Tag: nagaland Women Battalion

  • ಚರಂಡಿಯಲ್ಲಿ ಸಿಲುಕಿದ್ದ ಕಾರನ್ನು ತಳ್ಳಿ, ತೋಳ್ಬಲ ಪ್ರದರ್ಶಿಸಿದ ಮಹಿಳಾ ಬೆಟಾಲಿಯನ್

    ಚರಂಡಿಯಲ್ಲಿ ಸಿಲುಕಿದ್ದ ಕಾರನ್ನು ತಳ್ಳಿ, ತೋಳ್ಬಲ ಪ್ರದರ್ಶಿಸಿದ ಮಹಿಳಾ ಬೆಟಾಲಿಯನ್

    – ನಾಗಾಲ್ಯಾಂಡ್ ಮಹಿಳೆಯರ ಸಾಹಸಕ್ಕೆ ಭೇಷ್ ಎಂದ ಗಣ್ಯರು

    ನವದೆಹಲಿ: ರಸ್ತೆ ಬದಿಯ ಚರಂಡಿಯಲ್ಲಿ ಸಿಲುಕಿದ್ದ ಬೊಲೆರೊ ಎಂಯುವಿ(ಮಲ್ಟಿ ಯುಟಿಲಿಟಿ ವೆಹಿಕಲ್) ಕಾರನ್ನು ನಾಗಾಲ್ಯಾಂಡ್ ಮಹಿಳಾ ಬೆಟಾಲಿಯನ್ ತಂಡ ತಳ್ಳಿ, ಕಾರನ್ನು ಮತ್ತೆ ರಸ್ತೆಗೆ ತಂದ ವಿಡಿಯೋ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಣ್ಯರು ಮಹಿಳೆಯರ ತೋಳ್ಬಲಕ್ಕೆ ಭೇಷ್ ಎಂದಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನಾಗಾಲ್ಯಾಂಡ್ ಮಹಿಳಾ ಬೆಟಾಲಿಯನ್ ತಂಡ ಚರಂಡಿಯಲ್ಲಿ ಸಿಲುಕಿದ್ದ ಬುಲೆರೋ ಕಾರನ್ನು ತಳ್ಳಿದ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋವನ್ನು ನಾಗಾಲ್ಯಾಂಡ್ ಎಂಎಲ್‍ಎಯೊಬ್ಬರು ಟ್ವಿಟ್ಟರ್ ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಗೆ ಉದ್ಯಮಿ ಆನಂದ್ ಮಹೀಂದ್ರಾ, ಕ್ರೀಡಾ ಸಚಿವ ಕಿರಣ್ ರಿಜಿಜು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕಿ ಸ್ಮೃತಿ ಇರಾನಿಯನ್ನು ಟ್ಯಾಗ್ ಮಾಡಿದ್ದಾರೆ.

    ಈ ವಿಡಿಯೋವನ್ನು ನೋಡಿದ ನಾಯಕರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿ, ಬೊಲೆರೋ ವಾಹನ ಚರಂಡಿಯಲ್ಲಿ ಹೇಗೆ ಸಿಲುಕಿಕೊಂಡಿತು ಎಂಬುದು ನನಗೆ ತಿಳಿದಿಲ್ಲ. ಆದರೆ ಅದನ್ನು ರಕ್ಷಿಸಲು ಕೆಲವು ಶಕ್ತಿಶಾಲಿ ಮಹಿಳೆಯರು ಮುಂದೆ ಬಂದಿದ್ದು ನನಗೆ ಖುಷಿಯಾಗಿದೆ. ಹೌದು, ನಾನು ಎಂದಿಗೂ ನಾಗಾ ಮಹಿಳಾ ಬೆಟಾಲಿಯನ್ ಶಕ್ತಿಯನ್ನು ಕಡೆಗಣಿಸುವಷ್ಟು ಮೂರ್ಖನಾಗುವುದಿಲ್ಲ ಎಂದು ಹೇಳಿ, ಮಹಿಳೆಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ಕಿರಣ್ ರಿಜಿಜು ಹಾಗೂ ಇತರೇ ಗಣ್ಯರು ಕೂಡ ಟ್ವೀಟ್ ಮಾಡಿ ಭೇಷ್ ಎಂದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.