Tag: Nadoja Patil Puttappa

  • ಹಾವೇರಿ ಜಿಲ್ಲೆಯ ಹಲಗೇರಿಯಲ್ಲಿ ಪಾಪು ಅಂತ್ಯಕ್ರಿಯೆ

    ಹಾವೇರಿ ಜಿಲ್ಲೆಯ ಹಲಗೇರಿಯಲ್ಲಿ ಪಾಪು ಅಂತ್ಯಕ್ರಿಯೆ

    ಹುಬ್ಬಳ್ಳಿ/ಧಾರವಾಡ: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16 ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ.

    ಕಡಿಮೆ ರಕ್ತದೊತ್ತಡ , ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದರು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

    ಹುಬ್ಬಳ್ಳಿ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು. ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಕಾಲ ಧಾರವಾಡ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ್ ಪಾಟೀಲ ಮಾಹಿತಿ ನೀಡಿದ್ದಾರೆ.

    ಜೋಶಿ ಸಂತಾಪ: ಕನ್ನಡಿಗರೆಲ್ಲರಿಗೆ ‘ಪಾಪು’ ಎಂದೇ ಗುರ್ತಿಸಲ್ಪಡುವ ಇವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ ಎಂದು ಜೋಶಿ ಬಣ್ಣಿಸಿ ಇವರ ನಿಧಾನ ನಿಜಕ್ಕೂ ಶೋಚನೀಯ. ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನ ಅಧ್ಯಕ್ಷ, ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರ ನಿಧನ ನನಗೆ ತುಂಬಾ ನೋವುಂಟುಮಾಡಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  • ನಾಡೋಜ ಪಾಪು ನಿಧನಕ್ಕೆ ಸಿಎಂ, ಸಚಿವ ಶೆಟ್ಟರ್ ಸಂತಾಪ

    ನಾಡೋಜ ಪಾಪು ನಿಧನಕ್ಕೆ ಸಿಎಂ, ಸಚಿವ ಶೆಟ್ಟರ್ ಸಂತಾಪ

    ಹುಬ್ಬಳ್ಳಿ: ನಾಡಿನ ಧೀಮಂತ ಪತ್ರಕರ್ತ, ಶತಾಯುಷಿ ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡುವ ಮೂಲಕ ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ರಾಜ್ಯಸಭಾ ಸದಸ್ಯರಾಗಿ ದೆಹಲಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದು ಮಾತ್ರವಲ್ಲ, ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ. ಓಂ ಶಾಂತಿ” ಎಂದು ಸಂತಾಪ ಸೂಚಿಸಿದ್ದಾರೆ.

    ಇನ್ನೂ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    “ಭಾರತದ ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಹೋರಾಟ ಸೇರಿದಂತೆ ಕಳೆದ ಒಂದು ನೂರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿದ್ದ, ಉತ್ತರ ಕರ್ನಾಟಕದ ಎತ್ತರದ ಧ್ವನಿಯಾಗಿದ್ದ ಪಾಪು ಅವರ ಅಗಲಿಕೆ ನಾಡಿಗೆ ಉಂಟಾದ ದೊಡ್ಡ ನಷ್ಟವಾಗಿದೆ. ಕನ್ನಡ ನಾಡಿನ ಸಮಗ್ರತೆ, ಅಭಿವೃದ್ಧಿ ಬಗ್ಗೆ ಅವರು ಹೊಂದಿದ್ದ ಬದ್ಧತೆ ನಮಗೆಲ್ಲ ಎಲ್ಲಾ ಕಾಲಕ್ಕೂ ಮಾದರಿಯಾದುದ್ದು” ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ವಿಚಾರಿಸಿದರು.

    ಕಿಮ್ಸ್‌ನಲ್ಲಿ ಪಾಟೀಲ ಪುಟ್ಟಪ್ಪನವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸಾಧ್ಯವಾದಷ್ಟು ಇನ್ನೂ ಹೆಚ್ಚಿನ ಪ್ರಯತ್ನ ಮಾಡಿ ಎಂದು ಯಡಿಯೂರಪ್ಪ ಸಲಹೆ ನೀಡಿದರು. ಪಾಟೀಲ ಪುಟ್ಟಪ್ಪನವರ ಮಕ್ಕಳಾದ ಅಶೋಕ, ಮಂಜುಳಾ ಹಾಗೂ ಶೈಲಜಾ ಅವರಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆದರು.

    ಕಿಮ್ಸ್ ವೈದ್ಯಶಾಸ್ತ್ರ ಒಳರೋಗಿ ವಿಭಾಗದಲ್ಲಿ ದಾಖಲಾಗಿರುವ ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ.

    ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿದೆ. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ವಿವರಿಸಿದರು.

    ಸಚಿವ ಜಗದೀಶ ಶೆಟ್ಟರ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್.ದಿಲೀಪ್, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ, ವೈದ್ಯಕೀಯ ನಿರ್ದೇಶಕ ಡಾ.ಅರುಣಕುಮಾರ್, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.

  • ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಹುಬ್ಬಳ್ಳಿ: ಕೆಲವು ದಿನಗಳಿಂದ ನಗರದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.

    ಹಾಲಿ ಹಾಗೂ ಮಾಜಿ ಸಚಿವರಿಬ್ಬರು ಪಾಪು ಅವರ ಆರೋಗ್ಯದ ಬಗ್ಗೆ ಅವರ ಸಂಬಂಧಿಗಳು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಪಾಟೀಲ್ ಪುಟ್ಟಪ್ಪವರು ನಾಡಿನ ಹಿರಿಯ ಚಿಂತಕರು, ಅವರು ಬೇಗನೆ ಗುಣಮುಖರಾಗಿ ಮತ್ತೆ ಮೊದಲಿನಂತೆ ನೆಲ, ಜಲ ಹಾಗೂ ಕನ್ನಡಕ್ಕಾಗಿ ಅವರ ಹೋರಾಟ ಮುಂದುವರೆಸಲು ಎಂದು ಬಿ.ಸಿ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಹಾರೈಸಿದರು.

    ಇದೇ ವೇಳೆ ಕೃಷಿ ಸಚಿವರು ಕಿಮ್ಸ್ ವೈದ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಂಡರು. ಬಳಿಕ ಪಾಪು ಅವರ ಆರ್ಶಿವಾದ ಪಡೆದರು. ಸಚಿವ ಬಿಸಿ ಪಾಟೀಲ್ ಜೊತೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಸಹ ಪಾಪುರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.