Tag: nagara panchami

  • Nag Panchami: ವರ್ಷಕೊಮ್ಮೆ ನಾಗಪಂಚಮಿಯಂದು ಮಾತ್ರ ತೆರೆಯುತ್ತೆ ನಾಗಚಂದ್ರೇಶ್ವರ ದೇವಾಲಯ

    Nag Panchami: ವರ್ಷಕೊಮ್ಮೆ ನಾಗಪಂಚಮಿಯಂದು ಮಾತ್ರ ತೆರೆಯುತ್ತೆ ನಾಗಚಂದ್ರೇಶ್ವರ ದೇವಾಲಯ

    ದೇಶಾದ್ಯಂತ ನಾಗಪಂಚಮಿ (Nagara Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗಪಂಚಮಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಸರ್ಪಗಳನ್ನು ಶಿವನ ಆಭರಣ ಎಂದು ಪರಿಗಣಿಸಲಾಗಿದೆ. ನಾಗದೇವರಿಗೆ ಭಕ್ತರು ಹಾಲೆರೆದು, ಪೂಜೆ-ಪುನಸ್ಕಾರಗಳ ಮೂಲಕ ಹಬ್ಬ ಆಚರಿಸುತ್ತಾರೆ. ಶಿವಲಿಂಗ ಪೂಜೆ ಕೂಡ ನೆರವೇಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ. ಭಾರತದಲ್ಲಿ ಅನೇಕ ಸರ್ಪ ದೇವಾಲಯಗಳಿವೆ. ಅವುಗಳಲ್ಲಿ ಒಂದು ಉಜ್ಜಯಿನಿಯ (Ujjain) ನಾಗಚಂದ್ರೇಶ್ವರ ದೇವಾಲಯ (Nagchandreshwar Temple). ಇದು ಪ್ರಸಿದ್ಧ ಮಹಾಕಾಳ ದೇವಾಲಯದ ಮೂರನೇ ಮಹಡಿಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ನಾಗಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ.

    ಈ ದೇವಾಲಯದಲ್ಲಿ ನಾಗರಾಜ ತಕ್ಷಕ ಸ್ವತಃ (ನಾಗರ ರಾಜ) ವಾಸಿಸುತ್ತಾನೆ ಎಂದು ನಂಬಲಾಗಿದೆ. ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನದ ಅದ್ಭುತ ಪ್ರತಿಮೆಯಿದೆ. ಇದರಲ್ಲಿ ಶಿವ ಮತ್ತು ಪಾರ್ವತಿಯರು ಹೆಡೆ ಬಿಚ್ಚಿದ ಹಾವಿನ ಆಸನದ ಮೇಲೆ ಕುಳಿತಿರುವ ಭಂಗಿ ಇದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಉಜ್ಜಯಿನಿ ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಅಂತಹ ಪ್ರತಿಮೆ ಇಲ್ಲ. ಅದರ ದರ್ಶನಕ್ಕಾಗಿ, ಸೋಮವಾರ ರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ, ದೇವಾಲಯದ ಬಾಗಿಲುಗಳನ್ನು ಮತ್ತೆ ಒಂದು ವರ್ಷದವರೆಗೆ ಮುಚ್ಚಲಾಗುತ್ತದೆ. ಇದನ್ನೂ ಓದಿ: ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

    ಸರ್ಪ ರಾಜ ತಕ್ಷಕನು ತೀವ್ರ ತಪಸ್ಸು ಮಾಡಿದನು. ಭೋಲೆನಾಥನು ಅವನ ತಪಸ್ಸಿನಿಂದ ಸಂತಸಗೊಂಡು ಹಾವುಗಳ ರಾಜ ತಕ್ಷಕ ನಾಗನಿಗೆ ಅಮರತ್ವದ ವರವನ್ನು ನೀಡಿದನು. ಅಂದಿನಿಂದ ತಕ್ಷಕ ರಾಜನು ಭಗವಂತನ ಸಹವಾಸದಲ್ಲಿ ವಾಸಿಸಲು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಆದರೆ ಮಹಾಕಾಳ ಕಾಡಿನಲ್ಲಿ ವಾಸಿಸುವ ಮೊದಲು, ಅವನ ಏಕಾಂತತೆಯಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ಆದ್ದರಿಂದ ಅವನು ನಾಗಪಂಚಮಿಯ ದಿನದಂದು ಮಾತ್ರ ದರ್ಶನಕ್ಕೆ ಲಭ್ಯವಿರುತ್ತಾನೆ ಎಂಬುದು ನಂಬಿಕೆಯಾಗಿದೆ.

    4 ಲಕ್ಷ ಭಕ್ತರು ಭೇಟಿ
    ಮಂಗಳವಾರ ನಾಗಪಂಚಮಿಯ ಸಂದರ್ಭದಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಧ್ಯರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ಭಕ್ತರು ಪೂಜೆ ಸಲ್ಲಿಸಿದ್ದರು. ಇಂದು ರಾತ್ರಿ 12 ಗಂಟೆಯವರೆಗೆ ದೇವಾಲಯವು ದರ್ಶನಕ್ಕಾಗಿ ತೆರೆದಿರುತ್ತದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಮಾರು 4 ಲಕ್ಷ ಭಕ್ತರು ಇಲ್ಲಿ ದರ್ಶನ ಪಡೆದಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಗೆ ಬಾಗಿಲು ಮುಚ್ಚುವ ಹೊತ್ತಿಗೆ ಕನಿಷ್ಠ 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಶಿವ, ಪಾರ್ವತಿ ಮತ್ತು ಸರ್ಪ ದೇವರು ಒಟ್ಟಿಗೆ ಕುಳಿತಿರುವ ದೇವಾಲಯದ ವಿಶಿಷ್ಟ ವಿಗ್ರಹವು ಭಕ್ತರಿಗೆ ಪ್ರಬಲ ಆಕರ್ಷಣೆಯ ಕೇಂದ್ರವಾಗಿದೆ. ದೇವಾಲಯದಲ್ಲಿ ಪೂಜೆ ಮಾಡುವುದರಿಂದ ಜಾತಕದಲ್ಲಿನ ಕಾಳಸರ್ಪ ದೋಷ ಮತ್ತು ಇತರ ಸರ್ಪ ದೋಷಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

  • ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಳೆ ಬಂದು ನಾಗರ ಕಲ್ಲು ತೊಳೆದು ಆಯ್ತು ಇನ್ನೂ ಪೂಜೆ ಆಗಿಲ್ಲ! ಹೀಗೆ ಹಣ್ಣು ಕಾಯಿ ತಯಾರಿ ಮಾಡ್ಕೊಳ್ತ ಹಿರಿಕರು ನಾಗರ ಪಂಚಮಿಯಂದು (Nagara Panchami) ಸಾಮಾನ್ಯವಾಗಿ ಹೇಳುವ ಮಾತಿದು.

    ಹೀಗೆ ಮಲೆನಾಡಿನಲ್ಲಿ (Malnad) ನಾಗರ ಪಂಚಮಿಯ ದಿನ ಮಳೆ ಬಂದೇ ಬರುತ್ತೆ. ಮಳೆ ನಾಗರಕಲ್ಲನ್ನು ತೊಳೆದ ಬಳಿಕ ಪೂಜೆ ನಡೆಸಲಾಗುತ್ತದೆ. ಈ ನಂಬಿಕೆ ನಮ್ಮ ಜನರ ಮತ್ತು ಪ್ರಕೃತಿಯ ನಡುವಿನ ಆಳವಾದ ಸಂಬಂಧ ಯಾವ ಮಟ್ಟದ್ದು ಎಂಬುದಕ್ಕೆ ಸಾಕ್ಷಿ ಕೂಡ ಹೌದು. ಊರ ಹೊರಗಿನ ಕಾಡಿನ ಭಾಗದಲ್ಲಿರುವ ನಾಗರ ಕಟ್ಟೆಗೆ ಅಥವಾ ಅರಳಿ ಮರದ ಕೆಳಗಿನ ನಾಗರ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ಈ ಹಬ್ಬ ಪ್ರಕೃತಿಯ ಆರಾಧನೆ ಒಂದು ಭಾಗವಾಗಿ ಮಲೆನಾಡಲ್ಲಿ ಕಂಡು ಬರುತ್ತದೆ.

    ಹಾಗೆ ನಾಗನಿಗೆ ಮಲೆನಾಡಿನ ಭಾಗದಲ್ಲಿ ಗುಡಿಗಳು ಕಡಿಮೆ. ಹಾಗೆ ನೆಲದ ಮೇಲೋ, ಅಥವ ಕಟ್ಟೆಯ ಮೇಲೆ ನಾಗರ ಕಲ್ಲುಗಳಿರುತ್ತವೆ. ಶತಶತಮಾನದ ನಾಗರ ಕಲ್ಲುಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತವೆ. ಅವು ಎಷ್ಟರ ಮಟ್ಟಿಗೆ ಹಳೆಯದ್ದು ಎಂದರೆ ಸವೆದು ಪೆನ್ಸಿಲ್‍ನ ಗೆರೆಯಂತೆ ಕಾಣುವ ಕಲ್ಲುಗಳು ಇವೆ! ಅವುಗಳನ್ನು ಯಾವುದೇ ರೀತಿಯ ಪುನರ್‍ನಿರ್ಮಾಣ ಮಾಡಲಾಗುವುದಿಲ್ಲ. ಅವು ಇದ್ದಂತೆಯೇ ಪೂಜೆಗಳು ನಡೆಯುತ್ತವೆ. ನಾಗರ ಪಂಚಮಿ ಬಳಿಕ ದೀಪಾವಳಿಗೆ ಇದೇ ನಾಗರ ಕ್ಲಲುಗಳಿಗೆ ಪೂಜೆ ನಡೆಯುತ್ತದೆ. ಬಳಿಕ ಒಂದು ವರ್ಷದ ವರೆಗೂ ಯಾವ ಪೂಜೆಗಳನ್ನು ಇವುಗಳಿಗೆ ಮಾಡಲಾಗುವುದಿಲ್ಲ. ಮತ್ತೆ ನಾಗರ ಪಂಚಮಿಗೆ ಅವುಗಳಿಗೆ ಪೂಜೆ ಮತ್ತು ನೈವೇದ್ಯ!

    ಆದಿನದ ವಿಶೇಷವಾಗಿ ಪೂಜೆಗೆ ಹೂವು, ಹಣ್ಣು, ಹಾಲು ಹಾಗೂ ನೈವೇದ್ಯಕ್ಕೆ ರವೆ ಉಂಡೆ ಇಡಲಾಗುತ್ತದೆ. ಕೇದಿಗೆ ಹೂವು ವಿಶೇಷವಾಗಿ ಪೂಜೆಗೆ ಬಳಕೆ ಆಗುತ್ತದೆ. ಇನ್ನೂ ಹುತ್ತದ ಆರಾಧನೆ ಎಲ್ಲೂ ಕಂಡು ಬರುವುದಿಲ್ಲ. ಆ ದಿನ ರಾತ್ರಿ ಕೈಗೆ ಮದರಂಗಿ ಹಚ್ಚುವಂಥಹ ಪದ್ಧತಿ ಇದೆ. ಈ ಬಗ್ಗೆ ಒಂದು ಮಾತಿದೆ, ಹಾವಿನ ಹಬ್ಬದಲ್ಲಿ ಹಚ್ಚಿದ ಮದರಂಗಿ ಗೋವಿನ ಹಬ್ಬದ ತನಕ ಇರಬೇಕು ಎನ್ನಲಾಗುತ್ತದೆ. ಗೋವಿನ ಹಬ್ಬ ಎಂದರೆ ದೀಪಾವಳಿ, ಮಲೆನಾಡಲ್ಲಿ ದೀಪಾವಳಿಯ ದಿನ ಗೋವಿನ ಪೂಜೆ ಮಾಡಲಾಗುತ್ತದೆ.

    ನಾಗ ದೇವರನ್ನು ವಿಶೇಷವಾಗಿ ಮಕ್ಕಳಿಲ್ಲದವರು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಜನರಲ್ಲಿದೆ. ಮನೆಯ ಒಳಗಡೆ ನಾಗನನ್ನು ಪ್ರಾರ್ಥಿಸಲಾಗುತ್ತದೆ. ಆದರೆ ವಿಶೇಷವಾಗಿ ಮನೆಯ ಒಳಭಾಗದಲ್ಲಿ ನಾಗನನ್ನು ಪೂಜಿಸುವ ಪದ್ಧತಿ ಇಲ್ಲ.

  • ‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ (Nagapanchami) ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಇದನ್ನೂ ಓದಿ:ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಜೇನು ಕುರುಬ ಸಾಂಗ್ ರಿಲೀಸ್

    ಹೀಗಿರುವಾಗ ನಾಗದೇವತೆ (Nagadevathe) ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರುವ ನಾಗ ದೇವರ ಹೆಸರಿನಲ್ಲಿ ಹಲವು ಚಿತ್ರಗಳು (Movies) ಬಂದಿದೆ. ಇದರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.

    1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರವಾಗಿದೆ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.

    1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’ ಸಿನಿಮಾ. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

    1991ರಲ್ಲಿ ಬಂದಿದ್ದ ‘ನಾಗಿಣಿ’ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆಯಾಗಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.

    1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ.ಎಸ್ ಆರ್ ದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದರು.

    ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ `ತಾಳೆ ಹೂವು ಎದೆಯಿಂದ’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.

    ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

    ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.

  • ಜೋಕಾಲಿ ಆಡಿ, ಕೊಬ್ಬರಿ ಕುಬುಸ ಕೊಡೋದೆ ಉತ್ತರ ಕರ್ನಾಟಕದ ನಾಗರ ಪಂಚಮಿ

    ಜೋಕಾಲಿ ಆಡಿ, ಕೊಬ್ಬರಿ ಕುಬುಸ ಕೊಡೋದೆ ಉತ್ತರ ಕರ್ನಾಟಕದ ನಾಗರ ಪಂಚಮಿ

    ಶ್ರಾವಣ ಬಂತು ಎಂದರೆ ಸಾಕು ಒಂದಾದ ಮೇಲೆ ಒಂದರಂತೆ ಹಬ್ಬಗಳು ಬರುತ್ತಲೇ ಇರುತ್ತವೆ. ಶ್ರಾವಣ ಆರಂಭವಾಗುತ್ತಲೇ ಪ್ರಾರಂಭವಾಗುವ ಹಬ್ಬ ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು. ಎರಡು ದಿನಗಳ ಕಾಲ ನಾಗನಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. 

    ಹಬ್ಬದ ಸಂಭ್ರಮ ಶುರುವಾಗುವುದೇ ಸಿಹಿ ತಿಂಡಿಗಳು, ಇನ್ನಿತರ ಖಾದ್ಯಗಳನ್ನು ತಯಾರಿಸುವ ಮೂಲಕ. ನಾಗರ ಪಂಚಮಿ ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೇ ಚಕ್ಕಲಿ, ಉಂಡೆ, ಕಡುಬು, ಎಳ್ಳುಂಡೆ, ಬೇಸನ್ ಲಾಡು, ರವೆ ಉಂಡೆ, ಶೇಂಗಾ ಉಂಡೆ, ಹೋಳಿಗೆ, ಚುರುಮುರಿ ಸೇರಿ ಇನ್ನಿತರ ವಿವಿಧ ರೀತಿಯ ತಿನಿಸುಗಳ ಸುಗಂಧ ಮನೆ ತುಂಬೆಲ್ಲ ಹರಡಿಕೊಳ್ಳುತ್ತದೆ. ಈ ಸುಗಂಧದಿಂದಲೇ ಹೇಳಿಬಿಡಬಹುದು ನಾಗರ ಪಂಚಮಿ ಶುರುವಾಗಿದೆ ಅಂತ. ಇವುಗಳು ಕೇವಲ ಹಬ್ಬಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದನ್ನು ಉಂಟು ಮಾಡುತ್ತವೆ. 

    ಇನ್ನು ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಒಂದು ದಿನ ಮನೆಯೊಳಗೆ ನಾಗಪ್ಪನ ಮೂರ್ತಿಗೆ ಹಾಲೆರೆದರೆ, ಎರಡನೇ ದಿನ ಹೊರಗಡೆ ನಾಗಪ್ಪನ ದೇಗುಲಕ್ಕೆ ತೆರಳಿ ಹಾಲಿರೆಯಲಾಗುತ್ತದೆ. ಮನೆಯೊಳಗೆ ಹಾಗೂ ದೇವಾಲಯಕ್ಕೆ ತೆರಳಿ ಹಾಲೆರೆದಾಗ ಎರಡು ಬಾರಿ ಅಭಿಷೇಕ ಮಾಡಲಾಗುತ್ತದೆ. ಮೊದಲಿಗೆ ಒಣ ಕೊಬ್ಬರಿಯಲ್ಲಿ ಹಾಲು ಹಾಕಿ, ಅದಕ್ಕೆ ತುಪ್ಪ ಸೇರಿಸಿ ಹಾಲೆರೆಯಲಾಗುತ್ತದೆ. ಎರಡನೇ ಬಾರಿಗೆ ನೀರಿಗೆ ತುಪ್ಪ ಬೆರೆಸಿ ಎರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ. 

    ನಾಗಪ್ಪನಿಗೆ ಎಳ್ಳು , ಎಳ್ಳುಂಡೆ, ತಂಬಿಟ್ಟು, ಇನ್ನಿತರ ಖಾದ್ಯಗಳನ್ನು ಇರಿಸಿ ನೈವೇದ್ಯ ಮಾಡಲಾಗುತ್ತದೆ. ಅರಿಶಿಣ ದಾರವನ್ನು ನಾಗಪ್ಪನಿಗೆ ಹಾಕಿ, ಬಳಿಕ ಹಾಲೆರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ. ಹಾಲೆರೆದ ಬಳಿಕ ನಾಗಪ್ಪನಿಗೆ ಹಾಕಿದ ದಾರವನ್ನ ತೆಗೆದು ಮನೆಯಲ್ಲಿರುವವರು ತಮ್ಮ ಕೊರಳಿಗೆ ಅಥವಾ ಕೈಗೆ ಕಟ್ಟಿಕೊಳ್ಳುವ ರೂಢಿ ಇದೆ. 

    ಜೋಕಾಲಿಯ ಸಂಭ್ರಮ:
    ನಾಗರ ಪಂಚಮಿ ಬಂತೆಂದರೆ ಸಾಕು ಎಲ್ಲರ ಮನೆಯದುರುಗಡೆ, ಒಳಗಡೆ ಜೋಕಾಲಿ ಕಾಣುವುದು ಸಾಮಾನ್ಯ. ಇದು ಜೋಕಾಲಿಯ ಪಂಚಮಿ ಎಂದರೆ ಹೇಳಬಹುದು. ಜೀವನವು ಜೋಕಾಲಿ ಎಂಬಂತೆ ಏರಿಳಿತಗಳನ್ನು ಹೊಂದಿರುತ್ತದೆ ಎಂಬುದು ಇದರ ಸಂಕೇತವಾಗಿದೆ. ಇನ್ನು ಅಣ್ಣ ತಂಗಿಯ ಮನೆಗೆ ಹೋಗುವುದು. ಹುತ್ತಿಗೆ ಹಾಲೆರೆದಾಗ ಹುತ್ತದ ಮಣ್ಣನ್ನು ತಂದು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿದಾಗ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ.

    ಉತ್ತರ ಕರ್ನಾಟಕದಲ್ಲಿ ಕೊಬ್ಬರಿ ಕುಬುಸ: 
    ಉತ್ತರ ಕರ್ನಾಟಕದಲ್ಲಿ ಆಷಾಢ ಮುಗಿದು ಶ್ರಾವಣ ಬಂತೆಂದರೆ ಸಾಕು ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಪೈಕಿ ಕೊಬ್ಬರಿ ಕುಬುಸ ಕೊಡುವುದು ಒಂದು ಸಂಪ್ರದಾಯ. ಅಣ್ಣ ತಂಗಿಯ ಮನೆಗೆ ಹೋಗಿ ತವರು ಮನೆಯಿಂದ ತಂದ ಕೊಬ್ಬರಿ ಕುಬುಸವನ್ನು ನೀಡುತ್ತಾರೆ. ಇದರಲ್ಲಿ ಸಿಹಿ ತಿಂಡಿಗಳು ಸೇರಿದಂತೆ ಹಬ್ಬಕ್ಕೆ ಮಾಡಿದ ಎಲ್ಲಾ ಖಾದ್ಯಗಳನ್ನು ಕೊಟ್ಟಿರುತ್ತಾರೆ. ಅದರ ಜೊತೆಗೆ ಒಂದು ಕುಪ್ಪಸವನ್ನು ಕೊಡುತ್ತಾರೆ. ಅದರಲ್ಲಿ ಒಣ ಕೊಬ್ಬರಿಯನ್ನು ಇಟ್ಟಿರುತ್ತಾರೆ. ಹೀಗಾಗಿ ಇದನ್ನು ಕೊಬ್ಬರಿ ಕುಬುಸ ಎಂದು ಕರೆಯಲಾಗುತ್ತದೆ.

  • ಶೆಟ್ಪಾಲ್;‌ ಈ ಊರಲ್ಲಿ ಹಾವುಗಳೊಂದಿಗೆ ಜನರ ವಾಸ!

    ಶೆಟ್ಪಾಲ್;‌ ಈ ಊರಲ್ಲಿ ಹಾವುಗಳೊಂದಿಗೆ ಜನರ ವಾಸ!

    ಶ್ರಾವಣ ಮಾಸ ಬಂತೆಂದರೆ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಶ್ರಾವಣದಲ್ಲಿ ಬರುವ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿ ದಿನ ನಾಗನಿಗೆ ಹಾಲೆರೆದು, ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜಿಸಲಾಗುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಜನರ ಮನೆಯೇ ಹಾವುಗಳ ವಾಸಸ್ಥಾನವಾಗಿದೆ. ಅರೇ ಇದೇನಿದು ಹಾವುಗಳನ್ನು ನೋಡಿದ್ರೆನೇ ಭಯವಾಗುತ್ತೆ. ಅಂಥದ್ರಲ್ಲಿ ಮನುಷ್ಯರು ಹಾವುಗಳೊಂದಿಗೆ ವಾಸಿಸಲು ಸಾಧ್ಯನಾ ಎಂದು ಯೋಚಿಸುತ್ತಿದ್ದೀರಾ? ಹೌದು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶೆಟ್ಪಾಲ್‌ ಗ್ರಾಮದಲ್ಲಿ ಜನರು ಹಾವುಗಳೊಂದಿಗೆ ವಾಸಿಸುವುದಲ್ಲದೇ, ಅವುಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹಾಗಿದ್ರೆ ಇಲ್ಲಿನ ಜನರು ಹಾವುಗಳೊಂದಿಗೆ ವಾಸಿಸುವುದೇಕೆ ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.

    ಹಾವಿಗೆ ನಮ್ಮ ದೇಶದಲ್ಲಿ ಮಹೋನ್ನತ ಸ್ಥಾನವಿದೆ. ನಾಗರಹಾವನ್ನು ದೇವರ ಸ್ಥಾನದಲ್ಲಿ ನಾವು ನೋಡುತ್ತೇವೆ. ನಾಗರಾಜನಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ಇರುವ ದೇಶ ನಮ್ಮದು. ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿಗೆ ಬಹಳ ಮಹತ್ವವಿದೆ. ಹಾವುಗಳನ್ನು ದೇವರೆಂದು ಪೂಜಿಸುವ ಊರುಗಳ ಪೈಕಿ ಶೆಟ್ಪಾಲ್‌ ಕೂಡ ಒಂದು. ಇಲ್ಲಿ ನಾಗರ ಪಂಚಮಿಗೆ ಮಾತ್ರವಲ್ಲದೇ ಪ್ರತಿದಿನ ಹಾವುಗಳನ್ನು ಪೂಜಿಸಲಾಗುತ್ತದೆ. ಅಲ್ಲದೇ ಹಾವುಗಳೊಂದಿಗಿನ ಜನರ ನಂಟು ಕೂಡ ಮಹತ್ವವಾದದ್ದು.

    SNAKE
    ಸಾಂದರ್ಭಿಕ ಚಿತ್ರ

    ಹಾವುಗಳೊಂದಿಗೆ ಜನರ ನಂಟು:
    ಶೆಟ್ಪಾಲ್ ಗ್ರಾಮವನ್ನು ʼಭಾರತದ ಹಾವಿನ ಗ್ರಾಮʼ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಮನೆಗಳಲ್ಲಿ ಹಾವುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ.ಈ ಹಳ್ಳಿಯಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಉಪಚರಿಸಲಾಗುತ್ತದೆ. ಅಲ್ಲಿನ ಸ್ಥಳೀಯರ ಪ್ರಕಾರ, ಹಾವುಗಳಿಗೆ ಸಹ ಮನೆಯಲ್ಲಿ ವಿಶೇಷವಾದ ಜಾಗವನ್ನು ನೀಡಲಾಗುತ್ತದೆ. ಅವುಗಳು ಮನೆಯಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಇಲ್ಲಿ ಹಾವುಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಹಳ್ಳಿಯ ಜನರು ಈ ಹಾವುಗಳಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ಮಾಡಿಕೊಡುತ್ತಾರೆ.

    ಹಾವುಗಳಿಗೆಂದೇ ವಿಶೇಷ ಮಂದಿರ:
    ಹಾವು ಮತ್ತು ಆಧ್ಯಾತ್ಮ ಒಟ್ಟಿಗೆ ಸಾಗುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಅವರು ಹಾವುಗಳನ್ನು ಪೂಜಿಸುವುದು ಮಾತ್ರವಲ್ಲ, ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಹಾವುಗಳಿಗೆ ಮುಡಿಪಾದ ಆಲಯವು ಕೂಡ ಇದೆ. ಈ ವಿಶೇಷ ಸ್ಥಳವನ್ನು ‘ಮಂದಿರ’ ಎಂದು ಕರೆಯಲಾಗುತ್ತದೆ. ಜನರು ಹೊಸ ಮನೆಯನ್ನು ಕಟ್ಟುವಾಗ ಹಾವಿಗೆ ವಿಶೇಷ ಸ್ಥಳವನ್ನು ನಿರ್ಮಿಸಲು ಮರೆಯುವುದಿಲ್ಲ.‌

    ಈ ಊರಿನಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ನಾಗರಹಾವಿನ ಬಗ್ಗೆ ಶ್ರದ್ಧೆಯಿದೆ, ಭಕ್ತಿ ಇದೆ. ಹೀಗಾಗಿ, ಪ್ರತಿಯೊಬ್ಬರು, ಪ್ರತಿ ಮನೆಯಲ್ಲೂ ಮನೆಗೆ ಬರುವ ಹಾವಿಗೆ ಪೂಜೆ ಸಲ್ಲಿಸುತ್ತಾರೆ. ತಂಪನ್ನರಸಿ ಹಾವುಗಳು ಬಂದರೆ ಅವುಗಳಿಗೆ ಹಾಯಾಗಿ ಮಲಗಲು ಸಹಾಯವಾಗಲಿ ಎಂದು ಮಂದಿರಗಳನ್ನು ನಿರ್ಮಿಸಲಾಗುತ್ತದೆ.

    ಗ್ರಾಮಸ್ಥರು ನಾಗರ ಹಾವುಗಳನ್ನು ಶಿವನ ದ್ಯೋತಕವೆಂದು ಪರಿಗಣಿಸುತ್ತಾರೆ. ಅವುಗಳನ್ನು ಬಹಳ ಘನತೆ ಮತ್ತು ಗೌರವದಿಂದ ಪರಿಗಣಿಸಲಾಗುತ್ತದೆ. ಹಾವುಗಳಿಗಾಗಿ ಈ ಗ್ರಾಮದಲ್ಲಿ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಈ ಗ್ರಾಮದಲ್ಲಿ ಹಾವುಗಳ ಸಂಖ್ಯೆ ಮನುಷ್ಯರ ಜನಸಂಖ್ಯೆಯನ್ನು ಮೀರಿದೆ. ಗ್ರಾಮಸ್ಥರೇ ಹಾವುಗಳಿಗೆ ಆಹಾರ ನೀಡುತ್ತಾರೆ ಎಂಬುದು ಇಲ್ಲಿನ ವಿಶೇಷ.

    ಈ ಗ್ರಾಮದ ಮಕ್ಕಳಿಗೆ ಹಾವಿನ ಭಯವೇ ಇಲ್ಲ. ಏಕೆಂದರೆ ಜನಸಾಮಾನ್ಯರಲ್ಲಿ ಹಾವುಗಳು ಬೆಳೆಯುತ್ತಿವೆ. ಮಕ್ಕಳು ಕೂಡ ಹಾವು ಕೊರಳಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಈ ಊರಿಗೆ ಹೋದರೆ ಹಾವು ಕಚ್ಚುತ್ತದೆ ಎಂಬ ಭಯ ಹಲವರದ್ದು. ಆದರೆ ಅಂತಹ ಸಂಗತಿಗಳು ಇಲ್ಲಿ ನಡೆಯುವುದಿಲ್ಲ. ಇದುವರೆಗೂ ಈ ಊರಲ್ಲಿ ಒಂದೇ ಒಂದು ಹಾವು ಕಚ್ಚಿದ ಪ್ರಕರಣ ವರದಿಯಾಗಿಲ್ಲ.ಇಲ್ಲಿ ಕೇವಲ ನಾಗರ ಹಾವು ಮಾತ್ರವಲ್ಲದೇ ನಾನಾರೀತಿಯ ಹಾವುಗಳು ವಾಸಿಸುತ್ತವೆ.

    ಈ ಊರಿನಲ್ಲಿ ಸುಮಾರು 2,600ಕ್ಕೂ ಅಧಿಕ ಗ್ರಾಮಸ್ಥರಿದ್ದಾರೆ. ಆದರೂ ಹಾವುಗಳ ಸಂಚಾರಕ್ಕೆ ಇಲ್ಲಿ ಎಂದೂ ಅಡ್ಡಿ ಎದುರಾಗಿದ್ದೇ ಇಲ್ಲ. ಜನರು ಯಾರೂ ಹಾವುಗಳಿಗೆ ತೊಂದರೆ ಮಾಡಿದ್ದೇ ಇಲ್ಲ. ವಿಶೇಷ ಅಂದರೆ ಹಾವುಗಳು ಮನೆಗೆ ಬಂದರೆ ಇಲ್ಲಿನ ಜನ ಓಡಿ ಹೋಗುವುದಿಲ್ಲ. ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾವುಗಳಾಗಲಿ, ಜನರಾಗಲಿ ಇಲ್ಲಿ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅದೂ ಅಲ್ಲದೆ, ಇದುವರೆಗೆ ಇಲ್ಲಿ ಹಾವು ಕಚ್ಚಿ ಅಥವಾ ಹಾವಿನಿಂದ ಏನಾದರೂ ತೊಂದರೆ ಆದ ಒಂದೇ ಒಂದು ಉದಾಹರಣೆ ಇಲ್ಲ ಎನ್ನುತ್ತಾರೆ ಜನ. ಇದನ್ನು ಕೇಳುವಾಗಲೇ ಮೈ ರೋಮಾಂಚನವಾಗುತ್ತದೆ. ಈ ಊರಿನಲ್ಲಿ ಸಿದ್ದೇಶ್ವರ ದೇಗುಲ ಇದೆ. ಒಂದೊಮ್ಮೆ ಬೇರೆ ಊರಿನಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರನ್ನು ಇಲ್ಲಿಗೆ ಕರೆತಂದರೆ ರೋಗಿ ತಕ್ಷಣ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರಿಗಿದೆ.

    ಈ ಗ್ರಾಮದಲ್ಲಿ ಈ ರೀತಿಯ ಸಂಪ್ರದಾಯ ಯಾವಾಗ ಶುರುವಾಯಿತು ಎಂದು ಯಾರಿಗೂ ತಿಳಿದಿಲ್ಲ. ಹಲವಾರು ವರ್ಷಗಳಿಂದ ಜನ ಈ ಊರಲ್ಲಿ ಹಾವುಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಇಲ್ಲಿನ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡುತ್ತಾರೆ ಎಂಬುದು ಇಂದಿಗೂ ನಿಗೂಢವಾಗಿದೆ.

    ಶೆಟ್ಪಾಲ್‌ ಎಲ್ಲಿದೆ?
    ಶೆಟ್ಪಾಲ್ ಪುಣೆಯಿಂದ 200 ಕಿಮೀ ಮತ್ತು ಮುಂಬೈನಿಂದ 350 ಕಿಮೀ ದೂರದಲ್ಲಿದೆ. ಮೊಡ್ನಿಂಬ್ ರೈಲು ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.

  • ನಾಗರ ಪಂಚಮಿ ವಿಶೇಷ – ಶ್ರೀಧರಸ್ವಾಮಿಗಳು ಪ್ರತಿಷ್ಠಾಪಿಸಿದ ಸುಬ್ರಹ್ಮಣ್ಯ ಕ್ಷೇತ್ರ

    ನಾಗರ ಪಂಚಮಿ ವಿಶೇಷ – ಶ್ರೀಧರಸ್ವಾಮಿಗಳು ಪ್ರತಿಷ್ಠಾಪಿಸಿದ ಸುಬ್ರಹ್ಮಣ್ಯ ಕ್ಷೇತ್ರ

    ಲೆನಾಡಿನ ತಪ್ಪಲಿನಲ್ಲಿರುವ ಸಾಗರದ (Sagar) ಶ್ರೀ ಕ್ಷೇತ್ರ ವರದಹಳ್ಳಿಯಲ್ಲಿ (Varadahalli) ನೆಲೆಸಿರುವ ಶ್ರೀಧರರ ಮಹಿಮೆ ಅಪಾರವಾದದ್ದು. ಅವರನ್ನು ನಂಬಿ ಬಂದವರಿಗೆ ಯಾವುದರಲ್ಲೂ ಸೋಲಿಲ್ಲ ಎಂಬುದು ಭಕ್ತರ ಮಾತು. ಹೀಗೆ ಒಮ್ಮೆ ಸಂಕಷ್ಟ ಪರಿಹಾರಕ್ಕಾಗಿ ಬಂದ ಬಡ ಕುಟುಂಬದವರಿಗಾಗಿ ʻಸುಬ್ರಹ್ಮಣ್ಯʼ ಸ್ವಾಮಿಯ ಕ್ಷೇತ್ರವನ್ನೇ ಸೃಷ್ಟಿ ಮಾಡಿದವರು ಅವರು. 

    ಶ್ರೀಧರರು ಪ್ರತಿಷ್ಠಾಪಿಸಿದ ನಾಗಬನ

    ಹೌದು.. ಒಂದು ಬಡ ಕುಟುಂಬ ಶ್ರೀಧರರಲ್ಲಿ (Sridharaswamy) ಬಂದು ನಮಗೆ ನಾಗ ದೋಷವಿದೆ. ಇದು ಪರಿಹಾರ ಆಗಬೇಕಾದರೆ ಕುಕ್ಕೆಗೆ ಹೋಗಬೇಕು. ಆದರೆ ನಮ್ಮ ಬಡತನದ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ಅದು ಸಾಧ್ಯವಾಗದ ಕಾರಣ ನಮ್ಮ ಕುಟುಂಬಕ್ಕೆ ನೆಮ್ಮದಿ ಇಲ್ಲದಂತಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದೇ ಕಾರಣಕ್ಕೆ, ಶ್ರೀ ಸುಬ್ರಹ್ಮಣ್ಯನನ್ನು ತಾವಿದ್ದಲ್ಲಿಯೇ (ವರದಹಳ್ಳಿಯಲ್ಲಿ) ಪ್ರತಿಷ್ಠಾಪಿಸಿ, ಇಲ್ಲೇ ಪೂಜೆ ಮಾಡಿ, ನಿಮ್ಮ ದೋಷ ಪರಿಹಾರ ಆಗುತ್ತದೆ ಎಂದು ಆಶೀರ್ವಾದ ಮಾಡಿದರು. ಇದಾದ ಬಳಿಕ ಆ ಕುಟುಂಬ ಅಲ್ಲಿ ಪೂಜೆ ಮಾಡಿ, ತಮ್ಮ ದೋಷದಿಂದ ಮುಕ್ತವಾಯ್ತು. (ಪ್ರತಿಷ್ಠಾಪಿಸುವಾಗ ಕುಕ್ಕೆಗೆ ಬಂದ ಭಕ್ತರಿಗೆ ಹೇಗೆ ಸಮಸ್ಯೆ ಪರಿಹಾರ ಆಗುತ್ತದೆಯೋ ಹಾಗೆ ಇಲ್ಲಿಯೂ ಆಗಬೇಕು ಎಂದು ಸುಬ್ರಹ್ಮಣ್ಯ ಸ್ವಾಮಿಯ ಬಳಿ ಶ್ರೀಧರ ಸ್ವಾಮಿಗಳು ಪ್ರಾರ್ಥಿಸಿದ್ದರು.)

    ವರದಹಳ್ಳಿ ಧರ್ಮಧ್ವಜ ಮತ್ತು ಶ್ರೀಧರ ತೀರ್ಥ

    ಹೀಗೆ ಸಾಕಷ್ಟು ಜನ ತಮ್ಮ ಸಂಕಷ್ಟಗಳನ್ನು ಇಲ್ಲಿ ಬಗೆಹರಿಸಿಕೊಂಡಿದ್ದಾರೆ. ಇಂದಿಗೂ ಸಹ ಬಗೆಹರಿಸಿಕೊಳ್ಳುತ್ತಿದ್ದಾರೆ. 

    ಇಲ್ಲಿ ಪ್ರತಿ ಷಷ್ಠಿಯಲ್ಲಿ ಪೂಜೆ ನಡೆಯುತ್ತದೆ. ವರ್ಷದಲ್ಲಿ 24 ಪೂಜೆಗಳು ನಡೆಯುತ್ತವೆ. ನಾಗರಪಂಚಮಿ ಹಾಗೂ ಚಂಪಾ ಷಷ್ಠಿಯಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಆಗ ಊರಿನ ಗ್ರಾಮಸ್ಥರು ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. 

    ಶ್ರೀ ರಾಮ ದುರ್ಗಾಂಬ ದೇವಾಲಯ

    ಇಲ್ಲಿಗೆ ಹೋಗೋದು ಹೇಗೆ?

    ಸಾಗರದಿಂದ (ಶಿವಮೊಗ್ಗ ಜಿಲ್ಲೆ) ಸುಮಾರು 10 ಕಿಮೀ ದೂರದಲ್ಲಿ ಈ ಕ್ಷೇತ್ರವಿದೆ. ಸಾಗರದಿಂದ – ವರದಹಳ್ಳಿಗೆ ತೆರಳಬೇಕು. ಅಲ್ಲಿನ ಶ್ರೀಧರಾಶ್ರಮ ಹಾಗೂ ಶ್ರೀರಾಮ ದುರ್ಗಾಂಬ ದೇವಾಲಯದ ಸಮೀಪವೇ ಈ ಕ್ಷೇತ್ರವಿದೆ. ಸಾಗರದಿಂದ ಇಲ್ಲಿಗೆ ತಲುಪಲು ಬಸ್‌ ಹಾಗೂ ವಾಹನ ಸೌಲಭ್ಯವಿದೆ. 

    ಶ್ರೀಧರರ ಬಗ್ಗೆ 

    ಶ್ರೀಧರರು ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ ಜನಿಸಿದರು. ಶ್ರೀ ದತ್ತನ ಸಾಕ್ಷಾತ್ಕಾರದಿಂದ ಇವರ ಜನನವಾಗಿತ್ತು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗ, ಪುಣೆಯ ಅನಾಥ ವಿದ್ಯಾರ್ಥಿ ಗೃಹ ಹಾಗೂ ಭಾವೆ ವಿದ್ಯಾಲಯದಲ್ಲಿಯೂ ನಡೆಯಿತು. ಇದರ ನಡುವೆ ಅವರಿಗೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಇದರಿಂದ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ʻಭಗವಾನ್’ ಎಂಬ ನಾಮವನ್ನು ನೀಡಿ, ಧರ್ಮ ಜಾಗೃತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು.

    ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಜೊತೆ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋರ್ಣೋದ್ಧಾರ ಮಾಡಿದರು.

    ಈ ರೀತಿ ಧರ್ಮ ಜಾಗೃತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯಿಂದ  ವರದಪುರದಲ್ಲಿ ನೆಲೆಸಿದರು. ತಮ್ಮ ಇಚ್ಛೆಯಂತೆ 19-4-73 ಬೆಳಗ್ಗೆ ಶ್ರೀಗಳು ಧ್ಯಾನಸ್ಥರಾಗಿ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು.

  • ನಾಗರ ಪಂಚಮಿಯಂದು ಹೀಗೆ ಮಾಡಿ – ಕಾಳ ಸರ್ಪದೋಷಕ್ಕೆ ಸಿಗುತ್ತೆ ಪರಿಹಾರ

    ನಾಗರ ಪಂಚಮಿಯಂದು ಹೀಗೆ ಮಾಡಿ – ಕಾಳ ಸರ್ಪದೋಷಕ್ಕೆ ಸಿಗುತ್ತೆ ಪರಿಹಾರ

    ಹಿಂದೂ ಧರ್ಮದಲ್ಲಿ ನಾಗಪಂಚಮಿ (Naga Panchami) ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ನಾಗಪಂಚಮಿಯಂದು ಶಿವನನ್ನು ಸರ್ಪ ದೇವತೆಯೊಂದಿಗೆ ಪೂಜಿಸಲಾಗುತ್ತದೆ. ಜೀವನದ ಅಡೆತಡೆಗಳು ನಿವಾರಣೆಯಾಗಲೆಂದು ಶಿವನಲ್ಲಿ ಪಾರ್ಥಿಸಲಾಗುತ್ತದೆ. ಹಿಂದೂಗಳು ಹಾವಿನ ದೇವನಾದ ನಾಗ ದೇವರನ್ನು ಪೂಜಿಸುತ್ತಾರೆ. ನಾಗದೇವರಿಗೆ ಹಾಲು ಮತ್ತು ಬೆಳ್ಳಿಯನ್ನು ಅರ್ಪಿಸಿ ಪೂಜಿಸುತ್ತಾರೆ. ಹುತ್ತಗಳಿಗೆ ತನಿ ಎರೆದು (ಹಾಲು ಎರೆದು) ಪ್ರಾರ್ಥಿಸುತ್ತಾರೆ.

    ಈ ವಿಶೇಷ ದಿನದಂದು ಶಿವಲಿಂಗದ ಮೇಲೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಿ ಪೂಜಿಸುವುದರಿಂದ ಕಾಳ ಸರ್ಪದೋಷದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕಾಲಸರ್ಪ ದೋಷ ಇರುವವರು ಏನು ಮಾಡಬೇಕು? ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಏನು ಅರ್ಪಿಸಬೇಕೆಂದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ – ಕೃಷ್ಣಾ ನದಿಗೆ ಹೆಚ್ಚಿದ ಒಳಹರಿವು, 8 ಸೇತುವೆಗಳು ಜಲಾವೃತ

    ಏನಿದು ಕಾಳ ಸರ್ಪದೋಷ?
    ಗ್ರಹಗಳಿಂದ ಉಂಟಾಗುವ ದೋಷಗಳಲ್ಲಿ ಕಾಳ ಸರ್ಪದೋಷವೂ ಒಂದು. ಜ್ಯೋತಿಷ್ಯ ಶಾಸ್ತçದಲ್ಲಿ, ರಾಹುವಿನ ಅಧಿದೇವತೆ ‘ಕಾಳ’ ಮತ್ತು ಕೇತುವಿನ ಅಧಿದೇವತೆ ‘ಸರ್ಪ’. ಜಾತಕದ ಗ್ರಹಗಳು ಈ ಎರಡು ಗ್ರಹಗಳ ನಡುವೆ ಬಂದಾಗ, ‘ಕಾಳ ಸರ್ಪ’ ದೋಷವು ಉಂಟಾಗುತ್ತದೆ. ಜಾತಕದಲ್ಲಿ ರಾಹು ಮತ್ತು ಕೇತುವಿನ ಅಶುಭ ಸ್ಥಾನವು ಕಾಳ ಸರ್ಪದೋಷವನ್ನು ಸೃಷ್ಟಿಸುತ್ತದೆ. ಎಲ್ಲ ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಕಂಡುಬಂದರೆ ದೋಷ ಉಂಟಾಗುತ್ತದೆ. ರಾಹು ಸೂರ್ಯ, ಚಂದ್ರ ಮತ್ತು ಗುರುಗಳೊಂದಿಗೆ ಬಂದಾಗ ದೋಷವಿದೆ. ರಾಹು-ಕೇತುಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಹೀಗಾಗಿ, ಅವು ಕ್ರೂರ ಗ್ರಹಗಳೆಂದು ಬಿಂಬಿತವಾಗಿವೆ.

    ಕಾಳ ಸರ್ಪದೋಷದಿಂದ ಏನಾಗುತ್ತೆ?
    ಜೀವನದಲ್ಲಿ ಅಡೆತಡೆಗಳು, ಶಾಂತಿ ಭಂಗ, ಆತ್ಮವಿಶ್ವಾಸದ ಕೊರತೆ, ಆರೋಗ್ಯ ಸಮಸ್ಯೆಗಳು, ಬಡತನ, ನಿರುದ್ಯೋಗ, ವ್ಯಾಪಾರದ ನಷ್ಟ, ಆತಂಕ, ಸ್ನೇಹಿತರಿಂದ ದ್ರೋಹ, ಸಂಬಂಧಿಕರಿಂದ ಬೆಂಬಲ ಸಿಗದಿರುವುದು ಮೊದಲಾದ ಸಮಸ್ಯೆಗಳು ಎದುರಾಗುತ್ತವೆ.

    ಜೇನುತುಪ್ಪ
    ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸುವುದರಿಂದ ಕೌಟುಂಬಿಕ ಕಲಹ ದೂರವಾಗುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ, ಇದು ವ್ಯಕ್ತಿಗೆ ಅದೃಷ್ಟವನ್ನು ತರುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಶ್ರದ್ಧಾಭಕ್ತಿಯಿಂದ ಅಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸಿ. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ

    ಹಸಿ ಹಾಲು
    ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷವಿದ್ದರೆ, ನಾಗಪಂಚಮಿಯ ಹಬ್ಬದಂದು ಶಿವಲಿಂಗದ ಮೇಲೆ ಹಸಿ ಹಾಲನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ, ನೀವು ಬ್ರಾಹ್ಮಿ ಮುಹೂರ್ತದಲ್ಲಿ ಶಿವಲಿಂಗದ ಮೇಲೆ ಹಾಲು ಅರ್ಪಿಸಬೇಕು. ಇದರಿಂದ ನಿಮಗೆ ಶಿವನ ವಿಶೇಷ ಆಶೀರ್ವಾದ ಸಿಗುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಣೆಯಾಗುತ್ತವೆ.

    ಧಾತುರ
    ಧಾತುರವನ್ನು ಅರ್ಪಿಸುವುದರಿಂದ ಶಿವನು ಸಂತುಷ್ಟನಾಗುತ್ತಾನೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಧಾತುರವನ್ನು ಅರ್ಪಿಸುವುದರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ.

    ಬಿಲ್ವಪತ್ರೆ
    ಬಿಲ್ವಪತ್ರೆಯು ಶಿವನಿಗೆ ತುಂಬಾ ಪ್ರಿಯವಾದದ್ದು. ವಿಶೇಷ ದಿನ, ಶಿವಲಿಂಗದ ಮೇಲೆ ಭಕ್ತಿಯಿಂದ ಬಿಲ್ಪತ್ರೆಯನ್ನು ಅರ್ಪಿಸಿ. ಶಿವನು ಇದರಿಂದ ಪ್ರಸನ್ನನಾಗುತ್ತಾನೆ. ಭಕ್ತನ ಎಲ್ಲಾ ಆಸೆಗಳು ಈಡೇರುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.

    ಅಕ್ಷತೆ-ಚಂದನ
    ನಾಗಪಂಚಮಿಯ ಹಬ್ಬದಂದು ಶಿವಲಿಂಗದ ಮೇಲೆ ಅಕ್ಷತೆ ಮತ್ತು ಚಂದನವನ್ನು ಅರ್ಪಿಸುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಶಿವನಿಗೆ ಅಕ್ಷತೆ-ಚಂದನವನ್ನು ಅರ್ಪಿಸುವುದರಿಂದ ಪಾಪಗಳು ನಾಶವಾಗುತ್ತವೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳದಂಧೆ ಕಾರಣ – ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

    ಕಪ್ಪು ಎಳ್ಳು
    ನಾಗಪಂಚಮಿಯಂದು, ಕಪ್ಪು ಎಳ್ಳು ಬೆರೆಸಿದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಕಾಲಸರ್ಪ ದೋಷದಿಂದ ಪರಿಹಾರ ದೊರೆಯುವುದಲ್ಲದೆ, ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಸಂತೋಷ ಮತ್ತು ಶಾಂತಿ ಸಿಗುತ್ತದೆ.

  • ನಾಗರ ಪಂಚಮಿ ವಿಶೇಷ: ಅಚ್ಚುಮೆಚ್ಚಿನ ಬಗೆಬಗೆಯ ಸಿಹಿ ತಿಂಡಿಗಳು

    ನಾಗರ ಪಂಚಮಿ ವಿಶೇಷ: ಅಚ್ಚುಮೆಚ್ಚಿನ ಬಗೆಬಗೆಯ ಸಿಹಿ ತಿಂಡಿಗಳು

    ನಾಗರಪಂಚಮಿ (Nagara Panchamni) ಹಬ್ಬ ಭಾರತದಲ್ಲಿ ಆಚರಿಸಲಾಗುವ ಕೆಲವು ಪ್ರಾದೇಶಿಕ ಹಬ್ಬಗಳಲ್ಲಿ ಒಂದು. ಕರ್ನಾಟಕದಲ್ಲಿ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಹೆಚ್ಚಾಗಿ ಈ ಹಬ್ಬದ ಆಚರಣೆ ಕಂಡುಬರುತ್ತದೆ. ನಾಗರಪಂಚಮಿಯ ದಿನದಂದು ಜನರು ದೇವಸ್ಥಾನದ ಹತ್ತಿರದಲ್ಲಿರುವ ನಾಗನ ಹುತ್ತಗಳು, ಬನಗಳಿಗೆ ಭೇಟಿ ನೀಡಿ ಹಾಲು ಇಟ್ಟು ಪೂಜೆ ಮಾಡಿ ಆಚರಿಸುತ್ತಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ.

    ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಹಾಗೂ ಹಾವನ್ನೂ ದೇವರ ಸಮಾನವಾಗಿ ಕಂಡು, ಜನರು ಹಾವನ್ನು ಪೂಜಿಸುತ್ತಾರೆ. ಪಂಚಮಿಯ ದಿನ, ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಮನೆಯ ಪ್ರವೇಶ ದ್ವಾರದಲ್ಲಿ ನಾಗಮೂರ್ತಿಯನ್ನು ಮಾಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇದು ಹಾವಿನ ಕಾಟದಿಂದ ಮನೆಯನ್ನು, ಜನರನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.

    ನಾಗರ ಪಂಚಮಿ ಆಚರಣೆಯಲ್ಲಿ ಆಹಾರವು (Food) ಪ್ರಮುಖ ಪಾತ್ರವಹಿಸುತ್ತದೆ. ತಯಾರಾದ ಭಕ್ಷ್ಯಗಳು ಸಾಮಾನ್ಯವಾಗಿ ಸಸ್ಯಾಹಾರಿಯಾಗಿದ್ದು, ಅವು ಆ ದಿನದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಹೊಂದಿಕೊಳ್ಳುತ್ತವೆ. ಪದಾರ್ಥಗಳು ಮತ್ತು ಪಾಕವಿಧಾನಗಳ ಆಯ್ಕೆಯು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಇದನ್ನೂ ಓದಿ: ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ಪಾಥೋಲಿ: ಅಕ್ಕಿಹಿಟ್ಟು, ತೆಂಗಿನಕಾಯಿ ಮತ್ತು ಬೆಲ್ಲವನ್ನು ಹಾಕಿ, ಅರಿಶಿನ ಎಲೆಗಳಲ್ಲಿ ಬೇಯಿಸಲಾಗುವ ಸಾಂಪ್ರದಾಯಿಕ ಸಿಹಿ ಭಕ್ಷ್ಯ ಪಾಥೋಲಿ. ಇದನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ.

    ಕರಿತ್ಯ ಕಡುಬು (ಕರ್ನಾಟಕ): ಕರಿದ ಕಡುಬು ಎಂದೂ ಕರೆಯಲ್ಪಡುವ ಕರಿತ್ಯ ಕಡುಬು ಅಕ್ಕಿ ಹಿಟ್ಟಿನಿಂದ ತಯಾರಿಸಿದ ಮತ್ತು ಮಸಾಲೆಯುಕ್ತ ತೆಂಗಿನಕಾಯಿ ತುಂಬಿದ ಖಾರದ ಖಾದ್ಯವಾಗಿದೆ. ಇದು ನಾಗ ಪಂಚಮಿಯ ಸಮಯದಲ್ಲಿ ಕರ್ನಾಟಕದಲ್ಲಿ ಮಾಡಲಾಗುವ ಒಂದು ಸಾಂಪ್ರದಾಯಿಕ ಭಕ್ಷ್ಯವಾಗಿದೆ.

    ತಿಲ್ಕುಟ್ (ಬಿಹಾರ): ತಿಲ್ಕುಟ್, ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿ, ಬಿಹಾರದಲ್ಲಿ ನಾಗ ಪಂಚಮಿಯ ಸಮಯದಲ್ಲಿ ಈ ಖಾದ್ಯ ಪ್ರಧಾನವಾಗಿದೆ. ಇದು ಪೌಷ್ಟಿಕ ಮತ್ತು ರುಚಿಕರವಾದ ಖಾದ್ಯವಾಗಿದೆ. ಇದನ್ನೂ ಓದಿ: ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ರಸ್ಕದಮ್ (ಪಶ್ಚಿಮ ಬಂಗಾಳ): ಪನೀರ್ ಮತ್ತು ಖೋಯಾ (ಹಾಲಿನ ಘನವಸ್ತುಗಳು) ನಿಂದ ತಯಾರಿಸಿದ ಜನಪ್ರಿಯ ಬಂಗಾಳಿ ಸಿಹಿತಿಂಡಿಯಾಗಿದೆ. ನಾಗ ಪಂಚಮಿಯಂತಹ ಹಬ್ಬದ ಸಂದರ್ಭಗಳಲ್ಲಿ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.

    ಪಾಲ್ ಕೊಝುಕಟ್ಟೈ (ತಮಿಳುನಾಡು): ಪಾಲ್ ಕೊಝುಕಟ್ಟೈ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಮತ್ತು ಸಿಹಿಯಾದ ಹಾಲಿನಲ್ಲಿ ಬೇಯಿಸಿದ ಸಾಂಪ್ರದಾಯಿಕ ತಮಿಳು ಸಿಹಿ ಖಾದ್ಯವಾಗಿದೆ. ತಮಿಳುನಾಡಿನಲ್ಲಿ ನಾಗ ಪಂಚಮಿಯ ಸಮಯದಲ್ಲಿ ಇದು ನೆಚ್ಚಿನದು.

    ನಾಗರ ಪಂಚಮಿ ಕೇವಲ ಧಾರ್ಮಿಕ ಹಬ್ಬವಲ್ಲ; ಇದು ಪ್ರಕೃತಿ, ಸಂಪ್ರದಾಯ ಮತ್ತು ಪಾಕಶಾಲೆಯ ವೈವಿಧ್ಯತೆಯ ಆಚರಣೆಯಾಗಿದೆ. ಈ ದಿನದಂದು ತಯಾರಿಸಲಾದ ವಿಶೇಷ ಆಹಾರಗಳು ರುಚಿಕರವಾಗಿರುವುದಲ್ಲದೇ, ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ.

    ಶರತ್‌ ಎ. ಎಸ್‌.

  • ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪಂಚಮಿಯ (Nagara Panchami) ನಂತರ ಸಾಲು ಸಾಲು ಹಬ್ಬಗಳು ಬರತೊಡಗುತ್ತದೆ. ವರ ಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ರಕ್ಷಾ ಬಂಧನ… ಹೀಗೆ ಒಂದರ ಹಿಂದೆ ಒಂದು ಬರತೊಡಗುತ್ತದೆ.

    ಪುರಾಣದಲ್ಲಿ ಹಾವಿನ ಕುರಿತಾಗಿ ಹಲವು ಕಥೆಗಳು ಇದೆ. ಅದರಲ್ಲಿ ಪ್ರಮುಖವಾಗಿ ಜನಮೇಜಯ ನಡೆಸಿದ್ದ ಸರ್ಪಯಾಗ ಬಹಳ ವಿಶೇಷ. ಜನಮೇಜಯ ಯಾರು? ಆತ ಸರ್ಪಯಾಗ ನಡೆಸಿದ್ದು ಯಾಕೆ? ನಾಗರ ಪಂಚಮಿಗೆ ಏನು ಸಂಬಂಧ ಎಲ್ಲಾ ಕಥೆಗಳನ್ನು ಇಲ್ಲಿ ತಿಳಿಸಲಾಗಿದೆ.

    ಏನಿದು ಸರ್ಪಯಾಗ?
    ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯ (Janamejaya) ವೈಶಂಪಾಯ ಮಹರ್ಷಿಯಿಂದ ಮಹಾಭಾರತದ (Mahabharata) ಕಥೆಯನ್ನು ಕೇಳುತ್ತಾನೆ. ತನ್ನ ತಂದೆ ಪರೀಕ್ಷಿತನು ಸರ್ಪ ರಾಜ ತಕ್ಷಕನಿಂದ ಕಚ್ಚಿ ಮೃತಪಟ್ಟಿದ್ದನ್ನು ತಿಳಿದು ಸರ್ಪಗಳ ಮೇಲೆ ಸೇಡು ತೀರಿಸಲು ಮುಂದಾಗುತ್ತಾನೆ. ನನ್ನ ತಂದೆಯನ್ನು ಕಚ್ಚಿದ ಸರ್ಪಗಳು ಲೋಕದಲ್ಲೇ ಇರಬಾರದು ಎಂದು ಸಂಕಲ್ಪ ಮಾಡಿ ದೊಡ್ಡ ಸರ್ಪಯಾಗಕ್ಕೆ ಮುಂದಾಗುತ್ತಾನೆ. ಇದನ್ನೂ ಓದಿ: ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ಪರೀಕ್ಷಿತನು ತಕ್ಷಕನಿಂದ ಸಾವನ್ನಪ್ಪಲು ಕಾರಣವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಕೆಲ ವರ್ಷ ಆಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಪಾಂಡವರ ನಂತರ ಅಭಿಮನ್ಯು – ಉತ್ತರೆಯ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ಹೋದಾಗ ಬಾಯಾರಿಕೆ ಆಗುತ್ತದೆ. ಈ ವೇಳೆ ಆತ ಶಮಿಕ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿ ಧ್ಯಾನಸ್ಥನಾಗಿದ್ದ ಕಾರಣ ಪರೀಕ್ಷಿತನನ್ನು ಸರಿಯಾಗಿ ಸತ್ಕರ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪರೀಕ್ಷಿತ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ. ನಂತರ ಮುನಿಪುತ್ರ ಶೃಂಗಿ ಆಶ್ರಮಕ್ಕೆ ಬಂದು ತಂದೆಯ ಕೊರಳಿನಲ್ಲಿ ಹಾವು ಇರುವುದನ್ನು ಕಂಡು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲದೇ ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು 7 ದಿನದ ಒಳಗಡೆ ಸರ್ಪ ಕಡಿದು ಸಾವನ್ನಪ್ಪಲಿ ಎಂದು ಶಪಿಸುತ್ತಾನೆ. ಈ ಶಾಪಕ್ಕೆ ತುತ್ತಾಗಿದ್ದ ಪರೀಕ್ಷಿತ ತಕ್ಷಕನಿಂದ ಸಾವನ್ನಪ್ಪುತ್ತಾನೆ.

    ತಂದೆಯ ಸಾವಿಗೆ ತಕ್ಷಕ ಕಾರಣ ಎಂದು ತಿಳಿದ ಜನಮೇಜ ದೊಡ್ಡ ಸರ್ಪಯಾಗ ಮಾಡುವಂತೆ ಋತ್ವಿಜರಿಗೆ ಸೂಚಿಸುತ್ತಾನೆ. ಸರ್ಪ ಯಾಗದಲ್ಲಿ ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತಿದ್ದರು. ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು.

    ಎಲ್ಲಾ ಹಾವುಗಳ ದಹನವಾಗಬೇಕೆಂಬ ಪ್ರತಿಜ್ಞೆ ಈಡೇರಬೇಕೆಂದು ಜನಮೇಜಯ ಪಣ ತೊಟ್ಟಿದ್ದ. ತನ್ನ ಸಂತತಿಯವರು ಎಲ್ಲರೂ ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ದೇವೇಂದ್ರನ ಮೊರೆ ಹೋಗಿ ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ದೇವೇಂದ್ರ ನನ್ನನ್ನು ಗಟ್ಟಿಯಾಗಿ ಹಿಡಿದಿಕೋ ಯಾವುದೇ ಯಾಗಗಳು ನಿನ್ನನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಭಯ ನೀಡುತ್ತಾನೆ. ಇಂದ್ರನ ಮಾತಿನಂತೆ ತಕ್ಷಕ ಆತನನ್ನು ಗಟ್ಟಿ ಹಿಡಿದುಕೊಳ್ಳುತ್ತಾನೆ.

    ಸರ್ಪಯಾಗದ ತೀವ್ರತೆಗೆ ಬೆದರಿದ ಸರ್ಪಗಳು ತಮ್ಮ ಜರತ್ಕಾರುವಿನ ಮೊರೆ ಹೋಗುತ್ತವೆ. ಸರ್ಪಗಳ ಪ್ರಾರ್ಥನೆಗೆ ಒಗೊಟ್ಟ ಜರತ್ಕಾರು ತನ್ನ ಪುತ್ರನಾದ ಆಸ್ತಿಕ ಋಷಿಯನ್ನು ಜನಮೇಜಯನಲ್ಲಿಗೆ ಕಳುಹಿಸುತ್ತಾಳೆ. ಬ್ರಹ್ಮಚಾರಿಯಾದ ಆಸ್ತಿಕ ಜನಮೇಜಯ ನಡೆಸುತ್ತಿದ್ದ ಯಾಗಶಾಲೆಗೆ ಬರುತ್ತಾನೆ. ಇಂದ್ರ ಸಹಿತವಾಗಿ ತಕ್ಷಕ ಯಾಗಕ್ಕೆ ಬೀಳುವ ಸಮಯದಲ್ಲಿ ಯಾಗ ಶಾಲೆ ಪ್ರವೇಶಿಸಿದ ತಕ್ಷಕ ಬ್ರಹ್ಮಚಾರಿಗೆ ದಕ್ಷಿಣೆ ನೀಡದೇ ಯಾಗ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸುತ್ತಾನೆ.

    ಈ ವೇಳೆ ಇಕ್ಕಟ್ಟಿಗೆ ಸಿಲುಕಿದ ಜನಮೇಜಯ, ನಿನಗೆ ಏನು ಬೇಕೋ ಕೇಳು. ಅದನ್ನು ನಾನು ನೀಡುತ್ತೇನೆ ಎಂದು ಹೇಳುತ್ತಾನೆ. ತಕ್ಷನಿಂದ ಈ ಮಾತು ಬಂದ ಕೂಡಲೇ ಈಗಲೇ ಸರ್ಪಯಾಗ ನಿಲ್ಲಿಸು. ಇದೇ ನೀನು ನನಗೆ ನೀಡುವ ದಕ್ಷಿಣೆ ಎಂದು ಆಸ್ತಿಕ ಹೇಳುತ್ತಾನೆ. ಆಸ್ತಿಕ ಕೇಳಿದ ಈ ದಕ್ಷಿಣೆಯಿಂದ ಏನು ಮಾಡಬೇಕು ಎಂದು ತೋಚದೇ ಕೊನೆಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಜನಮೇಜಯ ಏನು ಮಾಡುವಂತಿರಲಿಲ್ಲ.

    ಯಾಗ ನಿಂತ ಬಳಿಕ ಆಸ್ತಿಕ, ಪ್ರಾಣಿ ಹಿಂಸೆ ಮಾಡಬಾರದು ಜನಮೇಜಯನಿಗೆ ಎಂದು ಬುದ್ಧಿ ಹೇಳುತ್ತಾನೆ. ನಂತರ ಇಂದ್ರ ಶೃಂಗಿಯ ಶಾಪದಿಂದ ನಿನ್ನ ತಂದೆ ಪರೀಕ್ಷಿತ ಮೃತಪಡುತ್ತಾನೆ. ಇದರಲ್ಲಿ ತಕ್ಷಕನ ಪಾತ್ರ ಏನಿಲ್ಲ ಎಂದು ತಿಳಿಹೇಳುತ್ತಾನೆ. ಇಂದ್ರನ ಹೇಳಿದ ಕಥೆಯಿಂದ ಜನಮೇಜಯನಿಗೆ ಸರ್ಪಗಳ ಮೇಲಿದ್ದ ಸಿಟ್ಟು ಕಡಿಮೆಯಾಗುತ್ತದೆ.

    ನಾಗಕುಲವೇ ನಾಶವಾಗುವ ಸಂದರ್ಭದಲ್ಲಿ ಆಸ್ತಿಕ ಬಂದು ಈ ಸರ್ಪ ಯಜ್ಞವನ್ನು ತಡೆದದ್ದು ಶ್ರಾವಣ ಮಾಸದ ಐದನೇ ದಿನ. ಆಸ್ತಿಕ ನಾಗಯಜ್ಞ ನಿಲ್ಲಿಸಿ ನಾಗಗಳ ಕುಲವನ್ನು ಉಳಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.

  • ನಾಗರ ಪಂಚಮಿ ಸಂಭ್ರಮ – ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ಭಕ್ತಸಾಗರ

    ನಾಗರ ಪಂಚಮಿ ಸಂಭ್ರಮ – ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ಭಕ್ತಸಾಗರ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಇತಿಹಾಸ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Subrahmanya) ದೇವಸ್ಥಾನ, ಮಂಗಳೂರಿನ ಕುಡುಪು (Kudupu) ಶ್ರೀ ಅನಂತಪದ್ಮನಾಭ ದೇವಸ್ಥಾನ (Ananthapadmanabha Temple) ಸೇರಿದಂತೆ ಸೋಮವಾರ ಎಲ್ಲಾ ನಾಗಾಲಯಗಳಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿಯನ್ನು (Nagara Panchami) ಆಚರಿಸಲಾಯಿತು.

    ತುಳುನಾಡಿನಲ್ಲಿ (Tulu Nadu) ನಾಗರ ಪಂಚಮಿಯ ಸಡಗರ ಸಂಭ್ರಮ ಮನೆ ಮಾಡಿದೆ. ಪರಶುರಾಮನ ಸೃಷ್ಟಿಯಾದ ತುಳುನಾಡಿನಲ್ಲಿ ನಾಗಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಈ ಹಬ್ಬ ಪ್ರಕೃತಿ ಪೂಜೆಯ ಸಂಕೇತವಾಗಿದ್ದು, ಸಂತಾನ ಅಭಿವೃದ್ಧಿ, ಕೌಟುಂಬಿಕ ನೆಮ್ಮದಿಗಾಗಿ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೃಹತ್ ಮರಗಳ ನಡುವೆ, ದಟ್ಟ ಕಾನನದಲ್ಲಿ ಬನಗಳಲ್ಲಿರುವ ನಾಗರ ಕಲ್ಲಿಗೆ ಪೂಜೆ ಮಾಡುವುದು ತುಳುನಾಡಿನ ಸಂಪ್ರದಾಯ. ಇದನ್ನೂ ಓದಿ: Nagara Panchami: ಕರ್ನಾಟಕದ 10 ಪುಣ್ಯ ನಾಗಕ್ಷೇತ್ರ

    ಹಾಲು ಮತ್ತು ಎಳನೀರಿನ ಅಭಿಷೇಕದ ಮೂಲಕ ತನು ಅರ್ಪಿಸುವುದರಿಂದ ನಾಗಬ್ರಹ್ಮ ತೃಪ್ತನಾಗುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಮಕ್ಕಳಾಗದವರು ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ನಾಗ ಪೂಜೆಯಿಂದಾಗಿ ಕುಟುಂಬದ ನೆಮ್ಮದಿ ಮತ್ತು ಐಶ್ವರ್ಯ ವೃದ್ಧಿಯೂ ಆಗುತ್ತದೆ ಎನ್ನುವುದು ನಂಬಿಕೆ. ಇದನ್ನೂ ಓದಿ: ನಾಗರ ಪಂಚಮಿ – ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]