Tag: Naga Sadhus

  • ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾ ಕುಂಭಮೇಳಕ್ಕೆ (Maha Kumbh Mela 2025) ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ.

    ಇಂದಿನಿಂದ 44 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾಕುಂಭ ಸಂಭ್ರಮ ನಡೆಯಲಿದೆ. ಮಹಾ ಕುಂಭಮೇಳಕ್ಕೆ ಇಂದು ಬೆಳಗ್ಗಿನಜಾವ ಮೊದಲ ಶಾಹಿ ಸ್ನಾನ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಫೆಬ್ರವರಿ 26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ. ಮಹಾಕುಂಭ ಮೇಳದಲ್ಲಿ ಆರು ಶಾಹಿ ಸ್ನಾನ ನಡೆಯಲಿದೆ. ಪುಣ್ಯಸ್ನಾನಕ್ಕೆ ಸರ್ಕಾರದಿಂದ ಸಕಲ ವ್ಯವಸ್ಥೆಯಾಗಿದೆ. ಅವಘಡಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಇದನ್ನೂ ಓದಿ: 10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರನ ಮೇಲೆ ಅಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ. ಅಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

  • ನಕಲಿ ನಾಗಾ ಸಾಧುಗಳ ಕೈ ಚಳಕ – ವಶೀಕರಣ ಮಾಡಿ ಯಾಮಾರಿಸ್ತಾರೆ ಕಾವಿ ಕಳ್ಳರು

    ನಕಲಿ ನಾಗಾ ಸಾಧುಗಳ ಕೈ ಚಳಕ – ವಶೀಕರಣ ಮಾಡಿ ಯಾಮಾರಿಸ್ತಾರೆ ಕಾವಿ ಕಳ್ಳರು

    ಕೊಡಗು: ಭಕ್ತಿಯ ಪರಾಕಾಷ್ಠೆತೆಯೋ ಅಥವಾ ವಶೀಕರಣವೋ ಗೊತ್ತಿಲ್ಲ. ಆದರೆ ಕೊಡಗಿನ ಕುಶಾಲನಗರದಲ್ಲಿ ಫೈನಾನ್ಸ್ ಮಾಲೀಕರೊಬ್ಬರು ನಕಲಿ ನಾಗಾ ಸಾಧುಗಳಿಬ್ಬರ ವಂಚನೆ ವಿದ್ಯೆಗೆ ಬಲಿಯಾಗಿದ್ದಾರೆ.

    ಕುಶಾಲನಗರದ ಐಬಿ ರಸ್ತೆಯ ಮಹಿಳಾ ಸಮಾಜದ ಬಿಲ್ಡಿಂಗ್‍ನಲ್ಲಿರುವ ಜನಶ್ರೀ ಮೈಕ್ರೋ ಫೈನಾನ್ಸ್ ಮಾಲೀಕನಿಗೆ ನಾಗಾ ಸಾಧುಗಳ ವೇಷದಲ್ಲಿ ಬಂದ ವ್ಯಕ್ತಿಗಳು ಮೋಸ ಮಾಡಿದ್ದಾರೆ. ನಾವು ಹಿಮಾಚಲ ಪರ್ವತದಿಂದ ಬಂದಿದ್ದೇವೆ. ನಾವು ಮಹಾನ್ ಸಿದ್ಧಿಗಳು, ಕರ್ನಾಟಕಕ್ಕೆ ಬಂದಿದ್ದೇವೆ. ಈಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿದ್ದೇವೆ ಅಲ್ಲಿ ಊಟಕ್ಕೆ ನಮಗೆ ಹಣದ ಅಗತ್ಯವಿದೆ ಎಂದು ತಲೆ ಸವರಿ ಸಿಕ್ಕಷ್ಟು ಹಣ ಲಪಟಾಯಿಸಿ ಕಾವೀಧಾರಿ ಸಾಧುಗಳು ಕಾಲ್ಕಿತ್ತಿದ್ದಾರೆ.

    ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಮೈಕ್ರೋ ಫೈನಾನ್ಸ್ ಗೆ ನಾಗಾ ಸಾಧುಗಳ ವೇಷದಲ್ಲಿ ವಂಚಕರು ಆಗಮಿಸಿದ್ದರು. ಕಾವಿ ತೊಟ್ಟ ನಾಗಾ ಸಾಧುಗಳನ್ನು ಕಂಡೊಡನೆ ಫೈನಾನ್ಸ್ ಮಾಲೀಕ ನಾಗೇಗೌಡರು ಚೆನ್ನಾಗಿಯೇ ಭಕ್ತಿ ತೋರಿಸಿದ್ದರು. ಈ ವೇಳೆ ಸಾಧುಗಳು ಮೊದಲು ಕುಡಿಯಲು ನೀರು ಕೇಳಿ, ಸ್ವಲ್ಪ ಸಮಯದ ನಂತರ ಕೆಂಪು ಕುಂಕುಮ ಹಾಗೂ ರುದ್ರಾಕ್ಷಿಯನ್ನು ನಾಗೇಗೌಡರ ಕೈಗೆ ಕೊಟ್ಟರು. ಕುಂಕುಮವನ್ನು ಎರಡೂ ಕೈಗಳಿಂದ ತಿಕ್ಕಲು ಹೇಳಿ, ಸಾಧುಗಳು ಹೇಳಿದಂತೆ ನಾಗೇಗೌಡರು ಕೇಳುವಂತೆ ವಶೀಕರಣ ಮಾಡಿಕೊಂಡರು. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದಾಗ ಅದು ಚಿನ್ನವಲ್ಲ ಎಂದು ತಿಳಿದ ಬಳಿಕ ಅದನ್ನು ದೋಚದೆ ಬಿಟ್ಟಿದ್ದಾರೆ.

    ನಂತರ ಲಾಕರ್ ನಲ್ಲಿದ್ದ ಸ್ವಲ್ಪ ಹಣ ಹಾಗೂ 23 ಸಾವಿರ ಮೌಲ್ಯದ ಮೊಬೈಲ್‍ವೊಂದನ್ನು ಮಾಲೀಕರಿಂದಲೇ ತೆಗೆದುಕೊಂಡು ಸುಮಾರು ಒಂದೂವರೆ ಅಡಿಯ ಕತ್ತಿಯನ್ನು ಅವರ ಕೈಗೆ ಕೊಟ್ಟು ಮಂತ್ರಿಸಲು ಹೇಳಿ ಪುನಃ ಕತ್ತಿಯನ್ನು ಬಾಯೊಳಗೆ ಹಾಕಿ ಚಮತ್ಕಾರ ಮಾಡಿ ಕಾಲ್ಕಿತ್ತಿದ್ದಾರೆ. ಫೈನಾನ್ಸ್ ಮಾಲೀಕನಿಗೆ ಪರಿವೇ ಇಲ್ಲದಂತೆ ಎಲ್ಲವೂ ನಡೆದು ಹೋಗಿದ್ದು, ಮಾರನೆ ದಿನ ಬೆಳಗ್ಗೆ ಅವರು ಆಫೀಸ್‍ಗೆ ಬಂದು ಸಿಸಿಟಿವಿ ಪರಿಶೀಲಿಸಿದ ಬಳಿಕವೇ ಏನಾಗಿದೆ ಎನ್ನುವುದು ಗೊತ್ತಾಗಿದೆ.

    ಅಷ್ಟೇ ಅಲ್ಲ ಈಗ ಈ ನಾಗ ಸಾಧುಗಳು ಮಾಡಿರುವ ವಂಚನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಹದಿನೈದು ದಿನಗಳ ಹಿಂದೆ ಕುಶಾಲನಗರ ಪಟ್ಟಣದಲ್ಲೇ ಒಂದು ಸ್ಟುಡಿಯೋಗೂ ಇವರು ಬಂದಿದ್ದರು. ಚಿಕ್ಕದೊಂದು ಹಣಕಾಸು ವ್ಯವಹಾರ ಸರಿಮಾಡಿಕೊಡುತ್ತೇವೆ ಎಂದು ನಂಬಿಸಿ ವಶೀಕರಣ ಮಾಡಿ, ಒಂದೂವರೆ ಸಾವಿರ ಲಪಟಾಯಿಸಿ ಕಾಲ್ಕಿತ್ತವರು ಇದೀಗ ಪಟ್ಟಣದಲ್ಲೇ ಮತ್ತೊಬ್ಬರಿಗೂ ಹೀಗೆ ವಶೀಕರಣ ಮಾಡಿ ವಂಚನೆ ಮಾಡಿದ್ದಾರೆ.

    ಈಗಾಗಲೇ ವಂಚನೆಗೆ ಒಳಗಾದವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇಬ್ಬರು ಕಪಟ ನಾಗಾ ಸಾಧುಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಖದೀಮರು ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ವಿನೂತನ ಮಾರ್ಗದಲ್ಲಿ ಹಗಲು ದರೋಡೆಗೆ ಕೈ ಹಾಕಿದ್ದಾರೆ.