Tag: Nandigram

  • ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ 1,622 ಮತಗಳ ಅಂತರದಿಂದ ಗೆದ್ದಿದ್ದಾರೆ.

    ಟಿಎಂಸಿಯಿಂದ ಹೊರ ಬಂದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಭಾರೀ ಸ್ಪರ್ಧೆ ನಡೆದಿತ್ತು. ಮತಿ ಎಣಿಕೆಯ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು.

    ಸುವೇಂದು ಅಧಿಕಾರಿಯನ್ನು ನಾನು ನಂದಿಗ್ರಾಮದಿಂದ ಸೋಲಿಸುತ್ತೇನೆ ಎಂದು ಮಮತಾ ಪ್ರತಿಜ್ಞೆ ಮಾಡಿದ್ದರು.

    ಸದ್ಯದ ಟ್ರೆಂಡ್ ಪ್ರಕಾರ 213 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 78 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

  • ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ಪ್ರಚಾರದ ಅಬ್ಬರ ಕಾವೇರಿದೆ. ಇದರ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ತಿಂಗಳ ಆರಂಭದಲ್ಲಿ ನಡೆದ ದಾಳಿ ವೇಳೆ ಮಮತಾ ಬ್ಯಾನರ್ಜಿ ಎಡ ಕಾಲಿಗೆ ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಎರಡನೇ ಹಂತದಲ್ಲಿ ಮತಚಲಾಯಿಸುವ ನಂದಿಗ್ರಾಮದಲ್ಲಿ ವೀಲ್ ಚೇರ್ ಮೇಲೆ ಕುಳಿತು 8 ಕಿ.ಮೀ ರೋಡ್ ಶೋ ನೆಡೆಸಿದ್ದಾರೆ.

    ಗುರುವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಮಾಜಿ ಸಹಾಯಕ ಸುವೇಂದು ಅಧಿಕಾರಿ ನಡುವೆ ನಡೆದ ಚುನಾವಣಾ ಪ್ರಚಾರದ ಮಹಾಯುದ್ಧವನ್ನು ನೋಡಿದ್ದೇವೆ. ಶೀಘ್ರದಲ್ಲಿಯೇ ಚುನಾವಣೆ ಪ್ರಚಾರ ಮುಕ್ತಾಯಗೊಳ್ಳಲಿದೆ.

    ತೃಣಮೂಲ ಕಾಂಗ್ರೆಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತುಕೊಂಡಿದ್ದರೆ, ಸುತ್ತಲು ಪಕ್ಷದ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ಪಾದಯಾತ್ರೆ ನಡೆಸಿದ್ದಾರೆ.

    ತಿಂಗಳ ಆರಂಭದಲ್ಲಿ, ಮಮತಾ ಬ್ಯಾನರ್ಜಿಯವರು ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ತೆರಳಿದ್ದಾಗ, ಕಾರ್ ಬಾಗಿಲು ತೆರೆದ ತಕ್ಷಣ 4-5 ಮಂದಿ ಬಂದು ಕಾರ್ ಡೋರ್‍ನನ್ನು ತಳ್ಳಿದರು. ಈ ವೇಳೆ ಪೊಲೀಸರ ಭದ್ರತೆ ಕೂಡ ಇರಲಿಲ್ಲ. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದರು.

    ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಜಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಚುನವಣಾ ಆಯೋಗ ಅಮಾನತುಗೊಳಿಸಿತ್ತು. ಮತದಾನ ಸಮಿತಿ ಕೂಡ ದಾಳಿಯನ್ನು ಕಡೆಗಣಿಸಿ ಇದು ಅಪಘಾತ ಎಂದು ಹೇಳಿದ್ದಾರೆ ಎಂದರು.

    ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದ್ದು, ಮೊದಲ ಹಂತದ ಮತದಾನ ಶನಿವಾರ ನಡೆದಿದೆ ಹಾಗೂ ರಾಜ್ಯದಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ಮೇ.2ರಂದು ಇದರ ಫಲಿತಾಂಶ ಹೊರ ಬೀಳಲಿದೆ.

  • ನನ್ನ ಗೆಲುವಿಗೆ ಸಹಾಯ ಮಾಡಿ- ನಂದಿಗ್ರಾಮದ ಬಿಜೆಪಿ ನಾಯಕನಿಗೆ ಮಮತಾ ಬ್ಯಾನರ್ಜಿ ಮನವಿ

    ನನ್ನ ಗೆಲುವಿಗೆ ಸಹಾಯ ಮಾಡಿ- ನಂದಿಗ್ರಾಮದ ಬಿಜೆಪಿ ನಾಯಕನಿಗೆ ಮಮತಾ ಬ್ಯಾನರ್ಜಿ ಮನವಿ

    – ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದ್ದು, ಇದೇ ವೇಳೆ ಬಿಜೆಪಿ ನಾಯಕ ಪ್ರಳಯ್ ಪಾಲ್ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯವರ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಗೆಲುವು ಸಾಧಿಸಲು ಸಹಾಯ ಮಾಡುವಂತೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕನ ಬಳಿ ಮನವಿ ಮಾಡಿದ್ದಾರೆ. ಈ ಕುರಿತು ಸ್ವತಃ ಪ್ರಳಯ್ ಪಾಲ್ ಹೇಳಿಕೆಯನ್ನೂ ನೀಡಿದ್ದಾರೆ.

    ಬಿಜೆಪಿ ವೀಡಿಯೋ ಬಿಡುಗಡೆ ಮಾಡಿದ್ದು, ನಂದಿಗ್ರಾಮದಲ್ಲಿ ತಮ್ಮ ಹಾಗೂ ಟಿಎಂಸಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿ ಮನವಿ ಮಾಡಿದರು ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕ ಪಾಲ್ ಅವರಿಗೆ ಕರೆ ಮಾಡಿ ಮಾತನಾಡಿದ ಫೋನ್ ಸಂಭಾಷಣೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ನನಗಾಗಿ ಕೆಲಸ ಮಾಡಿ, ಟಿಎಂಸಿಗೆ ಮರಳಿ ಬನ್ನಿ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಆದರೆ ನಾನು ಬಹಳ ಹಿಂದೆಯೇ ಸುವೇಂದು ಅಧಿಕಾರಿ ಹಾಗೂ ಅಧಿಕಾರಿ ಕುಟುಂಬದೊಂದಿಗೆ ನಂಟು ಹೊಂದಿದ್ದೇನೆ. ಅಲ್ಲದೆ ಈಗ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ.

    ಎಡಪಂಥೀಯ ಸಿಪಿಐ(ಎಂ) ಪಕ್ಷದ ಆಡಳಿತವಿದ್ದಾಗ ನಂದಿಗ್ರಾಮದ ಜನರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಈ ವೇಳೆ ಅಧಿಕಾರಿ ಕುಟುಂಬ ನಮ್ಮ ಪರವಾಗಿ ನಿಂತಿತು. ಹೀಗಾಗಿ ನಾನು ಅವರ ವಿರುದ್ಧ ಎಂದೂ ಹೋಗುವುದಿಲ್ಲ. ಆ ಧೈರ್ಯ ಸಹ ನನಗಿಲ್ಲ ಎಂದು ಪಾಲ್ ಅವರು ಆಡಿಯೋದಲ್ಲಿ ಹೇಳಿದ್ದಾರೆ.

    ನಂದಿಗ್ರಾಮದ ಸ್ಥಳೀಯರಿಗೆ ಟಿಎಂಸಿ ಎಂದಿಗೂ ಹಕ್ಕು ನೀಡಿಲ್ಲ. ಹೀಗಾಗಿ ಬಿಜೆಪಿ ಜೊತೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದೇನೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

    ಈ ಸಂಭಾಷಣೆಯ ಆಡಿಯೋ ಕ್ಲಿಪ್‍ನ್ನು ಬಿಜೆಪಿ ಮುಖಂಡ ಅಮಿತ್ ಮಾಳ್ವಿಯಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಳಯ್ ಪಾಲ್ ಅವರಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವೇಳೆ ಟಿಎಂಸಿಯಲ್ಲಿ ಅವಮಾನಕ್ಕೊಳಗಾಗಿದ್ದೇನೆಂದು, ಈ ಕುಟುಂಬವನ್ನು ಬಿಡಲು ಆಗುವುದಿಲ್ಲ. ಅಲ್ಲದೆ ಬಿಜೆಪಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಟ್ವೀಟ್‍ನಲ್ಲಿ ಅಮಿತ್ ಮಾಳ್ವಿಯಾ ಬರೆದಿದ್ದಾರೆ.

    ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪ್ರತಿಷ್ಠಿತ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಬಿಜೆಪಿಯಿಂದ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ. ಇವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ.