Tag: nari narayani award

  • ಪಬ್ಲಿಕ್‌ ಟಿವಿಯಿಂದ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ ಪ್ರದಾನ

    ಪಬ್ಲಿಕ್‌ ಟಿವಿಯಿಂದ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ ಪ್ರದಾನ

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ (International Women’s Day) ಅಂಗವಾಗಿ ಪಬ್ಲಿಕ್ ಟಿವಿ (PUBLiC TV) 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ (Nari Narayani PUBLiC Hero Special Award) ಪ್ರದಾನ ಮಾಡಿ ಪುರಸ್ಕರಿಸಿದೆ.

    ಯವನಿಕಾ ಸಭಾಂಗಣದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹಾಗೂ ಪರಿಶ್ರಮ NEET ಅಕಾಡೆಮಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಾಧಕಿಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

    ನಾಗವೇಣಿ
    ಇವತ್ತಿನ ಕಾಲಘಟ್ಟದಲ್ಲಿ ಎಷ್ಟು ಸಿಕ್ಕರೂ ಸಾಲದು ಎಂಬ ಮನಸ್ಥಿತಿ ಇರಬೇಕಾದ್ರೆ ಬಂದಿದ್ದರಲ್ಲೇ ಮತ್ತೊಬ್ಬರಿಗೆ ಹಂಚಿ ಬದುಕುವವರು ವಿರಳ. ಅಂತಹ ಉದಾರ ಮನಸಿನ ಸಮಾಜ ಸೇವಕಿ ಮತ್ತು ಸಾಧಕಿ ಬೀದರ್‌ನ ನಾಗವೇಣಿ.

    ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ನಿವಾಸಿಯಾಗಿರುವ ನಾಗವೇಣಿ (Nagaveni) ಖಾನಾವಳಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಇವರ ಸದುದ್ದೇಶ ಇಂದು ಎಷ್ಟೋ ಕುಟುಂಬಗಳ ಜೀವನವನ್ನು ಬೆಳಗಿದೆ. ಕನ್ನಡ ಶಾಲೆಯ ಉಳಿವಿವಾಗಿ ಪಣತೊಟ್ಟಿರುವ ನಾಗವೇಣಿ 22 ವರ್ಷಗಳಿಂದ ರೊಟ್ಟಿ ತಟ್ಟುತ್ತಾ ಬರೋಬ್ಬರಿ 345 ಕಡು ಬಡತನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

    ಮಹಾರಾಷ್ಟ್ರ ಮೂಲದವರಾದರೂ ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ಬಳಿ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಬಸವಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಎಂಬ ಪ್ರೌಢ ಶಾಲೆಯ 345 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಊಟದ ಮನೆ ಎಂಬ ಖಾನಾವಳಿ ನಡೆಸುತ್ತಿರುವ ಇವರು ಬಂದ ಹಣವನ್ನು ಶಾಲೆಯ 18 ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೂ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ.

    22 ವರ್ಷಗಳಿಂದ ಹೋಟೆಲ್‍ನಿಂದ ಬಂದ ಸಂಪಾದನೆಯಲ್ಲಿ ಶಾಲೆ ನಡೆಸುತ್ತಿರುವ ನಾಗವೇಣಿಗೆ ನಡುವೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಆದರೆ ಮರಾಠಿ, ತೆಲುಗು, ಉರ್ದು, ಹಿಂದಿ ಸೇರಿದಂತ್ತೆ ಹಲವು ಭಾಷೆಗಳ ಪ್ರಭಾವಿರುವ ಗಡಿ ಜಿಲ್ಲೆಯಲ್ಲಿ ಕನ್ನಡ ಶಾಲೆಯನ್ನು ಉಳಿಸಬೇಕು ಎಂದು ಪಣ ತೊಟ್ಟು ಕಷ್ಟದಲ್ಲೂ ಶಾಲೆಯನ್ನೂ ಕೈಬಿಡದೆ ನಡೆಸಿಕೊಂಡು ಬಂದಿದ್ದಾರೆ. ಈ ಶಾಲೆಯಲ್ಲಿ ಓದಿದ ಅದೇಷ್ಟೋ ಬಡ ವಿದ್ಯಾರ್ಥಿಗಳು ಒಳ್ಳೆಯ ಕೆಲಸ ಪಡೆದಿದು ಸುಂದರ ಜೀವನವನ್ನು ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೋಟಿ ಕೋಟಿ ಆಸ್ತಿ ಮಾಡಬೇಕು ಅನ್ನುವವರ ನಡುವೆ ರೊಟ್ಟಿ ತಟ್ಟಿ ಬಂದ ಹಣದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುತ್ತಾ ಕನ್ನಡ ಶಾಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ.

    ಡಾ.ಲತಾ ದಾಮ್ಲೆ
    ವಿಜ್ಞಾನ ಮತ್ತು ಔಷಧ ಕ್ಷೇತ್ರದಲ್ಲಿ ಮಹಿಳೆಯರೂ ಕೂಡ ಮಹೋನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂತವರಲ್ಲಿ ಡಾಕ್ಟರ್ ಲತಾ ದಾಮ್ಲೆ (Dr. Latha Damle) ಕೂಡ ಪ್ರಮುಖರು. ಮೂಲತಃ ಉಡುಪಿಯ ಕುಂದಾಪುರದವರಾದ ಲತಾ ದಾಮ್ಲೆಯ ತಂದೆ ಯೋಧರಾಗಿದ್ದರು. ಬಾಲ್ಯದಲ್ಲೇ ಸಂಗೀತದ ಮೇಲೆ ಆಸಕ್ತಿ. ತಂದೆ ಮಗಳು ಆಸೆ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುವ ಲತಾ ದಾಮ್ಲೆ ಇವತ್ತು ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಮೂಲಕ ಔಷಧ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ.

    ಲಂಡನ್‍ನ ಡ್ರಗ್ ಡಿಸ್ಕವರಿ ಆಂಡ್ ಡೆವಲಪ್ಮೆಂಟ್‍ನಲ್ಲಿ ಎಂಎಸ್ ಮಾಡಿರುವ ಲತಾ ದಾಮ್ಲೆ ಬೆಂಗಳೂರಿನಲ್ಲಿ ಪ್ಲಾಂಟ್ ಫಾರ್ಮಕಾಲಜಿಯಲ್ಲಿ ಎಂಡಿ ಮುಗಿಸಿದ್ದರು. 25 ವರ್ಷಗಳ ಕಾಲ ರೇರ್ ಆಯುರ್ವೇದಿಕ್ ಸೆಂಟರ್‌ನಲ್ಲಿ ಮುಖ್ಯ ವೈದ್ಯೆಯಾಗಿ ಕೆಲಸ ಮಾಡಿರುವ ಲತಾ ದಾಮ್ಲೆ 2016ರಲ್ಲಿ ತನ್ನದೇ ಆದ ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಸ್ಥಾಪಿಸುತ್ತಾರೆ. ಇಲ್ಲಿ ಆಯುರ್ವೇದ ಸಸ್ಯಗಳ ಮೇಲೆ ಸಂಶೋಧನೆಗಳನ್ನು ನಡೆಸಿ ಔಷಧಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿದ್ದಾರೆ.

    ಉರಿಯೂತ, ಕ್ಯಾನ್ಸರ್ ಇಮ್ಯುನಾಲಜಿ, ಗಾಯಗಳಿಗೆ ಚಿಕಿತ್ಸೆ, ಚರ್ಮರೋಗಗಳು ಹಾಗೂ ಡಯಾಬಿಟೀಸ್ ರೋಗಕ್ಕೆ ಸಂಬಂಧಪಟ್ಟ ಔಷಧಗಳ ಸಂಶೋಧನೆಯನ್ನು ಇವರು ನಡೆಸಿದ್ದಾರೆ. ಸೋರಿಯಾಸಿಸ್, ಆಸ್ತಮಾ, ಡಯಾಬಿಟಿಸ್, ಅಲರ್ಜಿ ಮುಂತಾದ ರೋಗಗಳಿಗೆ ಹರ್ಬಲ್ ಮೆಡಿಸಿನ್‍ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ.

    ವೈಶಾಲಿ
    ಎಷ್ಟೋ ಬಾರಿ ಪ್ರತಿಭೆಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗುವುದು ಬಡತನ. ಅದರಲ್ಲೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧಿಸಬೇಕು ಅಂದರೆ ಮೊದಲ ಸೋಲಿಸಬೇಕಾಗಿರೋದು ಈ ಬಡತವನ್ನು. ಛಲ ಇದ್ದರೆ ಬಡತನ ಅಡ್ಡಿಬರುವುದಿಲ್ಲ ಎನ್ನುವುದಕ್ಕೆ ಉದಾಹರಣೆಯೇ ಕುರಿಗಾಹಿ ಬಂಗಾರದ ಹುಡುಗಿ ವೈಶಾಲಿ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಯುವತಿ ವೈಶಾಲಿ (Vaishali) ದನದ ಗುಡಿಸಲಿನಲ್ಲಿ ಅರಳಿದ ಕ್ರೀಡಾಪ್ರತಿಭೆ. ಗುರುಪ್ರಕಾಶ ಹಾಗೂ ಲಕ್ಷ್ಮಿದೇವಿಯವರ ಕೊನೆಯ ಮಗಳಾದ ವೈಶಾಲಿ ಕಡುಬಡತನದಲ್ಲೇ ಬೆಳೆದ ಈಕೆಗೆ ಕ್ರೀಡೆಯ ಕಡೆಗೆ ಸೆಳೆತ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ಮಲೇಷ್ಯಾದ ಅಂತಾರಾಷ್ಟ್ರೀಯ ಥ್ರೋಬಾಲ್ (Throw Ball) ಸ್ಪರ್ಧೆಗೆ ಆಯ್ಕೆಯಾಗ್ತಾರೆ. ಭಾರತದ ರಾಷ್ಟ್ರೀಯ ಥ್ರೋಬಾಲ್ ತಂಡದಲ್ಲಿ ಸ್ಥಾನ ಪಡೆದ ಬಳಿಕ ಮಲೇಷ್ಯಾಗೆ ತೆರಳಲು ತೀವ್ರ ಹಣಕಾಸಿನ ಅಡಚಣೆಯಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾಗಿರಲಿಲ್ಲ. ಆಗ ವದ್ದಿಕೆರೆ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಚಂದ ಹಣ ಸಂಗ್ರಹಿಸಿ ವೈಶಾಲಿ ಗೆದ್ದು ಬರುವಂತೆ ಹರಸಿ ಮಲೇಶಿಯಾಕ್ಕೆ ಕಳುಹಿಸುತ್ತಾರೆ. ಹೀಗಾಗಿ ಛಲ ಬಿಡದೇ ಆಧುನಿಕ ಓಬವ್ಬಳಂತೆ ಸೆಣಸಾಡಿರೊ ವೈಶಾಲಿ ಮಲೇಶಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

    ವೈಶಾಲಿಯವರು 2022 ರಿಂದ 2023 ರ ಒಂದು ವರ್ಷದ ಅವಧಿಯಲ್ಲೇ ಕೇರಳ ಹಾಗೂ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಗೆಯೇ ಮಲೇಶಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲೂ ಬಂಗಾರದ ಪದಕ ಗಳಿಸಿ ಮಿಂಚಿದ್ದಾರೆ. ಕುರು ಜಾನುವಾರುಗಳನ್ನು ಕಾದುಕೊಂಡೇ ತಮ್ಮ ಜಮೀನಿನಲ್ಲಿ ಅಭ್ಯಾಸ ಮಾಡ್ತಿದ್ದ ವೈಶಾಲಿ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿರೋದು ಕೇವಲ ವದ್ದಿಕೆರೆ ಗ್ರಾಮಕ್ಕೆ ಮಾತ್ರವಲ್ಲ ಇಡೀ ಕರ್ನಾಟಕ ರಾಜ್ಯ ಹಾಗೂ ಭಾರತಕ್ಕೂ ಹೆಮ್ಮೆ.

    ಡಾ.ಯಮುನಾ ಬಿ ಎಸ್
    ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಭಾರತದ ಸಾಂಪ್ರದಾಯಿಕ ಆರ್ಯುವೇದ ವೈದ್ಯ ಪದ್ಧತಿ ಕಡೆಗೆ ಒಲವು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಆಯುರ್ವೇದ ಕ್ಷೇತ್ರದಲ್ಲಿ ಇವತ್ತು ಹೆಸರು ಮಾಡುತ್ತಿರೋದು ಗುಡುಚಿ-ದಿ ಆಯುರ್ವೇದಿ ಸಂಸ್ಥೆ. 2014ರಲ್ಲಿ ಆರಂಭವಾದ ಈ ಸಂಸ್ಥೆ ಇದು ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಇದರ ಹಿಂದಿರುವ ರೂವಾರಿಯೇ ಮಹಿಳಾ ಸಾಧಕಿ, ಆಯುರ್ವೇದ ವೈದ್ಯೆ ಡಾ ಯಮುನಾ ಬಿಎಸ್.

    ಬೆಂಗಳೂರಿನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ 2008ರಲ್ಲಿ ಬಿಎಎಂಎಸ್ ಪದವಿ ಮುಗಿಸಿದ ಯಮುನಾ ಬಿಎಸ್ (Dr. Yamuna B S) 2013ರವರೆಗೆ ಅನನ್ಯಾ ಆಯುರ್ವೇದದಲ್ಲಿ ಕೆಲಸ ಮಾಡಿದರು. ನಂತರ ಗುಡುಚಿ ಆಯುರ್ವೇದ (Ayurveda) ಕ್ಲಿನಿಕ್ ಆರಂಭಿಸಿದ ಡಾ.ಯಮುನಾ ಕೆಲವೇ ವರ್ಷಗಳಲ್ಲಿ ಅದನ್ನು ಬ್ರ್ಯಾಂಡ್ ಅನ್ನಾಗಿ ಮಾಡಿದ್ರು. ಕಳೆದ ಎಂಟು ವರ್ಷಗಳಲ್ಲಿ 250ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿರುವ ಡಾ.ಯಮುನಾ ಉಡುಪಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಇಲ್ಲಿಂದ ಬ್ರಿಟನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಆಯುರ್ವೇದ ಉತ್ನನ್ನಗಳು ರಫ್ತಾಗುತ್ತವೆ.

    ಔಷಧರಹಿತ ಜೀವನದ ಗುರಿ ಇಟ್ಟುಕೊಂಡು ಸಂತಾನಹೀನತೆ, ಡಯಾಬಿಟಿಸ್, ಪಿಸಿಒಎಸ್, ಹೈಪೋಥೈರಾಯ್ಡ್ ಹಾಗೂ ಕ್ಯಾನ್ಸರ್‌ನಂತಹ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ ಡಾ.ಯಮುನಾ. ಇವತ್ತು ಗುಡುಚಿ ಆಯುರ್ವೇದ 60ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದೆ. ಆರೋಗ್ಯಕರ ಸಮಾಜದ ಗುರಿ ಇಟ್ಟುಕೊಂಡು, ಜೀವನಪರ್ಯಂತ ಔಷಧ ಸೇವಿಸುವಂತ ಕಾಯಿಲೆಯನ್ನೂ ಗುಣಪಡಿಸಿ, ಔಷಧರಹಿತ ಸುದೀರ್ಘ ಜೀವನ ನಡೆಸುವಂತಾಗಲು ಶ್ರಮಿಸುತ್ತಿದ್ದಾರೆ.

    ಸುಮಿತಾ ನವಲಗುಂದ
    ಸ್ವಾವಲಂಬಿಯಾಗಬೇಕು ಎನ್ನುವ ಹಠ ಅಸಾಮಾನ್ಯ ಸಾಧನೆಗೆ ದಾರಿಯಾಗುತ್ತದೆ. ಬಡತನ, ಪತಿಯ ಅಕಾಲಿಕ ಮರಣ, ಮಗಳನ್ನು ಸಾಕುವ ಜವಾಬ್ದಾರಿ. ಹೀಗೆ ಜೀವನದ ಸವಾಲವನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿರುವ ಧೀರ ಮಹಿಳೆ ಸುಮಿತಾ ನವಲಗುಂದ.

    17 ವರ್ಷಗಳ ಹಿಂದೆನೇ ತನ್ನ ಪತಿಯನ್ನು ಕಳೆದುಕೊಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆಗಿರುವ ಸುಮಿತಾ (Sumitha Nvalagunda) ಹೆಗಲ ಮೇಲೆ ಸಂಸಾರದ ಜವಾಬ್ದಾರಿ ಬೀಳುತ್ತದೆ. ತನ್ನ ತಾಯಿಯ ಜೊತೆ ಧಾರವಾಡದ ಮುರುಘಾಮಠದ ಬಳಿ ನೆಲೆಸಿರುವ ಸುಮಿತ್ರಾ ಜೀವನ ಕಟ್ಟಿಕೊಳ್ಳಲು ಆರಂಭದಲ್ಲಿ ಎನ್‍ಜಿಒ ಒಂದರಲ್ಲಿ ಕೆಲಸ ಮಾಡ್ತಾರೆ. ನಂತರ ಬ್ಯೂಟಿ ಪಾರ್ಲರ್ ತೆರೆದ್ರೂ ಜೀವನ ನಡೆಸೋದು ಕಷ್ಟವಾಗಿದ್ದಾಗ ಸುಮಿತ್ರಾ ತೋರಿದ ಅದೊಂದು ಧೈರ್ಯ ಅವರನ್ನು ಇವತ್ತು ಈ ಮಟ್ಟಿಗೆ ತಂದು ನಿಲ್ಲಿಸಿದೆ.

    ಕೆಲ ವರ್ಷಗಳ ಹಿಂದೆ ಒಂದು ಮಾರ್ಕೆಟಿಂಗ್ ಕಂಪನಿ ಹುಣಸೇಹಣ್ಣಿನ ಚಿಗಳಿ ಮಾಡುವುದಕ್ಕೆ ಆಹ್ವಾನ ಕೊಟ್ಟಿದ್ದರು. ಇದರಲ್ಲಿ ಭಾಗವಹಿಸಿದ್ದ ಸುಮಿತ್ರಾ ಮನೆಯಲ್ಲೇ ಸ್ವಲ್ಪ ಚಿಗಳಿ ತಯಾರಿಸಿಕೊಂಡು ಹೋಗಿದ್ದರು. ಇವರ ಚಿಗಳಿ ಮಾಡುವ ಆರ್ಡರ್ ಕೊಡ್ತಾರೆ. ಸಿಕ್ಕ ಅವಕಾಶ ತಪ್ಪಿಸಿಕೊಳ್ಳಬಾರದು ಅಂತ ನಿರ್ಧರಿಸಿ ಸುಮಿತ್ರಾ ಹಾಗೂ ಆಕೆಯ ತಾಯಿ ಮೊದಲು ಮನೆಯಲ್ಲೇ ಹಗಲು ರಾತ್ರಿ ಎನ್ನದೇ ಕೈಯಿಂದ ಕುಟ್ಟಿ ಚಿಗಳಿ ತಯಾರು ಮಾಡಿ ಕಳಿಹಿಸುತ್ತಾರೆ. ಆರಂಭದಲ್ಲಿ ಸುಮಿತ್ರಾಗೆ ವಾರಕ್ಕೆ 1800 ಚಿಗಳಿ ಆರ್ಡರ್ ಮಾತ್ರ ಮಾಡಲು ಸಾಧ್ಯವಾಗುತಿತ್ತು. ಆದರೆ ಇವತ್ತು ಇದೇ ಸುಮಿತ್ರಾ ದಿನಕ್ಕೆ 30 ಸಾವಿರ ಚಿಗಳಿ ತಯಾರು ಮಾಡ್ತಾರೆ. ಕೇವಲ 2 ಸಾವಿರ ರೂಪಾಯಿ ಹಣ ಹಾಕಿ ಆರಂಭ ಮಾಡಿದ್ದ ಈ ಚಿಗಳಿ ವ್ಯಾಪಾರ ಈಗ ಲಕ್ಷ ಲಕ್ಷ ಹಣ ಗಳಿಸುತ್ತಿದೆ.

    ಮೊದಲು ತನ್ನ ಮನೆ ನಡೆಸಲು ಕಷ್ಟ ಪಡುತಿದ್ದ ಈ ಮಹಿಳೆ ಈಗ 63 ಕುಟುಂಬಗಳಿಗೆ ಬೆಳಕಾಗಿದ್ದಾರೆ. ಮನೆಯಿಂದ ಆರಂಭವಾದ ಈ ಉದ್ಯಮ ಇಂದು ಒಂದು ಗೋಡೌನ್‍ನಲ್ಲಿ ನಡೆಯುತ್ತಿದ್ದು 63 ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಾರೆ. ಕಷ್ಟದ ಬದುಕನ್ನ ಸಾಗಿಸುತಿದ್ದ ಈ ಮಹಿಳೆಯರು ಇವತ್ತು ಸುಮಿತ್ರಾ ಕೊಟ್ಟ ಕೆಲಸದಿಂದ ಒಂದು ತುತ್ತು ಅನ್ನ ತಿನ್ನುವಂತೆ ಆಗಿದೆ.

    ಡಾ.ಕಿರಣ್ ರೆಡ್ಡಿ
    ನಹಿ ಜ್ಞಾನೇನ ಸದೃಶಂ’ ಅಂತ ಭಾರತದ ಪ್ರಾಚೀನ ಗೀತಾಮೃತದಲ್ಲಿ ಹೇಳಲಾಗಿದೆ. ಇಂತಹ ಜ್ಞಾನ ತುಂಬವ ಕೆಲಸವನ್ನು ಮಾಡುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗಳು. ಕಳೆದ 36 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿರುವವರು ಡಾ ಕಿರಣ್ ರೆಡ್ಡಿ.

    ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ (Acharya Institute of Management and Sciences, Bengaluru) ಸಂಸ್ಥೆಯನ್ನು ಹುಟ್ಟುಹಾಕಿದ ಕಿರಣ್ ರೆಡ್ಡಿ (Dr Kiran Reddy) ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿ ನಾಡಿಗೆ ಹೆಸರು ತಂದಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರಿಂದ ಹಿಡಿದು ಸಂಸ್ಥೆಯ ಮುಖ್ಯಸ್ಥೆಯಾಗಿ ಆಡಳಿತ ನಡೆಸುತ್ತಾ ವಿವಿಧ ರಾಜ್ಯಮಟ್ಟದ ಶೈಕ್ಷಣಿಕ ಸಮಿತಿಗಳ, ಒಕ್ಕೂಟಗಳ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಕಿರಣ್ ರೆಡ್ಡಿ. ಬೆಂಗಳೂರು ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣಾ ಸಮಿತಿಯ ಮುಖ್ಯಸ್ಥೆಯಾಗಿಯೂ ಕೆಲಸ ಮಾಡಿದ್ದಾರೆ.

    28 ವರ್ಷಗಳಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್‌ ಕಟ್ಟಿ ಬೆಳೆಸಿ ಇವತ್ತು ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಗಳ ಜೊತೆ ಸ್ಪರ್ಧಿಸುವಷ್ಟು ಪ್ರಬಲ ಸಂಸ್ಥೆಯನ್ನಾಗಿ ಮಾಡುವುದರಲ್ಲಿ ಇವರ ಕೊಡುಗೆ ದೊಡ್ಡದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿ ಹತ್ತಾರು ಉಪನ್ಯಾಸಗಳನ್ನು ನೀಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಡಾ.ಕಿರಣ್ ರೆಡ್ಡಿ.

    ಜಯಮ್ಮ
    2023ನೇ ವರ್ಷವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ( International Year Millets) ಘೋಷಿಸಿದೆ. ಇವತ್ತು ಸಿರಿಧಾನ್ಯಗಳಿಗೆ ಅಷ್ಟರಮಟ್ಟಿಗೆ ಮಹತ್ವವಿದೆ. ಇದೇ ಸಿರಿಧಾನ್ಯ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿದವರು ಹಾವೇರಿಯ ಜಯಮ್ಮ.

    ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ದೊಡ್ಡಗುಬ್ಬಿ ಗ್ರಾಮದ ಜಯಮ್ಮ (Jaymamma) ಆರಂಭದಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದರು. ಸುಮಾರು 4 ವರ್ಷ ನರ್ಸ್ ಆಗಿ ಕೆಲಸ ಮಾಡಿರುವ ಜಯಮ್ಮಗೆ ಕೃಷಿಯ ಕಡೆಗೆ ಒಲವು ಬೆಳೆಯುತ್ತದೆ. ಸಾವಯವ ಕೃಷಿಯ ತರಬೇತಿ ಪಡೆಯುವ ಜಯಮ್ಮ ಇದ್ದ ಒಂದು ಎಕರೆಯಲ್ಲೇ ಸಾವಯವ ಬೆಳೆಯನ್ನು ಬೆಳೆಯಲು ಪ್ರಾರಂಭಿಸುತ್ತಾರೆ. ಅದರಲ್ಲೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ನವಣೆ, ಸಾವೆ, ಸಜ್ಜೆ, ಬರಗು, ತೊಗರೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನ ಬೆಳೆದು ಮಾರಾಟ ಮಾಡುತ್ತಿದ್ದರು. ಅದರೆ ಅದರಲ್ಲಿ ಯಾವುದೇ ಲಾಭ ಸಿಗುತ್ತಿರಲಿಲ್ಲ. ಈ ಸಂದರ್ಭ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಮೂಲಕ ಮಾರ್ಗದರ್ಶನ ಹಾಗೂ ತರಬೇತಿ ಪಡೆದು ಸಿರಿಧಾನ್ಯಗಳಿಂದ ಸ್ವಯಂ ಉತ್ಪನ್ನಗಳನ್ನ ರೆಡಿ ಮಾಡಲು ಪ್ರಾರಂಭಿಸುತ್ತಾರೆ. ಇಲ್ಲಿಂದ ಇವರ ಯಶೋಗಾಥೆ ಆರಂಭವಾಗುತ್ತದೆ.

    2009ರಿಂದ ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳನ್ನು ಬೆಳೆದು ತಾವೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಜಯಮ್ಮ.ಗಗನ್ ಎಂಟರ್‍ಪ್ರೈಸರ್ ಎಂಬ ಸಂಸ್ಥೆಯ ಮೂಲಕ ಹತ್ತಾರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿರುವ ಜಯಮ್ಮ ಗ್ರಾಮದ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಸಿರಿಧಾನ್ಯಗಳ ಮಾಹಿತಿ, ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಮದ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ.

    ಅಂಜಲಿ ರಾಮಚಂದ್ರ
    21ನೇ ಶತಮನಾದಲ್ಲಿ ಮಹಿಳೆ ಮನೆಯೊಳಗೆ ಮಾತ್ರವಲ್ಲ ಮನೆಯ ಹೊರಗೆನೂ ಮಲ್ಟಿಟಾಸ್ಕಿಂಗ್‍ನಲ್ಲಿ ಮಿಂಚುತ್ತಿದ್ದಾಳೆ. ಹೀಗೆ ನಮ್ಮ ನಡುವೆ ಇರುವ ಬಹುಮುಖಪ್ರತಿಭೆಯಲ್ಲೊಬ್ಬರು ಅಂಜಲಿ ರಾಮಚಂದ್ರ. ಸಿನಿಮಾ, ನಿರೂಪಣೆ, ಉಪನ್ಯಾಸ, ನೃತ್ಯ, ಕೊರಿಯಾಗ್ರಫಿ ಹೀಗೆ ಅಂಜಲಿ ಮುಟ್ಟದ ಕ್ಷೇತ್ರಗಳಿಲ್ಲ.

    ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ ಮೀಡಿಯಾ ಕಮ್ಯುನಿಕೇಶನ್‍ನ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಅಂಜಲಿ ರಾಮಚಂದ್ರ (Anjali Ramachandra) ಮೀಡಿಯಾ ಟೆಕ್ ಸ್ಟಾರ್ಟಪ್ ಮೂಲಕ ಉದ್ಯಮಕ್ಕೆ ಬಂದವರು. ಮೂಲತಃ ನಟಿಯಾಗಿದ್ದ ಅಂಜಲಿ ಮನರೋಥ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಅಂಜಲಿ ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಲಿಲ್ಲ. ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ್ ಮೀಡಿಯಾ ಕಮ್ಯುನಿಕೇಶನ್ ಪ್ರಾರಂಭಿಸಿದರು.

    ಜಾಹೀರಾತು, ಕಾರ್ಪೋರೇಟ್ ಫಿಲ್ಮ್ಸ್, ಡಾಕ್ಯುಮೆಂಟರಿಗಳು, ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಸೇರಿದಂತೆ ಎಲ್ಲವನ್ನೂ ಮಾಡುತ್ತದೆ ಈ ಸಂಸ್ಥೆ. ಇದರ ಜೊತೆಗೆ ಅಂಜಲಿ ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿಗಳಲ್ಲಿ ಆಂಕರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ತನ್ನ ಪ್ರತಿಭೆ ತೋರಿಸಿದ್ದಾರೆ. ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ಅಂಜಲಿ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಆಂಡ್ ಮ್ಯೂಸಿಕ್ ಅನ್ನೋ ಸಂಸ್ಥೆಯ ಮೂಲಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಇವರ ಸಾಧನೆಗೆ ಡಾಟರ್ ಆಫ್ ಇಂಡಿಯಾ, ರಾಮ್‍ನಾಥ್ ಗೋಯೆಂಕಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

    ದಿವ್ಯಜ್ಯೋತಿ
    ಕಷ್ಟ ಕಾಲಕ್ಕೆ ಆದವರೇ ನಿಜವಾದ ನೆಂಟರು ಎಂಬ ಮಾತಿದೆ. ಸ್ತ್ರೀ ಸ್ವಸಹಾಯ ಗುಂಪುಗಳು ನಿಸ್ಸಂದೇಹವಾಗಿ ಇಂದು ಆಪತ್ಬಾಂಧವನ ಪಾತ್ರ ನಿರ್ವಹಿಸುತ್ತಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆಂದೇ ರಚನೆಗೊಂಡ ಸ್ವಸಹಾಯ ಸಂಘಗಳ ಪೈಕಿ ಕೊಪ್ಪಳ ಜಿಲ್ಲೆಯ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯ್ತಿ (Divya Jyothi Grama Panchayat) ಒಕ್ಕೂಟಕ್ಕೆ ವಿಶೇಷ ಸ್ಥಾನ.

    ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಮಂಗಳೂರು ಗ್ರಾಮದ ಈ ಸಂಘ, ಸಾವಿರಾರು ಮಹಿಳೆಯರ ಆದಾಯಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಒಕ್ಕೂಟದಿಂದ ನೆರವು ಪಡೆದ ಅದೆಷ್ಟೋ ವನಿತೆಯರು ಸ್ವಯಂ ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ. ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಆರಂಭವಾಗಿದ್ದು 2015ರಲ್ಲಿ. ಕೇವಲ ಒಂದು ಲಕ್ಷ ರೂಪಾಯಿ ಸದಸ್ಯರ ಬಂಡವಾಳದೊಂದಿಗೆ ಶುರುವಾದ ಈ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ. ಸದ್ಯ ಈ ಸ್ವಸಹಾಯ ಗುಂಪಿನ ಬಳಿ ಒಂದೂವರೆ ಕೋಟಿ ರೂಪಾಯಿ ಸಮುದಾಯ ಬಂಡವಾಳ ನಿಧಿ ಇದೆ ಎಂದರೆ ಅದು ಇವರ ಪರಿಶ್ರಮ ಸಿಕ್ಕ ಬೆಲೆ.

    ಮಂಗಳೂರು ಗ್ರಾಮದಲ್ಲಿ ಕೆಲವರು ಕೃಷಿ ಮಾಡ್ತಾರೆ, ತರಕಾರಿ ಬೆಳೆದು ಮಾರುತ್ತಾರೆ, ಕೌದಿ ಹೊಲೆಯುತ್ತಾರೆ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ ಇಟ್ಕೊಂಡಿದ್ದಾರೆ. ಹೀಗೆ ಸ್ವಸಹಾಯ ಗುಂಪಿನಿಂದ ಸಾಲ ಪಡೆದು ನಿತ್ಯ ದುಡಿಮೆ ಮಾಡುತ್ತಿದ್ದಾರೆ. ಬಸಮ್ಮ ಎಂಬಾಕೆಯ ಬಟ್ಟೆ ಅಂಗಡಿ 10 ಲಕ್ಷ ರೂಪಾಯಿವರೆಗೂ ವಹಿವಾಟು ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು. ಇಡೀ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಸ್ವಸಹಾಯ ಗುಂಪಿನ ಸದಸ್ಯರಾಗಿ. ಅದರ ಲಾಭ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ 2022 ವಿಶೇಷ ಪ್ರಶಸ್ತಿ ಪ್ರದಾನ

    ರಮ್ಯಾ
    ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮನೆ ಜವಾಬ್ದಾರಿ ಹೆಣ್ಣುಮಕ್ಕಳದ್ದೇ ಆಗಿದ್ರೂ ಹೋಟೆಲ್ ಉದ್ಯಮದಲ್ಲಿ ಮಹಿಳೆಯರು ಹೆಸರು ಮಾಡಿರುವುದು ವಿರಳ. ಇದಕ್ಕೆ ಅಪವಾದ ಎಂಬಂತೆ ಇದ್ದಾರೆ ರಮ್ಯಾ. ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪದವಿ ಮುಗಿಸಿದ ರಮ್ಯಾ (Ramya) ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಾರ್ಟ್‍ಟರ್ಮ್ ಕೋರ್ಸ್ ಮಾಡಿದ್ದಾರೆ. ಆಹಾರಗಳ ಮೇಲೆ ವಿಶೇಷ ಆಸಕ್ತಿಹೊಂದಿದ್ದ ರಮ್ಯಾ ಎಂಟು ವರ್ಷಗಳ ಕಾಲ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಿದ್ದರು.

    ತಾನು ಎಲ್ಲರಿಗಿಂತ ವಿಭಿನ್ನವಾದದ್ದನ್ನು ಜನರಿಗೆ ಕೊಡಬೇಕು ಎನ್ನುವುದು ಇವರಿಗೆ ಯಾವಾಗಲೂ ಕಾಡುತ್ತಿತ್ತು. ಲಾಕ್‍ಡೌನ್ ಸಮಯದಲ್ಲಿ ತನ್ನ ಸೋದರಿ ಶ್ವೇತಾ ಜೊತೆ ಸೇರಿ ಆರ್‍ಎನ್‍ಆರ್ ದೊನ್ನೆ ಬಿರಿಯಾನಿ ಹೋಟೆಲ್ (RNR Donne Biryani Hotel) ಶುರುಮಾಡುತ್ತಾರೆ. ಸಾಂಪ್ರದಾಯಿಕ ದೊನ್ನೆ ಬಿರಿಯಾನಿಗೆ ವಿಶಿಷ್ಟವಾದ ಮಸಾಲೆ ಮತ್ತು ಫ್ಲೇವರ್‌ ಸೇರಿಸಿ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸುತ್ತಾರೆ.

    ಸದ್ಯ ಬೆಂಗಳೂರಿನಲ್ಲಿ ಮನೆ ಮಾತಾಗಿರುವ ಆರ್‌ಎನ್‍ಆರ್ ದೊನ್ನೆ ಬಿರಿಯಾನಿ 2020ನೇ ಸಾಲಿನ `ಬೆಸ್ಟ್ ಬ್ರ್ಯಾಂಡ್ ಲಾಂಚ್’ ಅನ್ನೋ ಹೆಸರು ಗಳಿಸಿತ್ತು. ಈ ಮೂಲಕ ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿದ್ದಾರೆ ರಮ್ಯಾ.

  • ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ

    ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಪಬ್ಲಿಕ್ ಟಿವಿ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದೆ.

    ಯವನಿಕಾ ಸಭಾಂಗಣದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹಾಗೂ ಜಿಜೆಎಂ ಪ್ರೊಜೆಕ್ಟ್ ಮುಖ್ಯಸ್ಥ ಗುರುಜಲ ಜಗನ್ಮೋಹನ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಮಾತನಾಡಿ, ಈ ವರ್ಷದಿಂದ ಪಬ್ಲಿಕ್ ಟಿವಿಯಿಂದ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ಜೊತೆ ನಾವು ಎಂದಿಗೂ ಇರುತ್ತೇವೆ. ಜನರಿಗೆ ಒಳ್ಳೆಯದನ್ನು ಮಾಡಲು ನೀವು ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದರು.  ಇದನ್ನೂ ಓದಿ:  ಜನಮನ ಸೆಳೆದ ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್

    ಜಿಜೆಎಂ ಪೊಜೆಕ್ಟ್ ಮುಖ್ಯಸ್ಥ ಗುರುಜಲ ಜಗನ್ಮೋಹನ್ ಮಾತನಾಡಿ, ಮಹಿಳೆಯರು ನಮ್ಮ ಜೀವನದಲ್ಲಿ ತಾಯಿ, ಮಡದಿ, ಮಗಳಾಗಿ ಮುಖ್ಯಪಾತ್ರವನ್ನು ವಹಿಸುತ್ತಾರೆ. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿದ್ದಾರೆ ಎಂದರು.

    ತೇಜಸ್ವಿನಿ ಅನಂತ್‍ಕುಮಾರ್:
    ಹಸಿರಿನ ಪ್ರೀತಿ ಜೊತೆಗೆ ಹಸಿದವರಿಗೆ ಅನ್ನ ನೀಡುವುದನ್ನೇ ಬದುಕಿಡೀ ಕಾಯಕ ಮಾಡಿಕೊಂಡು, ಅರೇ ಹೀಗೂ ನಿಸ್ವಾರ್ಥವಾಗಿ ಜನಸೇವೆ ಮಾಡಬಹುದಾ ಎಂಬ ಅಚ್ಚರಿಯ ವ್ಯಕ್ತಿತ್ವದವರು ತೇಜಸ್ವಿನಿ ಅನಂತ್‍ಕುಮಾರ್. ಕೇಂದ್ರ ಮಾಜಿ ಸಚಿವ ದಿವಂಗತ ಅನಂತ್‍ಕುಮಾರ್ ಅವರ ಪ್ರೀತಿಯ ಅದಮ್ಯ ಚೇತನ ಕನಸಿಗೆ ಜೀವ ತುಂಬಿ ಕರುನಾಡಿನ ಹೆಮ್ಮೆಯ ಮಗಳಾಗಿದ್ದಾರೆ. ತೇಜಸ್ವಿನಿ ಅವರದ್ದು ಬಹುಮಖ ವ್ಯಕ್ತಿತ್ವ. ಶಿಕ್ಷಣದಿಂದ ಇಂಜಿನಿಯರ್. ಕೆಲಕಾಲ ವಿಜ್ಞಾನಿಯಾಗಿದ್ದವರು. 1993 – 1997ರ ನಡುವೆ ತೇಜಸ್ ಲಘು ಯುದ್ಧ ವಿಮಾನದ ಯೋಜನೆಯಲ್ಲಿ ಡಾ ಎಪಿಜಿ ಅಬ್ದುಲ್ ಕಲಾಂ ಅವರ ನೇತೃತ್ವದ ತಂಡದಲ್ಲಿ ತೇಜಸ್ವಿನಿಯವರು ವಿಜ್ಞಾನಿಯಾಗಿ ಸೇವೆಸಲ್ಲಿದ್ದರು. ಆನಂತರ ಸೇವೆಯೇ ಪರಮ ಧರ್ಮ ಎಂಬ ತತ್ವಾದರ್ಶದತ್ತ ವಾಲಿದ ಇವರು, 1998ರಲ್ಲಿ ಅನಂತ ಕುಮಾರ್ ಅವರ ತಾಯಿಯ ಸ್ಮರಣಾರ್ಥ ಅದಮ್ಯ ಚೇತನ ಸಂಸ್ಥೆ ಪ್ರಾರಂಭಿಸಿದರು.

    ಲಕ್ಷಾಂತರ ಹಸಿದ ಮಕ್ಕಳ ಹೊಟ್ಟೆ ತುಂಬಿಸಿ ನಿತ್ಯವೂ ಪೌಷ್ಟಿಕ ಭೋಜನ ಉಣಬಡಿಸುತ್ತಿದ್ದಾರೆ. ಅನ್ನ, ಅಕ್ಷರ, ಆರೋಗ್ಯದ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಮಸ್ಯೆಗಳ ಕುರಿತು ತೇಜಸ್ವಿನಿ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಸಸಿ ನೆಟ್ಟು, ಅದರ ಲಾಲನೆ ಪಾಲನೆ ವಿಚಾರದಲ್ಲಿ ತೇಜಸ್ವಿನಿ ಹಸಿರ ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರತಿ ವಾರಾಂತ್ಯ ಹಸಿರು ಭಾರತದಡಿಯಲ್ಲಿ ಒಂದಿಷ್ಟು ಯುವಪಡೆಗಳ ಸಹಾಯದೊಂದಿಗೆ ಇದುವರೆಗೆ ಮೂರರಿಂದ ನಾಲ್ಕು ಲಕ್ಷ ಗಿಡಿ ನೆಟ್ಟಿದ್ದಾರೆ. ಬೆಂಗಳೂರಿನ ಜೊತೆಗೆ ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಗುಲ್ಬರ್ಗದಲ್ಲೂ ಹಸಿರ ಕ್ರಾಂತಿ ಮುಂದುವರೆದಿದೆ. ಇದನ್ನೂ ಓದಿ:  ಸಾಂಸ್ಕೃತಿಕ ನಗರಿ ಬೆಳಗಾವಿಗೆ ಭೇಟಿ ನೀಡಿದ ರಾಜ್ಯಪಾಲರು

    ಡಾ. ಸಬಿತಾ ರಾಮಮೂರ್ತಿ:
    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತಾರೆ. ಈ ಹೆಣ್ಮಗಳು ಶೈಕ್ಷಣಿಕ ಜಗತ್ತಿನಲ್ಲಿ ಮೂಡಿಸಿರುವ ಛಾಪು ಎಲ್ಲರೂ ತಲೆದೂಗುವಂಥದ್ದು. ಸಿಎಂಆರ್ ಯುನಿವರ್ಸಿಟಿ ಇಂದು ಬೆಂಗಳೂರಿನಲ್ಲಿ ಇಷ್ಟು ಪ್ರಸಿದ್ಧಿ ಗಳಿಸುವುದರ ಹಿಂದಿರುವ ಅಗಾಧ ಶಕ್ತಿಯೇ ಸಿಎಂಆರ್ ವಿವಿಯ ಕುಲಪತಿ ಮತ್ತು ಸಿಎಂಆರ್ ಜ್ಞಾನಧಾರ ಟ್ರಸ್ಟಿನ ಅಧ್ಯಕ್ಷೆಯಾದ ಡಾ.ಸಬಿತಾ ರಾಮಮೂರ್ತಿ.

    ಐಪಿಎಸ್ ಅಧಿಕಾರಿಯ ಮಡದಿಯಾಗಿ, ಸೊಗಸಾದ ಆರಾಮದ ಜೀವನ ನಡೆಸುವ ಅವಕಾಶವಿದ್ದರೂ, ಶಿಕ್ಷಣ ಜಗತ್ತಿನತ್ತ ಇದ್ದ ಸೆಳೆತ ಸಬಿತಾರನ್ನು ಸೆಳೆಯದೆ ಬಿಡಲಿಲ್ಲ. 1990ರಲ್ಲಿ ಸಿಬಿಎಸ್ಸಿಗೆ ಸಂಯೋಜಿತವಾದ ಶಾಲೆಯಿಂದ ಶಿಕ್ಷಣ ಕ್ಷೇತ್ರದ ಮಹಾಸಾಗರಕ್ಕೆ ಧುಮುಕಿದ ಡಾ.ಸಬಿತಾ ರಾಮಮೂರ್ತಿ ಅವರು, ಇವತ್ತಿಗೆ ಸಿಎಂಆರ್ ಎಂಬ ಬೃಹತ್ ವಿದ್ಯಾನೌಕೆಯನ್ನು ಅದ್ಭುತವಾಗಿ ಸಾಗಿಸುತ್ತಿರುವ ಚತುರ ನಾವಿಕರೆನಿಸಿದ್ದಾರೆ.

    ಸಿಎಂಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್‍ನ ರಚನೆಯಿಂದ ಶುರುವಾಗಿ ಒಟ್ಟು ಬರೋಬ್ಬರಿ 18 ಶಿಕ್ಷಣ ಸಂಸ್ಥೆಗಳು ಸಬಿತಾ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಸಿಎಂಆರ್ ವಿವಿ ಬಗ್ಗೆ ಅಸಂಖ್ಯ ಪೋಷಕರು ಹಾಗೂ ವಿದ್ಯಾರ್ಥಿಗಳ ಹೊಂದಿರುವ ಮೆಚ್ಚುಗೆ ಭಾವವೇ ಇದಕ್ಕೆ ಸಾಕ್ಷಿ.

    ಉನ್ನತ ವ್ಯಾಸಂಗದ ಜೊತೆಗೆ ಅತ್ಯುನ್ನತ ತರಬೇತಿ, ಸಂಶೋಧನೆ ಮತ್ತು ಸಲಹಾ ಕೇಂದ್ರಗಳ ಮೂಲಕ ಅಗಣಿತ ವಿದ್ಯಾರ್ಥಿಗಳ ಮನ ಗೆದ್ದ ಸಂಸ್ಥೆಯಿದು. ಸಿಎಂಆರ್ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕಲಿಯುತ್ತಿರುವ 20 ಸಾವಿರ ವಿದ್ಯಾರ್ಥಿಗಳಲ್ಲಿ ಬರೀ ಭಾರತೀಯರಷ್ಟೇ ಅಲ್ಲದೆ, ವಿಶ್ವದ ಸುಮಾರು 60 ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇದ್ದಾರೆ.

    ಸಫಲ ನಾಗರತ್ನ:
    ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ ಸೋಂಕೊಂದರ ಪೀಡಿತರಾಗಿದ್ದರೂ, ಅನಾರೋಗ್ಯ ಕಾಡುತ್ತಿದ್ದರೂ, ನೂರಾರು ಯುವತಿಯರ ಬಾಳಿಗೆ ಭರವಸೆಯ ಬದುಕು ಕಟ್ಟಿಕೊಡುತ್ತಿರುವ ಗಟ್ಟಿ ಮಹಿಳೆ ಇವರು. ನೊಂದು ಬೆಂದ ಮಹಿಳೆಯರ ಅಂಧಕಾರಕ್ಕೆ ಬೆಳಕು ಚೆಲ್ಲುತ್ತಿರುವ ನಿಜವಾದ ರತ್ನ ಸಫಲ ನಾಗರತ್ನ.

    ತಾವೇ ಸ್ಥಾಪಿಸಿದ ಆಶ್ರಯ ಫೌಂಡೇಶನ್ ಮೂಲಕ ನೂರಾರು ಹೆಚ್‍ಐವಿ ಭಾದಿತರ ಪಾಲಿಗೆ ಇವರೇ ತಾಯಿ, ತಂದೆ, ಅಕ್ಕ, ತಂಗಿ, ಬಂಧು, ಬಳಗ. ಹೆಚ್‍ಐವಿ ಪೀಡಿತರು ಹಾಗೂ ಅವರ ಮಕ್ಕಳಿಗೆ ಅನ್ನದಾತೆಯಾಗಿ, ಆಶ್ರಯದಾತೆಯಾಗಿ, ಮಾರ್ಗದರ್ಶಿಯಾಗಿ, ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬುತ್ತಾ ಬದುಕಿಗೆ ದಾರಿದೀಪವಾಗಿದ್ದಾರೆ ನಾಗರತ್ನ.

    ಹೆಚ್‍ಐವಿಯಿಂದ ತಂದೆ – ತಾಯಿ ಕಳೆದುಕೊಂಡವರು ಹಾಗೂ ಪೋಷಕರಿಂದ ಹೆಚ್‍ಐವಿಗೆ ತುತ್ತಾದವರಿಗೆ ಬದುಕುವ ಭರವಸೆ ತುಂಬುತ್ತಾರೆ. ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ. ಸ್ವಾವಲಂಬಿಯಾಗುವಂತೆ ಪ್ರೇರೆಪಿಸುತ್ತಾರೆ. ಇಂಥ ಅದೆಷ್ಟೋ ಹೆಣ್ಣು ಮಕ್ಕಳ ಕಣ್ಣೀರು ಒರೆಸಿದ ಕರುಣಾಮಾಯಿಯಾಗಿದ್ದಾರೆ.

    ಡಾ. ಅಂಜಲಿ ನಿಂಬಾಳ್ಕರ್:
    ಖಾನಾಪುರ ಶಾಸಕಿ ಆಗುವುದಕ್ಕಿಂತ ಮೊದಲು ಡಾ.ಅಂಜಲಿ ನಿಂಬಾಳ್ಕರ್ ವೈದ್ಯ ವೃತ್ತಿಯಲ್ಲಿದ್ದವರು. ಜನಸೇವೆಯ ಗುರಿಯೊಂದಿಗೆ ರಾಜಕೀಯ ಕಣಕ್ಕೆ ಧುಮುಕಿದ ಇವರನ್ನು ಮತದಾರರು ಕೈಬಿಡಲಿಲ್ಲ. ಶಾಸಕಿಯಾಗಿ ರಾಜಕೀಯದ ಸವಾಲಿನ ಹಾದಿಯನ್ನು ಸಮರ್ಥವಾಗಿ ನಿಭಾಯಿಸಿ, ಜನಮನ್ನಣೆ ಗಳಿಸಿದ್ದಾರೆ. ರಾಜಕೀಯಕ್ಕೆ ಬರಬೇಕು ಅಂತಾ ತುಡಿತವಿರುವ ಪ್ರತಿ ಮಹಿಳೆಗೂ ಸ್ಫೂರ್ತಿಯಾಗಿ ನಿಲ್ಲಬಲ್ಲ ಹೆಣ್ಣುಮಗಳು ಇವರು. ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಸದನದಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡೇ ಮಾತಾನಾಡಿದ ಅಂಜಲಿ, ಅತ್ಯಾಚಾರದ ವಿರುದ್ಧ ಕಠಿಣ ಕಾನೂನಿಗಾಗಿ ಧ್ವನಿಯೆತ್ತಿದ್ದರು.

    ಇಡೀ ದೇಶಕ್ಕೆ ದೇಶವೇ ಕೊರೊನಾದ ಕಾರ್ಮೋಡದಲ್ಲಿ ಇರುವಾಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅಂಜಲಿ ತಮ್ಮ ಕ್ಷೇತ್ರದಲ್ಲಿ ಓಡಾಡಿದ್ರು. ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಕೊಟ್ರು. ಅಷ್ಟೇ ಅಲ್ಲ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುವಾಗ ಸ್ವತಃ ತಾವೇ ಮುಂದೆ ನಿಂತು ಗರ್ಭಿಣಿ ಮಹಿಳೆಯರಿಗೆ ಧೈರ್ಯ ತುಂಬಿ ಲಸಿಕೆ ಹಾಕುತ್ತಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡಲು ಸರ್ಕಾರ ಹಿಂದೇಟು ಹಾಕಿದಾಗ ಸಂಘರ್ಷದ ಪಾದಯಾತ್ರೆ ಮಾಡಿದರು.

    ಡಾ. ಸ್ವಾತಿ ಪ್ರದೀಪ್:
    ಜೀವನದಲ್ಲಿ ಮಹತ್ತರ ಸಾಧನೆಗೈಯ್ಯಬೇಕಂದರೆ ಹಳ್ಳಿ ಬಿಟ್ಟು ಸಿಟಿ ಕಡೆ ಮುಖ ಮಾಡ ಬೇಕು ಎನ್ನುವ ಧ್ಯೇಯದಲ್ಲಿ ಬದುಕುತ್ತಿರುವವರು ಹಲವರು. ಆದರೆ ಗ್ರಾಮೀಣ ಪ್ರದೇಶದಲ್ಲೇ ಇದ್ದು, ಗ್ರಾಮೋದ್ಯಮದಲ್ಲೇ ಉದ್ಧಾರವಾಗಿ, ಹಳ್ಳಿಮಂದಿಯ ಮೊಗದಲ್ಲಿ ನಗು ಹಾಗೂ ಲಾಭದ ಸೊಬಗು ಕಂಡವರು ಅಪರೂಪದ ಸಾಧಕಿ ಡಾ.ಸ್ವಾತಿ ಪ್ರದೀಪ್.

    ಪತಿಯ ನೆರವಿನೊಂದಿಗೆ ಹೊಸದುರ್ಗದಲ್ಲಿ ಶುರುಮಾಡಿದ ಸದ್ಗುರು ಆಯುರ್ವೇದ ಉತ್ಪನ್ನಗಳು ಮತ್ತು ವಾಸವಿ ಹೆಲ್ತ್ ಕೇರ್ ಪ್ರಾಡಕ್ಟುಗಳು ಇಂದು ಬಹಳ ಹೆಸರುವಾಸಿ. ವೈದ್ಯೆಯಾಗಿ ಕೈತುಂಬಾ ಕಾಸು ಕಾಣುತ್ತಾ ಬದುಕುವ ಮಾದರಿಗೆ ಬೆನ್ನುತೋರಿ, ನೂರಾರು ಮಂದಿ ಗ್ರಾಮೀಣ ಮಹಿಳೆಯರಿಗೆ ಬೆನ್ನೆಲುಬಾಗಬೇಕೆನ್ನೋ ಅವ್ರ ನಿರ್ಧಾರ ಇವತ್ತು ಸತ್ಫಲ ಕೊಡುತ್ತಿದೆ.

    ವೈದ್ಯೆಯಾಗಿ, ಉದ್ಯಮಿಯಾಗಿ ನೂರಾರು ಮನೆಬೆಳಗಿದ ಈ ಛಲವಂತೆಗೆ ಹೊಸದುರ್ಗ ನಗರದ ಪುರಸಭಾ ಸದಸ್ಯ ಸ್ಥಾನ ಸಲೀಸಾಗಿ ದಕ್ಕಿತು. ಅಧಿಕಾರ ಸಿಕ್ಕಿತೆಂದು ಸುಮ್ಮನೆ ಕೂರುವ ಜಾಯಮಾನ ಇವರದ್ದಲ್ಲ. ಈಗಾಗಲೇ ನಾಲ್ಕೈದು ಕಡೆ ಸ್ವಂತ ಖರ್ಚಿನಲ್ಲೇ ಶುದ್ಧ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಕೆಲ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ ಡಾ.ಸ್ವಾತಿ ಪ್ರದೀಪ್.

    ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ ವಿದ್ಯುತ್ ಇಲ್ಲದಿದ್ದರೂ ಯುಪಿಎಸ್ ಮೂಲಕ ರಾತ್ರಿಯೆಲ್ಲ ಬೆಳಗುವ ಬೀದಿ ದೀಪಗಳನ್ನು ಅಳವಡಿಸಿದ ಸಾಧನೆಯ ಗರಿ ಡಾ.ಸ್ವಾತಿಯವರ ಮುಡಿಗೇರಿದೆ. ಒಟ್ಟಿನಲ್ಲಿ ಸ್ಟೆಥಾಸ್ಕೋಪ್ ಹಿಡಿದು ರೋಗಿಯ ಎದೆಬಡಿತ ಕೇಳಿ ಮದ್ದು ಕೊಡಬೇಕಿದ್ದ ಕೈಗಳು, ಇಂದು ಅದೆಷ್ಟೋ ಮನೆಯ ದೀಪ ಬೆಳಗಲು ಕಾರಣವಾಗಿವೆ.

    ಮಂಗಳ ಮರಕಲೆ:
    ಅಂಗವೈಕಲ್ಯ ಶಾಪವಲ್ಲ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬ ಮಾತಿಗೆ ಸಾಧಕಿ ಮಂಗಲಾ ಮರಕಲೆ ಅತ್ಯುತ್ತಮ ಸಾಕ್ಷಿ. ಬೀದರ್ ತಾಲೂಕು ಅಲಿಯಂಬರ್ ಗ್ರಾಮದ ಮಂಗಲಾ ಮರಕಲೆ ಎಂಬ ವಿಶೇಷಚೇತನ ಮಹಿಳೆಯ ಯೋಶೋಗಾಥೆ ಇದು. ತನ್ನಂತೆ ಯಾವ ಮಹಿಳೆಯೂ ಸಮಾಜದಲ್ಲಿ ಸಂಕಷ್ಟ ಅನುಭವಿಸಬಾರದು. ನೊಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಇವರು ಹಗಲಿರುಳು ಶ್ರಮಿಸುತ್ತಿದ್ದಾರೆ.

    ವಿಶೇಷಚೇತನ ಮಹಿಳೆಯರು, ವಿಧವೆಯರು, ಶೋಷಿತ ಮಹಿಳೆಯರು ಹಾಗೂ ಬಡ ವಿದ್ಯಾರ್ಥಿನಿಯರಿಗೆ ಟೈಲರಿಂಗ್, ಕಂಪ್ಯೂಟರ್, ಬ್ಯೂಟಿ ಪಾರ್ಲರ್ ಬಗ್ಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಈವರೆಗೆ ಅಂದಾಜು 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ತರಬೇತಿ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆ ಬಯಸದೇ 10 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ.

    ನೊಂದ ಮಹಿಳೆಯರಿಗಾಗಿಯೇ ಇವರು ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಮಹಿಳೆಯರಲ್ಲಿ ಆರ್ಥಿಕ ಬಲ ತುಂಬಿ, ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

    ಆಶಾ:
    ಸಾಧನೆಗೆ ವಯಸ್ಸು ಅಥವಾ ಗಂಡು ಹೆಣ್ಣೆಂಬ ಬೇಧ ಇಲ್ಲವೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸಾಹಸಿ ಉದ್ಯಮಿ. ಇಂದು ಕರ್ನಾಟಕದೊಳಗಷ್ಟೇ ಅಲ್ಲದೇ, ಹೊರರಾಜ್ಯಗಳ ಮನೆಗಳಲ್ಲೂ ಸ್ವಚ್ಛತೆ ಮತ್ತು ತಾಜಾತನದ ಪರಿಮಳ ಬೀರುವಂತೆ ಮಾಡಿ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದಾರೆ. ಆಶಾ ಎನ್.ಆರ್. ವಿಜ್ಞಾನ ಪದವೀಧರೆಯಾದ ಅವರು, 1994ರಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕೇಬಿಟ್ರು. ಆಗ ಶುರುವಾಗಿದ್ದೇ. ಆಶಾ ಕೆಮಿಕಲ್ಸ್ ಫಾರ್ ಮ್ಯಾನು ಫ್ಯಾಕ್ಚರಿಂಗ್ ಆಫ್ ಹೌಸ್ ಹೋಲ್ಡ್ ಕ್ಲೀನಿಂಗ್ ಪ್ರಾಡಕ್ಟ್ಸ್ ಸಂಸ್ಥೆ.

    ರಾಜ್ಯದಲ್ಲಿ ಮನೆ ಸ್ವಚ್ಛತಾ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತಮ್ಮ ಸಂಸ್ಥೆಯಿಂದ ಸದ್ಯ 16 ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, 60 ಮಂದಿ ಸಿಬ್ಬಂದಿಯಿದ್ದಾರೆ. ದಕ್ಷಿಣ ಭಾರತಾದ್ಯಂತ ಸರಿಸುಮಾರು 200 ಮಂದಿ ಹಂಚಿಕೆದಾರರ ನೆರವಿಂದ ಸಂಸ್ಥೆಯ ಉತ್ಪನ್ನಗಳು ಮನೆ ಮಾತಾಗಿವೆ. ಇಷ್ಟೆಲ್ಲಾ ಸಾಧನಗೈದಿರೋ ಆಶಾ ಅವರು ತಮ್ಮ ಯಶೋಗಾಥೆಯಿಂದ ಪ್ರೇರಿತರಾದ ಮಹಿಳೆಯರಿಗೆ ಪ್ರೋತ್ಸಾಹಿಸಲು ತರಬೇತಿ ಮತ್ತು ಸಮಾಲೋಚನೆ ನಡೆಸುತ್ತಾರೆ.

    ಸಾಲದ್ದಕ್ಕೆ ಕಾಲೇಜು ಮಟ್ಟದಲ್ಲೇ ವಿದ್ಯಾರ್ಥಿನಿಯರಲ್ಲಿ ಉದ್ಯಮಗಳಲ್ಲಿ ಮಹಿಳೆಯರು ಮುನ್ನುಗ್ಗಬೇಕೆಂಬ ಪ್ರೇರಣೆ ಹುಟ್ಟಿಸಲು ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ಭಾಗವಹಿಸುತ್ತಾರೆ. ತಮ್ಮ ಅನುಭವದ ಬುತ್ತಿ ಬಿಚ್ಚಿ, ಮುಂದಿನ ಪೀಳಿಗೆಗೂ ಉದ್ಯಮ ಜಗತ್ತಿನ ಅವಲೋಕನ ಮಾಡಿಸುತ್ತಾರೆ.

    ಗಂಗಾ ಲಕ್ಷ್ಮಮ್ಮ:
    ಗೌರಿಬಿದನೂರು ತಾಲೂಕು ಕಲ್ಲೂಡಿ ಗ್ರಾಮದ ಗಂಗಲಕ್ಷ್ಮಮ್ಮ ಹೆಚ್ಚು ಓದಿದವರಲ್ಲ. ಹಾಗಂತ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ರಾಜಕೀಯದಲ್ಲೂ ಸೈ ಎನಿಸಿಕೊಂಡ ಇವರು, 1989ರಲ್ಲೇ ಮಂಡಲ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆದರು. ಗ್ರಾಮೀಣ ಮಹಿಳೆಯರು ಹಣಕಾಸು ವಿಚಾರದಲ್ಲಿ ಸಬಲರಾಗಬೇಕು ಎನ್ನುವುದು ಇವರ ಕನಸಾಗಿತ್ತು. ಅಂದು ಕಂಡ ಸ್ವಾವಲಂಬಿ ಕನಸನ್ನು ಇಂದು ನನಸು ಮಾಡಿದ್ದಾರೆ ಗಂಗಲಕ್ಷ್ಮಮ್ಮ. ಕೆಲ ವರ್ಷಗಳ ಹಿಂದೆ ವಿಶ್ವ ಯೋಜನೆಯಡಿ ತರಬೇತಿ ಪಡೆದ ಗಂಗಲಕ್ಷ್ಮಮ್ಮ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹಾಗೂ ಮಸಾಲೆ ಪದಾರ್ಥ ಸಿದ್ಧಪಡಿಸಿ ಮಾರಾಟದಲ್ಲಿ ತೊಡಗಿಸಿಕೊಂಡರು. ಈ ಜೀವನೋಪಾಯ ಕಾಯಕವನ್ನು ಗ್ರಾಮದ ಮಹಿಳೆಯರಿಗೂ ಕಲಿಸಿಕೊಟ್ಟರು.

    ಇದರ ಫಲವಾಗಿ ಇಂದು ಕಲ್ಲೂಡಿ ಗ್ರಾಮದ 400ಕ್ಕೂ ಹೆಚ್ಚು ಕುಟುಂಬದ ಮಹಿಳೆಯರು ಇದೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇವರೆಲ್ಲರಿಗೂ ಬೆನ್ನೆಲುಬಾಗಿ ಗಂಗಲಕ್ಷ್ಮಮ್ಮ ನಿಂತಿದ್ದಾರೆ. ಇವರು ತಯಾರಿಸುವ ಹಪ್ಪಳವು ಕಲ್ಲೂಡಿ ಹಪ್ಪಳ ಎಂದೇ ಖ್ಯಾತಿ ಪಡೆದಿದೆ. ಅಲ್ಲದೇ, ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನೂ ಪ್ರಾರಂಭಿಸಿದ್ದಾರೆ. ಈ ಸಂಘದಲ್ಲಿ ಕೋಟ್ಯಂತರ ರೂಪಾಯಿಯಷ್ಟು ವ್ಯವಹಾರ ನಡೆಯುತ್ತಿದೆ. ಸೇವಾ ಸಾಧಕಿ ಗಂಗಲಕ್ಷ್ಮಮ್ಮ ಈವರೆಗೆ ಅನೇಕ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

    ಮಂಗಳಾಂಬಿಕೆ:
    ರೇಷ್ಮೆ ನಗರಿಯ ರೇಷ್ಮೆಯಂಥ ನುಣುಪಾದ ವ್ಯಕ್ತಿತ್ವದ ಹೆಣ್ಮಗಳು ಛಲವಂತೆ, ಹಠಮಾರಿ, ಬಂಡೆಕಲ್ಲಿನಂತ ಗಟ್ಟಿಗಿತ್ತಿಯೂ ಆಗಿರ್ತಾಳೆ ಅನ್ನೋದು ರಾಮನಗರದ ಮಂಗಳಾಂಬಿಕೆಯವ್ರನ್ನು ನೋಡಿಯೇ ತಿಳೀಬೇಕು.

    ದಿನ ಬೆಳಗಾದರೆ ನಿಮ್ಮ ಮತ್ತು ಮನೆಯ ಹಿರಿಯರ ಆರೋಗ್ಯದ ಗುಟ್ಟಾಗಿ ಮನೆಮಾತಾಗಿರುವ ಅಮೃತ್ ನೋನಿ ಬಗ್ಗೆ ಕೇಳದವರಿಲ್ಲ. ಅಮೃತ್ ನೋನಿಯನ್ನು ಆರ್ಡರ್ ಮಾಡಿದಾಕ್ಷಣ ತ್ವರಿತವಾಗಿ ನಿಮ್ಮ ಮನೆ ತಲುಪಿಸೋ ಪವಾಡಗಿತ್ತಿಯೇ ಈ ಮಂಗಳಾಂಬಿಕೆಯವರು. ತಮ್ಮ ಚಾಣಾಕ್ಷ ವ್ಯವಹಾರಿಕೆಯಿಂದ ಅಮೃತ್ ನೋನಿ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಅನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

    2017ರಲ್ಲಿ ರಾಮನಗರದಲ್ಲಿ ಓಂ ಶ್ರೀ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಅಮೃತ್ ನೋನಿಯ ವಿತರಣೆ ಶುರುಮಾಡಿದರು. ಇವತ್ತು ಹಳ್ಳಿ ಹಳ್ಳಿಗಳಲ್ಲೂ ಅಮೃತ್ ನೋನಿ ಸಿಗುತ್ತೆ. ಈ ಮ್ಯಾಜಿಕಲ್ ವಿತರಣೆಯ ಹಿಂದೆ ಮಂಗಳಾಂಬಿಕೆ ಅಂಡ್ ಟೀಮಿನ ಅಪರಿಮಿತ ಶ್ರಮವಿದೆ.

    ಪುಟ್ಟ ಸಂಸ್ಥೆಯೊಂದು ಇಂದು ನೂರೈವತ್ತು ಮಂದಿಗೆ ಉದ್ಯೋಗ ಕೊಟ್ಟಿದೆ. ಅವರಲ್ಲಿ ಹೆಂಗಳೆಯರೇ 105 ಮಂದಿ. ದಿನೇ ದಿನೇ ವ್ಯವಹಾರ ವಿಸ್ತರಿಸುತ್ತಿರುವಂತೇ ಮಂಗಳಾಂಬಿಕೆಯವರ ಹೃದಯವಂತಿಕೆಯೂ ವಿಶಾಲವಾಗುತ್ತಿದೆ. ತಮ್ಮ ಗಳಿಕೆಯಲ್ಲಿ ಶ್ರೀಗುರು ಯತೀಂದ್ರ ಚಾರಿಟಬಲ್ ಟ್ರಸ್ಟನ್ನು ಸ್ಥಾಪಿಸಿದ್ದು ಅಸ್ವಸ್ಥ ಮಕ್ಕಳ ಶಸ್ತ್ರಚಿಕಿತ್ಸೆ, ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಹೊಂಗಿರಣ ಚಾರಿಟಬಲ್ ಟ್ರಸ್ಟಿನ ಮೂಲಕ ಬಡಮಕ್ಕಳಿಗೆ ಊಟಕ್ಕೆ ನೆರವು, ಪ್ರೇರಣ ರಿಸೋರ್ಟ್ ಟ್ರಸ್ಟಿಗೆ ಅಗತ್ಯ ಔಷಧಗಳ ಪೂರೈಕೆಗೂ ಹೆಗಲಾಗಿದ್ದಾರೆ. ತನ್ನ ಯಶಸ್ಸಿನ ಜೊತೆಗೆ ನೂರಾರು ಮಹಿಳೆಯರಿಗೂ ದುಡಿಮೆಗೊಂದು ಮೂಲ ಕಂಡುಕೊಟ್ಟ ಸಂತೃಪ್ತಿ ಮಂಗಳಾಂಬಿಕೆ ಅವರದ್ದು.

    ರಾಮಕ್ಕ:
    ಇವರು ಒಂದಕ್ಷರವೂ ಕಲಿತಿಲ್ಲ, ಆದರೆ ಅಂಧಕಾರದಲ್ಲಿದ್ದ ನೂರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಇವರಿಗೆ ಓದು ಬರಹ ಗೊತ್ತಿಲ್ಲ ನಿಜ. ಆದರೆ ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೆರವಾಗುತ್ತಿದ್ದಾರೆ. ತುಮಕೂರು ಭಾಗದಲ್ಲಿ ಇವರ ಹೆಸರು ಮನೆಮಾತು. ಇವರೇ ಅಪರೂಪದ ಸಾಧಕಿ ರಾಮಕ್ಕ.

    ರಾಮಕ್ಕ ತುಮಕೂರು ನಗರದ ಹಂದಿಜೋಗರ ಕಾಲೋನಿಯ ನಿವಾಸಿ. ಇಂದು ರಾಮಕ್ಕ ಸಮಾಜ ಸೇವೆಯಿಂದ ದೀನ ದಲಿತರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಶಾಲೆಯ ಮುಖವನ್ನೇ ಕಾಣದ ಅಲೆಮಾರಿ ಸಮುದಾಯದ ಮಕ್ಕಳಿಗಾಗಿ ಟೆಂಟ್ ಶಾಲೆ ತೆರೆದು ಅವರ ವಿದ್ಯಾರ್ಜನೆಗೆ ನೆರವಾಗಿದ್ದಾರೆ. ಇವರ ಸಹಾಯದಿಂದ ಶಿಕ್ಷಣ ಪಡೆದ ನೂರಾರು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಅನೇಕ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

    ಅಲೆಮಾರಿ ಸಮುದಾಯದ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿದ ಹಿರಿಮೆ ರಾಮಕ್ಕ ಅವರಿಗೆ ಸಲ್ಲಲೇಬೇಕು. ಇನ್ನು ಅಲೆಮಾರಿ ಸಮುದಾಯದವರಲ್ಲಿ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರೇಷನ್ ಕಾರ್ಡ್, ಮಾಸಾಶನ, ಹೆಲ್ತ್ ಕಾರ್ಡ್ ಮುಂತಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೇ ಖುದ್ದು ಫಲಾನುಭವಿಗಳ ಜೊತೆ ಹೋಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಡುತ್ತಾರೆ.