Tag: nalinkumar kateel

  • ದೆಹಲಿಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ: ನಳಿನ್

    ದೆಹಲಿಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ: ನಳಿನ್

    – ಕಿಂಗ್ ಮೇಕರ್, ಹೆಚ್‍ಡಿಕೆ ಕನಸು

    ಕೊಪ್ಪಳ: ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಏನೇ ಬರಲಿ. ಆದರೆ ಬಿಜೆಪಿ ಅದ್ಭುತ ಸಾಧನೆ ಮಾಡುತ್ತೆ. ಹೀಗಾಗಿ ಫಲಿತಾಂಶದ ನಂತ್ರ ನೋಡಿ ಎಂದರು.

    ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಾರೆ ಅನ್ನೋದು ಕನಸು. ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದ್ದು ಮುಂದಿನ ಸರ್ಕಾರವೂ ಬಿಜೆಪಿದ್ದೇ ಆಗಿರುತ್ತದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಎಲ್ಲರಿಗೂ ನ್ಯಾಯ ಕೊಡ್ತಾರೆ ಎಂದರು. ಇದೇ ವೇಳೆ ಕಲ್ಯಾಣ ಕರ್ನಾಟಕಕ್ಕೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಎಲ್ಲರಿಗೂ ನ್ಯಾಯ ಕೊಡ್ತಾರೆ ಎಂದು ಹೇಳುವ ಮೂಲಕ ನುಣುಚಿಕೊಂಡರು.

    ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ. ನೆಹರು-ಜಿನ್ನಾ ಷಡ್ಯಂತ್ರದಿಂದ ದೇಶ ಇಬ್ಭಾಗ ಆಯ್ತು. ಪೌರತ್ವ ಕನಸನ್ನು ಮಹಾತ್ಮ ಗಾಂಧಿ ಕಂಡಿದ್ರು. ಅಷ್ಟೇ ಅಲ್ಲ ಪಾಕಿಸ್ತಾನದಿಂದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡೋ ಕನಸು ಕೂಡ ಗಾಂಧಿ ಕಡಿದ್ರು. ಆದರೆ ಅದನ್ನು ನನಸು ಮಾಡಿದ್ದು ಮೋದಿ ಎಂದರು.

    ಈ ದೇಶದ ಯಾವದೇ ಮುಸ್ಲಿಂ ಪೌರತ್ವವನ್ನು ನಾವು ಕಸಿದುಕೊಳ್ಳುವುದಿಲ್ಲ. ಬದಲಾಗಿ ಮೋದಿ ಕಾಲದಲ್ಲಿ ದೇಶದ ಎಲ್ಲ ಮುಸ್ಲಿಮರಿಗೂ ಬದುಕುವ ಹಕ್ಕು ಕೊಡ್ತೀವಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

  • 10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    – ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್
    – ಸಾಮಾಜಿಕ ಜಾಲತಾಣಗಳಲ್ಲಿ ಕಟೀಲ್ ವಿರುದ್ಧ ಆಕ್ರೋಶ

    ಮಂಗಳೂರು: ನಗರದ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ಪಂಪ್‍ವೆಲ್ ವೃತ್ತ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಪಂಪ್‍ವೆಲ್ ಮೇಲ್ಸೆತುವೆ ಪೂರ್ಣಗೊಳ್ಳದ್ದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಒಂದು ವೃತ್ತದ ಸೇತುವೆ ಈ ಪರಿ ಸುದ್ದಿಯಾಗಿದ್ದು, ಅದಕ್ಕೆ ಬಲವಾದ ಕಾರಣವೂ ಇದೆ. ಮಂಗಳೂರಿನ ಪಂಪ್ ವೆಲ್ ವೃತ್ತಕ್ಕೂ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಗಾಢ ನಂಟಿದೆ. ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆ ಕಾಮಗಾರಿ ಡಿಸೆಂಬರ್ ಕೊನೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ ಡಿಸೆಂಬರ್ ಮುಗಿದು ಹೊಸ ವರ್ಷ ಬಂದ್ರೂ ಕಾಮಗಾರಿ ಮುಗಿದೇ ಇಲ್ಲ.

    ಸಂಸದ ನಳಿನ್ ಕುಮಾರ್ ಹೀಗೆ ಡೆಡ್ ಲೈನ್ ನೀಡುವುದು, ಉದ್ಘಾಟನೆಗೆ ದಿನ ನಿಗದಿ ಮಾಡುವುದು ಮೊದಲೇನಲ್ಲ. ಒಂದು ವರ್ಷದಲ್ಲಿ ನಳಿನ್ ಕುಮಾರ್, ಹೀಗೆ ಐದು ಬಾರಿ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ನಳಿನ್ ಭರವಸೆ ಈ ಬಾರಿ ಭಾರೀ ಪ್ರಮಾಣದ ಟ್ರೋಲಿಗೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿಗೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭಾರೀ ಟ್ರೋಲಿಗೆ ಒಳಗಾಗಿದ್ದು, ಜನರ ಟೀಕೆಗೆ ಗುರಿಯಾಗಿದ್ದಾರೆ.

    ಟ್ರೋಲ್‍ಗಳಿಗೆ ಸಿಕ್ಕಾಪಟ್ಟೆ ಆಹಾರವಾಗಿರುವ ಪಂಪ್ ವೆಲ್ ಫ್ಲೈ ಓವರ್ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ಸದ್ಯಕ್ಕೆ ಮುಕ್ತಿ ಸಿಗುವ ಸಾಧ್ಯತೆಗಳು ಕಡಿಮೆ. ಕೇವಲ ಒಂದೂವರೆ ಕಿಲೋಮೀಟರ್ ಉದ್ದದ ಫ್ಲೈ ಓವರ್ ಕಾರ್ಯ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ನವಯುಗ ಕಂಪನಿ 2009 ರಿಂದ ಪಂಪ್ವೆಲ್ ಫ್ಲೈ ಓವರ್ ಕೆಲಸ ಮಾಡುತ್ತಿದ್ದು, ಕಾಮಗಾರಿ ಇನ್ನೂ ಮುಗಿದಿಲ್ಲ. ದೇಶದಲ್ಲೇ ಅತೀ ನಿಧಾನಗತಿಯ ಕಾಮಗಾರಿ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಆಗಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಟ್ರೋಲ್ ಗಳಿಗೆ ಆಹಾರವಾಗುತ್ತಿದ್ದಾರೆ.

    ಕುಂದಾಪುರದಿಂದ ತಲಪಾಡಿಯವರೆಗೆ 91 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪಥಗೊಳಿಸುವ ಸುಮಾರು 1,300 ಕೋಟಿ ರೂ. ಯೋಜನೆಯಲ್ಲಿ ಈ ಪಂಪ್ ವೆಲ್ ಫ್ಲೈ ಓವರ್ ಕೂಡ ಒಂದು. ಆದರೆ ಕಂಪನಿ ನಷ್ಟದಲ್ಲಿ ಮುಳುಗಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. 6-7 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಸಾಲ ಪಡೆದು ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯದಿರುವ ಕಾರಣ ಫ್ಲೈ ಓವರ್ ಕೆಲಸ ಪೂರ್ಣಗೊಂಡಿಲ್ಲ. 8 ಪಿಲ್ಲರ್ ಗಳು ಎದ್ದು ನಿಂತಿದ್ದು, ಕಾಂಕ್ರೀಟ್ ಹಾಕುವುದು ಸೇರಿದಂತೆ ಇನ್ನೂ ಪ್ರಮುಖ ಕೆಲಸಗಳು ಬಾಕಿ ಇವೆ.

    ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಳಿನ್ ಕುಮಾರ್ ಕಟೀಲ್, ಮತ್ತೆ ಜನವರಿ ಅಂತ್ಯಕ್ಕೆ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕರಾವಳಿ ಜನ ಕಾತುರದಿಂದ ಕಾಯುತ್ತಿದ್ದ ಪಂಪ್ವೆಲ್ ಫ್ಲೈ ಓವರ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದ್ದು, ಪಂಪ್ ವೆಲ್ ಫ್ಲೈ ಓವರ್ ಕರಾಳ ಇತಿಹಾಸದಲ್ಲಿ ಹುದುಗಿಹೋಗಲಿದೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  • ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಬಿಎಸ್‍ವೈ ಹಾಗೂ ನಳಿನ್ ಮಧ್ಯೆ ವೈಮನಸ್ಸು ಇದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್. ಇಬ್ಬರೂ ಸರ್ಕಾರ ಹಾಗೂ ಪಕ್ಷದ ಕುರಿತು ಚರ್ಚೆ ನಡೆಸಿಯೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳುವ ಮೂಲಕ ಅಂತೆಕಂತೆಗಳಿಗೆ ಬಿಎಸ್‍ವೈ ತೆರೆ ಎಳೆದಿದ್ದಾರೆ.

    ಬಿಜೆಪಿ ಸರ್ಕಾರ ಇಂದಿಗೆ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಿಎಂ ಪ್ರತಿಕ್ರಿಯಿದ್ದಾರೆ. ನಳಿನ್ ಕುಮಾರ್ ಕಟೀಲ್ ಹಾಗೂ ನಾನು ಒಟ್ಟಾಗಿ ಒಂದಾಗಿ ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. 15 ದಿನಕ್ಕೊಮ್ಮೆ ಕೋರ್ ಕಮಿಟಿ ಸಭೆ ಕರೆದು ಅಲ್ಲಿ ಸರ್ಕಾರ ಏನು ಮಾಡುತ್ತಿದೆ? ಪಕ್ಷ ಏನು ಮಾಡುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದರು.

    ಸುಮ್ನೆ ಅಲ್ಲೊಂದು ಇಲ್ಲೊಂದು ಸುದ್ದಿ ಬರುತ್ತಿರುವುದನ್ನು ಜನ ನಂಬುವ ಅಗತ್ಯವಿಲ್ಲ. ಯಾವುದೇ ಸಣ್ಣ ಭಿನ್ನಾಭಿಪ್ರಾಯವೂ ಇಲ್ಲದೆ ಅಧ್ಯಕ್ಷರು ಹಾಗೂ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಊಹಾಪೋಹಗಳನ್ನು ತಳ್ಳಿ ಹಾಕಿದರು.

    ಇದೇ ವೇಳೆ ಪಕ್ಷದಲ್ಲಿ ನಿಮ್ಮನ್ನು ತುಳಿಯುವಂತಹ ಪ್ರಯತ್ನವಾಗುತ್ತಿದೆ. ಅಧ್ಯಕ್ಷರು ಮತ್ತು ನಿಮ್ಮ ನಡುವೆ ಹೊಂದಾಣಿಕೆಯಿಲ್ಲ ಅಂತಾರೆ. ಪಕ್ಷದ ಕಚೇರಿಯಲ್ಲೇ ಲಿಂಗಾಯತ ಸಮುದಾಯದ ಬೆಂಬಲಿಗರನ್ನು ದೂರ ಇಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿ ಕಚೇರಿಯಲ್ಲಿ ಯಾರನ್ನು ಇಟ್ಟುಕೊಳ್ಳಬೇಕು. ಯಾರನ್ನು ಇಟ್ಟುಕೊಳ್ಳಬಾರದು ಎಂಬುದು ರಾಜ್ಯದ ಅಧ್ಯಕ್ಷರ ಜವಾಬ್ದಾರಿಯಾಗಿದೆ. ನಾನು ಬಂದಾಗ ನನಗೆ ಬೇಕಾದವರನ್ನು ಇಟ್ಟುಕೊಳ್ಳುತ್ತೇನೆ. ಈ ಬಗ್ಗೆ ಜನ ಗೊಂದಲಕ್ಕೀಡಾಗುವ ಅಗತ್ಯವೇ ಇಲ್ಲ. ರಾಜ್ಯದ ಅಧ್ಯಕ್ಷರು ಹೊಸ ವ್ಯವಸ್ಥೆಯಲ್ಲಿ ಅವರಿಗೆ ಅನುಕೂಲಕರವಾದ ರೀತಿಯಲ್ಲಿ ಬೇಕಾದವರ ಮೇಲೆ ವಿಶ್ವಾಸ ಇಟ್ಟುಕೊಳ್ಳುತ್ತಾರೆ. ಯಾರನ್ನು ಬಿಟ್ಟಿದ್ದಾರೆಯೋ ಅವರಿಗೂ ಬೇರೆ ವ್ಯವಸ್ಥೆ ಮಾಡುವುದಾಗಿ ಸಿಎಂ ತಿಳಿಸಿದರು.

  • ತಂದೆಯ ಸಲಹೆಯನ್ನು ಪಾಲಿಸಿದ ಪುತ್ರ – ಅಂತರ ಕಾಯ್ದುಕೊಂಡ ವಿಜಯೇಂದ್ರ

    ತಂದೆಯ ಸಲಹೆಯನ್ನು ಪಾಲಿಸಿದ ಪುತ್ರ – ಅಂತರ ಕಾಯ್ದುಕೊಂಡ ವಿಜಯೇಂದ್ರ

    ಬೆಂಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪುತ್ರನ ಹಸ್ತಕ್ಷೇಪ ಸರ್ಕಾರ ಮತ್ತು ಪಕ್ಷದಲ್ಲಿ ಜಾಸ್ತಿಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಈಗ ವಿಜಯೇಂದ್ರ ಈ ವಿಚಾರದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.

    ಸ್ವಲ್ಪ ದಿನ ಸೈಲೆಂಟಾಗಿ ದೂರ ಇರುವಂತೆ ಮಗನಿಗೆ ಯಡಿಯೂರಪ್ಪ ಸಲಹೆ ನೀಡಿದ್ದು, ಪಕ್ಷ, ಸರ್ಕಾರ ಎರಡರಲ್ಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಿಎಸ್‍ವೈ ಅವರಿಂದ ವಿಜಯೇಂದ್ರ ಅಂತರ ಕಾಯ್ದುಕೊಂಡಿದ್ದಾರೆ. ಪುತ್ರನ ಮಧ್ಯಪ್ರವೇಶ ನಡೆಯುತ್ತಿಲ್ಲ. ತಮಗೆ ಆಗದವರು ಹರಡಿಸಿದ ಸುದ್ದಿ ಇದು ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಲು ತಂದೆಯ ಸಲಹೆಯ ಮೇರೆಗೆ ವಿಜಯೇಂದ್ರ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

    ವಿಜಯೇಂದ್ರ ಮೇಲೆ ಸಂತೋಷ್ ಕಣ್ಣು?
    ರಾಜ್ಯ ಬಿಜೆಪಿಯ ಪ್ರಧಾನಕಾರ್ಯದರ್ಶಿ ಹುದ್ದೆಯ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೇರುವ ಮೂಲಕ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಲು ವಿಜಯೇಂದ್ರ ಲಾಬಿ ನಡೆಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹೇಶ್ ಟೆಂಗಿನಕಾಯಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ಪಕ್ಷದ ಮಂದಿಗೆ ಶಾಕ್ ನೀಡಿದ್ದರು.

    ಯಡಿಯೂರಪ್ಪನವರ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಎಸ್‍ವೈ ಆಪ್ತರಿಗೆ ಸಿಗಲಿದೆ ಎನ್ನುವ ವಿಚಾರ ಚರ್ಚೆ ಆಗುತಿತ್ತು. ಆದರೆ ಬಿಜೆಪಿ ಹೈಕಮಾಂಡ್ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ರಾಜ್ಯದ ಹಿರಿಯ ನಾಯಕರಿಗೆ ಶಾಕ್ ನೀಡಿತ್ತು. ಈ ಎರಡು ಹುದ್ದೆಗೆ ಆಯ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಅಣತಿಯಂತೆ ನಡೆದಿದ್ದು ಎನ್ನುವ ಮಾತು ಈಗ ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.

    ವಿಜಯೇಂದ್ರ ಅವರಿಗೆ ಪ್ರಧಾನಕಾರ್ಯದರ್ಶಿ ಹುದ್ದೆ ನೀಡಿದರೆ ಮತ್ತೆ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಬರುತ್ತದೆ. ದೆಹಲಿ ಮಟ್ಟದ ಸಂಸ್ಕೃತಿ ತರಲು ಈ ಎಲ್ಲ ಆಯ್ಕೆ ನಡೆದಿದೆ ಎಂದು ಬಿಜೆಪಿಯ ಕೆಲವರು ಈ ನಿರ್ಧಾರ ಪರ ಮಾತನಾಡುತ್ತಿದ್ದಾರೆ. ಇನ್ನು ಕೆಲ ನಾಯಕರು ಬಿಎಸ್‍ವೈ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲು ನಳಿನ್ ಕುಮಾರ್ ಮೂಲಕ ಸಂತೋಷ್ ತಮ್ಮ ದಾಳವನ್ನು ಪ್ರಯೋಗಿಸುತ್ತಿದ್ದಾರೆ. ಮತ್ತೊಬ್ಬ ಲಿಂಗಾಯತ ನಾಯಕನ್ನು ಬೆಳೆಸಲು ಮಹೇಶ್ ಟೆಂಗಿನಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾತನ್ನಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಒಂದೊಂದು ಆಯ್ಕೆಯ ವಿಚಾರದ ಬಗ್ಗೆ ನಾಯಕರ ನಡುವೆ ಭಾರೀ ಚರ್ಚೆ ಆಗುತ್ತಿದೆ.

  • ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕೊಡುಗೆಯೇನು – ಸಚಿವ ಡಿಕೆಶಿ ಪ್ರಶ್ನೆ

    ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕೊಡುಗೆಯೇನು – ಸಚಿವ ಡಿಕೆಶಿ ಪ್ರಶ್ನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೊಡುಗೆ ಏನು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

    ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಸಣ್ಣ ಯೋಜನೆಯನ್ನೂ ಜಿಲ್ಲೆಗೆ ತರಲು ನಳಿನ್ ಕುಮಾರ್ ಗೆ ಸಾಧ್ಯವಾಗಿಲ್ಲ. ಮೋದಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಹಿಂದೂ ಸಂಸ್ಕೃತಿ ಅರಿತುಕೊಂಡಿರುವ ಮಿಥುನ್ ರೈಗೆ ಈ ಬಾರಿ ಜಿಲ್ಲೆಯ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಪೂಜೆ ಮಾಡುತ್ತೇವೆ ಎಂದು ಬಿಜೆಪಿಯವರ ಮೋದಿ ಘೋಷಣೆಗೆ ಟಾಂಗ್ ನೀಡಿದ್ರು.

    ಮೈತ್ರಿ ಪಕ್ಷಗಳ ಜಂಟಿ ಸ್ಪರ್ಧೆಯಿಂದಾಗಿ ಲಾಭ ಜಾಸ್ತಿ. ಕಾರ್ಯಕರ್ತರ ಬಹುದೊಡ್ಡ ಲಾಭ ನಮಗಿದೆ ಎಂದು ಸಮರ್ಥಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತನ್ನ ನಿಲುವಿಗೆ ಬದ್ಧನಿದ್ದು ರಾಜಕೀಯದಲ್ಲಿ ಧರ್ಮ ಇರಬಾರದು ಎಂದು ತಿಳಿಸಿದ್ರು.

  • ಪಿಯುಸಿ ಫಲಿತಾಂಶದಲ್ಲೂ ರಾಜಕೀಯ ಹುಡುಕಿ ಸಿಎಂಗೆ ಸಂಸದ ಕಟೀಲ್ ಟಾಂಗ್

    ಪಿಯುಸಿ ಫಲಿತಾಂಶದಲ್ಲೂ ರಾಜಕೀಯ ಹುಡುಕಿ ಸಿಎಂಗೆ ಸಂಸದ ಕಟೀಲ್ ಟಾಂಗ್

    ಬೆಂಗಳೂರು: ಮುಖ್ಯಮಂತ್ರಿಗಳೇ ಪಿಯುಸಿ ಫಲಿತಾಂಶವನ್ನು ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

    ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉಡುಪಿ ಶೇ.92.20, ದಕ್ಷಿಣ ಕನ್ನಡ ಶೇ.90.91, ಕೊಡಗು ಶೇ.83.31 ಫಲಿತಾಂಶ ದಾಖಲಿಸುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕಟೀಲ್ ಅವರು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಿಯು ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

    ಟ್ವೀಟ್ ನಲ್ಲೇನಿದೆ?
    ಉಡುಪಿ – ದಕ್ಷಿಣ ಕನ್ನಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸಿಎಂ ಹೇಳಿದ್ದೇನು?
    ಸಿಎಂ ಕುಮಾರಸ್ವಾಮಿ ಅವರು, ಉಡುಪಿ, ಕಾರ್ಕಳ ಕಾಪು ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕಿಚಾಯಿಸಿದ್ದರು.

    ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ದೇಶ-ವಿದೇಶಗಳಿಂದ ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.

  • ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ್ರು ನಳಿನ್ ಕುಮಾರ್

    ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ್ರು ನಳಿನ್ ಕುಮಾರ್

    ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.

    ಇಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬ್ರಹ್ಮಶ್ರೀ ನಾರಾಯಣಗುರುವಿಗೆ ವಂದಿಸಿ ಬಳಿಕ ಅಲ್ಲೇ ಇದ್ದ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದಿದ್ದಾರೆ. ನಂತರ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಕಾಂಗ್ರೆಸ್‍ನಿಂದ ಮಿಥುನ್ ರೈ ಉತ್ತಮ ಅಭ್ಯರ್ಥಿ. ಮೋದಿ ಅಲೆಯಿಂದಾಗಿ ಇಲ್ಲಿ ಕಾಂಗ್ರೆಸ್ ಪರಿಸ್ಥಿತಿ ಚೆನ್ನಾಗಿಲ್ಲ. ಇನ್ನು ಎರಡು ಚುನಾವಣೆಯಲ್ಲೂ ಮೋದಿಯವರೇ ಅಧಿಕಾರಕ್ಕೆ ಬರುತ್ತಾರೆ. ಇಡೀ ದೇಶದಲ್ಲಿ ಮೋದಿ ಹವಾ ಹೆಚ್ಚಾಗಿದೆ. ಮೋದಿಯೇ ಬರ್ತಾರೆ ಎಂದು ಜನಾರ್ದನ ಪೂಜಾರಿ ಭವಿಷ್ಯ ನುಡಿದರು.


    ನಾನೂ ಚೌಕೀದಾರ್ ಎಂಬ ಘೋಷಣೆಯೊಂದಿಗೆ ನೂರಾರು ಕಾರ್ಯಕರ್ತರು ಮೋದಿ ರೀತಿಯಲ್ಲಿ ಕೇಸರಿ ಪೇಟ ತೊಟ್ಟು ಮನೆ, ಮನೆಗೆ ತೆರಳಿ, ಪ್ರಚಾರ ನಡೆಸಿದ್ದಾರೆ. ಕೇಸರಿ ಪಾಳಯದ ಹೊಸ ರೀತಿಯ ಪ್ರಚಾರ ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡಿದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ವಿಳಂಬವಾದ್ರೂ, ಚುನಾವಣೆಯ ಕಾವು ಒಂದೇ ಬಾರಿಗೆ ಏರತೊಡಗಿದೆ. ನಾಳೆ, ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು ಮಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

  • ಸಂಸದ ನಳಿನ್​ಕುಮಾರ್​ಗೆ ಟಿಕೆಟ್ ನೀಡಿದ್ರೆ ಆತ್ಮಹತ್ಯೆ..!

    ಸಂಸದ ನಳಿನ್​ಕುಮಾರ್​ಗೆ ಟಿಕೆಟ್ ನೀಡಿದ್ರೆ ಆತ್ಮಹತ್ಯೆ..!

    – ಪಕ್ಷದ ಕಾರ್ಯಕರ್ತನಿಂದ ಬೆದರಿಕೆ

    ಮಂಗಳೂರು: ಸಂಸದ ನಳಿನ್ ಕುಮಾರ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಕ್ಷದ ಕಾರ್ಯಕರ್ತನೊಬ್ಬ ಬೆದರಿಕೆ ಹಾಕಿದ್ದಾನೆ.

    ಶಕ್ತಿಕೇಂದ್ರ ಕಾರ್ಯಕರ್ತರ ಸಮಾವೇಶಕ್ಕೆ ಬರುವಂತೆ ಕಾರ್ಯಕರ್ತನೊಬ್ಬ ಕರೆ ಮಾಡಿದಾಗ, ಈ ಮಾತು ಹೇಳಿದ್ದು ತುಳುವಿನಲ್ಲಿರುವ ಆಡಿಯೋ ಈಗ ಭಾರೀ ವೈರಲ್ ಆಗಿದೆ.

    ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಪರವಾಗಿ ಮತ ಯಾಚನೆಗೆ ಬರುವುದಿಲ್ಲ. ಗಲಾಟೆ, ಕೇಸ್ ಗಳಾದಾಗ ಹತ್ತಿರ ಸುಳಿಯದ ನಳಿನ್ ಯಾಕೆ ಬೇಕು. ಠಾಣೆಗೂ ಬರಲಾಗದವನು ಮತ್ತೆ ಆಯ್ಕೆಯಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಈ ಬಾರಿ ಟಿಕೆಟ್ ನೀಡಿದರೆ ಬಿಜೆಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ತೇನೆ ಅನ್ನುವ ಬೆದರಿಕೆ ಒಡ್ಡಿದ್ದಾನೆ.

    ಸಂಭಾಷಣೆ ನಡೆಸಿರುವ ಇಬ್ಬರೂ, ಪುತ್ತೂರಿನ ಬಿಜೆಪಿ ಕಾರ್ಯಕರ್ತರಾಗಿದ್ದು ಈ ಬಾರಿ ನಳಿನ್ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಒಟ್ಟಿಗಿರುವ ಹುಡುಗರನ್ನೂ ಕಳಿಸಿಕೊಡಲ್ಲ ಎಂದು ಹೇಳುತ್ತಾರೆ.

    ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಾಗದ ಬಿಜೆಪಿ ಕಾರ್ಯಕರ್ತರು ನಳಿನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಬದಲಾವಣೆ ಬಯಸಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸರ್ವೆಯಲ್ಲೂ ನಳಿನ್ ಬಗ್ಗೆ ನೆಗೆಟಿವ್ ಬಂದಿದ್ದು ಈ ಬಾರಿ ಅಭ್ಯರ್ಥಿ ಬದಲಾಯಿಸಲು ಬಯಸಿದ್ದಾರೆ ಅನ್ನುವುದು ತಿಳಿದುಬಂದಿತ್ತು.

  • ಸಂಸದರಾದ ನಳಿನ್, ಶೋಭಾ ಕರಂದ್ಲಾಜೆ ಏನ್ ಮಾಡ್ತಿದ್ದಾರೆ- ಸಿದ್ದರಾಮಯ್ಯ ಪ್ರಶ್ನೆ

    ಸಂಸದರಾದ ನಳಿನ್, ಶೋಭಾ ಕರಂದ್ಲಾಜೆ ಏನ್ ಮಾಡ್ತಿದ್ದಾರೆ- ಸಿದ್ದರಾಮಯ್ಯ ಪ್ರಶ್ನೆ

    ಬೆಂಗಳೂರು: ಉಡುಪಿಯ ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರನ್ನು ಪ್ರಶ್ನಿಸಿದ್ದಾರೆ.

    ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ಎರಡೂವರೆ ತಿಂಗಳುಗಳೇ ಕಳೆಯಿತು. ಅವರನ್ನು ಪತ್ತೆ ಹಚ್ಚುವ ಕೆಲಸ ಯಾಕೆ ಮಾಡಿಲ್ಲ ಎಂದು ಸಂಸದರ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಗರಂ ಆಗಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ಮಲ್ಪೆಯ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿ ಎರಡೂವರೆ ತಿಂಗಳ ಮೇಲಾಯಿತು. ಸಂಸದರಾದ ನಳಿನ್‍ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ? ಅವರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರಾ? ಇಂತಹ ಪ್ರತಿನಿಧಿಗಳು ಬೇಕಾ? ಜನ ಯೋಚನೆ ಮಾಡಬೇಕು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಡಿಸೆಂಬರ್ 13ರ ರಾತ್ರಿ ಉಡುಪಿಯ ಮಲ್ಪೆಯಿಂದ `ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೋವಾ ಮಹಾರಾಷ್ಟ್ರ ಗಡಿ ಕಡೆ ಕಸುಬು ಮಾಡಲು ತೆರಳಿತ್ತು. ಈ ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರು. ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆ ನಂತರ ಬೋಟ್ ನ ಜಿಪಿಎಸ್ ಮತ್ತು ಫೋನ್ ಸಂಪರ್ಕ ಕಡಿತವಾಗಿದೆ. ಸಮುದ್ರದಲ್ಲಿ ಎಲ್ಲಿ ಹುಡುಕಾಟ ನಡೆಸಿದ್ರೂ ಬೋಟ್, ಮೀನುಗಾರರು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನೌಕಾದಳ, ಏರ್ ಫೋರ್ಸ್ ಅಧಿಕಾರಿಗಳು ಹುಡುಕಾಟ ಮಾಡಿದ್ರೂ ಉಪಯೋಗವಾಗಿಲ್ಲ. ಸಮುದ್ರದ ಗಡಿಯಲ್ಲಿ ಮೀನುಗಾರರು ಕಣ್ಮರೆಯಾಗಿರುವ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಬಂದರೂ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.

    ಇತ್ತೀಚೆಗೆ ಉಡುಪಿಯಲ್ಲಿ ನಡೆದ ನಮೋ ಭಾರತ್ ಸಂಘಟನೆಯಿಂದ ಪಾಂಚಜನ್ಯ ಸಮಾವೇಶದ ಭಾಷಣದ ವೇಳೆ ಬಿಜೆಪಿ ಸಂಸದೆ, ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿಯವರು, ನಾಪತ್ತೆಯಾಗಿರುವ ಮೀನುಗಾರರು ದುಬೈನಲ್ಲಿ ಪತ್ತೆಯಾಗಿರುವ ಮಾಹಿತಿ ಲಭಿಸಿರುವುದಾಗಿ ಹೇಳಿದ್ದರು. ಅಲ್ಲದೆ ದುಬೈನಲ್ಲಿ ಪತ್ತೆಯಾದವರು ಮಲ್ಪೆ ಮೀನುಗಾರರೇ ಎಂಬುದು ಖಚಿತವಾದರೆ ಸರ್ಕಾರ ಅವರನ್ನು ವಾಪಸ್ ಕರೆತರಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

    ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

    ಮಂಗಳೂರು: ಲೋಕಸಭಾ ಚುನಾವಣೆಗೆ ಕಸರತ್ತು ಆರಂಭಗೊಂಡಿರುವಾಗಲೇ ಕರಾವಳಿಯಲ್ಲಿ ಹಾಲಿ ಸಂಸದರ ಬದಲಾವಣೆಗೆ ಒತ್ತಡ ಕೇಳಿಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಗೆದ್ದು ಬಂದಿರುವ ಬಿಜೆಪಿಗೆ ಈ ಬಾರಿಯೂ ಮೋದಿ ಅಲೆಯ ಖಾತರಿ ಇದೆ. ಮತದಾರರು ಮೋದಿ ಕೈ ಹಿಡೀತಾರೆಂಬ ಭರವಸೆಯಲ್ಲೇ ಬಿಜೆಪಿ ನಾಯಕರಿದ್ದಾರೆ. ಆದರೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆಂಬ ಕೂಗು ಪಕ್ಷದ ಒಳಗೆಯೇ ಕೇಳಿಬಂದಿದೆ. ನಳಿನ್ ಬದಲು ಬೇರೊಬ್ಬ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬಿಜೆಪಿ ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

    ಪ್ರಧಾನಿ ಮೋದಿ ಬಗ್ಗೆ ಜಿಲ್ಲೆಯ ಮತದಾರರಲ್ಲಿ ಒಲವು ಇದ್ದರೂ, ಸಂಸದ ನಳಿನ್ ಕುಮಾರ್ ಬಗ್ಗೆ ಅಸಮಾಧಾನ ಇದೆ. ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬಿದ್ದಿರುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸದಿರುವುದು ನಳಿನ್ ಮೇಲಿನ ಆರೋಪವಾಗಿದೆ. ಲೋಕಸಭೆಯಲ್ಲಿ ಕರಾವಳಿಯ ಸಮಸ್ಯೆ ಬಗ್ಗೆ ಹೇಳಿಕೊಳ್ಳಲಾಗದ ಸಂಸದನೆಂದು ಆರೋಪಿಸುವ ಮಂದಿ ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕೂಗು ಕೇಳಿಬಂದಿದೆ.

    ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಗಾಗಲೇ ಆರ್‍ಎಸ್‍ಎಸ್ ಪ್ರಮುಖರು ಬೈಠಕ್ ನಡೆಸಿದ್ದಾರೆ. ನಳಿನ್ ಹೆಸರು ಬದಲಾದರೆ, ಬೇರೆ ಯಾರು ಅನ್ನುವ ವಿಚಾರದಲ್ಲಿ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಪ್ರಬಲವಾಗಿ ಕೇಳಿ ಬರುತ್ತಿರುವುದು ಸತ್ಯಜಿತ್ ಸುರತ್ಕಲ್ ಹಾಗೂ ಇನ್ನೂ ಎರಡು ಮೂರು ಹೆಸರು.

    ಸತ್ಯಜಿತ್ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ಅಲ್ಲದೆ ಕರಾವಳಿಯಲ್ಲಿ ಪ್ರಬಲವಾಗಿರುವ ಸಮುದಾಯಕ್ಕೆ ಸೇರಿದವರು. ಸತ್ಯಜಿತ್ ಎರಡೂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಇವರ ಪರವಾಗಿ ಈಗಾಗಲೇ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದು, ತಮ್ಮದೇ ಶೈಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ತಿಪ್ಪೇಶ್ ಹೇಳಿದ್ದಾರೆ.


    ಸಂಸದ ನಳಿನ್ ಕುಮಾರ್ ಎರಡು ಬಾರಿ ಸಂಸದರಾದ್ರೂ, ಲೋಕಸಭೆಯಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಸಚಿವರಾಗುವ ಅವಕಾಶ ಬಂದಿದ್ದರೂ ತಾನೇ ನಿರಾಕರಿಸಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಆದ್ರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕರ್ನಾಟಕದಲ್ಲಿ ಯಾವುದೇ ಹಾಲಿ ಸಂಸದರನ್ನು ಬದಲಾಯಿಸುವ ಬಗ್ಗೆ ಇನ್ನೂ ಸುಳಿವು ನೀಡಿಲ್ಲ.

    ಹಿಂದೊಮ್ಮೆ ನಳಿನ್ ಮತ್ತು ಶೋಭಾರನ್ನು ರಾಜ್ಯ ರಾಜಕಾರಣಕ್ಕೆ ಹೋಗುವಂತೆ ತಿಳಿಸಿದ್ದರೂ ಅದು ಕಾರ್ಯಗತ ಆಗಿಲ್ಲ. ಈ ನಡುವೆ ಆರ್‍ಎಸ್‍ಎಸ್ ನಾಯಕರು ಮಾತ್ರ ಸಂಸದನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಎರಡು ಬಾರಿಯ ಸಂಸದ ನಳಿನ್ ಕುಮಾರ್ ಬದಲಿಗೆ ಯಾರು ಆ ಸ್ಥಾನವನ್ನು ತುಂಬಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv