Tag: Nadahabba

  • ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು: ಜಿಲ್ಲೆಯ ದಸರಾ ಮಹೋತ್ಸವಕ್ಕೆ ಇಂದು ಎರಡನೇ ದಿನವಾಗಿದ್ದು, ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

    ಎರಡನೇ ದಿನದ ಕಾರ್ಯಕ್ರಮಕ್ಕೆ ಪಾರಂಪರಿಕ ಉಡುಗೆಯಲ್ಲಿ ಸಚಿವ ಸಾ.ರಾ ಮಹೇಶ್ ಅವರಿಂದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದ್ದಾರೆ. ಬಾಲಕರಿಂದ ವೃದ್ಧರವರೆಗೆ ಪಾರಂಪರಿಕ ಉಡುಗೆ-ತೊಡುಗೆಯ ಮೂಲಕ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೈಸೂರಿನ ನಾಗರೀಕರು ಮೈಸೂರು ಪೇಟ, ಸಿಲ್ಕ್ ಪಂಚೆ, ಸೀರೆ ತೊಟ್ಟು ಮಿಂಚಿದ್ದಾರೆ.

    ಮೈಸೂರಿನ ಪುರಭವನದಿಂದ ನಡಿಗೆ ಪ್ರಾರಂಭವಾಗಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಲಾಗುತ್ತಿದೆ. ಕೆ.ಆರ್ ವೃತ್ತ, ಕೆ.ಆರ್.ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ ಮಾರ್ಗದಿಂದ ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡುವ ಈ ನಡಿಗೆ ಕಾರ್ಯಕ್ರಮ ಮಾಡಲಾಗಿದೆ. ಇದನ್ನು ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳಾ ರಂಗೋಲಿ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ರಂಗೋಲಿ ಸ್ಪರ್ಧೆಗೆ ಸಚಿವೆ ಜಯಮಾಲಾ ಚಾಲನೆ ನೀಡಿದರು. ಚಾಲನೆ ಬಳಿಕ ಸಚಿವೆ ಜಯಮಾಲ ಮಾತನಾಡಿ ರಂಗೋಲಿ ದೇವರಿಗೆ ಪ್ರಿಯ, ರಂಗೋಲಿಯಲ್ಲೂ ದೇವರಿದ್ದಾನೆ. ಬ್ಯಾಡ್ ಎನರ್ಜಿ ಹೊರ ಹಾಕುವ ಶಕ್ತಿ ರಂಗೋಲಿಗೆ ಇದೆ. ದಸರಾ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ನಾನು ರಂಗೋಲಿ ಬಿಡಿಸುತ್ತೇನೆ. ರಂಗೋಲಿ ಹಾಕೋದು ನನಗೆ ಇಷ್ಟ. ರಥಸಪ್ತಮಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ನಾನು ರಂಗೋಲಿ ಬಿಡಿಸ್ತೇನೆ. ಇಂದು ರಂಗೋಲಿಯಲ್ಲಿ ಯಾರು ಪ್ರಥಮ ಬಹುಮಾನ ಪಡೀತಾರೋ ಅನ್ನೋ ಕೂತೂಹಲ ಇದೆ ಅಂತ ಹೇಳಿ ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಕೋರಿದರು.

    ದಸರಾ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ನಾಯಕರ ಗೈರು ವಿಚಾರಕ್ಕೆ ಸಂಬಂಧಪಟ್ಟಂತೆ ದಸರಾ ಇನ್ನು 10 ದಿನ ಬಾಕಿ ಇದೆ. ಕೊನೆ ದಿನದವರೆಗೆ ಕಾಯಿರಿ ಉತ್ತರ ಕೊಡುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಚುನಾವಣೆ ಕೆಲಸ, ಮಂಡ್ಯ, ಚಾಮರಾಜನಗರದ ದಸರಾದಲ್ಲಿ ಭಾಗಿಯಾಗಿದ್ದರಿಂದ ಮೈಸೂರಿನಲ್ಲಿ ಭಾಗಿಯಾಗಿಲ್ಲ. ಈಗಷ್ಟೇ ದಸರಾ ಪ್ರಾರಂಭವಾಗಿದೆ. ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ನಡೆಸುತ್ತಿದ್ದೇವೆ. ಪುಟ್ಟರಂಗಶೆಟ್ಟಿ ಬೇಡಿಕೆಯನ್ನ ಈಡೇರಿಸಿದ್ದೇವೆ. ಪ್ರಮೋದಾ ದೇವಿ ಅವರನ್ನು ಆಹ್ವಾನ ಮಾಡಲು ಬಂದಿದ್ದರು ಎಂದು ಕಾಂಗ್ರೆಸ್ ನಾಯಕರ ಗೈರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿತ್ತು. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ನಿನ್ನೆ ಬೆಳಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    ಸಾಂದರ್ಭಿಕ ಚಿತ್ರ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳಿದ್ದು, ಅರಮನೆಯಲ್ಲಿ ತಯಾರಿ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗಿದೆ.

    ನಾಡಹಬ್ಬ ದಸರಾಗೆ ಮೈಸೂರು ಸಜ್ಜಾಗುತ್ತಿದ್ದು, ದಸರಾದ ಪ್ರಮುಖ ಖಾಸಗಿ ಕಾರ್ಯಕ್ರಮದ ನಿಮಿತ್ತ ಅರಮನೆಯಲ್ಲಿ ದಸರಾ ತಯಾರಿ ಜೋರಾಗಿ ನಡೆಯುತ್ತಿದೆ. ಅಲ್ಲದೇ ದಸರಾ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಸಿಂಹಾಸದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ.

    ಸಿಂಹಾಸನ ಜೋಡಣೆ ಕಾರ್ಯವನ್ನು ತಲೆತಲಾಂತರದಿಂದ ತಾಲೂಕಿನ ಗೆಜ್ಜಗಳ್ಳಿ ಗ್ರಾಮಸ್ಥರು ನಡೆಸುತ್ತಾ ಬಂದಿದ್ದಾರೆ. ಸಿಂಹಾಸ ಜೋಡಣೆ, ವಿಸರ್ಜನೆ ಸಂದರ್ಭದಲ್ಲಿ ಗೆಜ್ಜಗಳ್ಳಿಯ ಗ್ರಾಮಸ್ಥರನ್ನು ಅರಮನೆಗೆ ಕರೆಸಲಾಗುತ್ತದೆ.

    ಸಿಂಹಾಸನದಲ್ಲಿ ಸಿಂಹದ ಮುಖ ಇರುವ ಭಾಗವನ್ನು ದರ್ಬಾರ್ ದಿನ ಜೋಡಿಸಲಾಗುತ್ತದೆ. ಇನ್ನು ವರ್ಷಪೂರ್ತಿ ಸಿಂಹಾಸನ ಬಿಡಿಭಾಗಗಳನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿರುತ್ತದೆ. ಸಿಂಹಾಸನ ಜೋಡಣೆ ಕೆಲಸ ಇರುವುದರಿಂದ ಇಂದು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv