Tag: Nagara Panchami 2025

  • ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಳೆ ಬಂದು ನಾಗರ ಕಲ್ಲು ತೊಳೆದು ಆಯ್ತು ಇನ್ನೂ ಪೂಜೆ ಆಗಿಲ್ಲ! ಹೀಗೆ ಹಣ್ಣು ಕಾಯಿ ತಯಾರಿ ಮಾಡ್ಕೊಳ್ತ ಹಿರಿಕರು ನಾಗರ ಪಂಚಮಿಯಂದು (Nagara Panchami) ಸಾಮಾನ್ಯವಾಗಿ ಹೇಳುವ ಮಾತಿದು.

    ಹೀಗೆ ಮಲೆನಾಡಿನಲ್ಲಿ (Malnad) ನಾಗರ ಪಂಚಮಿಯ ದಿನ ಮಳೆ ಬಂದೇ ಬರುತ್ತೆ. ಮಳೆ ನಾಗರಕಲ್ಲನ್ನು ತೊಳೆದ ಬಳಿಕ ಪೂಜೆ ನಡೆಸಲಾಗುತ್ತದೆ. ಈ ನಂಬಿಕೆ ನಮ್ಮ ಜನರ ಮತ್ತು ಪ್ರಕೃತಿಯ ನಡುವಿನ ಆಳವಾದ ಸಂಬಂಧ ಯಾವ ಮಟ್ಟದ್ದು ಎಂಬುದಕ್ಕೆ ಸಾಕ್ಷಿ ಕೂಡ ಹೌದು. ಊರ ಹೊರಗಿನ ಕಾಡಿನ ಭಾಗದಲ್ಲಿರುವ ನಾಗರ ಕಟ್ಟೆಗೆ ಅಥವಾ ಅರಳಿ ಮರದ ಕೆಳಗಿನ ನಾಗರ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ಈ ಹಬ್ಬ ಪ್ರಕೃತಿಯ ಆರಾಧನೆ ಒಂದು ಭಾಗವಾಗಿ ಮಲೆನಾಡಲ್ಲಿ ಕಂಡು ಬರುತ್ತದೆ.

    ಹಾಗೆ ನಾಗನಿಗೆ ಮಲೆನಾಡಿನ ಭಾಗದಲ್ಲಿ ಗುಡಿಗಳು ಕಡಿಮೆ. ಹಾಗೆ ನೆಲದ ಮೇಲೋ, ಅಥವ ಕಟ್ಟೆಯ ಮೇಲೆ ನಾಗರ ಕಲ್ಲುಗಳಿರುತ್ತವೆ. ಶತಶತಮಾನದ ನಾಗರ ಕಲ್ಲುಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತವೆ. ಅವು ಎಷ್ಟರ ಮಟ್ಟಿಗೆ ಹಳೆಯದ್ದು ಎಂದರೆ ಸವೆದು ಪೆನ್ಸಿಲ್‍ನ ಗೆರೆಯಂತೆ ಕಾಣುವ ಕಲ್ಲುಗಳು ಇವೆ! ಅವುಗಳನ್ನು ಯಾವುದೇ ರೀತಿಯ ಪುನರ್‍ನಿರ್ಮಾಣ ಮಾಡಲಾಗುವುದಿಲ್ಲ. ಅವು ಇದ್ದಂತೆಯೇ ಪೂಜೆಗಳು ನಡೆಯುತ್ತವೆ. ನಾಗರ ಪಂಚಮಿ ಬಳಿಕ ದೀಪಾವಳಿಗೆ ಇದೇ ನಾಗರ ಕ್ಲಲುಗಳಿಗೆ ಪೂಜೆ ನಡೆಯುತ್ತದೆ. ಬಳಿಕ ಒಂದು ವರ್ಷದ ವರೆಗೂ ಯಾವ ಪೂಜೆಗಳನ್ನು ಇವುಗಳಿಗೆ ಮಾಡಲಾಗುವುದಿಲ್ಲ. ಮತ್ತೆ ನಾಗರ ಪಂಚಮಿಗೆ ಅವುಗಳಿಗೆ ಪೂಜೆ ಮತ್ತು ನೈವೇದ್ಯ!

    ಆದಿನದ ವಿಶೇಷವಾಗಿ ಪೂಜೆಗೆ ಹೂವು, ಹಣ್ಣು, ಹಾಲು ಹಾಗೂ ನೈವೇದ್ಯಕ್ಕೆ ರವೆ ಉಂಡೆ ಇಡಲಾಗುತ್ತದೆ. ಕೇದಿಗೆ ಹೂವು ವಿಶೇಷವಾಗಿ ಪೂಜೆಗೆ ಬಳಕೆ ಆಗುತ್ತದೆ. ಇನ್ನೂ ಹುತ್ತದ ಆರಾಧನೆ ಎಲ್ಲೂ ಕಂಡು ಬರುವುದಿಲ್ಲ. ಆ ದಿನ ರಾತ್ರಿ ಕೈಗೆ ಮದರಂಗಿ ಹಚ್ಚುವಂಥಹ ಪದ್ಧತಿ ಇದೆ. ಈ ಬಗ್ಗೆ ಒಂದು ಮಾತಿದೆ, ಹಾವಿನ ಹಬ್ಬದಲ್ಲಿ ಹಚ್ಚಿದ ಮದರಂಗಿ ಗೋವಿನ ಹಬ್ಬದ ತನಕ ಇರಬೇಕು ಎನ್ನಲಾಗುತ್ತದೆ. ಗೋವಿನ ಹಬ್ಬ ಎಂದರೆ ದೀಪಾವಳಿ, ಮಲೆನಾಡಲ್ಲಿ ದೀಪಾವಳಿಯ ದಿನ ಗೋವಿನ ಪೂಜೆ ಮಾಡಲಾಗುತ್ತದೆ.

    ನಾಗ ದೇವರನ್ನು ವಿಶೇಷವಾಗಿ ಮಕ್ಕಳಿಲ್ಲದವರು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಜನರಲ್ಲಿದೆ. ಮನೆಯ ಒಳಗಡೆ ನಾಗನನ್ನು ಪ್ರಾರ್ಥಿಸಲಾಗುತ್ತದೆ. ಆದರೆ ವಿಶೇಷವಾಗಿ ಮನೆಯ ಒಳಭಾಗದಲ್ಲಿ ನಾಗನನ್ನು ಪೂಜಿಸುವ ಪದ್ಧತಿ ಇಲ್ಲ.

  • Nagara Panchami 2025 –  ಹಬ್ಬಕ್ಕೆ ಸ್ಪೆಷಲ್‌ ಸಾಂಪ್ರದಾಯಿಕ ಅರಿಶಿನ ಎಲೆಯ ಸಿಹಿ ಕಡುಬು ಮಾಡಿ ಸವಿಯಿರಿ

    Nagara Panchami 2025 –  ಹಬ್ಬಕ್ಕೆ ಸ್ಪೆಷಲ್‌ ಸಾಂಪ್ರದಾಯಿಕ ಅರಿಶಿನ ಎಲೆಯ ಸಿಹಿ ಕಡುಬು ಮಾಡಿ ಸವಿಯಿರಿ

    ನಾಗರಪಂಚಮಿ ಹಬ್ಬದ ದಿನ ಅರಿಶಿನ ಎಲೆಯ ವಿಶೇಷ ಸಿಹಿ ಕಡುಬನ್ನು ತಯಾರಿಸಲಾಗುತ್ತದೆ. ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದ ಭಾಗಗಳಲ್ಲಿ ನಾಗರಪಂಚಮಿ ಹಬ್ಬಕ್ಕೆ ಸಾಂಪ್ರದಾಯಿಕ ಅರಿಶಿನ ಎಲೆಯ ಸಿಹಿ ಕಡುಬು ಮಾಡಲಾಗುತ್ತದೆ. ದೇವರಿಗೆ ಸಹ ಇದನ್ನು ಎಡೆಯಾಗಿ ಅರ್ಪಿಸಲಾಗುತ್ತದೆ. ರುಚಿಕರವಾದ, ಸಿಹಿಯಾದ ಈ ವಿಶೇಷ ಖಾದ್ಯವನ್ನು ತಯಾರಿಸೋ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    ಅಕ್ಕಿ-1 ಕಪ್‌
    ತೆಂಗಿನಕಾಯಿ ತುರಿ- 2 ಕಪ್
    ತುರಿದ ಬೆಲ್ಲ- 1 ಕಪ್‌
    ಏಲಕ್ಕಿ ಕಾಳು – 4
    ಹಸಿ ಅಕ್ಕಿ – 2 ಕಪ್
    ಒಂದು ಚಿಟಿಕೆ ಉಪ್ಪು
    ಬಾಳೆ ಎಲೆಗಳು

    ಮಾಡುವ ವಿಧಾನ
    ಅರಿಶಿನ ಎಲೆ ಸಿಹಿ ಕಡುಬನ್ನು ಮಾಡುವ ಮೊದಲು ಅಕ್ಕಿಯನ್ನು (Rice) ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಆ ನಂತರ ನೀರೆಲ್ಲಾ ಬಸಿದು ತೆಗೆದು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಬೆಲ್ಲವನ್ನು ತುರಿದು, ಇದಕ್ಕೆ ತುರಿದ ತೆಂಗಿನಕಾಯಿ (coconut), ಏಲಕ್ಕಿ ಕಾಳು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಈಗ ಮೊದಲೇ ತಂದಿಟ್ಟ ಅರಿಶಿನ ಎಲೆಯನ್ನು ನೀಟಾಗಿ ಒರೆಸಿಕೊಂಡು ಇದರ ಮೇಲೆ ತೆಳುವಾಗಿ ಹಿಟ್ಟನ್ನು ಹರಡಿ. ಇದರ ಮಧ್ಯದಲ್ಲಿ ಬೆಲ್ಲ ಹಾಗೂ ತೆಂಗಿನತುರಿಯ ಮಿಶ್ರಣವನ್ನಿಟ್ಟು ಎಲೆಯನ್ನು ನೀಟಾಗಿ ಮಡಚಿಕೊಳ್ಳಬೇಕು. ಇದನ್ನು ಬಾಳೆ ಎಲೆಯಲ್ಲಿ ಇಟ್ಟು ಮಡಚಬೇಕು. ಬಳಿಕ ಇಡ್ಲಿ ಮಾಡುವ ಪಾತ್ರೆಯಲ್ಲಿ ಉಗಿಯಲ್ಲಿ ಈ ಕಡುಬನ್ನು ಬೇಯಿಸಬೇಕು. ಈ ಕಡುಬುಗಳನ್ನು ಸ್ಪಲ್ಪ ದೂರ ದೂರ ಇಡುವುದರಿಂದ ಬೆಲ್ಲ ಕರಗಿದಾಗ ಇದು ಪರಸ್ಪರ ಅಂಟಿಕೊಳ್ಳುವುದಿಲ್ಲ. 10-12 ನಿಮಿಷಗಳ ಕಾಲ ಸ್ಟೀಮ್ ಮಾಡಿದರೆ ಅರಿಶಿನ ಎಲೆಯ ಸಿಹಿ ಕಡುಬು ಸವಿಯಲು ಸಿದ್ಧವಾಗುತ್ತದೆ.