Tag: naming ceremony

  • ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ತನ್ನ ಮಗನಿಗೆ ಬರೋಬ್ಬರಿ 10 ತಿಂಗಳ ಬಳಿಕ ಇದೀಗ ನಾಮಕರಣ ಮಾಡಿದ್ದಾರೆ.

    ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾಮಕರಣದ ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

    ವಿಡಿಯೋ ಕೊನೆಯಲ್ಲಿ ಯಶ್ ಮಗಳು ಐರಾ ಸಹೋದರನ ಹೆಸರನ್ನು ಹೇಳಿದ್ದಾಳೆ. ಈ ವಿಡಿಯೋಗೆ ಯಶ್ “ನಮ್ಮನ್ನ ಸಂಪೂರ್ಣಗೊಳಿಸಿದವನು. ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ನಟಿ ರಾಧಿಕಾ ಪಂಡಿತ್ ಕೊನೆಗೂ ಜೂನಿಯರ್‌ಗೆ ಹೆಸರು ಫಿಕ್ಸ್ ಆಗಿದ್ದು, ಶೀಘ್ರವೇ ನಾಮಕರಣ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದರು.

    ಕಳೆದ ವರ್ಷದ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 30 ರಂದು ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು.

  • ಮರಿಮೊಮ್ಮಗಳಿಗೆ ವಿಶಿಷ್ಟ ಹೆಸರಿಟ್ಟು, ನಾಮಕರಣ ಮಾಡಿದ ಬಿಎಸ್‍ವೈ

    ಮರಿಮೊಮ್ಮಗಳಿಗೆ ವಿಶಿಷ್ಟ ಹೆಸರಿಟ್ಟು, ನಾಮಕರಣ ಮಾಡಿದ ಬಿಎಸ್‍ವೈ

    ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ಇಂದು ತಮ್ಮ ಮರಿಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿ ವಿಶಿಷ್ಟವಾದ ಹೆಸರಿಟ್ಟಿದ್ದಾರೆ.

    ಹುಬ್ಬಳ್ಳಿಯ ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಅಳಿಯ ವಿರುಪಾಕ್ಷಪ್ಪ ಯಮಕನಮರಡಿ ಅವರ ಪುತ್ರ ಶಶಿಧರ ಯಮನಕನಮರಡಿ ಅವರ ಪುತ್ರಿಗೆ ‘ನೈರಾ’ ಎಂದು ನಾಮಕರಣ ಮಾಡಿದ್ದಾರೆ.

    ಖಾಸಗಿ ಹೊಟೇಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮರಿಮೊಮ್ಮಗಳಿಗೆ ನಾಮಕರಣ ಮಾಡಿದ ಸಿಎಂ ಬಿಎಸ್‍ವೈ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ್ ಶೆಟ್ಟರ್ ಮತ್ತಿತರರು ಉಪಸ್ಥಿತಿರಿದ್ದರು.

    ನಾಮಕರಣ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಿಎಂ ಬಿಎಸ್‍ವೈ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕುಟುಂಬ ಸದಸ್ಯರ ಜೊತೆ ಕಾಲ ಕಳೆದು ಎಲ್ಲರ ಜೊತೆ ಖುಷಿ ಖುಷಿಯಾಗಿ ಸಮಯ ಕಳೆದಿದ್ದು ವಿಶೇಷವಾಗಿತ್ತು.

  • ಸುಬ್ರಮಣ್ಯನಗರ ವಾರ್ಡ್ 9ನೇ ಮುಖ್ಯರಸ್ತೆಗೆ ಡಾ. ಚಂದ್ರಮೌಳಿ ರಸ್ತೆ ಎಂದು ನಾಮಕರಣ

    ಸುಬ್ರಮಣ್ಯನಗರ ವಾರ್ಡ್ 9ನೇ ಮುಖ್ಯರಸ್ತೆಗೆ ಡಾ. ಚಂದ್ರಮೌಳಿ ರಸ್ತೆ ಎಂದು ನಾಮಕರಣ

    ಬೆಂಗಳೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೃದಂಗ ವಿದ್ವಾನ್ ದಿ. ಡಾ ಚಂದ್ರಮೌಳಿ ರಸ್ತೆ ನಾಮಕರಣ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿಗಳಾದ ಡಾ ಅಶ್ವಥ್ ನಾರಾಯಣ್ ಮತ್ತು ಬಿಬಿಎಂಪಿ ಸದಸ್ಯರಾದ ಮಂಜುನಾಥ್ ಮೃದಂಗ ಕಲಾವಿದರಾದ ಮಂಜುನಾಥ್ ನಟಿ ಹರಿಣಿ ಶ್ರೀಕಾಂತ್ ಉದ್ಘಾಟನೆ ಮಾಡಿದರು.

    ಡಿಸಿಎಂ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಾತನಾಡಿ, ಮೃದಂಗ ವಿದ್ವಾನ್ ಬಿ.ಕೆ ಚಂದ್ರಮೌಳಿ ಅವರು ಸಂಗೀತ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸಂಗೀತ ಲೋಕದ ಮಾಂತ್ರಿಕರಾಗಿದ್ದರು. ಶಾಸ್ತ್ರೀಯ ಸಂಗೀತ ಬೆಳಸಲು ಮೂಕಂಬಿಕಾ ತಾಳ, ವಾದ್ಯ ಕಲಾ ಶಾಲೆ ಆರಂಭಿಸಿ ನೂರಾರು ಸಂಗೀತ ಕಲಾವಿದರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. ಸುಬ್ರಮಣ್ಯನಗರ ವಾರ್ಡ್ ಚಂದ್ರಮೌಳಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಪ್ರಮುಖವಾದ ರಸ್ತೆಗೆ ಅವರ ಹೆಸರಿಟ್ಟು, ಸಂಗೀತ ಕ್ಷೇತ್ರಕ್ಕೆ ಅವರ ಸೇವೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತೆ ಆಗುತ್ತೆ ಎಂದರು.

    ಬಿಬಿಎಂಪಿ ಸದಸ್ಯರಾದ ಮಂಜುನಾಥ್ ಅವರು ಮಾತನಾಡಿ, ಸುಬ್ರಮಣ್ಯನಗರ ವಾರ್ಡ್ ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯ ಮಹನೀಯರುಗಳು ನೆಲೆಸಿದ್ದಾರೆ. ಅವರ ಹೆಸರುಗಳನ್ನು ವಾರ್ಡ್‍ನ ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಲಾಗುತ್ತಿದೆ. ಸಂಗೀತ ಕ್ಷೇತ್ರದ ಅಮೂಲ್ಯ ರತೃರಾದ ಬಿ.ಕೆ ಚಂದ್ರಮೌಳಿ ಅವರು ಮೃದಂಗದಲ್ಲಿ ವಿಶ್ವ ಖ್ಯಾತಿ ಗಳಿಸಿದ್ದರು. ಸುಬ್ರಮಣ್ಯನಗರ ವಾರ್ಡ್‍ನ ನಿವಾಸಿಯಾಗಿದ್ದರು ಎಂಬುದು ನಮ್ಮ ಹೆಮ್ಮೆ. ಅವರು ಸ್ಥಾಪಿಸಿದ ಮೂಕಾಂಬಿಕ ತಾಳ, ವಾದ್ಯ ಕಲಾ ಶಾಲೆ ಇನ್ನು ಹೆಚ್ಚು ಸಂಗೀತ ಸೇವೆ ಮಾಡಲಿ ಎಂಬುದು ನಮ್ಮ ಶುಭಾ ಹಾರೈಕೆ ಎಂದು ಹೇಳಿದರು.

  • ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಶ್ರುತಿ ತಮ್ಮ ಮಗಳ ನಾಮಕರಣವನ್ನು ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಜೊತೆ ಮಾಡಿದ್ದಾರೆ. ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ.

    ಸೋಮವಾರ ನಾಮಕರಣ ಕಾರ್ಯಕ್ರಮ ನಡೆದಿದ್ದು, ಶ್ರುತಿ ಹಾಗೂ ರಾಮ್ ತಮ್ಮ ಮಗಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ. ಶ್ರುತಿ ಈವರೆಗೂ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಈಗ ರಾಮ್ ಪೋಸ್ಟ್ ಮಾಡಿದ ಫೋಟೋದಲ್ಲೂ ಮಗುವಿನ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಮಗಳ ಫೋಟೋ ರಿವೀಲ್ ಮಾಡಿ ಎಂದು ಶ್ರುತಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ತಮ್ಮ ಮಗಳ ವಿಡಿಯೋ ಶೇರ್ ಮಾಡಿ, “ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯಬಹುದು. ಒಂದು ದಿನ ನಾನು ಬಿಗಿ ಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಆದರೆ ಇಂದು ಈ ಕಾಲುಗಳು ಸಂತೋಷವಾಗಿದೆ. ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಕಳೆದಿದ್ದೇನೆ. ಈ ರೀತಿಯ ಪ್ರೀತಿಯನ್ನು ಎಂದಿಗೂ ಕಂಡಿರಲಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ಶ್ರುತಿ ಹರಿಹರನ್ ಸದ್ಯ ಕೇರಳದಲ್ಲಿದ್ದು, ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

  • ಲೂಸ್ ಮಾದ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

    ಲೂಸ್ ಮಾದ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

    ಬೆಂಗಳೂರು: ನಟ ಲೂಸ್ ಮಾದ ಯೋಗಿ ಅವರು ತಮ್ಮ ಮಗಳ ನಾಮಕರಣವನ್ನು ಸರಳವಾಗಿ ಆಚರಿಸಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಯೋಗಿ ದಂಪತಿಗೆ ಶುಭಕೋರಿದ್ದಾರೆ.

    ಯೋಗಿ ಅವರು ತಮ್ಮ ಮಗಳಿಗೆ ‘ಶ್ರೀನಿಕಾ’ ಎಂದು ನಾಮಕರಣ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್, ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಈ ಸಮಾರಂಭಕ್ಕೆ ಯೋಗಿ ತಮ್ಮ ಕುಟುಂಬದ ಆಪ್ತರು ಹಾಗೂ ಗೆಳೆಯರಿಗೆ ಮಾತ್ರ ಆಹ್ವಾನ ನೀಡಿದ್ದರು.

    ಮೇ 5ರಂದು ಸುಮಾರು ಬೆಳಗ್ಗೆ 5 ಗಂಟೆಗೆ ಸಾಹಿತ್ಯ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಹುಟ್ಟಿದ ವೇಳೆ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಅಲ್ಲದೆ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟಿದ್ದರು.

    ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗಿ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.

    ಯೋಗಿ ಅವರು ವಿಜಯ್‍ಪ್ರಸಾದ್ ನಿರ್ದೇಶನದ `ಪರಿಮಳ ಲಾಡ್ಜ್’, ದಯಾಳ್ ಪದ್ಮನಾಭನ್ ಅವರ `ಒಂಬತ್ತನೇ ದಿಕ್ಕು’ ಸೇರಿದಂತೆ `ಲಂಕೆ’, `ಕಂಸ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮಿಳಿನ ಖ್ಯಾತ ನಿರ್ದೇಶಕ ಸಮುದ್ರಕಣಿ ಅವರೊಂದಿಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.

  • ಪರಿಹಾರ ಕೆಂದ್ರದಲ್ಲಿ ಮಗುವಿನ ನಾಮಕರಣ- ಹರ್ಷಿಕಾ, ಭುವನ್ ಭಾಗಿ

    ಪರಿಹಾರ ಕೆಂದ್ರದಲ್ಲಿ ಮಗುವಿನ ನಾಮಕರಣ- ಹರ್ಷಿಕಾ, ಭುವನ್ ಭಾಗಿ

    – ತೊಟ್ಟಿಲು ಗಿಫ್ಟ್

    ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಮಗುವಿನ ನಾಮಕರಣ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಇಬ್ಬರು ಭಾಗಿಯಾಗಿದ್ದರು.

    ಅಧಿಕ ಮಳೆಯಿಂದಾಗಿ ಜಿಲ್ಲೆಯ ಗೋಕಾಕ್‍ನಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಪ್ರವಾಹದಿಂದ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡ ಜನರು ಸದ್ಯಕ್ಕೆ ಗೋಕಾಕ್ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದೇ ಪರಿಹಾರ ಕೇಂದ್ರದಲ್ಲಿ ನಡೆಯುತ್ತಿದ್ದ ಮಗುವಿನ ನಾಮಕರಣದಲ್ಲಿ ನಟ ಭುವನ್ ಮತ್ತು ಹರ್ಷಿಕಾ ಭಾಗಿಯಾಗಿದ್ದರು. ಇದನ್ನೂ ಓದಿ: ಮಗುವಿಗೆ ಹತ್ತು ದಿನಗಳಾದ್ರೂ ಸ್ನಾನ ಮಾಡಿಸಿಲ್ಲ: ಬಾಣಂತಿಯ ಕಣ್ಣೀರು

    ಮಗುವಿನ ನಾಮಕರಣಕ್ಕೆ ಅವರೇ ತೊಟ್ಟಿಲನ್ನು ತೆಗೆದುಕೊಂಡು ಹೋಗಿ ನೀಡಿದ್ದಾರೆ. ಮಗುವನ್ನು ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಅಳು ನಿಲ್ಲಿಸಲು ಭುವನ್ ಮತ್ತು ಹರ್ಷಿಕಾ ಇಬ್ಬರು ಪ್ರಯತ್ನ ಮಾಡಿದ್ದಾರೆ. ನಾಮಕರಣದ ವಿಡಿಯೋವನ್ನು ಹರ್ಷಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

    “ಗೋಕಾಕ್‍ನಲ್ಲಿ ಪ್ರವಾಹದಿಂದ ಸಂತ್ರಸ್ತರು ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೂ ಈ ಪುಟ್ಟ ರಾಜಕುಮಾರಿ ತನ್ನ ನಗುವನ್ನು ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ನಾವು ಖರೀದಿಸಿ ಕೊಟ್ಟಿರುವ ತೊಟ್ಟಿಲು ಆಕೆಗೆ ಇಷ್ಟವಾಗಿದೆ. ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ, ಅದು ನಿಜ” ಎಂದು ಬರೆದು ಹರ್ಷಿಕಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಾಮಾನ್ಯ ಜನರು ಸೇರಿದಂತೆ ನಟ-ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಳೆದ ದಿನವಷ್ಟೆ ಭುವನ್ ಅಭಿನಯದ ‘ರಾಂಧವ’ ಚಿತ್ರತಂಡ ಭುವನ್ ನೇತೃತ್ವದಲ್ಲಿ ಚಿಕ್ಕೋಡಿ, ಗೋಕಾಕ್ ಸೇರಿದಂತೆ ಕೆಲವು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಜನರಿಗೆ ಅಗತ್ಯವಿರುವ ಕೆಲ ವಸ್ತುಗಳನ್ನು ಸಾಗಿಸುತ್ತಿದ್ದಾರೆ.

    https://www.instagram.com/p/B1Ig1H0Hj2G/

  • ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಉಡುಪಿ: ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದರೆ ಸಿಹಿ ಹಂಚುವ ಸಂಪ್ರದಾಯ ಇದೆ. ನಾಮಕರಣಕ್ಕೆ ನೂರಾರು ಜನ ಬಂಧು-ಮಿತ್ರರಿಗೆ ಊಟ ಹಾಕಿ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ಜಿಲ್ಲೆಯಲ್ಲಿ ನಾಮಕರಣಕ್ಕೆ ಬಂದ ಬಂಧು-ಮಿತ್ರರಿಗೆಲ್ಲ ಸ್ಪೆಷಲ್ ಗಿಫ್ಟ್ ಕೊಡಲಾಗಿದೆ.

    ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯದ ಸಭಾಂಗಣಕ್ಕೆ ಬಂದ ಎಲ್ಲರ ರಾಶಿ ನಕ್ಷತ್ರ ಕೇಳಿದ್ದು ವಿಶೇಷವಾಗಿದೆ. ಉಡುಪಿಯ ಮಟ್ಟುವಿನಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ನಡೆದಿದೆ. ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಿಗೆ ಪುತ್ರ ಸಂತಾನವಾಗಿದೆ. ಈ ಪ್ರಯುಕ್ತ ಊರಿಗೆಲ್ಲಾ ಊಟ ಹಾಕಿಸಿದರು. ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಅಪರೂಪದ ತಳಿಯ ಗಿಡಗಳನ್ನು ಹಂಚಿದ್ದಾರೆ. ಗಿಡಗಳನ್ನು ಹಂಚುವಾಗಲು ಕೂಡ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದಾರೆ. ತಮ್ಮ ಬಂಧುಗಳು ಹಾಗೂ ಸ್ನೇಹಿತರ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಗಿಡಗಳನ್ನು ಕೊಟ್ಟು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ.

    ನಮ್ಮ ನಕ್ಷತ್ರಕ್ಕೂ ನಮ್ಮ ಸುತ್ತಲೂ ಇರಬೇಕಾದ ಸಸ್ಯ ಸಂಪತ್ತಿಗೂ ಒಂದು ನಂಟಿದೆ. ನಮ್ಮ ಜಾತಕದ ಅನುಸಾರ ನಮಗೆ ಬಾಧಿಸಬಹುದಾದ ಅನಾರೋಗ್ಯಗಳನ್ನು ಹೋಗಲಾಡಿಸುವ ಗಿಡಗಳನ್ನು ನೆಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ ಭರಣಿ ನಕ್ಷತ್ರದವರು ನೆಲ್ಲಿಯ ಗಿಡನೆಟ್ಟರೆ ದಾತು ವೃದ್ಧಿಯಾಗುತ್ತೆ ಅನ್ನೋದು ಶಾಸ್ತ್ರ. ರೋಹಿಣಿ ನಕ್ಷತ್ರವರಿಗೆ ನೇರಳೆ ಮರ, ಪುನರ್ವಸು ನಕ್ಷತ್ರಕ್ಕೆ ಬಿದಿರು, ಪುಷ್ಯ ನಕ್ಷತ್ರಕ್ಕೆ ಅಶ್ವತ್ಥ ಮರ. ಹೀಗೆ 27 ನಕ್ಷತ್ರಕ್ಕೂ ನಾನಾ ಬಗೆಯ ಗಿಡಗಳು ಅನುಕೂಲಕರವಾಗಲಿದೆ ಎಂದು ಧಾರ್ಮಿಕ ವಿದ್ವಾಂಸರು ನವೀನ್ ತಂತ್ರಿ ತಿಳಿಸಿದ್ದಾರೆ.

    ತಮ್ಮ ಮನೆಗೆ ಬಂದ ಪುಟ್ಟ ಕಂದಮ್ಮ ಕೇವಲ ತಮ್ಮ ಮನೆ ಬೆಳಗಿದರೆ ಸಾಲದು, ಊರನ್ನೂ ತಂಪಾಗಿಡಬೇಕು ಅನ್ನೋ ಪ್ರವೀಣ್ ತಂತ್ರಿಗಳ ಪರಿಸರ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಪಡೆದ ಈ ಗಿಡಗಳನ್ನು ದೇವರ ಪ್ರಸಾದವೆಂದೇ ಭಾವಿಸಿ ಜನರು ಲಾಲನೆ ಪಾಲನೆ ಮಾಡುವುದರಿಂದ ಪರಿಸರಕ್ಕೂ ಅನುಕೂಲವಾಗಲಿದೆ.

  • ಸಿದ್ದಗಂಗಾ ಶ್ರೀಗಳಿಂದ್ಲೇ ನಾಮಕರಣ ಮಾಡಿಸ್ಬೇಕೆಂದು 4 ವರ್ಷದಿಂದ ಕಾದ ದಂಪತಿ!

    ಸಿದ್ದಗಂಗಾ ಶ್ರೀಗಳಿಂದ್ಲೇ ನಾಮಕರಣ ಮಾಡಿಸ್ಬೇಕೆಂದು 4 ವರ್ಷದಿಂದ ಕಾದ ದಂಪತಿ!

    – ಇಂದು ಶ್ರೀಗಳನ್ನು ನೆನೆದು ಭಾವುಕರಾದ್ರು ಭಕ್ತರು

    ತುಮಕೂರು: ಬಳ್ಳಾರಿ ಜಿಲ್ಲೆಯ ಭಕ್ತರೊಬ್ಬರು ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದು ಶ್ರೀ ಶಿವಕುಮಾರ ಸ್ವಾಮೀಜಿ ಬಳಿಯೇ ತಮ್ಮ ಮಗುವಿನ ನಾಮಕರಣ ಮಾಡಿಸಬೇಕು ಎಂದು ನಾಲ್ಕು ವರ್ಷದಿಂದ ಕಾದು ಕುಳಿತಿದ್ದರು ಅಲ್ಲದೆ ತನ್ನ ಮಗಳಿಗೆ ನಾಮಕರಣ ಮಾಡಿರಿಲಿಲ್ಲ.

    ಹೌದು, ಸಿದ್ದಗಂಗಾ ಶ್ರೀಗಳ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಬಳ್ಳಾರಿಯ ದಂಪತಿ, ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದರೂ ಶ್ರೀಗಳಿಂದ ತಮ್ಮ ಮಗುವಿಗೆ ನಾಮಕರಣ ಮಾಡಿಸಲು ಸಾಧ್ಯವಾಗಿರಲಿಲ್ಲ. ಆಗ ಮಠದ ಕಿರಿಯ ಶ್ರೀಗಳು ಶಿವಕುಮಾರ ಸ್ವಾಮೀಜಿಗಳು ಗುಣಮುಖರಾದ ಮೇಲೆ ನಾವೇ ನಿಮ್ಮನ್ನು ಕರೆಸಿಕೊಂಡು ನಾಮಕರಣ ಕಾರ್ಯ ಮಾಡಿಸಿಕೊಡುತ್ತೇವೆ ಎಂದು ತಿಳಿಸಿದ್ದರು. ಆದ್ರೆ ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮನಸ್ಸಿಗೆ ತುಂಬಾ ನೋವಾಯ್ತು. ಬಳಿಕ ಮಗಳಿಗೆ `ಶಿವಾನಿ’ ಎಂದು ನಾವೇ ಹೆಸರಿಟ್ಟೆವು ಎಂದು ದಂಪತಿ ಸ್ವಾಮೀಜಿಯನ್ನ ನೆನೆದು ಭಾವುಕರಾದರು. ಇದನ್ನೂ ಓದಿ:ಶಿವಕುಮಾರ ಶ್ರೀಗಳ 112ನೇ ಜಯಂತಿ-ಸಂತನಿಲ್ಲದ ಸಿದ್ದಗಂಗೆಯಲ್ಲಿ ಶಿವಯೋಗಿ ಸ್ಮರಣೆ

    ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112 ನೇ ಜಯಂತಿ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠದಲ್ಲಿ 112 ಮಕ್ಕಳಿಗೆ ಶ್ರೀಗಳ ಹೆಸರಿಟ್ಟು ನಾಮಕರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಶ್ರೀಗಳ ಹೆಸರನ್ನು ನಾಮಕರಣ ಮಾಡಲು ಭಕ್ತಾಧಿಗಳು ತಮ್ಮ ಮಕ್ಕಳನ್ನು ಮಠಕ್ಕೆ ಕರೆತಂದಿದ್ದಾರೆ. ಹೈಕೋರ್ಟ್ ಲಾಯರ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

    ಕೇವಲ ನಾಮಕರಣ ಮಾತ್ರವಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗೆ ನಾಮಕರಣಕ್ಕೆ ಬೇಕಾದ ತೊಟ್ಟಿಲು ಹಾಗೂ ಇತರೆ ವಸ್ತುಗಳು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

  • ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ತುಮಕೂರು: ಏಪ್ರಿಲ್ 1ರಂದು ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112ನೇ ಜಯಂತಿ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲೂ ಅವರ ನೆನಪನ್ನು ಮರುಕಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ “ದೇವರ” ಹುಟ್ಟುಹಬ್ಬದಂದು 112 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನಿಟ್ಟು ನಾಮಕರಣ ಮಾಡಲಾಗುತ್ತಿದೆ.

    ನಡೆದಾಡುವ ದೇವರು ಶಿವೈಕ್ಯ ಶಿವಕುಮಾರ ಶ್ರೀಗಳು ಈಗ ನಮ್ಮೊಂದಿಗೆ ಇಲ್ಲ. ಅವರಿಲ್ಲದ ಮೊದಲ ಜನ್ಮದಿನ ಅಂದರೆ ಶಿವಕುಮಾರ ಶ್ರೀಗಳ ಜಯಂತಿಗೆ ಶ್ರೀಮಠ ಸಕಲ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 1 ರಂದು ಶ್ರೀಗಳ 112ನೇ ಜಯಂತಿ ನಡೆಯಲಿದೆ. ವಿವಿಧ ಮಠಾಧೀಶರು, ಮೈಸೂರು ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಶ್ರೀಗಳ ಸ್ಮರಣೆ, ಗದ್ದುಗೆ ಪೂಜೆ, ಪ್ರವಚನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಅಂದು ನಡೆಯಲಿದೆ.

    ಇಂದಿನಿಂದಲೇ ಹಲವು ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ನಾಯಕರು ಬರೋದಿಲ್ಲ. ವಿಶೇಷ ಅಂದರೆ ಶ್ರೀಗಳ 112ನೇ ಜಯಂತಿಯಂದು 112 ಮಕ್ಕಳಿಗೆ ನಾಮಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. 112 ಮಕ್ಕಳಿಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಗುವುದು. ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳ ಹೆಸರು ನೋಂದಣಿಯಾಗಿದೆ. ನಾಮಕರಣದಲ್ಲಿ ಭಾಗಿಯಾದ ಮಕ್ಕಳಿಗೆ ಮಠದ ವತಿಯಿಂದ ತೊಟ್ಟಿಲು, ಹಾಸಿಗೆ ಹಾಗೂ ನಾಮಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

    ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲಿಯೇ ಭಕ್ತಗಣ ಏಪ್ರಿಲ್ 1ಕ್ಕೆ ಬರಲು ಸಜ್ಜಾಗಿ ನಿಂತಿದೆ. ಈ ನಡುವೆ ಮಠದ ಆಡಳಿತ ಮಂಡಳಿ 112 ಮಕ್ಕಳಿಗೆ ಶ್ರೀಗಳ ಹೆಸರನ್ನೇ ನಾಮಕರಣ ಮಾಡುವುದರ ಮೂಲಕ ಶ್ರೀಗಳಿಲ್ಲದ ಮೊದಲ ಜಯಂತಿಯನ್ನು ಸದಾ ಸ್ಮರಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.

  • ಮಹಿಳಾ ಕೈದಿಯ ಮಗುವಿಗೆ ಕಾರಾಗೃಹದಲ್ಲಿ ನಾಮಕರಣ

    ಮಹಿಳಾ ಕೈದಿಯ ಮಗುವಿಗೆ ಕಾರಾಗೃಹದಲ್ಲಿ ನಾಮಕರಣ

    ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ವಿಚಾರಣಾ ಕೈದಿಯ ಮಗುವಿನ ನಾಮಕರಣ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮ ನಡೆದಿದೆ.

    ಒಂದು ವರ್ಷದ ಮಗುವಿಗೆ ಅಭಿನಂದನ್ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣಾದೀನ ಖೈದಿಯಾಗಿರುವ ಆಂಧ್ರ ಮೂಲದ ಜ್ಯೋತಿ ಎಂಬವರ ಮಗುವಿಗೆ ನಾಮಕರಣ ನಡೆದಿದೆ.

    ಜ್ಯೋತಿ ವರ್ಷದ ಹಿಂದೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪೂಜಾ ವಿಧಿ- ವಿಧಾನ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಗಿದೆ. ಅಲ್ಲದೇ ಮಗುವಿಗೆ ತಾಯಿಯ ಇಚ್ಚೆಯಂತೆ ಅಭಿನಂದನ್ ಎಂದು ನಾಮಕರಣ ಮಾಡಲಾಗಿದೆ.

    ಜಿಲ್ಲಾ ನ್ಯಾಯಾಧೀಶ ಸಂಜೀವ್ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಹಿಳಾ ಬಂಧಿಗಳು ಗ್ರಾಮೀಣ ಸೊಗಡಿನ ಜೋಗುಳ ಹಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv