Tag: NAAC

  • ಎ++ ಗ್ರೇಡ್ ನೀಡಲು ಲಂಚ ಆರೋಪ – ಬಂಧನ ಬೆನ್ನಲ್ಲೇ ದಾವಣಗೆರೆ ವಿವಿ ಪ್ರಾಧ್ಯಾಪಕಿ ಅಮಾನತು

    ಎ++ ಗ್ರೇಡ್ ನೀಡಲು ಲಂಚ ಆರೋಪ – ಬಂಧನ ಬೆನ್ನಲ್ಲೇ ದಾವಣಗೆರೆ ವಿವಿ ಪ್ರಾಧ್ಯಾಪಕಿ ಅಮಾನತು

    ದಾವಣಗೆರೆ: ನ್ಯಾಕ್ ಕಮಿಟಿಯಿಂದ (NAAC) ಎ++ ಗ್ರೇಡ್ ನೀಡಲು ಲಂಚ ಪಡೆದ ಪ್ರಕರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ (Davangere University) ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ (CBI) ಬಂಧಿಸಿದ ಬೆನ್ನಲ್ಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ದಾವಣಗೆರೆ ವಿವಿ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ. ಕೆಸಿಎಸ್‍ಆರ್ ನಿಯಮದ ಪ್ರಕಾರ ಆರು ತಿಂಗಳವರೆಗೆ ಅವರನ್ನು ಅಮಾನತಿನಲ್ಲಿಡಲು ಸಿಂಡಿಕೇಟ್ ನಿರ್ಣಯಕೈಗೊಂಡಿದೆ. ಆದೇಶದ ಪ್ರತಿಯನ್ನು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.

    ನ್ಯಾಕ್‍ನ ತಪಾಸಣಾ ಸಮಿತಿ ಸದಸ್ಯರಾಗಿರುವ ಗಾಯತ್ರಿ ದೇವರಾಜ್ ಅವರನ್ನು ಲಂಚ ಪಡೆದ ಆರೋಪದ ಮೇಲೆ ಇತ್ತಿಚೆಗೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಆಂಧ್ರ ಪ್ರದೇಶದ ವಿಜಯವಾಡದ ಕೆಎಲ್‍ಇಎಫ್ ಯುನಿವರ್ಸಿಟಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಪಡೆದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

    ಜೆಎನ್‍ಯು ಪ್ರೊಫೆಸರ್ ಸೇರಿದಂತೆ ಒಟ್ಟು 10 ಜನರನ್ನು, 37 ಲಕ್ಷ ರೂ. ನಗದು, 6 ಲ್ಯಾಪಟಾಪ್, ಐಫೋನ್ ಲಂಚ ಪಡೆಯುವಾಗ ಸಿಬಿಐ ಬಂಧಿಸಿತ್ತು. ಎ++ ಗ್ರೇಡ್ ನೀಡಲು ಒಂದು ಕೋಟಿ ರೂ.ಗೂ ಹೆಚ್ಚು ಲಂಚದ ಹಣಕ್ಕೆ ನ್ಯಾಕ್ ಕಮಿಟಿ ಬೇಡಿಕೆ ಇಟ್ಟಿತ್ತು. ನ್ಯಾಕ್ ಕಮಿಟಿಯಲ್ಲಿ ದಾವಣಗೆರೆ ವಿವಿಯ ಏಕೈಕ ಪ್ರೊ.ಗಾಯತ್ರಿ ದೇವರಾಜ್ ಸ್ಥಾನ ಪಡೆದಿದ್ದರು.

    ಈ ಹಿಂದೆ ಅವರು ಒಂದು ವರ್ಷ 4 ತಿಂಗಳುಗಳ ಕಾಲ ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

  • ನ್ಯಾಕ್ ನೀಡಲು ಲಂಚ – ದಾವಣಗೆರೆ ವಿವಿ ಪ್ರಾಧ್ಯಾಪಕಿ ಸೇರಿ 10 ಮಂದಿ ಬಂಧಿಸಿದ ಸಿಬಿಐ

    ನ್ಯಾಕ್ ನೀಡಲು ಲಂಚ – ದಾವಣಗೆರೆ ವಿವಿ ಪ್ರಾಧ್ಯಾಪಕಿ ಸೇರಿ 10 ಮಂದಿ ಬಂಧಿಸಿದ ಸಿಬಿಐ

    ದಾವಣಗೆರೆ: ಲಂಚ ಪಡೆದು ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ 10 ಜನರನ್ನು ಸಿಬಿಐ ಬಂಧಿಸಿದೆ.

    10 ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ತಂಡದ ಅಧ್ಯಕ್ಷರು ಮತ್ತು JNU ಪ್ರೊಫೆಸರ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ 10 ಸದಸ್ಯರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್‌ ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ್ದರು. ಗಾಯತ್ರಿ ದೇವರಾಜ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿದ್ದರು. ಅಲ್ಲದೇ ಭ್ರಷ್ಟಾಚಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿದಿದೆ. ಇದನ್ನೂ ಓದಿ: Ramanagara | ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಟೈಯರ್ ಫ್ಯಾಕ್ಟರಿಗೆ ಬೆಂಕಿ – ತಪ್ಪಿದ ಭಾರೀ ಅನಾಹುತ

    ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ISRO | ಯಶಸ್ವಿಯಾಗಿ ಉಡಾವಣೆಯಾಗಿದ್ದ ಇಸ್ರೋದ 100ನೇ ರಾಕೆಟ್‌ನಲ್ಲಿ ತಾಂತ್ರಿಕ ದೋಷ

  • ಎಲ್ಲ ವಿವಿಗಳಿಗೆ ಎನ್‌ಐಆರ್‌ಎಫ್ Rank, ನ್ಯಾಕ್ ಮಾನ್ಯತೆ- ಕುಲಪತಿಗಳಿಗೆ ಡಿಸಿಎಂ ಡೆಡ್‍ಲೈನ್

    ಎಲ್ಲ ವಿವಿಗಳಿಗೆ ಎನ್‌ಐಆರ್‌ಎಫ್ Rank, ನ್ಯಾಕ್ ಮಾನ್ಯತೆ- ಕುಲಪತಿಗಳಿಗೆ ಡಿಸಿಎಂ ಡೆಡ್‍ಲೈನ್

    – ಕ್ರಿಯಾ ಯೋಜನೆ ರೂಪಿಸಲು ಸೂಚನೆ

    ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯ, ಕಾಲೇಜುಗಳ ನ್ಯಾಕ್ ಮಾನ್ಯತೆ, ಎನ್‍ಐಆರ್‍ಎಫ್ Rank ಪಡೆಯುವ ಸಂಬಂಧ 15 ದಿನಗಳ ಒಳಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಡೆಡ್‍ಲೈನ್ ವಿಧಿಸಿದ್ದಾರೆ. ಈ ಮೂಲಕ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವತ್ತ ವೇಗದ ಹೆಜ್ಜೆ ಇಟ್ಟಿದ್ದಾರೆ.

    ಸೋಮವಾರ ನಗರದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿ, ಸುಮಾರು 3 ಗಂಟೆಗೂ ಹೆಚ್ಚು ಸಮಯ ಸಮಾಲೋಚನೆ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲೊಂದು ಬಹುದೊಡ್ಡ ಬದಲಾವಣೆ. ಇದಕ್ಕೆ ಅನುಗುಣವಾಗಿ ನಾವೆಲ್ಲ ಹೆಜ್ಜೆ ಇಡಬೇಕು. ಸ್ಪರ್ಧಾತ್ಮಕವಾಗಿರುವ ಈ ಸಂದರ್ಭದಲ್ಲಿ ಪ್ರತಿ ವಿವಿಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ (National Institutional Ranking Framework-NIRF) Rank ಹೊಂದಿರಬೇಕು ಹಾಗೂ ಪ್ರತಿ ಕಾಲೇಜಿಗೂ ನ್ಯಾಕ್ ಮಾನ್ಯತೆ (NAAC Accreditation) ಇರಲೇಬೇಕು ಎಂದರು.

    ಮೊದಲಿನಂತೆ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಾಲುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಓಡಬೇಕು. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅದರಂತೆ ನಮ್ಮ ವಿವಿಗಳನ್ನು ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ಮರುರೂಪಿಸಬೇಕು. ಅದಕ್ಕೆ ಶಿಕ್ಷಣ ನೀತಿಯನ್ನು ಜೋಡಿಸಬೇಕು ಹಾಗೂ ಜಾಗತಿಕವಾಗಿ ಎಲ್ಲರೂ ಒಪ್ಪಿರುವ ಇಂಥ Rank-ಮಾನ್ಯತೆ ಅಗತ್ಯ ಎಂದು ಕುಲಪತಿಗಳಿಗೆ ಡಿಸಿಎಂ ಸಲಹೆ ನೀಡಿದರು.

    ಮುಂದಿನ 3 ವರ್ಷಗಳಲ್ಲಿ ಯಾವ್ಯಾವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು, ಎನ್‍ಐಆರ್‍ಎಫ್ Rank, ನ್ಯಾಕ್ ಮಾನ್ಯತೆ ಪಡೆಯಲು ಏನೆಲ್ಲ ಸಿದ್ಧತೆ ನಡೆಸಲಾಗುವುದು ಎಂಬ ವಿವರಗಳನ್ನು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಿ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು.

    ಎನ್‍ಐಆರ್‍ಎಫ್ Ranking- ನ್ಯಾಕ್ ಮಾನ್ಯತೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಬೇಕಾದರೆ, ಹೆಚ್ಚು ಅನುದಾನ ಪಡೆಯಬೇಕಾದರೆ ಇವು ಅಗತ್ಯ. ಉನ್ನತ ಶಿಕ್ಷಣವನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸಬೇಕಾದರೆ ಇವೆಲ್ಲ ಅಂಶಗಳು ಅಗತ್ಯ ಎಂದು ಹೇಳಿದರು.

    ಸದ್ಯಕ್ಕೆ ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯು ಎನ್‍ಐಆರ್‍ಎಫ್ Ranking ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೈಸೂರು ವಿವಿ-27, ಬೆಂಗಳೂರು ವಿವಿ-68, ಶಿವಮೊಗ್ಗದ ಕುವೆಂಪು ವಿವಿ-73 ಹಾಗೂ ಬೆಳಗಾವಿಯ ವಿಟಿಯು-80ನೇ ಸ್ಥಾನದಲ್ಲಿವೆ. ಮುಂದಿನ ಬಾರಿ Ranking ಪಟ್ಟಿ ಸಿದ್ಧವಾಗುವ ಹೊತ್ತಿಗೆ ಮೈಸೂರು ವಿವಿ 20ರೊಳಗಿನ ಸ್ಥಾನಕ್ಕೆ, ಬೆಂಗಳೂರು ವಿವಿ 50ರೊಳಗಿನ ಸ್ಥಾನಕ್ಕೆ ಬರಬೇಕು. ವಿಟಿಯು ಕೂಡ ಇನ್ನೂ ಉತ್ತಮ ಸ್ಥಾನಕ್ಕೆ ಬರಬೇಕು ಎಂದು ಡಿಸಿಎಂ ಕುಲಪತಿಗಳಿಗೆ ತಾಕೀತು ಮಾಡಿದರು. ಅಲ್ಲದೆ ಇದೇ ಪಟ್ಟಿಯಲ್ಲಿ ತುಮಕೂರು ಮತ್ತು ಮಂಗಳೂರು ವಿವಿಗಳು 150ರೊಳಗಿನ ಸ್ಥಾನದಲ್ಲಿವೆ. ಉಳಿದ ಯಾವ ವಿವಿಗಳಿಗೂ ಈ Rank ಸಿಕ್ಕಿಲ್ಲ. ಕೊನೇಯ ಪಕ್ಷ ಅದರ ಚೌಕಟ್ಟಿನೊಳಗೆ ಬಂದಿಲ್ಲ ಎಂದರು.

    ಬೋಧನೆ, ಕಲಿಕೆ, ಸಂಪನ್ಮೂಲ ಸಂಗ್ರಹ, ಸಂಶೋಧನೆ ಮತ್ತು ವೃತ್ತಿಪರತೆ, ಫಲಿತಾಂಶ, ಜನರನ್ನು ತಲುಪುವ ರೀತಿ ಹಾಗೂ ಅದೇ ಜನರನ್ನು ಒಳಗೊಳ್ಳುವ ರೀತಿಯೂ ಸೇರಿದಂತೆ ಪ್ರಮುಖ ಐದು ಅಂಶಗಳನ್ನು ಆಧಾರವಾಗಿ ಇಟ್ಟಿಕೊಂಡು ಎನ್‍ಐಆರ್‍ಎಫ್ Ranking ನೀಡಲಾಗುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    3 ವಿವಿಗಳಿಗೆ ಅರ್ಹತೆಯೇ ಇಲ್ಲ:
    ರಾಜ್ಯದ ಸರ್ಕಾರಿ ಸ್ವಾಮ್ಯದ 19 ವಿವಿಗಳ ಪೈಕಿ ಎನ್‍ಐಆರ್‍ಎಫ್ Ranking ಪಟ್ಟಿಯಲ್ಲಿ ಎ-ಅದಕ್ಕಿಂತ ಮೇಲ್ಪಟ್ಟು ಸ್ಥಾನದಲ್ಲಿ 6 ವಿವಿ, ಬಿ-ಎ ಹಂತದಲ್ಲಿ 4 ವಿವಿಗಳಿದ್ದರೆ, ಮಾನ್ಯತೆ ಪಡೆದ 9 ವಿವಿಗಳಿವೆ. ಉಳಿದಂತೆ ಇನ್ನೆರಡು ವಿವಿಗಳು ಅರ್ಜಿ ಹಾಕಿಕೊಂಡಿದ್ದು, ಇನ್ನು 4 ವಿವಿಗಳು ಅರ್ಜಿಯನ್ನೇ ಹಾಕಿಲ್ಲ. 3 ವಿವಿಗಳು ಎನ್‍ಐಆರ್‍ಎಫ್ Ranking ಗೆ ಅರ್ಹತೆಯನ್ನೇ ಹೊಂದಿಲ್ಲ ಎಂದು ಮಾಹಿತಿ ಬಿಚ್ಚಿಟ್ಟರು.

    ರಾಜ್ಯದಲ್ಲಿ ಒಟ್ಟು 430 ಕಾಲೇಜುಗಳಿದ್ದು, ಕೇವಲ 50 ಕಾಲೇಜುಗಳಿಗೆ ಮಾತ್ರ ನ್ಯಾಕ್ ಮಾನ್ಯತೆ ಸಿಕ್ಕಿದೆ. ಕೊನೇ ಪಕ್ಷ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜ್‍ಗಳನ್ನು ನ್ಯಾಕ್ ವ್ಯಾಪ್ತಿಗೆ ತರಬೇಕೆನ್ನುವ ಗುರಿ ಹಾಕಿಕೊಳ್ಳಲಾಗಿದೆ. ಅಲ್ಲದೆ ಪ್ರತಿ ವಿವಿ ವ್ಯಾಪ್ತಿಯಲ್ಲೂ ಇಬ್ಬರು ನ್ಯಾಕ್ ಸಂಯೋಜಕರನ್ನು ನೇಮಕ ಮಾಡಲಾಗಿದ್ದು, ಅವರಿಂದ ಕಾಲೇಜುಗಳಿಗೆ ಕಾರ್ಯಾಗಾರ ಮಾಡಿಸಲಾಗುತ್ತಿದೆ. ಎ-ಅದಕ್ಕೂ ಮೇಲ್ಪಟ್ಟು 9 ಕಾಲೇಜ್, ಬಿ-ಎ ಮಟ್ಟದಲ್ಲಿ 170 ಕಾಲೇಜ್‍ಗಳಿವೆ. ಇನ್ನು ನ್ಯಾಕ್ ಮಾನ್ಯತೆಯನ್ನೇ ಪಡೆಯದ 246 ಕಾಲೇಜ್‍ಗಳಿದ್ದು, ಅರ್ಹತೆಯೇ ಇಲ್ಲದ 26 ಕಾಲೇಜುಗಳಿವೆ. ಸದ್ಯ 9 ಕಾಲೇಜುಗಳ ನ್ಯಾಕ್ ಮಾನ್ಯತೆಗೆ ಅರ್ಜಿ ಹಾಕಿಕೊಂಡಿದ್ದರೆ, ಉಳಿದ 167 ಕಾಲೇನುಗಳಿಗೆ ಅರ್ಹತೆಯೇ ಇಲ್ಲದ ಸ್ಥಿತಿ ಇದೆ. ಇದೆಲ್ಲವನ್ನು ಸುಧಾರಿಸಿ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜುಗಳನ್ನು ನ್ಯಾಕ್ ವ್ಯಾಪ್ತಿಗೆ ತರಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಮುಂತಾದವರು ಪಾಲ್ಗೊಂಡಿದ್ದರು.

  • ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೆ ಗುಣಮಟ್ಟ ಶಿಕ್ಷಣ ಅತ್ಯವಶ್ಯಕವಾಗಿ ಇರಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಅಂತಹ ಕಾಲೇಜು ವಿಶ್ವವಿದ್ಯಾಲಯಗಳು ಅವಶ್ಯಕತೆ ಇಲ್ಲ. ಅವುಗಳನ್ನು ಮುಚ್ಚಿ ಬಿಡಿ ಅಂತ ರಾಜ್ಯಪಾಲ ವಿ.ಆರ್.ವಾಲಾ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದ್ದಾರೆ.

    ರಾಜಭವನದಲ್ಲಿ ನಡೆದ ನ್ಯಾಕ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ವಿ.ಆರ್.ವಾಲಾ, ಬಿ ಮತ್ತು ಸಿ ಗ್ರೇಡ್ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಕೊಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕೊಡಿಸೋದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕರ್ತವ್ಯ. ಅದನ್ನ ಮರೆಯೋ ಸಂಸ್ಥೆಗಳನ್ನ ಮುಚ್ಚೋದು ವಾಸಿ ಅಂದರು.

    ಪ್ರತಿ ಸಂಸ್ಥೆ ಎ ಗ್ರೇಡ್ ಮಾನ್ಯತೆಯನ್ನೆ ಹೊಂದಿರಬೇಕು. ಬಿ ಮತ್ತು ಸಿ ದರ್ಜೆಯ ಕಾಲೇಜು ವಿವಿಗಳಿಗೆ ಅವಕಾಶ ಕೊಡಿ. ಒಂದು ವೇಳೆ ಅವುಗಳು ಸುಧಾರಣೆ ಮಾಡದೇ ಇದ್ದರೆ ಅಂತಹ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನ ಕ್ಲೋಸ್ ಮಾಡಿ ಅಂತ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದರು.

    ನಮ್ಮ ದೇಶದಲ್ಲಿ ಯುವ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದ್ರೆ ಗುಣಮಟ್ಟ ಶಿಕ್ಷಣ ನಮ್ಮಲ್ಲಿ ಕಡಿಮೆ ಇದೆ. ಫ್ರಾನ್ಸ್, ಜಪಾನ್ ನಮಗಿಂತ ಚಿಕ್ಕ ರಾಷ್ಟ್ರ ಆದ್ರು ನಮ್ಮ ದೇಶಕ್ಕೆ ವಿಮಾನಗಳನ್ನ ಪೂರೈಕೆ ಮಾಡುತ್ತಿವೆ. ಇದಕ್ಕೆ ಕಾರಣ ಅಲ್ಲಿನ ಶಿಕ್ಷಣ. ಹೀಗಾಗಿ ಭಾರತದಲ್ಲೂ ಇದೇ ಮಾದರಿಯ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಅಂತ ತಿಳಿಸಿದರು