Tag: Nandi Statue

  • ಶಿವರಾಜ್‌ಕುಮಾರ್‌ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ

    ಶಿವರಾಜ್‌ಕುಮಾರ್‌ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ

    ಶಿವರಾಜ್‌ಕುಮಾರ್‌ (Shivaraj Kumar ಅಭಿನಯದ ಡ್ಯಾಡ್ (DAD) ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ (Mysuru Chamundi Hill) ನಂದಿ ದೇವಸ್ಥಾನದಲ್ಲಿ (Nandi Temple) ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದರು.

    ಸುಮಾರು 32 ವರ್ಷಗಳ ಹಿಂದೆ ಶಿವರಾಜ್‌ಕುಮಾರ್‌ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ಅಭಿನಯದ ಹೊಸ ಚಿತ್ರ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಶೇಷ.

    ಈ ಹಿಂದೆ ‘ಭಗವಂತ್ ಕೇಸರಿ’, ‘ಉಗ್ರಂ’, ‘ಟಕ್ ಜಗದೀಶ್’ ಮುಂತಾದ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಪೆದ್ದಿ, ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’ ಮತ್ತು ‘ಹಿಡಿಂಬ’ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್

    ನಿರ್ಮಾಪಕರಿಗೆ ಹಾಗೂ, ನಿರ್ದೇಶಕರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ‘ಶಿವಣ್ಣ 131’ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್. ಸುಧೀಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಇದೊಂದು ತಂದೆ ಸೆಂಟಿಮೆಂಟ್ ಚಿತ್ರವಾಗಿದ್ದು, ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಶಿವರಾಜ್‌ಕುಮಾರ್‌ ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಗಡಿಬಿಡಿ ಕೃಷ್ಣ’ ಚಿತ್ರದಲ್ಲಿ ವೈದ್ಯರಾಗಿ ಕಾಣಿಸಿಕೊಂಡಿದ್ದ ಶಿವರಾಜ್‌ಕುಮಾರ್‌ ಸುಮಾರು 27 ವರ್ಷಗಳ ನಂತರ ಪುನಃ ಈ ಚಿತ್ರದಲ್ಲಿ ವೈದ್ಯರಾಗಿ ಅಭಿನಯಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

    ‘ಡ್ಯಾಡ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ತೆಲುಗಿನ ‘ಆರೆಂಜ್’, ‘ಆರ್ಯ 2’ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಬಿ.ರಾಜಶೇಖರ್ ಈ ಚಿತ್ರದ ಛಾಯಗ್ರಾಹಕರು.

  • ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯ – ರಣಭೀಕರ ಪ್ರವಾಹಕ್ಕೂ ನಲುಗದ ಶಿವಲಿಂಗ, ನಂದಿ ವಿಗ್ರಹ

    ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯ – ರಣಭೀಕರ ಪ್ರವಾಹಕ್ಕೂ ನಲುಗದ ಶಿವಲಿಂಗ, ನಂದಿ ವಿಗ್ರಹ

    ಚಿಕ್ಕೋಡಿ(ಬೆಳಗಾವಿ): ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯವೊಂದು ನಡೆದಿದೆ. ರಣಭೀಕರ ಪ್ರವಾಹಕ್ಕೂ ಶಿವಲಿಂಗ ಹಾಗೂ ನಂದಿ ವಿಗ್ರಹ ನಲುಗದೆ ಜನರಲ್ಲಿ ಅಚ್ಚರಿ ಮೂಡಿಸಿವೆ.

    ಹೌದು. ಕೃಷ್ಣಾ ನದಿ ತೀರ ಉಕ್ಕಿ ಹರಿದ ಪರಿಣಾಮ 2019 ಹಾಗೂ 2021ರಲ್ಲಿ ರಣ ಭೀಕರ ಪ್ರವಾಹ ಬಂದಿತ್ತು. ರಕ್ಕಸ ಪ್ರವಾಹಕ್ಕೆ ನದಿ ತೀರದ ಜನರ ಬದುಕು ಅಕ್ಷರಶಃ ನಲುಗಿ ಹೋಗುವುದರ ಜೊತೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಷ್ಟೇ ಅಲ್ಲದೇ ಪ್ರವಾಹಕ್ಕೆ ಸಿಲುಕಿ ಸೇತುವೆಗಳು, ಸಾವಿರಾರು ಮನೆಗಳು, ಕಲ್ಲು ಬಂಡೆಗಳು ಕೊಚ್ಚಿ ಹೋಗಿದ್ದವು. ಆದರೆ ವಿಸ್ಮಯ ಎನ್ನುವಂತೆ ಶಿವಲಿಂಗ ಹಾಗೂ ನಂದಿ ಮೂರ್ತಿಗಳು ಒಂದಿಂಚು ಅಲುಗಾಡದೇ ತಟಸ್ಥವಾಗಿ ಅಲ್ಲೆ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದಲ್ಲಿರುವ ಈ ಎರಡು ಮೂರ್ತಿಗಳು ಭೀಕರ ಪ್ರವಾಹಕ್ಕೂ ಕೊಚ್ಚಿ ಹೋಗಿಲ್ಲ. ಈ ಎರಡು ಮೂರ್ತಿಗಳು ಇರುವ ಪಕ್ಕದಲ್ಲೇ ಇರುವ ಸೇತುವೆ ಕೊಚ್ಚಿ ಹೋಗಿವೆ. ಆದರೆ ಈ ವಿಗ್ರಹಗಳು ಮಾತ್ರ ಇದ್ದಲ್ಲೆ ಇರುವುದನ್ನು ಕಂಡು ಸ್ಥಳೀಯರು ಇದೊಂದು ಚಮತ್ಕಾರ ಎನ್ನುತ್ತಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಶಾಸಕನಿಗೆ ಹೆಚ್‍ಡಿಕೆ ಶಾಕ್ – ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಹಾಕಲು ತಂತ್ರ!

  • ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ನಂದಿ ವಿಗ್ರಹ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯನ್ನು ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ. ಕೆಲವು ಕಡೆ ಬಿರುಕು ಬಿಟ್ಟಿರುವ ರೀತಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಅದು ಬಿರುಕಲ್ಲ, ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದ್ದು, ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ಅದನ್ನು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ. ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದುವೇ ಈ ನಂದಿ ವಿಗ್ರಹ. ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಕಪ್ಪಾಗಿದ್ದ ನಂದಿ ವಿಗ್ರಹವನ್ನು ಇತ್ತೀಚೆಗೆ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಈ ವೇಳೆ ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು.