Tag: Narendra Mdoi

  • ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

    ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

    ನವದೆಹಲಿ: ಉತ್ತರಾಕಾಶಿಯಲ್ಲಿ ಸುರಂಗ (Uttarakashi Tunnel) ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣೆಗೊಂಡ ಕಾರ್ಮಿಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸಿದ್ದಾರೆ.

    ದೂರವಾಣಿ ಮೂಲಕ ಕಾರ್ಮಿಕರ ಜೊತೆಗೆ ಮಾತನಾಡಿರುವ ಪ್ರಧಾನಿ, ನೀವು ಸುರಕ್ಷಿತವಾಗಿ ಹೊರ ಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ ಬದರಿನಾಥ ಆರ್ಶಿವಾದ ಎಂದಿದ್ದಾರೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಎಲ್ಲವೂ ಧೈರ್ಯ ಮೆಚ್ಚುವಂತದ್ದು, ಒಬ್ಬರಿಗೊಬ್ಬರು ಆತ್ಮ ವಿಶ್ವಾಸ ತುಂಬಿದ್ದೀರಿ ಅದು ದೊಡ್ಡ ವಿಚಾರವಾಗಿದೆ. ನಾನು ಸಿಎಂ ಸೇರಿ ಎಲ್ಲರಿಂದ ಮಾಹಿತಿ ಪಡೆಯುತ್ತಿದ್ದೆ. ಮಾಹಿತಿ ಪಡೆದರೂ ನಿಮ್ಮ ಬಗೆಗಿನ ಚಿಂತೆ ಕಡಿಮೆಯಾಗುತ್ತಿರಲಿಲ್ಲ. ನಿಮ್ಮ ಕುಟುಂಬಸ್ಥರ ಪುಣ್ಯವೂ ಕಾರಣವಾಗಿರುತ್ತದೆ. ಎಲ್ಲರೂ ಸುರಕ್ಷಿತವಾಗಿ ಹೊರ ಬಂದದ್ದೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

    ಸದ್ಯ ಕಾರ್ಮಿಕರಿಗೆ ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲವು ರೀತಿಯ ವೈದ್ಯಕೀಯ ತಪಾಸಣೆ ನಡೆದಿದೆ. ಇನ್ನು ಪ್ರಧಾನಿ ಮೋದಿ, ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಚಿವ ವಿ.ಕೆ ಸಿಂಗ್ ಸೇರಿ ಎಲ್ಲರಿಗೂ ಕಾರ್ಮಿಕರು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಅಗತ್ಯ ನೆರವು ನೀಡಿ, ಹೊರ ಕರೆತಂದಿದ್ದಕ್ಕೆ ಕೂಡ ಕಾರ್ಮಿಕರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಣೆ ಮಾಡುತ್ತಿದ್ದಂತೆಯೇ ಎಕ್ಸ್ ಮಾಡಿರುವ ಮೋದಿ, ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ಹೇಳುತ್ತೇನೆ.

    ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಸಾಕಷ್ಟು ಪ್ರಶಂಸಿನೀಯ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ ಎಂದು ತಿಳಿಸಿದರು.

    ಉತ್ತರಕಾಶಿ ಜಿಲ್ಲೆಯ ಸಿಲ್‍ಕ್ಯಾರ ಹಾಗೂ ದಂಡಲ್‍ಗಾಂವ್‍ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ 41 ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದು, 17 ದಿನಗಳ ಬಳಿಕ ಸತತ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಮಂಗಳವಾರ ರಾತ್ರಿ ಹೊರತರಲಾಯಿತು.

  • 2 ದಿನವೂ ಬೆಂಗಳೂರಿನಲ್ಲಿ ಮೋದಿ ಹವಾ

    2 ದಿನವೂ ಬೆಂಗಳೂರಿನಲ್ಲಿ ಮೋದಿ ಹವಾ

    ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) 2ನೇ ದಿನವೂ ಮೋದಿ ವರ್ಚಸ್ಸು ಜೋರಾಗಿದೆ. ನ್ಯೂ ತಿಪ್ಪಸಂದ್ರದಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ಆರಂಭವಾಗಿದೆ.

    6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ರೋಡ್ ಶೋ ಸಾಗಲಿದೆ. ಮಹಾದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗುತ್ತಿದೆ. ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ನಮಸ್ಕರಿಸಿದ ಮೋದಿ ರೋಡ್ ಶೋ ಆರಂಭಿಸಿದ್ದಾರೆ.

    ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯುತ್ತಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಿದ್ದಾರೆ. ಮೋದಿಯನ್ನು ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದಾರೆ. ರಸ್ತೆಯುದ್ದಕ್ಕೂ ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸ ಪಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಹೂಮಳೆ ಸುರಿಸಿ ಸಂಭ್ರಮಿಸುತ್ತಿದ್ದಾರೆ. ಜನರೆಡೆಗೆ ಮೋದಿಯವರು ಹೂ ಎಸೆದು, ಜನರತ್ತ ಕೈಬೀಸುತ್ತಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ.

  • ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಬೆಂಗಳೂರು: ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ (Narendra Modi) ಬಂದಿದ್ದಾರೆ. ಬೆಂಗಳೂರಿನ ಸೋಮೇಶ್ವರ ಸಭಾಭವನದಿಂದ ರಸ್ತೆಯಿಂದ ಅದ್ಧೂರಿಯಾಗಿ ರೋಡ್ ಶೋ (Road Show) ಪ್ರಾರಂಭಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆಸುತ್ತಿದ್ದಾರೆ.

    ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯುತ್ತಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯುತ್ತಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಿದ್ದಾರೆ. ರೇಷ್ಮೆಯ ಕೇಸರಿ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿದ್ದಾರೆ. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್‌ ನೀಡುತ್ತಿದ್ದಾರೆ.

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಹೂಮಳೆ ಸುರಿಸಿ ಸಂಭ್ರಮಿಸಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ.

    ಮೋದಿ ಸಂಚರಿಸುತ್ತಿರುವ ರಸ್ತೆಗಳು: ಬ್ರಿಗೇಡ್ ಮಿಲೇನಿಯಂ ರೋಡ್, ಟಿಎಂಸಿ ಲೇಔಟ್, ಮಾರೇನಹಳ್ಳಿ ರೋಡ್, ಜೆಪಿನಗರ 5ನೇ ಹಂತ, ಜಯನಗರ ಮೆಟ್ರೋ ಸ್ಟೇಷನ್, ಜಯನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್, ಆರ್.ವಿ ರೋಡ್, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಮಾಧವ ರಾವ್ ಸರ್ಕಲ್, ದೊಡ್ಡ ಗಣಪತಿ ಟೆಂಪಲ್ ಜಂಕ್ಷನ್, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಟಿ.ಆರ್. ಮಿಲ್ ಜಂಕ್ಷನ್, ಶಿರ್ಸಿ ಸರ್ಕಲ್, ಬಿನ್ನಿಮಿಲ್ ಸರ್ಕಲ್, ಕುಷ್ಠರೋಗ ಆಸ್ಪತ್ರೆ, ಮಾಗಡಿ ರೋಡ್ ಟೋಲ್‍ಗೇಟ್.

    ವೀರೇಶ್ ಥಿಯೇಟರ್, ಬಿಎಸ್‍ಎನ್‍ಎಲ್ ವಿಜಯನಗರ , ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಹಾವನೂರು ಸರ್ಕಲ್, ಬಸವೇಶ್ವರನಗರ, ಶಂಕರಮಠ, ಮೋದಿ ಹಾಸ್ಪಿಟಲ್ ಸಿಗ್ನಲ್, ನವರಂಗ್ ಬ್ರಿಡ್ಜ್, ಮಹಾಕವಿ ಕುವೆಂಪು ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಕಾಡು ಮಲ್ಲೇಶ್ವರ ದೇವಸ್ಥಾನ. ಇದನ್ನೂ ಓದಿ: ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

  • ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

    ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಬೆಂಗಳೂರಿನ ನೈಸ್ ರೋಡ್ ಜಂಕ್ಷನ್‍ನಿಂದ ಸುಮನಹಳ್ಳಿಯವರೆಗೆ ಅದ್ಧೂರಿಯಾಗಿ ರೋಡ್ ಶೋ ನಡೆಯಿತು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 5 ಕಿ.ಮೀನಲ್ಲಿ ರೋಡ್ ಶೋ ನಡೆಸಿದರು.

    ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಯಲಹಂಕ, ದಾಸರಹಳ್ಳಿ, ಆರ್.ಆರ್ ನಗರ, ಯಶವಂತಪುರ, ಬ್ಯಾಟರಾಯನಪುರ, ಪುಲಿಕೇಶಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಬಿಜೆಪಿ ಚಿಹ್ನೆ ಇರುವ ಪೇಟ ಧರಿಸಿ ಮೋದಿ ರೋಡ್ ಶೋ ನಡೆಸಿದರು. ಮೋದಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಸಾಥ್ ನೀಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್‌ ಶೋ  ನಡೆಯಿತು.

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದ್ದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಪೇಟ ಧರಿಸಿ ಮಿಂಚಿದರು. ಜೊತೆಗೆ ಜನರತ್ತ ಕೈಬೀಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿತ್ತು.

    ಮೋದಿ ರೋಡ್ ಶೋ ಭದ್ರತೆಗೆ ಬೆಂಗಳೂರು 7 ಸುತ್ತಿನ ಕೋಟೆಯಂತಾಗಿತ್ತು. ರಸ್ತೆಗೆ ಬ್ಯಾರಿಕೇಡ್‍ಗಳನ್ನು ಹಾಕಿ, ಅಂಗಡಿ-ಮುಂಗಟ್ಟುಗಳನ್ನು ಕ್ಲೋಸ್ ಮಾಡಿ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ ಹತ್ತು ಕೆಎಸ್‍ಆರ್‌ಪಿ ತುಕಡಿ, 50 ಮೀಟರ್ ಒಬ್ಬರಂತೆ ಪ್ರತಿ ಬಿಲ್ಡಿಂಗ್ ಮೇಲೆ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

    ಬೀದರ್, ವಿಜಯಪುರ, ಬೆಳಗಾವಿ ಇಂದು ಮೋದಿ ಪ್ರಚಾರವನ್ನು ನಡೆಸಿ ಬೆಂಗಳೂರಿಗೆ ಆಗಮಿಸಿದ್ದರು. ಮೋದಿಯನ್ನು ನೋಡಲು ಸಾವಿರಾರು ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿ “ಮೋದಿ ಮೋದಿ” ಎಂದು ಜಯಘೋಷ ಹಾಕುತ್ತಿದ್ದರು.

    ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು