Tag: NA Haris

  • ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್‍ನ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ಶಾಸಕ ಹ್ಯಾರಿಸ್ ಅವರು ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೊರೊನಾ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಲೆಟರ್ ಫೈಟ್

    ಪತ್ರದಲ್ಲಿ ಏನಿದೆ?:
    ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ 24 ಅಥವಾ 25ರಂದು ಈದುರ್ ಫಿತರ್/ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಈದ್ಗಾ ಮೈದಾನಗಳಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಮ್ಮ ಮುಸ್ಲಿಂ ಸಮುದಾಯವನ್ನು ನಿಂದಿಸುವುದು ಸೂಕ್ತವಲ್ಲ. ತಜ್ಞರು ಮತ್ತು ವೈದ್ಯರ ಸಲಹೆಯನ್ನು ಪಡೆದು ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ರಂಜಾನ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಬಹುದಾಗಿದೆ.

    ಸರ್ಕಾರದ ಆದೇಶದಂತೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿ ದಿನ ಕಡ್ಡಾಯ ನಮಾಜ್ ಅನ್ನು ಮಸೀದಿಯ ಬದಲು ಮನೆಯಲ್ಲೇ ಮಾಡುತ್ತಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಮರು ಸರ್ಕಾರದ ಈ ನಿರ್ಧಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

  • ಅದು ಪಟಾಕಿ ಅಲ್ಲ: ಡಿಸ್ಚಾರ್ಜ್ ಬಳಿಕ ಶಾಸಕ ಹ್ಯಾರಿಸ್ ಹೇಳಿಕೆ

    ಅದು ಪಟಾಕಿ ಅಲ್ಲ: ಡಿಸ್ಚಾರ್ಜ್ ಬಳಿಕ ಶಾಸಕ ಹ್ಯಾರಿಸ್ ಹೇಳಿಕೆ

    – ಒಬ್ಬರನ್ನ ಮುಗಿಸುವ ರಾಜಕೀಯ ಸರಿಯಲ್ಲ

    ಬೆಂಗಳೂರು: ದೇವರ ದಯೆಯಿಂದ ಚೆನ್ನಾಗಿದ್ದೇನೆ. ಘಟನೆ ನೋಡಿದಾಗ ನಂಗೆ ಶಾಕ್ ಆಗಿತ್ತು ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.

    ವಿವೇಕನಗರದಲ್ಲಿ ನಿನ್ನೆ ರಾತ್ರಿ ನಡೆದ ಸ್ಫೋಟದಲ್ಲಿ ಗಾಯಗೊಂಡು ಸೈಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಹ್ಯಾರಿಸ್ ಇಂದು ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಫೋಟದ ಆ ಸೌಂಡ್ ನನಗೆ ಆಶ್ಚರ್ಯ ಉಂಟುಮಾಡಿತ್ತು. ಪೊಲೀಸರು ಸರಿಯಾದ ತನಿಖೆ ನಡೆಸುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ ಅದು ಪಟಾಕಿ ಅಲ್ಲ. ಅದರಲ್ಲಿ ರೌಂಡ್ ರೀತಿಯ ಬಾಲ್ ಇತ್ತು ಎಂದು ಹೇಳಿದರು.

    ನನಗೆ ಯಾರೂ ರಾಜಕೀಯ ವಾಗಿ ಶತ್ರುಗಳಿಲ್ಲ. ತನಿಖೆ ನಡೆಸುವ ಬಗ್ಗೆ ಗೃಹಸಚಿವರು ಬಸವರಾಜ ಬೊಮ್ಮಯಿ ಭರವಸೆ ನೀಡಿದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕಾಗಿದೆ ಎಂದರು.

    ಒಬ್ಬರನ್ನು ಮುಗಿಸುವಂತ ಯಾವುದೇ ರಾಜಕೀಯ ಮಾಡಬಾರದು. ಅಸೂಯೆ ಇರಬೇಕು. ಆದರೆ ಒಬ್ಬರನ್ನು ಕೊಲೆ ಮಾಡುವ ಅಸೂಯೆ ಬೇಡ. ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಹೇಳಿದರು.

    ಶಾಸಕ ರಾಮಲಿಂಗ ರೆಡ್ಡಿ ಮಾತನಾಡಿ, ಎನ್.ಎ.ಹ್ಯಾರಿಸ್ ಅವರ ಕಾರ್ಯಕ್ರಮದಲ್ಲಿ ಸ್ಫೋಟಗೊಂಡಿದ್ದು ಪಟಾಕಿ ಅಲ್ಲ. ಅದು ಬಾಂಬ್. ಘಟನಾ ಸ್ಥಳದಲ್ಲಿ ಬುಲೆಟ್‍ಗೆ ಉಪಯೋಗಿಸುವ ವಸ್ತುಗಳು ಪತ್ತೆಯಾಗಿವೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.