾಗಾಂತ ಮೀಟೂ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಸರವಿಲ್ಲ. ನಾನು ಮಾತನಾಡಿದ್ದು ತಪ್ಪು ಅಂತಾನೂ ಅನಿಸಿಲ್ಲ. ಎಲ್ಲವನ್ನೂ ಕಾಲ ನಿರ್ಣಯಿಸುತ್ತೆ ಅಂತ ನಟಿ ಶೃತಿ ಹರಿಹರನ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ತಮ್ಮ ಹೊಸ ಚಿತ್ರ ನಾತಿಚರಾಮಿ ಕುರಿತು ಸುದ್ದಿಗೋಷ್ಠಿ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೆಚ್ಚು ಕೆಲಸ ಮಾಡಬೇಕೋ ಬೇಡವೋ ಅನ್ನೋದನ್ನು ಕಾಲ ನಿಗದಿ ಮಾಡುತ್ತೆ. ಚಿತ್ರದಲ್ಲಿ ನಟಿಸುವ ಅವಕಾಶಗಳು ಕಮ್ಮಿಯಾಗಿರಬಹು. ಆದ್ರೆ ಅದನ್ನು ಕಾಲ ಹೇಳುತ್ತೆ. ನಾವು ಎಲ್ಲವನ್ನೂ ಮಾಡೋದು ಜನರಿಗೋಸ್ಕರ ಅಲ್ವ. ಹೀಗಾಗಿ ಜನ ಅದನ್ನು ನಿರ್ಧರಿಸಬೇಕು ಅಂದ್ರು.
ನಟ ಅರ್ಜುನಾ ಸರ್ಜಾ ಮೇಲೆ ಮಾಡಿರುವ ಮೀಟೂ ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಸದ್ಯದಲ್ಲಿ ಈ ಕುರಿತು ಪ್ರೆಸ್ ಮೀಟ್ ಮಾಡೋದಾಗಿ ತಿಳಿಸಿದ್ರು.
ನಾತಿಚರಾಮಿ ಚಿತ್ರದ ಬಗ್ಗೆ:
ಈ ಸಿನಿಮಾವನ್ನು ತುಂಬಾನೇ ಇಷ್ಟಪಟ್ಟು ಮಾಡಿದ್ದೇವೆ. ಈ ಶುಕ್ರವಾರ ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭಯ ಸಾಮಾನ್ಯವಾಗಿ ಇರುತ್ತದೆ. ಆದ್ರೆ ಈ ಬಾರಿ ಸ್ವಲ್ಪ ಜಾಸ್ತಿನೇ ಭಯ ಇದೆ. ಯಾಕಂದ್ರೆ ಇದೊಂದು ಎಕ್ಸ್ಟ್ರಾ ಸೆನ್ಸಿಸಿಟಿವ್ ವಿಷಯ ಚಿತ್ರವಾಗಿದೆ. ಜನರಲ್ ಆಗಿ ಒಂದು ಸಿನಿಮಾದಲ್ಲಿ ನಾವು ಪ್ರೀತಿ, ತಂದೆ-ತಾಯಿ ಅಥವಾ ತಂದೆ-ಮಗಳ ಮಧ್ಯೆ ಇರುವ ಸಮಸ್ಯೆಗಳನ್ನು ಹೇಳುತ್ತೇವೆ. ಆದ್ರೆ ಇಲ್ಲಿ ಈ ವಿಷಯಗಳಲ್ಲದೇ ಮದುವೆ ಅಂದ್ರೆ ಏನು ಅನ್ನೋ ಪ್ರಶ್ನೆ ಕೇಳುವ ಸಿನಿಮಾವಾಗಿದೆ ಅಂದ್ರು.
ಮೈಂಡ್ ಲೆಸ್ ಎಂಟರ್ ಟೈನ್ ಮೆಂಟ್ ಸಿನಿಮಾ ಅಲ್ಲ. ಆದ್ರೆ ಚಿತ್ರದಲ್ಲಿ ಮನರಂಜನೆ ಇದೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಎಂಟರ್ ಟೈನ್ ಮೆಂಟ್, ನಗು, ಅಳು ಹಾಗೂ ಮ್ಯೂಸಿಕ್ ಎಲ್ಲವೂ ಸೇರಿಕೊಂಡಿದೆ. ಈ ಚಿತ್ರ ಗೌರಿ, ಸುರೇಶ್ ಹಾಗೂ ಸುಮಾ ಎಂಬ ಮೂವರ ಜರ್ನಿ ಮಧ್ಯೆ ಒಂದು ಸೊಗಸಾದ ಕಥೆಯನ್ನು ಸಂಧ್ಯಾರಾಣಿ ಮೇಡಂ ಬರೆದಿದ್ದಾರೆ. ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಾನು ಗೌರಿ-ಮಹೇಶ್ ಅನ್ನೋ ಪಾತ್ರ ನಿರ್ವಹಿಸಿದ್ದೇನೆ ಅಂದ್ರು. ಇದನ್ನೂ ಓದಿ: ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!
ಮದುವೆಯಾದ ಆಧುನಿಕ ಮಹಿಳೆಯ ಗಂಡ ಏಕಾಏಕಿ ತೀರಿಕೊಂಡ ನಂತರ ಮದುವೆ ಅನ್ನೋ ಒಂದು ಪದಕ್ಕೆ ಏನು ಅರ್ಥ ಅನ್ನೋ ಹುಡುಕಾಟದಲ್ಲಿ ಇರುವಂತಹ ಒಂದು ಪಾತ್ರವಾಗಿದೆ. ಸಾಮಾನ್ಯವಾಗಿ 1 ತಿಂಗಳು ಇರುವ ಶೂಟಿಂಗ್ ಅನ್ನು ನಾವು 15 ದಿನದಲ್ಲಿ ಮುಗಿಸಿದ್ದೇವೆ. ಹಗಲು-ರಾತ್ರಿ ಕೆಲಸ ಮಾಡಿ ಒಂದು ಸಿನಿಮಾವನ್ನು ಮಾಡಿದ್ದೇವೆ ಅಂತ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ಅವರು, ಸಿನಿಮಾ ನೋಡಿ ಪ್ರೋತ್ಸಾಹಿಸಿ ಅಂತ ಮನವಿ ಮಾಡಿಕೊಂಡರು.
ಚಿಕ್ಕವಯಸ್ಸಲ್ಲೇ ತಂದೆಯನ್ನ ಕಳೆದುಕೊಂಡೆ:
ನನ್ನ ತಂದೆಯನ್ನು ನಾನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡಿದ್ದೇನೆ. ನನ್ನ ತಾಯಿ ಈ ಸಮಾಜವನ್ನು ಎದುರಿಸಿಕೊಂಡು 2 ಮಕ್ಕಳನ್ನು ಬೆಳೆಸಿದ್ದಾರೆ. ಹೀಗಾಗಿ ಈ ಒಂದು ಕಥೆ ಬಂದ ತಕ್ಷಣವೇ ಯಾಕೋ ಗೌರಿ(ನನ್ನ ಪಾತ್ರ)ನಲ್ಲಿ ನನ್ನ ತಾಯಿಯನ್ನು ಕಂಡೆ. ಒಂದು ಹೆಣ್ಣಾಗಿ ನಾವು ಆಚೆ ಮಾತನಾಡದೇ ಇರೋವಂತಹ ಹಲವಾರು ವಿಷಯಗಳು ನಮ್ಮ ಮನಸ್ಸಲ್ಲೇ ಇವೆ. ಚಿತ್ರದಲ್ಲಿ ಗೌರಿಯೂ ಹಾಗೆ. ಅವಳ ಮನಸ್ಸಲ್ಲಿರುವಂತಹ ಅಷ್ಟೊಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಸಿನಿಮಾ ಸಾಲಲ್ಲ. 2, 3 ನಾತಿಚರಾಮಿ ಸಿನಿಮಾ ಮಾಡಿದ್ರೂ ಗೌರಿಯ ಎಲ್ಲಾ ಕಥೆಗಳನ್ನು ಹೇಳಿಕೊಳ್ಳಲು ಸಾಧ್ಯನಾ ಎಂದು ನನಗೆ ಗೊತ್ತಿಲ್ಲ. ಹಾಗಾಗಿ ಅವಳ ಗುಂಗಿನಲ್ಲೇ ಬದುಕುತ್ತಾ ಇದ್ದೀನಿ ಅಂದ್ರು.
ನನ್ನ ಮನಸ್ಸಿನ ಒಳಗಡೆ ಇರುವ ಕೆಲವೊಂದು ವಿಚಾರಗಳನ್ನು ಹೊರಗೆ ತರಲು ನಾತಿಚರಾಮಿ ಒಂದು ಔಟ್ ಲೆಟ್ ಆಗಿದೆ. ಇನ್ನು ಮಂದೆ ನಾನು ಸಿನಿಮಾ ಮಾಡಿದ್ರೆ ಅಥವಾ ನಿರ್ದೇಶಿಸಿದ್ರೆ ಖಂಡಿತಾ ತನ್ನ ಮನಸ್ಸಿನ ಒಳಗಡೆ ಇರುವಂತಹ ಗೊಂದಲಗಳನ್ನು ಹಂಚಿಕೊಳ್ಳುವುದೇ ಆಗಿರುತ್ತದೆ. ನಿರ್ದೇಶನ ಮಾಡುವ ಆಸೆ ಇದೆ. ಸಂದರ್ಭ ಬಂದ್ರೆ ಖಂಡಿತಾ ಮಾಡುವುದಾಗಿ ಹೇಳಿದ್ರು.
ಎಷ್ಟು ಸಿನಿಮಾ ಬಾಕಿದೆ? ಎಷ್ಟು ಸಿನಿಮಾದಲ್ಲಿ ಬ್ಯುಸಿ ಇದ್ದೀರಿ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸಿನಿಮಾ ಯಾವುದಕ್ಕೂ ನಾನು ಸಹಿ ಮಾಡಿಲ್ಲ. `ಆದ್ಯ’ ಅನ್ನೋ ಒಂದು ಸಿನಿಮಾ ಇದೆ. ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿರಂಜೀವಿ ಸರ್ಜಾ ಹಾಗೂ ಸಂಗೀತಾ ಭಟ್ ಕೂಡ ಅಭಿನಯಿಸಿದ್ದಾರೆ. ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ಮಂಜು ಸರ್ ಅವರು ನಿರ್ದೇಶಿಸಿರುವ ಒಂದು ಹಾರರ್ ಸಿನಿಮಾ ಕೂಡ ಇದೆ ಅಂದ್ರು.