Tag: Narayanapur Dam

  • ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ ಪದಾರ್ಥಗಳಿಗಾಗಿ ನದಿ ದಾಟಲು ಆಗದೆ ಪರದಾಡುತ್ತಿದ್ದಾರೆ.

    ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದರೂ, ಅಗತ್ಯ ವಸ್ತುಗಳಿಗಾಗಿ ಕುರ್ವಕುರ್ದ ಮತ್ತು ಕುರ್ವಕುಲ ನಡುಗಡ್ಡೆಗಳ ಜನ ಅರಗೋಲಿನಲ್ಲೇ ನದಿ ಪಕ್ಕದ ಡೊಂಗರಾಂಪುರಕ್ಕೆ ಬರುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರುವ ಮೂಲಕ ಜನರನ್ನು ಶಿಫ್ಟ್ ಆಗುವಂತೆ ಸೂಚನೆ ನೀಡಿತ್ತು. ಸ್ಥಳಾಂತರಗೊಳ್ಳಲು ಒಪ್ಪದ ಗ್ರಾಮಸ್ಥರು ತೆಪ್ಪದಲ್ಲೇ ಓಡಾಡುತ್ತಿದ್ದಾರೆ.

    ಜೀವ ರಕ್ಷಕ ಜಾಕೆಟ್‍ಗಳನ್ನು ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನಡುಗಡ್ಡೆಗಳ ಜನರ ಸುರಕ್ಷತೆಗಾಗಿ ಎನ್.ಡಿ.ಆರ್.ಎಫ್ ತಂಡ ಸ್ಥಳದ ವೀಕ್ಷಣೆಯನ್ನೂ ನಡೆಸಿದೆ. ಇನ್ನೂ ಕುರ್ವಕುಲ ದತ್ತಾತ್ರೇಯ ಪೀಠಕ್ಕೆ ಭಕ್ತರು ಅರಗೋಲಿನಲ್ಲೇ ಬಂದು ಹೋಗುತ್ತಿದ್ದಾರೆ. ಭಕ್ತರು ಸೆಫ್ಟಿ ಜಾಕೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಬೋಟ್ ವ್ಯವಸ್ಥೆ ಮಾಡಬೇಕು ಎಂದು ನಡುಗಡ್ಡೆಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

  • ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ರಾಯಚೂರು: ಮಳೆಯಿಂದ ಜಿಲ್ಲೆಯ ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಕೃಷ್ಣನದಿಯ ಅಕ್ಕಪಕ್ಕದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಕಾಡುತ್ತಿದೆ.

    ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾದ ಕಾರಣ ಕೃಷ್ಣನದಿಗೆ 50 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಸಂಜೆ 4 ಗಂಟೆ ವೇಳೆಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

    ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೃಷ್ಣಾ ನದಿಗೆ ಇಳಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

  • ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳ: ಜಿಲ್ಲಾಡಳಿತ ಹೈ ಅಲರ್ಟ್

    ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳ: ಜಿಲ್ಲಾಡಳಿತ ಹೈ ಅಲರ್ಟ್

    ಯಾದಗಿರಿ: ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ, ಕೃಷ್ಣ ನದಿಪಾತ್ರದ ನಿವಾಸಿಗಳಿಗೆ ಯಾದಗಿರಿ ಜಿಲ್ಲಾಡಳಿತ ಹೈ ಹಲರ್ಟ್ ಘೋಷಣೆ ಮಾಡಿದೆ.

    ಆಲಮಟ್ಟಿ ಜಲಾಶಯದ ಸದ್ಯದ ಒಳ ಹರಿವು 1,10,000 ಕ್ಯೂಸೆಕ್ ಇದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ನಾರಾಯಣಪುರ ಅಣೆಕಟ್ಟುಗೆ ಇಂದು ಸಂಜೆಯ ವೇಳೆಗೆ 50,000 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಲಿದೆ. ನಾಳೆ ಯಾವುದೇ ಸಮಯದಲ್ಲಿ ನಾರಾಯಣಪುರ ಅಣೆಕಟ್ಟಿನಿಂದ, ಕೃಷ್ಣ ನದಿಗೆ ಭಾರೀ ಪ್ರಮಾಣದ ನೀರು ಹರಿಸುವ ಸಾಧ್ಯತೆಯಿದೆ ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

    ಅಪಾರ ಪ್ರಮಾಣದ ನೀರು ನದಿಗೆ ಬಿಡುತ್ತಿರುವ ಹಿನ್ನೆಲೆ ಪ್ರವಾಹದ ಭೀತಿ ಉಂಟಾಗಿದೆ. ಈ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿ ಸುತ್ತೋಲೆ ಸಹ ಹೊರಡಿಸಿದೆ. ಆದ್ದರಿಂದ ಕೃಷ್ಣ ನದಿ ಪಾತ್ರದ ಜನರಿಗೆ ಮತ್ತು ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.

    ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಈ ಹಿನ್ನೆಲೆ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಆಲಮಟ್ಟಿ ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಸಂಜೆ ವೇಳೆಗೆ ನಾರಾಯಣಪುರ ಅಣೆಕಟ್ಟಿಗೆ ನೀರು ಹರಿ ಬಿಡಲು ನಿರ್ಧರಿಸಲಾಗಿದೆ. ನಾಳೆ ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣ ನದಿಗೆ ನೀರು ಹರಿಬಿಡಲಾಗುತ್ತಿದೆ.

    ಮಹಾರಾಷ್ಟ್ರದಲ್ಲಿ ಭಾರೀ ಮಳೆ:
    ಮುಂಬೈ ಸೇರಿದಂತೆ ಮಹಾರಾಷ್ಟ್ರದ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ರಸ್ತೆ ಮತ್ತು ರೈಲ್ವೇ ಹಳಿಗಳು ಜಲಾವೃತಗೊಂಡಿದ್ದವು. ಕೆಲ ದಿನಗಳ ಕಾಲ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ವಿಪರೀತ ಸಾವು ನೋವು ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಈ ಹಿಂದೆ `ಪಶ್ಚಿಮ ರೈಲ್ವೇ ವಿಭಾಗದ 13 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟ್ರಾಫಿಕ್ ನಿಯಂತ್ರಿಸಲು 500ಕ್ಕೂ ಅಧಿಕ ಸಂಚಾರಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

     

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಆಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ನೀರು

    ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ನೀರು

    ಯಾದಗಿರಿ: ಉನ್ನತ ಪ್ರಾಧಿಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಇಂದು ಮುಂಜಾನೆ 8 ಗಂಟೆಯಿಂದ ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಈ ನಾರಾಯಣಪುರ ಜಲಾಶಯ ಬರುತ್ತದೆ. ರಾಯಚೂರಿನ ಆರ್‌ಟಿಪಿಎಸ್ ಬಳಕೆಗಾಗಿ 5800 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕೃಷ್ಣಾ ನದಿ ನೀರು ಹಂಚಿಕೆ ಪ್ರಾಧಿಕಾರ ನಿರ್ದೇಶನ ನೀಡಿದ್ದು, ಇಂದಿನಿಂದ ನದಿಗೆ ನೀರು ಹರಿಸಲಾಗುತ್ತಿದೆ.

    ಭಾರೀ ಪ್ರಮಾಣದಲ್ಲಿ ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾಡಳಿತ ಅಲರ್ಟ್ ಘೋಷಣೆ ಮಾಡಿದೆ.

    ನಾರಾಯಣಪುರ ಜಲಾಶಯ ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯ ಜನರ ಜೀವನಾಡಿ ಆಗಿದೆ. ಒಟ್ಟು 30 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯ ಇದಾಗಿದ್ದು, ಸದ್ಯ 12 TMC ನೀರು ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಿದೆ. ಮಹಾರಾಷ್ಟ್ರದಲ್ಲಿ ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಜಲಾಶಯದ ಒಳ ಹರಿವು ಹೆಚ್ಚಾಗುತ್ತಿದೆ.