Tag: Naragund

  • ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕರು – ಓರ್ವನ ಶವ ಪತ್ತೆ

    ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕರು – ಓರ್ವನ ಶವ ಪತ್ತೆ

    – ಇನ್ನೋರ್ವನಿಗಾಗಿ ಮುಂದುವರಿದ ಶೋಧ ಕಾರ್ಯ

    ಗದಗ: ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದ ನೀರಲ್ಲಿ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ನರಗುಂದ (Naragund) ತಾಲೂಕಿನ ಹುಣಸಿಕಟ್ಟಿ (Hunashikatti) ಬಳಿ ನಡೆದಿದೆ.

    ಓರ್ವ ಯುವಕನ ಶವ ಪತ್ತೆಯಾಗಿದ್ದು, 25 ವರ್ಷದ ಶಿವಪ್ಪ ಅಶೋಕಪ್ಪ ಅವರಾದಿ ಎಂದು ಗುರುತಿಸಲಾಗಿದೆ. ಹಾಗೂ 26 ವರ್ಷದ ಮಣಿಕಂಠ ಅಶೋಕ ಮಲ್ಲಾಪೂರ ಎಂಬುವವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಇದನ್ನೂ ಓದಿ: ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ ರೈತ – ಮುಳ್ಳು ಕಂಟಿಯಲ್ಲಿ ಶವ ಪತ್ತೆ

    ಜಿಲ್ಲೆಯಲ್ಲಿ ಭಾನುವಾರ ಸಾಯಂಕಾಲದಿಂದ ಧಾರಾಕಾರ ಮಳೆ ಸುರಿದಿದೆ. ಮಣಿಕಂಠನ ಹೆಂಡತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸುರಿದ ಮಳೆಯಿಂದಾಗಿ ಹೆಂಡತಿಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಪತ್ನಿಯನ್ನು ಕರೆತರಲು ತನ್ನ ಗೆಳೆಯ ಶಿವಪ್ಪನನ್ನು ಕರೆದುಕೊಂಡು ಹೋಗಿದ್ದ. ಹುಣಸಿಕಟ್ಟಿಯಿಂದ ನರಗುಂದಕ್ಕೆ ಬೈಕಿನಲ್ಲಿ ಹೊರಟಿದ್ದರು.

    ಮಾರ್ಗ ಮಧ್ಯೆ ಒಡ್ಡಿನ ಹಳ್ಳವೊಂದು ತುಂಬಿ ಹರಿಯುತ್ತಿತ್ತು. ನೀರಿನ ರಭಸ ಲೆಕ್ಕಿಸದೇ ಹಳ್ಳ ದಾಟಲು ಮುಂದಾಗಿದ್ದ ವೇಳೆ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಓರ್ವ ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಸ್ಥಳಕ್ಕೆ ನರಗುಂದ ಪೋಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಖರ್ಗೆ ಮಾತು ಅಸಹ್ಯಕರ, ವಿಕಸಿತ ಭಾರತ್ ನೋಡುವವರೆಗೂ ಅವರು ಬದುಕಿರಲಿ: ಅಮಿತ್ ಶಾ

  • ರೈತ ಬಂಡಾಯದ ನೆಲೆದಲ್ಲಿ ರೈತರ ಕಹಳೆ,ಕೃಷಿ ಕಾಯ್ದೆಗಳಿಗೆ ವಿರೋಧ

    ರೈತ ಬಂಡಾಯದ ನೆಲೆದಲ್ಲಿ ರೈತರ ಕಹಳೆ,ಕೃಷಿ ಕಾಯ್ದೆಗಳಿಗೆ ವಿರೋಧ

    – ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

    ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತ ಬಂಡಾಯದ ನೆಲೆ ನರಗುಂದದಲ್ಲಿ ಮತ್ತೆ ರೈತರು ಕಹಳೆ ಮೊಳಗಿಸಿದ್ದಾರೆ. ಮಹಾದಾಯಿ ಕುಡಿಯುವ ನೀರು ಯೋಜನೆ ಅನುಷ್ಠಾನದ ಜೊತೆಗೆ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಂಜಾಬ್‍ನ ಸಂಯುಕ್ತ ಮೊರ್ಚಾ ಸಂಘಟನೆ ಹಿರಿಯ ರೈತ ನಾಯಕ ಹರಿಖೇತ್ ಸಿಂಗ್ ಹಾಗೂ ಹರಿಯಾಣ ದೀಪಕ್ ಲಂಬಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ರೈತರನ್ನು ಉದ್ದೇಶಿಸಿ ಮಾತನಾಡಿದ ಹರಿಖೇತ್ ಸಿಂಗ್ ಅವರು, ರೈತರನ್ನು ಭಿಕ್ಷುಕರನ್ನಾಗಿಸುವ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ದೆಹಲಿಯ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ದೇಶದ ರಾಜಧಾನಿಯಲ್ಲಿ ಅನ್ನದಾತ ಹೊತ್ತಿಸಿರುವ ಹೋರಾಟದ ಕಿಡಿ ಇದೀಗ ಬಂಡಾಯದ ನೆಲೆ ನರಗುಂದಕ್ಕೂ ತಲುಪಿದೆ. ಈ ಮೂಲಕ ದಕ್ಷಿಣ ಭಾರತದ ಎಲ್ಲ ಜಿಲ್ಲೆ ಮತ್ತು ಗ್ರಾಮಗಳಿಗೂ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ತಲುಪಬೇಕು. ಈ ನಿಟ್ಟಿನಲ್ಲಿ ರೈತ ಹೋರಾಟದ ಜನ್ಮಸ್ಥಾನವಾಗಿರುವ ನರಗುಂದಲ್ಲಿ ಎಲ್ಲಾ ರೈತ ನಾಯಕರು ಹಾಗೂ ಪ್ರಗತಿಪರರ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ

    ದೀಪಕ್ ಲಂಬಾ ಮಾತನಾಡಿ, ನರಗುಂದ- ನವಲಗುಂದ ರೈತರ ಪುಣ್ಯಭೂಮಿಯಾಗಿದೆ. ಈ ಭಾಗದ ರೈತರು ಮಹಾದಾಯಿ ನೀರಿಗಾಗಿ ಸುದೀರ್ಘವಾಗಿ ಹೋರಾಟ ನಡೆಸುತ್ತಿದ್ದಾರೆ. ಇಷ್ಟೊಂದು ದೀರ್ಘಾವಧಿ ಹೋರಾಟ ದೇಶದಲ್ಲಿ ಮತ್ತೊಂದಿಲ್ಲ. ಅದರಂತೆ ದೆಹಲಿಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಚಳವಳಿ ನಡೆಸುತ್ತಿದ್ದಾರೆ. ಇಷ್ಟು ದೀರ್ಘಾ ಕಾಲ ರಾಜಧಾನಿಯಲ್ಲಿ ಮತ್ಯಾವ ಹೋರಾಟವೂ ನಡೆದಿಲ್ಲ. ಆದರೂ, ಆಳುವ ಸರ್ಕಾರಗಳು ಅನ್ನದಾತನ ಪರ ಕಣ್ಣು ತೆರೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ವೇದಿಕೆ ಮೇಲೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಮಾಜಿ ವಿಧಾನಸಭಾ ಪರಿಷತ್ ಬಿ.ಆರ್.ಪಾಟೀಲ್, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ಕಳಸಾ ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ, ಮದುಸೂಧನ್ ತಿವಾರಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನರಗುಂದ, ನವಲಗುಂದ ಸೇರಿದಂತೆ ವಿವಿಧ ಭಾಗದಿಂದ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಸಿದ್ದರು.

  • ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ಗೂಂಡಾಗಿರಿ..!

    ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ಗೂಂಡಾಗಿರಿ..!

    – ಸೊಬರದಮಠ ಮೇಲೆ ಹಲ್ಲೆ, ನಿಂದನೆ

    ಗದಗ: ಮಹದಾಯಿ ವಿಚಾರದಲ್ಲಿ ಆಶ್ವಾಸನೆ ನೀಡಿ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದ ಬಿಜೆಪಿ ಇದೀಗ ಮತ್ತೊಂದು ಯಡವಟ್ ಮಾಡಿಕೊಂಡಿದೆ. ಬಿಜೆಪಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರ ಮೇಲೆ ಪ್ರತೀಕಾರ ದಾಳಿ ನಡೆಸಿದ ಆರೋಪಕ್ಕೆ ಕೇಸರಿ ಪಡೆ ತುತ್ತಾಗಿದೆ.

    900ನೇ ದಿನಕ್ಕೆ ಮಹದಾಯಿ ಹೋರಾಟ ಕಾಲಿಡ್ತಿರುವ ಸಂದರ್ಭದಲ್ಲಿಯೇ ನರಗುಂದ ರೈತ ಹೋರಾಟ ವೇದಿಕೆಗೆ ನುಗ್ಗಿ ಬಿಜೆಪಿ ನಾಯಕರು ದಾಂಧಲೆ ಎಬ್ಬಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಮೇಲೆ ಮಾಜಿ ಮಂತ್ರಿ ಸಿಸಿ ಪಾಟೀಲ್ ಬೆಂಬಲಿಗರು ಅಂತಾ ಹೇಳಲಾಗುವ ಕೆಲವರು ಹಲ್ಲೆ ನಡೆಸಿದ್ದಾರೆ. ನರಗುಂದ ಪುರಸಭೆ ಅಧ್ಯಕ್ಷ ಪ್ರಕಾಶ್ ಪಟ್ಟಣಶೆಟ್ಟಿ, ತಾಲೂಕು ಯುವ ಬಿಜೆಪಿ ಅಧ್ಯಕ್ಷ ಅನಿಲ ಧರಿಯಣ್ಣವರ್, ಎಪಿಎಂಸಿ ಅಧ್ಯಕ್ಷ ನಾಗಲಿಂಗರೆಡ್ಡಿ ಮೇಟಿ, ಗೋವಿಂದರೆಡ್ಡಿ ಸಿದ್ದನಾಳ ಸೇರಿದಂತೆ ಬಿಜೆಪಿಯ 20ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ.

    ಪಕ್ಷಾತೀತ ಹೋರಾಟವೆಂದು ಹೇಳಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡ್ತಿದ್ದೀರಾ..? ಕಾಂಗ್ರೆಸ್‍ನವರಿಂದ ಹಣ ಪಡೆದು ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದೀರಾ ಅಂತಾ ಬಿಜೆಪಿಯವರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಗೂಂಡಾಗಿರಿಗೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಸಿ ಪಾಟೀಲ್ ಬೆಂಬಲಿಗರೇ ಈ ಕೃತ್ಯ ಎಸಗಿದ್ದು, ವೇದಿಕೆ ಕಿತ್ತೊಗೆಯುವುದಾಗಿ ಡಿಸೆಂಬರ್ 3ರಂದು ಬಹಿರಂಗ ಹೇಳಿಕೆ ನೀಡಿದ್ರು ಅಂತಾ ಶಂಕರ್ ಅಂಬಲಿ ಆರೋಪಿಸಿದ್ದಾರೆ.

    ಹೋರಾಟಗಾರರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಇಲ್ಲದೇ ಹೋದ್ರೆ ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಸಂಗ ಬರುತ್ತೆ ಅಂತಾ ಮಹದಾಯಿ ಹೋರಾಟಗಾರರು ಎಚ್ಚರಿಸಿದ್ದಾರೆ.