Tag: Nandan nilekani

  • ಒಂದು ವರ್ಷದಲ್ಲಿ 170 ಕೋಟಿ ದಾನ ಮಾಡಿದ ಇನ್ಫೋಸಿಸ್‌ ಸಹ-ಸಂಸ್ಥಾಪಕರ ಪತ್ನಿ ರೋಹಿಣಿ ನಿಲೇಕಣಿ

    ಒಂದು ವರ್ಷದಲ್ಲಿ 170 ಕೋಟಿ ದಾನ ಮಾಡಿದ ಇನ್ಫೋಸಿಸ್‌ ಸಹ-ಸಂಸ್ಥಾಪಕರ ಪತ್ನಿ ರೋಹಿಣಿ ನಿಲೇಕಣಿ

    – ಟಾಪ್‌ 10 ದಾನಿಗಳಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ
    – ಪ್ರತಿ ದಿನ 46 ಲಕ್ಷ ರೂ. ದಾನ

    ನವದೆಹಲಿ: ಹುರೂನ್‌ ಇಂಡಿಯಾ (Hurun) ಸಂಸ್ಥೆಯು ದೇಶದ 119 ದಾನಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಗ್ರ 10 ರಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಇನ್ಫೋಸಿಸ್‌ ಸಹ ಸಂಸ್ಥಾಪಕರಾದ ನಂದನ್‌ ನಿಲೇಕಣಿ (Nandan Nilekani) ಅವರ ಪತ್ನಿ ರೋಹಿಣಿ ನಿಲೇಕಣಿ (Rohini Nilekani) ಅವರಾಗಿದ್ದಾರೆ.

    ಭಾರತದ ಲೇಖಕಿ ರೋಹಿಣಿ ನಿಲೇಕಣಿ (64) ಅವರು ಒಂದು ವರ್ಷದ ಅವಧಿಯಲ್ಲಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗೆ ಬರೋಬ್ಬರಿ 170 ಕೋಟಿ ರೂ. ದಾನ ಮಾಡಿದ್ದಾರೆ. ಪ್ರತಿ ದಿನ 46 ಲಕ್ಷ ರೂ. ದಾನ ಮಾಡಿದ ಕೊಡುಗೈ ದಾನಿಯಾಗಿ ಗಮನ ಸೆಳೆದಿದ್ದಾರೆ. ಗಮನಾರ್ಹ ಅಂಶವೆಂದರೆ, ರೋಹಿಣಿ ಅವರ ಪತಿ ನಂದನ್‌ ನಿಲೇಕಣಿ ಅವರು ಅಗ್ರ 10 ಮಂದಿ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದಾರೆ.

    ಯಾರು ಈ ರೋಹಿಣಿ ನಿಲೇಕಣಿ?
    ದಾನಿ ರೋಹಿಣಿ ನಿಲೇಕಣಿ ಅವರು ಭಾರತೀಯ ಕಾದಂಬರಿಕಾರರಾಗಿದ್ದಾರೆ. ಅವರು ಲಾಭರಹಿತ ಶೈಕ್ಷಣಿಕ ವೇದಿಕೆ EkStep ಮತ್ತು ಮಕ್ಕಳ ಪುಸ್ತಕ ಕಂಪನಿ ಪ್ರಥಮ್ ಬುಕ್ಸ್ ಸಹ-ಸ್ಥಾಪಕಿಯೂ ಆಗಿದ್ದಾರೆ. ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ರಾಷ್ಟ್ರೀಯ ಉಪಕ್ರಮಗಳಿಗೆ ಸಹಾಯ ಮಾಡಲು ಅರ್ಘ್ಯಮ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.

    ರೋಹಿಣಿ ಅವರು ಬಾಂಬೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿ. ಅವರು ಎಲ್ಫಿನ್‌ಸ್ಟೋನ್ ಕಾಲೇಜಿನಿಂದ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದರು. ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ 1980 ರಲ್ಲಿ ಬಾಂಬೆ ಮ್ಯಾಗಜೀನ್‌ನಲ್ಲಿ ವರದಿಗಾರರಾಗಿ ಕೆಲಸ ಮಾಡಿದರು. ನಂತರ ಬೆಂಗಳೂರಿನಲ್ಲಿ ಸಂಡೇ ಮ್ಯಾಗಜೀನ್‌ನಲ್ಲೂ ವೃತ್ತಿ ಜೀವನ ಆರಂಭಿಸಿದ್ದರು.

    ರೋಹಿಣಿ ಅವರು ಪುಸ್ತಕಗಳನ್ನು ಸಹ ಬರೆದಿದ್ದಾರೆ. ‘ಸ್ಟಿಲ್‌ಬಾರ್ನ್‌’ ಅವರು ಬರೆದ ಮೊದಲ ಪುಸ್ತಕ. ‘ಅನ್‌ಕಾಮನ್‌ ಗ್ರೌಂಡ್’‌, ‘ಹಂಗ್ರಿ ಲಿಟಲ್ ಸ್ಕೈ ಮಾನ್ಸ್ಟರ್’ ಪುಸ್ತಕಗಳನ್ನು ಬರೆದಿದ್ದಾರೆ.

    ಹುರೂನ್‌ ಇಂಡಿಯಾ ಬಿಡುಗಡೆ ಮಾಡಿದ ದಾನಿಗಳ ಪಟ್ಟಿಯಲ್ಲಿ ಹೆಚ್‌ಸಿಎಲ್‌ ಸಂಸ್ಥಾಪಕ ಶಿವ ನಡಾರ್‌ ಮೊದಲ ಸ್ಥಾನದಲ್ಲಿದ್ದಾರೆ. ಅವರು ವರ್ಷಕ್ಕೆ 2,042 ಕೋಟಿ ರೂ. ದಾನ ಮಾಡಿ ಮಹಾದಾನಿಯಾಗಿ ಹೊರಹೊಮ್ಮಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಂಬೆ ಐಐಟಿಗೆ 315 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್ ಸಹ ಸಂಸ್ಥಾಪಕ

    ಬಾಂಬೆ ಐಐಟಿಗೆ 315 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್ ಸಹ ಸಂಸ್ಥಾಪಕ

    ನವದೆಹಲಿ: ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಅವರು ತಾವು ಎಂಜಿನಿಯರಿಂಗ್ ಪದವಿ ಪಡೆದ ‘ಬಾಂಬೆ ಐಐಟಿ’ಗೆ (IIT Bombay) ಬರೋಬ್ಬರಿ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಸಂಶೋಧನೆಗೆ ಸಹಾಯ ಮಾಡಲು ಹಾಗೂ ಬಾಂಬೆಯ ಐಐಟಿಯಲ್ಲಿ ಉತ್ತಮವಾದ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಈ ದೇಣಿಗೆಯ (Donation) ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಮಾತ್ರವಲ್ಲದೇ ಇದು ಭಾರತದಲ್ಲಿ ಹಳೆ ವಿದ್ಯಾರ್ಥಿಯೊಬ್ಬರು ನೀಡಿರುವ ಅತಿ ದೊಡ್ಡ ದೇಣಿಗೆಗಳಲ್ಲಿ ಒಂದು ಎನಿಸಿಕೊಂಡಿದೆ.

    ಈ ಬಗ್ಗೆ ತಿಳಿಸಿರುವ ನಿಲೇಕಣಿ, ಬಾಂಬೆ ಐಐಟಿ ನನ್ನ ಜೀವನದ ಮೂಲಾಧಾರವಾಗಿದೆ. ನನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ, ಈ ಪ್ರಯಾಣಕ್ಕೆ ಅಡಿಪಾಯ ಹಾಕಿದೆ. ಈ ಗೌರವಾನ್ವಿತ ಸಂಸ್ಥೆಯೊಂದಿಗೆ ನನ್ನ 50 ವರ್ಷಗಳ ಒಡನಾಟ ಈಗ ಪೂರೈಸಿದ್ದು, ಅದಕ್ಕೆ ಭವಿಷ್ಯ ಹಾಗೂ ಕೊಡುಗೆಯನ್ನು ನೀಡಲು ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳು ಕಡ್ಡಾಯ: ನಿತಿನ್‌ ಗಡ್ಕರಿ

    ಈ ದೇಣಿಗೆ ಕೇವಲ ಹಣಕಾಸಿನ ಕೊಡುಗೆಗಿಂತಲೂ ಹೆಚ್ಚಿನದ್ದಾಗಿದೆ. ಇದು ನನಗೆ ಹೆಚ್ಚಿನದನ್ನು ನೀಡಿರುವ ಸ್ಥಳಕ್ಕೆ ಗೌರವವಾಗಿದ್ದು, ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ಬದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.

    ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿರುವ ನಿಲೇಕಣಿ 1973ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಂಸ್ಥೆಯೊಂದಿಗಿನ ಒಡನಾಟಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಅವರು ಈಗ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಹಿಂದೆ ಅವರು 85 ಕೋಟಿ ರೂ. ದೇಣಿಗೆ ನೀಡಿದ್ದರು. ಹೀಗಾಗಿ ಅವರು ಸಂಸ್ಥೆಗೆ ಒಟ್ಟು 400 ಕೋಟಿ ರೂ. ದೇಣಿಗೆ ನೀಡಿದಂತಾಗುತ್ತದೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

  • ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    – ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮಾಲೋಚನೆ

    ಬೆಂಗಳೂರು: ಕೋವಿಡ್-19 ಲಾಕ್‍ಡೌನ್ ನಂತರ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಚೈನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಬಗ್ಗೆ ಇಂದು ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

    ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಜೊತೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್‍ನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ನಂದನ್ ನೀಲೇಕಣಿ, ಬಯೋಕಾನ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ಹಾಗೂ ಇನ್ಫೋಸಿಸ್‍ನ ಸಿಇಓ ಕ್ರಿಸ್ ಗೋಪಾಕೃಷ್ಣನ್ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆಯನ್ನು ನಡೆಸಲಾಯಿತು.

    ವಿಡಿಯೋ ಕನ್ಫರೆನ್ಸ್ ನಲ್ಲಿ ಮಾತನಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಮುತುವರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರ ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದರು.

    ಕೈಗಾರಿಕೋದ್ಯಮಿಗಳಾದ ನಂದನ್ ನೀಲೇಕಣಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಕೃಷ್ಣನ್ ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಕೈಗಾರಿಕಾ ಕ್ಷೇತ್ರದ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಏಕಗವಾಕ್ಷಿ ಅರ್ಜಿಗಳ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡಿದರು.

    ಕೊರೊನಾ ಮಹಮಾರಿಯ ನಂತರ ಹಲವಾರು ಕಂಪನಿಗಳು ಚೈನಾ ದೇಶದಿಂದ ತಮ್ಮ ಉತ್ಪಾದನಾ ಕಾರ್ಖಾನೆಗಳನ್ನು ಹೊರ ಬರಲು ಯೋಚನೆ ನಡೆಸುತ್ತಿವೆ. ಈ ಸನ್ನಿವೇಶದ ಸದುಪಯೋಗವನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಹೊರ ಬರುತ್ತಿರುವ ನೂರು ಕಂಪನಿಗಳ ಲಿಸ್ಟ್ ಅನ್ನು ತಯಾರಿಸಿ ಆ ಕಂಪನಿಗಳ ಜೊತೆ ಚರ್ಚೆ ಮಾಡಬೇಕು. ಈ ಹಂತದಲ್ಲಿ ಆ ಕೈಗಾರಿಕೆಗಳ ಸಿಇಓಗಳ ಜೊತೆ ಸಭೆ ನಡೆಸಲು ಕೈಗಾರಿಕೋದ್ಯಮಿಗಳು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದರು.

    ಕೈಗಾರಿಕೋದ್ಯಮಿಗಳು ನೀಡಿದ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಕೈಗಾರಿಕಾ ನೀತಿ ಸದ್ಯದಲ್ಲೇ ಹೊರ ಬೀಳಲಿದ್ದು, ಎಂಎಸ್‍ಎಂಇ ಕೈಗಾರಿಕೆಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ತರುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

    ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆಯ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.

  • ನಿಲೇಕಣಿ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದ ಅನಂತ್ ಕುಮಾರ್- ಕೊನೆಯ ಹೈ ವೋಲ್ಟೇಜ್ ಚುನಾವಣಾ ಕಣ ಹೀಗಿತ್ತು

    ನಿಲೇಕಣಿ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದ ಅನಂತ್ ಕುಮಾರ್- ಕೊನೆಯ ಹೈ ವೋಲ್ಟೇಜ್ ಚುನಾವಣಾ ಕಣ ಹೀಗಿತ್ತು

    ಬೆಂಗಳೂರು: 2014ರ ಚುನಾವಣೆಯಲ್ಲಿ ದೇಶದಲ್ಲೇ ಭಾರೀ ಹೈವೋಲ್ಟೇಜ್ ಕದನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದಿತ್ತು. ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಜೊತೆ ನಡೆದ ಸ್ಪರ್ಧೆಯಲ್ಲಿ ಅಂತಿಮವಾಗಿ ಅನಂತ್ ಕುಮಾರ್ ಜಯಗಳಿಸಿದರು.

    1996ರಿಂದ 2009ರವರೆಗೆ ಸತತ 5 ಬಾರಿ ಆಯ್ಕೆಯಾಗಿದ್ದ ಅನಂತ್ ಕುಮಾರ್ ಅವರನ್ನು ಈ ಬಾರಿ ಹೇಗಾದರೂ ಮಾಡಿ ಸೋಲಿಸಲೇ ಬೇಕು ಎನ್ನುವ ಹಠಕ್ಕೆ ಕಾಂಗ್ರೆಸ್ ಬಿದ್ದಿತ್ತು. 2009ರಲ್ಲಿ ಕೃಷ್ಣ ಭೈರೇಗೌಡ 37,612 ಮತಗಳ ಅಂತರದಿಂದ ಸೋತಿದ್ದರು. 2013ರಲ್ಲಿ ಕೃಷ್ಣ ಭೈರೇಗೌಡ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ 2014ರಲ್ಲಿ ಹೊಸ ಮುಖವನ್ನು ಪರಿಚಯ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಆಗ ಕಾಂಗ್ರೆಸ್ ನಾಯಕರಿಗೆ ಕಂಡಿದ್ದೆ ನಂದನ್ ನಿಲೇಕಣಿ.

    ಆಧಾರ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಅವರನ್ನು ಕಣಕ್ಕೆ ಇಳಿಸಿದರೆ ಅನಂತ್ ಕುಮಾರ್ ಅವರಿಗೆ ಸ್ಪರ್ಧೆ ನೀಡಬಹುದು ಎನ್ನುವ ಆಲೋಚನೆಯನ್ನು ಕಾಂಗ್ರೆಸ್ ಹಾಕಿತ್ತು. ಯಾವಾಗ ನಿಲೇಕಣಿಯಿಂದ ಸಕ್ರೀಯ ರಾಜಕಾರಣಕ್ಕೆ ಬರಲು ಒಪ್ಪಿಗೆ ಸಿಕ್ಕಿತ್ತೋ ಕಾಂಗ್ರೆಸ್ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

    ಅನಂತ್ ಕುಮಾರ್ ವಿರುದ್ಧವಾಗಿ ನಿಲೇಕಣಿ ನಿಲ್ಲುತ್ತಾರೆ ಎನ್ನುವ ವಿಚಾರ ಅಧಿಕೃತವಾಗುತ್ತಿದ್ದಂತೆ ರಾಷ್ಟ್ರೀಯ ಮಾಧ್ಯಮಗಳು ಸಹ ಬೆಂಗಳೂರು ದಕ್ಷಿಣ ಕ್ಷೇತ್ರದತ್ತ ಗಮನಹರಿಸತೊಡಗಿತು. ಅನಂತ್ ಕುಮಾರ್ ರಾಜಕೀಯ ಕ್ಷೇತ್ರದ ಅನುಭವ, ಕೇಂದ್ರದ ಮಾಜಿ ಮಂತ್ರಿಯಾಗಿದ್ದರೆ ನಿಲೇಕಣಿ ಇನ್ಫೋಸಿಸ್, ಆಧಾರ್ ವಿಚಾರದಿಂದಾಗಿ ಮೊದಲೇ ಜನಪ್ರಿಯರಾಗಿದ್ದರು. ನಾಮಪತ್ರ ಸಲ್ಲಿಕೆಯ ವೇಳೆ ತನ್ನ ಬಳಿ 7,700 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಘೋಷಿಸಿಕೊಂಡಿದ್ದರಿಂದ ಸ್ಪರ್ಧೆಯ ಜೊತೆಗೆ ಇಬ್ಬರ ಸುದ್ದಿಯೂ ಹೆಚ್ಚಾಯಿತು.

    ಅನಂತ್ ಕುಮಾರ್ ಅವರನ್ನು ಈ ಬಾರಿ ಸೋಲಿಸಿ, ನಿಲೇಕಣಿ ಗೆಲ್ಲಲೇಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಸೂಚಿಸಿದ್ದರಂತೆ. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲೇ ಇರುವುದರ ಜೊತೆಗೆ ಸಾಕ್ಷರತಾ ಮತದಾರರ ಸಂಖ್ಯೆಯೂ ಹೆಚ್ಚು ಇರುವ ಕಾರಣದಿಂದಲೂ ಈ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಅನಂತ್ ಕುಮಾರ್ 2.28 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರೆ, ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews