Tag: Narayana Achar

  • ಗಜಗಿರಿ ಗುಡ್ಡ ಕುಸಿತ – ಕೊಳೆತ ಸ್ಥಿತಿಯಲ್ಲಿ ಸಿಕ್ತು ಮೂರನೇ ಮೃತದೇಹ

    ಗಜಗಿರಿ ಗುಡ್ಡ ಕುಸಿತ – ಕೊಳೆತ ಸ್ಥಿತಿಯಲ್ಲಿ ಸಿಕ್ತು ಮೂರನೇ ಮೃತದೇಹ

    ಮಡಿಕೇರಿ: ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಐವರಲ್ಲಿ ಇಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಂತಹ ಮೃತ ದೇಹದ ಸಹಾಯಕ ಅರ್ಚಕರಾದ ರವಿ ಕಿರಣ್ ಎನ್ನಲಾಗಿದೆ.

    ಇಂದು ದೊರೆತಿರುವ ಮೃತದೇಹ ಕೇರಳ ರಾಜ್ಯದಿಂದ ತಲಕಾವೇರಿಗೆ ಸಹಾಯಕ ಅರ್ಚಕ ವೃತ್ತಿಗೆ ಬಂದಿದ್ದ ರವಿ ಕಿರಣ್ ಎಂದು ಜಿಲ್ಲಾಡಳಿತ ಅಧಿಕೃತವಾಗಿ ತಿಳಿಸಿದೆ. ಮಧ್ಯಾಹ್ಮ ನಾಗತೀರ್ಥ ಎನ್ನುವ ಸ್ಥಳದಲ್ಲಿ ಸಂಪೂರ್ಣ ಕೊಳೆತು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಮೃತದೇಹ ದೊರಕಿದೆ.

    ಗುಡ್ಡ ಕುಸಿತದಿಂದ ಇದುವರೆಗೆ ಕಣ್ಮರೆಯಾಗಿದ್ದ ಐವರಲ್ಲಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿವೆ. ಉಳಿದಂತೆ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಪತ್ನಿ ಶಾಂತಾ ಹಾಗೂ ಮಂಗಳೂರು ಮೂಲದ ಮತ್ತೋರ್ವ ಸಹಾಯಕ ಅರ್ಚಕ ಪತ್ತೆಯಾಗಬೇಕಿದೆ. ಈಗಾಗಲೇ ಎನ್.ಡಿ.ಆರ್.ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರು ಕಣ್ಮರೆಯಾದವರಿಗೆ ತೀವ್ರ ಶೋಧವನ್ನು ಮುಂದುವರೆಸಿದ್ದಾರೆ.

  • ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    – ಬೆಂಗಳೂರಲ್ಲಿ 2 ಸೈಟ್, ಮಡಿಕೇರಿಯಲ್ಲಿ 100 ಎಕರೆ ಕಾಫಿ ತೋಟ
    – ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ
    – ಮನೆ ತೊರೆಯದ ಬಗ್ಗೆ ಸ್ಥಳೀಯ ನಿವಾಸಿಗಳ ಮಾತು

    ಮಡಿಕೇರಿ: ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರಾಣ ಕಳೆದುಕೊಂಡಿರುವ ನಾರಾಯಣಾಚಾರ್ ಅಪಾರ ಸಂಪತ್ತು ಹೊಂದಿದ್ದಾರೆ. ಹೀಗಾಗಿ ಸಂಪತ್ತನ್ನು ಉಳಿಸಲು ಹೋಗಿ ಮನೆ ಖಾಲಿ ಮಾಡದೇ ಅರ್ಚಕರು ಜೀವ ಕಳೆದುಕೊಂಡಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮನೆ ಖಾಲಿ ಮಾಡುವಂತೆ ಮಡಿಕೇರಿ ತಹಶೀಲ್ದಾರ್ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಪಾರ ಆಸ್ತಿ ಹೊಂದಿದ್ದ ನಾರಾಯಣಚಾರ್ ಅವರು ಮನೆ ತೊರೆದರೆ ಸಂಗ್ರಹಿಸಿದ ಸಂಪತ್ತು ಮತ್ತು ಕೃಷಿ ಉತ್ಪನ್ನಗಳು ಏನಾಗಬಹುದು ಎಂಬ ಚಿಂತೆ ಕಾಡಿರಬಹುದು. ಈ ಕಾರಣಕ್ಕೆ ಅವರು ಮನೆಯನ್ನು ತೊರೆಯಲು ಹಿಂದೇಟು ಹಾಕಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸಂಪತ್ತು ಎಷ್ಟಿತ್ತು?
    ನಾರಾಯಣಾಚಾರ್ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ ಇತ್ತು. ಇವೆರಡೂ ಪದಾರ್ಥಗಳ ಬೆಲೆಯೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಇತ್ತು. 50 ಬಾಟಲಿ ಜೇನು ಇತ್ತು. ಹೀಗಾಗಿ ಪದಾರ್ಥಗಳನ್ನು ಬಿಟ್ಟು ಮನೆ ಖಾಲಿ ಮಾಡಲು ಅರ್ಚಕರು ಹಿಂದೇಟು ಹಾಕುತ್ತಿದ್ದರು.

    ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹಸುಗಳನ್ನ ಹೊಂದಿದ್ದರು. ಅಲ್ಲದೇ ಕೊಡಗಿನ ಸುತ್ತ ಮುತ್ತ 100 ಎಕರೆ ಕಾಫಿ ತೋಟ ಹೊಂದಿದ್ದರು. ಜೊತೆಗೆ ಬೆಂಗಳೂರಿನಲ್ಲಿ 2 ಸೈಟ್ ಹೊಂದಿದ್ದಾರೆ. ಈ ಮೂಲಕ ನಾರಾಯಣಾಚಾರ್ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿ ಇದೆ ಎಂಬುದರ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ.

    ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಇರಬಹುದು. ಬ್ರಹ್ಮಕುಂಡಿಕೆಯಲ್ಲಿ ಹಾಕಲಾಗುತ್ತಿದ್ದ ನಾಣ್ಯಗಳನ್ನು ಆಚಾರ್ ಕೊಂಡ್ಯೊಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ಕೋಣೆಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

    ತಲಕಾವೇರಿ ದೇವಸ್ಥಾನದ ಮುಖ್ಯಸ್ಥ ಕೋಡಿ ಮೋಟಯ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾರಾಯಣಾಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದಿಂದ ಬಂದಿದ್ದಾರೆ. ಹೀಗಾಗಿ ಸಂಪತ್ತು ಹೊಂದಿರುವುದು ಸಹಜ. ಅವರಿಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲೆ, ತಲಾಂತರಗಳಿಂದ ಅರ್ಚಕ ವೃತ್ತಿಯನ್ನು ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಹಣವನ್ನು ಸಂಗ್ರಹಿಸಿರಬಹುದು ಎಂದಿದ್ದಾರೆ.

    ನಾರಾಯಣಾಚಾರ್ ಅವರಿಗೆ ಬೆಂಗಳೂರಿನಲ್ಲೂ ಸ್ವಂತ ಮನೆ ಆಸ್ತಿ ಇದೆ. ಅದನ್ನು ಅವರೇ ನನ್ನ ಬಳಿ ಹೇಳಿದ್ದರು. ಅತೀವ ಪ್ರಮಾಣದಲ್ಲಿ ಏಲಕ್ಕಿ, ಮೆಣಸು ಬೆಳೆಯುತ್ತಿದ್ದರು. ದೇವಸ್ಥಾನದಿಂದಲೂ ಅವರಿಗೆ ಹೆಚ್ಚು ಆದಾಯವಿತ್ತು. ಅಷ್ಟು ಪ್ರಮಾಣದ ಆಸ್ತಿ ಇಲ್ಲದಿದ್ದರೂ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದ ಕಾರಣ ಒಡವೆಗಳನ್ನು ಇಟ್ಟಿರಬಹುದು ಎಂದು ನಾರಾಯಣಾಚಾರ್ ಅಪಾರ ಸಂಪತ್ತನ್ನು ಹೊಂದಿದ್ದಾರೆ ಎನ್ನುವ ಊಹಾಪೋಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

  • ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.

    ಮಣ್ಣಿನಡಿ ಸಿಲುಕಿದ್ದ ಮತ್ತೊಂದು ಮೃತ ದೇಹ ಪತ್ತೆಯಾಗಿದ್ದು, ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತಿಸಲಾಗಿದೆ. ಕಂದಕದ ಕೆಳಗಿರುವ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.

    ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಸಿಬ್ಬಂದಿ ಮೃತದೇಹ ಹೊರತೆಗೆದು ಮೇಲಕ್ಕೆ ತರುತ್ತಿದ್ದಾರೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

    ಇಂದು ಬೆಳಗ್ಗೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಮತ್ತು ಓಮ್ನಿ ಎರಡು ಕಾರುಗಳು ಪತ್ತೆಯಾಗಿದ್ದವು. ಜೊತೆಗೆ ಒಂದು ಬೈಕ್ ಮತ್ತು ನಾಯಿಯ ಮೃತದೇಹ ಪತ್ತೆಯಾಗಿತ್ತು. ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿದ್ದವು.

  • ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

    ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

    ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ.

    ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ.

    ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿವೆ. ನಾರಾಯಣ ಆಚಾರ್ ಶೆಡ್‍ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿಲ್ಲ.

    ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟು 60 ಸಿಬ್ಬಂದಿ ಉಳಿದ ನಾಲ್ವರ ಕುರುಹುಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ.