Tag: Nandi Hill

  • ಕಾರ್ ಪಲ್ಟಿ – ಬರ್ತ್‌ಡೇ ಪಾರ್ಟಿ ಮುಗ್ಸಿ ನಂದಿಬೆಟ್ಟಕ್ಕೆ ತೆರಳ್ತಿದ್ದ ನಾಲ್ವರ ದುರ್ಮರಣ

    ಕಾರ್ ಪಲ್ಟಿ – ಬರ್ತ್‌ಡೇ ಪಾರ್ಟಿ ಮುಗ್ಸಿ ನಂದಿಬೆಟ್ಟಕ್ಕೆ ತೆರಳ್ತಿದ್ದ ನಾಲ್ವರ ದುರ್ಮರಣ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಹೀಂದ್ರಾ ಕ್ಸೈಲೋ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಂದರಹಳ್ಳಿ ಬಳಿ ನಡೆದಿದೆ.

    ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26) ಮತ್ತು ಗೌರೀಶ್ (23) ಮೃತ ದುರ್ದೈವಿಗಳು. ಮೃತರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ. ಒಂಬತ್ತು ಮಂದಿ ಬೆಂಗಳೂರಿನ ಆವಲಹಳ್ಳಿ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು.

    ಶುಕ್ರವಾರ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಂತರ ಶನಿವಾರ, ಭಾನುವಾರ ರಜೆಯಿದ್ದ ಕಾರಣಕ್ಕೆ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಕಾರಿನಲ್ಲಿ ಹೊಸಕೋಟೆ ಬಳಿಯಿರುವ ಆವಲಹಳ್ಳಿಯಿಂದ ದೇವನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದರು. ಆದರೆ ಇಂದು ಮುಂಜಾನೆ ಸುಮಾರು 3.30ಕ್ಕೆ ಹಂದರಹಳ್ಳಿ ಬಳಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಿನಿ ಕೂಪರ್‌ನಲ್ಲಿ ಯುವರತ್ನ ಜಾಲಿ ಡ್ರೈವ್ -ವಿಡಿಯೋ ನೋಡಿ

    ಮಿನಿ ಕೂಪರ್‌ನಲ್ಲಿ ಯುವರತ್ನ ಜಾಲಿ ಡ್ರೈವ್ -ವಿಡಿಯೋ ನೋಡಿ

    ಬೆಂಗಳೂರು: ಸ್ಟಾರ್ ನಟ-ನಟಿಯರು ಬೈಕ್, ಕಾರ್ ಕ್ರೇಜ್ ಅಂದರೆ ತುಂಬಾ ಇಷ್ಟಪಡುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿ ಬೈಕ್ ಅಥವಾ ಕಾರಿನಲ್ಲಿ ಜಾಲಿ ಡ್ರೈವ್ ಹೋಗುತ್ತಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಯುವರತ್ನ ಸಿನಿಮಾ ತಂಡದ ಜೊತೆ ಜಾಲಿ ಡ್ರೈವ್ ಹೋಗಿದ್ದಾರೆ.

    ಪುನೀತ್ ಅವರಿಗೆ ಕಾರ್ ಕ್ರೇಜ್ ತುಂಬಾನೇ ಇದೆ. ಬಿಡುವಿನ ವೇಳೆ ತಮ್ಮ ಸ್ನೇಹಿತರ ಜೊತೆ ಜಾಲಿಯಾಗಿ ಸುತ್ತಾಟ ಮಾಡುತ್ತಾರೆ. ಹಾಗಾಗಿ ಭಾನುವಾರ ರಜೆ ಇದ್ದ ಕಾರಣಕ್ಕೆ ಪ್ರೇಮಿಗಳ ಪಾಲಿಗೆ  ಸ್ವರ್ಗತಾಣ ನಂದಿಬೆಟ್ಟಕ್ಕೆ ಯುವರತ್ನ ಅಂಡ್ ಟೀಮ್ ಭೇಟಿ ನೀಡಿತ್ತು.

    ಪುನೀತ್ ಅವರು ತಮ್ಮದೇ ಕಾರಿನಲ್ಲಿ ಫುಲ್ ಜೋಷ್ ಮೂಡಿನಲ್ಲಿ ಡ್ರೈವ್ ಮಾಡಿದ್ದಾರೆ. ಕಾರಿನಲ್ಲಿ ಹೋಗುವ ವಿಡಿಯೋವನ್ನ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಿನಿ ಕೂಪರ್ ಕಪ್ಪು ಬಣ್ಣದ ಕಾರನ್ನು ತಾವು ಡ್ರೈವ್ ಮಾಡುತ್ತಿದ್ದು, ಜೊತೆಗೆ ಇಬ್ಬರು ಸ್ನೇಹಿತರೊಂದಿಗೆ ನಂದಿ ನಿಸರ್ಗದ ಸೌಂದರ್ಯವನ್ನ ಎಂಜಾಯ್ ಮಾಡುತ್ತಾ ಜಾಲಿಯಾಲಿ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್‍ಗೆ ಹೋಗಿದ್ದಾರೆ.

    ಯುವರತ್ನ ತಂಡ ಈಗಾಗಲೇ ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮುಗಿಸಿದೆ. ಇದೀಗ ಸಿನಿಮಾದ ಮುಖ್ಯವಾದ ದೃಶ್ಯಕ್ಕಾಗಿ ಪ್ರೇಮಿಗಳು ಸ್ವರ್ಗತಾಣ ನಂದಿಬೆಟ್ಟಕ್ಕೆ ಹೋಗಿದ್ದಾರೆ. ನಂದಿ ಬೆಟ್ಟದ ಲೊಕೇಷನ್‍ನಲ್ಲಿ ಕೆಲವು ಸೆಟ್‍ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ನಟ ದಿಗಂತ್ ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಜಿಲ್ಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀರ್ ಅವರಿಗೆ ಜೋಡಿಯಾಗಿ ಸಾಯೇಷಾ ಸೈಗಲ್ ಅಭಿನಯಿಸಿದ್ದಾರೆ.

    https://www.instagram.com/p/B0u2AGiC4s2/