Tag: Nanaji Deshmukh

  • ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಭಾರತ ರತ್ನ ಗೌರವವನ್ನು ಪ್ರದಾನ ಮಾಡಿದರು.

    ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಅವರ ಜತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್‍ಮುಖ್ ಹಾಗೂ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನವನ್ನು ನೀಡಿ ಗೌರವಿಸಲಾಯಿತು. ನಾನಾಜಿ ದೇಶ್‍ಮುಕ್ ಮತ್ತು ಭೂಪೇನ್ ಹಜಾರಿಕಾ ಅವರ ಪರವಾಗಿ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

    ದಶಕಗಳ ಕಾಲ ದೇಶಕ್ಕೆ ಪ್ರಣಬ್ ಮುಖರ್ಜಿ ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ ಈ ವರ್ಷದ ಜನವರಿಯಲ್ಲಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಖಾತೆ ಸೇರಿದಂತೆ ನಾನಾ ಬಗೆಯ ಖಾತೆಗಳನ್ನು ನಿಭಾಯಿಸಿದ ಮುಖರ್ಜಿ ಅವರು 2012ರಲ್ಲಿ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2017ರವರೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಜವಾಬ್ದಾರಿ ವಹಿಸಿದ್ದರು.

    ಜನಸಂಘದ ಪ್ರಮುಖ ನಾಯಕ ನಾನಾಜಿ ದೇಶ್‍ಮುಖ್ ನಾಗರಿಕರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರ ಸಿಗಬೇಕೆಂದು ಹೋರಾಡಿದ ಸಾಮಾಜಿಕ ಕಾರ್ಯಕರ್ತರು. ರಾಜ್ಯಸಭಾ ಸದಸ್ಯರಾಗಿಯೂ ನಾನಾಜಿ ಹೊಣೆ ನಿಭಾಯಿಸಿದ್ದರು. 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ನಾನಾಜಿ ಭಾಜನರಾಗಿದ್ದರು.

    ಅಸ್ಸಾಂನ ಸಾದಿಯಾ ಗ್ರಾಮದ ಭೂಪೇನ್ ದೊಡ್ಡ ಸಾಧಕರಾಗಿದ್ದು, ಗೀತೆರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1975ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, 1977 ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ, 1992 ದಾದಾ ಸಾಹೇಬ್ ಫಾಲ್ಕೆ, 2012ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿತ್ತು.

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ನವದೆಹಲಿ: ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎನ್ನುವ ಕೋಟ್ಯಂತರ ಕನ್ನಡಿಗರ ದನಿ ಕೊನೆಗೂ ಪ್ರಧಾನಿ ಮೋದಿಗೆ ಕೇಳಿಸಲೇ ಇಲ್ಲ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿಗೆ ಮೂವರಿಗೆ ನೀಡಲಾಗಿದೆ.

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಹಿನ್ನೆಲೆ ಗಾಯಕ ಭೂಪೇನ್ ಹಜಾರಿಕ, ಸಮಾಜ ಸೇವಕ ನಾನಾಜಿ ದೇಶ್‍ಮುಖ್ ಅವರಿಗೆ ಈ ಬಾರಿಯ ಭಾರತ ರತ್ನ ಪ್ರಶಸ್ತಿ ಒಲಿದಿದೆ. ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೂವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡ ಗೌರವಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಹೊರಡಿಸಲಾಗಿದೆ.

    ನಾನಾಜಿ ದೇಶ್‍ಮುಖ್ ಮತ್ತು ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಣಬ್ ಮುಖರ್ಜಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಇಲ್ಲ:
    ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಈ ಬಾರಿ ಭಾರತ ರತ್ನ ಸಿಗಬೇಕು ಎಂದು ಕನ್ನಡಿಗರು, ರಾಜಕಾರಣಿಗಳು ಬೇಡಿಕೆ ಇಟ್ಟಿದ್ದರು. ಆದರೆ ಈ ಪಟ್ಟಿಯಲ್ಲಿ ಶ್ರೀಗಳ ಹೆಸರು ಇಲ್ಲದೇ ಇರುವುದು ಕನ್ನಡಿಗರಿಗೆ ಬೇಸರ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv