Tag: naguvina hoogala mele

  • ಮುದ್ದಾದ ಹಾಡಾಗಿ ಬಂತು ನಗುವಿನ ಹೂಗಳ ಮೇಲೆ

    ಮುದ್ದಾದ ಹಾಡಾಗಿ ಬಂತು ನಗುವಿನ ಹೂಗಳ ಮೇಲೆ

    ವೆಂಕಟ್ ಭಾರದ್ವಾಜ್ (Venkat Bharadwaj) ನಿರ್ದೇಶನದ `ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ನಾಳೆ ಬಿಡುಗಡೆಗೊಳ್ಳಲಿದೆ. ತೆರೆಗಾಣುವ ಕಡೇ ಘಳಿಗೆಯವರೆಗೂ ಪ್ರೇಕ್ಷಕರನ್ನು ಬೆರಗಾಗಿಸುವ ಸಲುವಾಗಿ ಇದೀಗ ಮುದ್ದಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಈಗಾಗಲೇ ನಗುವಿನ ಹೂಗಳ ಮೇಲೆ ಗಾಢ ನಿರೀಕ್ಷೆಗಳ ಇಬ್ಬನಿ ಮೂಡಿಕೊಂಡಿದೆ. ಅದನ್ನು ಮತ್ತಷ್ಟು ತೀವ್ರವಾಗಿಸುವ ನಿಟ್ಟಿನಲ್ಲಿ ಈ ಹಾಡು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸದರಿ ಸಿನಿಮಾದಲ್ಲಿ ಪ್ರೇಮದ ನಾನಾ ಮಜಲುಗಳಿವೆ. ಅದರಲ್ಲೊಂದು ಭಾವದ ಅಭಿವ್ಯಕ್ತಿಯೆಂಬಂತೆ ಸದರಿ ಹಾಡನ್ನು ರೂಪಿಸಿದಂತಿದೆ.

    ಮುದ್ದು ಬೇಬಿ ಲವ್ ಯು ಬೇಬಿ ಅಂತ ಶುರುವಾಗುವ ಈ ಗೀತೆ ಲವ್ ಫ್ರಾನ್ ಮೆಹತಾ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿದೆ. ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ರೂಪುಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಮುದ್ದು ಬೇಬಿ ಹಾಡು ಬಹು ಬೇಗನೆ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಇನ್ನೇನು ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಆ ಹೊತ್ತಿಗೆಲ್ಲ ಈ ಹಾಡು ಸಮಸ್ತ ಪ್ರೇಮಿಗಳ ಫೇವರಿಟ್ ಆಗಿ ಬದಲಾಗುವ ಲಕ್ಷಣಗಳಿವೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಸಣ್ಣ ಸಣ್ಣ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ರೂಪಿಸಿದ್ದಾರೆ. ಅದರಲ್ಲಿಯೂ ಕಥೆಯ ಓಘಕ್ಕೆ ತಕ್ಕುದಾಗಿ ಹಾಡುಗಳನ್ನು ರೂಪಿಸಲು ಒಂದು ಅನ್ವೇಷಣೆಯನ್ನೇ ನಡೆಸಿದ್ದರಂತೆ. ಅದರ ಭಾಗವಾಗಿ ಪಂಜಾಬ್ ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳ ಗಾಯಕರನ್ನೂ ಒಂದೆಡೆ ಕಲೆಹಾಕಿದ್ದಾರೆ. ಇಂಥಾದ್ದೊಂದು ಪರಿಶ್ರಮ, ಕನಸಿನ ಪ್ರತಿಫಲವಾಗಿಯೇ ನಗುವಿನ ಹೂಗಳ ಮೇಲೆ ಚಿತ್ರದ ಒಂದೊಂದು ಹಾಡುಗಳೂ ಒಂದೊಂದು ಬೆರಗು ಹೊತ್ತು ಬಂದಿವೆ. ಇದೀಗ ಬಿಡುಗಡೆಗೊಂಡಿರುವ ಹಾಡಿನಲ್ಲಿಯೂ ಅಂತಹ ಛಾಯೆಯಿದೆ.

     

    ಇದು ಪರಿಶುದ್ಧ ಪ್ರೇಮ ಕಥನದ ಭೂಮಿಕೆಯಲ್ಲಿ ತೆರೆದುಕೊಳ್ಳುವ ಬದುಕಿಗೆ ಹತ್ತಿರವಾದ ಕಥನ. ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅಭಿ ದಾಸ್ (Abhi Das) ಹಾಗೂ ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ‘ನಗುವಿನ ಹೂಗಳ ಮೇಲೆ’ ಹಾಡುಗಳ ಎವರ್ ಗ್ರೀನ್ ಜೋಗುಳ

    ‘ನಗುವಿನ ಹೂಗಳ ಮೇಲೆ’ ಹಾಡುಗಳ ಎವರ್ ಗ್ರೀನ್ ಜೋಗುಳ

    ಯಾವುದೇ ಸಿನಿಮಾವಾದರೂ ಹಾಡುಗಳು (Song) ಪ್ರೇಕ್ಷಕರ ಎದೆಗಿಳಿದು, ಆ ಮೂಲಕ ಮೂಡಿಕೊಳ್ಳುವ ಕೌತುಕ ಮೊದಲ ಗೆಲುವಿದ್ದಂತೆ. ಅಂಥಾದ್ದೊಂದು ಮೆಲೋಡಿಯಸ್ ಮೋಡಿಯ ದೆಸೆಯಿಂದಲೇ ಗೆದ್ದು ಬೀಗಿದ ಸಾಕಷ್ಟು ಸಿನಿಮಾಗಳ ಉದಾಹರಣೆಗಳಿದ್ದಾವೆ. ಆ ಸಾಲಿಗೆ ಸೇರ್ಪಡೆಯಾಗಬಲ್ಲ ಎಲ್ಲ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ `ನಗುವಿನ ಹೂಗಳ ಮೇಲೆ’ (Naguvina hoogala mele).  ಶೀರ್ಷಿಕೆಯಲ್ಲಿಯೇ ನವಿರು ಭಾವವನ್ನು ಬಚ್ಚಿಟ್ಟುಕೊಂಡಿರುವ, ಅಷ್ಟೇ ತಾಜಾ ತಾಜ ಕಥೆಯನ್ನೊಳಗೊಂಡಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ (Venkat Bharadwaj) ನಿರ್ದೇಶನ ಮಾಡಿದ್ದಾರೆ. ಇದೇ ಫೆಬ್ರವರಿ 9ರಂದು ತೆರೆಗಾಣಲಿರುವ ನಗುವಿನ ಹೂಗಳ ಮೇಲೆ ಒಂದಷ್ಟು ಬೆರಗುಗಳಿವೆ. ಅದರಲ್ಲಿ ಹಾಡುಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯದ್ದೇ ಮೇಲುಗೈ.

    ಇದು ಪ್ರೇಮ ಕಥಾನಕವೆಂಬ ವಿಚಾರ ತಿಳಿದಾಕ್ಷಣವೇ ನಗುವ ಹೂಗಳ ಮೇಲೆ ಸಿದ್ಧಸೂತ್ರಗಳ ಛಾಯೆ ಇದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಈ ಕಥೆಯ ಹುಟ್ಟಿನ ಮೂಲದಲ್ಲಿಯೇ ಭಿನ್ನ ಆಲೋಚನೆಗಳಿವೆ. ಅಷ್ಟಕ್ಕೂ ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದ ಗ್ರಾಫ್ ಅನ್ನೊಮ್ಮೆ ಪರಿಶೀಲಿಸಿದರೆ ಎಲ್ಲವೂ ಮನದಟ್ಟಾಗುತ್ತದೆ. ಹದಿನೆಂಟರಿಂದ ಎಂಬತ್ತನೇ ವಯೋಮಾನದವರೆಗೂ ಹಿಡಿಸಬಲ್ಲಂಥಾ ವಿಶಿಷ್ಟ ಪ್ರೇಮ ಕಥೆ ಇಲ್ಲಿದೆ. ಹಾಗಿದ್ದ ಮೇಲೆ ಇಲ್ಲಿನ ಹಾಡುಗಳನ್ನೂ ಕೂಡಾ ಭಿನ್ನವಾಗಿಯೇ ರೂಪಿಸಬೇಕೆಂಬ ಇರಾದೆಯಿಂದ ವೆಂಕಟ್ ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅದರ ಭಾಗವಾಗಿಯೇ ಪಂಜಾಬ್ ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತಾರನ್ನು ನೆಚ್ಚಿಕೊಂಡಿದ್ದಾರೆ.

    ಲವ್ ಫ್ರಾನ್ ಮೆಹೆತಾ ಪಂಜಾಬ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಂಗೀತ ನಿರ್ದೇಶಕ. ಅವರ ಸಾರಥ್ಯದಲ್ಲಿ ಹಾಡುಗನ್ನು ರೂಪಿಸಿರುವ ವೆಂಕಟ್, ಆ ಭಾವಕ್ಕೆ ತಕ್ಕುದಾದ ಕಂಠಗಳನ್ನೇ ತಲಾಶು ನಡೆಸಿದ್ದಾರೆ. ಈ ಹಾಡುಗಳಿಗೆ ಕನ್ನಡದ ಖ್ಯಾತ ಕವಿ ಚಿದಂಬರ ನರೇಂದ್ರ ಎರಡು ಹಾಡುಗಳನ್ನು ಬರೆದಿದ್ದಾರೆ. ಇನ್ನುಳಿದಂತೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಎರಡು ಹಾಗೂ ನರೇಂದ್ರ ಬಾಬು ಅವರು ಒಂದು ಹಾಡನ್ನು ಬರೆದಿದ್ದಾರೆ. ಅದಕ್ಕೆ ಇಂಡಿಯನ್ ಐಡಲ್ ರನ್ನರ್ ಅಪ್ ಆಗಿರುವ ತೇಜೇಂದರ್ ಸಿಂಗ್, ನಿಹಾರಿಕಾ, ಕೇರಳ ಮೂಲದ ವಿಮಲ್ ಮತ್ತು ಮೇಘನಾ ಭಟ್ ಧ್ವನಿಯಾಗಿದ್ದಾರೆ. ಈ ಐದೂ ಹಾಡುಗಳೂ ಕೂಡಾ ಸೂಪರ್ ಹಿಟ್ ಆಗಿವೆ.

    ಪ್ರಧಾನವಾಗಿ, ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ಅಭಿಷೇಕ್ ಅಯ್ಯಂಗಾರ್ ಈ ಮೂಲಕ ಸಂಭಾಷಣಾಕಾರರಾಗಿದ್ದಾರೆ. ಎಲ್ಲವೂ ವಿಶೇಷವಾಗಿರಬೇಕೆಂಬ ದೃಷ್ಟಿಯಿಂದ ಐದು ವರ್ಷನ್ ಸಂಭಾಷಣೆ ರೆಡಿ ಮಾಡಿ, ಅದರಲ್ಲೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಅಂದಹಾಗೆ ಮೇಲುನೋಟಕ್ಕೆ ಇದು ಪ್ರೇಮ ಕಥೆಯ ಚಿತ್ರ ಅನ್ನಿಸೋದು ನಿಜ. ಆದರೆ, ಇಲ್ಲಿ ಬದುಕಿಗೆ ಹತ್ತಿರಾದಂಥಾ, ನೋಡಿದ ಪ್ರತಿಯೊಬ್ಬರಿಗೂ ತಮ್ಮದೇ ಅನ್ನಿಸುವಂಥಾ ಸೂಕ್ಷ್ಮ ಭಾವಗಳಿದ್ದಾವಂತೆ. ಸಮಯವೆಂಬುದು ಎಂತೆಂಥಾ ಅಚ್ಚರಿಗಳಿಗೆ, ಆಘಾತಗಳಿಗೆ ಕಾರಣವಾಗುತ್ತದೆಂಬುದರ ಸುತ್ತ ಕಥೆ ಚಲಿಸುತ್ತದೆಯಂತೆ.

     

    ಕೇವಲ ಹಾಡುಗಳ ವಿಚಾರದಲ್ಲಿ ಮಾತ್ರವಲ್ಲದೇ, ತಾಂತ್ರಿಕವಾಗಿಯೂ ನಗುವಿನ ಹೂಗಳ ಮೇಲೆ ಹೊಸತನ ಮೇಳೈಸಿದೆ. ಇದರ ಹಿನ್ನೆಲೆ ಸಂಗೀತವನ್ನು ಲಂಡನ್ನಿನಲ್ಲಿ ಹೊಳಪುಗಟ್ಟಿಸಲಾಗಿದೆ. ಅಲ್ಲಿನ ಪ್ರಸಿದ್ಧ ತಂತ್ರಜ್ಞರು ಕೂಡಾ ಈ ಕಾರ್ಯದಲ್ಲಿ ಸಾಥ್ ಕೊಟ್ಟಿದ್ದಾರೆ. ಹೀಗೆ ಎಲ್ಲದರಲ್ಲಿಯೂ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಮತ್ತು ಶರಣ್ಯಾ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ಸಿ.ವಿ ಶಿವಶಂಕರ್ (C.v Shivashankar) ಕನ್ನಡ ಚಿತ್ರರಂಗ ಕಂಡ ಖ್ಯಾತ ಗೀತರಚನೆಕಾರರು. ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು. ಮಿನುಗುತಾರೆ ಕಲ್ಪನಾ, ಮಂಜುಳಾ, ಉದಯ್ ಕುಮಾರ್, ನರಸಿಂಹರಾಜು, ತೂಗುದೀಪ್ ಶ್ರೀನಿವಾಸ್, ರಾಜೇಶ್ ಹೀಗೆ ಅವತ್ತಿನ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದವರು. ಮನೆಕಟ್ಟಿ ನೋಡು, ಪದವೀಧರ, ನಮ್ಮ ಊರು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟವರು. ಅಷ್ಟಕ್ಕೂ, ಇವತ್ತು ಸಿ.ವಿ ಶಿವಶಂಕರ್ ಅವರ ಬಗ್ಗೆ ಮಾತನಾಡೋದಕ್ಕೆ ಕಾರಣ ಅವರ ಪುತ್ರ ವೆಂಕಟ್ ಭಾರದ್ವಾಜ್.

    ವೆಂಕಟ್ ಭಾರದ್ವಾಜ್ (Venkat Bharadwaj)ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಸಿ.ವಿ ಶಿವಶಂಕರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಐಟಿ ಕಂಪೆನಿಗಳಲ್ಲಿ ಸೇಲ್ಸ್ ಹೆಡ್ ಆಗಿ ಕೆಲಸ ಮಾಡಿಕೊಂಡು ನೂರಾರು ದೇಶ ಸುತ್ತಿರೋ ಇವರು, ಕೊನೆಗೆ ಸಿನಿಮಾ ಫೀಲ್ಡಿಗೆ ಬಂದಿಳಿದಿದ್ದಾರೆ. ತಂದೆಯಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಂಪಿರ್ವೆ, ಆಮ್ಲೆಟ್, ಎ ಡೇ ಇನ್ ದಿ ಸಿಟಿ, ಬಬ್ಲೂಷ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಕೆಂಪಿರ್ವೆ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ‘ನಗುವಿನ ಹೂಗಳ ಮೇಲೆ’ ಎಂಬ ಪ್ರೇಮಕಥಾಹಂದರವುಳ್ಳ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

    ‘ಭಾಗ್ಯವಂತರು’ ಚಿತ್ರದ ಹಾಡಿನ ಚರಣದ ಸಾಲನ್ನ ಸಿನಿಮಾ ಶೀರ್ಷಿಕೆಯನ್ನಾಗಿಸಿದ ನಿರ್ದೇಶಕರು, ಅಣ್ಣಾವ್ರ ಸಾಕ್ಷಾತ್ಕಾರ ಸಿನಿಮಾದಿಂದ ಸ್ಪೂರ್ತಿ ಪಡೆದು ‘ನಗುವಿನ ಹೂಗಳ ಮೇಲೆ’ ಸಿನಿಮಾದ ಕಥೆ ಹೆಣೆದರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಿಜವಾದ ಪ್ರೀತಿ ಅಂದರೆ ಯಾವುದು? ಹೇಗಿರುತ್ತೆ ಅನ್ನೋದನ್ನ ತೆರೆಮೇಲೆ ಕಟ್ಟಿಕೊಟ್ಟಿರುವುದಾಗಿ ಹೇಳಿಕೊಂಡರು. ಸೆನ್ಸಾರ್ ಮಂಡಳಿಯಿಂದ ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ಕಂಟೆಂಟ್, ಮೇಕಿಂಗ್, ಸಾಂಗ್ಸ್, ಆರ್ಟಿಸ್ಟ್‌ಗಳ ಪರ್ಫಾಮೆನ್ಸ್ ಎಲ್ಲವೂ ಅದ್ಭುತವಾಗಿರುವುದಾಗಿ ತಿಳಿಸಿದರು. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

    ಇನ್ನೂ ‘ನಗುವಿನ ಹೂಗಳ ಮೇಲೆ’ ಚಿತ್ರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಮಟ್ಟಿಗೆ ಸೌಂಡ್ ಮಾಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ರೀಚ್ ಆಗುವಲ್ಲಿ ಯಶಸ್ವಿ ಕೂಡ ಆಗಿದೆ. ಗೊತ್ತಿಲ್ಲ ಯಾರಿಗೂ, ಇರಲಿ ಬಿಡು ಈ ಜೀವ ನಿನಗಾಗಿ ಗೀತೆಗಳು ಚಿತ್ರಪ್ರೇಮಿಗಳ ಹೃದಯ ಗೆದ್ದಿವೆ. ಹೀರೋ ಅಭಿದಾಸ್, ಹೀರೋಯಿನ್ ಶರಣ್ಯಾ ಶೆಟ್ಟಿ (Sharanya Shetty) ಕಾಂಬಿನೇಷನ್ ಕಿಕ್ಕೇರಿಸುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ಈ ಜೋಡಿ ನೋಡೋದಕ್ಕೆ ಯುವಪ್ರೇಮಿಗಳು ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ಇವರಿಬ್ಬರಿಗೂ ಇದು ಸ್ಪೆಷಲ್ ಸಿನಿಮಾ. ಯಾಕಂದ್ರೆ, ಅಭಿದಾಸ್ ಹಾಗೂ ಶರಣ್ಯಾ ಇಬ್ಬರು ಕೂಡ ಈ ಚಿತ್ರದಿಂದ ಸೋಲೋ ಹೀರೋ, ಹೀರೋಯಿನ್ ಆಗಿ ಪರಿಚಯ ಆಗ್ತಿದ್ದಾರೆ. ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳನ್ನ ಅಟ್ರ‍್ಯಾಕ್ಟ್ ಮಾಡುವಲ್ಲಿ ಗೆಲುವು ಕಂಡಿದ್ದಾರೆ.

    ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಪ್ರಮೋದ್ ಮರವಂತೆ, ಕಬ್ಬಡಿ ನರೇಂದ್ರ ಬಾಬು, ಚಿದಂಬರ ನರೇಂದ್ರ, ಕಿರಣ್ ನಾಗರಾಜ್ ಸಾಹಿತ್ಯ ಗೀಚಿದ್ದಾರೆ. ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ತ್ರಾಸಿ ಬೀಚ್, ಹುಲಿಕಲ್ ಘಾಟ್, ಮಾಸ್ತಿಗುಡಿ, ಶಿವಮೊಗ್ಗ, ತೀರ್ಥಹಳ್ಳಿ, ಮಲೆನಾಡು, ಮರವಂತೆ ಬೀಚ್ ಸೇರಿದಂತೆ ಹಲೆವೆಡೆ ‘ನಗುವಿನ ಹೂಗಳ ಮೇಲೆ’ ಸಿನಿಮಾ ಚಿತ್ರೀಕರಣಗೊಂಡಿದೆ.

    ಅಭಿದಾಸ್ (Abhidas) ಮತ್ತು ಶರಣ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರ ಮೂಡಿಬಂದಿದೆ. ಈ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಇದೇ ಫೆ.9ರಂದು ಈ ಚಿತ್ರ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.