Tag: namma appaji canteen

  • ಬೆಂಗ್ಳೂರಾಯ್ತು, ಈಗ ಮಂಡ್ಯದಲ್ಲೂ ನಮ್ಮ ಅಪ್ಪಾಜಿ ಕ್ಯಾಂಟೀನ್: 10 ರೂ.ಗೆ ಊಟ ಮಾಡಿ ಖುಷಿಪಟ್ಟ ಮಂಡ್ಯ ಜನ

    ಬೆಂಗ್ಳೂರಾಯ್ತು, ಈಗ ಮಂಡ್ಯದಲ್ಲೂ ನಮ್ಮ ಅಪ್ಪಾಜಿ ಕ್ಯಾಂಟೀನ್: 10 ರೂ.ಗೆ ಊಟ ಮಾಡಿ ಖುಷಿಪಟ್ಟ ಮಂಡ್ಯ ಜನ

    ಮಂಡ್ಯ: ಬಡವರಿಗೆ ಅನುಕೂಲವಾಗಲಿ ಅಂತಾ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಅಭಿಮಾನಿಗಳು ಮಂಡ್ಯದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಪ್ರಾರಂಭ ಮಾಡಿದ್ದು, ಕೇವಲ ಐದು ರೂಪಾಯಿ, ಹತ್ತು ರೂಪಾಯಿಗೆ ತಿಂಡಿ, ಊಟ ನೀಡುತ್ತಿದ್ದಾರೆ.

    ಇದೀಗ ಮಂಡ್ಯದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಓಪನ್ ಆಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅಭಿಮಾನಿಗಳಾದ ಶಂಕರಮಠ ನಾಗೇಶ್, ಗೊರವಾಲೆ ನಾಗೇಶ್ ಕ್ಯಾಂಟಿನ್ ಆರಂಭಿಸಿದ್ದಾರೆ. ಮಂಡ್ಯದ ಮಹಾವೀರ ವೃತ್ತದ ಬಳಿ ಕ್ಯಾಂಟಿನ್ ಆರಂಭಗೊಂಡಿದ್ದು, ಕೇವಲ 5 ರೂಪಾಯಿ ಮತ್ತು 10 ರೂಪಾಯಿಗೆ ಊಟ, ತಿಂಡಿ ನೀಡುತ್ತಿದ್ದಾರೆ. ಇಡ್ಲಿಗೆ ಐದು ರೂಪಾಯಿ, ಒಂದು ವಡೆಗೆ ಐದು ರೂಪಾಯಿ, ಎರಡು ಬಜ್ಜಿಗೆ ಐದು ರೂಪಾಯಿ ನಿಗದಿ ಮಾಡಲಾಗಿದೆ. ಅದೇ ರೀತಿ ರೈಸ್‍ಬಾತ್, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್, ಎರಡು ಖಾಲಿ ದೋಸೆಗೆ ಪ್ರತ್ಯೇಕವಾಗಿ ಹತ್ತು ರೂಪಾಯಿ ನಿಗದಿ ಮಾಡಲಾಗಿದೆ.

    ಬಡವರಿಗೆ ಅನುಕೂಲವಾಗಲಿ ಅಂತಾ ದೇವೇಗೌಡ ಅವರ ಮೇಲಿನ ಅಭಿಮಾನದಿಂದ ಕ್ಯಾಂಟಿನ್ ಪ್ರಾರಂಭ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಇಲ್ಲಿ ಊಟ, ತಿಂಡಿ ಸಿಗಲಿದೆ. ಕ್ಯಾಂಟಿನ್ ಆರಂಭದ ದಿನ ಜಮಾಯಿಸಿದ ಮಂಡ್ಯದ ಜನ, ಸರದಿಯಲ್ಲಿ ನಿಂತು ಐದು ರೂಪಾಯಿ, ಹತ್ತು ರೂಪಾಯಿ ಕೊಟ್ಟು ಊಟ ಮಾಡಿ ಖುಷಿ ಪಟ್ರು.

    ಬೆಂಗಳೂರಿನಲ್ಲಿ ಇದೇ ವರ್ಷ ಆಗಸ್ಟ್ ನಲ್ಲಿ ಕಾಂಗ್ರೆಸ್ ಇಂದಿರಾ ಕ್ಯಾಂಟಿನ್ ಆರಂಭಿಸುವುದಕ್ಕೂ ಮುನ್ನವೇ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲಾಗಿತ್ತು.

    ಇದನ್ನೂ ಓದಿ: ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

    ಇದನ್ನೂ ಓದಿ: 2 ರೂ.ಗೆ ಟೀ, ಕಾಫಿ,-5 ರೂ.ಗೆ ತಿಂಡಿ, ಊಟ-ಇದು ಸ್ವಾಮಿ ಕ್ಯಾಂಟೀನ್ ಸ್ಪೆಷಲ್

  • ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ಬೆಂಗಳೂರು: ರಿಯಾಯಿತಿ ದರದಲ್ಲಿ ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸಲು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿದ್ರೆ, ಇತ್ತ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ತೆರೆಯುತ್ತಿದೆ.

    ಇಂದಿರಾ ಕ್ಯಾಂಟೀನ್‍ಗೂ ಮುನ್ನವೇ ಅಪ್ಪಾಜಿ ಕ್ಯಾಂಟೀನ್ ಸಿದ್ಧಗೊಂಡಿದ್ದು, ಇಂದಿನಿಂದ ಜನರಿಗೆ ರುಚಿಯಾದ ತಿಂಡಿ-ಊಟ ನೀಡಲು ಮುಂದಾಗಿದೆ. ಶ್ರೀಸಾಯಿ ಸಮರ್ಪಣ ಚಾರಿಟೆಬಲ್ ವತಿಯಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಇಂದು ಬೆಳಗ್ಗೆ 11 ಗಂಟೆಗೆ ಕ್ಯಾಂಟೀನ್‍ಗೆ ಚಾಲನೆ ನೀಡುತ್ತಿದ್ದಾರೆ.

    5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್ ಹಾಗೆ 10 ರೂ.ಗೆ ಪೊಂಗಲ್, ಮುದ್ದೆ-ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್. 3 ರೂಪಾಯಿಗೆ ಬಿಸಿಬಿಸಿ ಕಾಫಿ-ಟೀ ಈ ಕ್ಯಾಂಟೀನ್‍ನಲ್ಲಿ ಸಿಗಲಿದೆ. ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರುತ್ತದೆ. ನಮ್ಮ ಅಪ್ಪಾಜಿ ಕ್ಯಾಂಟೀನ್‍ನಲ್ಲಿಯೇ ಅಡುಗೆ ತಯಾರಿ ಮಾಡಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದೇವೇಗೌಡರು ಉಪಸ್ಥಿತರಿರಲಿದ್ದಾರೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದ್ರೆ ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ.